ಬುಧಗುಪ್ತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬುಧಗುಪ್ತ
ಮಾಲ್ವಾದಲ್ಲಿನ ಬುದ್ಧಗುಪ್ತನ ನಾಣ್ಯ.
11ನೇ ಗುಪ್ತ ಸಾಮ್ರಾಟ
ಆಳ್ವಿಕೆ c. 476 – c. 495 CE
ಪೂರ್ವಾಧಿಕಾರಿ ಎರಡನೇ ಕುಮಾರಗುಪ್ತ
ಉತ್ತರಾಧಿಕಾರಿ ನರಸಿಂಹಗುಪ್ತ

ಬುಧಗುಪ್ತ (ಆಳ್ವಿಕೆ ಕಾಲ ಸುಮಾರು ಕ್ರಿ.ಶ. ೪೭೬ - ೪೯೫) ಒಬ್ಬ ಗುಪ್ತ ಸಾಮ್ರಾಟ ಮತ್ತು ಎರಡನೇ ಕುಮಾರಗುಪ್ತನ ಉತ್ತರಾಧಿಕಾರಿಯಾಗಿದ್ದನು. ಇವನು ಪುರುಗುಪ್ತನ ಮಗ. ಇವನ ನಂತರ ನರಸಿಂಹಗುಪ್ತನು ಉತ್ತರಾಧಿಕಾರಿಯಾದನು.[೧] ಬುಧಗುಪ್ತನು ಕನ್ನೌಜ್‍ನ ಅರಸರೊಂದಿಗೆ ನಿಕಟ ಸಂಬಂಧ ಹೊಂದಿದ್ದನು ಮತ್ತು ಇವರು ಒಟ್ಟಾಗಿ ಉತ್ತರ ಭಾರತದ ಫಲವತ್ತಾದ ಬಯಲು ಪ್ರದೇಶಗಳಿಂದ ಹುಣರನ್ನು ಹೊರಗೋಡಿಸಲು ಪ್ರಯತ್ನಿಸಿದರು.

ಪುಂಡ್ರವರ್ಧನ ಭುಕ್ತಿಯು ಇವನ ಇಬ್ಬರು ಉಪರಿಕ ಮಹಾರಾಜರಾದ ಬ್ರಹ್ಮದತ್ತ ಮತ್ತು ಜಯದತ್ತರಿಂದ ಆಳಲ್ಪಡುತ್ತಿತ್ತು ಎಂದು ದಾಮೋದರ್‍ಪುರ್ ತಾಮ್ರಫಲಕ ಶಾಸನ ತಿಳಿಸುತ್ತದೆ.

ಇಬ್ಬರು ಸಹೋದರರಾದ ಮಾತ್ರಿವಿಷ್ಣು ಮತ್ತು ಧನ್ಯವಿಷ್ಣು ಇವರ ಎಯ್ರನ್ ಶಿಲಾ ಸ್ತಂಭ ಶಾಸನವು ಬುಧಗುಪ್ತನನ್ನು ತಮ್ಮ ಸಾಮ್ರಾಟ (ಭೂಪತಿ) ಎಂದು ಉಲ್ಲೇಖಿಸುತ್ತದೆ, ಮತ್ತು ಬುಧಗುಪ್ತನ ಅಡಿಯಲ್ಲಿ ಮಹಾರಾಜ ಸುರಶ್ಮಿಚಂದ್ರನು ಯಮುನಾ ಹಾಗೂ ನರ್ಮದಾ ನದಿಗಳ ನಡುವಿನ ಭೂಪ್ರದೇಶದಲ್ಲಿ ಆಡಳಿತ ನಡೆಸುತ್ತಿದ್ದನು. ಎಯ್ರನ್ ಸ್ತಂಭದ ಬುಧಗುಪ್ತ ಶಾಸನವು ಪಶ್ಚಿಮ ಮುಖದ ದೊಡ್ಡ ಏಕಶಿಲಾ ಕೆಂಪು ಮರಳುಗಲ್ಲಿನ ಸ್ತಂಭದ ಕೆಳಗಿನ ಹಾಗೂ ಚೌಕ ಭಾಗದ ಕಡೆಗೆ ಇದೆ ಮತ್ತು ಇದು ಎಯ್ರನ್‍ನಲ್ಲಿನ ಪಾಳುಬಿದ್ದ ದೇವಸ್ಥಾನಗಳ ಗುಂಪಿನ ಹತ್ತಿರ ಸ್ಥಿತವಾಗಿದೆ. ಈ ಶಾಸನವು ಕಾಲಿಂದಿ ಹಾಗೂ ನರ್ಮದಾ ನದಿಗಳ ನಡುವಿನ ಪ್ರದೇಶದ ಮೇಲೆ ಬುಧಗುಪ್ತನ ಆಳ್ವಿಕೆಯನ್ನು ಉಲ್ಲೇಖಿಸುತ್ತದೆ, ಮತ್ತು ಇದರ ಕಾಲ ಕ್ರಿ.ಶ. ೪೮೪-೪೮೫ ಎಂದು ನಿರ್ಧರಿಸಲಾಗಿದೆ. ಇದರ ಉದ್ದೇಶ ವಿಷ್ಣುವಿನ ಧ್ವಜಸ್ತಂಭ ಎಂದು ಕರೆಯಲಾದ ಸ್ತಂಭದ ನಿರ್ಮಾಣವನ್ನು ದಾಖಲಿಸುವುದು. ಈ ಸ್ತಂಭ ಸುಮಾರು ೪೮ ಅಡಿ ಎತ್ತರವಿದೆ. ಟಿ.ಎಸ್. ಬುರ್ಟ್ ೧೮೩೮ರಲ್ಲಿ ಈ ಶಾಸನವನ್ನು ಪತ್ತೆಹಚ್ಚಿದರು.

ಮಥುರಾದಲ್ಲಿನ ಬುದ್ಧ ವಿಗ್ರಹ ಶಾಸನವು ಬುಧಗುಪ್ತನ ಆಳ್ವಿಕೆಯ ಕಾಲದ್ದು ಎಂದು ನಿರ್ಧರಿಸಲಾಗಿದೆ. ಇವನ ಅಧಿಕಾರ ಉತ್ತರದಲ್ಲಿ ಮಥುರಾದ ವರೆಗೆ ವಿಸ್ತರಿಸಿತ್ತು ಎಂದು ಇದು ತೋರಿಸುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Raychaudhuri, H.C. (1972). Political History of Ancient India, Calcutta: University of Calcutta, p. 522