ವಿಷಯಕ್ಕೆ ಹೋಗು

ಗಂಧಕದ ಡೈಆಕ್ಸೈಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗಂಧಕದ ಡೈಆಕ್ಸೈಡ್‍ನ ಕಂಕಾಲ ಸೂತ್ರ

ಗಂಧಕದ ಡೈಆಕ್ಸೈಡ್ ಒಂದು ರಾಸಾಯನಿಕ ಸಂಯುಕ್ತವಾಗಿದ್ದು ಇದರ ಅಣುಸೂತ್ರ (molecular formula) SO2. ಪ್ರೀಸ್ಟ್ಲಿ ಎಂಬ ವಿಜ್ಞಾನಿ ಆಲಿವ್ ಎಣ್ಣೆಯನ್ನು ಸಾರಯುತ ಸಲ್ಫ್ಯೂರಿಕ್ ಆಮ್ಲದೊಡನೆ ಕಾಯಿಸಿ ಇದನ್ನು ಮೊದಲು ತಯಾರಿಸಿದ (1775). ಅಗ್ನಿಪರ್ವತಗಳು ಹೊರಹಾಕುವ ಅನಿಲಗಳಲ್ಲಿ ಮತ್ತು ಕೆಲವು ಖನಿಜೋದಕಗಳಲ್ಲಿ ಗಂಧಕದ ಡೈಆಕ್ಸೈಡಿದೆ. ಕಲ್ಲಿದ್ದಲಿನಲ್ಲಿ ಗಂಧಕದ ಸಂಯುಕ್ತಗಳು ಇವೆಯಷ್ಟೆ. ಕೈಗಾರಿಕಾ ಉದ್ದೇಶಗಳಿಗಾಗಿ ಕಲ್ಲಿದ್ದಲನ್ನು ಸುಟ್ಟಾಗ ಅದರಲ್ಲಿದ್ದ ಗಂಧಕದ ಸಂಯುಕ್ತಗಳು ಗಂಧಕದ ಡೈಆಕ್ಸೈಡಾಗಿ ವಾಯುಮಂಡಲವನ್ನು ಸೇರುವುದು. ನಗರ ಪ್ರದೇಶಗಳ ವಾತಾವರಣದಲ್ಲಿ ಗಂಧಕದ ಡೈಆಕ್ಸೈಡ್ ಇರಲು ಅಲ್ಲಿ ಕೈಗಾರಿಕೆಗಳು ಕೇಂದ್ರೀಕೃತವಾಗಿರುವುದೇ ಕಾರಣ.

ತಯಾರಿಕೆ

[ಬದಲಾಯಿಸಿ]

ಪ್ರಯೋಗಶಾಲೆ ವಿಧಾನಗಳು

[ಬದಲಾಯಿಸಿ]

ತಾಮ್ರದ ರೇಕುಗಳನ್ನು ಸಾರಯುತ ಸಲ್ಫ್ಯೂರಿಕ್ ಆಮ್ಲದೊಡನೆ ಕಾಯಿಸಿ ಗಂಧಕದ ಡೈಆಕ್ಸೈಡನ್ನು ಪಡೆಯಬಹುದು. ಇದು ಪ್ರಯೋಗಶಾಲೆ ವಿಧಾನ. ಆಗ ಮುಂದೆ ತೋರಿಸಿರುವ ಕ್ರಿಯೆ ನಡೆದು ಗಂಧಕದ ಡೈಆಕ್ಸೈಡು ಬಿಡುಗಡೆಯಾಗುವುದು ಎಂಬುದು ಸಾಮಾನ್ಯ ತಿಳಿವಳಿಕೆ.

Cu + 2H2SO4 → CuSO4 + 2H2O + SO2­↑

ಆದರೆ ಇಲ್ಲಿ ನಡೆಯುವ ಕ್ರಿಯೆಗಳು ಈ ಸಮೀಕರಣ ಸೂಚಿಸವಷ್ಟು ಸರಳವಲ್ಲ. ಪ್ರಾಯಶಃ ಸಲ್ಫ್ಯೂರಿಕ್ ಆಮ್ಲ ತಾಮ್ರವನ್ನು ಏಕಕಾಲದಲ್ಲಿ ಕ್ಯುಪ್ರಸ್ ಸಲ್ಫೈಡ್ ಮತ್ತು ಕ್ಯುಪ್ರಿಕ್ ಆಕ್ಸೈಡುಗಳಾಗಿ ಉತ್ಕರ್ಷಿಸುವುದು. ಅನಂತರ ಕ್ಯುಪ್ರಿಕ್ ಆಕ್ಸೈಡ್ ಮಾತ್ರ ಸಲ್ಫ್ಯೂರಿಕ್ ಆಮ್ಲದಲ್ಲಿ ವಿಲೀನವಾಗಿ ತಾಮ್ರದ ಸಲ್ಫೇಟಾಗುತ್ತದೆ. ನಿವ್ವಳ ಕ್ರಿಯೆಯನ್ನು ಮುಂದೆ ತೋರಿಸಿರುವ ಸಮೀಕರಣ ಸೂಚಿಸುವುದು.

6Cu + 6H2SO4 → 4CuSO4 + Cu2S + 6H2O + SO2­↑

ಇದು ಸಂಭವನೀಯ. ಏಕೆಂದರೆ ಪ್ರಯೋಗದ ಬಳಿಕ ಉಪಕರಣದಲ್ಲಿ ಉಳಿಯುವ ಮಿಶ್ರಣ ಕಪ್ಪಾಗಿರುತ್ತದೆ. ಉತ್ಪತ್ತಿಯಾದ ಕ್ಯುಪ್ರಸ್ ಸಲ್ಫೈಡಿನಿಂದ ಹೀಗಾಗುವುದು.

ಸೋಡಿಯಂ ಸಲ್ಫೈಟ್ ಅಥವಾ ಬೈಸಲ್ಫೈಟುಗಳು ಸಾರರಿಕ್ತ ಹೈಡ್ರೊಕ್ಲೋರಿಕ್ ಆಮ್ಲದೊಡನೆ ವರ್ತಿಸಿದಾಗಲೂ ಗಂಧಕ ಡೈಆಕ್ಸೈಡ್ ಬಿಡುಗಡೆಯಾಗುವುದು. ಇದು ಕೂಡ ಪ್ರಯೋಗಶಾಲೆಯ ವಿಧಾನವಾಗಿ ಬಳಸಲು ಸೂಕ್ತವಾಗಿದೆ.

ಇತರ ವಿಧಾನಗಳು

[ಬದಲಾಯಿಸಿ]

೧. ಗಂಧಕದ ಡೈಆಕ್ಸೈಡ್ ಬಲು ಉಪಯುಕ್ತ ಅನಿಲ. ಆದ್ದರಿಂದ ಅದರ ಉತ್ಪಾದನೆಗೆ ಪ್ರಾಶಸ್ತ್ಯ ಉಂಟು. ಇದಕ್ಕಾಗಿ ರೂಢಿಯಲ್ಲಿರುವ ವಿಧಾನಗಳು ಹಲವು. ಸಲ್ಫೈಡು ಅದುರುಗಳನ್ನು ಗಾಳಿಯಲ್ಲಿ ಹುರಿದಾಗ ಗಂಧಕದ ಡೈಆಕ್ಸೈಡ್ ಗಣನೀಯ ಮೊತ್ತದಲ್ಲಿ ಹೊರಬೀಳುವುದು.[] ಇದನ್ನು ನೀರಿನಲ್ಲಿ ವಿಲೀನ ಮಾಡುತ್ತಾರೆ. ಅನಂತರ ದ್ರಾವಣವನ್ನು ಕಾಯಿಸಿದರೆ ಗಂಧಕದ ಡೈಆಕ್ಸೈಡ್ ಮರಳಿ ಬರುತ್ತದೆ. ಅನಿಲವನ್ನು ಸಾರಯುತ ಸಲ್ಫ್ಯೂರಿಕ್ ಆಮ್ಲದಿಂದ ಶುಷ್ಕಗೊಳಿಸಿ 2.5 ವಾಯುಮಂಡಲಗಳ ಒತ್ತಡಕ್ಕೆ ಗುರಿಪಡಿಸಿದರೆ ದ್ರವೀಕರಿಸುವುದು. ಈ ದ್ರವ್ಯವನ್ನು ಉಕ್ಕಿನ ಕೊಳಾಯಿಗಳಲ್ಲಿ ಕೂಡಿಟ್ಟು ರವಾನಿಸುವರು.

ಜಿಪ್ಸಂನಿಂದ ಕೂಡ ಗಂಧಕದ ಡೈಆಕ್ಸೈಡನ್ನು ಮಾಡಿಕೊಳ್ಳಬಹುದು. ಒಂದು ಸಿಮೆಂಟ್ ಕುಲುಮೆಯಲ್ಲಿ ಜಿಪ್ಸಮನ್ನು ಪುಡಿಮಾಡಿದ ಇದ್ದಲು ಮತ್ತು ಜೇಡಿಮಣ್ಣುಗಳೊಡನೆ 12000 ಸೆಂ.ಉಷ್ಣತೆಗೆ ಕಾಯಿಸಿದರೆ ಗಂಧಕದ ಡೈಆಕ್ಸೈಡ್ ಮತ್ತು ಕಾರ್ಬನ್ ಡೈಆಕ್ಸೈಡುಗಳ ಮಿಶ್ರಣ ಒದಗುತ್ತದೆ. ಸಿಮೆಂಟು ಇನ್ನೊಂದು ಉತ್ಪನ್ನ.

2CaSO4 + C + x.SiO2.y.Al2O3 → 2SO2­↑ + CO2↑ + 2CaO.x.SiO2.yAl2O3
               ಜೇಡಿಮಣ್ಣು                          ಸಿಮೆಂಟ್

ಕಾರ್ಬನ್ ಡೈಆಕ್ಸೈಡಿನಿಂದ ಬೇರ್ಪಡಿಸಿ ಪಡೆದ ಗಂಧಕದ ಡೈಆಕ್ಸೈಡನ್ನು ಸಲ್ಫ್ಯೂರಿಕ್ ಆಮ್ಲದ ಉತ್ಪಾದನೆಗೆ ವಿನಿಯೋಗಿಸುವುದು ವಾಡಿಕೆ.[] ಜಿಪ್ಸಮಿನ (CaSO4.2H2O) ಬದಲು ಆನ್‍ಹೈಡ್ರೇಟನ್ನು (CaSO4) ಬಳಸಿದರೂ ಬಾಧಕವಿಲ್ಲ.

೨. ಗಂಧಕವನ್ನು ಗಾಳಿಯಲ್ಲಿ ಉರಿಸಿದರೆ ಗಂಧಕದ ಡೈಆಕ್ಸೈಡ್ ಮತ್ತು ಟ್ರೈಆಕ್ಸೈಡುಗಳ ಮಿಶ್ರಣ ಬರುವುದು. ಸಲ್ಫ್ಯೂರಿಕ್ ಆಮ್ಲದ ತಯಾರಿಕೆಗೆ ಇದು ಪ್ರಶಸ್ತ. ಗಂಧಕದ ಡೈಆಕ್ಸೈಡೇ ಬೇಕಾಗಿದ್ದರೆ ಅನಿಲ ಮಿಶ್ರಣವನ್ನು ಸೋಡಿಯಂ ಹೈಡ್ರಾಕ್ಸೈಡಿನ ದ್ರಾವಣದಿಂದ ಹೀರಿಸಬಹುದು. ಆಗ ಸಲ್ಫೇಟ್ (ಅಥವಾ ಬೈಸಲ್ಫೇಟ್) ಮತ್ತು ಸಲ್ಫೈಟುಗಳ (ಅಥವಾ ಬೈಸಲ್ಫೈಟ್) ಮಿಶ್ರಣವಾಗುವುದು. ಸಲ್ಫೇಟ್ ಅಥವಾ ಬೈಸಲ್ಫೇಟುಗಳು ಆಮ್ಲದಿಂದ ವಿಭಜಿತವಾಗುವುದಿಲ್ಲ. ಆದರೆ ಸಲ್ಫೈಟ್ ಮತ್ತು ಬೈಸಲ್ಫೈಟುಗಳು ಆಮ್ಲದೊಡನೆ ವರ್ತಿಸಿ ಗಂಧಕದ ಡೈಆಕ್ಸೈಡನ್ನು ಕೊಡುತ್ತವೆ ಎಂದು ಹಿಂದೆಯೇ ತಿಳಿಸಿದೆ. ಆದ್ದರಿಂದ ಈ ಲವಣ ಮಿಶ್ರಣವನ್ನು ಒಳಗೊಂಡ ದ್ರಾವಣಕ್ಕೆ ಸಾರರಿಕ್ತ ಹೈಡ್ರೊಕ್ಲೋರಿಕ್ ಆಮ್ಲವನ್ನು ಸೇರಿಸಿದರೆ ಇವು ಮಾತ್ರ ವರ್ತಿಸಿ ಶುದ್ಧವಾದ ಗಂಧಕದ ಡೈಆಕ್ಸೈಡನ್ನು ಬಿಡುಗಡೆ ಮಾಡುವುವು. ಇದನ್ನು ಶುಷ್ಕಗೊಳಿಸಿ ಶೇಖರಿಸಬಹುದು.

೩. ದ್ರವ ಗಂಧಕದ ಡೈಆಕ್ಸೈಡನ್ನು ತಯಾರಿಸಲು ಮೇಲೆ ವಿವರಿಸಿದ ವಿಧಾನಗಳಿಂದ ಉತ್ಪಾದಿಸಿದ ಅನಿಲ ತಕ್ಕುದಲ್ಲ. ಇದರ ಸಲುವಾಗಿಯೇ ರೂಪಿತವಾದ ಜರ್ಮನ್ ವಿಧಾನವೊಂದಿದೆ. ಓಲಿಯಂ ಎಂಬುದು 22% ಗಂಧಕದ ಟ್ರೈಆಕ್ಸೈಡನ್ನು ವಿಲೀನ ಮಾಡಿಕೊಂಡಿರುವ (98.3%) ಸಲ್ಫ್ಯೂರಿಕ್ ಆಮ್ಲ. ಇದನ್ನು ಗಂಧಕದೊಡನೆ 1100 ಸೆಂ.ಗೆ ಕಾಯಿಸಿದರೆ ಗಂಧಕದ ಟ್ರೈಆಕ್ಸೈಡು ಗಂಧಕದ ಡೈಆಕ್ಸೈಡಿಗೆ ಅಪಕರ್ಷಿತವಾಗುವುದು.

2SO3 + S → 3SO2

ಗಂಧಕದ ಟ್ರೈಆಕ್ಸೈಡಿನ ಪ್ರಮಾಣ 5%-10% ಗೆ ಇಳಿಯುವವರೆಗೆ ಕ್ರಿಯೆಯನ್ನು ಮುಂದುವರಿಸುತ್ತಾರೆ. ಅನಂತರ ಆಮ್ಲಕ್ಕೆ ಸಾಕಷ್ಟು ಗಂಧಕದ ಟ್ರೈಆಕ್ಸೈಡನ್ನು ಕೂಡಿಸಿ ಮತ್ತೆ ಓಲಿಯಮನ್ನು ಮಾಡಿಕೊಳ್ಳುವರು. ಇದು ಹಿಂದಿನಂತೆಯೇ ವಿನಿಯೋಗವಾಗುವುದು.

ಭೌತಲಕ್ಷಣಗಳು

[ಬದಲಾಯಿಸಿ]

ಗಂಧಕದ ಡೈಆಕ್ಸೈಡ್ ಬಣ್ಣವಿಲ್ಲದ ಅನಿಲ. ಇದಕ್ಕೆ ಘಾಟು ವಾಸನೆ ಉಂಟು.[] ಇದು ವಿಷವಾಯು. ಗಾಳಿಗಿಂತ 2.2 ರಷ್ಟು ಭಾರವಾಗಿದೆ. ಇದನ್ನು ದ್ರವೀಕರಿಸುವುದು ಸುಲಭ. ಉಪ್ಪು ಮತ್ತು ಮಂಜುಗಡ್ಡೆಯ ಶೈತ್ಯ ಮಿಶ್ರಣದಲ್ಲಿಟ್ಟರೆ ಇದು ದ್ರವವಾಗುವುದು. ಇನ್ನೂ ತಣಿಸಿದರೆ ಘನೀಭವಿಸುವುದು. ಇದು ಬಿಳಿಯ ಘನ. ದ್ರವನ ಬಿಂದು -760 ಸೆಂ. ಕುದಿಬಿಂದು –100 ಸೆಂ. ಇದು ವಿದ್ಯುದ್ವಾಹಕವಲ್ಲ. ನೀರಿನಂತೆ ಅನೇಕ ವಸ್ತುಗಳನ್ನು ವಿಲೀನ ಮಾಡಿಕೊಳ್ಳಬಲ್ಲದು. ಫಲಿತ ದ್ರಾವಣಗಳು ವಿದ್ಯುದ್ವಾಹಕಗಳು. ದ್ರವ ಗಂಧಕದ ಡೈಆಕ್ಸೈಡ್ ಮಾರುಕಟ್ಟೆಯ ವಸ್ತು.

ನೀರು ಹೇಗೆ ಅಕಾರ್ಬನಿಕ ಲವಣಗಳೊಡನೆ ಸಂಕಲನವಾಗಿ ಹೈಡ್ರೇಟುಗಳನ್ನು ಉಂಟುಮಾಡುವುದೋ ಹಾಗೆಯೇ ಸ್ಫಟಿಕಾಂಗವಾಗಿ ಗಂಧಕದ ಡೈಆಕ್ಸೈಡಿನ ಅಣುಗಳನ್ನು ಧರಿಸಿರುವ ಲವಣಗಳುಂಟು. ಇವುಗಳಿಗೆ ಸೋಡಿಯಂ ಅಯೋಡೈಡ್, ಅಲ್ಯೂಮಿನಿಯಂ ಕ್ಲೋರೈಡ್ ಮತ್ತು ಪೊಟ್ಯಾಸಿಯಂ ಥಯೊಸಯನೇಟ್ ಉದಾಹರಣೆಗಳು:

NaI.2SO2, AlCl3.SO2
NaI.4SO2, 9KCNS.SO2

ಗಂಧಕದ ಡೈಆಕ್ಸೈಡ್ ನೀರಿನಲ್ಲಿ ಅತಿದ್ರಾವ್ಯ.[] ಸಾಮಾನ್ಯ ಉಷ್ಣತೆಯಲ್ಲಿ ನೀರು ತನ್ನ ಗಾತ್ರದ ಸುಮಾರು 40ರಷ್ಟು ಅನಿಲವನ್ನು ವಿಲೀನ ಮಾಡಿಕೊಳ್ಳಬಲ್ಲದು. ಆಗ ಸಲ್ಫ್ಯೂರಸ್ ಆಮ್ಲ ಉಂಟಾಗುತ್ತದೆ.

H2O + SO2 → H2SO3

ಇದನ್ನು ಚಿಲುಮೆ ಪ್ರಯೋಗದಿಂದ ತೋರಿಸಬಹುದು. ದ್ರಾವಣವನ್ನು ಕುದಿಸಿದರೆ ಅನಿಲ ಹೊರಬೀಳುವುದು.

ರಾಸಾಯನಿಕ ಗುಣಗಳು

[ಬದಲಾಯಿಸಿ]

ಗಂಧಕದ ಡೈಆಕ್ಸೈಡ್ ದಹನಾನುಕೂಲಿಯಲ್ಲ. ಆದರೆ ಉರಿಯುತ್ತಿರುವ ಮ್ಯಾಗ್ನೀಸಿಯಂ ತಂತಿ ಹಿಂದಿನಂತೆಯೇ ಪ್ರಜ್ವಲಿಸುವುದು. ಈ ಲೋಹ ಉರಿದಾಗ ವಿಪರೀತ ಉಷ್ಣ ಹೊರಬೀಳುತ್ತದೆ. ಇದರ ದೆಸೆಯಿಂದ ಡೈಆಕ್ಸೈಡ್ ವಿಭಜಿಸುವುದು. ಬಿಡುಗಡೆಯಾದ ಆಕ್ಸಿಜನ್ನಿನಲ್ಲಿ ಲೋಹದ ದಹನ ಮುಂದುವರಿದು ಮ್ಯಾಗ್ನೀಸಿಯಂ ಆಕ್ಸೈಡಾಗುತ್ತದೆ. ಅನಿಲವಿದ್ದ ಜಾಡಿಯ ಪಾರ್ಶ್ವಗಳಲ್ಲಿ ಗಂಧಕದ ಹಳದಿ ಸಂಗ್ರಹವನ್ನು ಕಾಣಬಹುದು. ಉನ್ನತ ಉಷ್ಣತೆಯಲ್ಲಿ ಎಂದರೆ ಸುಮಾರು 12000 ಸೆಂ. ಸನಿಹದಲ್ಲಿ ಅಥವಾ ವಿದ್ಯುತ್ಕಿಡಿ ಹಾಯಿಸಿದಾಗ ವಿಭಜಿಸಿ ಗಂಧಕದ ಟ್ರೈಆಕ್ಸೈಡ್ ಮತ್ತು ಗಂಧಕಗಳನ್ನು ಕೊಡುತ್ತದೆ. ಗಂಧಕದ ಡೈಆಕ್ಸೈಡ್ ಅಂಸತೃಪ್ತ (unsaturated) ವಸ್ತು. ಆದ್ದರಿಂದ ಸೂಕ್ತ ಪ್ರಯೋಗ ಸ್ಥಿತಿಯಲ್ಲಿ ಕ್ಲೋರಿನ್, ಆಕ್ಸಿಜನ್ ಮತ್ತು ಮ್ಯಾಂಗನೀಸ್ ಡೈಆಕ್ಸೈಡುಗಳೊಡನೆ ಕೂಡಿಕೊಳ್ಳಬಲ್ಲುದು. ಕ್ಲೋರಿನ್ನಿನೊಡನೆ ಸಂಕಲನವಾಗಲು ಸೂರ್ಯಪ್ರಕಾಶವಿರಬೇಕು. ಪಟುಗೊಳಿಸಿದ ಕಾರ್ಬನ್ ಅಥವಾ ಕರ್ಪೂರ ಇದ್ದರೂ ಸಾಕು.[] ಇವು ವೇಗವರ್ಧಕಗಳು. ಸಲ್ಫ್ಯೂರಿಲ್ ಕ್ಲೋರೈಡ್ (SO2Cl2) ಉತ್ಪನ್ನ. ಇದು ದ್ರವವಸ್ತು. ಆಕ್ಸಿಜನ್ನಿನೊಡನೆ ಸಂಯೋಜಿಸಲು 4500-5000 ಸೆಂ. ಉಷ್ಣತಾ ಮಿತಿಯಲ್ಲಿಟ್ಟಿರುವ ಪ್ಲ್ಯಾಟಿನಂ, ವೆನೇಡಿಯಂ ಪೆಂಟಾಕ್ಸೈಡ್ (V2O5) ವೇಗವರ್ಧಕ ಅಗತ್ಯ. ಗಂಧಕದ ಟ್ರೈಆಕ್ಸೈಡು ಉತ್ಪನ್ನ. ಮ್ಯಾಂಗನೀಸ್ ಡೈಆಕ್ಸೈಡ್ ವಿಲಂಬಿತವಾಗಿರುವ ನೀರಿನ ಮೂಲಕ ಗಂಧಕದ ಡೈಆಕ್ಸೈಡನ್ನು ಹಾಯಿಸಿದರೆ ಮ್ಯಾಂಗನೀಸ್ ಡೈಥಯೊನೇಟ್ (MnS2O6) ಉಂಟಾಗುವುದು.[]

ಗಂಧಕದ ಡೈಆಕ್ಸೈಡ್ ಆಮ್ಲೀಯ ಆಕ್ಸೈಡು. ಆದ್ದರಿಂದಲೇ ಕ್ಷಾರೀಯ ದ್ರಾವಣಗಳು ಇದನ್ನು ಹೀರಿಕೊಂಡು ಸಲ್ಫೈಟ್ ಮತ್ತು ಬೈಸಲ್ಫೈಟುಗಳ ಮಿಶ್ರಣವನ್ನು ಕೊಡುವುದು. ಗಂಧಕದ ಡೈಆಕ್ಸೈಡ್ ಉತ್ಕರ್ಷಣಕಾರಿ. ಹೈಡ್ರೊಜನ್ ಸಲ್ಫೈಡಿನ ದ್ರಾವಣದಿಂದ ಗಂಧಕವನ್ನು ಒತ್ತರಿಸುವುದು ಮತ್ತು ನವಜಾತ ಹೈಡ್ರೊಜನ್ನನ್ನು ನೀರಿಗೆ ಪರಿವರ್ತಿಸುವುದು ಅದರ ಉತ್ಕರ್ಷಣ ಗುಣಕ್ಕೆ ನಿದರ್ಶನ. ಗಂಧಕದ ಡೈಆಕ್ಸೈಡ್ ಸಂದರ್ಭಾನುಸಾರ ಅಪಕರ್ಷಣಕಾರಿಯಾಗಿಯೂ ವರ್ತಿಸುತ್ತದೆ. ಉದಾಹರಣೆಗೆ, ನೀರಿನ ಸಂಪರ್ಕದಲ್ಲಿ ಹ್ಯಾಲೊಜನ್ನುಗಳು (ಫ್ಲೊರಿನ್ ಹೊರತು) ತಮ್ಮ ಹೈಡ್ರಾಮ್ಲಗಳಾಗುತ್ತವೆ. ಆಮ್ಲಮಿಶ್ರಿತ ಪೊಟ್ಯಾಸಿಯಂ ಪರ್ಮ್ಯಾಂಗನೇಟಿನ ಊದಾ ಬಣ್ಣ ಮಾಯಾವಾಗಿ ಅದು ಮ್ಯಾಂಗನೀಸ್ ಲವಣಕ್ಕೆ ಅಪಕರ್ಷಿತವಾಗುವುದು. ಆಮ್ಲಮಿಶ್ರಿತ ಪೊಟ್ಯಾಸಿಯಂ ಡೈಕ್ರೊಮೇಟಿನ ಕಿತ್ತಲೆಹಣ್ಣಿನ ಬಣ್ಣ ಹಸುರು ಬಣ್ಣಕ್ಕೆ ತಿರುಗುವುದು, ಕ್ರೋಮಿಕ್ ಲವಣ ಉಂಟಾಗುವುದರಿಂದ ಹೀಗಾಗುತ್ತದೆ. ಫೆರಿಕ್ ಲವಣಗಳು ಫೆರಸ್ ಸ್ಥಿತಿಗೆ ಅಪಕರ್ಷಿಸಲ್ಪಡುವುವು.[] ಪ್ರತಿಯೊಂದು ಸಂದರ್ಭದಲ್ಲೂ ಗಂಧಕದ ಡೈಆಕ್ಸೈಡ್ ಸಲ್ಫ್ಯೂರಿಕ್ ಆಮ್ಲವಾಗಿ ಉತ್ಕರ್ಷಿತವಾಗುವುದು.

ಉಪಯೋಗಗಳು

[ಬದಲಾಯಿಸಿ]

ಗಂಧಕದ ಡೈಆಕ್ಸೈಡ್ ಚಲುವೆಕಾರಿಯೂ ಹೌದು. ತೇವಾಂಶವಿದ್ದರೆ ಮಾತ್ರ ಇದು ಸಸ್ಯಜನ್ಯ ಬಣ್ಣಗಳನ್ನು ತಾತ್ಕಾಲಿಕವಾಗಿ ಹೋಗಲಾಡಿಸಬಲ್ಲದು. ಇದರ ಕಾರ್ಯವಿಧಾನ ಎರಡು ರೀತಿಯದು. ಗಂಧಕದ ಡೈಆಕ್ಸೈಡ್ ನೀರಿನೊಡನೆ ಸೇರಿ ಸಲ್ಫ್ಯೂರಸ್ ಆಮ್ಲ ಕೊಡುವುದಷ್ಟೆ. ಇದು ಮತ್ತಷ್ಟು ನೀರಿನೋಡನೆ ವರ್ತಿಸಿ ಸಲ್ಫ್ಯೂರಿಕ್ ಆಮ್ಲವನ್ನು ಕೊಡುವುದಲ್ಲದೆ ನವಜಾತ ಹೈಡ್ರೊಜನ್ನನ್ನೂ ಉಂಟುಮಾಡುತ್ತದೆ. ವರ್ಣದ್ರವ್ಯ ಹೈಡ್ರೊಜನ್ನಿನಿಂದ ಅಪಕರ್ಷಿತವಾಗಿ ಬಣ್ಣ ಕಳೆದುಕೊಳ್ಳುವುದು.

SO2 + H2O → H2SO3

H2SO3 + H2O → H2SO4 + 2[H]

ವರ್ಣದ್ರವ್ಯ + [H] → ನಿರ್ವರ್ಣವಸ್ತು

ಹೀಗೆ ಚಲುವೆಯಾದ ವಸ್ತುವನ್ನು ಗಾಳಿಗೆ ಒಡ್ಡಿದಾಗ ಅಥವಾ ಯಾವುದಾದರೂ ಒಂದು ಉತ್ಕರ್ಷಣಕಾರಿಯ ಸಾರರಿಕ್ತ ದ್ರಾವಣದ ಸಂಪರ್ಕದಲ್ಲಿ ಬಿಟ್ಟಾಗ ಬಣ್ಣ ಮರುಕಳಿಸುತ್ತದೆ. ವರ್ಣದ್ರವ್ಯ ಗಂಧಕದ ಡೈಆಕ್ಸೈಡಿನ ಜೊತೆಗೂಡಿ ಸಂಕಲನ ಸಂಯುಕ್ತವಾಗಬಹುದು. ಹೀಗಾಗದಾಗ ಸಾರರಿಕ್ತ ಆಮ್ಲ ಸೇರಿದರೆ ಸಂಕಲನ ವಿಭಜಿತವಾಗಿ ಬಣ್ಣ ವಾಪಸಾಗುವುದು.

ಸಲ್ಫ್ಯೂರಿಕ್ ಆಮ್ಲದ ಉತ್ಪಾದನೆ ಇದರ ಪ್ರಧಾನ ಉಪಯೋಗ. ವಿಷಮ ಕ್ರಿಮಿನಾಶಕವಾಗಿಯೂ, ಕಬ್ಬಿನ ಸಕ್ಕರೆಯ ಸಂಸ್ಕರಣಕಾರಿಯಾಗಿಯೂ ಇದು ಬೇಕು. ಉಣ್ಣೆ, ರೇಷ್ಮೆ, ಕೂದಲು, ಹುಲ್ಲು ಇತ್ಯಾದಿಗಳನ್ನು ಕ್ಲೋರಿನ್ನಿನಿಂದ ಚಲುವೆ ಮಾಡುವಂತಿಲ್ಲ. ಏಕೆಂದರೆ ಇವನ್ನು ಕ್ಲೋರಿನ್ ಗಾಸಿಪಡಿಸುವುದು. ಇದಕ್ಕಾಗಿ ಗಂಧಕದ ಡೈಆಕ್ಸೈಡನ್ನು ಬಳಸುವುದು ಕ್ಷೇಮ. ಕ್ಲೋರಿನ್ನಿನಿಂದ ಚಲುವೆ ಮಾಡಿದ ಬಟ್ಟೆಗಳ ಮೇಲೆ ಹೆಚ್ಚುವರಿಯಾದ ಕ್ಲೋರಿನ್ ಉಳಿದಿರುತ್ತದೆ. ಇದರಿಂದ ನೂಲು ಹಾಳಾಗುವುದು. ಈ ಅನಗತ್ಯ ಕ್ಲೋರಿನ್ನನ್ನೇ ತೆಗೆದುಹಾಕುವುದು ಗಂಧಕದ ಡೈ ಆಕ್ಸೈಡಿನಿಂದ. ಇಂಥ ವಸ್ತುಗಳಿಗೆ ಕ್ಲೋರಿನ್ ಹಾರಕಗಳು (ಆಂಟಿಕ್ಲೋರ್ಸ್) ಎಂದು ಹೆಸರು. ಅಯೊಡೀನ್, ರಂಜಕ ಮತ್ತು ಗಂಧಕಗಳಿಗೆ ಲೀನಕಾರಿಯಾಗಿ, ಶೈತ್ಯಕಾರಕ ಯಂತ್ರಗಳಲ್ಲಿ ಮತ್ತು ಪೆಟ್ರೋಲಿಯಮಿನ ಶುದ್ಧೀಕರಣಕ್ಕೆ ದ್ರವ ಗಂಧಕದ ಡೈಆಕ್ಸೈಡು ವಿನಿಯೋಗವಾಗುತ್ತಿದೆ. ಅಪಕರ್ಷಣಕಾರಿಯಾದ ಸೋಡಿಯಂ ಸಲ್ಫೈಟ್,[] ಕಾಗದದ ಪಲ್ಪನ್ನು ಚಲುವೆ ಮಾಡಲು ಅಗತ್ಯವಾದ ಕ್ಯಾಲ್ಸಿಯಂ ಬೈಸಲ್ಫೈಟ್[] ಇವನ್ನು ತಯಾರಿಸಲು ಗಂಧಕದ ಡೈ ಆಕ್ಸೈಡ್ ಉಪಯುಕ್ತ.[೧೦]

ಉಲ್ಲೇಖಗಳು

[ಬದಲಾಯಿಸಿ]
  1. Shriver, Atkins. Inorganic Chemistry, Fifth Edition. W. H. Freeman and Company; New York, 2010; p. 414.
  2. Müller, Hermann. "Sulfur Dioxide". Ullmann's Encyclopedia of Industrial Chemistry. Weinheim: Wiley-VCH. doi:10.1002/14356007.a25_569. {{cite encyclopedia}}: Cite has empty unknown parameter: |authors= (help)
  3. Sulfur dioxide Archived 2019-12-30 ವೇಬ್ಯಾಕ್ ಮೆಷಿನ್ ನಲ್ಲಿ., U.S. National Library of Medicine
  4. Lide, David R., ed. (2006). CRC Handbook of Chemistry and Physics (87th ed.). Boca Raton, FL: CRC Press. ISBN 0-8493-0487-3.
  5. F. Fehér (1963). "Sulfuryl Chloride". In G. Brauer (ed.). Handbook of Preparative Inorganic Chemistry, 2nd Ed. Vol. 1. NY, NY: Academic Press. pp. 382–384.
  6. J. Meyer and W. Schramm, Z. Anorg. Chem., 132 (1923) 226. Cited in: A Comprehensive Treatise on Theoretical and Inorganic Chemistry, by J.W. Meller, John Wiley and Sons, New York, Vol. XII, p. 225.
  7. "Information archivée dans le Web" (PDF).
  8. Weil, Edward D.; Sandler, Stanley R. (1999). "Sulfur Compounds". In Kroschwitz, Jacqueline I. (ed.). Kirk-Othmer Concise Encyclopedia of Chemical Technology (4th ed.). New York: John Wiley & Sons, Inc. p. 1937. ISBN 978-0471419617.
  9. Patt, Rudolf; Kordsachia, Othar; Süttinger, Richard; Ohtani, Yoshito; Hoesch, Jochen F.; Ehrler, Peter; Eichinger, Rudolf; Holik, Herbert; Hamm (2000). "Paper and Pulp". Ullmann's Encyclopedia of Industrial Chemistry. Weinheim: Wiley-VCH. doi:10.1002/14356007.a18_545. {{cite encyclopedia}}: Cite has empty unknown parameter: |authors= (help)
  10. Karatza, Despina; Prisciandaro, Marina; Lancia, Amedeo; Musmarra, Dino (2010-06-01). "Sulfite Oxidation Catalyzed by Cobalt Ions in Flue Gas Desulfurization Processes". Journal of the Air & Waste Management Association. 60 (6): 675–680. doi:10.3155/1047-3289.60.6.675. ISSN 1096-2247. PMID 20564992. S2CID 9127556.

ಹೊರಗಿನ ಕೊಂಡಿಗಳು

[ಬದಲಾಯಿಸಿ]