ವಿಷಯಕ್ಕೆ ಹೋಗು

ನೀಲಗಾರರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಕ್ಷಿಣ ಕರ್ನಾಟಕದ ಜನಪದ ಗಾಯಕರಲ್ಲಿ ಮಂಟೇಸ್ವಾಮಿ ಪರಂಪರೆಗೆ ಸೇರಿದ ನೀಲಗಾರರು ಪ್ರಮುಖರಾದವರು. ಹಾವಿನ ಹೆಡೆ,ಅಥವಾ ಸಿಂಹಮುಖದ ಮಟ್ಡಸವಾದ ತಂಬೂರಿ ಇವರ ಪ್ರಮುಖ ವಾದ್ಯ. ನಾಲ್ಕು ತಂತಿಯ ಈ ವಾದ್ಯವನ್ನು ನುಡಿಸುತ್ತಾ ಇವರು ತಾಳ ಮೇಳಗಳೊಡನೆ ಸುವಿಸ್ತಾರ ಲಾವಣಿಗಳನ್ನು ಹಾಡುತ್ತಾರೆ. ತಲೆಯ ಮೇಲೆ ಕೆಂಪು ಮುಂಡಾಸು, ಮೈ ಮೇಲೆ ಬಣ್ಣದ ನಿಲುವಂಗಿ, ಶುಭ್ರವಾದ ಕಚ್ಚೆಯ ಪಂಚೆ, ನಡುವಿಗೆ ಸುತ್ತಿದ ವಸ್ತ್ರಗಳೊಡನೆ ಅತ್ಯಂತ ಠೀವಿಯಿಂದ ಈ ಕಲಾವಿದರು ಹೊರಗೆ ಹೊರಡುತ್ತಾರೆ. ಹಣೆಯಲ್ಲಿ ವಿಭೂತಿ ಗಂಧ ಎರಡನ್ನೂ ಇವರು ಧರಿಸುತ್ತಾರೆ. ಕೊರಳಲ್ಲಿ ಮೂರು ರುದ್ರಾಕ್ಷಿ ಮಣಿಗಳು ಇರುತ್ತದೆ. ಲೀಲೆಗಾರರು ಎಂಬ ಪದವೇ ನೀಲಗಾರರು ಎಂದಾಗಿದೆ. ಲೀಲೆಗಾರರು ಎಂದರೆ ಗುರುವಿನ ಲೀಲೆಯನ್ನು ಹಾಡುವರು ಎಂದರ್ಥ. ನೀಲಗಾರರಲ್ಲಿ ಪ್ರಧಾನವಾಗಿ ಹರಿಜನರೇ ಕಂಡು ಬರುತ್ತಾರೆ. ಉಳಿದಂತೆ ಕುರುಬರು, ಅಕ್ಕಸಾಲಿಗರು, ಕುಂಬಾರರು ನೀಲಗಾರರಾಗಿರುವುದುಂಟು. ಇವರು ತಮ್ಮನ್ನು ಸಿದ್ದಪ್ಪಾಜಿಯ ಗುಡ್ಡಗಳು ಎಂದು ಕರೆದುಕೊಳ್ಳುತ್ತಾರೆ. ನೀಲಗಾರರಲ್ಲಿ ಎರಡು ವಿಧ. ಸಾಧರಣ ನೀಲಗಾರರು ಮತ್ತು ತಂಬೂರಿ ನೀಲಾಗರರು ಎಂದು. ಸಾಧರಣ ನೀಲಗಾರರು ಕೇವಲ ಗುಡ್ಡರು. ಇವರು ಕಾವ್ಯ ಅಥವಾ ಪದಗಳನ್ನು ಹಾಡುವುದಿಲ್ಲ, ಅಲ್ಲದೇ ಇವರಿಗೆ ಒಂದು ರುದ್ರಾಕ್ಷಿಯನ್ನು ಕಟ್ಟಲಾಗಿರುತ್ತದೆ. ತಂಬೂರಿ ನೀಲಾಗರರು ದೇವರ ಕಥೆಗಳನ್ನು ಹಾಡುತ್ತ ಧಾರ್ಮಿಕ ವಿಧಿಗಳಲ್ಲಿ ಭಾಗವಹಿಸುತ್ತಾರೆ.

ಮೇಳದ ಇತಿಹಾಸ[ಬದಲಾಯಿಸಿ]

ನೀಲಗಾರರು ಮಂಟೇಸ್ವಾಮಿ ಸಂಪ್ರದಾಯಕ್ಕೆ ಸೇರಿದ್ದವರಾದ್ದರಿಂದ ಮಂಟೇದವರು ಮಂಟೇದಯ್ಯ,ಮಂಟೇಸ್ವಾಮಿ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಮಂಟೆಲಿಂಗಯ್ಯ ಎಂಬುದು ಮಂಟೇಸ್ವಾಮಿ ಕಥೆಯಲ್ಲಿ ಬರುವ ಧರೆಗೆ ದೊಡ್ಡವರ ಹೆಸರು. 'ಮಂಟಾಡು' 'ಮುಂಟಾಕೊ' ಎಂಬ ಶಬ್ದಗಳಿವೆ. ಓಲಾಡು, ಉರುಳು, ಒರಗು ಎಂಬರ್ಥದಲ್ಲಿ ದಕ್ಷಿಣ ಕರ್ನಾಟಕದ ಕೆಲವು ಭಾಗಗಳಲ್ಲಿ ಪ್ರಯೋಗದಲ್ಲಿದೆ. ಕಲ್ಯಾಣದಿಂದ ಮಳವಳ್ಳಿ ಪ್ರಾಂತ್ಯಕ್ಕೆ ಬಂದ ಧರೆಗೆ ದೊಡ್ಡವರಿಗೆ ಯಾವ ನಾಮಕರಣವು ಅಗಿರಲಿಲ್ಲಿ. ಅವರು ಮಳವಳ್ಳಿ ಸಮೀಪದ ಆದಿಹೊನ್ನನಾಯಕನಹಳ್ಳಿಗೆ ಬಂದಾಗ 'ಬಳೆಯ ಮುದ್ದಮ್ಮ ತಾಯಿ' ಕಂಚಿನ ಹಂಡೆಯಲ್ಲಿ ಮನೆಯ ಮಂದೆ ಹಾಲು ಕರೆಯುತ್ತಿದಳು. ಅಲ್ಲಿಗೆ ಭಿಕ್ಷೆಗೆ ಬಂದಾಗ ಧರೆಗೆ ದೊಡ್ಡವರ ಶಂಕು, ಜಾಗಟೆಗಳ ಶಬ್ದ ಕೇಳಿ ಹಸು ಬೆದರಿತು.

"ಹಸುವಾದರೆ ಬೆದರಿತಂತೆ

ಅಡ್ಡ ಒದೆತ ಒದ್ದಿಂತೆ

ಕಂಚಿನ ಹಂಡೆ ಹೊಡೆದು ಹೊಯ್ತು

ಕರೆದ ಹಾಲು ಚೆಲ್ಲಿ ಹೊಯ್ತು"

ಬಳೆಯ ಮುದ್ದಮ್ಮನಿಗೆ ಸಿಟ್ಟು ಬಂದು-

"ಹಾಳಾದ ಮಂಟ್ಹೋದಯ್ಯ ಮುಂದಕ್ಕೆ ಹೋಗು"

ಎಂದು ರೇಗಿದಳು. ಧರೆಗೆ ದೊಡ್ಡವರು ಅದೇ ನಾಮಕರಣವನ್ನು ಸ್ವೀಕರಿಸಿದರು. 'ಕ' ಪ್ರತಿ 'ಗ' ಪ್ರತಿ ಮತ್ತು 'ಚ' ಪ್ರತಿ ಈ ಮೂರರಲ್ಲೂ ಈ ಪ್ರಸಂಗ ಬಂದಿದೆ. ಮಂಟ್ಹೋದ, ಮಂಟಾಕೊ ಶಬ್ಧ ಉರುಳಿದ, ಒರಗಿದ, ಕೆಳಗೆ ಬಿದ್ದ, ತೀರಿಕೊಂಡ ಎಂಬ ಅರ್ಥವನ್ನು ನೀಡುತ್ತದೆ. ಈ ಹೆಸರೇ ಮಂಟೇಸ್ವಾಮಿಗೆ ಉಳಿಯಿತು ಎಂದು ಜಾನಪದ ಕಾವ್ಯಗಳು ಸಮರ್ಥಿಸುತ್ತವೆ. ಮಳವಳ್ಳಿ ಬಳಿಯ ಬೊಪ್ಪಗೌಡನ ಪುರದ ಮಠವನ್ನು ಮಂಟೇಸ್ವಾಮಿ ಮಠವೆಂದು ಕರೆಯಲಾಗುತ್ತಿದೆ.

ನೀಲಾಗರರ ದೀಕ್ಷೆ[ಬದಲಾಯಿಸಿ]

ನೀಲಾಗರರು ತಮ್ಮನ್ನು ಸಿದ್ದಾಪ್ಪಾಜಿಯ ಗುಡ್ಡರು ಎಂದು ಕರೆದುಕೊಳ್ಳುತ್ತಾರೆ. ಇವರಲ್ಲಿ ಎರಡು ತಂಡಗಳನ್ನು ಗುರುತಿಸಬಹುದು. ಮಂಟೇಸ್ವಾಮಿಯ ಮನೆತನ ಎಂದು ಕರೆದುಕೊಳ್ಳುವ ಅನೇಕ ಒಕ್ಕಲುಗಳಲ್ಲಿ ಸ್ವಾಮಿಯ ಕಥೆಯನ್ನು ಹಾಡದವರು, ಒಂಟಿ ಮಣಿಯನ್ನು ಹಾಡುವವರು ಮೂರು ಮಣಿಗಳನ್ನು ಧರಿಸುತ್ತಾರೆ. ಇವೆಲ್ಲ ಅವರ ಗುರು ಕೊಟ್ಡ ಲಾಂಛನಗಳು. ಹಾಡುವ ಪದ್ದತಿ ಎಲ್ಲರಿಗೂ ನಡೆದು ಬಂದಿಲ್ಲ. ಒಂದೊಂದು ಒಕ್ಕಲಲ್ಲಿ ಒಬ್ಬ ಮಗ ಮಾತ್ರ ಈ ಹಕ್ಕಿಗೆ ಪಾತ್ರನಾಗುತ್ತಾನೆ. ಅವನು ಸ್ವಾಮಿಯ ವಾರದಂದು, ಗದ್ದುಗೆ ಪೊಜೆ ಮಾಡುವಾಗ ಗುರು ಮನೆಗೆ 'ಎದೆಕಟ್ಟಿ' ಹೋಗುವಾಗ ಮೂವತ್ತೊಂದು ಮಣಿಗಳ ರುದ್ರಾಕ್ಷಿ ಸರವನ್ನು ಧರಿಸುವನು. ಒಟ್ಟಿನಲ್ಲಿ ಆತನ ಮನೆತನದಲ್ಲಿ ಹುಟ್ಟಿದ ಮಕ್ಕಳು ತೊಟ್ಟಿಲ ಶಿಶುವೆಲ್ಲ ಅವನ ಒಕ್ಕಲು. ಮನೆಯ ಹಿರಿಯ ಮಗನ್ನು ಹುಟ್ಟಿದ ಎಳು ವರ್ಷಗಳಿಗೆ ಶ್ರೀ ಮಠಕ್ಕೆ ಕರೆದುಕೊಂಡು ಹೋಗಿ ದೀಕ್ಷೆ ಕೊಡಿಸಲಾಗುವುದು. ದೀಕ್ಷೆ ಬೊಪ್ಪಗೌಡನ ಪುರದ ಮಠದಲ್ಲೋ, ಮಳವಳ್ಳಿ ಮಠದಲ್ಲೋ, ಜಾತ್ರೆಗಳು ನಡೆಯುವ ಕಪ್ಪಡಿ ಚಿಕ್ಕಲ್ಲೋರು ಕ್ಷೇತ್ರಗಳಲ್ಲೋ ಆಗಬಹುದು. ಗುರುವು ಆ ಶಿಶುವನ್ನು ಅರಸಿ ಕೊರಳಿಗೆ ಮಣಿಯನ್ನು ಕಟ್ಟುವನು.

ಓಂ ನಮೋ ಹರಹರ

ಸಕಲ ಕಂಟಕ ನವಾರ್ಯ

ಪರು ಜ್ಯೋತಿ ಪ್ರಕಾಶ

ಜಗಳ ಆಡೋತಕ್ಕೆ ಹೋಗ ಬೇಡ

ಕೆಟ್ಡ ಬೊಗಳ ಬೈಬೇಡ

ನೀನು ಭಿಕ್ಷೆ ಮಾಡಿದರಲ್ಲಿ

ಒಬ್ಬನಿಗೆ ಅನ್ನ ಹಾಕು

ಹೀಗೆ ಹೇಳಿ ಮುಂಗೈಗೆ ಜೋಳಿಗೆ, ಕಂಕುಳಿಗೆ ಬೆತ್ತ ಕೊಟ್ಡು ಆಗಲೇ ನಾಲ್ಕು ಮನೆ ಭಿಕ್ಷೆ ಮಾಡಿಸುತ್ತಾರೆ. ಗುರುಗಳು ಕಂಕಣ ಬಿಚ್ಚಿ ಹೋಗಪ್ಪ ಮನೆಗೆ ಎನ್ನುವಾಗ ಒಂದು ಪ್ರಶ್ನೆ ಕೇಳುತ್ತಾರೆ.

"ಇವನು ಯಾರ ಮಗ"

" ಇದುವರೆಗೆ ನಮ್ಮ ಮಗ ಇನ್ನು ಮೇಲೆ ಸ್ವಾಮಿಯ ಮಗ"

ಎಂದು ಅದಕ್ಕೆ ಉತ್ತರವಾಗಿ ಹೇಳಲು ತಂದೆ ತಾಯಿಗಳು ಕರೆತರುವರು. ಊರಿಗೆ ಮರಳಿದ ಮೇಲೆ 'ಧರ್ಮ ಪುರಿ ರಾಚಯ್ಯಪ್ಪನ ಭಿಕ್ಷವೋ' ಎಂದು ನಾಲ್ಕು ಜನ ನೀಲಾಗರರು ಸೇರಿ ಭಿಕ್ಷೆ ಮಾಡಿಸುವವರು.ಅವರಿಗೆಲ್ಲ ಅಂದು ವಟುವಿನ ಮನೆಯಲ್ಲಿ ಸಂತರ್ಪಣೆಯಾಗಬೇಕು. ನೀಲಾಗರನಿಗೆ ಹಿರಿಯ ಮಗ ಗಂಡಾಗದಿದ್ದರೆ ಯಾವ ಮಗನಿಗಾದರೂ ದೀಕ್ಷೆ ಕೊಡಿಸಬಹುದು. ಮಕ್ಕಳೇ ಇಲ್ಲವಾದಾಗ ಯಾರನ್ನಾದರೂ ದತ್ತು ಪಡೆದುಕೊಳ್ಳಬಹುದು. ನೀಲಾಗರರಲ್ಲಿ ವಿಶೇಷವಾಗಿ ಎಡಗೈನವರು, ಬಲಗೈನವರು, ಕುಂಬಾರ ಶೆಟ್ಡರು, ಮಡಿವಾಳರು, ಹೆಗ್ಗಡೆಗೌಡರು ಈ ಮತದವರೇ ಹೆಚ್ಚು. ಕಷ್ಠ ಬಂದವರೆಲ್ಲ ಮಣೆ ಹಾಕಿ ಶಿಷ್ಯರಾಗಬಹುದು. ಮಳವಳ್ಳಿ ರಾಚಯ್ಯನ ಮನೆತನದವರು ಮಂಟೇದವರ ಒಕ್ಕಲಾದರು. ಹೀಗೆ ಅವರ ಹೆತ್ತಯ್ಯ, ಮುತ್ತಯ್ಯನವರ ಕಾಲದ ಕಥೆ. ಇವರ ವಂಶದ ಹಿರಿಯರಿಗೆ ಮಕ್ಕಳೇ ಆಗಲಿಲ್ಲ. ನೂರು ವರ್ಷದ ವೃದ್ದರಾದರು. ಮನೆಯದೀಪ ಉಳಿಯಲು ಮಂಟೇಸ್ವಾಮಿ ಮಠಕ್ಕೆ ಹೋಗಿ ಗುರುವಿನ ಪಾದ ಹಿಡಿದರು. ಸ್ವಶಮಿ 'ಕಪ್ಪು ಧೂಳ್ತ' ಬಾಳೆ ಹಣ್ಣಿಗೆ ಹಾಕಿ ಸೇವಿಸಲು ಹೇಳಿದರು. ತೊಟ್ಟಿಲು ಸೇವೆಗಾಗಿ ಮಳವಳ್ಳಿ ಮಠಕ್ಕೆ ಬರಲು ಹೇಳಿದರು. ಒಂದು ಮಗುವು ಆಯಿತು. ಅಂದಿನಿಂದ ಅವರ ಮನೆತನದವರು ಆ ಮಠಕ್ಕೆ ನಿಷ್ಠೆಯಿಂದ ನಡೆದು ಕೊಳ್ಳುತ್ತಾರೆ. ಹೀಗೆ ದೈವದ ಅನೇಕ ಪ್ರಸಂಗಗಳನ್ನು ಕಾಣಬಹುದು.

ತಂಬೂರಿ ದೊರೆತ ಕಥೆ[ಬದಲಾಯಿಸಿ]

ಕನಕಪುರ ತಾಲೂಕಿನ ಲಿಂಗಮಾರದಯ್ಯನು ಹೀಗೆಯೇ ಮಾದಯ್ಯನ ಪಂಥದಿಂದ ಮಂಟೇಸ್ವಾಮಿಯ ಪಂಥಕ್ಕೆ ಬಂದವನು. ಮಂಟೇಸಿದ್ದಯ್ಯನು ಕಂಸಾಳೆಯನ್ನು ಬಿಟ್ಟು ತಂಬೂರಿಯನ್ನು ಹಿಡಿದವನು. ಲೌಕಿಕ ಉದ್ದೇಶಗಳಿಗಾಗಿಯೇ ತಂಬೂರಿಯನ್ನು ಹಿಡಿಯುವ ಉದ್ದೇಶ ಉಂಟು. ಹಾಡುಗಾರಿಕೆಯಿಂದ ಹಣಗಳಿಸುವ ಜಾಣತನವನ್ನು ಕೆಲವರು ಕಂಡು ಕೊಂಡಿದ್ದಾರೆ. ಮಂಟೇಸ್ವಾಮಿಯ ಒಕ್ಕಲಿನವರು ಎಲ್ಲಿದ್ದರೂ ಆ ಗುರುವಿನ, ಅವರ ಶಿಷ್ಯರ ಹೆಸರುಗಳನ್ನು ತಮ್ಮ ಮಕ್ಕಳಿಗೆ ಇಡುತ್ತಾರೆ. ರಾಚಯ್ಯ, ರಾಚಪ್ಪಾಜಿ, ಸಿದ್ದಪ್ಪಜಿ, ಸಿದ್ದಯ್ಯ, ಮಂಟೇದಯ್ಯ, ಮಂಟೇಲಿಂಗಯ್ಯ ಮುಂತಾದ ಹೆಸರುಗಳೆಲ್ಲವು ಈ ಮೂಲವನ್ನು ತಿಳಿಸುತ್ತವೆ. ನೀಲಗಾರರ ತಂಬೂರಿ ಒಂದು ವಿಶಿಷ್ಠ ಸ್ವರೂಪದ ಜನಪದ ವಾದ್ಯ. ಎರಡು ಮೊಳೆ ಉದ್ದದ ಇದನ್ನು ಹಲಸಿನ ತುಂಡಿನಲ್ಲಿ ಕಡೆಯಲಾಗುತ್ತದೆ. ಇದನ್ನೇ ಮೊಂಟೇದವರು 'ಸರಸ್ವತಿ' ಎಂದೇ ಕರೆಯುವುದು. ವೈಷ್ಣವ ಸಂಪ್ರಾದಯಕ್ಕೆ ಸಂಭಂದಪಡುವ ಈ ವಾದ್ಯವು ನೀಲಾಗಾರರಗೆ ದೊರಕ್ಕಿದ್ದಕ್ಕೆ ಸರಿಯಾದ ಆಧಾರ ದೊರೆತಿಲ್ಲ. ಧರೆಗೆ ದೊಡ್ಡವರೇ ತಂಬೂರಿಯನ್ನು ಹಿಡಿದು ಹಾಕಿಕೊಂಡು ಬಂದರು ಎಂಬ ಐತಿಹ್ಯವಿದೆ. ಸಿದ್ದಾಪ್ಪಾಜಿಯವರು ಹಲಗೂರು ಪಾವಡಕ್ಕೆ ಹೋದಾಗ ತರಂಬೂರಿಯನ್ನು ಹಿಡಿದು ಹೋಗಿದ್ದರು. ಪವಾಡವನ್ನು ಗೆಲ್ಲಿಸಿದ ಆ ತಂಬೂರಿ ನೀಲಗಾರರಗು ಬಂದಿತು ಎಂದು ಕೆಲವು ಗಾಯಕರ ಆಭಿಪ್ರಾಯ. ಮುತ್ತಾತ್ತಿರಾಯ ಮತ್ತು ಭಾಗವತದ ಆಂಜನೇಯ, ಸಿದ್ದಪ್ಪಾಜಿಯವರು ಆ ಕ್ಷೇತ್ರದಲ್ಲಿ ನೆಲೆಸಲು ಬಂದಾಗ ಮುತ್ತತ್ತಿರಾಯರು ಮತ್ತು ಅವರ ನಡುವೆ ಅನೇಕ ಪವಾಡಗಳು ನಡೆಯುತ್ತವೆ. ತಮ್ಮಲ್ಲಿಗೆ ಬಂದವನು "ಹಲಗೂರು ಪಾವಡಗೆದ್ದ ಸಿದ್ದಾಪ್ಪಾಜಿ" ಎಂಬ ವಿಷಯ ತಿಳಿಯಲಾಗಿ ಮುತ್ತಾತ್ತಿರಾಯ ಕೊಡಲೇ ಆ ಕ್ಷೇತ್ರವನ್ನು ಅವರಿಗೆ ಬಿಟ್ಟು ಕೊಡುತ್ತಾನೆ .ಜೊತೆಗೆ ತನ್ನ ಬಿರುದಾದ ತಂಬೂರಿಯನ್ನು ಅರ್ಪಿಸುತ್ತಾನೆ. ಸಿದ್ದಾಪ್ಪಾಜಿ ಸೇವೆ ಆದ ಮೇಲೆ ವೈಷ್ಣವ ಸಂಪ್ರಾದಯದಂತೆ ಮತ್ತಿರಾಯನ ಸೇವೆಯನ್ನು ನೀಲಾಗರರು ನೆರವೇರಿಸುತ್ತಾರೆ. ಶೈವ-ವೈಷ್ಣವಗಳ ಸಂಗಮವನ್ನು ಮಂಟೇಸ್ವಾಮಿಯ ಪರಂಪರೆಯಲ್ಲಿ ಕಾಣಬಹುದು. ತನ್ನ ಗುರುವಾದ ಮೋಟೇಸ್ವಾಮಿಯವರ ಈ ಪವಿತ್ರಕಥೆಯನ್ನು ಸಿದ್ದಾಪ್ಪಜಿಯವರು ಲೋಕದ ಮೇಲೆ ಹಾಡುತ್ತ ತಾಳ ತಂಬೂರಿಗಳೊಡನೆ ಗುರುಮಹಿಮೆಯನ್ನು ಮೆರೆದು, ಆದರಿಂದಲೇ ಮಂಡೇಸ್ವಾಮಿಯವರದು 'ಕೂತ ಪಟ್ಟವಾದರೆ' ಸಿದ್ದಾಪ್ಪಜಿಯವರದು 'ದಳವಾಯಿಪಟ್ಟ' ತಮ್ಮ ದಳವಾಯಿಂದೇ ಮಂಟೇಸ್ವಾಮಿಯವರು ಶಿಷ್ಯನನ್ನು ಕರೆದುಕೂಳ್ಳುತ್ತಾರೆ. ಮಂಟೇಸ್ವಾಮಿಗಳ ಮಹಿಮೆಗಳ ಪ್ರಸಾರಕನಾದ ಸಿದ್ದಾಪ್ಪಾಜಿ ಅನೇಕ ಮಂದಿ ಶಿಷ್ಯ ಪರಂಪರೆಗಳನ್ನು ಬೆಳೆಸಿದರು. ಆ ಶಿಷ್ಯರು ತಾಳ ತಂಬೂರಿಗಳೊಡನೆ ಚಿಕ್ಕಲ್ಲೂರಿನಿಂದ ಕಪ್ಪಡಿಯವರೆಗೆ, ಚಾಮರಾಜನಗರದಿಂದ ಬೆಂಗಳೂರಿನವರೆಗೆ ಭಕ್ತ ಪರಂಪರೆಯನ್ನು ಬೆಳೆಸಿದರು. ಕನಕಪುರ, ಮಳವಳ್ಳಿ, ರಾಮನಗರ, ಚೆನ್ನಪಟ್ಟಣ, ಮದ್ದೂರು, ಮಂಡ್ಯ, ಟಿ.ನರಸೀಪುರ, ಪಾಂಡವಪುರ, ನಂಜನಗೂಡು, ಚಾಮರಾಜನಗರ, ಗುಂಡ್ಲುಪೇಟೆ, ಹೆಗ್ಗಡದೇವನ ಕೋಟೆ, ಹುಣಸೂರು ಮುಂತಾದ ಪ್ರದೇಶಗಳಲ್ಲಿ ನೀಲಾಗರರು ದಟ್ಟವಾಗಿ ಕಂಡು ಬರುತ್ತಾರೆ. ಮೈಸೂರು ನಗರದಲ್ಲಿಯೇ ಹತ್ತಾರು ಮಂದಿ ಕಲಾವಿದರು ವಿವಿಧ ಮೊಹಲ್ಲಗಳಲ್ಲಿ ವಾಸವಾಗಿದ್ದಾರೆ. ಮಂಟೇಸ್ವಾಮಿ ಪರಂಪರೆಗೆ ಸಂಭಂದಪಟ್ಟಂತೆ ಮೂರು ಜಾತ್ರೆಗಳು ವರ್ಷಕ್ಕೊಮ್ಮೆ ನಡೆಯುತ್ತವೆ. ಚಕ್ಕಲ್ಲೂರು ಕಪ್ಪಾಡಿ ಹಾಗು ಬೊಪ್ಪ ಗೌಡನ ಪುರದಲ್ಲಿ ನಡೆಯುವ ಈ ಜಾತ್ರೆಗಳು ಮಂಡ್ಯ, ಮೈಸೂರು, ಹಾಸನ, ಕೊಡಗು, ಬೆಂಗಳೂರು, ಸೇಲಂ ಜಿಲ್ಲೆಗಳ ಜನರನ್ನು ಆಕರ್ಷಿಸುತ್ತವೆ. ತಮ್ಮ ಗುರು ಪರಂಪರೆಯ ಕ್ಷೇತ್ರದರ್ಶನ, ಸೇವೆಗಳ ನೆಪದಲ್ಲಿ ಕಲಾವಿದರ ಒಂದು ಗೋಷ್ಠಿಯೇ ನಡೆಯುತ್ತದೆ. ವಿವಿಧ ಪ್ರದೇಶದ ಕಲಾವಿದರು ತಂಬೂರಿ ಹಿಡಿಡು ಇಲ್ಲಿಗೆ ಬರುತ್ತಾರೆ. ಜೊತೆಗೆ ಮಂಟೇಸ್ವಾಮಿಯ ಕಥೆಯನ್ನು ಶುದ್ಧ ರೂಪದಲ್ಲಿ ಉಳಿಸುತ್ತಾರೆ.

ಕಥನ ಶೈಲಿ[ಬದಲಾಯಿಸಿ]

ನೀಲಗಾರರ ತಂಬೂರಿ ವಿಶಿಷ್ಟವಾದುದು. ತಂಬೂರಿಯು ಸುಮಾರು ಎರಡು ಮೊಳ ಉದ್ದವಿರುತ್ತದೆ. ಇದನ್ನು ಹಲಸಿನ ಮರದಿಂದ ತಯಾರು ಮಾಡುತ್ತಾರೆ. ಇದರ ಮೇಲು ತುದಿಯಲ್ಲಿ ನಾಗರ ಹೆಡೆ ಇಲ್ಲವೇ ಸಿಂಹದ ಮುಖವನ್ನು ಬಿಡಿಸುತ್ತಾರೆ. ನೀಲಗಾರರು ತಾವು ಪಡೆದ ಪದಕ ಮತ್ತಿತರ ಸಾಧನಗಳನ್ನು ಅದರಲ್ಲಿ ನೇತು ಹಾಕಿರುತ್ತಾರೆ. ಈಗಾಗಲೇ ಹೇಳಿರುವಂತೆ ಇವರು ಕಲಾ ಪ್ರದರ್ಶನದ ಸಂದರ್ಭದಲ್ಲಿ ಗಗ್ಗರ ಮತ್ತು ಢಕ್ಕೆಗಳನ್ನು ನುಡಿಸುತ್ತಾರೆ. ಒಬ್ಬನೇ ನೀಲಗಾರ ಹಾಡುವಾಗ ಚಕ್ರಾಕಾರದ ಗಗ್ಗರಗಳನ್ನು ಎಡಗೈ ಹೆಬ್ಬೆರಳಿಗೆ ಸಿಕ್ಕಿಸಿಕೊಂಡು ತಂಬೂರಿಯ ಮೇಲೆ ಬಡಿಯುತ್ತಾನೆ. ಬಲಗೈಯಲ್ಲಿ ತಂತಿಯನ್ನು ಮೀಟುತ್ತಾನೆ. ಮೂವರು ನೀಲಗಾರರು ಹಾಡುವಾಗ ಮುಖ್ಯ ಗಾಯಕರು ತಂಬೂರಿ ಗಗ್ಗರಗಳನ್ನು ಹಿಡಿದು ಕುಳಿತಿರುತ್ತಾನೆ. ಅವನ ಅಕ್ಕಪಕ್ಕದಲ್ಲಿ ಶಿಷ್ಯರು ಕುಳಿತು ಅವರಲೊಬ್ಬ ತಾಳ ನುಡಿಸುತ್ತಾನೆ. ಢಕ್ಕೆಯನ್ನು ಬಡಿಯುತ್ತಾನೆ. ಮತ್ತೊಬ್ಬರು ಹಿಮ್ಮೇಳ ಕೊಡುತ್ತಾರೆ. ನೀಲಗಾರರ ಹಾಡಿನ ರೀತಿ ಇತರೆ ವೃತ್ತಿಗಾಯಕರಿಗಿಂತ ತುಂಬ ಭಿನ್ನ. ಅಬ್ಬರವಿಲ್ಲದ ಆದರೆ ಸುಕೋಮಲ ರಾಗದ ಈ ಹಾಡುಗಳು ಕೇಳುಗರನ್ನು ಬೇರೊಂದು ಜಗತ್ತಿಗೆ ಕರೆದೊಯ್ಯುವ ಶಕ್ತಿ ಪಡೆದಿವೆ. ಆರಂಭದ ಪಲ್ಲವಿಗಳು, ಕಥೆಯ ನಿರೂಪಣೆಯ ಸಂದರ್ಭದಲ್ಲಿ ಪಾತ್ರ ಮತ್ತು ಸನ್ನಿವೇಶಗಳಿಗೆ ಅನುಗುಣವಾಗಿ ಬಳಸುವ ವಿವಿಧ ರಾಗಗಳು, ಆ ಸಂದರ್ಭದಲ್ಲಿ ಏರಿಳಿತ ಪಡೆಯುವ ಹಲವು ಸಂಗತಿಗಳು ಮಹತ್ವದ ಸುಕೋಮಲ ಕಂಠ ಮತ್ತು ಆ ಕಂಠದ ಸಿರಿಯನ್ನು ಅವರು ಕಾಪಾಡಿಕೊಂಡಿರುವ ರೀತಿ ಅದ್ಭುತವಾದದ್ದು. ಇದರ ಕಾವ್ಯ ಹೆಚ್ಚಾಗಿ ಹಾಡಿನ ರೂಪದಲ್ಲಿರುತ್ತದೆ. ನಡುನಡುವೆ ಮಾತ್ರ ಗದ್ಯ ಇರುತ್ತದೆ. ಕುಣಿತವಿಲ್ಲದ ಇವರ ಮೇಳಕ್ಕೆ ನಿರ್ದಿಷ್ಟವವಾದ ರಂಗಸ್ಥಳ ಬೇಕಾಗಿಲ್ಲ.

ನೀಲಗಾರರು ಹಾಡುವ ಕಾವ್ಯಗಳನ್ನು ಧಾರ್ಮಿಕ ಕಾವ್ಯ ಹಾಗೂ ತಾರ್ಕಿಕ ಕಾವ್ಯಗಳೆಂದು ವಿಭಾಗಿಸಲಾಗಿದೆ. ಧಾರ್ಮಿಕ ಕಾವ್ಯದಲ್ಲಿ "ಮಂಟೇಸ್ವಾಮಿ ಕಾವ್ಯ" ಸೇರುತ್ತದೆ. ತಾರ್ಕಿಕ ಕಾವ್ಯದಲ್ಲಿ ಕುಶ-ಲವರ ಕಥೆ, ಅರ್ಜುನ ಜೋಗಿ ಹಾಡು, ಪಿರಿಯಾಪಟ್ಟಣದ ಕಾಳಗ, ಲಿಂಗಾರಾಜುಮ್ಮ, ಚೆನ್ನಿಗರಾಮ, ಸಾರಂಗಧರ, ಗುಂಡುಬ್ರಹ್ಮಯ್ಯ, ಅಕ್ಕನಾಗಮ್ಮ, ಭುಜನಮ್ಮ, ಚೆನ್ನಬಸಣ್ನ ಬಾಲನಾಗಮ್ಮ, ಚೆಲುವರಾಯ, ಬಿಳಿಗಿರಿರಂಗ, ನಂಜುಡೇಶ್ವರ, ಕಾರುಗಹಳ್ಳಿ, ಬಾಲನಾಗಮ್ಮ, ಕತ್ತಲರಾಯನ ಕಥೆ, ಮುಡುಕು ತೊರೆಮಲ್ಲಿಕಾರ್ಜುನ, ಮೈದುನರಾಮಣ್ಣ, ಮಡಿವಾಳ ಮಾಚಯ್ಯ, ಬಂಜೆ ಹೊನಮ್ಮ, ಹರಳಯ್ಯನವರು ಕಥೆ, ಮಾತಾಗಿಕಾಳಗ, ಬಾಣಾಸುರವಥೆ, ಸತ್ಯವ್ರತ ಮೊದಲಾದ ಕಥೆಗಳು ಸೇರುತ್ತವೆ

ಮಂಟೇ ಸ್ವಾಮಿ ಕಾವ್ಯದ ಸಾಲುಗಳು[ಬದಲಾಯಿಸಿ]

'ಮಂಟೇಸ್ವಾಮಿ ಕಾವ್ಯವು' ಆಳ ಮತ್ತು ಹರಹುಗಳೆರಡರಲ್ಲಿಯು ಬಹುಮುಖ್ಯವಾದದು. ಈ ಕಾವ್ಯವು ನಾಲ್ಕು ಸಾಲುಗಳಾಗಿ ವಿಭಾಗಿಸಲ್ಪಟ್ಟಿದೆ.

೧)ಧರೆಗೆ ದೊಡ್ಡವರ ಸಾಲು

೨)ಸಿದ್ದಪ್ಪಾಜಿಯ ಸಾಲು

೩)ರಾಚಪ್ಪಜಿಯ ಸಾಲು

೪)ಚಿಕ್ಕಲ್ಲೂರು ಸಾಲು

ಧರೆಗೆ ದೊಡ್ಡವರ ಸಾಲು[ಬದಲಾಯಿಸಿ]

ಕಲ್ಯಾಣ ಪಟ್ಟಣದಲ್ಲಿ ಬಸವಣ್ಣನವರು ಒಕ್ಕಳ ಅಕ್ಕಿ, ಒಂದು ಬದನೇಕಾಯಿ, ಒಂದು ಮಾನ ತೊಗರಿಬೇಳೆಯಲ್ಲಿ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಗಣಗಳಿಗೆ ದಾಸೋಹವನ್ನು ನಡೆಸುತ್ತಾ ಎಲ್ಲರಿಂದಲೂ ಹೆಚ್ಚಿನ ಗುರು ಎಂದು ಹೊಗಳಿಸಿಕ್ಕೊಳ್ಳುತ್ತಿದ್ದರು. ಆದರೆ ಅವರ ಅಂತರಂಗದಲ್ಲಿ ತಮಗೊಬ್ಬ ಗುರುವಿಲ್ಲ ಎಂಬ ಕೊರಗು ಪ್ರಭಲವಾಗಿತ್ತು. ನಮಗಿಂತ ಹೆಚ್ಚಿನ ಗುರು ಇಲ್ಲವಲ್ಲೆ-ನೀಲಲೋಚನೆ ಎಂದು ಕೊರಗುತ್ತಿದ್ದರು. ಮಡದಿ ನೀಲಮ್ಮನೊಡನೆ ಈ ವಿಷಯವನ್ನು ಹೇಳಿಕೊಂಡರು. ನೀಲಮ್ಮನು ನಿಮಗಿಂತ ಹೆಚ್ಚಿನಾದ ಗುರು ಇರುವರು ಆನೆಗಾತ್ರದ ಪಂಚಲೋಹದ ಗಂಟೆ ಮಾಡಿಸಿ ನಾಲಿಗೆ ಆಡಿಸದೆ, ಕಲ್ಯಾಣ ಪಟ್ಟಣದ ಕಡೆ ಬಾಗಿಲಲ್ಲಿ ನೇತು ಹಾಕಬೇಕು. ನಿಮಗಿಂತ ಹೆಚ್ಚಿನ ಗುರು ಬಂದಾಗ "ನಾಲಿಗೆಗಿಲ್ಲದ ಗಂಟೆ ಸಪ್ತ ನಾದ ಮಾಡುವುದು" ಎಂದಾಗ ಬಸವೇಶ್ವರರು ಹಾಗೆಯೇ ಒಂದು ದೊಡ್ಡ ಗಂಟೆಯನ್ನು ಕಲ್ಯಾಣ ಪಟ್ಟಣದ ಹೆಬ್ಬಾಗಿಲಿನಲ್ಲಿ ತೂಗು ಹಾಕಿದರು. "ನಮಗೆ ಗುರು ಸ್ವಾಮಿ ಇಲ್ಲ ಎಂದು ತಪಸ್ಸು" ಮಾಡುತ್ತಾರೆ. ಬಸವಣ್ಣನವರ ಭಕ್ತಿಯನ್ನು ನೋಡಬೇಕೆಂದು ನಮ್ಮ ಪ್ರಭುದೇವರು ಯಾವ ರೂಪ ತಾಳಿಕೊಂಡು ಬರುತ್ತಿದ್ದಾರೆ ಎಂದರೆ, 'ಕೈಯ್ಯುವೆ ಸೊತ್ತುಗಳು, ಕಾಲುವೆ ಕಂಟುಗಳು, ಕಣ್ಣು ಕುರುಡುಗಳು, ಕಿವಿಲಿ ಭಂಗೀಸೊಪ್ಪು, ಕೈಯಲ್ಲಿ ಸುರಿಗಳಿಗೆ, ಮೈಯಲ್ಲಿ ಕಜ್ಜಿ, ತಿರಿ ಸಹಿತ ಸತ್ತ ಬಸವನ ಚರ್ಮ ಹೊದಿಕೆ ಮಾಡಿಕೊಂಡು ಸತ್ತ ಎಮ್ಮೆ ಕರವ ಹೆಗಲ ಮೇಲೆ ಹೊತ್ತು ಕೊಂಡು ಕೈಲಾಸದಿಂದ ಕಲ್ಯಾಣಕ್ಕೆ ಬಂದರಂತೆ. ಹರಳಯ್ಯನವರ, ಬೂದಿ ಗುಡ್ಡೆಯ ಮೇಲೆ ಪವಡಿಸಿ 'ಭಂಗಿ ಫಲಹಾರ' ಮಾಡುತ್ತಿದ್ದರು. ಸತ್ತೆಮ್ಮೆಯ ಕರು ಎದ್ದು ಮೇಯುತ್ತಿದೆ, ಆಗ ನಾಲಿಗೆ ಇಲ್ಲದ ಗಂಟೆ ನಾದ ಸಪ್ತ ಮಾಡಿತು. ಗಣಗಳಿಗೆ ಎಡೆ ಮಾಡುತ್ತಿದ್ದ ಬಸವೇಶ್ವರರಿಗೆ ಈ ನಾದ ಕೇಳಿಸಲಿಲ್ಲ. ಧರ್ಮ ಗುರು ಧರೆಗೆ ದೊಡ್ಡವರು ಕಲ್ಯಾಣದ ಕಡೆಯ ಬಾಗಿಲಿಗೆ ಬಂದು ಅಲ್ಲಿದ್ದ ಪಹರೆಯವರನ್ನು ಕೇಳಿದರು. ಅಯ್ಯ ಏಳೇಳು ಲೋಕ ಆಳಿ ಬಂದಿದ್ದೀವಪ್ಪ ತುಂಬ ಹಸಿವಾಗಿದೆ ಒಳಗೆ ಬಿಡಿ ಎಂದಾಗ ಕಾವಲಿನವನು ಅವರನ್ನು ಬಿಡಲಿಲ್ಲ. ಅವರು ಒತ್ತಾಯ ಮಾಡಿದಾಗ ಕಾವಲಿನವರು ಮೂರು ಗುದ್ದು ಹೊಡೆದು ಸ್ವಾಮಿಯನ್ನು ತಳ್ಳಿದರು. ಧರೆಗೆ ದೊಡ್ಡವರು ಬೂದಿಗಡ್ಡೆಗೆ ಮತ್ತೆ ಮರಳಿ ಗುಡಿಗುಡಿ ಸೇದುತ್ತಾ ಕುಳಿತರು. ನಾಲಿಗೆ ಇಲ್ಲದ ಗಂಟೆ ಮತ್ತೆ ನಾದ ಮಾಡಿತು. ಈ ಬಾರಿ ಬಸವೇಶ್ವರರು ನೀಲಮ್ಮನವರು ಆ ನಾದವನ್ನು ಕೇಳಿಸಿ ಕೊಂಡರು. ತಮ್ಮ ದೊಡ್ಡ ಗುರು ಬಂದಿದ್ದಾರೆ, ಎಂದು ಕಡೆಯ ಬಾಗಿಲ ಕಡೆಗೆ ಓಡಿ ಬಂದರು. ಕಾವಲಿನವರನ್ನು ವಿಚಾರಿಸಿ ಬೂದಿಗಡ್ಡೆಯ ಕಡೆ ಧಾವಿಸಿದರು. ಅಲ್ಲಿ ಗುರು ಪಾದಕ್ಕೆ ಸಾಷ್ಟಾಂಗ ಎರಗಿ, ಬೂದಿಗುಡ್ಡೆ ಒಳಗೆ ಹೊಕ್ಕಿ ಪವಡಿಸಬಹುದೆ? ಚಿನ್ನದ ಗುರು ಮಠ ಇರಲಿಲ್ಲವೆ? ಬೆಳ್ಳಿ ಗುರು ಮಠ ಇರಲಿಲ್ಲವೆ? ದಯಾಮಾಡಿ ಸ್ವಾಮಿ ಗುರು ಮಠಕ್ಕೆ ಎಂದರು. ಆಗ ಧರೆಗೆ ದೊಡ್ಡವರು ಏಲೈ ಬಸವಣ್ಣನವರೇ, ನೀಲಮ್ಮನವರೆ, ನಿಮ್ಮ ಗುರು ಮಠಕ್ಕೆ ಬಂದರೆ ನಿಮ್ಮ ಗುರುಮಠ ಲಯವಾಗಿ ಹೋಗುತ್ತದೆ. ಕಲ್ಯಾಣ ಪಟ್ಟಣ ಹಾಳಗಿ ಹೋಗುತ್ತದೆ. ನಾವು ಬರುವುದಿಲ್ಲ ಎಂದು ನಿರಾಕರಿಸಿದರು. ಬಸವೇಶ್ವರರು "ಸರ್ವಥಾ ತಪ್ಪು, ದಯಾಮಾಡಿಸಬೇಕು" ಎಂದು ಎರಡು ಪಾದ ಹಿಡಿದರು, ಪಾದಗಳೇ ಕಿತ್ತು ಬಂದವು. ಎರಡು ರಟ್ಟೆ ಹಿಡಿದರು, ಆ ರಟ್ಟೆಗಳೆ ಕಿತ್ತು ಬಂದವು. ರುಂಡ ಹಿಡಿದರು, ರುಂಡಗಳೇ ಕಿತ್ತು ಬಂದಿತು. ಕೊನೆಗೆ ಗುರುವಿನ ದೇಹದ ಭಾಗಗಳನ್ನೇ ಕಾವಿ ಬಟ್ಟೆಯಲ್ಲಿ ಗಂಟು ಕಟ್ಟಿ ತಲೆಯ ಮೇಲೆ ಬಸವೇಶ್ವರರು ಹೊತ್ತು ಕೊಂಡರು. ನೀಲಮ್ಮನವರು ಸತ್ತ ಎಮ್ಮೆಯ ಕರುವನ್ನು ಹೊತ್ತು ಕೊಂಡರು. ಜಂಗಮರಿಗೆ ಎಡೆ ಮಾಡುತ್ತಿದ್ದ ನಡು ಪಂಕ್ತಿಯಲ್ಲಿ ಅವರು ಬಂದರು. ಲಕ್ಷದ ಮೇಲೆ ತೊಂಬತ್ತಾರು ಸಾವಿರ ಜಂಗಮರಿಗೆ ಇನ್ನಿಲ್ಲದ ಸಿಟ್ಟು ಬಂತು ಈ ದೃಶ್ಯವನ್ನು ನೋಡಿ ಎಡೆಯನ್ನು ಬಿಟ್ಟು ಮೇಲೆದ್ದು ಅವರೆಲ್ಲ ಕಲ್ಯಾಣ ಪಟ್ಟಣದ ಕೊಳಕ್ಕೆ ಮೀಯಲು ಬಂದು ಬಿಟ್ಟರು. ಕಾವಿಯ ಬಟ್ಟೆಯ ಗಂಟನ್ನು ನಂದಿ ಮಂಚದ ಮೇಲೆ ಇರಿಸಿ "ನಿಮ್ಮ ನಿಜರೂಪವನ್ನು ತೋರಬೇಕು ಧರ್ಮಗುರುವೇ" ಎಂದು ಬೇಡಿದರು. ಧರೆಗೆ ದೊಡ್ಡವರು ಅವರ ಭಕ್ತಿಗೆ ಮೆಚ್ಚಿ ಆ ನಂದಿ ಮಂಚದ ಮೇಲೆ 'ಪರಂಜ್ಯೋತಿ' ಎಂದು ಕರೆದರು. ಲಕ್ಷದ ತೊಂಬತ್ತಾರು ಸಾವಿರ ಗಣಗಳೆಲ್ಲ ನನ್ನ ಮೇಲೆ ಸಿಟ್ಟಾಗಿ ಹೊರಟು ಹೋದರು. ನನಗೆ ಶರಣರನ್ನುಕರುಣಿಸಬೇಕು, ಎಂದು ಬೇಡಿದರು. ಒಂದು ಬುತ್ತಿ ತುಂಬೆ ಪುಷ್ಪ ಬಂತು. ಅದರಲ್ಲಿ ಲಕ್ಷದ ತೊಂಬತ್ತಾರು ಸಾವಿರ ಶರಣರನ್ನು ಸೃಷ್ಟಿಸಿದರು. ಗುರುವಿನ ಮಹಿಮೆಯನ್ನು ನೋಡಿ ಬಸವೇಶ್ವರರು "ಕಲ್ಯಾಣ ಪಟ್ಟಣವನ್ನು ನೀವೇ ಆಳಿರಿ, ನಮಗೆ ಕೈಲಾಸಕ್ಕೆ ಅಪ್ಪಣೆ ಪಾಲಿಸಿ" ಎಂದು ಕೇಳಿ ಕೊಂಡರು. ಆದರೆ ಧರೆಗೆ ದೊಡ್ಡವರು ತಮಗೆ ಉಚಿತವಾದ ನೆಲೆಯೊಂದನ್ನು ಅರಸಿಕೊಂಡು ಹೋಗುವುದಾಗಿ ತಿಳಿಸಿ "ನಿಮ್ಮ ಬಳಿ ಇರುವ ಜ್ಞಾನವನ ಪುಸ್ತಕವನ್ನು ತಂದು ನನ್ನ ಜೋಳಿಗೆಗೆ ಅರ್ಪಿಸಿ, ನಿಮ್ಮ ಹತ್ತಿರ ಇರುವ ರಾಚಪ್ಪಯ್ಯನ ಶಿಶು ಮಗನ ಕೊಡಿ, ಫಲಾರಯ್ಯನ ಶಿಶುಮಗನ ಮಾಡಿಕೊಡಿ, ಚೆನ್ನಾಜಮ್ಮನ ಶಿಶುಮಗಳ ಮಾಡಿ ಎಂದು ಕೇಳಿದರು. ಸುರಮ್ಮ ಮತ್ತು ಕೂಡಲಸಂಗಮ ದೇವರು ತಮ್ಮ ಪುತ್ರರಾದ ರಾಚಪ್ಪಜಿಯವರನ್ನು ಬಸವೇಶ್ವರರಿಗೆ ಒಪ್ಪಿಸುವಾಗ ಅವರ ಮದುವೆ ಕಲ್ಯಾಣ ಮಾಡಿಸುವಂತೆ ತಿಳಿಸಿದ್ದರು. ಅವರೂ ಒಪ್ಪಿದರು. ತಾವು ಬಯಸಿದ ಶಿಷ್ಯವರನ್ನು ಪುಸ್ತಕವನ್ನು ಪಡೆದು ಧರೆಗೆ ದೊಡ್ಡವರು ಕಲ್ಯಾಣದ ಕಡೆಯ ಬಾಗಿಲಿಗೆ ಬಂದರು. ಕಡೆ ಬಾಗಿಲಲ್ಲಿ ಎಡೆಯ ಬಿಟ್ಟು ಹೋಗಿದ್ದ ಜಂಗಮರೆಲ್ಲ ಕಾದಿದ್ದರು. ಏಕೆಂದರೆ ಅವರ ಲಿಂಗ ಮಾಯವಾಗಿತ್ತು. ಮಾಯವಾದ ಲಿಂಗವನ್ನು ಕೊಡುವಂತೆ ಧರೆಗೆ ದೊಡ್ಡವರನ್ನು ಬೇಡಿದರು. ಆಗ ಸ್ವಾಮಿ ಯಲ್ಲಪ್ಪ ನೀವು ಯಾವಾಗ ಎಡೆಬಿಟ್ಟು ಹೋದಿರೋ ಆವಾಗಲೇ ನಿಮ್ಮ ಲಿಂಗ ಮಾಯವಾಗಿ ಹೋಯ್ತು. ಇನ್ನು ಲಿಂಗ ದೊರೆಯಾಲಾರದು ನಿಮಗೆ ಎಂದು ಕಲ್ಯಾಣದಿಂದ ಹೋದರು .

ಘನನೀಲಿ ಸಿದ್ದಯ್ಯ[ಬದಲಾಯಿಸಿ]

ಬಾಲಕೆಂಪಣ್ಣನನ್ನು ಕುಂದೂರು ಬೆಟ್ಟದ ಕಾಳಿಂಗನ ಗವಿಯಲ್ಲಿ ಬಿಟ್ಟು ಹನ್ನೆರಡು ವರ್ಷ ತುಂಬಿ "ಬಟುವಾಯಿತು" ರಾಜ ಬೊಪ್ಪಣಪುರದಲ್ಲಿ ಪರಂಜ್ಯೋತಿ ಧರೆಗೆ ದೊಡ್ಡವರು ನಿದ್ರೆತಿಳಿದೆದ್ದರು. ಇಬ್ಬರು ಸ್ವಾಮಿಗಳನ್ನು,ಮಡಿವಾಳ ಮಾಚಯ್ಯನನ್ನು ಕರೆದು"ಒಬ್ಬ ಶಿಷ್ಯನ ಪಡದು ಕಾಳಿಂಗನ ಗವಿಗೆ ಕೂಡಿಬಿಟ್ಟೆ. ಅವನನ್ನು ಕರೆತನ್ನಿ" ಎಂದರು. ನೂರೊಂದು ಬಿರುದುಗಳೊಡನೆ ಅವರು ಹೋಗಿ ಎಳೆಯ ಮಾವಿನ ಮರದ ಹತ್ತಿರ ನಿಂತು 'ಕೆಂಪಣ್ಣಾ ಕೆಂಪಣ್ಣಾ' ಎಂದು ಕೂಗಿದರು ಉತ್ತರ ಬರಲಿಲ್ಲಿ,ಗುರುವಿಗೆ ಬಂದು ಹೇಳಿದರು.ಕರೆಯುವ ಕ್ರಮವನ್ನು ಗುರು ಹೇಳಿ ಕೊಟ್ಟರು."ಧರೆಗೆ ದೊಡ್ಡೋರ ಮಠದ ದಳವಾಯಿ ಘನನೀಲಿ ಸಿದ್ದಯ್ಯ ಸ್ವಾಮಿ ಬನ್ನಿ ಎಂದು ಕರೆದರು.ಕೂಗಿದಂಥ ಕೂಗು ಅರಿವಾಯಿತು ಕಾಳಿಂಗನ ಗವಿಯಲ್ಲಿದ್ದ ಸಿದ್ದಯ್ಯನಿಗೆ,

ಗುರವೆ ಹನ್ನೆರಡು ವರ್ಷದಿಂದ ಏನು ಎತ್ತ ಎನ್ನಲಿಲ್ಲ ನಿನಗೆ ಅನ್ನವಿಲ್ಲ

ಕಣ್ಣಿಗೆ ನಿದ್ದರ ಇಲ್ಲ ಸಲಿಸಿದೆನೆಂದರೆ ಭಂಗಿ ಫಲಾರವಿಲ್ಲ

ಈ ನಿನ್ನ ಪಾದದ ಕರುಣೆ ಮಂಡೆ ಮೇಲಕೆ ಒದಗಿತಯ್ಯ

ಎಂದು ಕಣ್ಣು ತೆರೆದ ಘನನೀಲಿ ಸಿದ್ದಯ್ಯ

ಅವನಿಗೆ ನೆತ್ತಿಯ ಮೇಲೆ ಹನ್ನೆರಡು ಆಳುದ್ದ ಮೂಗುತ್ತಾ ಬೆಳುದದೆ

ಮೂಗಿನ ಮೇಲೆ ಮೂರಾಳುದ್ದ ಮೂಗುತ್ತಾ ಬೆಳುದದೆ

ಹೆಕ್ಕತ್ತಿನ ಮೇಲೆ ಮತ್ತಿ ಮರ ಬೆಳೆದಿದೆ

ಕಿವಿ ಉರುಳಲ್ಲಿ ಶಕುನದ ಹಕ್ಕಿ ಮರಿಮಾಡದೆ

ಕಣ್ಣಿನ ರೆಪ್ಪೆ ಒಳಗೆ ಹೆಗ್ಗಡಜ ಮರಿ ಮಾಡದೆ

ಮೂಗಿನ ಉರುಳಲ್ಲಿ ಹೆಜ್ಜೇನು ಕಟ್ಟಿದೆ

ನಡುನಾಲಿಗೆ ಒಳಗೆ ಚಿಕ್ಕ ಚಿಕ್ಕ ಮರ ಹುಟ್ಟಿವೆ ಸ್ವಾಮಿ

ಕಂಕಳ ಸಂದೀಲಿ ಗರುಡ ಮರಿ ಮಾಡಿದೆ

ಎಡದಲ್ಲಿ ಬಲದಲ್ಲಿ ಕಾಳಿಂಗ ಸರ್ಪ ಮರಿ ಮಾಡಿದೆ

ಹಾವಿನಲ್ಲಿ ಹಾಸಿಗೆ ನನಗೆ ಚೇಳಿನಲ್ಲಿ ತಲೆದಿಂಬು

ಹೆಬ್ಬಾವಿನ ಹಾಸಿಗೆ ಚಿರುಚಿಮ್ಮನ ಹೊದಿಕೆ ನನಗೆ

ದೊಡ್ಡ ದೊಡ್ಡ ಹೆಬ್ಬಾವು ನನಗೆ ಗಬ್ಬದ ಲಿಂಗಯ್ಯನಲ್ಲೋ

ಉಗುರು ಕಣ್ನು ಜಲದ ಪರ್ಯಂತ ಇಳಿದು ಹೋಗ್ಯವೆ ಸ್ವಾಮಿ

ನನ್ನ ನೂರೊಂದು ಕಿರಿಜಡೆ ಗವಿತುಂಬ ಅಂಬಾಗಿ ಹರಿದಿದೆ

ನಾನು ಹ್ಯಾಗೆ ಎದ್ದು ಬರಲಿ ನಮ್ಮ ತಂದೆ ಮಂಟೇದ ಸ್ವಾಮಿ

ನೀಲಯ್ಯ ಸಿದ್ದಯ್ಯಸ್ವಾಮಿಯ ಗುರುವನ್ನು ನೆನೆದನು ತನ್ನ ಅಂತರಂಗದಲ್ಲಿ ಕಾಳಿಂಗನ ಗವಿಯಲ್ಲಿ ಒಂದು ಗುಟುರನ್ನು ಹೊಡೆದನು. ಆ ಭಂಯಕರ ಸಿಡಿಲ ಧ್ವನಿಗೆ ಕುಂದೂರು ಬೆಟ್ಟ ಹೊಡೆದು ಜಜ್ಜರಿದು ಹೋಯಿತು

ಅಲ್ಲಿರುವ ಕಾರನವಿಲು,ಕನ್ನನವಿಲು ಏಕದಾಲಿ ಗೀಜಗ

ದಾರಿಗರವ ಮುದ್ದಾನೆ ಹೆದರಿ ಅಪ್ಪಳಿಸಿ ಹೀದವಂತೆ

ನೆತ್ತಿ, ಮೇಲಿದ್ದ ಆಳುದ್ದ ಮೂಗುತ್ತ ಆಕಾಶಕ್ಕೆ ಹಾರಿ ಹೋಯಿತಂತೆ

ಗವಿಯ ಬಾಗಿಲ ಬಂಡೆ ಉರುಳಿಕೊಂಡು ಎಲ್ಲಿಗೋ ಹೋಗಿ ಬಿದ್ದಿತು

ಸ್ವಾಮಿಯ ಗಟುರಿಗೆ ಎಳೆಯ ಮಾವಿನ ಮರದ ಬಳಿ ನಿಂತಿದ್ದ

ಮೂರು ಜನ ಶರಣರಿಗೆ ಮಾನನಡುಕ ಉಂಟಾಗಿ

ಆದಿಬೊಪ್ಪ ಗೊಂಡನಪುರಕ್ಕೆ ಓಡಿಬಂದರು

ಗುರು ಮಂಟೇಲಿಂಗಯ್ಯನವರು ತಮ್ಮ ನೆಚ್ಚಿನ ದಳವಾಯಿ

ಆರುಗಳಿಗೆ ಮೂರು ಜಾವಕೆ

ತಾನಗಿಯೇ ಬರುವುದಾಗಿ ತಿಳಿಸಿದರು. ಬೊಪ್ಪಗೌಡನಪುರಕ್ಕೆ ಬರುವ 'ಗ್ಯಾನವನ್ನು' ಶಿಷ್ಯನಿಗೆ ನೀಡಿದರು. ಧರೆಗೆ ದೊಡ್ಡೋರ ಪಾದಕ್ಕೆ ಶಿಷ್ಯನಾದ ಸಿದ್ದಾಪ್ಪಜಿ ಗವಿಯಿಂದ ಹೊರಗೆ ಬಂದು ಗುರುಪಾದಕ್ಕೆ 'ಉಲ್ಪೆ' ಯಾಗಿ ಬೆಟ್ಟದ ಹಾವು ಚೋಳನ್ನೆಲ್ಲ ಹೊರೆಯಾಗಿ ಕಟ್ಟಿಕೊಂಟು ಹೊರಟರು. ಮಠದಲ್ಲಿ ಕರಿಕಂಬಳಿ ಗದ್ದುಗೆ ಸಿದ್ದವಾಗಿತ್ತು. ಒಂದು ಕಂಡುಗ ಸಾಂಬ್ರಣಿ ಬೇಯಿಸಿ ಕಳಸ ಕನ್ನಡಿ ತಯಾರು ಮಾಡಿ ವಿಭೂತಿ ಆಧಾರ ಮಾಡಿ ಕಪ್ಪಿನ ಬೊಟ್ಟು ಕಾವಿ ಬಟ್ಟೆ ಧರಿಸಿ, ಗುರು ಬೋಧನೆ ಮಾಡಿ, ಬೇವಿನಕಾಯಿ ಗಾತ್ರದ ಲಾಂಛಣ ಕಟ್ಟಿದರು. ಶಿಷ್ಯನನ್ನು 'ಘನಲೀಲೆ', ಸಿದ್ದಯ್ಯ' ಎಂದು ಕರೆದರು.

ಒಕ್ಕಳ ಗಂಟ ಹುಲ್ಲೆ ಚರ್ಮ

ಹಕ್ಕಿಯ ಗೂಡು ಹಕ್ಕಿಯ ಪಾಜಿ

ಬಾರಿ ಕಂಡಾಯವಂತೆ ಬಟುವಿನ ಕೀರಿಟವಂತೆ

ಬೆನ್ನ ಮೇಲೆ ಹೊದ್ದರಂತೆ ಹುಲಿಯ ಚರ್ಮಗಳ

ಪಾದಕೆ ಉಕ್ಕಿನ ಮುಳ್ಳಾಗೆ-ಬೆನ್ನ ಮೇಲೆ ತಿರುಶೈಲ

ಆಲಗಿನ ಪವ್ವಡವಂತೆ ಶೂಲದ ಪವ್ವಡವಂತೆ

ರುದ್ರಾಕ್ಷಿ ಸರವೈದು ಭದ್ರಾಕ್ಷಿ ಸರವೈದು

ಹತ್ತು ಹಲವು ಬಿರಿದಿನ ಜೊತೆಗೆ ಉರುಸಂಗಿ ಕೊರಡನ್ನು ತೆಗೆದು ಬಲಗೈಗೆ ಕೊಟ್ಟರು. ಎಡಕೈಲಿ ಜಾಗಟೆ, ಬಲಕೈಲಿ ಢಮರುಗ,

ನೂರೊಂದು ಕಿರುಜಡೆ ಜೋಲುತಾವೆ ವಾಲುತಾವೆ

ನೀಲಿ ಬಂದು ವಾಲಾಡುತ್ತಾರೆ

ನೀಲಿಯಾವಾತಾರದಲ್ಲಿ

ಕಳ್ಳಿ ಹಾಲು ಕಂಡುಗ ಸೇವಿಸಿದರು. ಎಕ್ಕದ ಹಾಲು ಇಕ್ಕಂಡುಗ ಸೇವಿಸಿದರು. ಹುಣಸೆ ತೆರೆಗಂಡುಗ ಸೇವಿಸಿದರು. ಸುಣ್ಣದ ತಿಳಿ ಮೂಗಂಡುಗ ಸೇವಿಸಿದರು. ಹಸಿಯ ಭಂಗಿ ಹನ್ನೆರಡು ಕಂಡುಗ ಹೀಗೆ ಲೀಲೆಯವತಾರದಲ್ಲಿ ಮದವೆದ್ದ ಮದ್ದಾನೆಯಾಗಿ ತೂಗುತ್ತಾ ಬಾಗುತ್ತ ಸ್ವಾಮಿಯ ಪಾದಕೆ ಶರಣು ಮಾಡಿದ ಘನಲೀಲೆ ಸಿದ್ದಯ್ಯ. ಗುರು ಮಂಟೆದ ಒಡೆಯರು ಹೆಮ್ಮೆಯಿಂದ ಬೀಗಿದರು.

ಉಲ್ಲೇಖ[ಬದಲಾಯಿಸಿ]

  1. ಗೊ.ರು. ಚನ್ನಬಸಪ್ಪ, ಕರ್ನಾಟಕ ಜಾನಪದ ಕಲೆಗಳು, ಬೆಂಗಳೂರು