ಬಿಳಿಗಿರಿರಂಗ
ಬಿಳಿಗಿರಿರಂಗ - ಮೈಸೂರು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ನೆಲಸಿರುವ ರಂಗನಾಥಸ್ವಾಮಿ.
ಈತನನ್ನು ಕುರಿತ ಜನಪದ ಕಲ್ಪನೆಯ ಅನೇಕ ಬಗೆಯ ಕಥೆಗಳು ಕಥನ ಕಾವ್ಯಗಳು ಲಭ್ಯವಿದೆ. ಇವಲ್ಲದೆ ಹೆಂಗಸರ ಹಾಡ್ಗತೆಗಳೂ ಬಿಡಿಗೀತೆಗಳೂ ಇವೆ. ವೃತ್ತಿಗಾಯಕರಲ್ಲಿ ಅದರಲ್ಲೂ ಪ್ರಮುಖವಾಗಿ ನೀಲಗಾರರಲ್ಲಿ ಇಡೀ ರಾತ್ರಿ ಕಥೆ ಮಾಡುವಷ್ಟು ದೀರ್ಘ ಕಾವ್ಯ ಸಂಪತ್ತಿದೆ. ಈ ಎಲ್ಲ ಬಗೆಯ ಹಾಡು ಕಾವ್ಯಗಳಲ್ಲಿ ಶೃಂಗಾರ ಹಾಗೂ ಹಾಸ್ಯ ರಸಗಳೇ ಪ್ರಧಾನ. ಇಲ್ಲಿ ಕಾಣುವ ಪ್ರಧಾನ ಅಂಶವೆಂದರೆ ದೇವರು ಎಂಬ ಶಬ್ದಕ್ಕೆ ಅಥವಾ ವ್ಯಕ್ತಿಗೆ ಅಲೌಕಿಕವಾದ ಅರ್ಥವನ್ನು ಕಲ್ಪಿಸದೆ ಆತನನ್ನು ತಮ್ಮ ಸಮೀಪದ ಬಂಧುವೋ ಸಹಚರನೋ ಆಗಿ ಮಾಡಿಕೊಂಡು ಮಾನವ ಸಹಜ ಗುಣಗಳನ್ನು ಆತನಿಗೂ ಆರೋಪಿಸಿ ತಮ್ಮ ಜೊತೆಯಲ್ಲಿಯೇ ಆತನನ್ನು ಹುಡುಕಿಕೊಂಡು ಕೊನೆಯಲ್ಲಿ ಆತನ ಮೇಲ್ಮೆ ಕಂಡು ಆತನಿಗೆ ಶರಣು ಹೋಗುವ ಭಕ್ತಿಭಾವ ಅಥವಾ ಶರಣಾಗತಿ ಭಾವ.
ಬಿಳಿಗಿರಿ ರಂಗನ ಕಥೆಗಳು
[ಬದಲಾಯಿಸಿ]ಒಂದು ಕಥೆಯ ಪ್ರಕಾರ ತಿರುಪತಿಯ ವೆಂಕಟರಮಣ. ಶ್ರೀರಂಗಪಟ್ಟಣದ ರಂಗನಾಥ (ಆದಿರಂಗ), ಶಿವನಸಮುದ್ರದ ಶ್ರೀರಂಗ (ಮಧ್ಯರಂಗ) ತಿರುಚ್ಚೀರ ಪಳ್ಳಿಯ ಶ್ರೀರಂಗ (ಅಂತ್ಯರಂಗ), ಬಿಳಿಗಿರಿರಂಗ-ಈ ಐವರು ಅಣ್ಣತಮ್ಮಂದಿರು. ತಿರುಪತಿ ವೆಂಕಟೇಶ ಅವರಲ್ಲಿ ಹಿರಿಯವ, ಅವನಿಗೊಮ್ಮೆ ತಲೆನೋವು ಕಾಣಿಸಿಕೊಂಡಿತು. ಸೀಗೆಕಾಯಿ ಅಂಜನದ ಪಟ್ಟು ಕಟ್ಟಿ ಸ್ನಾನ ಮಾಡಿದರೆ ಅದು ಹೋಗುವುದೆಂದು ತಿಳಿಯಿತು. ತಮ್ಮಂದಿರನ್ನು ಕರೆದು ಸೀಗೆಕಾಯಿ ತರಲು ಹೇಳಿದ. ತರಲುಹೊರಟ ನಾಲ್ವರೂ ಬೇರೆ ಬೇರೆ ಸ್ಥಳಗಳಲ್ಲಿ ನೆಲಸಿದರೇ ಹೊರತು ಸೀಗೆಕಾಯಿ ಕೊಂಡೊಯ್ಯಲಿಲ್ಲ. ವೆಂಕಟೇಶ್ವರನಾದರೊ ತಮ್ಮಂದಿರು ಸೀಗೆಕಾಯಿ ತರುತ್ತಾರೆಂಬ ನಿರೀಕ್ಷೆಯಲ್ಲೇ ಇದ್ದಾನೆ. ಅವನ ಗುಡಿಯಲ್ಲಿ ತೆಂಗಿನಕಾಯಿ ಒಡೆಯುವಂತಿಲ್ಲ. ಏಕೆಂದರೆ ಅವನಿಗೆ ತಲೆನೋವು, ವೆಂಕಟೇಶ್ವರನ ಹಣೆಯ ತುಂಬ ವ್ಯಾಪಿಸಿರುವ ನಾಮಗಳನ್ನು ತಲೆನೋವಿಗಾಗಿ ಹಾಕಿದ ಸೀಗೆಕಾಯಿ ಅಂಜನದ ಪಟ್ಟು ಎಂದು ಇಂದೂ ಜನ ನಂಬುತ್ತಾರೆ.
ಇನ್ನೊಂದರ ಪ್ರಕಾರ, ಒಮ್ಮೆ ವೆಂಕಟೇಶ್ವರನ ಪತ್ನಿ ಅಲಮೇಲು ಮಂಗಮ್ಮ ಅಭ್ಯಂಜನ ಸ್ನಾನ ಮಾಡಲು ಇಷ್ಟಪಟ್ಟು ಸೀಗೆಕಾಯಿ ತರಲು ಪತಿದೇವರನ್ನು ಕೇಳಿಕೊಂಡಳು. ಅದರಂತೆ ವೆಂಕಟೇಶ ಸೀಗೆಕಾಯಿ ತರಲು ಶ್ವೇತಾದ್ರಿಯ ಅರಣ್ಯಕ್ಕೆ ಬಂದ. ಅಲ್ಲಿ ಆಗ ಸುಂದರಳಾದ ಸೋಲಿಗರ ಹೆಣ್ಣೊಬ್ಬಳನ್ನು ನೋಡಿ ಅವಳಲ್ಲಿ ಅನುರಕ್ತನಾಗಿ ಅಲ್ಲಿಯೇ ನೆಲಸಿದನಂತೆ. ಆದ್ದರಿಂದಲೇ ಈಗಾಲೂ ಈ ಬೆಟ್ಟದಲ್ಲಿ ನೆಲಸಿರುವ ಸೋಲಿಗರು ಬಿಳಿಗಿರಿ ರಂಗಸ್ವಾಮಿಯನ್ನು ತಮ್ಮ ನಂಟ ಭಾವನೆಂದು ಭಾವಿಸುತ್ತಾರೆ.
ಮತ್ತೊಂದರ ಪ್ರಕಾರ : ಮಲೆಯ ಮಾದೇಶ್ವರನ ಏಳುಮಲೆಗೆ ಹೋಗುವ ದಾರಿಯಲ್ಲಿ 'ರಂಗನೊಡ್ಡು ಎಂಬ ಸ್ಥಳ ಸಿಕ್ಕುತ್ತದೆ. ಬಿಳಿಗಿರಿ ರಂಗಸ್ವಾಮಿ ಮೊದಲು ಇಲ್ಲಿ ವಾಸವಿದ್ದನಂತೆ. ಕುಂತೂರಿನಿಂದ ಹೊರಟು ನಡುಮಲೆಯಲ್ಲಿ ನೆಲೆಗೊಳ್ಳಲು ಬರುತ್ತಿದ್ದ ಮಾದೇಶ್ವರನ ಬಯಕೆಯಂತೆ ರಂಗಸ್ವಾಮಿ ಬಿಳಿಗಿರಿಯಲ್ಲಿ ನೆಲೆಗೊಂಡನಂತೆ. ಮಲೆಯ ಮಾದೇಶ್ವರ ಕಾವ್ಯದಲ್ಲಿ ಅನೇಕ ಪ್ರಸಂಗಗಳಲ್ಲಿ ಬಿಳಿಗಿರಿ ರಂಗನ ಪ್ರಸ್ತಾಪವಿರುವುದನ್ನು ಕಾಣಬಹುದು.
ಮಾದೇಶ್ವರ ಕೋರಣ್ಯಕ್ಕೆ ಹೋಗುವಾಗ ಮುಡುಕುತೊರೆ ಮಲ್ಲಪ್ಪನ ಜೊತೆಗೆ ಬಿಳಿಗಿರಿರಂಗ ಸ್ವಾಮಿಯೂ ಇರುತ್ತಾನೆ. ಬಿಳಿಗಿರಿ ರಂಗನ ಒಕ್ಕಲಾಗಿದ್ದ ಸರಗೂರು ಮೂಗಪ್ಪನನ್ನು ಮಾದೇಶ್ವರ ತನ್ನ ಒಕ್ಕಲಾಗಿ ಪಡೆದ ಹೃದಯಂಗಮ ಪ್ರಸಂಗ ದೀರ್ಘವಾಗಿಯೇ ಪ್ರಸ್ತಾಪಗೊಂಡಿದೆ.
ಇಕ್ಕೇರಿ ದೇವಮ್ಮನನ್ನು ಸಂಹಾರ ಮಾಡುವ ಸನ್ನಿವೇಶದಲ್ಲಿ ಬಿಳಿಗಿರಿ ರಂಗಸ್ವಾಮಿ ಪಂಚಾಯ್ತಿ ಪಟೇಲನ ಪಾತ್ರವಹಿಸಿ ತೀರ್ಪು ಕೊಡುತ್ತಾನೆ.
ಸಂಕಮ್ಮನ ಕಥೆಯಲ್ಲಿ ನೀಲಯ್ಯನ ಚಿತ್ರಹಿಂಸೆಯಿಂದ ಮುಕ್ತಳಾದ ಸಂಕಮ್ಮನನ್ನು ಮಾದೇಶ್ವರ ನೀನು ಕುಸುಮಾಲೆಯಾಗಿ ಹುಟ್ಟಿ ರಂಗಸ್ವಾಮಿಯನ್ನು ಸೇರು ಎಂದು ಕಳಿಸಿಕೊಡುವ ಪ್ರಸಂಗವಿದೆ.
ಬಿಳಿಗಿರಿ ರಂಗ ಹಾಗೂ ಕುಸುಮಾಲೆ ಇಬ್ಬರನ್ನೂ ಕುರಿತ ಕಥನಕಾವ್ಯವೊಂದು ದೀರ್ಘರೂಪದಲ್ಲಿ ದೊರೆಯುತ್ತದೆ. ಅದರ ಕಥಾಸಾರ ಹೀಗಿದೆ. ಸೋಲಿಗರ ಬೊಮ್ಮೇಗೌಡನಿಗೆ ಚಿಕ್ಕರಂಗಿ, ದೊಡ್ಡರಂಗಿ, ಚಿಕ್ಕಕಾಡಿ, ಮರಕಾಡಿ, ಕೇತಕ್ಕ, ಕುಸುಮಾಲೆ ಎಂಬ ಆರು ಜನ ಹೆಣ್ಣು ಮಕ್ಕಳು. ಅವರಲ್ಲಿ ಹಿರಿಯವಳಾದ ಕುಸುಮಾಲೆ ಕಡು ಚೆಲುವೆ. ಇವಳನ್ನು ಮದುವೆಯಾಗಬೇಕೆಂದು ಬಯಸಿದ ರಂಗಸ್ವಾಮಿ ಬೊಮ್ಮೇಗೌಡನ ಪೋಡಿಗೆ ದಾಸಯ್ಯನ ವೇಷದಲ್ಲಿ ಹೋದ. ಭಿಕ್ಷೆ ಬೇಡಲು ಬಂದ ದಾಸಯ್ಯನನ್ನು ಕಂಡ ಬೊಮ್ಮೇಗೌಡ 'ಗೇದು ತಿನ್ನು ಬಾ ಎಂದು ಕಂಬಳಕ್ಕೆ ಕರೆದ.
ಬೊಮ್ಮೇಗೌಡನ ಈ ವರ್ತನೆಯಿಂದ ಕೋಪಗೊಂಡ ರಂಗಸ್ವಾಮಿ ದೇವೇಂದ್ರನಿಗೆ ಹೇಳಿ ಮಳೆ ಬೆಳೆಯಾಗದಂತೆ ಮಾಡಿದ. ಸೋಲಿಗರು ಮನೆಯಲ್ಲಿ ಇದ್ದುದನ್ನೆಲ್ಲ ಮಾರಿ ಕೆಲವು ದಿನ ಜೀವನ ಸಾಗಿಸಿದರು. ಬೇರೆ ಮಾರ್ಗವೇ ಇಲ್ಲವೆಂದು ಪರಿಸ್ಥಿತಿ ಬಂದಾಗ, ಹೆಣ್ಣು ಮಕ್ಕಳ ಒಡವೆಗಳನ್ನೇ ಮಾರಿ ಬದುಕಲು ಬೊಮ್ಮೇಗೌಡ ನಿರ್ಧರಿಸಿ ಒಡವೆಗಳೊಡನೆ ಪಟ್ಟಣಕ್ಕೆ ಹೊರಟ. ಆಗ ರಂಗಸ್ವಾಮಿ 'ಊಳೆಗಿ' ಯವರ ವೇಷದಲ್ಲಿ ಬಂದು, ಒಡವೆಗಳನ್ನು ಕದ್ದನೆಂಬ ಆರೋಪ ಹೊರಿಸಿ, ಗೌಡನನ್ನು ಯಳಂದೂರು ಚಾವಡಿಗೆ ನಡೆ ಎಂದ. ಭಯಗೊಂಡ ಗೌಡ ಒಡವೆಗಳನ್ನು ರಂಗಸ್ವಾಮಿಗೆ ಕೊಟ್ಟು ಬದುಕಿತು ಬಡಜೀವ ಎಂದುಕೊಳ್ಳುತ್ತ ಬರಿಗೈಯಲ್ಲಿ ಮನೆಗೆ ಬಂದ.
ಹೊಟ್ಟೆಹೊರೆದುಕೊಳ್ಳಲು ಹೆಣ್ಣುಮಕ್ಕಳು ಗೆಡ್ಡೆಗೆಣಸು ಬಿದರಕ್ಕಿ ತರಲು ಕಾಡಿಗೆ ಹೋದರೆ ಗೆಡ್ಡೆಗೆಣಸು ಹೋಗಲಿ ಕುಡಿಯುವುದಕ್ಕೆ ಒಂದು ತೊಟ್ಟು ನೀರೂ ಸಿಕ್ಕದಂತಾಯಿತು. ಬಳಲಿ ಬೆಂಡಾಗಿ ಬರುತ್ತಿದ್ದ ಬಾಲೆಯರನ್ನು ಕಂಡು ರಂಗಸ್ವಾಮಿ ಅಕ್ಷಯವಾಗಲಿ ಎಂದ. ಕೂಡಲೆ ಅವರ ಹಸಿವು ತೃಷೆಗಳೆಲ್ಲ ಹಿಂಗಿಹೋದುವು. ತ್ರಾಣ ಬಂದ ಮೇಲೆ ಸೌದೆಯನ್ನಾದರೂ ಆರಿಸೋಣವೆಂದು ಹೋದರೆ ರಂಗಸ್ವಾಮಿ ಅರಣ್ಯ ರಕ್ಷಕನ ವೇಷದಲ್ಲಿ ಬಂದುಬಿಟ್ಟ. ಎದೆ ಒಡೆದಂತಾದ ಹೆಣ್ಣಮಕ್ಕಳು ಬಿದ್ದಾಂಬೀಳ ಓಡಿ ದಿಕ್ಕಾಪಾಲಾದರು. ಒಬ್ಬೊಬ್ಬರು ಒಂದೊಂದು ಕಡೆ ಆದಾಗ, ಕುಸುಮಾಲೆ ಓಡಿಬಂದು ಸೋಮರಸನ ಕೆರೆಬಳಿ ನಿಂತಳು. ನೋಡುತ್ತಾಳೆ, ಆ ಬರಗಾಲದಲ್ಲೂ ಕೆರೆ ತುಂಬಿ ತುಳುಕುತ್ತಿದೆ. ಎತ್ತ ಕಣ್ಣಾಡಿಸಿದರೂ ಗೆಣಸು, ಬೆರಗುಗೊಂಡ ಕುಸುನೂಲೆ ಕಕ್ಕೆ ದಸಿಯಿಂದ ಗೆಣಸನ್ನು ಕಿತ್ತು ಕಿತ್ತು ದೊಡ್ಡ ಹೊರೆ ಕಟ್ಟಿದಳು. ಆದರೆ ಅದನ್ನು ಎತ್ತಿ ಹೊತ್ತುಕೊಳ್ಳುವುದು ಹೇಗೆ? ಮುದಿ ದಾಸಯ್ಯನಾಗಿ ರಂಗಸ್ವಾಮಿ ಅಲ್ಲಿಗೂ ಬಂದ. ಕುಸುಮಾಲೆ ಅವನ ಸಹಾಯ ಕೇಳಿದಳು. ನನ್ನ ಕೈ ಹಿಡಿಯುವುದಾದರೆ ಹೊರೆ ಹೊರಿಸುತ್ತೇನೆ ಎಂದ ಅವನು. ಈ ಕಜ್ಜೀಪುರುಕ ಮುದಿದಾಸಯ್ಯನ ಸಹವಾಸವೇ ಬೇಡವೆಂದು ಅವಳು ಚಿಕ್ಕ ಹೊರೆ ಕಟ್ಟಿದಳು. ರಂಗಸ್ವಾಮಿ ಅದಕ್ಕೆ ಭೂತವನ್ನು ಕೂಡಿ ಹೊರೆ ನೆಲಕಚ್ಚುವಂತೆ ಮಾಡಿದ. ಜೊತೆಗೆ ಮಳೆ ಸುರಿಯುವಂತೆ ಮಾಡಿದ.
ದುಪ್ಪಟ ಗುಡಾರ ಹಾಕಿ ಕುಸುಮಾಲೆಯನ್ನು ಕರೆದ. ಬೇರೆ ದಾರಿ ಕಾಣದ ಕುಸುಮಾಲೆ ಗುಡಾರಕ್ಕೆ ಬಂದಳು. ಸಮೀಪದಿಂದ ಅವಳ ಸೌಂದರ್ಯವನ್ನು ಕಂಡ ರಂಗಸ್ವಾಮಿ ಹುಚ್ಚಾದ. ಮನೆಯಲ್ಲಿ ಎಲ್ಲರೂ ಹಸಿದಿರುವಾಗ ಇವನಿಂದ ಗೆಣಸಿನ ಹೊರೆ ಹೊರಸಿಕೊಂಡರೆ ತಪ್ಪೇನು ಎಂದು ಲೆಕ್ಕ ಹಾಕಿದ ಕುಸುಮಾಲೆ ರಂಗಸ್ವಾಮಿಯ ಮಾತಿಗೆ ಒಪ್ಪಿಗೆ ಕೊಟ್ಟಳು. ಈ ಕಷ್ಟವೆಲ್ಲವೂ ನನ್ನಿಂದಲೇ ನಿಮಗೆ ಬಂದದ್ದೆಂದು ಅವಳಿಗೆ ಮನದಟ್ಟು ಮಾಡಿದ.
ಹೊರೆಹೊತ್ತು ಇಬ್ಬರೂ ಪೋಡಿಗೆ ಬಂದರು. ಈ ರಾತ್ರಿ ಇಲ್ಲೇ ತಂಗುತ್ತೇನೆಂದು ಹೇಳಿದಾಗ ಬೊಮ್ಮೇಗೌಡ ಒಪ್ಪಿದ. ರಂಗಸ್ವಾಮಿ ಗೆಣಸು ಬೇಯಿಸುತ್ತಿದ್ದ ಹೆಣ್ಣು ಮಕ್ಕಳೆಡೆಗೆ ತೆವಳಿಕೊಂಡು ಹೋಗಿ ಕುಸುಮಾಲೆಯನ್ನು ಚಿವುಟಿದ. ಮುದಿಯನ ತೆವಲಿಗೆ ಬೆಚ್ಚಿದ ಬಾಲೆಯರು ತಂದೆಗೆ ದೂರುಕೊಟ್ಟರು.
ಬೊಮ್ಮೇಗೌಡ ಮನೆ ಬಾಗಿಲಿಗೆ ಬೀಗ ಹಾಕಿಸಿ, ರಂಗಸ್ವಾಮಿಯನ್ನು ಕೂಡಿ ಹಾಕಿದ. ಕುಲದವರನ್ನೆಲ್ಲ ಸೇರಿಸಿದ. ನ್ಯಾಯ ಪಂಚಾಯ್ತಿಗಾಗಿ ಬಾಗಿಲು ತೆರೆದಾಗ ಅಲ್ಲಿ ಮುದಿದಾಸಯ್ಯನಿಗೆ ಬದಲಾಗಿ ಹದಿನೆಂಟರ ಹರೆಯದ ಶ್ರೀ ಮನ್ನಾರಾಯಣ ಪ್ರತ್ಯಕ್ಷನಾಗುತ್ತಾನೆ. ಸೋಲಿಗರೆಲ್ಲ ಅವನ ಪಾದಕ್ಕೆ ಬಿದ್ದು ಕ್ಷಮೆ ಕೇಳುತ್ತಾರೆ. ದೇವಾದಿದೇವತೆಗಳೆಲ್ಲ ಸೇರಿ ವೈಭವದಿಂದ ರಂಗಸ್ವಾಮಿಗೂ ಕುಸುಮಾಲೆಗೂ ಮದುವೆ ಮಾಡುತ್ತಾರೆ.
ಬಿಳಿಗಿರಿ ರಂಗನ ರಥೋತ್ಸವದ ಸಂದರ್ಭದಲ್ಲಿ ಸೋಲಿಗರು ಬಿಳಿಗಿರಿ ರಂಗನನ್ನು ಇಂದಿಗೂ, 'ಭಾವಾಜಿ' ಎಂದೇ ಕರೆಯುತ್ತಾ, ಕೂಗುತ್ತ, ಹಾವು ಮೆಕ್ಕೆ (ಕಾಡುಮೆಕ್ಕೆ) ಸೌತೆ, ಗುಡಿಮೆ, ಕಾಯಿಗಳನ್ನು ತೇರಿಗೆಸೆಯುತ್ತಾರೆ.
ಲಕ್ಷ್ಮೀದೇವಿ, ತೊಳಸಮ್ಮ, ಕುಸುಮಾಲೆ ಮೂವರು ಹೆಂಡತಿಯರಿದ್ದರೂ ರಂಗಸ್ವಾಮಿ ಗುಪ್ತವಾಗಿ ಸೂಳೆ ರಂಗನಾಯಕಿಯ ಸಹವಾಸ ಮಾಡುತ್ತಾನೆ. ಆ ಪ್ರಸಂಗ ಉಳ್ಳ ಕಥೆ ಹೀಗಿದೆ : ಒಮ್ಮೆ ರಂಗಸ್ವಾಮಿ ರಂಗನಾಯಕಿಯ ಮನೆಗೆ ಗುಟ್ಟಾಗಿ ಹೊರಟಾಗ ಅದನ್ನು ಸೇವಕ ಹನುಮಂತ ನೋಡಿ ಆ ವಿಚಾರ ರಂಗಸ್ವಾಮಿಯ ಪತ್ನಿಯರಿಗೆ ತಿಳಿಸುತ್ತಾನೆ. ಪತ್ನಿಯರ ಆದೇಶದಂತೆ ರಂಗಸ್ವಾಮಿಯನ್ನು ಕರೆತರಲು ಹನುಮಂತ ರಂಗನಾಯಕಿಯ ಮನೆಗೆ ಬರುತ್ತಾನೆ. ಇವನ ಬರುವಿಕೆ ತಿಳಿದ ರಂಗಸ್ವಾಮಿ ರಂಗನಾಯಕಿ ಮನೆಯ ದೊಡ್ಡ ಗುಡಾಣ ಒಂದರಲ್ಲಿ ಬಚ್ಚಿಟ್ಟು ಕೊಳ್ಳುತ್ತಾನೆ. ಈ ಸುಳಿವು ತಿಳಿದ ಹನುಮಂತ ಗುಡಾಣದ ಸಮೇತ ರಂಗಸ್ವಾಮಿಯನ್ನು ಹೊತ್ತುಕೊಂಡು ಬಂದು ಪತ್ನಿಯರ ಎದುರಿನಲ್ಲಿ ಕೆಡುವುತ್ತಾನೆ. ಇದರಿಂದಾಗಿ ಸೊಂಟಕ್ಕೆ ಪೆಟ್ಟು ಬಿದ್ದ ರಂಗಸ್ವಾಮಿ ಕೋಪದಿಂದ ಹನುಮಂತನನ್ನು ಒದೆಯುತ್ತಾನೆ. ಬೀಳುವಾಗ ಹನುಮಂತ ಮೊಕಾಡೆಯಾಗಿ ಬೀಳುತ್ತಾನೆ. ಇಂದಿಗೂ ಮುಖ ಅಡಿಯಾಗಿ ಬಿದ್ದ ಹನುಮಂತನ ವಿಗ್ರಹ ಬಿಳಿಗಿರಿಯಲ್ಲಿದೆ. ಇಂಥ ಹಲವಾರು ಕಥೆಗಳು ಬಿಳಿಗಿರಿ ರಂಗನ ಹೆಸರಿನಲ್ಲಿ ಜನಪದರ ಕಲ್ಪನೆಯಲ್ಲಿವೆ.