ವಿಷಯಕ್ಕೆ ಹೋಗು

ಮೋಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೋಲ್ ಪದಾರ್ಥದ ಪ್ರಮಾಣ ಅಥವಾ ಮೊತ್ತಕ್ಕೆ ಅಂತರರಾಷ್ಟ್ರೀಯ ಏಕಮಾನ ವ್ಯವಸ್ಥೆಯಲ್ಲಿನ ಒಂದು ಏಕಮಾನ. ಅದನ್ನು 12 ಗ್ರಾಂ ಇಂಗಾಲ 12 (12C) ರಲ್ಲಿರುವ ಪ್ರಾಥಮಿಕ ಕಣಗಳಷ್ಟೇ (ಅಣು. ಪರಮಾಣು, ಅಯಾನು, ಎಲೆಕ್ಟ್ರಾನ್ ಮುಂತಾದವು) ಕಣಗಳು ಇರುವ ಯಾವುದೇ ಪದಾರ್ಥದ ಪ್ರಮಾಣ ಎಂದು ವ್ಯಾಖ್ಯಾನಿಸಲಾಗಿದೆ. ಕಾರ್ಬನ್ 12ರ ಸಾಪೇಕ್ಷಿಕ ದ್ರವ್ಯರಾಶಿ ಅದರ ವ್ಯಾಖ್ಯಾನದ ಆಧಾರದ ಮೇಲೇಯೆ 12. ಈ ಸಂಖ್ಯೆಯನ್ನು ಅವೊಗಾಡ್ರೋ ನಿಯತಾಂಕದಲ್ಲಿ ವ್ಯಕ್ತಪಡಿಸಲಾಗುತ್ತದೆ ಮತ್ತು ಅದು 6.022 140 857(74)×1023mol−1[] ಮೋಲ್‌ನ ಚಿಹ್ನೆ mol.

ಮೋಲ್‌ನ್ನು ರಾಸಾಯನಿಕ ಕ್ರಿಯೆಯೊಂದರಲ್ಲಿ ಭಾಗವಹಿಸುವ ಪ್ರತಿವರ್ತಿಗಳು ಮತ್ತು ಉತ್ಪನ್ನಗಳ ಪ್ರಮಾಣಗಳನ್ನು ವ್ಯಕ್ತಪಡಿಸಲು ಬಳಸಲಾಗುತ್ತದೆ. ಉದಾಹರಣೆಗೆ 2 H2 + O2 → 2 H2O ಎಂದರೆ ಎರಡು ಮೋಲ್‌ ಡೈಹೈಡ್ರೋಜನ್ (H2) ಒಂದು ಮೋಲ್ ಡೈಆಕ್ಸಿಜನ್ ನೊಂದಿಗೆ (O2) ಸೇರಿ ಎರಡು ಮೋಲ್ ನೀರು ಉತ್ಪನ್ನವಾಗುತ್ತವೆ. ಒಂದು ಮೋಲ್‌ನಲ್ಲಿರುವ ಅಣುಗಳ ಸಂಖ್ಯೆ ಅವೊಗಾಡ್ರೊ ನಿಯತಾಂಕ ಮತ್ತು ಇದನ್ನು ಗ್ರಾಂನಲ್ಲಿ ವ್ಯಕ್ತಪಡಿಸಿದ ಒಂದು ಪದಾರ್ಥದ ಸಾಪೇಕ್ಷಿಕ ಅಣು ದ್ರವ್ಯರಾಶಿ ಎಂದು ವ್ಯಾಖ್ಯಾನಿಸಲಾಗಿದೆ. ಉದಾಹರಣೆಗೆ ಪ್ರಕೃತಿಯಲ್ಲಿ ಲಭ್ಯವಾಗುವ ನೀರಿನ ಸರಾಸರಿ ಸಾಪೇಕ್ಷಿಕ ದ್ರವ್ಯರಾಶಿ 18.01528. ಹೀಗಾಗಿ ಒಂದು ಮೋಲ್ ದ್ರವ್ಯರಾಶಿ 18.01528 ಗ್ರಾಂ ಆಗಿರುತ್ತದೆ.

ವ್ಯಾಖ್ಯಾನ ಮತ್ತು ಸಂಬಂಧಿತ ಪರಿಕಲ್ಪನೆಗಳು

[ಬದಲಾಯಿಸಿ]

ಅಂತರಾಷ್ಟ್ರೀಯ ತೂಕ ಮತ್ತು ಅಳತೆಯ ಬ್ಯೂರೋನ 2011ರ ವ್ಯಾಖ್ಯಾನದಂತೆ ಮೋಲ್‌ ಸಾಪೇಕ್ಷಿಕ ಪರಮಾಣು ದ್ರವ್ಯರಾಶಿ 12 ಇರುವ ಸಮಸ್ಥಾನಿ ಕಾರ್ಬನ್ 12ರ 0.012 ಕಿಲೊಗ್ರಾಂನಲ್ಲಿರುವ ಪ್ರಾಥಮಿಕ ಘಟಕಗಳನ್ನು (ಉದಾಹರಣೆಗೆ ಪರಮಾಣು, ಅಣು, ಅಯಾನು, ಎಲೆಕ್ಟ್ರಾನ್, ಪೋಟಾನು) ಒಳಗೊಂಡಿರುವ ವ್ಯವಸ್ಥೆಯೊಂದರ ಪದಾರ್ಥದ ಪ್ರಮಾಣ.[] ಈ ವ್ಯಾಖ್ಯಾನದ ಪ್ರಕಾರ ಒಂದು ಮೋಲ್ 12C ಸರಿಯಾಗಿ 12 ಗ್ರಾಂ ದ್ರವ್ಯರಾಶಿಯನ್ನು ಹೊಂದಿರುತ್ತದೆ. ಇದರ ಇನ್ನೊಂದು ಅರ್ಥ ಯಾವುದೇ ಪದಾರ್ಥದ x mol ನಲ್ಲಿರುವ ಅಣುಗಳ ಸಂಖ್ಯೆ ಮತ್ತು x mol ನ ಇನ್ನೊಂದು ಪದಾರ್ಥದಲ್ಲಿನ ಅಣುಗಳ ಸಂಖ್ಯೆಗೆ ಸಮನಾಗಿರುತ್ತದೆ.

ಇಂದು ನಾವು ಈ ಕೆಳಗಿನ ಗ್ರಾಂ ಪರಮಾಣು ತೂಕ ಅಥವಾ ಗ್ರಾಂ ಅಣು ತೂಕ ಎಂದು ಬಳಸದೆ ಕೇವಲ ಮೋಲ್ ಎಂದು ಬಳಸುತ್ತೇವೆ. ಈ ಅರ್ಥದಲ್ಲಿ ಕೆಳಗಿನ ಪರಿಕಲ್ಪನೆಗಳು ಐತಿಹಾಸಿಕ. ಆದರೆ ಇವು ಮೋಲ್ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳಲು ಸಹಾಯಕ.

ಗ್ರಾಂ ಪರಮಾಣು ತೂಕ

[ಬದಲಾಯಿಸಿ]

ರಸಾಯನಿಕತಜ್ಞರು ತೂಗುವ ಅಥವಾ ದ್ರವ್ಯರಾಶಿಯನ್ನು ಅರಿಯುವ ಮೂಲಕ ಆ ದ್ರವ್ಯರಾಶಿಯಲ್ಲಿನ ಅಣು ಅಥವಾ ಪರಮಾಣುಗಳ ಸಂಖ್ಯೆ ಅರಿಯ ಬಯಸಿದರು. ಪರಿಣಾಮವಾಗಿ ಗ್ರಾಂ ಪರಮಾಣು ತೂಕ (ಹಾಗೆಯೇ ಗ್ರಾಂ ಅಣು ತೂಕ) ಪರಿಕಲ್ಪನೆಗಳು ರೂಪಗೊಂಡಿದ್ದವು. ಆದರೆ ಮೋಲ್ ಪರಿಕಲ್ಪನೆ ಅದಕ್ಕೂ ಹಿಂದೆ ಹೋಗುತ್ತದೆ. ಮೊದಲು ಪರಮಾಣು ತೂಕ ಬಳಸುವಾಗ ಅವರಿಗೆ ಎಲೆಕ್ಟ್ರಾನ್, ಪ್ರೋಟಾನ್ ಮತ್ತು ನ್ಯೂಟ್ರಾನ್‌ಗಳ ಪರಿಕಲ್ಪನೆ ಇರಲಿಲ್ಲ. 19ನೆಯ ಶತಮಾನದ ಕೊನೆಗೆ ಮತ್ತು ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಎಲೆಕ್ಟ್ರಾನ್ ಮತ್ತು ಪ್ರೋಟಾನ್‌ಗಳು ಪತ್ತೆಯಾದಾಗ ಪರಮಾಣು ತೂಕವು ಬಹುತೇಕ ಪರಮಾಣುವಿನ ಬೀಜಕಕಣದಲ್ಲಿರುವ ಪ್ರೋಟಾನ್‌ಗೆ ಸಮವೆಂದು ಕಂಡುಕೊಂಡರು (ಆಗ ಇನ್ನೂ ಪ್ರೋಟಾನ್ ಎಲೆಕ್ಟ್ರಾನ್‌ನೊಂದಿಗೆ ಸೇರಿ ತಟಸ್ಥ ಕಣವಾಗುತ್ತದೆ ಎಂದು ಭಾವಿಸಲಾಗುತ್ತಿತ್ತು).

ನಂತರದಲ್ಲಿಯೇ ಇಂಗಾಲ 12 (12C)ನ್ನು ಮಾನದಂಡವಾಗಿ ಮಾಡಿಕೊಂಡು ಅದರ ತೂಕ ಅಥವಾ ದ್ರವ್ಯರಾಶಿಯನ್ನು 12.000 u (ಎಎಮ್‌ಯು ಅಥವಾ ಪರಮಾಣು ದ್ರವ್ಯರಾಶಿ ಏಕಮಾನ) ಎಂದು ಕರೆದರು. ಹೀಗಾಗಿ ಇಂಗಾಲ 12ರ 1 ಗ್ರಾಂ ಪರಮಾಣು ತೂಕ 12.000 ಗ್ರಾಂ. ಪರಮಾಣು ತೂಕದ ಸಂಖ್ಯೆಯು ಗ್ರಾಂ ಪರಮಾಣು ತೂಕದ ಭಾಗವಾಗಿರುವುದರಿಂದ ಪರಮಾಣುವಿನ ತೂಕ ತಿಳಿದಿದ್ದರೆ ಅದನ್ನೇ ಗ್ರಾಂನಲ್ಲಿ ವ್ಯಕ್ತಪಡಿಸಿದರೆ ಗ್ರಾಂ ಪರಮಾಣು ತೂಕವಾಗಿ ಬಿಡುತ್ತದೆ. ಒಂದು ಗ್ರಾಂ ಅಣು ತೂಕ ಜಲಜನಕ ಎಂದರೆ 1.00794 ಗ್ರಾಂ[] ಹಾಗೆಯೇ ಒಂದು ಗ್ರಾಂ ಅಣು ತೂಕ ಕಬ್ಬಿಣ ಎಂದರೆ 55.845 ಗ್ರಾಂ.[]

ಗ್ರಾಂ ಅಣು ತೂಕ

[ಬದಲಾಯಿಸಿ]

ಗ್ರಾಂ ಪರಮಾಣು ತೂಕವನ್ನು ಮೂಲಧಾತುಗಳಿಗೆ ಮಾತ್ರ ಬಳಸಬಹುದು. ಅಣುವೊಂದರ ಮೋಲ್ ಆ ಪದಾರ್ಥದ ಅಣುವಿನಲ್ಲಿರುವ ಪರಮಾಣುಗಳ ತೂಕದ ಮೊತ್ತ. ನೀರಿನ ಅಣು ಸೂತ್ರ H2O. ಹೀಗಾಗಿ ಅದರಲ್ಲಿ ಎರಡು ಜಲಜನಕ (ಪರಮಾಣು ತೂಕ 1.00794) ಪರಮಾಣು ಮತ್ತು ಒಂದು ಆಮ್ಲಜನಕ (ಪರಮಾಣ ತೂಕ 15.9994) ಪರಮಾಣು ಇರುತ್ತವೆ. ಹೀಗಾಗಿ ನೀರಿನ ಅಣು ತೂಕ 18.01528 ಮತ್ತು ಗ್ರಾಂ ಅಣು ತೂಕ 18.01528 g/mol.

ಮೋಲ್‌ನ ಪ್ರಾಮುಖ್ಯತೆ

[ಬದಲಾಯಿಸಿ]

ಒಂದು ಮೋಲ್ ಯಾವುದೇ ಪದಾರ್ಥದಲ್ಲಿ ಅವೊಗಾಡ್ರೋ ಸಂಖ್ಯೆಯ ಅಣುಗಳು ಇರುತ್ತವೆ. ಈ ಸಂಖ್ಯೆಯನ್ನು ಪ್ರಾಯೋಗಿಕವಾಗಿ ನಿರ್ಣಯಿಸಲಾಗುತ್ತದೆ. ಆದ್ದರಿಂದ ಇದು ಬದಲಾಗ ಬಹುದು. ಅದರ ಪ್ರಾಮುಖ್ಯತೆ ಇರುವುದು ಉದಾಹರಣೆ ಒಂದು ಮೋಲ್ ಕಬ್ಬಿಣ ಒಂದು ಮೋಲ್ ಸಲ್ಫರ್ ಒಂದೇ ಸಂಖ್ಯೆಯ ಪರಮಾಣುಗಳನ್ನು ಹೊಂದಿರುತ್ತದೆ ಎನ್ನುವುದು. ಹಾಗೆಯೇ ಒಂದು ಮೋಲ್ ನೀರು ಅದೇ ಸಂಖ್ಯೆಯ ಅಣುಗಳನ್ನು ಹೊಂದಿರುತ್ತವೆ. ಅಲ್ಲದೆ ಮೋಲ್‌ ಅಣು ತೂಕ ಸ್ಥಿರವಾಗಿರುತ್ತದೆ. ಅಣುವೊಂದರ ಸೂತ್ರ ಗೊತ್ತಿದ್ದರೆ ಪರಮಾಣುಗಳ ತೂಕದ ಆಧಾರದ ಮೇಲೆ ಅದನ್ನು ಲೆಕ್ಕ ಹಾಕಬಹುದು.

ರಸಾಯನಶಾಸ್ತ್ರದಲ್ಲಿ ಪರಮಾಣು ತೂಕ ಎರಡು ಪಾತ್ರವಹಿಸುತ್ತದೆ. ಒಂದು ಪರಮಾಣು ಅಥವಾ ಅಣು (ಅದರ ಅಣು ಸೂತ್ರದ ಆಧಾರದಲ್ಲಿ)ವಿನ ತೂಕವನ್ನು ವ್ಯಕ್ತಪಡಿಸ ಬಹುದು. ಹಾಗೆಯೇ ಮೋಲ್ ದ್ರವ್ಯರಾಶಿಯ ಪ್ರಮಾಣವನ್ನೂ ಸೂಚಿಸುತ್ತದೆ. ಮೊದಲೆಯನದರಲ್ಲಿ ಅದರ ಚಿಹ್ನೆ AMU (ಎಎಮ್‌ಯು ಅಥವಾ ಅಟಾಮಿಕ್ ಮಾಸ್ ಯುನಿಟ್) ಮತ್ತು ಎರಡನೆಯದರಲ್ಲಿ ಅದನ್ನು g/mol ನಲ್ಲಿ ವ್ಯಕ್ತಪಡಿಸಲಾಗುತ್ತದೆ.

ಇಂದು ನಾವು ಗ್ರಾಂ ಮೋಲ್ ಎಂದು ಬಳಸದೆ ಕೇವಲ ಮೋಲ್ ಎಂದು ಬಳಸುತ್ತೇವೆ. ಹಿಂದೆ ಮೋಲ್‌ನ್ನು ಗ್ರಾಂ ಮೋಲ್ ಎಂದು ಬಳಸಲಾಗುತ್ತಿತ್ತು.

ಒಂದು ಮೋಲ್ ದ್ರಾವ್ಯವನ್ನು (ಸೊಲ್ಯೂಟ್) ಒಂದು ಲೀಟರ್ ದ್ರಾವಕದಲ್ಲಿ (ಸಾಲ್ವೆಂಟ್) ಕರಗಿಸಿ ಪಡೆದ ದ್ರಾವಣವನ್ನು ಆ ಪದಾರ್ಥದ ಮೋಲ್ ದ್ರಾವಣ ಎಂದು ಕರೆಯಲಾಗುತ್ತದೆ. ಇದು ಮೊಲಾರಿತ್ವವನ್ನು ಸೂಚಿಸುತ್ತದೆ. ದ್ರಾವಣವೊಂದರ ಮೊಲಾರಿತ್ವವನ್ನು ಹೀಗೆ ಸೂಚಿಸಿ ಬಹುದು.

ಮೊಲಾರಿತ್ವ= ದ್ರಾವ್ಯದ ಪ್ರಮಾಣ ಮೋಲ್‌ಗಳಲ್ಲಿ ದ್ರಾವಣ ಲೀಟರ್‌ಗಳಲ್ಲಿ

ಮೋಲಾರತ್ವವು ಪದಾರ್ಥವೊಂದರ (ದ್ರಾವ್ಯ) ಎಷ್ಟು ಮೋಲ್‌ಗಳನ್ನು ಒಂದು ಲೀಟರ್ ದ್ರಾವಕದಲ್ಲಿ ಕರಗಿಸಲಾಗಿದೆ ಎಂದು ಹೇಳುತ್ತದೆ.

ಉಲ್ಲೇಖಗಳು ಮತ್ತು ಟಿಪ್ಪಣಿಗಳು

[ಬದಲಾಯಿಸಿ]
  1. ಆವರಣದಲ್ಲಿನ ಬೆಲೆಯು ಅನಿಶ್ಚಯತೆಯ ಸೂಚನೆ ನೀಡುತ್ತದೆ. ಹೀಗಾಗಿ ಇದರ ಅರ್ಥ ಬೆಲೆ 6.022 140 857×10 23±0.000 000 074 ಎಂದು. ಈ ವಿವರಣೆ ಆವರಣ ಅಥವಾ ಬ್ರ್ಯಾಕೆಟ್‌ನಲ್ಲಿ ಸಂಖ್ಯೆಗಳನ್ನು ಬಳಸಿದ ಎಲ್ಲಕಡೆಯೂ ಅನ್ವಯಿಸುತ್ತದೆ.
  2. International Bureau of Weights and Measures (2006), The International System of Units (SI) (PDF) (8th ed.), pp. 114–15, ISBN 92-822-2213-6 From Wikipedia English Mole (unit)
  3. [Water molecular weight], retrived on 25-01-2017
  4. [Iron molecular weight], retrived on 25-01-2017


ಈ ಪುಟದ ಬಹಳಷ್ಟು ಮಾಹಿತಿಯ ಮೂಲ:

"https://kn.wikipedia.org/w/index.php?title=ಮೋಲ್&oldid=1057691" ಇಂದ ಪಡೆಯಲ್ಪಟ್ಟಿದೆ