ಕರ್ಪೂರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕರ್ಪೂರ[೧][೨]
Structural formula of camphor
Structural formula of camphor
Ball and stick model of camphor ((1R,4R)-1-methyl,heptan)
Ball and stick model of camphor ((1R,4R)-1-methyl,heptan)
ಹೆಸರುಗಳು
ಐಯುಪಿಎಸಿ ಹೆಸರು
1,7,7-Trimethylbicyclo[2.2.1]heptan-2-one
Other names
2-Bornanone; Bornan-2-one; 2-Camphanone; Formosa
ಗುಣಗಳು
ಆಣ್ವಿಕ ಸೂತ್ರ C10H16O
ಮೋಲಾರ್ ದ್ರವ್ಯರಾಶಿ ೧೫೨.೨೩ g mol−1
ಸಾಂದ್ರತೆ 0.990 g cm−3
ಕರಗು ಬಿಂದು

175-177 °C, 448-450 K, 347-351 °F

ಕುದಿ ಬಿಂದು

204 °C, 477 K, 399 °F

ಕರಗುವಿಕೆ ನೀರಿನಲ್ಲಿ 1.2 g dm−3
ಕರಗುವಿಕೆ acetone ~2500 g dm−3
ಕರಗುವಿಕೆ acetic acid ~2000 g dm−3
ಕರಗುವಿಕೆ diethyl ether ~2000 g dm−3
ಕರಗುವಿಕೆ chloroform ~1000 g dm−3
ಕರಗುವಿಕೆ ethanol ~1000 g dm−3
log P 2.089
ಸಂಬಂಧಿತ ಸಂಯುಕ್ತಗಳು
Related
Related compounds
Except where otherwise noted, data are given for materials in their standard state (at 25 °C [77 °F], 100 kPa).

>

Infobox references
ಕರ್ಪೂರ

ಕರ್ಪೂರವು ಒಂದು ಬಿಳಿ, ಕೊಂಚ ಜಿಗುಟಾದ ತೀಕ್ಷ್ನವಾಸನೆಯುಳ್ಳ ದ್ರವ್ಯ. ರಾಸಾಯನಿಕವಾಗಿ ಇದು ಟರ್ಪೆನಾಯ್ಡ್ ಗುಂಪಿಗೆ ಸೇರಿದೆ. ಕರ್ಪೂರವು ಬೋರ್ನಿಯೋ ಮತ್ತು ಟೈವಾನ್‌ಗಳಲ್ಲಿ ಹೆಚ್ಚಾಗಿರುವ ಕ್ಯಾಂಫರ್ ಲಾರೆಲ್ ಎಂಬ ಮರಗಳ ತಿರುಳಿನಲ್ಲಿ ಸಿಗುತ್ತದೆ. ಅಲ್ಲದೆ ಈಗ ಕರ್ಪೂರವನ್ನು ಸಾಮಾನ್ಯವಾಗಿ ರಾಸಾಯನಿಕ ಸಂಯೋಜನೆಯಿಂದ ಕೃತಕವಾಗಿ ಉತ್ಪಾದಿಸಲಾಗುತ್ತಿದೆ. ಟರ್ಪೆಂಟೈನ್ ತೈಲದಿಂದ ಸಹ ಕರ್ಪೂರವನ್ನು ಉತ್ಪಾದಿಸಬಹುದು.

ಕರ್ಪುರ: ಒಂದು ದ್ವಿಚಕ್ರೀಯ (ಬೈ ಸೈಕ್ಲಿಕ್). ಸಂತೃಪ್ತ (ಸ್ಯಾಚುರೇಟೆಡ್) ಟರ್ಪಿನ್ ಕೀಟೋನ್ (ಕ್ಯಾಂಫರ್). ಇದರ ಆಕರ ಸಿನಮೋಮಮ್ ಕ್ಯಾಂಫೊರ ಮರ. ರೂಢಿಯಲ್ಲಿ ಇದನ್ನು ಕರ್ಪುರದ ಮರ ಎಂದು ಕರೆಯುತ್ತಾರೆ

ಕರ್ಪುರದ ಉತ್ಪಾದನೆ[ಬದಲಾಯಿಸಿ]

ಸಾಮಾನ್ಯವಾಗಿ ೫-೬ ವರ್ಷಗಳ ವರೆಗೆ ಬೆಳೆದ ಕರ್ಪುರದ ಮರದ ಎಲೆ ಹಾಗೂ ಬೊಡ್ಡೆಗಳನ್ನು ಕಡಿದು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ ಅದರ ಹುಡಿಯನ್ನು ತಯಾರಿಸುತ್ತಾರೆ. ಹುಡಿರಾಶಿಯನ್ನು ದೊಡ್ಡ ಕೊಳಾಯಿಯಲ್ಲಿ ಹಾಕಿ ಕುಲುಮೆಯಲ್ಲಿ ಕಾಯಿಸುತ್ತಾರೆ. ಆಗ ಈ ಹುಡಿ ಬೇಗನೆ ಬಾಷ್ಪೀಭವನ ಹೊಂದುವಂಥ ವಸ್ತುವಾಗುತ್ತದೆ. ತರುವಾಯ ಇದನ್ನು ಹಬೆಯೊಂದಿಗೆ ಆಸವೀಕರಿಸುವುರು. ಹೀಗೆ ದೊರೆತ ದ್ರಾವಣಕ್ಕೆ ತಂಪು ತಗುಲಿಸಲು ಇಚ್ಛಿತ ಕರ್ಪುರ ಬಣ್ಣರಹಿತ ಸ್ಫಟಿಕದ ರೂಪದಲ್ಲಿ ದೊರೆಯುತ್ತದೆ. ಸ್ಫಟಿಕ ಹಾಗೂ ದ್ರಾವಣದ ಈ ಮಿಶ್ರಣವನ್ನು ಸೋಸುವುದರಿಂದ ಸ್ಫಟಿಕಗಳು ಬೇರ್ಪಟ್ಟು ಎಣ್ಣೆಯಂಥ ಪದಾರ್ಥ ಉಳಿಯುತ್ತದೆ. ಇದರಲ್ಲಿ ಅಶುದ್ಧ ಕರ್ಪುರ ಹೆಚ್ಚಿನ ಮೊತ್ತದಲ್ಲಿ ಇರುವುದು. ಈ ಎಣ್ಣೆಯಂಥ ಪದಾರ್ಥವನ್ನು ಆಂಶಿಕ ಆಸವೀಕರಣಕ್ಕೊಳಪಡಿಸಿ ೧೮೦ಲಿ-೧೯೦ಲಿ ಸೆಂ. ಉಷ್ಣತಾಮಾನದ ವರೆಗೆ ದೊರೆಯುವ ದ್ರಾವಣವನ್ನು ತಂಪಾಗಿಸುವುದರಿಂದ ಕರ್ಪುರದ ಸ್ಫಟಿಕಗಳು ಪುನಃ ರೂಪುಗೊಳ್ಳುತ್ತವೆ. ಸ್ಫಟಿಕಗಳಿಂದ ಬೇರ್ಪಟ್ಟ ಎಣ್ಣೆಯಂಥ ಪದಾರ್ಥದಲ್ಲಿರುವ ಕರ್ಪುರದ ಅಂಶ ಕಡಿಮೆ. ಇದರಿಂದ ಮತ್ತೆ ಕರ್ಪುರದ ಸ್ಫಟಿಕಗಳನ್ನು ತಯಾರಿಸಲಾಗುವುದಿಲ್ಲ. ಇದನ್ನು ಸಾಬೂನು ತಯಾರಿಕೆಯಲ್ಲಿ ಉಪಯೋಗಿಸುವುದುಂಟು. ಇಂಥ ಸಾಬೂನು ಪರಿಮಳಯುಕ್ತವಾಗಿರುವುದು.

ರಾಸಾಯನಿಕ ಸಂಯೋಜಿತ ಕರ್ಪುರ[ಬದಲಾಯಿಸಿ]

ನಿಸರ್ಗದಿಂದ ದೊರೆಯುವ ಕರ್ಪುರ ಸಾರ್ವಜನಿಕ ಬೇಡಿಕೆಯನ್ನು ಪುರೈಸಲಾರದು. ಆದ್ದರಿಂದ ಇದನ್ನು ರಾಸಾಯನಿಕ ಸಂಯೋಜನೆಯಿಂದ ಉತ್ಪಾದಿಸಬೇಕಾಗುತ್ತದೆ. ರಾಸಾಯನಿಕ ರೀತಿಯಿಂದ ಕರ್ಪುರದ ಅಣುವಿನ ರಚನೆಯನ್ನು ಕಂಡುಹಿಡಿಯಲು ದೀರ್ಘ ಕಾಲ ಬೇಕಾಯಿತು. ಕೊನೆಗೆ ಈ ಕಾರ್ಯದಲ್ಲಿ ವಿಜ್ಞಾನಿ ಬ್ರೆಟ್ ಎಂಬಾತ ಸಫಲನಾದ (೧೯೦೩).

ಆಮೇಲೆ ರಾಸಾಯನಿಕ ಸಂಯೋಜನೆಯ ಆಧಾರದ ಮೇಲಿಂದ ಅನೇಕ ವಿಧಾನಗಳು ಬಳಕೆಯಲ್ಲಿ ಬಂದವು. ಆದರೆ ಅವುಗಳಲ್ಲಿ ಬಲು ಕಡಿಮೆ ವೆಚ್ಚ ತಗಲುವ ವಿಧಾನ ಈ ಕೆಳಗಿನಂತಿದೆ. ದೇವದಾರು ಮರದ ಟರ್ಪೆಂಟೈನ್ ತೈಲದಿಂದ ಇದು ಪ್ರಾರಂಭವಾಗುತ್ತದೆ. ಟರ್ಪೆಂಟೈನ್ ತೈಲದ ಆಂಶಿಕ ಆಸವೀಕರಣದಲ್ಲಿ ೧೫೦೦-೧೬೦೦ ಸೆಂ. ಉಷ್ಣತಾ ಮಾನದಲ್ಲಿ ದೊರೆಯುವ ದ್ರವ ಪದಾರ್ಥ ಪೈನೀನ್ ಇದನ್ನು ಒಣ ಹೈಡ್ರೊಕ್ಲೋರಿಕ್ ಆಮ್ಲ ವಾಯುವಿನೊಂದಿಗೆ ಸಂಯೋಗಿಸುವುದರಿಂದ ದೊರೆಯುವ ಮಿಶ್ರಣದ ಉಷ್ಣತಾಮಾನವನ್ನು ೧೮೦ ಸೆಂ.ಗೆ ಇಳಿಸುವುದರಿಂದ ಬೋರ್ನಿಲ್ ಕ್ಲೋರೈಡ್ ದೊರೆಯುತ್ತದೆ. ಇದನ್ನು ಸೋಡಿಯಂ ಫಿನಾಕ್ಸೈಡಿನೊಂದಿಗೆ ಸಂಯೋಗಿಸಿ ಆ ಮಿಶ್ರಣವನ್ನು ೧೮೦೦ ಸೆಂ. ಉಷ್ಣತಾಮಾನದಲ್ಲಿ ಕಾಯಿಸು ವುದರಿಂದ ಕ್ಯಾಂಫೀನ್ ತಯಾರಾಗುತ್ತದೆ. ಇದನ್ನು ಗ್ಲೇಸಿಯಲ್ ಅಸಿಟಿಕ್ ಆಮ್ಲ ಮತ್ತು ಸಲ್ಫ್ಯೂರಿಕ್ ಆಮ್ಲದೊಂದಿಗೆ ಸಂಯೋಜಿತಗೊಳಿಸುವುದರಿಂದ ಬೋರ್ನಿಲ್ ಮತ್ತು ಐಸೋ ಬೋರ್ನಿಯೋಲ್ ಅಸಿಟೇಟುಗಳ ಮಿಶ್ರಣ ತಯಾರಾಗುತ್ತದೆ. ಈ ಮಿಶ್ರಣವನ್ನು ಮದ್ಯಾರ್ಕ ದಲ್ಲಿ ಕರಗಿಸಿದ ಪೊಟಾಸಿಯಂ ಹೈಡ್ರಾಕ್ಸೈಡಿನೊಂದಿಗೆ ಜಲ ವಿಶ್ಲೇಷಣೆ ಮಾಡಲಾಗಿ ಬೋರ್ನಿಯೋಲ್ ಮತ್ತು ಐಸೊ ಬೋರ್ನಿಯೋಲು ಗಳ ಮಿಶ್ರಣ ದೊರೆಯುತ್ತದೆ. ಇದನ್ನು ನೈಟ್ರೊ ಬೆಂಝೀನ್ ಅಸ್ತಿತ್ವದಲ್ಲಿ ಉತ್ಕರ್ ಷಿಸಲಾಗಿ ತಯಾರಾಗುವ ವಸ್ತುವೇ ರಾಸಾಯನಿಕ ಸಂಯೋಚಿತ ಕರ್ಪುರ.

ಉಪಯೋಗಗಳು[ಬದಲಾಯಿಸಿ]

ಕರ್ಪೂರವು ಸುವಾಸಿತ ದ್ರವ್ಯವಾಗಿದ್ದು ಧಾರ್ಮಿಕ ಕ್ರಿಯೆಗಳಲ್ಲಿ, ಔಷಧಿಗಳಲ್ಲಿ ಮತ್ತು ಕೆಲವೊಮ್ಮೆ ಅಡುಗೆಯಲ್ಲಿ ಸಹ ಬಳಸುವರು. ಅಲ್ಲದೆ ಪಟಾಕಿಗಳಲ್ಲಿ, ಶರೀರ ಲೇಪನದಲ್ಲಿ ಸಹ ಕರ್ಪೂರದ ಉಪಯೋಗವಿದೆ. ಕರ್ಪೂರದಲ್ಲಿ ತುಕ್ಕನ್ನು ವಿರೋಧಿಸುವ ಗುಣವಿರುವುದರಿಂದ ಅದನ್ನು ಉಕ್ಕಿನ ಸಲಕರಣೆಗಳನ್ನಿಡುವ ಪೆಟ್ಟಿಗೆಗಳಲ್ಲಿ ಬಳಸುವರು. ನೆಗಡಿ, ಕೆಮ್ಮುಗಳ ಉಪಶಮನಕ್ಕಾಗಿ ಬಳಸುವ ಕೆಲ ಔಷಧಿಗಳಲ್ಲಿ ಇದರ ಉಪಯೋಗವಿದೆ. ಕರ್ಪೂರದ ಒಂದು ಭಿನ್ನರೂಪವಾದ ಪಚ್ಚ ಕರ್ಪೂರವನ್ನು ಭಾರತೀಯರು ಸಿಹಿಪದಾರ್ಥಗಳ ತಯಾರಿಕೆಯಲ್ಲಿ ಬಳಸುವರು. ಬಲು ಸಣ್ಣ ಪ್ರಮಾಣದಲ್ಲಿ ಕರ್ಪೂರವನ್ನು ಅಹಾರದಲ್ಲಿ ಅಥವಾ ಔಷಧಿಯಾಗಿ ಸೇವಿಸಬಹುದಾದರೂ ಹೆಚ್ಚಿನ ಪ್ರಮಾಣದ ಸೇವನೆಯು ಶರೀರಕ್ಕೆ ವಿಷಕಾರಿ.

ಸಾಮಾನ್ಯವಾಗಿ ನರಗಳ ಉಳುಕುವಿಕೆ. ಉರಿ ಬಾವು ಮತ್ತು ವಾತಗ್ರಸ್ತ ನೋವುಗಳಿಗೆ ಲೇಪಿ ಸಲು ಇದನ್ನು ಉಪಯೋಗಿಸುತ್ತಾರೆ. ಅತಿಸಾರದಂಥ ರೋಗ ಗಳಲ್ಲಿ ಶಮನಕಾರಿ ಯಾಗಿ ಹೃದಯವನ್ನು ಉತ್ತೇಜನಗೊಳಿಸುವಲ್ಲಿ ಉತ್ತೇಜನಕಾರಿ ಯಾಗಿ ಇದರ ಉಪಯೋಗವಿದೆ. ಸೌಮ್ಯ ನಂಜುನಿರೋಧಕ ಹಾಗೂ ಸುಗಂಧಗುಣಯುಕ್ತವಾದ್ದರಿಂದ ಇದನ್ನು ಸೌಂದರ್ಯವರ್ಧಕ ವನ್ನಾಗಿಯೂ ಬಳಸುತ್ತಾರೆ. ಪೂಜಾಸಮಾರಂಭದಲ್ಲಿ ದೇವರ ಮುಂದೆ ಉರಿಸಲು ಉಪಯೋಗಿಸುವ ಕರ್ಪುರದಲ್ಲಿ ಶುದ್ಧ ಕರ್ಪುರದ ಪ್ರಮಾಣ ಅತ್ಯಲ್ಪ; ಏನೂ ಇರುವುದಿಲ್ಲವೆಂದರೂ ತಪ್ಪಾಗಲಾರದು. ಸೆಲ್ಯುಲೋಸ್ ಅಸಿಟೇಟ್ ಮತ್ತು ಸೆಲ್ಯುಲೋಸ್ ನೈಟ್ರೇಟ್ ಎಂಬ ಪ್ಲಾಸ್ಟಿಕುಗಳಲ್ಲಿ ಕರ್ಪುರವನ್ನು ಬಳಸುವುದರಿಂದ ಅವು ಮೃದುತ್ವ ಪಡೆಯುತ್ತವೆ. ಇಂಥ ಮೃದು ಪ್ಲಾಸ್ಟಿಕುಗಳಿಂದ ಬೇಕಾದ ಆಟಿಕೆಗಳನ್ನು ಹಾಗೂ ಜೀವನದ ನಿತ್ಯೋಪಯೋಗಿ ವಸ್ತುಗಳನ್ನು ತಯಾರಿಸಬಹುದು.

ವೈದ್ಯಕೀಯವಾಗಿ ಕರ್ಪುರದ ಲಕ್ಷಣಗಳಿಷ್ಟು. ಚರ್ಮ, ಲೋಳೆ ಪರೆಗಳಿಗೆ ಇದು ತಾಕಿದರೆ ಕೆರಳಿಸಿ ನೋವಿಡುತ್ತದೆ. ಹಚ್ಚಿದೆಡೆಯಲ್ಲಿ ರಕ್ತನಾಳ ಹಿಗ್ಗಿ ಕೆಂಪೇರಿ ಕೊಂಚ ನೋವು ಕಳೆಯುವುದು. ಈ ಕಾರಣದಿಂದ ಮೈ ಕೈ ಕಾಲು ಕೀಲು ನೋವುಗಳಿಗಾಗಿ ಮೇಲೆ ಹಚ್ಚುವ ಲೇಪನಗಳಲ್ಲಿ ಕರ್ಪುರದ ಬಳಕೆ ಹೆಚ್ಚು. ಕಫವನ್ನು ಹೊರಗೆಡಹುವುದೆಂಬ ಆಸೆಯಿಂದ ಇದನ್ನು ಕೆಮ್ಮಿನ ಮದ್ದುಗಳಲ್ಲಿ ಸೇರಿಸುವುದುಂಟು. ಉಸಿರಾಟ, ಗುಂಡಿಗೆ ಬಡಿತ ನಿಂತುಹೋಗುವ ತುರ್ತಿನ ಹೊತ್ತಿನಲ್ಲಿ ವಾಯುಹರವಾಗಿ (ಕಾರ್ಮಿನೇಟಿವ್) ಹೊಟ್ಟೆಗೆ ಕೊಡುವುದುಂಟು. ಕಡಲೆಕಾಯಿ ಎಣ್ಣೆಯಲ್ಲಿ ಹಾಕಿದ ಚುಚ್ಚುಮದ್ದಾಗಿ ಬಹುಕಾಲ ಬಳಕೆಯಲ್ಲಿತ್ತು. (ಡಿ.ಎಸ್.ಎಸ್.)

ಕರ್ಪುರದ ಮರ[ಬದಲಾಯಿಸಿ]

ಲಾರೇಸೀ ಕುಟುಂಬಕ್ಕೆ ಸೇರಿದ ಸಿನಮೋಮಮ್ ಕ್ಯಾಂಪೊರ ಎಂಬ ವೈಜ್ಞಾನಿಕ ಹೆಸರಿನ ನಿತ್ಯಹರಿದ್ವರ್ಣದ ದೊಡ್ಡ ಮರ. ಇದು ಚೀನ, ಜಪಾನ್ ಮತ್ತು ಫಾರ್ಮೋಸಗಳ ಮೂಲವಾಸಿ. ಭಾರತ ಮತ್ತು ಇತರ ಕೆಲವು ದೇಶಗಳಲ್ಲಿ ಈಚೆಗೆ ಇದನ್ನು ಬೆಳೆಸಲಾಗುತ್ತಿದೆ. ಇದು ತನ್ನ ಮೂಲ ನಾಡಿನಲ್ಲಿ ಬೆಳೆಯುವ ಎತ್ತರ ಸುಮಾರು ೧೦೦', ಬುಡದ ಸುತ್ತಳತೆ ೬'-೮' ಭಾರತದಲ್ಲಿ ಇದು ಅಷ್ಟು ಎತ್ತರಕ್ಕೆ ಬೆಳೆಯುತ್ತಿಲ್ಲ. ೫೦'-೬೦' ಎತ್ತರಕ್ಕೆ ಬೆಳೆದರೆ ಅದೇ ದೊಡ್ಡದು. ಎಲೆಗಳ ಉದ್ದ ೨-೪ ಅವಕ್ಕೆ ಹೊಳಪು ಹಾಗೂ ತೀಕ್ಷ್ಣ ವಾಸನೆ (ಆರೋಮಾ) ಇವೆ. ಫೆಬ್ರುವರಿ ಮಾರ್ಚಿ ತಿಂಗಳಲ್ಲಿ ಎಲೆಗಳು ಉದುರಿದರೂ ಜೊತೆಯಲ್ಲಿ ಹೊಸ ಎಲೆಗಳು ಮೂಡುತ್ತವೆ. ೦.೩ ದಪ್ಪವಾಗಿರುವ ಇದರ ಹಣ್ಣುಗಳು ತೀವ್ರ ಹಸುರು ಬಣ್ಣವಾಗಿದ್ದು ಅಂಡಾಕಾರವಾಗಿವೆ. ಮಾಗಿದಂತೆ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ೨೫ ವರ್ಷ ವಯಸ್ಸಿನ ಮರಗಳು ಉತ್ಪತ್ತಿಮಾಡುವ ಜೀಜಗಳಿಗೆ ಮಾತ್ರ ಪುನರುತ್ಪತ್ತಿ ಶಕ್ತಿ ಇದೆ.

ಕರ್ಪುರದ ಮರಗಳಲ್ಲಿ ಅನೇಕ ವಿಧಗಳುಂಟು. ಇವುಗಳಲ್ಲಿ ಕೆಲವನ್ನು ಮಾತ್ರ ಕರ್ಪುರವನ್ನು ಉತ್ಪತ್ತಿ ಮಾಡಲು ಬಳಸುವರು. ಮಿಕ್ಕವು ತೀಕ್ಷ್ಣವಾಸನೆಯ ತೈಲವನ್ನು ಮಾತ್ರ ನೀಡಬಲ್ಲವು. ಹಲವರು ಇವೆಲ್ಲ ಬೇರೆ ಬೇರೆ ಪ್ರಭೇದಗಳೆಂದು ವಾದಿಸುವರಾದರೂ ಅವೆಲ್ಲ ಒಂದೇ ಪ್ರಭೇದಕ್ಕೆ ಸೇರಿದವೆಂದು ಈಚಿನ ಅಭಿಪ್ರಾಯ. ಮಾರಿಷಸ್ ದ್ವೀಪದಲ್ಲಿ ಬೆಳೆಯುವ ಸಿನಮೋಮಮ್ ಕಾಂಫೊರದ ಮರದಿಂದ ಮಾತ್ರ ಕರ್ಪುರವನ್ನು ಉತ್ಪತ್ತಿ ಮಾಡಲಾಗುತ್ತಿದೆ. ಆ ಗಿಡದ ಬೇರೆ ಬೇರೆ ಭಾಗಗಳಲ್ಲಿರುವ ತೈಲಕೋಶಗಳಲ್ಲಿ ಕರ್ಪುರ ಸಂಗ್ರಹವಾಗಿರುತ್ತದೆ. ಸಸ್ಯದ ಜೀವನದ ಆರಂಭ ಕಾಲದಲ್ಲಿ ಅದು ಎಲೆಗಳಲ್ಲಿ ಹಳದಿ ತೈಲದೋಪಾದಿಯಲ್ಲಿ ಸಂಗ್ರಹವಾಗಲು ಆರಂಭಿಸಿ ಆ ತೈಲ ಕಾಲಕ್ರಮದಲ್ಲಿ ವರ್ಣರಹಿತವಾಗಿ ಕರ್ಪುರದ ಕಣಗಳಾಗಿ ಸಸ್ಯದ ಇತರ ಭಾಗಗಳಿಗೆಲ್ಲ ಸಾಗಿಹೋಗುತ್ತದೆ. ಬೇರಿನಲ್ಲಿ ಅದು ಅತ್ಯಂತ ಹೆಚ್ಚಾಗಿ ಸಂಗ್ರಹವಾಗಿರುತ್ತದೆ. ಹಾಗೆ ಸಂಗ್ರಹವಾಗಿರುವ ಬಲಿತ ಮರದ ಭಾಗಗಳನ್ನು ಕಾಸಿಬಟ್ಟಿಯಿಳಿಸಿ ಕರ್ಪುರವನ್ನು ತಯಾರಿಸುವರು. ಎಲೆಗಳನ್ನೊಳಗೊಂಡ ಕೊಂಬೆಗಳನ್ನು ಕಾಸಿ ಬಟ್ಟಿಯಿಳಿಸುವುದು ಅಮೆರಿಕದಲ್ಲಿ ಅಭ್ಯಾಸದಲ್ಲಿದೆ. ಚಿಗುರೆಲೆಗಳು ಹಳೆಯ ಎಲೆಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕರ್ಪುರವನ್ನು ನೀಡುತ್ತವೆ.

ಭಾರತದಲ್ಲಿ ಕರ್ಪುರದ ಉತ್ಪಾದನೆ[ಬದಲಾಯಿಸಿ]

ನೀಲಗಿರಿ, ಡೆಹರಾಡೂನ್, ಸಹರಾನ್ಪುರ, ಕಲ್ಕತ್ತ, ಕೊಚಿನ್ ಮುಂತಾದೆಡೆಗಳಲ್ಲಿ ಕರ್ಪುರದ ಮರಗಳನ್ನು ಬೆಳೆಸಲಾಗುತ್ತಿದೆ. ಕೊಚಿನ್ ಪ್ರದೇಶದಲ್ಲಿ ಬೆಳೆಯುವ ಮರಗಳು, ಭಾರತದಲ್ಲೆಲ್ಲ ಹೆಚ್ಚಿನ ಪ್ರಮಾಣದ ಕರ್ಪುರವನ್ನು ಒದಗಿಸುತ್ತವೆ. ಆದರೂ ಅಮೆರಿಕ, ಆಲ್ಜೀರಿಯ, ಸಿಂಹಳ ಮುಂತಾದ ದೇಶಗಳ ಮರಗಳು ನೀಡುವ ಕರ್ಪುರದ ಪ್ರಮಾಣದೊಡನೆ ಹೋಲಿಸಿದರೆ ಇದು ತೀರಾ ಕಡಿಮೆಯೆನ್ನಬೇಕು. ಈಚೆಗೆ ಕರ್ಪುರವನ್ನು ಡಿ-ಪೈನೀನ್ ಎಂಬ ವಸ್ತುವನ್ನು ಬಳಸಿ ಕೃತಕ ಸಂಶ್ಲೇಷಣ ವಿಧಾನದಿಂದ ತಯಾರಿಸುವುದು ಆರಂಭವಾಗಿ ಇಂಗ್ಲೆಂಡು ಮತ್ತು ಅಮೆರಿಕಗಳಲ್ಲಿ ಅದರ ಉತ್ಪಾದನೆ ಭಾರಿ ಉದ್ಯೋಗವಾಗಿ ಬೆಳೆದಿದೆ. ಹೀಗೆ ತಯಾರಿಸಿದ ಕರ್ಪುರವನ್ನು ಸ್ಫೋಟಕಗಳ ತಯಾರಿಕೆಯಲ್ಲೂ ಕ್ರಿಮಿನಾಶಕಗಳ ಮತ್ತು ಇತರ ರಾಸಾಯನಿಕ ವಸ್ತುಗಳ ನಿರ್ಮಾಣದಲ್ಲೂ ಬಳಸಲಾಗುತ್ತಿದೆ.

ಭಾರತೀಯ ಧರ್ಮ, ಸಂಸ್ಕೃತಿಗಳಲ್ಲಿ ಕರ್ಪುರ ಹಾಸುಹೊಕ್ಕಾಗಿ ಹೆಣೆದುಕೊಂಡು ಬಂದಿದೆ. ಅದನ್ನು ಶುಭಕಾರ್ಯಗಳಲ್ಲಿ ಮಂಗಳದ್ರವ್ಯವಾಗಿ ಬಳಸುವುರು. ಬಗೆ ಬಗೆಯ ಚಿಕಿತ್ಸೆಗಳಲ್ಲೂ ಇದರ ಉಪಯೋಗ ಉಂಟು. ಹೊರ ನರಮಂಡಲದ ಮೇಲೆ ಅದು ಚೌಗು ಹಿಡಿಸಬಲ್ಲುದಾದ್ದರಿಂದ ಕೆಲವು ಚರ್ಮರೋಗಗಳಲ್ಲಿ ಅದನ್ನು ಹಚ್ಚುವುದುಂಟು. ಸೋಂಕುನಿವಾರಕವಾಗಿಯೂ ಅದನ್ನು ಬಳಸುವರು. ಮಾರ್ಫೀನ್ ಅಥವಾ ಇತರ ಮದ್ದುಗಳಿಂದ ಶ್ವಾಸ ಮಂದಗತಿಗಿಳಿದಾಗ ಶ್ವಾಸವನ್ನು ತೀವ್ರಗೊಳಿಸಲು ಸಣ್ಣ ಪ್ರಮಾಣದಲ್ಲಿ ಔಷಧಿಯಾಗಿ ತಿನ್ನುವರು. ಹೃದಯಕ್ರಿಯೆಯನ್ನು ಚುರುಕುಗೊಳಿಸುವುದಕ್ಕೂ ಮಯೋಕಾರ್ಡೈಟ್ ರೋಗನಿವಾರಣೆಗೂ ಅದನ್ನು ಸೇವಿಸುವುದುಂಟು. ಕೆಲವು ರೀತಿಯ ಉನ್ಮಾದಗಳಿಗೂ ತೀವ್ರ ರೀತಿಯ ಆಮಶಂಕೆಗೂ ಔಷಧಿಯಾಗಿ ಬಳಸುವರು. ಕರ್ಪುರವನ್ನು ಚರ್ಮದ ತುರುಚನ್ನು ನಿವಾರಿಸಲು ಬಾಹ್ಯ ಲೇಪನಕ್ಕಾಗಿ ಬಳಸುವುದು ಹೆಚ್ಚು. ಉರಿಯೂತ, ಕೀಲು ಮತ್ತು ಸ್ನಾಯುಗಳ ವಾಯು ಇತ್ಯಾದಿಗಳ ನಿವಾರಣೆಗೂ ಹಚ್ಚುವರು. ಆದರೆ ಅದರ ಸೇವನೆ ಅತಿಯಾದರೆ ವಿಷವಾಗಿ ಪರಿಣಮಿಸುವುದು. ಆದರಿಂದ ಸೆಳವು, ತಲೆ ಸುತ್ತುವುದು, ಮನಸ್ಸಿನ ಕ್ಷೋಭೆ, ಚಿತ್ತಭ್ರಮಣ ಇತ್ಯಾದಿ ವಿಕಾರಗಳು ಉಂಟಾಗಬಹುದು. ಸಾವು ಸಂಭವಿಸುವುದು ವಿರಳ. ಅಂಗಡಿಯಲ್ಲಿ ಮಾರುವ ಕರ್ಪುರದ ತೈಲವೆಂಬುದು ಈ ಮರದಿಂದ ಕರ್ಪುರವನ್ನು ತೆಗೆದು ಮೇಲೆ ಉಳಿಯುವ ದ್ರವ. ಇದರಿಂದ ವಿವಿಧ ಸುಗಂಧದ್ರವ್ಯಗಳನ್ನು ತಯಾರಿಸುವರು. ಕರ್ಪುರದ ಬೀಜಗಳಿಂದ ಕೊಬರಿಯೆಣ್ಣೆಯಂಥ ಒಂದು ತೈಲವನ್ನು ಉತ್ಪತ್ತಿಮಾಡುವರು. ಇದನ್ನು ಸಾಬೂನು ತಯಾರಿಕೆಯಲ್ಲಿ ಬಳಸುವರು.

ಕಂದುಮಿಶ್ರಿತ ಹಳದಿ ಬಣ್ಣದ ಕರ್ಪುರದ ಮರ ದೀರ್ಘಕಾಲ ಗಂಧಯುಕ್ತವಾಗುಳಿಯ ಬಲ್ಲುದಾದ್ದರಿಂದ ಅದನ್ನು ಕೆಲವು ಅಲಂಕಾರದ ಉಪಕರಣಗಳ ತಯಾರಿಕೆಯಲ್ಲಿ ಬಳಸುವರು. *

ಕರ್ಪುರರಾಳಗಳು[ಬದಲಾಯಿಸಿ]

ಬಹುಮುಖ ಬಳಕೆಗೆ ಅಗ್ರ ಸ್ಥಾನ ಪಡೆದಿರುವ ರಾಸಾಯನಿಕ ಸಂಯುಕ್ತಗಳು (ರೆಸಿóನ್ಸ್‌). ನೈಸರ್ಗಿಕ ಕರ್ಪುರರಾಳಗಳು ಕಾರ್ಬನ್, ಹೈಡ್ರೊಜನುಗಳಿಂದಲೂ ಸಾಪೇಕ್ಷವಾಗಿ ಕಡಿಮೆ ಪ್ರಮಾಣದ ಆಕ್ಸಿಜನ್ನಿನಿಂದಲೂ ಉಂಟಾಗಿರುವ ಸಂಕೀರ್ಣ ಸಂಯುಕ್ತಗಳು. ಕಪ್ಪುರಾಳ ಮತ್ತು ಇಂಗಿನಿಂದ ಮೊದಲುಗೊಂಡು ಸಾಂಬ್ರಾಣಿ, ಗಂಧರಸ, ಪಳೆಯುಳಿಕೆಯಾದ ಶಿಲಾರಾಳ ಎಲ್ಲವೂ ನೈಸರ್ಗಿಕ ಕರ್ಪುರರಾಳಗಳ ಗುಂಪಿಗೆ ಸೇರುತ್ತವೆ. ಆರಂಭದಲ್ಲಿ ಕರ್ಪುರರಾಳ (ರೆಸಿóನ್) ಎನ್ನುವ ಮಾತು ಪೈನ್ ಮತ್ತು ಫರ್ ಮರಗಳಿಂದ ಜಿನುಗುವ ಹಳದಿ ಅಥವಾ ಕಂದುಬಣ್ಣದ ಒಂದು ಬಗೆಯ ಅಂಟುವಸ್ತುವಿಗೆ ಮಾತ್ರ ಸೀಮಿತವಾಗಿತ್ತು. ನೈಸರ್ಗಿಕ ಕರ್ಪುರರಾಳಗಳ ಬಗ್ಗೆ ತಿಳಿವು ಹೆಚ್ಚಿದಂತೆಲ್ಲ ಅವನ್ನು ಹೋಲುವ ಅನೇಕ ಇತರ ಸಂಯುಕ್ತಗಳನ್ನೂ ಈ ಗುಂಪಿಗೆ ಸೇರಿಸಲಾಗಿದೆ. ಸಂಶ್ಲೇಷಿತ ಕರ್ಪುರರಾಳಗಳು ನೈಲಾನ್ ಮತ್ತು ಬಿಲಿಯಡ್ರ್ಸ್‌ ಚೆಂಡುಗಳು ಮೊದಲಾದ ಅನೇಕಾನೇಕ ಉತ್ಪನ್ನಗಳ ಮೂಲಾಧಾರವಾಗಿವೆ. ಅನೇಕ ಉದ್ಯಮಗಳಲ್ಲಿ, ವಿಶೇಷವಾಗಿ ಅಚ್ಚುಹೊಯ್ಯುವ ಮತ್ತು ಲೇಪನ ಉದ್ಯಮಗಳಲ್ಲಿ ನೈಸರ್ಗಿಕ ಕರ್ಪುರರಾಳದ ಸ್ಥಾನದಲ್ಲಿ ಈಗ ಯಾವುದಾದರೊಂದು ಸಂಶ್ಲೇಷಿತ ಕರ್ಪುರರಾಳವನ್ನು ಉಪಯೋಗಿಸ ಬಹುದಾಗಿದೆ.

ಕರ್ಪುರರಾಳಗಳನ್ನು ಅವುಗಳ ಚಿರಪರಿಚಿತ ಲಕ್ಷಣಗಳಿಂದ ಪಾರದರ್ಶಕತ್ವ. ಅಸ್ಫಟಿಕಾಕೃತಿ, ಭಿದುರತೆ ಮತ್ತು ಶಂಕುವಿನಾಕೃತಿಯ ಸೀಳಿಕೆಗಳಿಂದ ಗುರುತಿಸಲಾಗುತ್ತಿತ್ತು. ಇವಾವ ಗುಣವೂ ಇಲ್ಲದ ಕೆಲವು ಬಾರಿ ವಿರುದ್ಧ ಗುಣಗಳನ್ನು ಹೊಂದಿರುವ ಕರ್ಪುರ ರಾಳಗಳನ್ನು ಈಗ ಸಂಶ್ಲೇಷಿಸಲಾಗಿದೆ. ನೈಸರ್ಗಿಕ ಮತ್ತು ಸಂಶ್ಲೇಷಿತ ಕರ್ಪುರರಾಳಗಳೆರಡಕ್ಕೂ ಅನ್ವಯಿಸುವ ಏಕೈಕ ಗುಣವೆಂದರೆ ಅವುಗಳ ಅಸ್ತಿತ್ವದ ಒಂದು ಹಂತದಲ್ಲಿ ಅವೆರಡೂ ಮೆದುವಾಗಿರುವುದು.

ಕರ್ಪುರರಾಳ ಮತ್ತು ಪ್ಲಾಸ್ಟಿಕ್ಕುಗಳಿಗಿರುವ ಭೇದ ಕೇವಲ ಸೌಕರ್ಯಾತ್ಮಕ. ಐತಿಹಾಸಿಕವಾಗಿ ಲೇಪನಪ್ರಧಾನ ಸಾಮಗ್ರಿಗಳನ್ನು ಕರ್ಪುರಗಳೆಂದೂ ರೂಪಸ್ಪಷ್ಟನೆಗೆ ಅಚ್ಚುಹೊಯ್ಯಬೇಕಾಗಿದ್ದ ಸಂಯೋಜನೆಗಳಿಗೆ ಪ್ಲಾಸ್ಟಿಕುಗಳೆಂದೂ ಕರೆದಂತಿದೆ. ಕರ್ಪುರರಾಳಗಳು, ಪ್ಲಾಸ್ಟಿಕುಗಳು, ರಬ್ಬರ್ ಮತ್ತು ಎಳೆಗಳು-ಎಲ್ಲವೂ ಒಂದೇ ಬೃಹದ್ಗುಂಪಿನ ಬೇರೆ ಬೇರೆ ರಸಾಯನ ಸಂಯುಕ್ತಗಳೆಂಬುದು ಈಗ ನಿರ್ವಿವಾದ. ಸೂಕ್ತ ರೂಪಾಂತರಗಳಿಂದ ಮೇಲಿನ ಒಂದು ಗುಂಪಿನ ಯಾವುದೇ ಸಂಯುಕ್ತವನ್ನು ಬೇರೆ ಗುಂಪಿನ ಸಂಯುಕ್ತವಾಗಿ ಮಾರ್ಪಡಿಸಬಹುದು.

ಕರ್ಪುರರಾಳ ಸೃಷ್ಟಿ[ಬದಲಾಯಿಸಿ]

ಗಾಳಿ, ಬೆಂಕಿ, ಸಿಡಿಲು ಅಥವಾ ಬೇರಾವುದೇ ಕಾರಣದಿಂದ ತೂಗಟೆಗೆ ಹಾನಿಯಾದಾಗ ಮರದಲ್ಲಿ ಕರ್ಪುರರಾಳ ಸೃಷ್ಟಿಯಾಗುತ್ತದೆ. ಪ್ರಾರಂಭದಲ್ಲಿ ಈ ಸ್ರಾವ ದ್ರವರೂಪದ್ದಾಗಿದ್ದು ತೈಲರಾಳ ಅಥವಾ ಗುಗ್ಗುಲದಂತೆ ಕಾಣುತ್ತದೆ. ಗಾಳಿಯ ಸಂಪರ್ಕದಲ್ಲಿ ಬಾಷ್ಪಶೀಲ ಘಟಕಗಳು ಆವಿಯಾಗುತ್ತವೆ. ಉಳಿದ ಘನವಸ್ತು ಉತ್ಕರ್ಷಣ ಹೊಂದಿ, ಬಹ್ವಂಗೀಕರಿಸಿ ಕ್ರಮೇಣ ಮೆದುವಾದ ಕರ್ಪುರರಾಳವಾಗಿ ಮಾರ್ಪಡುತ್ತದೆ. ವೃಕ್ಷದಲ್ಲಿ ಕರ್ಪುರರರಾಳಧಾರೆ ವಿಪುಲವಾಗಿದ್ದಾಗ ಅದರ ಕೆಲವಂಶ ಭೂಮಿಯನ್ನು ಸೇರುತ್ತದೆ. ಪರಿಣಾಮವಾಗಿ ಅನೇಕ ಪಳೆಯುಳಿಕೆ ಕರ್ಪುರರಾಳಗಳು ಇಂದು ಭೂಮಿಯಲ್ಲಿ ನಿಕ್ಷೇಪಗಳಾಗಿ ದೊರೆಯುತ್ತಿವೆ. ಇತ್ತೀಚಿನ ಪಳೆಯುಳಿಕೆಯಾಗಿದ್ದರೂ ಅದರ ನಿರ್ಮಾಣಕ್ಕೆ ಕಾರಣವಾದ ರಸಾಯನಕ್ರಿಯೆ ಸಾವಿರಾರು ವರ್ಷಗಳವರೆಗೂ ನಡೆದಿರಬೇಕು. ಉದಾಹರಣೆಗೆ ಕೌರಿಪೈನ್ ಮರಗಳ ಆಯುಷ್ಯ ಸರಾಸರಿ ೧೦೦೦ ವರ್ಷಗಳು. ಹಿಂದಿನ ಅರಣ್ಯಗಳೆಲ್ಲವೂ ಸಂಪೂರ್ಣವಾಗಿ ನಾಶವಾಗಿರುವೆಡೆಗಳಲ್ಲಿ ಇಂದು ಕರ್ಪುರರಾಳ ಸಿಕ್ಕುತ್ತಿರುವುದನ್ನು ಗಮನಿಸಿದರೆ ಅದು ಅತಿ ಪ್ರಾಚೀನವಾದುದು ಎಂಬುದು ಸ್ಪಷ್ಟ. ಅದೂ ಕೂಡ ದ್ರಾವ್ಯ. ಪಳೆಯುಳಿಕೆ ಕರ್ಪುರರಾಳವಾದ ಶಿಲಾರಾಳ ಅಷ್ಟಾಗಿ ದ್ರಾವ್ಯವಲ್ಲ. ತೈಲರಾಳ ಕಾಲಕ್ರಮೇಣ ಕರ್ಪುರರಾಳ, ಇತ್ತೀಚಿನ ಪಳೆಯುಳಿಕೆ ಕರ್ಪುರರಾಳ, ಅಂತಿಮವಾಗಿ ಪಳೆಯುಳಿಕೆ ಕರ್ಪುರರಾಳವಾಗಿ ಬಹ್ವಂಗೀಕರಣಗೊಳ್ಳಲು ಅಗತ್ಯವಾದ ಕಾಲವನ್ನು ಭೂ ಇತಿಹಾಸ ಕಾಲಮಾನದಲ್ಲಿ ಗಣಿಸಬೇಕೆಂಬುದನ್ನು ಶಿಲಾರಾಳದ ಅಸ್ತಿತ್ವವೇ ಶ್ರುತಪಡಿಸುತ್ತದೆ.

ಪ್ರಪಂಚದ ಅನೇಕ ಭಾಗಗಳಲ್ಲಿ ಕರ್ಪುರರಾಳದ ನಿಕ್ಷೇಪಗಳು ದೊರೆತಿವೆ. ಅನೇಕವನ್ನು ಅವು ದೊರೆತ ಪ್ರದೇಶಗಳ ಹೆಸರುಗಳಿಂದಲೇ ಕರೆಯಲಾಗಿದೆ. ಚೈನೀಯರು ಮತ್ತು ಜಪಾನೀಯರು ಮೆರುಗೆಣ್ಣೆಗಳ ತಯಾರಿಕೆಯಲ್ಲಿ ಈ ಉತ್ಪನ್ನಗಳನ್ನು ಉಪಯೋಗಿಸುತ್ತಿದ್ದರು. ಇಂಕಾಗಳು ಮತ್ತು ಈಜಿಪ್ಟಿಯನ್ನರು ವಾರ್ನಿಷುಗಳನ್ನು ಬಳಸುತ್ತಿದ್ದರೆನ್ನುವುದಕ್ಕೆ ಸಾಕ್ಷ್ಯಗಳಿವೆ. ಫಿನೀಷಿಯನ್ನರು ಮತ್ತು ಗ್ರೀಕರು ಕರ್ಪುರರಾಳಗಳ ಪರಿಚಯ ಪಡೆದಿದ್ದರು. ಶಿಲಾರಾಳವನ್ನು ಗ್ರೀಕರು ಬೆರೀನೀಸ್ ಎನ್ನುತ್ತಿದ್ದರು. ಅದರ ಅಪಭ್ರಂಶವೇ ಇಂದಿನ ವಾರ್ನಿಷ್.

ಮರದಿಂದ ಒಸರುವ ಯಾವುದೇ ಅಂಟುದ್ರವಕ್ಕೆ ಗೋಂದು ಎಂದು ಹೆಸರು. ಅರಗು ಕೀಟಸ್ರಾವವಾದುದರಿಂದ ಇದರಿಂದ ಬೇರೆಯಾಗಿದೆ. ಸಹಜ ಗೋಂದುಗಳು ನೀರಿನಲ್ಲಿ ಕರಗುತ್ತವೆ, ವಾರ್ನಿಷ್ ಗೋಂದುಗಳು ಹೀಗಲ್ಲ. ಶರ್ಕರಷಿಷ್ಟ ಪದಾರ್ಥಗಳಿಗೆ ಸಂಬಂಧಿಸಿದ ಸಹಜಗೋಂದುಗಳು ನೀರಿನಲ್ಲಿ ದ್ರಾವ್ಯ. ಆಗಾರ್ಯ್‌ನಿಕ್ ದ್ರವಗಳಲ್ಲಿ ಅದ್ರಾವ್ಯ. ಕಾಯಿಸಿದಾಗ ದ್ರವಿಸದೆ ವಿಭಜನೆ ಹೊಂದುತ್ತವೆ. ವಾರ್ನಿಷ್ ಗೋಂದುಗಳು, ಟರ್ಪೀನ್ ಮತ್ತು ಸುಗಂಧತೈಲಗಳಿಗೆ ಸಂಬಂಧಿಸಿದ ಕರ್ಪುರರಾಳಗಳು ಎಣ್ಣೆಗಳಲ್ಲಿ ಮತ್ತು ಆಗಾರ್ಯ್‌ನಿಕ್ ದ್ರವಗಳಲ್ಲಿ ದ್ರಾವ್ಯ, ಆದರೆ ನೀರಿನಲ್ಲಿ ಅದ್ರಾವ್ಯ. ಕಾಯಿಸಿದಾಗ ಇವು ಕರಗಿ ವಿಭಜನೆ ಹೊಂದುತ್ತವೆ. ವಾರ್ನಿಷ್ ರಾಳಗಳಿಗೆ ಗೋಂದು ಎನ್ನುವ ಮಾತು ಸರಿಯಲ್ಲ. ಆದರೂ ದೀರ್ಘ ಬಳಕೆಯಿಂದಾಗಿ ಅದನ್ನು ತೊಡೆದು ಹಾಕುವುದು ಅಸಾಧ್ಯವಾಗಿದೆ. ಅಲ್ಲದೆ ಕೆಲವು ನೈಸರ್ಗಿಕ ಉತ್ಪನ್ನಗಳು ವಾರ್ನಿಷ್ ರಾಳ ಮತ್ತು ಗೋಂದು ಎರಡರ ಗುಣಗಳನ್ನೂ ತಳೆಯುತ್ತವೆ. ಭಾರತದ ಸಾಂಬ್ರಾಣಿಯಿಂದ ಗೋಂದು ಟರ್ಪೀನುಗಳು ಮತ್ತು ಕರ್ಪುರರಾಳವನ್ನು ಬೇರ್ಪಡಿಸಲಾಗಿದೆ. ಕರ್ಪುರರಾಳಗಳನ್ನು ಪಾರದರ್ಶಕತ್ವ, ಭೀದುರತೆ, ಶಂಕಾವಿನಾಕೃತಿಯ ಬಿರುಕುಗಳು ಮತ್ತು ಅವುಗಳ ಬಣ್ಣವಾದ ಕಂದು ಅಥವಾ ಹಳದಿಯಿಂದ ಗುರುತಿಸಬಹುದು. ಘನಸ್ಥಿತಿಯಲ್ಲಿ ಅವಕ್ಕೆ ಯಾವ ರುಚಿ ಮತ್ತು ವಾಸನೆ ಇಲ್ಲ. ಕಾಯಿಸಿದಾಗ ವಿಶಿಷ್ಟವಾದ ಪರಿಮಳವನ್ನು ಹೊರಚೆಲ್ಲುತ್ತವೆ. ಧೂಮಮಯ ಜ್ವಾಲೆಯಿಂದ ಉರಿಯುತ್ತವೆ. ಕರ್ಪುರರಾಳಗಳ ವರ್ಗೀಕರಣಕ್ಕೆ ಕರಗುವಿಕೆ ಮತ್ತು ಕಠಿಣತೆಗಳೇ ನಿರ್ಣಾಯಕ ಗುಣಗಳು. ಕರಗುವಿಕೆಯ ಆಧಾರದ ಮೇಲೆ ಕರ್ಪುರರಾಳಗಳನ್ನು ಆಲ್ಕೊಹಾಲ್ದ್ರಾವ್ಯ ಮತ್ತು ತೈಲದ್ರಾವ್ಯಗಳೆಂದು ವಿಂಗಡಿಸಬಹುದು. ಸೆಲ್ಯುಲೋಸ್ ಮೆರುಗೆಣ್ಣೆಗಳ ತಯಾರಿಕೆಗೆ ಉಪಯೋಗಿಸುವ ಆಧುನಿಕ ಲೀನಕಾರಿಗಳನ್ನು ಕರ್ಪುರರಾಳ ದ್ರಾವಣಗಳ ತಯಾರಿಕೆಗೂ ಉಪಯೋಗಿಸಬಹುದು.

A sample of sublimed camphor

ಆಲ್ಕೊಹಾಲಿನಲ್ಲಿ ಕರಗುವ ಕರ್ಪುರರಾಳಗಳು[ಬದಲಾಯಿಸಿ]

ಗುಗ್ಗುಲಗಳು[ಬದಲಾಯಿಸಿ]

ದ್ರವಸ್ವಭಾವದ ಕರ್ಪುರರಾಳಗಳು. ಆರೋಗ್ಯದಾಯಿಗಳಾಗಿ ಔಷಧಿಗಳಲ್ಲಿಯೂ ಹೆಚ್ಚು ಸುವಾಸನೆಯುಳ್ಳ ಕೆಲವು ಪರಿಮಳ ಪದಾರ್ಥಗಳಲ್ಲಿಯೂ ಉಪಯೋಗದಲ್ಲಿವೆ. ಬೆಂಜೋಯಿಕ್ ಅಥವಾ ಸಿನ್ಯಾಮಿಕ್ ಆಮ್ಲ ಎಸ್ಟರುಗಳಲ್ಲಿ ಹರಡಿರುವ ಕರ್ಪುರರಾಳಗಳನ್ನು ಗುಗ್ಗುಲಗಳೆಂದೂ ಸುಗಂಧತೈಲಗಳಲ್ಲಿ ಹರಡಿರುವ ಕರ್ಪುರರಾಳಗಳನ್ನು ತೈಲರಾಳಗಳೆಂದೂ ಪರಿಗಣಿಸಲಾಗುವುದು. ಮಸೂರಗಳನ್ನು ಅಂಟಿಸಲು ಉಪಯೋಗಿಸುವ ಕೆನಡಬಾಲ್ಸಂ, ನಿಜವಾದ ಗುಗ್ಗುಲವಲ್ಲ. ಅದು ನಿಜಕ್ಕೂ ತೈಲರಾಳ; ಟೊಲುಬಾಲ್ಸಂ, ಪೆರುಬಾಲ್ಸಂ ಮತ್ತು ಸ್ಟೋರಾಕ್ಸ್‌ ಬಾಲ್ಸಂಗಳು ನಿಜವಾದ ಗುಗ್ಗುಲಗಳು.

ಕರ್ಪುರತೈಲಗಳು[ಬದಲಾಯಿಸಿ]

ನಾನಾ ತೈಲರಾಳಗಳನ್ನು ಕರ್ಪುರತೈಲಗಳೆಂದು ಕರೆಯ ಲಾಗುವುದು. ವೆನಿಸ್ಕರ್ಪುರತೈಲ ಒಂದು ಜಾತಿಯ ಪೈನ್(ಲಾರ್ಚ್) ಮರದಿಂದ ಪಡೆದ ನಸುಹಸುರು ಬಣ್ಣದ ಸ್ನಿಗ್ಧ ದ್ರವ. ನಿಂಬೆಹಣ್ಣಿನ ವಾಸನೆಯ ಸ್ಟ್ರಾಸ್ಬೊರ್ಗ್ ಕರ್ಪುರತೈಲ, ಬೋರ್ಡಾಕ್ಸ್‌ ಕರ್ಪುರತೈಲ ಮತ್ತು ಅಮೆರಿಕದ ಅನೇಕ ಕರ್ಪುರತೈಲಗಳು ಬಗೆಬಗೆಯ ಪೈನ್ ಮರಗಳಿಂದ ದೊರೆಯುತ್ತವೆ. ತೈಲರಾಳವನ್ನು ಬಟ್ಟಿ ಇಳಿಸಿದಾಗ ಬಾಷ್ಪಶೀಲ ಕರ್ಪುರತೈಲ ಬೇರ್ಪಡುತ್ತದೆ.

ಮ್ಯಾಸ್ಟಿಕ್[ಬದಲಾಯಿಸಿ]

ಮೆದು ಕರ್ಪುರರಾಳ. ಕರಗುವ ಬಿಂದು ಸುಮಾರು ೧೦೫ಲಿಸೆಂ. ಗ್ರೀಕ್ ದ್ವೀಪಸಮುದಾಯದಲ್ಲಿ ಬೆಳೆಯುವ ಪಿಸ್ಟೇಸಿಯ ಸಂಕುಲದ ಮರಗಳಿಂದ ದೊರೆಯುತ್ತದೆ. ಇದನ್ನು ಕರ್ಪುರತೈಲದೊಡನೆ ಮೆರುಗೆಣ್ಣೆಯಾಗಿ, ನಾರಗಸೆ ಎಣ್ಣೆಯೊಡನೆ ವರ್ಣವಾಹಕವಾಗಿ ಉಪಯೋಗಿಸಲಾಗುವುದು.

ಡ್ರ್ಯಾಗನ್ಸ್‌ಬ್ಲಡ್ ಮತ್ತು ಗ್ಯಾಂಬೋಜ್[ಬದಲಾಯಿಸಿ]

ಈಸ್ಟ್‌ ಇಂಡೀಸಿನಲ್ಲಿ ಬೆಳೆಯುವ ತಾಳೆಯ ಜಾತಿಯ ಮರದ ಹಣ್ಣುಗಳಿಂದ ಸ್ರವಿಸುವ ಕರ್ಪುರರಾಳ. ಸ್ಥೂಲವೀಕ್ಷಣೆಗೆ ಕಪ್ಪುಮಿಶ್ರಿತ ಕಂದುಬಣ್ಣ, ಆದರೆ ತೆಳುಪೊರೆ ಕುಂಕುಮ ವರ್ಣ ಪಿಟೀಲಿಗೆ ಬಳಿಯುವ ಮೆರುಗೆಣ್ಣೆಗಳಲ್ಲಿ ಮತ್ತು ಆಲ್ಕೊಹಾಲ್ ಮೆರುಗೆಣ್ಣೆಗಳಿಗೆ ಕಡುಗೆಂಪು ಬಣ್ಣವಾಗಿ ಉಪಯೋಗಿಸಲಾಗುವುದು. ಗ್ಯಾಂಬೋಜನ್ನು ವರ್ಣವಾಹಕವಾಗಿ ಮತ್ತು ಔಷಧಿಗಳಲ್ಲಿ ಮತ್ತೊಂದು ಕರ್ಪುರರಾಳವಾಗಿ ಉಪಯೋಗಿಸುತ್ತಾರೆ.

ಡಾಮರ್[ಬದಲಾಯಿಸಿ]

ಸ್ವಚ್ಛ ನಸುಹಳದಿ ಬಣ್ಣದ ಮಣಿಗಳ ರೂಪದಲ್ಲಿ ದೊರೆಯುವ ಕಠಿಣತರ ಕರ್ಪುರರಾಳ. ಕರಗುವ ಬಿಂದು ಸುಮಾರು ೧೪೦ಲಿಸೆಂ. ಇದರಿಂದ ಶ್ರೇಷ್ಠವಾದ ಮೆರುಗೆಣ್ಣೆಗಳನ್ನು ತಯಾರಿಸಬಹುದು.

ಸ್ಯಾಂಡ್ರ್ಯಾಕ್[ಬದಲಾಯಿಸಿ]

ಆಸ್ಟ್ರೇಲಿಯದಲ್ಲಿ ಬೆಳೆಯುವ ಸೈಪ್ರಸ್ಪೈಸ್ನಿಂದ ದೊರೆಯುವ ಕಠಿಣಕರ್ಪುರರಾಳ ಕರಗುವ ಬಿಂದು ೧೫೦ಲಿಸೆಂ. ವಾರ್ನಿಷ್ ರೂಪದಲ್ಲಿ ಕಾಗದ, ಚರ್ಮ ಮತ್ತು ಲೋಹಗಳಿಗೆ ಬಳಿಯಲು ಉಪಯೋಗಿಸಲಾಗುವುದು.


ತೈಲದ್ರಾವ್ಯಕರ್ಪುರರಾಳಗಳು[ಬದಲಾಯಿಸಿ]

ರಸಿನ್ (ಕಾಲೋಫೋನಿ)[ಬದಲಾಯಿಸಿ]

ಪೈನ್ ಮರದಿಂದ ದೊರೆತ ತೈಲರಾಳವನ್ನು ಬಟ್ಟಿ ಇಳಿಸಿದಾಗ ಉಳಿಯುವ ಘನವಸ್ತುವೇ ರಾಸಿóನ್. ಮರದಿಂದ ರಂಧ್ರ ಮಾಡಿ ಇಳಿಸಿದ ಕರ್ಪುರತೈಲದಿಂದ ಗಮ್ರಾಸಿóನ್ ಮತ್ತು ಮರದ ತುಂಡುಗಳಿಂದ ಸಂಸ್ಕರಿಸಿದ ಕರ್ಪುರತೈಲದಿಂದ ವುಡ್ರೇಸಿನ್ಲಭಿಸುತ್ತವೆ. ಪೆಡಸಾದ ಕೂಡಲೇ ಪುಡಿಯಾಗುವ, ಬಿಸಿಗೆ ಜಿಗುಟಾಗುವ, ಆಗಾರ್ಯ್‌ನಿಕ್ ದ್ರವಗಳಲ್ಲಿ ಕರಗುವ ರಾಳ ಈ ರೆಸಿóನ್. ಇದರ ಪ್ರಮುಖ ಅಂಗವೆಂದರೆ ಅಬೇಟಿಕ್ ಆಮ್ಲ. ಅದರ ಅನೇಕ ಉಪಯೋಗಗಳು ಅದರ ಆಮ್ಲೀಯ ಗುಣಗಳನ್ನು ಅವಲಂಬಿಸಿವೆ. ಅಬಾಟಿಕ್ ಆಮ್ಲ ಕ್ಷಾರಗಳೊಡನೆ ಸಂಯೋಗ ಹೊಂದಿ ಸಾಬೂನುಗಳನ್ನು ಕೊಡುತ್ತದೆ. ಸೋಡಿಯಂ ಸಾಬೂನನ್ನು ಕಾಗದಕ್ಕೆ ಹೊಳಪು ಕೊಡಲು, ಸೀಸ, ಕೋಬಾಲ್ಟ್‌ ಮತ್ತು ಮ್ಯಾಂಗನೀಸ್ ಸಾಬೂನುಗಳನ್ನು ಬಣ್ಣ ಮತ್ತು ವಾರ್ನಿಷುಗಳಲ್ಲಿ ಶುಷ್ಕಕಾರಿಗಳಾಗಿ, ಕ್ಯಾಲ್ಸಿಯಂ ಮತ್ತು ಸತುವಿನ ಲವಣಗಳನ್ನು ಹೊಳಪು-ನುಣುಪೆಣ್ಣೆಗಳಲ್ಲಿ ಉಪಯೋಗಿಸಲಾಗುವುದು. ಗಾಳಿಯ ಸಂಪರ್ಕದಲ್ಲಿ ರೆಸಿóನ್ ಸುಲಭವಾಗಿ ಉತ್ಕರ್ಷಣ ಹೊಂದಲು ಅಬೇಟಿಕ್ ಆಮ್ಲದ ಸಂಯುಗ್ಮೀದ್ವಿಬಂಧ (ಕಾಂಜ್ಯುಗೇಟೆಡ್ ಡಬಲ್ ಬಾಂಡ್) ಕಾರಣವಿರಬಹುದು. ಹೈಡ್ರೊಜನ್ನಿನೊಡನೆ ಸಂಯೋಜಿಸುವುದರ ಮೂಲಕ ರೆಸಿóನನ್ನು ಮತ್ತಷ್ಟು ದೃಢಗೊಳಿಸ ಬಹುದು.

ಕೋಪಲುಗಳು[ಬದಲಾಯಿಸಿ]

ಮೆದುಮನಿಲ ಕೋಪಲ್ ಕೌರಿಕೋಪಲ್, ಕಾಂಗೊಕೋಪಲ್, ಭೂಮಿ ಯಿಂದ ಅಗೆದು ತೆಗೆಯುವ ಜಾಂಜಿಬಾರ್ ಕೋಪಲ್ ಈ ವರ್ಗದವು. ಮೆರುಗೆಣ್ಣೆ ಉದ್ಯಮದಲ್ಲಿ ಅನೇಕ ಬಗೆಯ ಕೋಪಲುಗಳ ಬಳಕೆ ಇದೆ.

ಶಿಲಾರಾಳ[ಬದಲಾಯಿಸಿ]

ಕಠಿಣತಮ ನೈಸರ್ಗಿಕ ಕರ್ಪುರರಾಳ. ಪೂರ್ವ ಪ್ರಷ್ಯಾದ ನೀಲಭೂಮಿ ಯಲ್ಲಿ ಸಿಕ್ಕುತ್ತದೆ. ಕಾಲಾಂತರದಲ್ಲಿ ತಕ್ಕ ವಾತಾವರಣದಲ್ಲಿ ತೈಲರಾಳ ಶಿಲಾರಾಳವಾಗಬಲ್ಲದೆನ್ನುವುದಕ್ಕೆ ಪೈನ್ ಮರಗಳಿಂದ ಉತ್ಪತ್ತಿಯಾದ ಈ ರಾಳ ಸಾಕ್ಷಿ. ಸುಲಭದ್ರಾವ್ಯವಲ್ಲದ್ದರಿಂದ ಮೆರುಗಣ್ಣೆಗಳ ತಯಾರಿಕೆಯಲ್ಲಿ ಬಳಕೆಯಲ್ಲಿಲ್ಲ. ಮಣಿಗಳು ಮತ್ತು ಅಲಂಕಾರ ಸಾಮಗ್ರಿಗಳ ತಯಾರಿಕೆಯಲ್ಲಿ ಉಪಯೋಗ ವಾಗುವುದು.

ಪೌರ್ವಾತ್ಯ ಮೆರುಗೆಣ್ಣೆ[ಬದಲಾಯಿಸಿ]

ಚೀನದೇಶದಲ್ಲಿ ಬೆಳೆಯುವ ಒಂದು ಮರದಿಂದ ಸಂಗ್ರಹಿಸಿದ ಹಾಲಿನಂಥ ದ್ರವ. ಬಾಷ್ಪೀಭವನದಿಂದ ಸಾಂದ್ರಗೊಳಿಸಿದ ಸ್ನಿಗ್ಧ ದ್ರವವನ್ನು ಹೊದಿಕೆಯಾಗಿ ಬಳಿದಾಗ ಒಂದು ದಿವಸದಲ್ಲೆ ಒಣಗಿಕೊಳ್ಳುತ್ತದೆ. ಬೆಳಕಿಲ್ಲದ ಶೀತಲವಾತಾವರಣದಲ್ಲಿ ಮಾತ್ರ ಒಣಗುವುದು ಇದರ ವೈಶಿಷ್ಟ್ಯ. ಇದರಲ್ಲಿ ಚರ್ಮವನ್ನು ಉದ್ರೇಕಗೊಳಿಸುವ ವಸ್ತುವಿದೆ.

ಗೇರೆಣ್ಣೆ[ಬದಲಾಯಿಸಿ]

ಗೇರುಬೀಜಗಳಿಂದ ದೊರೆಯುವ ಫೀನಾಲುಗಳನ್ನೊಳಗೊಂಡ ಎಣ್ಣೆ. ಇದರಲ್ಲಿರುವ ಸಂಯುಕ್ತಗಳು ಚರ್ಮದ ಮೇಲೆ ಬೊಬ್ಬೆಗಳನ್ನು ಏಳಿಸುತ್ತವೆ. ತಕ್ಕ ರಸಾಯನ ಸಂಸ್ಕಾರದಿಂದ ಈ ಉದ್ರೇಕಕಾರಿವಸ್ತುಗಳನ್ನು ನಾಶಮಾಡಬಹುದು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. The Merck Index, 7th edition, Merck & Co., Rahway, New Jersey, USA, 1960
  2. Handbook of Chemistry and Physics, CRC Press, Ann Arbor, Michigan, USA
"https://kn.wikipedia.org/w/index.php?title=ಕರ್ಪೂರ&oldid=1040266" ಇಂದ ಪಡೆಯಲ್ಪಟ್ಟಿದೆ