ವಿಷಯಕ್ಕೆ ಹೋಗು

ಗುಪ್ತ ಸಾಮ್ರಾಜ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗುಪ್ತ ಸಾಮ್ರಾಜ್ಯ
ಗುಪ್ತ ಸಾಮ್ರಾಜ್ಯದ ವಿಸ್ತಾರ
ಸ್ಥಾಪಕ: ಶ್ರೀ ಗುಪ್ತ
ಸ್ಥಾಪನೆ: ಕ್ರಿ.ಶ. 275
ಅವನತಿ ಕ್ರಿ.ಶ. 570
ರಾಜಧಾನಿ: ಪಾಟಲಿಪುತ್ರ
ಲಾಂಛನ: ಗರುಡ
ಧರ್ಮಗಳು ಹಿಂದೂ ಧರ್ಮ, ಜೈನ ಧರ್ಮ ಮತ್ತು ಬೌದ್ಧ ಧರ್ಮ
ಆಡಳಿತ ಭಾಷೆ ಸಂಸ್ಕೃತ ಮತ್ತು ಪ್ರಾಕೃತ
ಅರಸರು ಆಡಳಿತಾವಧಿ
ಶ್ರೀ ಗುಪ್ತ ಕ್ರಿ.ಶ. 275-300
ಘಟೋತ್ಕಚ (ರಾಜ) ಕ್ರಿ.ಶ. 300-320
ಮೊದಲನೇ ಚಂದ್ರಗುಪ್ತ ಕ್ರಿ.ಶ. 320-335
ಸಮುದ್ರಗುಪ್ತ ಕ್ರಿ.ಶ. 335-3‌‌80
ರಾಮಗುಪ್ತ ಕ್ರಿ.ಶ.375-380
ಚಂದ್ರಗುಪ್ತ ವಿಕ್ರಮಾದಿತ್ಯ ಕ್ರಿ.ಶ. 380-415
ಮೊದಲನೇ ಕುಮಾರಗುಪ್ತ ಕ್ರಿ.ಶ. 415-455
ಸ್ಕಂದಗುಪ್ತ ಕ್ರಿ.ಶ. 455-467
ನರಸಿಂಹಗುಪ್ತ ಕ್ರಿ.ಶ. 495-520
ವಿಷ್ಣುಗುಪ್ತ ಕ್ರಿ.ಶ. 540-570

ಗುಪ್ತ ಸಾಮ್ರಾಜ್ಯ ಕ್ರಿ.ಶ. ೨೮೦ ರಿಂದ ೫೫೦ರವರೆಗೆ ಉತ್ತರ ಭಾರತವನ್ನು ಆವರಿಸಿದ್ದ ಒಂದು ಪ್ರಾಚೀನ ಸಾಮ್ರಾಜ್ಯ. ಇದನ್ನು ಶ್ರೀ ಗುಪ್ತ ಸ್ಥಾಪಿಸಿದನು. ಪಾಟಲಿಪುತ್ರ [ಪಾಟ್ನಾ ]ಇದರ ರಾಜಧಾನಿಯಾಗಿತ್ತು. ಈ ಸಾಮ್ರಾಜ್ಯ ಸರಿಸುಮಾರು ಕ್ರಿ.ಶ. ೩೨೦ ರಿಂದ ೫೫೦ ರ ವರೆಗೆ ಉತ್ತುಂಗದಲ್ಲಿತ್ತು ಮತ್ತು ಭಾರತೀಯ ಉಪಖಂಡದ ಬಹಳಷ್ಟನ್ನು ಆವರಿಸಿತ್ತು. ಗುಪ್ತರ ನಾಯಕತ್ವದಡಿಯಲ್ಲಿ ಸೃಷ್ಟಿಯಾದ ಶಾಂತಿ ಮತ್ತು ಸಮೃದ್ಧಿಯು ವೈಜ್ಞಾನಿಕ ಮತ್ತು ಕಲಾತ್ಮಕ ಪ್ರಯತ್ನಗಳ ಅನ್ವೇಷಣೆಯನ್ನು ಸಾಧ್ಯವಾಗಿಸಿತು. ಈ ಅವಧಿಯನ್ನು ಭಾರತದ ಸುವರ್ಣ ಯುಗವೆಂದು ಕರೆಯಲಾಗುತ್ತದೆ ಮತ್ತು ಸಾಮಾನ್ಯವಾಗಿ ಹಿಂದೂ ಸಂಸ್ಕೃತಿಯೆಂದು ಪರಿಚಿತವಿರುವ ಘಟಕಗಳನ್ನು ಸ್ಫಟಿಕೀಕರಿಸಿದ ವಿಜ್ಞಾನ, ತಂತ್ರಜ್ಞಾನ, ಕಲೆ, ತತ್ತ್ವಜಿಜ್ಞಾಸೆ, ಸಾಹಿತ್ಯ, ತರ್ಕಶಾಸ್ತ್ರ, ಗಣಿತ, ಖಗೋಳಶಾಸ್ತ್ರ, ಧರ್ಮ, ಮತ್ತು ತತ್ತ್ವಶಾಸ್ತ್ರದಲ್ಲಿನ ವ್ಯಾಪಕ ಆವಿಷ್ಕಾರಗಳು ಮತ್ತು ಪರಿಶೋಧನೆಗಳಿಂದ ಗುರುತಿಸಲ್ಪಟ್ಟಿತು. ಮೊದಲನೇ ಚಂದ್ರಗುಪ್ತ, ಸಮುದ್ರಗುಪ್ತ, ಮತ್ತು ಎರಡನೇ ಚಂದ್ರಗುಪ್ತ ಗುಪ್ತ ಸಾಮ್ರಾಜ್ಯದ ಅತ್ಯಂತ ಗಮನಾರ್ಹ ರಾಜರಾಗಿದ್ದರು. ಕ್ರಿ.ಶ. ೪ನೇ ಶತಮಾನದ ಸಂಸ್ಕೃತ ಕವಿ ಕಾಳಿದಾಸನು ಶಕರು, ಹುಣರು, ಕಾಂಬೋಜರು, ಪಶ್ಚಿಮ ಹಾಗೂ ಪೂರ್ವ ಆಮೂ ದರ್ಯಾ ಕಣಿವೆಗಳಲ್ಲಿ ಸ್ಥಿತವಾಗಿದ್ದ ಬುಡಕಟ್ಟುಗಳು, ಕಿನ್ನರರು, ಕಿರಾತರು ಇತ್ಯಾದಿ ರಾಜ್ಯಗಳು ಸೇರಿದಂತೆ ಭಾರತದ ಒಳಗೆ ಮತ್ತು ಹೊರಗೆ ಸುಮಾರು ಇಪ್ಪತ್ತೊಂದು ರಾಜ್ಯಗಳನ್ನು ವಶಪಡಿಸಿಕೊಂಡರು ಎಂದು ಗುಪ್ತರನ್ನು ಹೊಣೆಮಾಡುತ್ತಾನೆ.

ಎರಡನೇ ಚಂದ್ರಗುಪ್ತನ ಆಳ್ವಿಕೆಯಲ್ಲಿ ಆದ ದೊಡ್ಡ ಸಾಂಸ್ಕೃತಿಕ ಬೆಳವಣಿಗೆಗಳು ಈ ಕಾಲದ ಉನ್ನತ ಬಿಂದುಗಳಾಗಿವೆ. ಮಹಾಭಾರತ ಮತ್ತು ರಾಮಾಯಣದಂತಹ ಎಲ್ಲ ಸಾಹಿತ್ಯಿಕ ಮೂಲಗಳನ್ನು ಈ ಕಾಲದಲ್ಲಿ ಅಧಿಕೃತಗೊಳಿಸಲಾಯಿತು. ಗುಪ್ತರ ಕಾಲವು ಅನೇಕ ವಿದ್ವತ್ಪೂರ್ಣ ಕ್ಷೇತ್ರಗಳಲ್ಲಿ ಮಹಾನ್ ಪ್ರಗತಿಗಳನ್ನು ಮಾಡಿದ ಕಾಳಿದಾಸ, ಆರ್ಯಭಟ, ವರಾಹಮಿಹಿರ, ವಿಷ್ಣುಶರ್ಮ ಮತ್ತು ವಾತ್ಸಾಯನರಂತಹ ವಿದ್ವಾಂಸರನ್ನು ಎದುರಿಗೆ ತಂದಿತು. ಗುಪ್ತ ಯುಗದ ಅವಧಿಯಲ್ಲಿ ವಿಜ್ಞಾನ ಮತ್ತು ರಾಜಕೀಯ ಆಡಳಿತ ಹೊಸ ಎತ್ತರಗಳನ್ನು ಮುಟ್ಟಿತು. ಬಲವಾದ ವ್ಯಾಪಾರ ಸಂಬಂಧಗಳು ಕೂಡ ಪ್ರದೇಶವನ್ನು ಒಂದು ಪ್ರಮುಖ ಸಾಂಸ್ಕೃತಿಕ ಕೇಂದ್ರವನ್ನಾಗಿ ಮಾಡಿದವು ಮತ್ತು ಪ್ರದೇಶವನ್ನು ಹತ್ತಿರದ ರಾಜ್ಯಗಳು ಮತ್ತು ಬರ್ಮಾ, ಶ್ರೀಲಂಕಾ ಹಾಗೂ ಆಗ್ನೇಯ ಏಷ್ಯಾದಲ್ಲಿನ ಪ್ರದೇಶಗಳ ಮೇಲೆ ಪ್ರಭಾವ ಬೀರುವ ಕೇಂದ್ರ ಕಾರ್ಯಸ್ಥಾನವಾಗಿ ಸ್ಥಾಪಿಸಿತು. ಅತ್ಯಂತ ಮುಂಚಿನ ಲಭ್ಯ ಭಾರತೀಯ ಮಹಾಕಾವ್ಯಗಳನ್ನೂ ಸುಮಾರು ಈ ಕಾಲದಲ್ಲಿ ಲಿಖಿತ ಪಠ್ಯಗಳಾಗಿ ಬರೆದಿಡಲಾಯಿತು ಎಂದು ಭಾವಿಸಲಾಗಿದೆ.

ತಮ್ಮ ಸ್ವಂತ ಹಳೆಯ ಸಾಮಂತರಿಂದ ಉಂಟಾದ ಪ್ರಾಂತ್ಯ ಹಾಗೂ ಸಾಮ್ರಾಜ್ಯಶಾಹಿ ಅಧಿಕಾರದ ಗಣನೀಯ ನಷ್ಟ ಮತ್ತು ಮಧ್ಯ ಏಷ್ಯಾದ ಹೂಣರ ಧಾಳಿಗಳಿಂದ ಈ ಸಾಮ್ರಾಜ್ಯ ಕ್ರಮೇಣ ಕ್ಷೀಣಿಸಿತು. ೬ನೇ ಶತಮಾನದಲ್ಲಿ ಗುಪ್ತ ಸಾಮ್ರಾಜ್ಯದ ಪತನದ ನಂತರ, ಭಾರತವು ಮತ್ತೆ ಅಸಂಖ್ಯಾತ ಪ್ರಾದೇಶಿಕ ರಾಜ್ಯಗಳಿಂದ ಆಳಲ್ಪಟ್ಟಿತು. ಸಾಮ್ರಾಜ್ಯದ ವಿಭಜನೆಯ ನಂತರ ಗುಪ್ತ ವಂಶದ ಒಂದು ಗೌಣ ಕುಲವು ಮಗಧವನ್ನು ಆಳುವುದನ್ನು ಮುಂದುವರಿಸಿತು. ಈ ಗುಪ್ತರನ್ನು ಅಂತಿಮವಾಗಿ ವರ್ಧನ ರಾಜನಾದ ಹರ್ಷನು ಹೊರಗಟ್ಟಿದನು, ಮತ್ತು ತನ್ನ ಸಾಮ್ರಾಜ್ಯವನ್ನು ೭ನೇ ಶತಮಾನದ ಪೂರ್ವಾರ್ಧದಲ್ಲಿ ಸ್ಥಾಪಿಸಿದನು.

ಮೂಲ[ಬದಲಾಯಿಸಿ]

ಅನೇಕ ಇತಿಹಾಸಕಾರರ ಪ್ರಕಾರ, ಗುಪ್ತ ರಾಜವಂಶವು ಒಂದು ವೈಶ್ಯ ರಾಜವಂಶವಾಗಿತ್ತು. ವೈಶ್ಯ ಗುಪ್ತರು "ದಬ್ಬಾಳಿಕೆಯ ಆಡಳಿತಗಾರರ ವಿರುದ್ಧ ಪ್ರತಿಕ್ರಿಯೆಯಾಗಿ ಕಾಣಿಸಿಕೊಂಡರು" ಎಂದು ಇತಿಹಾಸಕಾರ ಶರ್ಮಾ ಪ್ರತಿಪಾದಿಸುತ್ತಾರೆ. ಗುಪ್ತರ ನಾಣ್ಯಗಳ ಬಗ್ಗೆ ಹಲವಾರು ಪುಸ್ತಕಗಳನ್ನು ಬರೆದಿರುವ ಇತಿಹಾಸಕಾರ ಆಲ್ಟೇಕರ್ ಕೂಡ, ಗುಪ್ತ ಶಬ್ದದಿಂದ ಕೊನೆಗೊಳ್ಳುವ ಹೆಸರು ವೈಶ್ಯ ಜಾತಿಯ ಸದಸ್ಯನೆಂದು ಸೂಚಿಸುವ ನ್ಯಾಯಶಾಸ್ತ್ರದ ಮೇಲಿನ ಪ್ರಾಚೀನ ಭಾರತೀಯ ಪಠ್ಯಗಳ ಆಧಾರದ ಮೇಲೆ, ಗುಪ್ತರ ಜಾತಿ ವೈಶ್ಯವೆಂದು ಪರಿಗಣಿಸುತ್ತಾರೆ. ಇತಿಹಾಸಕಾರ ಬ್ರ್ಯಾನಿಗನ್ ಪ್ರಕಾರ, ಗುಪ್ತ ಸಾಮ್ರಾಜ್ಯದ ಉದಯ ಪ್ರಾಚೀನ ಭಾರತದಲ್ಲಿ ಜಾತಿ ವ್ಯವಸ್ಥೆಯ ಅತ್ಯಂತ ಪ್ರಮುಖ ಉಲ್ಲಂಘನೆಗಳಲ್ಲಿ ಒಂದು.

ಇದಲ್ಲದೆ, ಗುಪ್ತ ಪದವು ಉಪನಾಮವನ್ನು ಸೂಚಿಸಿತ್ತೊ ಅಥವಾ ಒಂದು ಕುಲವನ್ನು ಸೂಚಿಸಿತ್ತೊ ಎಂದು ಇನ್ನೂ ಶೋಧಿಸಲಾಗಿಲ್ಲ. ಆದರೆ ಗುಪ್ತ ಸಾಮ್ರಾಜ್ಯದ ದಾಖಲೆಗಳು ಮತ್ತು ಯೀ ಜಂಗ್ ಒದಗಿಸಿದ ಚೀನಾದ ದಾಖಲೆಗಳು, ಗುಪ್ತ ರಾಜವಂಶದ ಮೊದಲ ಮೂರು ರಾಜರ ಹೆಸರುಗಳು ಮಹಾರಾಜ ಶ್ರೀ ಗುಪ್ತ, ಮಹಾರಾಜ ಶ್ರೀ ಘಟೋತ್ಕಚ ಮತ್ತು ಮಹಾರಾಜಾಧಿರಾಜ ಶ್ರೀ ಚಂದ್ರಗುಪ್ತವೆಂದು ಹೇಳುತ್ತವೆ.

ಗುಪ್ತರ ಮೂಲ ಸ್ಥಳದ ಬಗ್ಗೆ ಅನೇಕ ಸಿದ್ಧಾಂತಗಳಿಂದ, ಹಲವಾರು ವಿರುದ್ಧವಾದ ಅಭಿಪ್ರಾಯಗಳು ಲಭ್ಯವಿವೆ. ಕೆಲವರ ಪ್ರಕಾರ, ಗುಪ್ತರು ಆರಂಭದಲ್ಲಿ ಮಗಧದ ಪ್ರದೇಶದಲ್ಲಿ ಕೇಂದ್ರೀಕೃತವಾಗಿದ್ದರು ಮತ್ತು ಅಲ್ಲಿಂದ ತಮ್ಮ ಪ್ರಭಾವವನ್ನು ಬಂಗಾಳಕ್ಕೆ ವಿಸ್ತರಿಸಿದರು. ಇತರ ಗುಂಪುಗಳ ಪ್ರಕಾರ, ಗುಪ್ತರ ಮೂಲ ತಾಯಿನಾಡು ಬಂಗಾಳದಲ್ಲಿನ ವರೇಂದ್ರಿ ಅಥವಾ ವರೇಂದ್ರ ಭೂಮಿಯಾಗಿತ್ತು ಮತ್ತು ಅಲ್ಲಿಂದ ತಮ್ಮ ಸಾಮ್ರಾಜ್ಯವನ್ನು ಮಗಧಕ್ಕೆ ವಿಸ್ತರಿಸಿದರು. ಸಿದ್ಧಾಂತ ಏನೇ ಇರಲಿ, ಗುಪ್ತರ ಆಳ್ವಿಕೆ ಪ್ರಾಚೀನ ಭಾರತದ ಇತಿಹಾಸದಲ್ಲಿ ಸುವರ್ಣ ಯುಗವನ್ನು ಆರಂಭಿಸಿತು ಮತ್ತು ಕಾಲ ಕಳೆದಂತೆ ಅವರು ಸಂಪೂರ್ಣ ಉತ್ತರ ಭಾರತದ ಏಕಮಾತ್ರ ವಿಧಾಯಕ ಶಕ್ತಿಯಾದರು.

ಇತಿಹಾಸ[ಬದಲಾಯಿಸಿ]

ಶ್ರೀ ಗುಪ್ತ ಮತ್ತು ಘಟೋತ್ಕಚ[ಬದಲಾಯಿಸಿ]

ಶ್ರೀ ಗುಪ್ತನ ಆಳ್ವಿಕೆಯ ಅತ್ಯಂತ ಸಂಭಾವ್ಯ ಕಾಲ ಕ್ರಿ.ಶ. ೨೪೦-೨೮೦. ಕುಶಾಣರ ಊಳಿಗಮಾನ್ಯ ಅಧಿಪತಿಗಳಾಗಿದ್ದ ಮುರುಂಡರು ಶ್ರೀಗುಪ್ತನಿಗೆ ಜಮೀನು ಒದಗಿಸಿದರು ಅಥವಾ ಕೊಟ್ಟರು. ಅವನನ್ನು ಗುಪ್ತ ಸಾಮ್ರಾಜ್ಯದ ಮೊದಲ ವ್ಯಕ್ತಿಯೆಂದು ಕರೆಯಬಹುದು ಆದರೆ ಸಾಮ್ರಾಜ್ಯದ ಸಂಸ್ಥಾಪಕ ಎಂದಲ್ಲ. ಅವನ ಮಗ ಮತ್ತು ಉತ್ತರಾಧಿಕಾರಿ ಘಟೋತ್ಕಚನು ಸಂಭಾವ್ಯವಾಗಿ ಕ್ರಿ.ಶ. ೨೮೦-೩೧೦ ರ ವರೆಗೆ ಆಳಿದನು. ಅವನು ಇತರ ಊಳಿಗಮಾನ್ಯ ಅಧಿಪತಿಗಳಿಗೆ ಸವಾಲೊಡ್ಡಿ ಅವರ ನಾಡನ್ನು ವಶಪಡಿಸಿಕೊಂಡನು. ಮಹಾರಾಜಾಧಿರಾಜ ಎಂದು ಹೆಸರಿಸಲಾಗುತ್ತಿದ್ದ ಅವನ ಉತ್ತರಾಧಿಕಾರಿ ಮೊದಲನೇ ಚಂದ್ರಗುಪ್ತನಿಗೆ ವ್ಯತಿರಿಕ್ತವಾಗಿ, ಅವನು ಮತ್ತು ಅವನ ಮಗ ಘಟೋತ್ಕಚರನ್ನು ಶಾಸನಗಳಲ್ಲಿ ಮಹಾರಾಜ ಎಂದು ನಿರ್ದೇಶಿಸಲಾಗುತ್ತಿತ್ತು. ೪ನೇ ಶತಮಾನದ ಆರಂಭದಲ್ಲಿ, ಗುಪ್ತರು ಮಗಧ ಮತ್ತು ಆಧುನಿಕ ಬಿಹಾರ್‍ನ ಸುತ್ತಮುತ್ತ ಕೆಲವು ಸಣ್ಣ ಹಿಂದೂ ರಾಜ್ಯಗಳನ್ನು ಸ್ಥಾಪನೆ ಮಾಡಿ ಆಳುತ್ತಿದ್ದರು.

ಯೀಜಂಗ್ ತನ್ನ ಬರಹಗಳಲ್ಲಿ ಶ್ರೀ ಗುಪ್ತನ ಬಗ್ಗೆ ಉಲ್ಲೇಖಿಸಿದ್ದಾನೆ. ಶ್ರೀ ಗುಪ್ತನ ನಂತರ ಅವನ ಮಗ ಘಟೋತ್ಕಚನು ಉತ್ತರಾಧಿಕಾರಿಯಾದನು.

ಮೊದಲನೇ ಚಂದ್ರಗುಪ್ತ[ಬದಲಾಯಿಸಿ]

ಘಟೋತ್ಕಚನಿಗೆ (ಆಳ್ವಿಕೆ ಕಾಲ ಕ್ರಿ.ಶ. 280–319) ಚಂದ್ರಗುಪ್ತನೆಂಬ ಮಗನಿದ್ದನು (ಆಳ್ವಿಕೆ ಕಾಲ ಕ್ರಿ.ಶ. 320–335). ಒಂದು ಪ್ರಮುಖ ಒಪ್ಪಂದದಲ್ಲಿ, ಚಂದ್ರಗುಪ್ತನು ಲಿಚ್ಛವಿ ರಾಜಕುಮಾರಿ ಕುಮಾರಾದೇವಿಯನ್ನು ವಿವಾಹವಾದನು. ಲಿಚ್ಛವಿಯರು ಮಗಧದಲ್ಲಿ ಮುಖ್ಯ ಅಧಿಕಾರ ಬಿಂದುವಾಗಿದ್ದರು. ವರದಕ್ಷಿಣೆಯಲ್ಲಿ ಮಗಧ ರಾಜ್ಯವನ್ನು (ರಾಜಧಾನಿ ಪಾಟಲಿಪುತ್ರ) ಪಡೆದುಕೊಂಡು ಮತ್ತು ನೇಪಾಳದ ಲಿಚ್ಛವಿಯರೊಂದಿಗೆ ಮೈತ್ರಿ ಮಾಡಿಕೊಂಡು, ಚಂದ್ರಗುಪ್ತನು ತನ್ನ ಅಧಿಕಾರವನ್ನು ವಿಸ್ತರಿಸಲು ಆರಂಭಿಸಿದನು, ಮತ್ತು ಮಗಧ, ಪ್ರಯಾಗ ಹಾಗೂ ಸಾಕೇತದ ಬಹಳಷ್ಟನ್ನು ವಶಪಡಿಸಿಕೊಂಡನು. ೩೨೧ರ ಹೊತ್ತಿಗೆ ಅವನು ಗಂಗಾ ನದಿಯಿಂದ ಪ್ರಯಾಗದವರೆಗಿನ ವಿಸ್ತಾರದ ಸಾಮ್ರಾಜ್ಯವನ್ನು ಸ್ಥಾಪಿಸಿದನು. ಅವನು ಮಹಾರಾಜಾಧಿರಾಜ ಎಂಬ ಸಾಮ್ರಾಜ್ಯ ಬಿರುದನ್ನು ಸ್ವೀಕರಿಸಿದನು. ಅವನು ವಿವಾಹ ಮೈತ್ರಿಗಳ ಮೂಲಕ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದನು.

ಸಮುದ್ರಗುಪ್ತ[ಬದಲಾಯಿಸಿ]

ನೂರು ಯುದ್ಧಗಳ ಸರಧರ ಎಂದು ಪ್ರಸಿದ್ಧ

ಮುಖ್ಯ ಲೇಖನ: ಸಮುದ್ರಗುಪ್ತ
ಗುಪ್ತರ ಕಾಲದ ಧ್ಯಾನನಿರತ ಬುದ್ಧ, ಕ್ರಿ.ಶ. ೫ನೇ ಶತಮಾನ
ಸಮುದ್ರಗುಪ್ತನ ನಾಣ್ಯ, ಗರುಡ ಸ್ತಂಭದೊಂದಿಗೆ.

ಸಮುದ್ರಗುಪ್ತನು, ಪರಾಕ್ರಮಾಂಕ ೩೩೫ರಲ್ಲಿ ತನ್ನ ತಂದೆಯ ಉತ್ತರಾಧಿಕಾರಿಯಾಗಿ ೪೫ ವರ್ಷಗಳ ಕಾಲ ಆಳಿದನು, ೩೮೦ರಲ್ಲಿ ಅವನ ಮರಣದವರೆಗೆ. ಅವನು ತನ್ನ ಆಳ್ವಿಕೆಯ ಆರಂಭದಲ್ಲಿ ಅಹಿಚ್ಛತ್ರ ಮತ್ತು ಪದ್ಮಾವತಿ ರಾಜ್ಯಗಳನ್ನು ತೆಗೆದುಕೊಂಡನು. ನಂತರ ಅವನು ಪ್ರದೇಶದಲ್ಲಿ ಬುಡಕಟ್ಟುಗಳಾಗಿದ್ದ ಮಾಲ್ವರು, ಯೌಧೇಯರು, ಆರ್ಜುನಾಯನರು, ಮದುರರು ಮತ್ತು ಆಭೀರರನ್ನು ಆಕ್ರಮಣ ಮಾಡಿದನು. ೩೮೦ರಲ್ಲಿ ತನ್ನ ಮರಣದ ವೇಳೆಗೆ, ಅವನು ತನ್ನ ಸಾಮ್ರಾಜ್ಯದಲ್ಲಿ ಇಪ್ಪತ್ತು ರಾಜ್ಯಗಳನ್ನು ಸೇರಿಸಿಕೊಂಡಿದ್ದನು ಮತ್ತು ಅವನ ಆಳ್ವಿಕೆ ಹಿಮಾಲಯದಿಂದ ನರ್ಮದಾ ನದಿವರೆಗೆ ಮತ್ತು ಬ್ರಹ್ಮಪುತ್ರದಿಂದ ಯಮುನಾವರೆಗೆ ವಿಸ್ತರಿಸಿತ್ತು. ಅವನು ತನಗೆ ರಾಜಾಧಿರಾಜ ಮತ್ತು ವಿಶ್ವಾಧೀಶ್ವರನೆಂಬ ಬಿರುದುಗಳನ್ನು ಕೊಟ್ಟುಕೊಂಡನು. ಅವನು ಅಶ್ವಮೇಧ ಯಾಗವನ್ನು ಮಾಡಿದನು. ಆ ಕುದುರೆಯ ಕಲ್ಲಿನ ಪ್ರತಿಕೃತಿ ಲಖ್ನೋ ಸಂಗ್ರಹಾಲಯದಲ್ಲಿದೆ. ಅಶೋಕನ್ ಸ್ತಂಭದ ಮೇಲೆ ಕೆತ್ತಲಾಗಿರುವ ಸಮುದ್ರಗುಪ್ತ ಪ್ರಶಸ್ತಿಯು ಅವನ ವೀರಕೃತ್ಯಗಳ ಮತ್ತು ಉಪಖಂಡದ ಬಹುತೇಕ ಭಾಗದ ಮೇಲೆ ಅವನ ಪ್ರಭಾವದ ಅಧಿಕೃತ ದಾಖಲೆಯಾಗಿದೆ. ಈ ಸ್ತಂಭ ಅಲಾಹಾಬಾದ್‍ನ ಅಕ್ಬರ್ ಕೋಟೆಯಲ್ಲಿದೆ.

ಸಮುದ್ರಗುಪ್ತನು ಪ್ರತಿಭಾವಂತ ಸೇನಾ ನಾಯಕನಷ್ಟೇ ಅಲ್ಲದೇ ಕಲೆ ಮತ್ತು ಸಾಹಿತ್ಯದ ಮಹಾನ್ ಪೋಷಕನಾಗಿದ್ದನು. ಅವನು ಕಾಶ್ಮೀರ ಮತ್ತು ಅಫ಼್ಘಾನಿಸ್ತಾನವನ್ನು ಜಯಗಳಿಸಿ ಸಾಮ್ರಾಜ್ಯವನ್ನು ವಿಸ್ತರಿಸಿದನು. ಹರಿಶೇಣ, ವಸುಬಂಧು ಮತ್ತು ಅಸಂಗ ಇವನ ಆಸ್ಥಾನದಲ್ಲಿ ಉಪಸ್ಥಿತರಿದ್ದ ವಿಮರ್ಶನಶೀಲ ವಿದ್ವಾಂಸರಾಗಿದ್ದರು. ಅವನು ಸ್ವತಃ ಕವಿ ಮತ್ತು ಸಂಗೀತಗಾರನಾಗಿದ್ದನು. ಅವನು ಹಿಂದೂ ಧರ್ಮದಲ್ಲಿ ದೃಢ ನಂಬಿಕೆಯುಳ್ಳವನಾಗಿದ್ದನು ಮತ್ತು ವಿಷ್ಣುವನ್ನು ಆರಾಧಿಸುತ್ತಿದ್ದನೆಂದು ತಿಳಿದುಬಂದಿದೆ. ಅವನು ಇತರ ಧರ್ಮಗಳ ಬಗ್ಗೆ ದಾಕ್ಷಿಣ್ಯಪರನಾಗಿದ್ದನು ಮತ್ತು ಶ್ರೀಲಂಕಾದ ಬೌದ್ಧ ರಾಜ ಸಿರಿಮೇಘವನ್ನನಿಗೆ ಬೋಧ್ ಗಯಾದಲ್ಲಿ ಮಠವನ್ನು ಕಟ್ಟಲು ಅನುಮತಿ ನೀಡಿದನು. ಆ ಮಠವನ್ನು ಕ್ಸುವಾನ್‍ಜ಼್ಯಾಂಗ್ ಮಹಾಬೋಧಿ ಸಂಘರಾಮವೆಂದು ಕರೆದನು. ಅವನು ಬೋಧಿ ವೃಕ್ಷದ ಸುತ್ತ ಚಿನ್ನದ ಕಟಾಂಜನವನ್ನು ಒದಗಿಸಿದನು.

ರಾಮಗುಪ್ತ[ಬದಲಾಯಿಸಿ]

ಮುಖ್ಯ ಲೇಖನ: ರಾಮಗುಪ್ತ

ದೇವಿಚಂದ್ರಗುಪ್ತದ ಕಥೆ ಯಾವುದೇ ಸಮಕಾಲೀನ ಶಾಸನಶಾಸ್ತ್ರ ಸಾಕ್ಷ್ಯಾಧಾರದಿಂದ ಬೆಂಬಲಿತವಾಗಿಲ್ಲವಾದರೂ, ರಾಮಗುಪ್ತನ ಐತಿಹಾಸಿಕತೆ ಮೂರು ಜೈನ ವಿಗ್ರಹಗಳ ಮೇಲೆ ಅವನ ದುರ್ಜನ್‍ಪುರ್ ಶಾಸನಗಳಿಂದ ಸಾಬೀತಾಗುತ್ತದೆ, ಇವುಗಳಲ್ಲಿ ಅವನನ್ನು ಮಹಾರಾಜಾಧಿರಾಜ ಎಂದು ಉಲ್ಲೇಖಿಸಲಾಗಿದೆ. ಅವನ ದೊಡ್ಡ ಸಂಖ್ಯೆಯ ತಾಮ್ರದ ನಾಣ್ಯಗಳು ಎಯ್ರಣ್-ವಿದೀಷಾ ಪ್ರದೇಶದಿಂದ ಸಿಕ್ಕಿವೆ ಮತ್ತು ಇವನ್ನು ಐದು ವಿಶಿಷ್ಟ ಪ್ರಕಾರಗಳಲ್ಲಿ ವರ್ಗೀಕರಿಸಲಾಗಿದೆ, ಇದರಲ್ಲಿ ಗರುಡ, ಗರುಡಧ್ವಜ, ಸಿಂಹ ಮತ್ತು ಅಂಚಿನ ಆಲೇಖ ಪ್ರಕಾರಗಳು ಸೇರಿವೆ. ಈ ನಾಣ್ಯಗಳ ಮೇಲಿನ ಬ್ರಾಹ್ಮಿ ಆಲೇಖಗಳನ್ನು ಮುಂಚಿನ ಗುಪ್ತ ಶೈಲಿಯಲ್ಲಿ ಬರೆಯಲಾಗಿದೆ. ವಿದ್ವಾಂಸರ ಅಭಿಪ್ರಾಯದಲ್ಲಿ, ರಾಮಗುಪ್ತನು ಸಮುದ್ರಗುಪ್ತನ ಹಿರಿಯ ಮಗನಾಗಿರಬಹುದು. ಅತ್ಯಂತ ಹಿರಿಯನಾದ್ದರಿಂದ ರಾಜನಾದನು. ಆಳಲು ಸಾಕಷ್ಟು ಯೋಗ್ಯನಲ್ಲದ ಕಾರಣ ಪದಚ್ಯುತಿಗೊಂಡ ಸಾಧ್ಯತೆಗಳಿರಬಹುದು ಮತ್ತು ಹಾಗಾಗಿ ಅವನ ತಮ್ಮ ಎರಡನೇ ಚಂದ್ರಗುಪ್ತ ಅಧಿಕಾರ ಸ್ವೀಕರಿಸಿದನು.

ಎರಡನೇ ಚಂದ್ರಗುಪ್ತ "ವಿಕ್ರಮಾದಿತ್ಯ"[ಬದಲಾಯಿಸಿ]

ತೀರ್ಥಂಕರನ ಶಿರ, ಮಥುರಾ ಸಂಗ್ರಹಾಲಯ
ಕೃಷ್ಣನು ರಾಕ್ಷಸ ಕೇಶಿಯೊಂದಿಗೆ ಹೋರಾಡುತ್ತಿರುವುದು, ೫ನೇ ಶತಮಾನ
ಎರಡನೇ ಚಂದ್ರಗುಪ್ತನ ಚಿನ್ನದ ನಾಣ್ಯಗಳು

ಗುಪ್ತರ ದಾಖಲೆಗಳ ಪ್ರಕಾರ, ತನ್ನ ಪುತ್ರರಲ್ಲಿ, ಸಮುದ್ರಗುಪ್ತನು ರಾಣಿ ದತ್ತದೇವಿಗೆ ಜನಿಸಿದ ರಾಜಕುಮಾರ ಎರಡನೇ ಚಂದ್ರಗುಪ್ತನನ್ನು ತನ್ನ ಉತ್ತರಾಧಿಕಾರಿಯಾಗಿ ನೇಮಕ ಮಾಡಿದನು. ಎರಡನೇ ಚಂದ್ರಗುಪ್ತನು ೩೭೫ರಿಂಫ಼ ೪೧೫ ರ ವರೆಗೆ ಆಳಿದನು. ಅವನು ಕುಂತಲದ ಕದಂಬ ರಾಜಕುಮಾರಿ ಮತ್ತು ನಾಗಕುಲದ ಕುಬೇರನಾಗನ ಮಗಳನ್ನು ವಿವಾಹವಾದನು. ಈ ನಾಗಕುಲದ ರಾಣಿಯಿಂದ ಜನಿಸಿದ ಮಗಳು ಪ್ರಭಾವತಿಗುಪ್ತಳು ದಖ್ಖನದ ವಾಕಾಟಕ ದೊರೆ ಎರಡನೇ ರುದ್ರಸೇನನನ್ನು ವಿವಾಹವಾದಳು. ಅವನ ಮಗ ಮೊದಲನೇ ಕುಮಾರಗುಪ್ತನು ಕರ್ನಾಟಕ ಪ್ರದೇಶದ ಕದಂಬ ರಾಜಕುಮಾರಿಯನ್ನು ವಿವಾಹವಾದನು. ಎರಡನೇ ಚಂದ್ರಗುಪ್ತನು ತನ್ನ ಸಾಮ್ರಾಜ್ಯವನ್ನು ಪಶ್ಚಿಮದ ಕಡೆ ವಿಸ್ತರಿಸಿ ಮಾಲ್ವಾ, ಗುಜರಾತ್ ಮತ್ತು ಸೌರಾಷ್ಟ್ರದ ಶಕ ಪಶ್ಚಿಮ ಕ್ಷತ್ರಪರನ್ನು ೪೦೯ರ ವರೆಗೆ ನಡೆದ ಯುದ್ಧದಲ್ಲಿ ಸೋಲಿಸಿದನು. ಇವನ ಮುಖ್ಯ ಎದುರಾಳಿ ಮೂರನೇ ರುದ್ರಸಿಂಹನು ೩೯೫ರ ವೇಳೆಗೆ ಪರಾಜಿತಗೊಂಡಿದ್ದನಾದ್ದರಿಂದ ವಂಗದ ಮುಖ್ಯಸ್ಥರನ್ನು ಸದೆಬಡಿದನು. ಇದರಿಂದ ಅವನ ಹಿಡಿತ ತೀರದಿಂದ ತೀರಕ್ಕೆ ವಿಸ್ತರಿಸಿತು, ಮತ್ತು ಉಜ್ಜೈನ್‍ನಲ್ಲಿ ಎರಡನೇ ರಾಜಧಾನಿಯನ್ನು ಸ್ಥಾಪಿಸಿದನು, ಇದು ಸಾಮ್ರಾಜ್ಯದ ಉನ್ನತ ಬಿಂದುವಾಗಿತ್ತು.

ಯುದ್ಧದ ಮೂಲಕ ಸಾಮ್ರಾಜ್ಯದ ನಿರ್ಮಾಣದ ಹೊರತಾಗಿಯೂ, ಗುಪ್ತರ ಆಳ್ವಿಕೆ ಹಿಂದೂ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಸಾಹಿತ್ಯದ ತುಂಬಾ ಪ್ರಭಾವಶಾಲಿ ಶೈಲಿಗಾಗಿ ನೆನಪಿನಲ್ಲಿಡಲಾಗಿದೆ, ವಿಶೇಷವಾಗಿ ಎರಡನೇ ಚಂದ್ರಗುಪ್ತನ ಆಳ್ವಿಕೆಯ ಅವಧಿಯಲ್ಲಿ. ದೇವ್‍ಗಢ್‍ದಲ್ಲಿನ ದಶಾವತಾರ ದೇವಸ್ಥಾನದ ಫಲಕಗಳಂತಹ ಹಿಂದೂ ಕಲೆಯ ಕೆಲವು ಶ್ರೇಷ್ಠ ಕೃತಿಗಳು ಗುಪ್ತರ ಕಲೆಯ ಭವ್ಯತೆಯನ್ನು ವಿವರಿಸಲು ಸಹಾಯಮಾಡುತ್ತವೆ. ಎಲ್ಲಕ್ಕಿಂತ ಮೇಲಾಗಿ ಅಂಶಗಳ ಸಮನ್ವಯವು ಗುಪ್ತರ ಕಲೆಗೆ ಅದರ ವಿಶಿಷ್ಟ ಸೊಗಡನ್ನು ನೀಡಿದವು. ಈ ಅವಧಿಯಲ್ಲಿ, ಗುಪ್ತರು ಅಭಿವೃದ್ಧಿ ಹೊಂದುತ್ತಿದ್ದ ಬೌದ್ಧ ಮತ್ತು ಜೈನ ಸಂಸ್ಕೃತಿಗಳನ್ನೂ ಬೆಂಬಲಿಸುತ್ತಿದ್ದರು, ಈ ಕಾರಣಕ್ಕಾಗಿ ಹಿಂದೂಯೇತರ ಗುಪ್ತರ ಕಾಲದ ಕಲೆಯ ದೀರ್ಘ ಇತಿಹಾಸವಿದೆ. ನಿರ್ದಿಷ್ಟವಾಗಿ, ಗುಪ್ತರ ಕಾಲದ ಬೌದ್ಧ ಕಲೆಯು ಬಹುತೇಕ ಪೂರ್ವ ಮತ್ತು ಆಗ್ನೇಯ ಏಷ್ಯಾದಲ್ಲಿ ಪ್ರಭಾವಶಾಲಿಯಾಗಲಿತ್ತು. ಅನೇಕ ಬೆಳವಣಿಗೆಗಳನ್ನು ಚೀನಾದ ವಿದ್ವಾಂಸ ಮತ್ತು ಪ್ರಯಾಣಿಕ ಫ಼ಾಕ್ಸಿಯಾನ್ ತನ್ನ ದಿನಚರಿ ಪುಸ್ತಕದಲ್ಲಿ ದಾಖಲಿಸಿದ್ದನು ಮತ್ತು ನಂತರ ಇದನ್ನು ಪ್ರಕಟಿಸಲಾಯಿತು.

ಚಂದ್ರಗುಪ್ತನ ಆಸ್ಥಾನವು ನವರತ್ನರಿಂದ ಅಲಂಕೃತವಾಗಿದ್ದ ವಾಸ್ತವ ಕಾರಣದಿಂದ ಇನ್ನಷ್ಟು ಸುಪ್ರಸಿದ್ಧವಾಗಿತ್ತು. ನವರತ್ನರು ಸಾಹಿತ್ಯಿಕ ಕಲೆಗಳಲ್ಲಿ ಪರಿಣತರಾಗಿದ್ದ ಒಂಭತ್ತು ವ್ಯಕ್ತಿಗಳ ಗುಂಪು. ಈ ವ್ಯಕ್ತಿಗಳಲ್ಲಿ ಅಮರ ಕಾಳಿದಾಸನೂ ಒಬ್ಬನು. ಇವನ ಕೃತಿಗಳು ಅನೇಕ ಇತರ ಸಾಹಿತ್ಯಿಕ ಪ್ರತಿಭೆಗಳ ಕೃತಿಗಳನ್ನು ಕುಬ್ಜವಾಗಿಸಿತು, ಕೇವಲ ಅವನ ಕಾಲದಲ್ಲಿ ಅಷ್ಟೇ ಅಲ್ಲದೆ ಮುಂಬರುವ ವರ್ಷಗಳಲ್ಲಿ ಕೂಡ. ಕಾಳಿದಾಸನು ಮುಖ್ಯವಾಗಿ ತನ್ನ ಕಾವ್ಯದಲ್ಲಿ ಶೃಂಗಾರ ರಸದ ಸೂಕ್ಷ್ಮ ಬಳಕೆಗೆ ಪರಿಚಿತನಾಗಿದ್ದನು.

ವಿದೇಶದ ಬುಡಕಟ್ಟುಗಳ ವಿರುದ್ಧ ಎರಡನೇ ಚಂದ್ರಗುಪ್ತನ ಹೋರಾಟಗಳು[ಬದಲಾಯಿಸಿ]

ಕಾಶ್ಮೀರಿ ಬರಹಗಾರ ಕ್ಷೇಮೇಂದ್ರಬೃಹತ್ಕಥಾಮಂಜರಿ ಹೇಳುತ್ತದೆ, ರಾಜ ವಿಕ್ರಮಾದಿತ್ಯನು "ಪವಿತ್ರ ಭೂಮಿಯಿಂದ ಶಕರು, ಮ್ಲೇಚ್ಛರು, ಕಾಂಬೋಜರು, ಯವನರು, ತುಷಾರರು, ಪಾರಸಿಕರು, ಹುಣರು ಇತ್ಯಾದಿಗಳಂತಹ ಅನಾಗರಿಕರ ಹೊರೆಯಿಳಿಸಿದ್ದನು ಮತ್ತು ಈ ಪಾಪಿ ಮ್ಲೇಚ್ಛರನ್ನು ಸಂಪೂರ್ಣವಾಗಿ ನಾಶಮಾಡಿದನು".

ಪಾಹೀಯಾನ[ಬದಲಾಯಿಸಿ]

ಚೀನಾದ ಒಬ್ಬ ಬೌದ್ಧನಾದ ಫ಼ಾ ಕ್ಸಿಯಾನನು ಗುಪ್ತ ಸಾಮ್ರಾಟ ಎರಡನೇ ಚಂದ್ರಗುಪ್ತನ ಆಳ್ವಿಕೆಯ ಕಾಲದಲ್ಲಿ ಭಾರತಕ್ಕೆ ಭೇಟಿನೀಡಿದ ಪ್ರಯಾಣಿಕರಲ್ಲಿ ಒಬ್ಬನಾಗಿದ್ದನು. ಅವನು ಚೀನಾದಿಂದ ೩೯೯ರಲ್ಲಿ ತನ್ನ ಪ್ರಯಾಣ ಆರಂಭಿಸಿದನು ಮತ್ತು ಭಾರತವನ್ನು ೪೦೫ರಲ್ಲಿ ತಲುಪಿದನು. ೪೧೧ರ ವರೆಗೆ ಭಾರತದಲ್ಲಿನ ತನ್ನ ವಾಸ್ತವ್ಯದ ಅವಧಿಯಲ್ಲಿ, ಅವನು ಮಥುರಾ, ಕನ್ನೌಜ್, ಕಪಿಲವಸ್ತು, ಕುಶೀನಗರ್, ವೈಶಾಲಿ, ಪಾಟಲಿಪುತ್ರ, ಕಾಶಿ ಮತ್ತು ರಾಜಗೃಹಕ್ಕೆ ತೀರ್ಥಯಾತ್ರೆ ಕೈಗೊಂಡು ಸಾಮ್ರಾಜ್ಯದ ಪರಿಸ್ಥಿತಿಗಳ ಬಗ್ಗೆ ಎಚ್ಚರಿಕೆಯ ಅವಲೋಕನಗಳನ್ನು ಮಾಡಿದನು. ಫ಼ಾ ಕ್ಸಿಯಾನನು ಆಡಳಿತದ ಸೌಮ್ಯತೆಯಿಂದ ಸಂತಸಗೊಂಡನು. ದಂಡ ಸಂಹಿತೆಯು ಸೌಮ್ಯವಾಗಿತ್ತು ಮತ್ತು ಅಪರಾಧಗಳನ್ನು ಕೇವಲ ದಂಡಗಳಿಂದ ಶಿಕ್ಷಿಸಲಾಗುತ್ತಿತ್ತು. ಅವನ ವಿವರಣೆಗಳಿಂದ, ಗುಪ್ತ ಸಾಮ್ರಾಜ್ಯವು ಸಮೃದ್ಧ ಅವಧಿಯಾಗಿತ್ತು, ಮತ್ತು ಹಾನ್ ರಾಜವಂಶದ ಪತನದೊಂದಿಗೆ ರೋಮ್-ಚೀನಾ ವ್ಯಾಪಾರ ಅಕ್ಷ ಮುರಿಯುವವರೆಗೆ, ಗುಪ್ತರು ವಾಸ್ತವವಾಗಿ ಏಳಿಗೆ ಹೊಂದಿದರು. ಅವನ ಬರಹಗಳು ಈ ಅವಧಿಯ ಇತಿಹಾಸಕ್ಕೆ ಅತ್ಯಂತ ಮಹತ್ವದ ಮೂಲಗಳಲ್ಲಿ ಒಂದು.

ಮೊದಲನೇ ಕುಮಾರಗುಪ್ತ[ಬದಲಾಯಿಸಿ]

ಕ್ರಿ.ಶ. ೪೫೦ರಲ್ಲಿ ಗುಪ್ತ ಸಾಮ್ರಾಜ್ಯ
ಮೊದಲನೇ ಕುಮಾರಗುಪ್ತನ ಬೆಳ್ಳಿ ನಾಣ್ಯ (ವಿನ್ಯಾಸವನ್ನು ಪಶ್ಚಿಮ ಕ್ಷತ್ರಪರಿಂದ ಪಡೆಯಲಾಗಿದೆ).
ಮುಂಬದಿ: ರಾಜನ ಬಸ್ಟು, ಅಶುದ್ಧ ಗ್ರೀಕ್ ಲಿಪಿಯ ಕುರುಹುಗಳೊಂದಿಗೆ.
ಹಿಂಬದಿ: ಚಾಚಿದ ರೆಕ್ಕೆಗಳಿರುವ ನಿಂತಿರುವ ಗರುಡ. ಬ್ರಾಹ್ಮಿ ಆಲೇಖ: ಪರಮಭಾಗವತ ರಾಜಾಧಿರಾಜ ಶ್ರೀ ಕುಮಾರಗುಪ್ತ ಮಹೇಂದ್ರಾದಿತ್ಯ.

ಎರಡನೇ ಚಂದ್ರಗುಪ್ತನ ನಂತರ ಅವನ ಎರಡನೇ ಮಗ ಮೊದಲನೇ ಕುಮಾರಗುಪ್ತನು ಉತ್ತರಾಧಿಕಾರಿಯಾದನು. ಅವನ ತಾಯಿ ಮಹಾದೇವಿ ಧ್ರುವಸ್ವಾಮಿನಿ. ಕುಮಾರಗುಪ್ತನು ಮಹೇಂದ್ರಾದಿತ್ಯನೆಂಬ ಬಿರುದನ್ನು ಸ್ವೀಕರಿಸಿದನು. ಅವನು ೪೫೫ರ ವರೆಗೆ ಆಳಿದನು. ಅವನ ಆಳ್ವಿಕೆಯ ಅಂತ್ಯದ ವೇಳೆಗೆ ನರ್ಮದಾ ಕಣಿವೆಯಲ್ಲಿನ ಒಂದು ಬುಡಕಟ್ಟಾದ ಪುಷ್ಯಮಿತ್ರರು ಅಧಿಕಾರಕ್ಕೆ ಬಂದು ಸಾಮ್ರಾಜ್ಯಕ್ಕೆ ಬೆದರಿಕೆ ಉಂಟುಮಾಡಿದರು. ಕುಮಾರಗುಪ್ತನ ಆಳ್ವಿಕೆಯ ಕಾಲದಲ್ಲಿ ಸಂಭಾವ್ಯವಾಗಿ ಕಿದಾರರು ಗುಪ್ತ ಸಾಮ್ರಾಜ್ಯಕ್ಕೆ ಎದುರಾಳಿಗಳಾದರು ಏಕೆಂದರೆ ಕುಮಾರಗುಪ್ತನು ಹುಣರೊಂದಿಗೆ ದಳ್ಳುರಿಗಳನ್ನು ನಿರೂಪಿಸುತ್ತಾನೆ. ಕುಮಾರಗುಪ್ತನು ನಾಲಂದಾ ವಿಶ್ವವಿದ್ಯಾಲಯದ ಸ್ಥಾಪಕನಾಗಿದ್ದನು.

ಸ್ಕಂದಗುಪ್ತ[ಬದಲಾಯಿಸಿ]

ಮುಖ್ಯ ಲೇಖನ: ಸ್ಕಂದಗುಪ್ತ

ಮೊದಲನೇ ಕುಮಾರಗುಪ್ತನ ಮಗ ಮತ್ತು ಉತ್ತರಾಧಿಕಾರಿಯಾದ ಸ್ಕಂದಗುಪ್ತನನ್ನು ಸಾಮಾನ್ಯವಾಗಿ ಮಹಾನ್ ಗುಪ್ತ ರಾಜರಲ್ಲಿ ಕೊನೆಯವನೆಂದು ಪರಿಗಣಿಸಲಾಗಿದೆ. ಅವನು ವಿಕ್ರಮಾದಿತ್ಯ ಮತ್ತು ಕ್ರಮಾದಿತ್ಯ ಎಂಬ ಬಿರುದುಗಳನ್ನು ಸ್ವೀಕರಿಸಿದನು. ಅವನು ಪುಶ್ಯಮಿತ್ರರ ಅಪಾಯವನ್ನು ಭಗ್ನಗೊಳಿಸಿದನು, ಆದರೆ ವಾಯವ್ಯದಿಂದ ದಂಡೆತ್ತಿಬಂದ ಶ್ವೇತ ಹುಣರನ್ನು ಎದುರಾದನು. ಕ್ರಿ.ಶ. ೪೫೫ರಲ್ಲಿ ಅವನು ಒಂದು ಹುಣ ಆಕ್ರಮಣವನ್ನು ಹಿಮ್ಮೆಟ್ಟಿಸಿದನು, ಆದರೆ ಯುದ್ಧಗಳ ವೆಚ್ಚಗಳು ಸಾಮ್ರಾಜ್ಯದ ಸಂಪನ್ಮೂಲಗಳನ್ನು ಬರಿದು ಮಾಡಿದವು ಮತ್ತು ಅದರ ಪತನಕ್ಕೆ ಕೊಡುಗೆ ನೀಡಿದವು. ಚಂದ್ರಗುಪ್ತನ ಉತ್ತರಾಧಿಕಾರಿಯಾದ ಸ್ಕಂದಗುಪ್ತನ ಭೀತರಿ ಸ್ತಂಭ ಶಾಸನವು ಶ್ವೇತ ಹುಣರ ಆಕ್ರಮಗಳ ತರುವಾಯ ಗುಪ್ತ ಸಾಮ್ರಾಜ್ಯದ ಹತ್ತಿರದ ನಿರ್ನಾಮವನ್ನು ಸ್ಮರಿಸುತ್ತದೆ. ಶ್ವೇತ ಹುಣರು ಗುಪ್ತ ಸಾಮ್ರಾಜ್ಯದ ಪಶ್ಚಿಮ ಭಾಗವನ್ನು ಪಡೆದುಕೊಂಡರು ಎಂದು ತೋರುತ್ತದೆ. ಸ್ಕಂದಗುಪ್ತನು ೪೬೭ರಲ್ಲಿ ಮರಣ ಹೊಂದಿದನು ಮತ್ತು ಅವನ ನಂತರ ಅವನ ಪೈತೃಕ ಸಹೋದರ ಪುರುಗುಪ್ತನು ಉತ್ತರಾಧಿಕಾರಿಯಾದನು.

ಸಾಮ್ರಾಜ್ಯದ ಪತನ[ಬದಲಾಯಿಸಿ]

ಸ್ಕಂದಗುಪ್ತನ ಮರಣದ ನಂತರ, ಸಾಮ್ರಾಜ್ಯವು ಸ್ಪಷ್ಟವಾಗಿ ಪತನ ಹೊಂದುತ್ತಿತ್ತು. ಅವನ ನಂತರ ಪುರುಗುಪ್ತ (೪೬೭-೪೭೩), ಎರಡನೇ ಕುಮಾರಗುಪ್ತ (೪೭೩-೪೭೬), ಬುಧಗುಪ್ತ (೪೭೬-೪೯೫), ನರಸಿಂಹಗುಪ್ತ (೪೯೫-?), ಮೂರನೇ ಕುಮಾರಗುಪ್ತ (೫೩೦-೫೪೦), ವಿಷ್ಣುಗುಪ್ತ (೫೪೦-೫೫೦), ಮತ್ತು ಕಡಿಮೆ ತಿಳಿದಿರುವ ರಾಜರಾದ ವೈನ್ಯಗುಪ್ತ ಹಾಗೂ ಭಾನುಗುಪ್ತರು ಉತ್ತರಾಧಿಕಾರಿಗಳಾದರು.

೪೮೦ರ ದಶಕದಲ್ಲಿ ತೋರಮನ ಮತ್ತು ಮಿಹಿರಕುಲರ ನೇತೃತ್ವದಲ್ಲಿ ಹುಣರು ವಾಯವ್ಯದಲ್ಲಿ ಗುಪ್ತರ ರಕ್ಷಣೆಯನ್ನು ಭೇದಿಸಿದರು, ಮತ್ತು ೫೦೦ರ ವೇಳೆಗೆ ವಾಯವ್ಯದಲ್ಲಿ ಸಾಮ್ರಾಜ್ಯದ ಹೆಚ್ಚಿನ ಭಾಗ ಹುಣರಿಂದ ಧ್ವಂಸವಾಗಿತ್ತು. ಸಾಮ್ರಾಜ್ಯವು ತೋರಮನ ಮತ್ತು ಅವನ ಉತ್ತರಾಧಿಕಾರಿ ಮಿಹಿರಕುಲನ ಆಕ್ರಮಣಗಳಿಂದ ಭಾಗಗಳಾಗಿ ಒಡೆದುಹೋಯಿತು. ಅವರ ಅಧಿಕಾರ ಬಹಳ ಕ್ಷೀಣವಾಗಿದ್ದರೂ ಹುಣರನ್ನು ಪ್ರತಿರೋಧಿಸುವುದನ್ನು ಮುಂದುವರಿಸಿದರು ಎಂದು ಗುಪ್ತರ ಶಾಸನಳಿಂದ ತೋರುತ್ತದೆ. ಹುಣ ಆಕ್ರಮಣಕಾರ ತೋರಮನನನ್ನು ಭಾನುಗುಪ್ತನು ೫೧೦ರಲ್ಲಿ ಸೋಲಿಸಿದನು. ಗುಪ್ತ ಸಾಮ್ರಾಟ ನರಸಿಂಹಗುಪ್ತ ಮತ್ತು ಮಾಲ್ವಾದ ರಾಜ ಯಶೋಧರ್ಮನ್‍ರ ಮೈತ್ರಿಕೂಟವು ಹುಣರನ್ನು ೫೨೮ರಲ್ಲಿ ಸೋಲಿಸಿ ಭಾರತದಿಂದ ಹೊರಗೋಡಿಸಿದರು.

೬ನೇ ಶತಮಾನದ ಗುಪ್ತರ ಅನುಕ್ರಮ ಉತ್ತರಾಧಿಕಾರ ಸಂಪೂರ್ಣವಾಗಿ ಸ್ಪಷ್ಟವಿಲ್ಲ, ಆದರೆ ವಿಷ್ಣುಗುಪ್ತನು ರಾಜವಂಶದ ಮುಖ್ಯ ಕುಲದ ಅಂತ್ಯದ ಗುರುತಿಸಲ್ಪಟ್ಟ ರಾಜನಾಗಿದ್ದನು, ಮತ್ತು ೫೪೦ ರಿಂದ ೫೫೦ರ ವರೆಗೆ ಆಳಿದನು. ಹುಣರ ಆಕ್ರಮಣದ ಜೊತೆಗೆ, ವಾಕಾಟಕರಿಂದ ಪೈಪೋಟಿ ಮತ್ತು ಮಾಲ್ವಾದಲ್ಲಿ ಯಶೋಧರ್ಮನ್‍ನ ಉದಯ ಸಾಮ್ರಾಜ್ಯದ ಪತನಕ್ಕೆ ಕೊಡುಗೆ ನೀಡಿದ ಅಂಶಗಳಾಗಿವೆ.

ಸೇನಾ ಸಂಘಟನೆ[ಬದಲಾಯಿಸಿ]

ಗುಪ್ತರ ಯುಗದ ಚಿನ್ನದ ನಾಣ್ಯ, ಬಿಲ್ಲು ಹಿಡಿದಿರುವ ಕುಮಾರಗುಪ್ತನನ್ನು ಚಿತ್ರಿಸುತ್ತದೆ.
ವಿಷ್ಣುವಿನ ಶಿಲ್ಪ (ಕೆಂಪು ಮರಳುಗಲ್ಲು), ಕ್ರಿ.ಶ. ೫ನೇ ಶತಮಾನ

ಒಂದು ಸಮರ್ಥ ಸಮರ ವ್ಯವಸ್ಥೆ ಇಲ್ಲದೇ ಸಾಮ್ರಾಜ್ಯಶಾಹಿ ಗುಪ್ತರು ಶಸ್ತ್ರಾಸ್ತ್ರಗಳ ಬಲದ ಮೂಲಕ ಯಶಸ್ಸುಗಳನ್ನು ಸಾಧಿಸಲು ಸಾಧ್ಯವಿರಲಿಲ್ಲ. ಐತಿಹಾಸಿಕವಾಗಿ, ಇದರ ಅತ್ಯುತ್ತಮ ವರ್ಣನೆಗಳು ಹಿಂದೂಗಳಿಂದ ಬರದೆ ಚೀನಾದ ಮತ್ತು ಪಾಶ್ಚಾತ್ಯ ವೀಕ್ಷಕರಿಂದ ಬರುತ್ತದೆ. ಆದರೆ, ತನ್ನ ಕಾಲದ ಸೇನಾ ಮೇರುಕೃತಿ ಎಂದು ಪರಿಗಣಿಸಲಾದ ಒಂದು ಸಮಕಾಲೀನ ಭಾರತೀಯ ಗ್ರಂಥವಾದ ಶಿವ ಧನುರ್ವೇದವು ಗುಪ್ತರ ಸೇನಾ ವ್ಯವಸ್ಥೆಯ ಒಳಗೆ ಸ್ವಲ್ಪ ಒಳನೋಟ ನೀಡುತ್ತದೆ.

ಗುಪ್ತರು ಪದಾತಿ ಬಿಲ್ಲುಗಾರರನ್ನು ಬಹಳವಾಗಿ ಅವಲಂಬಿಸಿದ್ದರು ಎಂದು ತೋರುತ್ತದೆ, ಮತ್ತು ಬಿಲ್ಲು ಅವರ ಸೇನೆಯ ಪ್ರಧಾನ ಅಸ್ತ್ರಗಳಲ್ಲಿ ಒಂದಾಗಿತ್ತು. ನೀಳಬಿಲ್ಲಿನ ಹಿಂದೂ ರೂಪಾಂತರವು ಲೋಹ, ಅಥವಾ ಹೆಚ್ಚು ವಿಶಿಷ್ಟವಾಗಿ ಬಿದಿರಿನಿಂದ ಕೂಡಿತ್ತು, ಮತ್ತು ಲೋಹದ ಶಿರವಿರುವ ಬಿದಿರಿನ ಜಲ್ಲೆಯ ಉದ್ದ ಬಾಣವನ್ನು ಹಾರಿಸುತ್ತಿತ್ತು. ಪಶ್ಚಿಮ ಮತ್ತು ಮಧ್ಯ ಏಷ್ಯಾದ ವೈರಿಗಳ ರೇಕು ಅಂಟಿಸಿದ ಬಿಲ್ಲುಗಳಂತೆ ಇರದೆ, ಈ ವಿನ್ಯಾಸದ ಬಿಲ್ಲುಗಳು ಈ ಪ್ರದೇಶಕ್ಕೆ ಹಲವುವೇಳೆ ಪ್ರಚಲಿತವಿದ್ದ ತೇವಭರಿತ ಪರಿಸ್ಥಿತಿಗಳಲ್ಲಿ ಡೊಂಕು ಅಥವಾ ಬಾಗುವಿಕೆಯ ಕಡಿಮೆ ಸಾಧ್ಯತೆ ಹೊಂದಿದ್ದವು. ಭಾರತೀಯ ನೀಳಬಿಲ್ಲು ಭಾರೀ ವ್ಯಾಪ್ತಿ ಮತ್ತು ಭೇದನದ ಸಾಮರ್ಥ್ಯವುಳ್ಳ ಪ್ರಸಿದ್ಧವಾದ ಪ್ರಬಲ ಅಸ್ತ್ರವಾಗಿತ್ತು ಮತ್ತು ಆಕ್ರಮಣಮಾಡುವ ಕುದುರೆ ಬಿಲ್ಲುಗಾರರ ವಿರುದ್ಧ ಪರಿಣಾಮಕಾರಿ ಪ್ರತಿರೋಧವನ್ನು ಒದಗಿಸುತ್ತಿತ್ತು. ಶಸ್ತ್ರಸಜ್ಜಿತ ಆನೆಗಳ ವಿರುದ್ಧ ಕಬ್ಬಿಣದ ಭರ್ಜಿಗಳನ್ನು ಬಳಸಲಾಗುತ್ತಿತ್ತು ಮತ್ತು ಜನಪ್ರಿಯ ನಂಬಿಕೆಗೆ ವಿರುದ್ಧವಾಗಿ ಬೆಂಕಿ ಬಾಣಗಳು ಬಿಲ್ಲುಗಾರರ ಶಸ್ತ್ರಾಗಾರರ ಭಾಗವಾಗಿರಲಿಲ್ಲ. ಭಾರತವು ಐತಿಹಾಸಿಕವಾಗಿ ತನ್ನ ಉಕ್ಕಿನ ಶಸ್ತ್ರಾಸ್ತ್ರಗಳಿಗೆ ಪ್ರಖ್ಯಾತವಾಗಿದೆ. ಉಕ್ಕಿನ ಬಿಲ್ಲು ಇವುಗಳಲ್ಲಿ ಒಂದಾಗಿತ್ತು. ಅದರ ಹೆಚ್ಚಿನ ಕರ್ಷಕತೆಯ ಕಾರಣ, ಉಕ್ಕಿನ ಬಿಲ್ಲು ದೂರದ ವ್ಯಾಪ್ತಿ ಮತ್ತು ಅಸಾಧಾರಣವಾಗಿ ದಪ್ಪನೆಯ ಯುದ್ಧಕವಚವನ್ನು ಭೇದಿಸುವ ಸಾಮರ್ಥ್ಯ ಹೊಂದಿತ್ತು. ಇವು ಬಿದಿರು ವಿನ್ಯಾಸದ ಬಿಲ್ಲುಗಳಿಗಿಂತ ಕಡಿಮೆ ಸಾಮಾನ್ಯವಾಗಿದ್ದವು ಮತ್ತು ಸೈನಿಕರ ಬದಲು ಕುಲೀನರ ಕೈಗಳಲ್ಲಿ ಕಾಣುತ್ತಿದ್ದವು. ಬಿಲ್ಲುಗಾರರನ್ನು ಆಗಾಗ್ಗೆ ಗುರಾಣಿಗಳು, ಭರ್ಜಿಗಳು, ಮತ್ತು ನೀಳಖಡ್ಗಗಳಿಂದ ಸಜ್ಜುಗೊಂಡ ಪದಾತಿಪಡೆಗಳು ರಕ್ಷಿಸುತ್ತಿದ್ದವು. ಗುಪ್ತರಿಗೆ ಮುತ್ತಿಗೆ ಕಲೆ, ಕವಣೆ ಯಂತ್ರಗಳು, ಮತ್ತು ಇತರ ಅತ್ಯಾಧುನಿಕ ಯುದ್ಧ ಯಂತ್ರಗಳ ಜ್ಞಾನವೂ ಇತ್ತು.

ಮೇಲುನೋಟಕ್ಕೆ ಕಾಣುವಂತೆ, ಕುದುರೆ ಬಿಲ್ಲುಗಾರರು ಶಕರು, ಪಾರ್ಥಿಯನ್ನರು ಮತ್ತು ಹುಣ ವೈರಿಗಳ ಸೈನಿಕರಲ್ಲಿ ಮುಖ್ಯ ಘಟಕವಾಗಿದ್ದರೂ, ಗುಪ್ತರು ಈ ಯೋಧರ ಬಳಕೆಗೆ ಕಡಿಮೆ ಒಲವು ತೋರಿಸಿದ್ದರು. ಆದರೆ, ಗುಪ್ತರ ಸೇನೆಗಳು ಸಂಭಾವ್ಯವಾಗಿ ಹೆಚ್ಚು ಶಿಸ್ತಿನಿಂದ ಕೂಡಿದ್ದವು. ಸಮುದ್ರಗುಪ್ತ ಮತ್ತು ಎರಡನೇ ಚಂದ್ರಗುಪ್ತರಂತಹ ಸಮರ್ಥ ದಳಪತಿಗಳು ಸಂಯೋಜಿತ ಸಶಸ್ತ್ರ ತಂತ್ರಗಳು ಮತ್ತು ಸರಿಯಾದ ಸೇನಾ ಸಂಘಟನೆಯ ಅಗತ್ಯ ತಿಳಿದಿರುವ ಸಾಧ್ಯತೆ ಇದೆ. ಗುಪ್ತರ ಸೇನೆಯ ಯಶಸ್ಸು ಬಹುಶಃ ಆನೆಗಳು, ಶಸ್ತ್ರಸಜ್ಜಿತ ಅಶ್ವದಳ, ಮತ್ತು ಪದಾತಿ ಬಿಲ್ಲುಗಾರರ ಸಂಯೋಜಿತ ಬಳಕೆಯಿಂದ ಉದ್ಭವಿಸಿತು, ಹಿಂದೂ ರಾಜ್ಯಗಳು ಮತ್ತು ವಾಯವ್ಯದಿಂದ ದಾಳಿಮಾಡುತ್ತಿದ್ದ ವಿದೇಶದ ಸೇನೆಗಳು ಇಬ್ಬರ ವಿರುದ್ಧವೂ. ಗುಪ್ತರು ನೌಕಾಪಡೆಯನ್ನೂ ನಡೆಸಿಕೊಂಡು ಬಂದಿದ್ದರು, ಮತ್ತು ಇದರಿಂದ ಅವರು ಪ್ರಾದೇಶಿಕ ಜಲಪ್ರದೇಶಗಳನ್ನು ನಿಯಂತ್ರಿಸುತ್ತಿದ್ದರು.

ಹುಣರ ದಾಳಿಯ ಎದುರು ಗುಪ್ತ ಸಾಮ್ರಾಜ್ಯದ ಪತನ ನೇರವಾಗಿ ಗುಪ್ತ ಸೇನೆಯ ಅಂತರ್ಗತ ದೋಷಗಳ ಕಾರಣವಿರಲಿಲ್ಲ, ಏಕೆಂದರೆ ಗುಪ್ತರ ಸೇನೆ ಆರಂಭದಲ್ಲಿ ಈ ವೈರಿಗಳನ್ನು ಸ್ಕಂದಗುಪ್ತನ ನೇತೃತ್ವದಲ್ಲಿ ಸೋಲಿಸಿತ್ತು. ಆಂತರಿಕ ವಿಲಯವು ವಿದೇಶಿ ಆಕ್ರಮಣವನ್ನು ಪ್ರತಿರೋಧಿಸುವ ಗುಪ್ತರ ಸಾಮರ್ಥ್ಯವನ್ನು ಕುಂದಿಸಿರುವ ಹೆಚ್ಚಿನ ಸಾಧ್ಯತೆಗಳಿವೆ. ಇದೇ ರೀತಿ ಪಶ್ಚಿಮ ಯೂರೋಪ್ ಮತ್ತು ಚೀನಾದಲ್ಲಿ ಅದೇಕಾಲದಲ್ಲಿ ಆಗುತ್ತಿತ್ತು.

ಎರಡನೇ ಚಂದ್ರಗುಪ್ತನ ಆಳ್ವಿಕೆಯ ಕಾಲದಲ್ಲಿ, ಗುಪ್ತ ಸಾಮ್ರಾಜ್ಯವು ೫೦೦,೦೦೦ ಪದಾತಿಪಡೆ, ೫೦,೦೦೦ ಅಶ್ವದಳ, ೨೦,೦೦೦ ರಥವಾಹಿಗಳು ಮತ್ತು ೧೦,೦೦೦ ಆನೆಗಳು, ಜೊತೆಗೆ ೧೨೦೦ ಕ್ಕಿಂತ ಹೆಚ್ಚು ಹಡಗುಗಳಿರುವ ಪ್ರಬಲ ನೌಕಾದಳ ಸೇರಿದ ದೊಡ್ಡ ಸೇನೆಯನ್ನು ಕಾಪಾಡಿಕೊಂಡು ಬಂದಿತ್ತು. ಎರಡನೇ ಚಂದ್ರಗುಪ್ತನು ಇಡೀ ಭಾರತೀಯ ಉಪಖಂಡವನ್ನು ನಿಯಂತ್ರಿಸಿದ್ದನು; ಗುಪ್ತ ಸಾಮ್ರಾಜ್ಯವು ಅವನ ಆಳ್ವಿಕೆಯ ಕಾಲದಲ್ಲಿ ವಿಶ್ವದ ಅತ್ಯಂತ ಬಲಿಷ್ಠ ಸಾಮ್ರಾಜ್ಯವಾಗಿತ್ತು, ಅದೇ ಕಾಲದಲ್ಲಿ ಪಶ್ಚಿಮದಲ್ಲಿ ರೋಮನ್ ಸಾಮ್ರಾಜ್ಯ ಪತನವಾಗುತ್ತಿತ್ತು.

ಧರ್ಮ[ಬದಲಾಯಿಸಿ]

ಗುಪ್ತರು ಸಾಂಪ್ರದಾಯಿಕವಾಗಿ ಕ್ಷತ್ರಿಯ ವಂಶದವರಾಗಿದ್ದರು. ಅವರು ಶಾಸ್ತ್ರಾನುಸಾರಿಯಾದ ಹಿಂದೂಗಳಾಗಿದ್ದರು, ಆದರೆ ತಮ್ಮ ನಂಬಿಕೆಗಳನ್ನು ಉಳಿದ ಜನರ ಮೇಲೆ ಹೇರಲಿಲ್ಲ, ಏಕೆಂದರೆ ಬೌದ್ಧ ಧರ್ಮ ಮತ್ತು ಜೈನ ಧರ್ಮಗಳನ್ನೂ ಪ್ರೋತ್ಸಾಹಿಸಲಾಗಿತ್ತು. ಸಾಂಚಿ ಬೌದ್ಧ ಧರ್ಮದ ಪ್ರಮುಖ ಕೇಂದ್ರವಾಗಿ ಉಳಿಯಿತು. ಮೊದಲನೇ ಕುಮಾರಗುಪ್ತನು ನಾಲಂದಾವನ್ನು ಸ್ಥಾಪಿಸಿದನು ಎಂದು ಹೇಳಲಾಗಿದೆ.

ಆದರೆ ಕೆಲವು ನಂತರದ ರಾಜರು ವಿಶೇಷವಾಗಿ ಬೌದ್ಧ ಧರ್ಮವನ್ನು ಒಪ್ಪಿದರು ಎಂದು ತೋರುತ್ತದೆ. ಸಮಕಾಲೀನ ಬರಹಗಾರ ಪರಮಾರ್ಥನ ಪ್ರಕಾರ, ನರಸಿಂಹಗುಪ್ತ ಬಲಾದಿತ್ಯನನ್ನು ಮಹಾಯಾನದ ತತ್ವಶಾಸ್ತ್ರಜ್ಞ ವಸುಬಂಧುವಿನ ಪ್ರಭಾವದಲ್ಲಿ ಬೆಳೆಸಲಾಗಿತ್ತು. ಅವನು ನಾಲಂದಾದಲ್ಲಿ ಒಂದು ಸಂಘಾರಾಮವನ್ನು ಮತ್ತು ಬುದ್ಧನ ಪ್ರತಿಮೆ ಇರುವ ೩೦೦ ಅಡಿ ಎತ್ತರದ ವಿಹಾರವನ್ನು ಕಟ್ಟಿಸಿದನು. ಮಂಜುಶ್ರೀಮೂಲಕಲ್ಪದ ಪ್ರಕಾರ (ಕ್ರಿ.ಶ. ೮೦೦) ರಾಜ ನರಸಿಂಹಗುಪ್ತನು ಬೌದ್ಧ ಸಂನ್ಯಾಸಿಯಾದನು, ಮತ್ತು ಧ್ಯಾನದ ಮೂಲಕ ಲೋಕವನ್ನು ತೊರೆದನು. ನರಸಿಂಹಗುಪ್ತನ ಮಗ ವಜ್ರನೂ ಒಂದು ಸಂಘಾರಾಮವನ್ನು ಶುರು ಮಾಡಿದನು.

ಗುಪ್ತರ ಆಡಳಿತ[ಬದಲಾಯಿಸಿ]

ಮೇಲಿನಿಂದ ಕೆಳಕ್ಕೆ ಆಡಳಿತ ವಿಭಾಗಗಳ ಶ್ರೇಣಿವ್ಯವಸ್ಥೆ ಇತ್ತು ಎಂದು ಗುಪ್ತ ಸಾಮ್ರಾಜ್ಯದ ಶಿಲಾಶಾಸನ ದಾಖಲೆಗಳ ಒಂದು ಅಧ್ಯಯನ ತೋರಿಸುತ್ತದೆ. ಸಾಮ್ರಾಜ್ಯವನ್ನು, ರಾಷ್ಟ್ರ, ರಾಜ್ಯ, ದೇಶ, ಮಂಡಲ, ಪ್ರದೇಶ ಮತ್ತು ಆವನಿಯಂತಹ ವಿವಿಧ ಹೆಸರುಗಳಿಂದ ಕರೆಯಲಾಗುತ್ತಿತ್ತು. ಅದನ್ನು ೨೬ ಪ್ರಾಂತ್ಯಗಳಾಗಿ ವಿಭಜಿಸಲಾಗಿತ್ತು. ಇವನ್ನು ಭುಕ್ತಿ, ಪ್ರದೇಶ ಮತ್ತು ಭೋಗ ಎಂದು ಕರೆಯಲಾಗುತ್ತಿತ್ತು. ಪ್ರಾಂತ್ಯಗಳನ್ನು ವಿಷಯಗಳಾಗಿ ವಿಭಜಿಸಲಾಗಿತ್ತು ಮತ್ತು ವಿಷಯಪತಿಗಳ ನಿಯಂತ್ರಣದಲ್ಲಿದ್ದವು. ವಿಷಯಪತಿಯು ವಿಷಯವನ್ನು ಅಧಿಕರಣದ (ಪ್ರತಿನಿಧಿಗಳ ಪರಿಷತ್ತು) ಸಹಾಯದಿಂದ ನೋಡಿಕೊಳ್ಳುತ್ತಿದ್ದನು. ಅಧಿಕರಣ ನಾಲ್ಕು ಪ್ರತಿನಿಧಿಗಳನ್ನು ಹೊಂದಿತ್ತು: ನಗರಶ್ರೇಷ್ಠಿ, ಸಾರ್ಥವಾಹ, ಪ್ರಥಮಕುಲಿಕೆ ಮತ್ತು ಪ್ರಥಮ ಕಾಯಸ್ಥ. ವಿಷಯದ ಒಂದು ಭಾಗವನ್ನು ವಿಥಿ ಎಂದು ಕರೆಯಲಾಗುತ್ತಿತ್ತು. ರೋಮನ್ ಸಾಮ್ರಾಜ್ಯದೊಂದಿಗೆ ಗುಪ್ತರ ವ್ಯಾಪಾರ ಸಂಬಂಧಗಳಿದ್ದವು.

ಗುಪ್ತ ಸಾಮ್ರಾಜ್ಯದ ಪರಂಪರೆ[ಬದಲಾಯಿಸಿ]

ವರಾಹಮಿಹಿರ ಮತ್ತು ಆರ್ಯಭಟರಂತಹ ವಿದ್ವಾಂಸರು ಈ ಕಾಲಕ್ಕೆ ಸೇರಿದ್ದಾರೆ. ಆರ್ಯಭಟನು ಶೂನ್ಯದ ಪರಿಕಲ್ಪನೆಯನ್ನು ಮೊದಲು ಆವಿಷ್ಕರಿಸಿದನು, ಭೂಮಿಯು ಸೂರ್ಯನ ಸುತ್ತ ಚಲಿಸುತ್ತದೆ ಎಂಬ ಸಿದ್ಧಾಂತವನ್ನು ಪ್ರಸ್ತಾಪಿಸಿದನು, ಮತ್ತು ಸೂರ್ಯ ಹಾಗೂ ಚಂದ್ರಗ್ರಹಣಗಳನ್ನು ಅಧ್ಯಯನಮಾಡಿದನು ಎಂದು ನಂಬಲಾಗಿದೆ. ಅಭಿಜ್ಞಾನಶಾಕುಂತಲಮ್‍ನಂತಹ ನಾಟಕಗಳನ್ನು ಬರೆದ ಒಬ್ಬ ಮಹಾನ್ ನಾಟಕಕಾರನಾಗಿದ್ದ ಕಾಳಿದಾಸನು ಈ ಕಾಲಕ್ಕೆ ಸೇರಿದವನೆಂದು ನಂಬಲಾಗಿದೆ. ಈ ಕಾಲವು ಸಂಸ್ಕೃತ ಸಾಹಿತ್ಯದ ಅತ್ಯುನ್ನತ ಬಿಂದುವನ್ನು ಗುರುತಿಸಿತು. ಆಯುರ್ವೇದ ಶಾಸ್ತ್ರದ ಎಲ್ಲ ಪ್ರಮುಖ ಪರಿಕಲ್ಪನೆಗಳ ಮೇಲಿನ ಸಂಸ್ಕೃತ ಪರಿಷ್ಕರಣಾ ಪಠ್ಯವಾದ ಸುಶ್ರುತ ಸಂಹಿತಾ ಗುಪ್ತರ ಕಾಲದ್ದಾಗಿದೆ ಮತ್ತು ಶಸ್ತ್ರಚಿಕಿತ್ಸೆ ಮೇಲೆ ನವೀನ ಅಧ್ಯಾಯಗಳನ್ನು ಹೊಂದಿತ್ತು.

ಚದುರಂಗ ಈ ಕಾಲದಲ್ಲಿ ಹುಟ್ಟಿಕೊಂಡಿತು ಎಂದು ಹೇಳಲಾಗಿದೆ, ಚದುರಂಗ ಅಂದರೆ "(ಸೇನೆಯ) ನಾಲ್ಕು ಅಂಗಗಳು" – ಪದಾತಿಪಡೆ, ಅಶ್ವದಳ, ಗಜದಳ, ಮತ್ತು ರಥದಳ – ಇವನ್ನು ಅನುಕ್ರಮವಾಗಿ ಆಧುನಿಕ ಪ್ಯಾದೆ, ಕುದುರೆ, ಕೋಟೆಕಾಯಿ, ಮತ್ತು ಒಂಟೆಯಾಗಿ ವಿಕಸನಗೊಂಡ ಕಾಯಿಗಳಿಂದ ಪ್ರತಿನಿಧಿಸಲಾಗಿತ್ತು. ವೈದ್ಯರು ಹಲವಾರು ವೈದ್ಯಕೀಯ ಉಪಕರಣಗಳನ್ನೂ ಆವಿಷ್ಕರಿಸಿದರು, ಮತ್ತು ಶಸ್ತ್ರಕ್ರಿಯೆಗಳನ್ನು ಮಾಡುತ್ತಿದ್ದರು. ವಿಶ್ವದಲ್ಲಿ ೧೦ರ ಆಧಾರದ ಮೊದಲ ಸ್ಥಾನಿಕ ಅಂಕಿ ಪದ್ಧತಿಯಾಗಿದ್ದ ಭಾರತೀಯ ಅಂಕಿಗಳು ಗುಪ್ತ ಕಾಲದ ಭಾರತದಲ್ಲಿ ಹುಟ್ಟಿಕೊಂಡವು. ಭಾರತೀಯ ವಿದ್ವಾಂಸ ವಾತ್ಸಾಯನನು ಬರೆದ ಪ್ರಾಚೀನ ಗುಪ್ತಕಾಲದ ಪಠ್ಯ ಕಾಮಸೂತ್ರವನ್ನು ಸಂಸ್ಕೃತ ಸಾಹಿತ್ಯದಲ್ಲಿ ಮಾನವ ಲೈಂಗಿಕ ವರ್ತನೆ ಮೇಲಿನ ಪ್ರಮಾಣಿತ ಕೃತಿ ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ಗುಪ್ತ ಕಾಲದ ಹೆಸರಾಂತ ಗಣಿತಜ್ಞ-ಖಗೋಳಶಾಸ್ತ್ರಜ್ಞನಾಗಿದ್ದ ಆರ್ಯಭಟನು ಭೂಮಿಯು ದುಂಡಗಿದೆ ಮತ್ತು ತನ್ನ ಅಕ್ಷದ ಸುತ್ತ ಪರಿಭ್ರಮಿಸುತ್ತದೆ ಎಂದು ಪ್ರಸ್ತಾಪಿಸಿದನು. ಚಂದ್ರ ಮತ್ತು ಗ್ರಹಗಳು ಪ್ರತಿಬಿಂಬಿತ ಸೂರ್ಯನ ಬೆಳಕಿನಿಂದ ಹೊಳೆಯುತ್ತವೆ ಎಂದೂ ಅವನು ಪರಿಶೋಧಿಸಿದನು. ಚಾಲ್ತಿಯಲ್ಲಿದ್ದ ವಿಶ್ವಸೃಷ್ಟಿವಾದದ ಪ್ರಕಾರ ಗ್ರಹಣಗಳು ಹುಸಿ ಗ್ರಹಗಳಾದ ರಾಹು ಮತ್ತು ಕೇತುಗಳಿಂದ ಉಂಟಾಗುತ್ತಿದ್ದವು, ಆದರೆ ಆರ್ಯಭಟನು ಇವುಗಳ ಬದಲು ಗ್ರಹಣಗಳನ್ನು ಭೂಮಿ ಬೀರಿದ ಮತ್ತು ಭೂಮಿಯ ಮೇಲೆ ಬೀಳುವ ನೆರಳುಗಳ ಪರಿಭಾಷೆಯಲ್ಲಿ ವಿವರಿಸಿದನು.

ಇಂಡೊನೇಷ್ಯಾದ ಜಾವಾದಲ್ಲಿನ ಬೊರೊಬುದುರ್. ಗುಪ್ತರ ವಾಸ್ತುಶೈಲಿಯಲ್ಲಿ ಕಟ್ಟಡದ ವಿನ್ಯಾಸ ಪ್ರದೇಶದಲ್ಲಿ ಭಾರತದ ಪ್ರಭಾವವನ್ನು ಪ್ರತಿಬಿಂಬಿಸುತ್ತದೆ.

ಕಲೆ ಮತ್ತು ವಾಸ್ತುಶಿಲ್ಪ[ಬದಲಾಯಿಸಿ]

ಸಾಂಚಿಯಲ್ಲಿನ ಗುಪ್ತರ ಕಾಲದ ದೇವಸ್ಥಾನ, ಬೌದ್ಧ ವಾಸ್ತುಶೈಲಿಯ ಉದಾಹರಣೆ, ಕ್ರಿ.ಶ. ೫ನೇ ಶತಮಾನ.

ಗುಪ್ತರ ಕಾಲವನ್ನು ಸಾಮಾನ್ಯವಾಗಿ ಎಲ್ಲ ಪ್ರಮುಖ ಧಾರ್ಮಿಕ ಗುಂಪುಗಳಿಗೆ ಉತ್ತರ ಭಾರತೀಯ ಕಲೆಯ ಮಾದರಿ ಶಿಖರವೆಂದು ಪರಿಗಣಿಸಲಾಗಿದೆ. ಚಿತ್ರಕಲೆಯು ಸ್ಪಷ್ಟವಾಗಿ ವ್ಯಾಪಕವಾಗಿತ್ತಾದರೂ, ಉಳಿದಿರುವ ಕೃತಿಗಳು ಬಹುತೇಕ ಎಲ್ಲವೂ ಧಾರ್ಮಿಕ ಶಿಲ್ಪಗಳಾಗಿವೆ. ಈ ಕಾಲವು ಹಿಂದೂ ಕಲೆಯಲ್ಲಿ ಸಾಂಪ್ರದಾಯಿಕ ಕೆತ್ತಿದ ಕಲ್ಲಿನ ದೇವತೆ, ಜೊತೆಗೆ ಬುದ್ಧನ ಪ್ರತಿಮೆ ಮತ್ತು ಜೈನ ತೀರ್ಥಂಕರರ ಪ್ರತಿಮೆಗಳ ಉದಯವನ್ನು ಕಂಡಿತು, ಇವು ಹಲವುವೇಳೆ ಬಹಳ ದೊಡ್ಡ ಪ್ರಮಾಣದಲ್ಲಿ ಬಾಳುತ್ತಿದ್ದವು. ಮಥುರಾ ಮತ್ತು ಗಂಧಾರ ಶಿಲ್ಪಕಲೆಯ ಎರಡು ಮಹಾನ್ ಕೇಂದ್ರಗಳಾಗಿದ್ದವು. ಗಂಧಾರ ಗ್ರೀಕ್-ಬೌದ್ಧ ಕಲೆಯ ಕೇಂದ್ರವಾಗಿತ್ತು. ಎರಡೂ ಕೇಂದ್ರಗಳು ಶಿಲ್ಪಗಳನ್ನು ಉತ್ತರ ಭಾರತದ ಇತರ ಭಾಗಗಳಿಗೆ ರಫ್ತು ಮಾಡುತ್ತಿದ್ದವು. ಹಿಂದಿನ ಕುಶಾಣ ಸಾಮ್ರಾಜ್ಯಕ್ಕೆ ಭಿನ್ನವಾಗಿ ಈ ಸಾಮ್ರಾಜ್ಯದಲ್ಲಿ ರಾಜರ ಕಲಾತ್ಮಕ ಚಿತ್ರಣವಿರಲಿಲ್ಲ, ಬಹಳ ನವುರಾದ ಗುಪ್ತ ನಾಣ್ಯಗಳಲ್ಲೂ. ಪಶ್ಚಿಮ ಕ್ಷತ್ರಪರ ಕೆಲವು ನಾಣ್ಯಗಳು, ಅಥವಾ ಅವರಿಂದ ಪ್ರಭಾವಿತವಾದ ಕೃತಿಗಳು ಇದಕ್ಕೆ ಅಪವಾದ.

ಸ್ಥೂಲವಾದ ಗುಪ್ತರ ಶೈಲಿಯಲ್ಲಿರುವ ಉಳಿದುಕೊಂಡಿರುವ ಅತ್ಯಂತ ಪ್ರಸಿದ್ಧ ಕಟ್ಟಡಗಳೆಂದರೆ ಅಜಂತಾ (ಬೌದ್ಧ), ಎಲಿಫೆಂಟಾ (ಹಿಂದೂ), ಮತ್ತು ಎಲ್ಲೋರಾ (ಮಿಶ್ರ, ಜೈನ ಸೇರಿದಂತೆ) ಗುಹೆಗಳು, ವಾಸ್ತವದಲ್ಲಿ ಇವನ್ನು ನಂತರದ ರಾಜವಂಶದ ಅವಧಿಯಲ್ಲಿ ರಚಿಸಲಾಯಿತು, ಆದರೆ ಮುಖ್ಯವಾಗಿ ಗುಪ್ತ ಶೈಲಿಯ ಅಗಾಧತೆ ಮತ್ತು ಸಮತೋಲನವನ್ನು ಪ್ರತಿಬಿಂಬಿಸುತ್ತವೆ. ಅಜಂತಾ ಈ ಕಾಲ ಮತ್ತು ಸುತ್ತಲಿನ ಕಾಲಗಳ ಚಿತ್ರಕಲೆಯ ಇದುವರೆಗಿನ ಅತ್ಯಂತ ಗಮನಾರ್ಹ ಉಳಿಕೆಗಳನ್ನು ಹೊಂದಿದೆ, ಮತ್ತು ಸಂಭಾವ್ಯವಾಗಿ ದೀರ್ಘ ಬೆಳವಣಿಗೆ ಹೊಂದಿದ್ದ ಪ್ರಬುದ್ಧ ರೂಪವನ್ನು ತೋರಿಸುತ್ತದೆ, ಮುಖ್ಯವಾಗಿ ಅರಮನೆಗಳ ಚಿತ್ರಕಲೆಯಲ್ಲಿ. ಹಿಂದೂ ಉದಯಗಿರಿ ಗುಹೆಗಳು ವಾಸ್ತವವಾಗಿ ರಾಜವಂಶ ಮತ್ತು ಅದರ ಮಂತ್ರಿಗಳ ನಡುವಿನ ಸಂಬಂಧಗಳನ್ನು ದಾಖಲಿಸುತ್ತವೆ, ಮತ್ತು ದೇವ್‍ಗಢ್‍ದ ದಶಾವತಾರ ದೇವಸ್ಥಾನ ಒಂದು ಪ್ರಮುಖ ದೇವಸ್ಥಾನವಾಗಿದೆ, ಮತ್ತು ಪ್ರಮುಖ ಶಿಲ್ಪಗಳಿರುವ ಉಳಿದುಕೊಂಡಿರುವ ಅತ್ಯಂತ ಮುಂಚಿನ ದೇವಾಲಯಗಳಲ್ಲಿ ಒಂದು.

ನೋಡಿ[ಬದಲಾಯಿಸಿ]

  • [ಮೊದಲನೇ ಚಂದ್ರಗುಪ್ತ]
  • [ಭಾರತದ ಇತಿಹಾಸ]

ಉಲ್ಲೇಖಗಳು[ಬದಲಾಯಿಸಿ]