ವಿಷಯಕ್ಕೆ ಹೋಗು

ಇರಿಡಿಯಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇರಿಡಿಯಮ್ ಒಂದು ಮೂಲಧಾತು ಲೋಹ. ಇದು ಪ್ಲಾಟಿನಮ್ ಲೋಹದಂತೆ ಬಿಳಿ ಬಣ್ಣದ ಹೊಳಪಿನ ಲೋಹ. ಇದು ಬಹಳ ಪೆಡಸಾದುದರಿಂದ ಇದನ್ನು ಬೇರೆ ಲೋಹಗಳೊಂದಿಗೆ ಬೆರೆಸಿ ಉಪಯೋಗಿಸುತ್ತಾರೆ. ಇದು ಅತ್ಯುತ್ತಮ ಕೊರೆತ ನಿರೋಧಕ. ಇದರಿಂದಾಗಿ ಹಲವಾರು ಯಂತ್ರಗಳ ಬಿಡಿಭಾಗ ತಯಾರಿಸಲು,ಕೆಲವು ಆಭರಣಗಳ ತಯಾರಿಕೆಯಲ್ಲಿ ಬಳಕೆಯಲ್ಲಿದೆ.ಇದನ್ನು ೧೮೦೪ರಲ್ಲಿ ಸ್ಮಿತ್‌ಸನ್ ಟೆನ್ನಂಟ್ ಎಂಬ ವಿಜ್ಞಾನಿ ಕಂಡುಹಿಡಿದರು.

ಇದರ ರಾಸಾಯನಿಕ ಸಂಕೇತ Ir. ಪರಮಾಣುಸಂಖ್ಯೆ 77, ಪರಮಾಣುಭಾರ 192.23 ಇದರ ಸಹಜಲಭ್ಯ ಸಮಸ್ಥಾನಿಗಳು 191, 193. ಎಲೆಕ್ಟ್ರಾನ್ ವಿನ್ಯಾಸ 1s2 2s2 2p6 3s2 3p6 3d10 4s2 4p6 4d10 4f14 5s2 5p6 5d9. ಮೆಂಡಿಲೀಫ್ ಆವರ್ತಕೋಷ್ಟಕದ ಎಂಟನೆಯ ಗುಂಪಿನ (ಗ್ರೂಪ್) ಮೂರು ಧಾತುತ್ರಯಗಳಲ್ಲಿ ಕಡೆಯದರ ಮಧ್ಯದ ಲೋಹವಾಗಿದೆ; ಪ್ಲಾಟಿನಂ ಲೋಹಗಳೆಂದು ಪ್ರಸಿದ್ಧವಾಗಿರುವ ರುಥೆನಿಯಂ (Ru), ರ್‍ಹೋಡಿಯಂ (Rh) ಪೆಲೇಡಿಯಂ (Pd) ಮತ್ತು ಆಸ್ಮಿಯಂ (Os), ಇರಿಡಿಯಂ (Ir), ಪ್ಲಾಟಿನಂಗಳಲ್ಲಿ (Pt) ಇರಿಡಿಯಂ ಐದನೆಯದು. ಈ ಲೋಹ 2454 ಸೆಂಗ್ರೇ.ನಲ್ಲಿ ಕರಗಿ 4800 ಸೆಂಟಿಗ್ರೇಡ್‌ನಲ್ಲಿ ಕುದಿಯುತ್ತದೆ. ಜಗತ್ತಿನ ಎಲ್ಲ ವಸ್ತುಗಳಲ್ಲಿಯೂ ಆಸ್ಮಿಯಂ ಲೋಹವನ್ನು ಬಿಟ್ಟರೆ ಇದರದೇ ಗರಿಷ್ಠ ಸಾಪೇಕ್ಷ ಸಾಂದ್ರತೆ (22.64).[][] ಇದರ ಪರಮಾಣು ಲಕ್ಷಣಗಳ ಸಂಕ್ಷೇಪ ವಿವರ: ತ್ರಿಜ್ಯ 1.26A; ಆಯಾನಿಕ್ ತ್ರಿಜ್ಯ 0.66A; ಪರಮಾಣು ಗಾತ್ರ 8.54 ಗ್ರಾಂ/ಮಿ.ಲೀ: ಎಲೆಕ್ಟ್ರೋನೆಗೆಟಿವಿಟಿ (ಪಾಲಿಂಗ್ ಮಾನದಲ್ಲಿ) 0.22; ಆನಿಲೀಕರಣ ಉಷ್ಣ 152 ಕಿ.ಗ್ರಾಂ-ಕೆಲೊರಿ/ಗ್ರಾಂ ಆಟಂ: ಕರಗುವ ಉಷ್ಣ 6.6 g ಕಿ.ಗ್ರಾಂ. ಕೆಲೊರಿ/ಗ್ರಾಂ ಆಟಂ; ವಿದ್ಯುದ್ವಾಹನ 0.189 ಮೈಕ್ರೋಮ್ಹೋಗಳು; ಉಷ್ಣವಾಹನ 0.14 ಕೆಲೊರಿ/ಚ.ಸೆಂ. ಮೀ). ಸೆ. ಸೆಕೆಂಡ್: ಸಾಪೇಕ್ಷ ಉಷ್ಣತೆ 0.031 ಕೆಲೊರಿ/ಗ್ರಾಂ ಸೆಂ.ಗ್ರೇ ಮೊದಲನೆಯ ಎಲೆಕ್ಟ್ರಾನ್ ಹರಣಕ್ಕೆ ಬೇಕಾಗುವ ಶಕ್ತಿ 212 ಕೆಲೊರಿ/ಗ್ರಾಂ ಮೋಲ್.

ದೊರಕುವಿಕೆ

[ಬದಲಾಯಿಸಿ]

ಇರಿಡಿಯಂ ಲೋಹ ಸ್ವಸ್ವರೂಪದಲ್ಲಿ ಪ್ರಕೃತಿಯಲ್ಲಿ ದೊರೆಯುವುದಿಲ್ಲ; ಪ್ಲಾಟಿನಂಗಳ ಜೊತೆಯಲ್ಲಿಯೇ ಪ್ಲಾಟಿನಿರಿಡಿಯಂ, ಆಸ್ಮಿರಿಡ್, ನೆವ್ಯಾನ್ ಸ್ಕೈಟ್ ಮತ್ತು ಸೈಸ್ಸರ್ಟ್ಸ್‌ಕೈಟ್, ಇರೈಟ್, ಆರಾಸ್ಮಿಡ್ ಮೊದಲಾದ ಅದುರುಗಳ ರೂಪದಲ್ಲಿ ಭೂಮಿಯ ಮೇಲ್ಪದರದಲ್ಲಿ ಪ್ರತಿ ಲಕ್ಷ ಕೋಟಿಯಲ್ಲಿ ಮೂರು ಭಾಗಗಳಷ್ಟು ಅತ್ಯಲ್ಪವಾಗಿ ದೊರೆಯುತ್ತದೆ. ಇದು ಮುಖ್ಯವಾಗಿ ರಷ್ಯದ ಯೂರಲ್ ಪರ್ವತದಲ್ಲಿಯೂ ಸೈಬಿರಿಯ, ಕ್ಯಾಲಿಪೋರ್ನಿಯ, ಓರೆಗಾನ್, ಸ್ಪೇನ್, ನ್ಯೂಸೌತ್ ವೇಲ್ಸ್, ಬ್ರಿಟಿಷ್ ಕೊಲಂಬಿಯ (ಕೆನಡ), ವಿಟ್ ವಾಟರ್ಸ್ ರ್‍ಯಾಂಡ್ (ದ. ಆಫ್ರಿಕ) ಮುಂತಾದ ಪ್ರಾಂತ್ಯಗಳಲ್ಲಿಯೂ ಸಿಗುತ್ತದೆ. ಆಸ್ಮಿಯಂ-ಇರಿಡಿಯಂ ಮಿಶ್ರಣಗಳಲ್ಲಿ ಪ್ರತಿಶತ 60ಕ್ಕಿಂತ ಕಡಿಮೆ ಇರಿಡಿಯಂ ಇರುವ ಅದುರನ್ನು ಸೈಸ್ಸರ್ಟ್ಸ್‌ಕೈಟ್ ಎಂದೂ ಇದಕ್ಕಿಂತ ಹೆಚ್ಚಾಗಿದ್ದರೆ ನೆವ್ಯಾನ್‍ಸ್ಕೈಟ್ ಎಂದೂ ಕರೆಯುತ್ತಾರೆ. 1804ರಲ್ಲಿ ಸ್ಮಿತ್‍ಸನ್ ಟಿನ್ನೆಂಟ್ ಇದನ್ನು ಮೊದಲನೆಯ ಬಾರಿಗೆ ಪ್ರತ್ಯೇಕಿಸಿ ಅದರ ಲವಣಗಳಿಗೆ ಕಾಮನಬಿಲ್ಲಿನ ಸಕಲ ವರ್ಣಗಳೂ ಇರುವುದರಿಂದ ಇರಿಡಿಯಂ (ಗ್ರೀಕ್: ಐರಿಸ್, ಕಾಮನಬಿಲ್ಲು) ಎಂದು ಹೆಸರಿಟ್ಟ.[][]

ತಯಾರಿಕೆ

[ಬದಲಾಯಿಸಿ]

ಇರಿಡಿಯಂ ಲೋಹವನ್ನು ಅದರ ಅದುರುಗಳಿಂದ ಪ್ರತ್ಯೇಕಿಸುವ ಹಲವು ವಿಧಾನಗಳಲ್ಲಿವೆ. ಅದುರಿನಲ್ಲಿ ರುಥೆನಿಯಂ ಇರುವಾಗ ಅನುಸರಿಸುವ ವಿಧಾನ ಬಹು ಪ್ರಚಾರದಲ್ಲಿರುವುದರಿಂದ ಅದನ್ನಿಲ್ಲಿ ಸಂಕ್ಷೇಪವಾಗಿ ವಿವರಿಸಬಹುದು: ಪ್ಲಾಟಿನಂ, ರುಥೆನಿಯಂ, ಆಸ್ಮಿಯಂ ಮತ್ತು ಇರಿಡಿಯಂಗಳಿರುವ ಅದುರನ್ನು ಪುಡಿ ಮಾಡಿ ರಾಜಾಮ್ಲದಲ್ಲಿ (ಪ್ರಬಲ ನೈಟ್ರಿಕ್ ಆಮ್ಲ ಮತ್ತು ಪ್ರಬಲ ಹೈಡ್ರೊಕ್ಲೋರಿಕ್ ಆಮ್ಲಗಳ ಮಿಶ್ರಣ) ಬಟ್ಟಿಯಿಳಿಸಿದಾಗ ಕುದಿಯಲ್ಲಿ ಆಸ್ಮಿಕ್ ಆಮ್ಲದ ಬಹುಭಾಗ ಹೊರಟುಹೋಗಿ ಹಿಂದೆ ಪ್ಲಾಟಿನಂ, ರುಥೆನಿಯಂ ಮತ್ತು ಇರಿಡಿಯಂ (ಮತ್ತು ಅಳಿದುಳಿದ ಆಸ್ಮಿಯಂ) ಉಳಿಯುತ್ತವೆ. ಇವುಗಳಿಗೆ ನೈಟ್ರಿಕ್ ಆಮ್ಲವನ್ನೂ ಅಮೋನಿಯಂ ಕ್ಲೋರೈಡನ್ನು (ನವಸಾಗರ) ಬೆರೆಸಿ, ಒಣಗಿಸಿ ನವಸಾಗರದ ದ್ರಾವಣದೊಡನೆ ತೊಳೆಯಲಾಗುತ್ತದೆ. ಇದರಿಂದ ಅಮೋನಿಯಂ ಕ್ಲೋರೋ ಇರಿಡೇಟ್ ಹಾಗೂ ಅಮೋನಿಯಂ ಕ್ಲೋರೋಪ್ಲಾಟಿನೇಟ್ ಎಂಬ ಸಂಕೀರ್ಣ ಲೋಹಗಳೂ ರುಥೆನಿಯಂ ಲೋಹವೂ ದೊರೆಯುತ್ತವೆ. ಇವನ್ನು ಹೈಡ್ರೊಜನ್ನಿನಲ್ಲಿ ಕೆಂಪಗೆ ಕಾಯಿಸಿದಾಗ ಇವೂ ಉಳಿದ ಆಸ್ಮಿಯಂ ಆಂಶವೂ ಅಯಾ ಲೋಹಗಳಾಗಿ ಅಪಕರ್ಷಣಗೊಳ್ಳುತ್ತದೆ. ಇವನ್ನು ಪುನಃ ರಾಜಾಮ್ಲದೊಡನೆ ಕಾಸಲಾಗುತ್ತದೆ. ಪ್ಲಾಟಿನಂ ಮತ್ತು ಆಸ್ಮಿಯಂಗಳು ಮಾತ್ರ ಕರಗಿ ಇರಿಡಿಯಂ ರುಥೆನಿಯಂಗಳು ಘನಸಾರವಾಗಿ (ಕಿಟ್ಟವಾಗಿ) ಉಳಿಯುತ್ತವೆ. ಇದನ್ನು ಕಾಸ್ಟಿಕ್ ಪೊಟಾಷ್ ಮತ್ತು ಪೊಟಾಸಿಯಂ ನೈಟ್ರೇಟುಗಳೊಡನೆ ವಿಲೀನಿಸಿ, ತಂಪಿಸಿ, ನೀರಿನೊಡನೆ ತೊಳೆದಾಗ ರುಥೆನಿಯಂ ಲವಣ ಮಾತ್ರ ವಿಲೀನವಾಗಿ ಇರಿಡಿಯಂ ಲೋಹ ಹಾಗೆಯೇ ಉಳಿದುಹೋಗುತ್ತದೆ. ಇದನ್ನು ಕರಗಿಸಿ ಬೇಕಾದ ರೂಪ, ಆಕಾರಗಳಲ್ಲಿ ಪಡೆದುಕೊಳ್ಳಬಹುದು. ಈ ಲೋಹವನ್ನು ಹರಳು ತಂತಿ, ಸ್ಪಂಜಿನಂಥ ಸರಂಧ್ರಕ ವಸ್ತು ಮೊದಲಾದ ರೂಪಗಳಲ್ಲಿಯೂ ತೆಳುವಾದ ಪದರಗಳಲ್ಲಿಯೂ ಕಪ್ಪು ಪುಡಿಯಾಗಿಯೂ ಆಸ್ಫೋಟಕ ರೂಪದಲ್ಲಿಯೂ ಕಲಾಯ್ಡ್ ರೂಪದಲ್ಲಿಯೂ ಪಡೆಯಬಹುದು.

ಗುಣಗಳು

[ಬದಲಾಯಿಸಿ]

ಇರಿಡಿಯಂ ಉಕ್ಕಿನಂತೆ ಬಿಳುಪಾದ ಬಲು ಗಟ್ಟಿಯಾದ ಲೋಹ. ಶುದ್ಧಾವಸ್ಥೆಯಲ್ಲಿ ಇದನ್ನು ತಂತಿಯಾಗಿ ಎಳೆದು ತಗಡಾಗಿ ತಟ್ಟಬಹುದಾದರೂ ಕಲ್ಮಷಗಳಿಂದಾಗಿ ಸಾಮಾನ್ಯವಾಗಿ ದೊರೆಯುವ ಲೋಹ ಬಲು ಪೆಡಸಾಗಿರುತ್ತದೆ. ರಾಸಾಯನಿಕವಾಗಿ ಅದು ಚುರುಕಲ್ಲವೆಂದೇ ಹೇಳಬೇಕು. ಸ್ಪಂಜಿನಂಥ ಇರಿಡಿಯಂ ಮತ್ತು ಈ ಲೋಹದ ಕಪ್ಪು ಪುಡಿಗಳೆರಡೂ ರಾಸಾಯನಿಕವಾಗಿ ಹೆಚ್ಚು ಕ್ರಿಯಾಶಾಲಿಗಳು. ಲೋಹ ಫ್ಲೂರಿನ್, ಕ್ಲೋರಿನ್ ಮತ್ತು ಗಂಧಕಗಳೊಡನೆ ಕಾಸಿದಾಗ ವರ್ತಿಸುತ್ತದೆ. ಆಮ್ಲಗಳಲ್ಲಿಯೂ ಕ್ಷಾರಗಳಲ್ಲಿಯೂ ಅದು ವಿಲೀನವಾಗದು; ರಾಜಾಮ್ಲದಲ್ಲಿ ಸ್ವಲ್ಪ ವಿಲೀನವಾಗುತ್ತದೆ. ಕರಗಿದ ಪೋಟಾಷ್ ಮತ್ತು ಆಕ್ಸಿಜನುಗಳಿಂದ ಅದು ಉತ್ಕರ್ಷಿತವಾಗಿ ಆಕ್ಸೈಡುಗಳನ್ನು ಕೊಡುತ್ತದೆ. 1,2,3,4,5 ಮತ್ತು 6 ಎಲೆಕ್ಟ್ರಾನುಗಳನ್ನು ಕಳೆದುಕೊಂಡು ಅದು ಆರು ಬಗೆಯ ಲವಣಗಳನ್ನು ಕೊಡಬಲ್ಲದು. ಇವುಗಳ ಪೈಕಿ ಮೂರು ಮತ್ತು ನಾಲ್ಕು ಎಲೆಕ್ಟ್ರಾನುಗಳನ್ನು ಕಳೆದುಕೊಳ್ಳುವುದರಿಂದ ಉಂಟಾಗುವ ಸಂಯುಕ್ತಗಳೇ ಹೆಚ್ಚು ಸ್ಥಿರವಾಗಿರುತ್ತದೆ. ಅಮೋನಿಯ, ಸಯನೈಡ್, ನೀರು, ನೈಟ್ರೈಟ್ ಮೊದಲಾದ ಪರಮಾಣು ಸಮುದಾಯಗಳು ಇರಿಡಿಯಂ ಪರಮಾಣುವಿನೊಡನೆ ನೇರವಾಗಿ ಬಂಧಗಳನ್ನು ಏರ್ಪಡಿಸಿಕೊಳ್ಳುವುದರಿಂದ ಬಲು ಬಗೆಯ ಸಂಕೀರ್ಣ ಸಂಯುಕ್ತಗಳು ಹುಟ್ಟುತ್ತವೆ.

ಇರಿಡಿಯಂ ಪತ್ತೆಹಚ್ಚಲು ಪರೀಕ್ಷೆ

[ಬದಲಾಯಿಸಿ]

ಒಂದು ವಸ್ತುವಿನಲ್ಲಿ ಇರಿಡಿಯಂ ಆಂಶ ಇದೆಯೆನ್ನುವುದನ್ನು ಈ ಪರೀಕ್ಷೆಗಳಿಂದ ತಿಳಿಯಬಹುದು:

  1. ಅದರ ಕ್ಲೋರೈಡ್ ದ್ರಾವಣಕ್ಕೆ ಹೈಡ್ರೊಜನ್ ಸಲ್ಫೈಡನ್ನು ಹಾಯಿಸಿದಾಗ ಹಸಿರು ಅಥವಾ ಹಳದಿ ಬಣ್ಣ ನಿರ್ವರ್ಣವಾಗಿ ಕಂದು ಬಣ್ಣದ ಇರಿಡಿಯಂ ಸಲ್ಫೈಡು ಒತ್ತರಿಸುತ್ತದೆ. ಇದು ಅಮೊನಿಯಂ ಸಲ್ಫೈಡಿನ ಆಧಿಕ್ಯದಲ್ಲಿ ಕರಗುತ್ತದೆ.
  2. ಸೋಡಿಯಂ ಕ್ಲೋರೋಇರಿಡೇಟ್ ದ್ರಾವಣಕ್ಕೆ ಕಾಸ್ಟಿಕ್‍ಸೋಡಾ ಅಥವಾ ಸೋಡಿಯಂ ಹೈಪೊಕ್ಲೋರೈಟನ್ನು ಸೇರಿಸಿದಾಗ ಬಣ್ಣ ಕಡುಕೆಂಪಿನಿಂದ ಹಸಿರಿಗೂ ಕಾಸಿದಾಗ ಆಕಾಶನೀಲಿಗೂ ತಿರುಗುತ್ತದೆ.
  3. ಅನಿಲೀನ್ ಸಲ್ಫೇಟಿನೊಡನೆ ಕಾಸಿದಾಗ ಕಡುನೀಲಿ ಬಣ್ಣಕ್ಕೆ ತಿರುಗುತ್ತದೆ.

ಉಪಯೋಗಗಳು

[ಬದಲಾಯಿಸಿ]

ಇರಿಡಿಯಂ ಲೋಹ ಬಲು ಗಟ್ಟಿ ಮತ್ತು ಅಶುದ್ಧವಾಗಿರುವಾಗ ಬಹು ಪೆಡಸು ಆಗಿರುವುದರಿಂದಲೂ ಮಿಶ್ರಲೋಹದಲ್ಲಿ 20%ಕ್ಕಿಂತ ಹೆಚ್ಚಾಗಿದ್ದರೆ ಇಷ್ಟಬಂದ ಆಕಾರ, ರೂಪವಾಗಿ ಮಾಡಿಕೊಳ್ಳಲು ಆಗದಿರುವುದರಿಂದಲೂ ಅದರ ಉಪಯೋಗಗಳು ಕಡಿಮೆಯೇ. ಮಾರುಕಟ್ಟೆಯಲ್ಲಿ ದೊರೆಯುವ ಪ್ಲಾಟಿನಂನಲ್ಲಿ ಇದು 2% ಆದರೂ ಇದ್ದೇ ತೀರುತ್ತದೆ. ಇದಿಲ್ಲದಿದ್ದ ಪ್ಲಾಟಿನಂ ಉಪಯೋಗಕ್ಕೆ ಬಾರದಷ್ಟು ಮೆತುವಾಗಿಬಿಡುತ್ತದೆ. ಜಗತ್ತಿನಲ್ಲಿ ಇಂದು ತೂಕಕ್ಕೂ ಅಳತೆಗೂ ಪ್ರಮಾಣ ಭೂತವಾಗಿರುವ ವಸ್ತುಗಳನ್ನು ನಿರ್ಣಯಿಸಿ ನಿರ್ಮಿಸಲು ಅಂತರರಾಷ್ಟ್ರೀಯ ತೂಕ ಅಳತೆಗಳ ಸಮಿತಿ 90% ಪ್ಲಾಟಿನಂ, 10% ಇರಿಡಿಯಂ ಇರುವ ಮಿಶ್ರಲೋಹವನ್ನು ಆರಿಸಿದೆ: ಪ್ಲಾಟಿನಂ ಇರಿಡಿಯಂ ಮಿಶ್ರಣಗಳನ್ನು ಸೂಕ್ಷ್ಮತ್ರಾಸುಗಳ ಬೇರಿಂಗುಗಳು, ದಿಕ್ಸೂಚಿ, ತಿರುಗಣಿ, ವಿಜ್ಞಾನದ ಸೂಕ್ಷ್ಮಮಾಪಕ ಯಂತ್ರಗಳು, ಶಸ್ತ್ರಚಿಕಿತ್ಸೆಯಲ್ಲಿ ಉಪಯೋಗಿಸುವ ಶಸ್ತ್ರಗಳು, ಫೌಂಟನ್ ಪೆನ್ ನಿಬ್ಬುಗಳ ತುದಿ (ಪಾಯಿಂಟ್) ಮುಂತಾದುವುಗಳಲ್ಲಿ ಬಳಸುತ್ತಾರೆ.[] ಈ ಲೋಹ ಮಿಶ್ರವನ್ನು 10000 ಸೆ. ವರೆಗಿನ ಉಷ್ಣೋತ್ಪತ್ತಿಗಾಗಿ ಥರ್ಮೋಕಪಲ್ ಆಗಿಯೂ ವಿದ್ಯುತ್ ಬಲ್ಬುಗಳಲ್ಲಿನ ಸೂಕ್ಷ್ಮತಂತುವಿಗಾಗಿಯೂ ಉಪಯೋಗಿಸುವುದೂ ಉಂಟು. ಇರಿಡಿಯಂ ಮೂಸೆಗಳನ್ನು ಕೆಲವು ವಿಶೇಷ ರಾಸಾಯನಿಕ ಕ್ರಿಯೆಗಳನ್ನು ನಡೆಸಲು ಬಳಸಲಾಗುತ್ತದೆ. ಈ ಲೋಹದ ಎಲೆಕ್ಟ್ರೋಡುಗಳನ್ನು ಬಳಸಿ ಕ್ಲೋರೈಡುಗಳನ್ನು ತಯಾರಿಸುತ್ತಾರೆ. ಇರಿಡಿಯಂ ಆಕ್ಸೈಡ್ ಪಿಂಗಾಣಿಗೆ ಕಪ್ಪು ಬಣ್ಣ ಕೊಡಲೂ ಕ್ಲೋರೈಡಿನ ಮೈಕ್ರೊಸ್ಕೋಪಿಯಲ್ಲಿಯೂ ನೈಟ್ರಸ್ ಆಮ್ಲದ ಸಾನ್ನಿಧ್ಯದಲ್ಲಿರುವ ನೈಟ್ರಿಕ್ ಆಮ್ಲವನ್ನು ಕಂಡುಹಿಡಿಯಲೂ ಉಪಯೋಗವಿದೆ. ಇರಿಡಿಯಂ ಸಂಯುಕ್ತಗಳನ್ನು ಛಾಯಾಚಿತ್ರೋದ್ಯಮದಲ್ಲಿ ಬಳಸುತ್ತಾರೆ ಮತ್ತು ರಾಸಾಯನಿಕ ವೇಗವರ್ಧಕಗಳಾಗಿ ಉಪಯೋಗಿಸುತ್ತಾರೆ. ಆದರೆ ಲೋಹ ಮತ್ತು ಅದರ ಸಂಯುಕ್ತಗಳು ಇನ್ನೂ ಬಲು ದುಬಾರಿಯಾಗಿಯೇ ಇವೆ.

ಉಲ್ಲೇಖಗಳು

[ಬದಲಾಯಿಸಿ]
  1. Arblaster, J. W. (1995). "Osmium, the Densest Metal Known". Platinum Metals Review. 39 (4): 164. Archived from the original on 2011-09-27. Retrieved 2008-10-02.
  2. Cotton, Simon (1997). Chemistry of Precious Metals. Springer-Verlag New York, LLC. p. 78. ISBN 978-0-7514-0413-5.
  3. Hunt, L. B. (1987). "A History of Iridium". Platinum Metals Review. 31 (1): 32–41. Archived from the original on 2022-09-29. Retrieved 2023-04-12.
  4. Emsley, John (2011). Nature's Building Blocks: An A–Z Guide to the Elements (New ed.). New York: Oxford University Press. ISBN 978-0-19-960563-7.
  5. Ryan, Marge (2022-11-16). "Recycling and thrifting: the answer to the iridium question in electrolyser growth".


ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: