ವಿಷಯಕ್ಕೆ ಹೋಗು

ಅಹಿಚ್ಛತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಹಿಚ್ಛತ್ರ ಕೋಟೆ

ಅಹಿಚ್ಛತ್ರ - ಭಾರತದ ಪ್ರಾಚೀನ ಚರಿತ್ರೆಯಲ್ಲಿ ಪ್ರಸಿದ್ಧವಾಗಿದ್ದ ಈ ಪಟ್ಟಣ ಉತ್ತರ ಪ್ರದೇಶದಲ್ಲಿ ಬರೇಲಿಯಿಂದ ೨೦ ಮೈಲಿ ದೂರದಲ್ಲಿರುವ ಇಂದಿನ ರಾಮನಗರ. ಇದು ಉತ್ತರ ಪಾಂಚಾಲ ದೇಶದ ರಾಜಧಾನಿ ಆಗಿತ್ತು. ಕ್ರಿಸ್ತ ಪೂರ್ವ ಕಾಲದ ಶಾಸನಗಳು ಇದನ್ನು ಅಧಿಛತ್ರವೆಂದು ಹೆಸರಿಸಿವೆ. ಟಾಲೆಮಿ ಅದಿಸದ್ರವೆಂದಿದ್ದಾನೆ. ಮಹಾಭಾರತಾದಿ ಗ್ರಂಥಗಳಲ್ಲಿ ಅಧಿಕ್ಷೇತ್ರ, ಛತ್ರವತಿ, ಮುಂತಾದ ನಾಮಭೇದದಿಂದಲೂ ಇದು ಕಾಣಿಸಿಕೊಳ್ಳುತ್ತದೆ. ಚೀನಿ ಯಾತ್ರಿಕ ಹುಯೆನ್‍ತ್ಸಾಂಗ್[] ಅಹಿಚಿತಲೊ ಎಂದು ಇದನ್ನು ನಿರ್ದೇಶಿಸಿದ್ದಾನೆ. ಒಮ್ಮೆ ಇಲ್ಲಿ ನಿದ್ರಿಸುತ್ತಿದ್ದ ಆದಿ ರಾಜನ ತಲೆಯ ಮೇಲೆ ಸರ್ಪವೊಂದು ಪ್ರಸರಿಸಿದುದರಿಂದ ಅಹಿಚ್ಛತ್ರವೆಂಬ ಹೆಸರು ಬಂತೆಂದು ಸ್ಥಳೀಯ ದಂತಕಥೆ. ಜೈನ ಬೌದ್ಧ ಸಾಹಿತ್ಯಗಳಲ್ಲಿ ಈ ಕಥೆಯ ಉಲ್ಲೇಖವಿದೆ. ಇಲ್ಲಿ ದೊರೆತ ಮುದ್ರೆಗಳಿಗೆ ಇದು ಗುಪ್ತ ಸಾಮ್ರಾಜ್ಯದ ಭಕ್ತಿಯಾಗಿತ್ತೆಂದು ತೋರುತ್ತದೆ. ಕದಂಬ ಮಯೂರಶರ್ಮ ಈ ನಗರದಿಂದ ಬ್ರಾಹ್ಮಣ ಕುಟುಂಬಗಳನ್ನು ಕರ್ನಾಟಕಕ್ಕೆ ಬರಮಾಡಿಕೊಂಡನೆಂದು ಶಾಸನಗಳಲ್ಲಿ ಉಕ್ತವಾಗಿದೆ. ಗಂಗ ವಿಷ್ಣುಗೋಪ ಈ ನಗರದಲ್ಲಿ ವಾಸವಾಗಿದ್ದು ಇಂದ್ರನ ವರದಿಂದ ಐರಾವತವನ್ನು ಪಡೆದ ಕಥೆ, ಗಂಗ ವಂಶ ವೃತ್ತಾಂತದಲ್ಲಿ ಬರುತ್ತದೆ. ಪ್ರಾಕ್ತನ ಶಾಸ್ರ್ತಜ್ಞರು ಇಲ್ಲಿ ಭೂಶೋಧನೆಯನ್ನು ನಡೆಸಿ ಅನೇಕ ಚಾರಿತ್ರಿಕ ವಿಷಯಗಳನ್ನು ಹೊರಗೆಡವಿದ್ದಾರೆ.

ಕ್ಯಾಪ್ಟನ್ ಹಾಜ್ಡ್‍ಸನ್ ಇಲ್ಲಿನ ಕೆಲವು ಅವಶೇಷಗಳನ್ನು ಮೊದಲು ನೋಡಿ ವರ್ಣಿಸಿದ. ಕನ್ನಿಂಗ್‍ಹ್ಯಾಮ್ ಮತ್ತು ಪ್ಯೂರರ್ ಇಲ್ಲಿ ಉತ್ಖನನ ನಡೆಸಿದ ಮೇಲೆ, ಭಾರತೀಯ ಪುರಾತತ್ತ್ವ ಸರ್ವೇಕ್ಷಣದವರ ಭೂಶೋಧನೆಯಲ್ಲಿ (೧೯೪೦-೪೪), ಕ್ರಿ.ಪೂ. ೩೦೦ ಕ್ಕಿಂತಲೂ ಹಿಂದಿನಿಂದ ಕ್ರಿ.ಶ. ೧೧೦೦ರ ವರೆಗಿನ, ಅವಿಚ್ಛಿನ್ನವಾಗಿ ವ್ಯಾಪಿಸಿದ ಒಂಬತ್ತು ಸಾಂಸ್ಕೃತಿಕ ಪರಂಪರೆಗಳು ಸ್ಪಷ್ಟವಾಗಿ ಕಂಡುಬಂದಿವೆ. ನೀಲ ವರ್ಣದ ಚಿತ್ತಾರವನ್ನೊಳಗೊಂಡ ಬೂದು ಬಣ್ಣದ, ಅತಿ ಹೊಳಪಿನ ಎತ್ತರ ಭಾರತೀಯ ಕಪ್ಪುಬಣ್ಣದ ಮತ್ತು ಇತರ ವಿವಿಧ ರೀತಿಯ ಮೃತ್‍ಪಾತ್ರೆಗಳು, ಮಣಿಗಳು, ಸುಟ್ಟಮಣ್ಣಿನ ಆಕೃತಿಗಳು, ಸಮದ್ವಿಬಾಹುತ್ರಿಭುಜಾಕೃತಿಯುಳ್ಳ ಕೋಟೆ, ಮಣ್ಣಿನ ಮೂರ್ತಿಗಳುಳ್ಳ ಹಲವು ಸ್ತರಗಳ ಮೇಲೆ ಕಟ್ಟಿದ ದೇವಾಲಯಗಳು, ಪಾಂಚಲ, ಕುಶಾನ, ಅಚ್ಯುತ, ಆದಿವರಾಹ, ವಿಗ್ರಹರಾಜರ ನಾಣ್ಯಗಳೆ ಮುಂತಾದವು ಗಮನಾರ್ಹ.

ಉಲ್ಲೇಖಗಳು

[ಬದಲಾಯಿಸಿ]


  1. http://www.bestindiatours.com/early-historical/achichchhatra.html