ವಸುಬಂಧು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಸುಬಂಧು (ಪ್ರವ. ಕ್ರಿ.ಶ 4ರಿಂದ 5ನೇ ಶತಮಾನ) ಗಾಂಧಾರದ ಒಬ್ಬ ಬಹಳ ಪ್ರಭಾವಿ ಬೌದ್ಧ ಸಂನ್ಯಾಸಿ ಮತ್ತು ವಿದ್ವಾಂಸನಾಗಿದ್ದನು. ವಸುಬಂಧುವು ಸರ್ವಾಸ್ತಿವಾದ ಮತ್ತು ಸೌತ್ರಾಂತಿಕ ಪಂಥಗಳ ದೃಷ್ಟಿಕೋನದಿಂದ ಅಭಿಧರ್ಮದ ಮೇಲೆ ಬರೆದ ತತ್ವಶಾಸ್ತ್ರಜ್ಞನಾಗಿದ್ದನು. ಮಹಾಯಾನ ಬೌದ್ಧಧರ್ಮಕ್ಕೆ ಮತಾಂತರವಾದ ಮೇಲೆ, ತನ್ನ ಮಲಸಹೋದರ ಅಸಂಗನೊಂದಿಗೆ ಇವನು ಯೋಗಾಚಾರ ಪಂಥದ ಮುಖ್ಯ ಸಂಸ್ಥಾಪಕರಲ್ಲಿ ಒಬ್ಬನಾಗಿದ್ದನು.

ವಸುಬಂಧುವಿನ ಅಭಿಧರ್ಮಕೋಶಭಾಷ್ಯವನ್ನು ಟಿಬೇಟಿ ಮತ್ತು ಪೂರ್ವ ಏಷ್ಯನ್ ಬೌದ್ಧ ಧರ್ಮದಲ್ಲಿ ಮಹಾಯಾನಯೇತರ ಅಭಿಧರ್ಮ ತತ್ವದ ಪ್ರಧಾನ ಮೂಲವಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಇವನ ತತ್ವಶಾಸ್ತ್ರೀಯ ಗದ್ಯ ಕೃತಿಗಳು ಭಾರತೀಯ ಯೋಗಾಚಾರ ತತ್ವಮೀಮಾಂಸೆಯಾದ "ವಿಜ್ಞಪ್ತಿ ಮಾತ್ರ"ದ ಮಾನದಂಡವನ್ನು ವಿವರವಾಗಿ ಪ್ರತಿಪಾದಿಸುತ್ತವೆ, ಇದನ್ನು ಜ್ಞಾನಮೀಮಾಂಸಾ ಆದರ್ಶವಾದದ[೧] ಒಂದು ರೂಪವೆಂದು ವಿವರಿಸಲಾಗಿದೆ. ಇದಲ್ಲದೇ, ಇವನು ಹಲವಾರು ಭಾಷ್ಯಗಳು, ತರ್ಕ, ವಾದ ಮತ್ತು ಭಕ್ತಿ ಕಾವ್ಯದ ಮೇಲಿನ ಕೃತಿಗಳನ್ನು ಬರೆದನು.

ವಸುಬಂಧು ಭಾರತೀಯ ಬೌದ್ಧ ತತ್ವಶಾಸ್ತ್ರ ಸಂಪ್ರದಾಯದಲ್ಲಿನ ಅತ್ಯಂತ ಪ್ರಭಾವೀ ಚಿಂತಕರಲ್ಲಿ ಒಬ್ಬನಾಗಿದ್ದನು.

ಪೇಶಾವರದಲ್ಲಿ ಬ್ರಾಹ್ಮಣನಾಗಿ ಹುಟ್ಟಿದ ವಸುಬಂಧು ಯೋಗಾಚಾರ ತತ್ವದ ಸ್ಥಾಪನೆಯಲ್ಲಿ ಮತ್ತೊಬ್ಬ ಪ್ರಮುಖ ವ್ಯಕ್ತಿಯಾಗಿದ್ದ ಅಸಂಗನ ಮಲಸಹೋದರನಾಗಿದ್ದನು. ಇವನು ಮತ್ತು ಅಸಂಗ "ಆರು ಆಭರಣಗಳು" ಅಥವಾ ಬುದ್ಧನ ಬೋಧನೆಗಳ ಮೇಲಿನ ಆರು ಮಹಾನ್ ಭಾಷ್ಯಕಾರರ ಸದಸ್ಯರಾಗಿದ್ದಾರೆ. ಇವನು ಸಮುದ್ರಗುಪ್ತನ ತಂದೆ ಮೊದಲನೇ ಚಂದ್ರಗುಪ್ತನ ಸಮಕಾಲೀನನಾಗಿದ್ದನು. ಈ ಮಾಹಿತಿಯು ವಸುಬಂಧುವನ್ನು ತಾತ್ಕಾಲಿಕವಾಗಿ ಕ್ರಿ.ಶ. ೪ನೇ ಶತಮಾನದಲ್ಲಿ ಇರಿಸುತ್ತದೆ. ವಸುಬಂಧುವಿನ ಅತ್ಯಂತ ಮುಂಚಿನ ಜೀವನಚರಿತ್ರೆಯನ್ನು ಪರಮಾರ್ಥನು ಚೀನಿ ಭಾಷೆಗೆ ಅನುವಾದಿಸಿದನು. ವಸುಬಂಧುವು ಆರಂಭದಲ್ಲಿ ಗಾಂಧಾರದಲ್ಲಿ ಪ್ರಬಲವಾಗಿದ್ದ ಬೌದ್ಧ ಸರ್ವಾಸ್ತಿವಾದ (ಅಥವಾ ವೈಭಾಷಿಕ) ಪಂಥದೊಂದಿಗೆ ಕಲಿತನು, ಮತ್ತು ನಂತರ ಸಂಪ್ರದಾಯಬದ್ಧ ಸರ್ವಾಸ್ತಿವಾದ ಶಾಖೆಯ ಮುಖಂಡರೊಂದಿಗೆ ಕಲಿಯಲು ಕಾಶ್ಮೀರಕ್ಕೆ ಹೋದನು. ಮನೆಗೆ ಮರಳಿದ ನಂತರ ಇವನು ಅಭಿಧರ್ಮದ ಮೇಲೆ ಶಿಕ್ಷಣ ನೀಡಿದನು ಮತ್ತು ಅಭಿಧರ್ಮಕೋಶಕಾರಿಕಾವನ್ನು ರಚಿಸಿದನು. ಇದು ಸರ್ವಾಸ್ತಿವಾದ ಅಭಿಧರ್ಮ ಬೋಧನೆಗಳ ಗದ್ಯ ಸಾರವಾಗಿತ್ತು, ಅಂದರೆ ಅನುಭವಗಳ ಎಲ್ಲ ಅಂಶಗಳ ವಿಶ್ಲೇಷಣೆಯಾಗಿತ್ತು.

ಉಲ್ಲೇಖಗಳು[ಬದಲಾಯಿಸಿ]

  1. Lusthaus, Dan, 2002. Buddhist Phenomenology: A Philosophical Investigation of Yogācāra Philosophy and the Ch’eng Wei-shih lun, New York, NY: RoutledgeCurzon.
"https://kn.wikipedia.org/w/index.php?title=ವಸುಬಂಧು&oldid=796494" ಇಂದ ಪಡೆಯಲ್ಪಟ್ಟಿದೆ