ವಿಷಯಕ್ಕೆ ಹೋಗು

ವಿಹಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಜಂತಾ ಗುಹೆಗಳು

ವಿಹಾರ ಪದವು ಸಾಮಾನ್ಯವಾಗಿ ಬೌದ್ಧ ಸಂನ್ಯಾಸಿಗಳ ವಿರಕ್ತಗೃಹವನ್ನು ಸೂಚಿಸುತ್ತದೆ. ಈ ಪರಿಕಲ್ಪನೆಯು ಪ್ರಾಚೀನವಾಗಿದೆ ಮತ್ತು ಮುಂಚಿನ ಸಂಸ್ಕೃತ ಹಾಗೂ ಪಾಲಿ ಪಠ್ಯಗಳಲ್ಲಿ, ಇದರರ್ಥ ಯಾವುದೇ ಸ್ಥಳ ಅಥವಾ ಸಂತೋಷ ಹಾಗೂ ಮನರಂಜನೆಗಾಗಿರುವ ಸೌಕರ್ಯಗಳ ವ್ಯವಸ್ಥೆ.[೧] ಈ ಪದವು ವಾಸ್ತುಶಿಲ್ಪ ಪರಿಕಲ್ಪನೆಯಾಗಿ ವಿಕಸನಗೊಂಡಿತು ಮತ್ತು ಇಲ್ಲಿ ಇದು ಭಿಕ್ಷುಗಳು ವಾಸಿಸುವ ಬೀಡುಗಳನ್ನು ಸೂಚಿಸುತ್ತದೆ, ವಿಶೇಷವಾಗಿ ಬೌದ್ಧಧರ್ಮದಲ್ಲಿ. ಇದು ಒಂದು ತೆರೆದ ಹಂಚಿಕೊಳ್ಳಲಾದ ಸ್ಥಳ ಅಥವಾ ಅಂಗಳವನ್ನು ಹೊಂದಿರುತ್ತಿತ್ತು. ಈ ಪದವು ಆಜೀವಿಕ, ಹಿಂದೂ ಮತ್ತು ಜೈನ ಸಂನ್ಯಾಸಿ ಸಾಹಿತ್ಯದಲ್ಲಿ ಕಾಣಬರುತ್ತದೆ, ಮತ್ತು ಸಾಮಾನ್ಯವಾಗಿ ಅಲೆದಾಡುವ ಭಿಕ್ಷುಗಳಿಗೆ ವಾರ್ಷಿಕ ಭಾರತೀಯ ಮುಂಗಾರಿನ ಅವಧಿಯಲ್ಲಿ ದೊರೆಯುವ ಆಶ್ರಯವನ್ನು ಸೂಚಿಸುತ್ತದೆ. ಭಾರತದ ಉತ್ತರದ ರಾಜ್ಯವಾದ ಬಿಹಾರವು ತನ್ನ ಹೆಸರನ್ನು "ವಿಹಾರ" ಶಬ್ದದಿಂದ ಪಡೆದಿದೆ, ಏಕೆಂದರೆ ಆ ಪ್ರದೇಶದಲ್ಲಿ ಅನೇಕ ಬೌದ್ಧ ವಿಹಾರಗಳಿದ್ದವು.

ವಿಹಾರ ಅಥವಾ ವಿಹಾರ ಸಭಾಂಗಣ ಪದವು ಭಾರತದ ವಾಸ್ತುಶೈಲಿಯಲ್ಲಿ ಹೆಚ್ಚು ನಿರ್ದಿಷ್ಟ ಅರ್ಥವನ್ನು ಹೊಂದಿದೆ, ವಿಶೇಷವಾಗಿ ಪ್ರಾಚೀನ ಭಾರತೀಯ ಕಲ್ಲು ಕೆತ್ತನೆಯ ವಾಸ್ತುಶಿಲ್ಪದಲ್ಲಿ. ಇಲ್ಲಿ ಇದರರ್ಥ ಒಂದು ಕೇಂದ್ರ ಸಭಾಂಗಣ ಮತ್ತು ಇದಕ್ಕೆ ಕೆಲವೊಮ್ಮೆ ಕಲ್ಲಿನಿಂದ ಕೆತ್ತಿದ ಹಾಸಿಗೆಗಳಿರುವ ಸಣ್ಣ ಕೊಠಡಿಗಳು ಸಂಪರ್ಕ ಹೊಂದಿದ್ದವು. ಕೆಲವು ಸಭಾಂಗಣಗಳು ಹಿಂದಿನ ಗೋಡೆಯ ಮಧ್ಯದಲ್ಲಿ ಸ್ಥಿತವಾದ ದೇವಮಂದಿರ ಕೊಠಡಿಯನ್ನು ಹೊಂದಿವೆ. ಇದು ಮುಂಚಿನ ಉದಾಹರಣೆಗಳಲ್ಲಿ ಸ್ತೂಪವನ್ನು, ಅಥವಾ ನಂತರ ಬುದ್ಧನ ವಿಗ್ರಹವನ್ನು ಹೊಂದಿರುತ್ತಿತ್ತು. ಅಜಂತಾ ಗುಹೆಗಳು, ಔರಂಗಾಬಾದ್ ಗುಹೆಗಳು, ಕಾರ್ಲ ಗುಹೆಗಳು ಮತ್ತು ಕಾನ್ಹೇರಿ ಗುಹೆಗಳಂತಹ ಪ್ರಾತಿನಿಧಿಕ ದೊಡ್ಡ ನಿವೇಶನಗಳು ಹಲವಾರು ವಿಹಾರಗಳನ್ನು ಹೊಂದಿವೆ. ಕೆಲವು ಹತ್ತಿರದಲ್ಲಿ ಒಂದು ಚೈತ್ಯ ಅಥವಾ ಪೂಜಾ ಸಭಾಂಗಣವನ್ನು ಒಳಗೊಂಡಿದ್ದವು. ಮೂಲತಃ ವಿಹಾರವು ಮಳೆ ಬಂದಾಗ ಭಿಕ್ಷುಗಳಿಗೆ ಆಶ್ರಯ ಒದಗಿಸುವ ಉದ್ದೇಶ ಹೊಂದಿತ್ತು.

ವೈದಿಕೋತ್ತರ ಕಾಲದಲ್ಲಿ ವಿಹಾರದ ಅರ್ಥ ಹೆಚ್ಚು ನಿರ್ದಿಷ್ಟವಾಗಿ ಭಾರತದ ತಪಸ್ವಿ ಸಂಪ್ರದಾಯಗಳಲ್ಲಿ ಒಂದು ಬಗೆಯ ವಿಶ್ರಾಂತಿಗೃಹ ಅಥವಾ ದೇವಾಲಯ ಅಥವಾ ವಿರಕ್ತಗೃಹ, ವಿಶೇಷವಾಗಿ ಭಿಕ್ಷುಗಳ ಒಂದು ಗುಂಪಿಗಾಗಿ. ಇದು ವಿಶೇಷವಾಗಿ ದೇವಾಲಯಗಳಾಗಿ ಬಳಸಲಾಗುತ್ತಿದ್ದ ಅಥವಾ ಭಿಕ್ಷುಗಳು ಭೇಟಿಯಾಗಿ ಮತ್ತು ಕೆಲವರು ನಡೆದಾಡುತ್ತಿದ್ದ ಸಭಾಂಗಣವನ್ನು ಸೂಚಿಸುತ್ತಿತ್ತು. ಪ್ರದರ್ಶನ ಕಲೆಗಳ ವಿಷಯದಲ್ಲಿ, ವಿಹಾರ ಪದದ ಅರ್ಥ ಭೇಟಿಯಾಗಲು, ಪ್ರದರ್ಶಿಸಲು ಅಥವಾ ವಿಶ್ರಾಂತಿ ಪಡೆಯುವ ನಾಟಕಮಂದಿರ, ಧರ್ಮ ಸಮಾಜ ಅಥವಾ ದೇವಾಲಯ ಆವರಣ. ನಂತರ ಇದು ಬೌದ್ಧ ಧರ್ಮ, ಹಿಂದೂ ಧರ್ಮ ಮತ್ತು ಜೈನ ಧರ್ಮದಲ್ಲಿ ಒಂದು ಬಗೆಯ ದೇವಾಲಯ ಅಥವಾ ವಿರಕ್ತಗೃಹ ಕಟ್ಟಡವನ್ನು ಸೂಚಿಸುತ್ತಿತ್ತು.

ಉಲ್ಲೇಖಗಳು[ಬದಲಾಯಿಸಿ]

  1. Nayanjot Lahiri (2015). Ashoka in Ancient India. Harvard University Press. pp. 181–183. ISBN 978-0-674-91525-1.
"https://kn.wikipedia.org/w/index.php?title=ವಿಹಾರ&oldid=881116" ಇಂದ ಪಡೆಯಲ್ಪಟ್ಟಿದೆ