ನೂಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನೂಲು ಎಂದರೆ ನೈಸರ್ಗಿಕ ಯಾ ಕೃತಕ ಎಳೆಗಳಿಂದ ತಯಾರಿಸಿ ವಸ್ತ್ರನೆಯ್ಗೆಯಲ್ಲಿ ಉಪಯೋಗಿಸಲಾಗುವ ಹುರಿ (ಯಾರ್ನ್). ನೇಯ್ದ ಅಥವಾ ಹೆಣೆದ ಬಟ್ಟೆ ತಯಾರಿಸುವ ಮೊದಲು ವಿವಿಧ ಬಗೆಯ ಎಳೆಗಳಿಂದ ನೂಲನ್ನು ಸಿದ್ಧಪಡಿಸುವುದು ಅಗತ್ಯ. ಈ ಎಳೆಗಳು ಹತ್ತಿ, ಉಣ್ಣೆ, ಲಿನನ್, ರೇಷ್ಮೆ, ನೈಲಾನ್, ಟೆರಿಲಿನ್ ಇತ್ಯಾದಿ ಮೂಲದವಾಗಿರಬಹುದು. ಮೊದಮೊದಲು ತಕಲಿ ಎಂಬ ಹತ್ಯಾರಿನ ನೆರವಿನಿಂದ ಒರಟಾಗಿ ನೂಲನ್ನು ತಯಾರಿಸುವುದು ವಾಡಿಕೆ ಆಗಿತ್ತು. ಕ್ರಮೇಣ ಸುಮಾರು ಎರಡು ಶತಮಾನಗಳಿಂದೀಚಿಗೆ, ನೂಲುವಿಕೆಯ ವಿಧಾನಗಳಲ್ಲಿ ಅನೇಕ ಸುಧಾರಣೆಗಳು ಆಗಿ ಈಗ ಯಾಂತ್ರೀಕೃತ ನೂಲುಗಳು ಬಳಕೆಗೆ ಬಂದಿವೆ.

ಕೈಯಲ್ಲಾಗಲೀ ನೂಲುವ ಯಂತ್ರದಲ್ಲಾಗಲೀ ನೂಲುವಾಗ ಒಂದೇ ಉದ್ದವುಳ್ಳ ಅಥವಾ ಬೇರೆಬೇರೆ ಉದ್ದವುಳ್ಳ ಯಾವುದೇ ಬಗೆಯ ಎಳೆಗಳನ್ನು ಹಿಡಿತಕ್ಕೆ ಬರುವಂತೆ ಸಮವಾಗಿ ಜೋಡಿಸಿ ಎಳೆದು ಅನಂತರ ಅದಕ್ಕೆ ತ್ರಾಣ ಬರುವಂತೆ ನಿರ್ಧಿಷ್ಟ ಹುರಿಯನ್ನು ಅಳವಡಿಸುತ್ತಾರೆ. ನೂಲುವಿಕೆಯ ಕ್ರಿಯೆಯಿಂದ ಅವಿಚ್ಛಿನ್ನವಾದ ದಾರ (ಹುರಿ) ಉತ್ಪತ್ತಿಯಾಗುತ್ತದೆ. ಆಧರೆ ಇದಕ್ಕೆ ಅಪವಾದಗಳೂ ಉಂಟು. ಉಣ್ಣೆ ದಾರವನ್ನು ಉತ್ಪಾದಿಸುವಾಗುಣ್ಣೆಯ ಎಳೆಗಳು ದಾರದ ಉದ್ದಕ್ಕೂ ಗೊತ್ತಾದ ಒಂದು ಕ್ರಮವಿಲ್ಲದೇ ಅದರಲ್ಲಿ ಸೇರ್ಪಡೆ ಆಗುತ್ತದೆ. ಹೀಗೆಯೇ ನೂಲುವ ಕ್ರಿಯೆಯಲ್ಲಿ ನಿರುಪಯುಕ್ತವೆಂದು ಬಿಟ್ಟ ತುಂಡಾದ ಎಳೆಗಳನ್ನು ಉಪಯೋಗಿಸಿ ಪುನಃ ದಾರವನ್ನು ತಯಾರಿಸಬೇಕಾಗಿರುವಾಗ ನೂಲು ಮಿಕ್ಕು ತುಂಡಾದ ಎಳೆಗಳು ಎಳೆಯಲ್ಪಡುವ ಕ್ರಿಯೆಗೆ ಸರಿಯಾಗಿ ಒಳಪಡುವುದಿಲ್ಲ. ಪರಿಣಾಮವಾಗಿ ದಾರ ಒರಟೊರಟಾಗುವುದು. ಇಂಥ ದಾರಗಳಿಂದ ಹೊದಿಕೆ, ಟವಲುಗಳಂಥ ದಪ್ಪ ಬಟ್ಟೆಗಳನ್ನು ಮಾತ್ರ ತಯಾರಿಸಬಹುದು.

ಹೀಗೆ ನೂಲನ್ನು ಉತ್ಪಾದಿಸುವುದಕ್ಕೆ ಮೊದಲು ಎಳೆಗಳನ್ನು ಸಮ ಪ್ರಮಾಣದಲ್ಲಿ ಹಂಚಲು ವಿವಿಧ ಎಳೆಗಳನ್ನು ಗೊತ್ತಾದ ಪ್ರಮಾಣದಲ್ಲಿ ಹೊಂದಿಸಲೂ ಕಚ್ಛಾವಸ್ತುವನ್ನು ಪೂರ್ಣ ಸಿದ್ಧತೆಯ ಯಂತ್ರಗಳ ಕ್ರಿಯೆಗಳಿಗೆ ಒಳಪಡಿಸಬೇಕು. ಇಲ್ಲಿ ಕಚ್ಛಾವಸ್ತುವಿನಲ್ಲಿಯ ಕಶ್ಮಲಗಳು ಬೇರ್ಪಟ್ಟು ಎಲೆಗಳು ಸಡಿಲಗೊಳ್ಳುತ್ತವೆ. ಇದಾದ ತರುವಾಯ ಎಲೆಗಳನ್ನು ಬಿಡಿಬಿಡಿಯಾಗಿ ಬೇರ್ಪಡಿಸಿ ತುಂಡಾದ ಎಳೆಗಳಿಲ್ಲದಂತೆ ಯಂತ್ರಗಳಲ್ಲಿ ಬಾಚುತ್ತಾರೆ. ಇದರಿಂದ ಎಳೆಗಳ ಸಮಾಂತರ ಹಂಚಿಕೆಯಾಗಿ ವಸ್ತು ದಪ್ಪವಾದ ಬತ್ತಿಯ ರೂಪದಲ್ಲಿ ತಯಾರಾಗುತ್ತದೆ. ಕೊನೆಗೆ ಈ ಬತ್ತಿಯನ್ನು ತೆಳುವಾಗಿಸುವ ಯಂತ್ರಗಳ ಕ್ರಿಯೆಗಳಿಗೆ ಒಳಗಾಗಿಸಿ ಕ್ರಮಕ್ರಮವಾಗಿ ದಾರವಾಗಿ ಮಾರ್ಪಡಿಸುತ್ತಾರೆ. ಬಳಸುವ ಯಂತ್ರದ ಸ್ವರೂಪ ಮತ್ತು ದಾರ ಕೊನೆಗೆ ಪರಿವರ್ತಿತವಾಗುವ ಸಂಖ್ಯೆ (ಯಾರ್ನ್‍ಕೌಂಟ್) ಇವುಗಳಿಗೆ ಅನುಗುಣವಾಗಿ ಈ ಕ್ರಿಯೆಗಳ ಸಂಖ್ಯೆ ಉಂಟು. ದಾರ ಹುರಿಗೊಂಡು ಕೊನೆಗೆ ಕಂಡಿಕೆಯ (ಬಾಬಿನ್) ಮೇಲೆ ಸುತ್ತಿಕೊಳ್ಳುತ್ತದೆ. ದಾರದ ಸಂಖ್ಯೆಯನ್ನು ಒಂದು ಪೌಂಡ್ ತೂಕದಲ್ಲಿ ಅಡಕವಾಗಿರುವ ಗೊತ್ತಾದ ಮಾನಗಳ ಅಡಿಗಳ ಸಂಖ್ಯೆಗೆ ಅನುಗುಣವಾಗಿ ನಿರ್ಧರಿಸುತ್ತಾರೆ. ಹತ್ತಿಯ ದಾರದಲ್ಲಿ ಈ ಸಂಖ್ಯೆ ಹೆಚ್ಚಾದಷ್ಟು ನೂಲು ನವುರಾಗುತ್ತದೆ. ಇದು ಕಡಿಮೆ ಆದಷ್ಟೂ ನೂಲು ದಪ್ಪವಾಗುತ್ತದೆ. ರೇಷ್ಮೆ, ಕೃತಕ ರೇಷ್ಮೆ, ನೈಲಾನ್, ಟೆರಿಲಿನ್ ಇತ್ಯಾದಿಗಳ ಅವಿಚ್ಛಿನ್ನ ತಂತುಗಳಿಂದ ಅವಿಚ್ಛಿನ್ನ ದಾರಗಳನ್ನು ತಯಾರಿಸುತ್ತಾರೆ. ಅಲ್ಲಿ ಅದರ ತೂಕಕ್ಕೆ ಅನುಗುಣವಾಗಿ ಅದರ ಸಂಖ್ಯೆಯನ್ನು ಇಳಿಸುತ್ತಾರೆ. ಈಚೆಗೆ ಎಲ್ಲಾ ದಾರಗಳ ಸಂಖ್ಯೆಯನ್ನು ಹೊಸದಾಗಿ ಟೆಕ್ಸ್ ಎಂಬ ಒಂದೇ ಪದ್ಧತಿಯಲ್ಲಿ ಎಣಿಸುವುದು ಕ್ರಮ. ದಾರವನ್ನು ವಿವಿಧ ಉದ್ದೇಶಗಳಿಗೆ ಉಪಯೋಗಿಸುತ್ತಾರೆ. ಉದಾಹರಣೆಗಾಗಿ ಅದನ್ನು ಬಟ್ಟೆಯಲ್ಲಿ ಹಾಸು (ವಾರ್ಪ್) ಮತ್ತು ಹೊಕ್ಕಿನ (ವೆಫ್ಟ್) ದಾರವಾಗಿ ಅಥವಾ ಹೆಣಿಗೆ ದಾರವಾಗಿ ಉಪಯೋಗಿಸಲು ಆಯಾ ಕೆಲಸಕ್ಕೆ ಅಗತ್ಯವಾದಷ್ಟು ಹುರಿಯನ್ನು ಕೊಟ್ಟಿರುತ್ತಾರೆ. ಕ್ರೇನ್ ಅಥವಾ ವಾಯಿಲ್ ದಾರಗಳಿಗೆ ಹಾಸಿನ ದಾರಕ್ಕಿಂತ ಹೆಚ್ಚಾಗಿ ಹುರಿಯನ್ನು ಕೊಟ್ಟಿರುತ್ತಾರೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ನೂಲು&oldid=894570" ಇಂದ ಪಡೆಯಲ್ಪಟ್ಟಿದೆ