ವಿಷಯಕ್ಕೆ ಹೋಗು

ಅಂಟಿಕೆ -ಪಂಟಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮುನ್ನುಡಿ

[ಬದಲಾಯಿಸಿ]

ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಪ್ರಚಾರದಲ್ಲಿರುವ ಒಂದು ಸಂಪ್ರದಾಯ. ಇದಕ್ಕೆ ಹಬ್ಬ ಹಾಡುವುದು, ದೀಪ ನೀಡುವುದು ಎಂಬ ಹೆಸರುಗಳೂ ಇವೆ. ತೀರ್ಥಹಳ್ಳಿಯ ಸುತ್ತಮುತ್ತ ಮಾತ್ರ ಇದಕ್ಕೆ ಅಂಟಿಕೆ ಪಂಟಿಕೆ ಎನ್ನುತ್ತಾರೆ.ಅಂಟಿಗೆ-ಪಂಟಿಗೆಯು ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿಯ ಕೆಲವು ಭಾಗಗಳಲ್ಲಿ ಪ್ರಚಲಿತದಲ್ಲಿರುವ ಕಲೆ. ಅವಂಟಿಗ್ಯೋ-ಪವಂಟಿಗ್ಯೋ, ಅಡೀಪೀಡಿ, ಅಂಟಿ ಪಂಟಿ, ಅವಟಿಗೋ ಪವಟಿಗೋ, ಜೌಂಟಿಗ್ಯೋ-ಸುಂಟಿಗ್ಯೋ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಮುಖ್ಯವಾಗಿ ದೀವರು, ಲಿಂಗಾಯಿತರು, ಬಂಟರು, ಒಕ್ಕಲಿಗರು ಹಾಗೂ ಹಸಲರು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಅಂಟಿಗೆ ಪಂಟಿಗೆ ಪದಗಳಲ್ಲಿ ಅಂಟಿಗೆ ಕುರಿತು ಗೋಜಲುಗಳಿವೆ. "ಅಂಟಿಸುವುದೇ ಅಂಟಿಗೆ" ಎನ್ನುವ ಅರ್ಥದಲ್ಲಿ ಆ ಪದವನ್ನು ಇಲ್ಲಿ ಪರಿಗಣಿಸುವುದು ಅವೈಜ್ಞಾನಿಕವಲ್ಲ. ಆದರೆ ಪಂಟಿಗೆಯ ಬಗೆಗೆ ಇನ್ನೂ ಗೊಂದಲಗಳಿವೆ. ವಿದ್ವಾಂಸರು ತಮಿಳಿನ ಪಂಟಿಗೈ ಪದ ಕುರಿತು ಉಲ್ಲೇಖಿಸಿದ್ದಾರೆ. ಪಂಟಿಗೈ ಪದಕ್ಕಿರುವ ಹಬ್ಬ ಎನ್ನುವ ಅರ್ಥದಲ್ಲಿ ಅಂಟಿಗೆ ಪಂಟಿಗೆಯನ್ನು ದೀಪಾವಳಿ ಹಬ್ಬ ಎಂಬ ಮೂಲಾರ್ಥವಿರಬಹುದು ಎಂದಿದ್ದಾರೆ. ಈ ದೆಸೆಯಲ್ಲಿ ಚರ್ಚೆಗೆ ಅವಕಾಶವಿರುವುದರಿಂದ ಮುಂದಿನ ವಿವರಣೆಯನ್ನು ನೀಡಲಾಗಿದೆ.

ಸಂಪ್ರದಾಯ

[ಬದಲಾಯಿಸಿ]

ದೀಪಾವಳಿಬಲಿಪಾಡ್ಯಮಿ ದಿನದಿಂದ ಹಿಡಿದು ಮೂರು ದಿನಗಳವರೆಗೆ ಹಳ್ಳಿಯ ರೈತರು (ಒಕ್ಕಲಿಗರು ದೇವರು, ಹಸಲರು ಮುಂತಾದ ವರ್ಗಗಳವರು) ಮನೆ ಮನೆಗೂ ದೀಪಾವಳಿಯ ಬೆಳಕಿನ ದಿವ್ಯ ಸಂದೇಶವನ್ನು ಒಯ್ಯುತ್ತ ಜ್ಯೋತಿ ಹಚ್ಚಿ ಹೀಗೆ ಹಾಡುತ್ತಾರೆ, 'ಮಣ್ಣಲ್ಲಿ ಹುಟ್ಟಿದೆ, ಮಣ್ಣಲ್ಲಿ ಬೆಳೆದೆ, ಎಣ್ನೆಲಿ ಕಣ್ನಬಿಟ್ಟಿದೆ, ಜಗಜ್ಯೋತಿ ನಾ ಸತ್ಯದಿಂದ ಉರಿವೆ ಜಗಜ್ಯೋತಿ'. “ಬಾಗಿಲು ಬಾಗಿಲು ಚಂದ ಈ ಮನೆಯ ಬಾಗಿಲು ಚಂದ, ಬಾಗಿಲ ಮ್ಯಾಲೇನು ಬರೆದಾರೆ, ಬಾಗಿಲ ಮ್ಯಾಲೇನು ಬರೆದಾರೆ ಸಿರಿಕೈಲಿ, ಕೊಚ್ಚು ಪಾಲುವಾಣದ ಗಿಳಿವಿಂಡು, ಅಂದುಳ, ಮನೆಗೆ ಚಂದುಳ್ಳ ಕದವು, ಚಂದುಳ್ಳ ಕದಕ ಚಿನ್ನದ ಅಗಣಿಯ,ತೆಗೆ ಸೈ ವಜ್ರದ ಅಗಣೀಯ! ಆ ಮನೆ ದೀಪಧಾರಿಗಳಿಗೆ ಅಂದದ ಅರಮನೆಯಾಗಿ, ಚಿನ್ನದ ಬಾಗಿಲಾಗಿ, ವಜ್ರದ ಅಗಣಿಯಾಗಿ ಹಾಡುಗಳಲ್ಲಿ ವರ್ಣಿತವಾಗುತ್ತವೆ. ಬಾಗಿಲನ್ನು ತೆರೆದು ದೀಪಧಾರಿಗಳನ್ನು ಬರಮಾಡಿಕೊಳ್ಳುತ್ತಾರೆ. ಮನೆಯ ಒಡತಿ ದೀಪಕ್ಕೆ ಎಣ್ಣೆ ಎರೆದು, ದೀಪದಿಂದ ತನ್ನ ಹಣತೆಗೆ ಅಂಟಿಸಿಕೊಂಡು ಒಲೆಯ ಬೆಂಕಿಯಲ್ಲಿ ಅಗ್ನಿ ಗೂಡಿಸುತ್ತಾಳೆ. ಹಣತೆಯನ್ನು ದೇವರ ಮುಂದೆ ಇಟ್ಟು ಕೈ ಮುಗಿಯುತ್ತಾಳೆ. ದೀಪಧಾರಿಗಳು “ರನ್ನಾದಟ್ಟಾಕೆ ಬಣ್ಣದೇಣಿಯಾ ಚಾಚಿ, ಸಾಲೆಣ್ಣೆ ಕೊಡುವ ಬಾಯಿಬಿಚ್ಚಿ, ಸಾಲೆಣ್ಣೆ ಕೊಡವ ಬಾಯಿಬಿಚ್ಚಿ ಎಣ್ಣೆಯ ಬಗಸಿ, ಜ್ಯೋತಮ್ಮ ಗೆಣ್ಣೆ ಎರೆ ಬನ್ನಿ, ಎಣ್ಣೆಯ ನೆರೆದಾರೆ ಪುಣ್ಯಾದ ಫಲ ನಿಮಗೆ, ಮುಂದಣ ದೇವರಿಗೊಂದರಿಕ್ಯಾದ, ಮುಂದಣ ದೇವರಿಗೊಂದರಿಕ್ಯಾದ ಕಾರಣದಿಂದ, ಕಾಮನುಡುಗಾರು ನುಡಿಸ್ಯಾರು, ಕಾಮನುಡುಗಾರು ಏನೆಂದು ನುಡಿಸ್ಯಾರು, ಕಂದಯ್ಯರ ಫಲವೇ ತಮಗಾದು ಕಾರಣದಿಂದ, ಸಾವಿರ ಕಾಲ ಸುಖಿಬಾಳಿ” ಎಂದು ಹಾಡುತ್ತಾರೆ.

ತಂಡಗಳು ಮತ್ತು ನಿಯಮಗಳು

[ಬದಲಾಯಿಸಿ]

ಒಂದೊಂದು ಸೀಮೆಯಲ್ಲೂ (೩ ಹಳ್ಳಿಗಳ ಗುಂಪು) ೪ ರಿಂದ ೬ ಜನರಿರುವ ಹಲವು ತಂಡಗಳು ಹಬ್ಬಹಡಲು ಹೋಗುವುದುಂಟು. ಆ ದಿನ ರಾತ್ರಿ ಆ ಸೀಮೆಯ ದೇವಸ್ಥಾನಕ್ಕೆ ಹೋಗಿ ಅಲ್ಲಿ ತಮ್ಮ ಹಣತೆ ಹಚ್ಚಿಕೊಂಡು ಹಾದಿಯುದ್ದಕ್ಕೂ ಹಾಡುತ್ತಲೇ ಮನೆಮನೆಗೆ ಹೋಗುತ್ತಾರೆ. ದೀಪಧಾರಿಗಳ ಮೇಳದಲ್ಲಿ ತಂಡದ ನಾಯಕತ್ವವನ್ನು ಊರಿನ ಹಿರಿಯ ಯಜಮಾನರು ವಹಿಸಿಕೊಳ್ಳುತ್ತಾರೆ. ತಂಡದಲ್ಲಿ ಹತ್ತರಿಂದ ಐವತ್ತು ಜನರವರೆಗೂ ಇರುತ್ತಾರೆ. ಹಾಡುಗಾರರು ನಾಲ್ಕು ಮಂದಿ ಇದ್ದು, ಅವರಲ್ಲಿ ಇಬ್ಬರು ಮುಮ್ಮೇಳಧಾರಿಗಳು, ಮತ್ತೆ ಇಬ್ಬರು ಹಿಮ್ಮೇಳಧಾರಿಗಳಿರುತ್ತಾರೆ. ತಂಡದಲ್ಲಿ ದೀಪಧಾರಿಗಳು, ದೀವಟಿಕೆಯವರು, ಸಂಭಾವನೆ ಹೊರುವವರು ಇರುತ್ತಾರೆ. ಹೀಗೆ ಈ ದೀವಳಿಗೆಯ ದೀಪದಾರಿಗಳು ದೊಡ್ಡ ತಂಡದಲ್ಲಿ ನೆರೆಯ ಊರುಗಳಿಗೆ ಹೊರಡುತ್ತಾರೆ. ಕವಿದ ಕತ್ತಲಿನಲ್ಲಿ ಕಾಡಿನ ನಡುವೆ ಕೇಕೆ ಹಾಕುತ್ತಾ ‘ದೀಪ್ ದೀಪೋಳ್ಗೆ’ ಎಂದು ಕೂಗುತ್ತಾ ಸಾಗುತ್ತಾರೆ. ಪಂಜಿನವರು, ಲಾಟೀನಿನವರು ಜೊತೆಯಲ್ಲಿರುತ್ತಾರೆ. ಹೀಗೆ ದೀಪಾವಳಿಯ ಮೂರುದಿವಸ ಹಾಡುವಾಗ ಹಿಡಿದ ಜ್ಯೋತಿ ಮಾರ್ಗ ಮಧ್ಯದಲ್ಲಿ ನಂದಬಾರದೆಂದೂ ನಂದಿದರೆ ಕೇಡಾಗುತ್ತದೆಂದೂ ನಂಬಿದ್ದಾರೆ. ಅಂಟಿಗೆ-ಪಂಟಿಗೆ ಕೆಲವು ಖಚಿತವಾದ ನಿಯಮಗಳಿಂದ ಬದ್ಧವಾಗಿರುತ್ತವೆ. ಉದಾಹರಣೆಗೆ ಎರಡು ತಂಡಗಳು ಪರಸ್ಪರ ಎದುರುಬದರಾಗಿ ಸಂಧಿಸಿ ಮುಂದೆ ಹೋಗಬಾರದು. ಅಂತಹ ಸಂಭವವು ಎದುರಾದಾಗ ಅವರು ‘ದೀಪ-ದೀಪೋಳ್ಗೆ ‘ ಎಂದು ಗಟ್ಟಿಯಾಗಿ ಕೂಗುವುದರ ಮೂಲಕ ಪರಸ್ಪರ ಎಚ್ಚರಿಕೆ ಕೊಟ್ಟುಕೊಂಡು ಬೇರೆ ಬೇರೆ ಹಾದಿ ಹಿಡಿಯುತ್ತಾರೆ. ದೀಪಾವಳಿ ಹಬ್ಬದ ರಾತ್ರಿಗಳಲ್ಲಿ ಮಾತ್ರ ತಂಡ ಕಟ್ಟಬೇಕು. ದೇವಾಲಯದಲ್ಲಿ ಹೊತ್ತಿಸಿಕೊಂಡ ದೀಪವನ್ನು ಅಗ್ನಿ ಗುಡಿ ಸೇರುವತನಕ ನಂದುವಂತಿಲ್ಲ. ಬಾಗಿಲಿಗೆ ಬಂದ ಜ್ಯೋತಿಯನ್ನು ಸ್ವಾಗತಿಸಿ, ಎಣ್ಣೆ ಎರೆಯಬೇಕು. ಜ್ಯೋತಿ ಹಿಡಿದವರು ಕಾಲಿಗೆ ಚಪ್ಪಲಿ ಧರಿಸುವಂತಿಲ್ಲ. ಮಲಮೂತ್ರ ವಿಸರ್ಜನೆ ಮಾಡುವಂತಿಲ್ಲ. ಸೂತಕವಿದ್ದವರು ಮೇಳದಲ್ಲಿ ಭಾಗವಹಿಸುವಂತಿಲ್ಲ. ಸೂತಕದವರ ಮನೆಗೆ ದೀಪ ನೀಡುವಂತಿಲ್ಲ. ಒಮ್ಮೆ ಸೂತಕವಾದರೆ, ಮೂರು ವರ್ಷಗಳವರೆಗೆ ಮೇಳದಲ್ಲಿ ಭಾಗವಹಿಸುವಂತಿಲ್ಲ.

ಹಾಡಿನ ಅರ್ಥ ಮತ್ತು ಭಾವ

[ಬದಲಾಯಿಸಿ]

ಒಂದೊಂದು ಮನೆಯ ಮುಂದೆ ನಿಂತು 'ಬಾಗಿಲ ತೆಗಿಯರಮ್ಮ ಭಾಗ್ಯದ ಲಕ್ಷ್ಮಮ್ಮ ಜ್ಯೋತ್ಸಮ್ಮನೊಳಗೆ ಕರಕೊಳ್ಳಿ' ಎಂದು 'ಮುಳ್ಳಾಗೆ ಕಲ್ಲಾಗೆ ಬಂದೇವಯ್ಯ ತಂದೇವಿ ದೀಪವ ಕೊಳ್ಳೀರೀ' ಮುಂತಗಿ ಹಾಡಿಸಿ ಬಾಗಿಲು ತೆಗೆಸಿ 'ಜ್ಯೋತಿಗೆಣ್ಣೆಯರೆಯ ಬನ್ನಿ' ಎಂಬಂತ ಹಾಡುಗಳನ್ನು ಹೇಳಿ ತಮ್ಮ ಹಣತೆಯಿಂದ ಅವರಿಗೆ ದೀಪದ ಕುಡಿ ಕೊಡುತ್ತಾರೆ . ಅನಂತರ ಮನೆಯ ಜಗುಲಿಯನ್ನೇರಿ ಅರ್ಜುನ ಜೋಗಿಯ ಹಾಡು, ಉತ್ತರದೆವಿಯ ಹಾಡು, ತೆರೆ ಅಳೆಯುವ ಹಾಡು, ಕರು ಹಾಡು ಇತ್ಯಾದಿ ಧೀರ್ಘ ಗೀತೆಗಳನ್ನು ಒಕ್ಕೊರಲಿಂದ ಹಾಡುತ್ತರೆ. ಕೊನೆಯಲ್ಲಿ ಮಂಗಳಗೀತೆ ಹೆಳುತ್ತರೆ. ಹಾಡುಗಳಲ್ಲಿ ಹೆಚ್ಚಿನವು ತ್ರಿಪದಿಗಳು. ಉಳಿದವ ದ್ವಿಪದಿ, ಚೌಪದಿ ಮುಂತಾದ ಸರಳ ಗಳೂ ರಚನೆಗಳು, ಅಪರೂಪವಾಗಿ ಲಾವಣಿ ಅಥವಾ ಕೋಲಾಟದ ಮಟ್ಟುಗಳೂ ಇರುತ್ತವೆ. ಹಾಡುವಾಗ ಯಾವುದೇ ವಾದ್ಯ ಜೊತೆಗೆ ಇರುವುದಿಲ್ಲ. ಕಥನಗೀತೆಗಳಲ್ಲಿ ಸಾಮಾನ್ಯವಾಗಿ ಶಿವನ, ಶಿವಭಕ್ತರ ಅಪರೂಪವಾಗಿ ಐತಿಹಾಸಿಕ, ಕೌಟುಂಬಿಕ ಕಥೆಗಳು ಸೇರಿರುತ್ತವೆ. ಹಾಡುವವರಿಗೆ ಮನೆಮನೆಯಲ್ಲೂ ದೀಪಕ್ಕೆ ಎಣ್ಣೆ ಬಟ್ಟೆ ಅಕ್ಕಿ ಹಣ್ಣು ತೆಂಗಿನಕಾಯಿ ಹಬ್ಬದ ತಿಂಡಿ ಚಿಲ್ಲರೆ ಹಣ ಕೊಡುತ್ತರೆ. ಹೀಗೆ ಮೂರು ರಾತ್ರಿ ಪರ್ಯಂತ ದೀಪ ನೀಡುವುದು ನಡೆಯುತ್ತದೆ.

ಅಂಟಿಗೆ ಪಂಟಿಗೆ ಪದಗಳು

[ಬದಲಾಯಿಸಿ]

ಒಂದೊಂದು ಮನೆಯ ಮುಂದೆ ನಿಂತು 'ಬಾಗಿಲ ತೆಗಿಯರಮ್ಮ ಭಾಗ್ಯದ ಲಕ್ಷ್ಮಮ್ಮ ಜ್ಯೋತ್ಸಮ್ಮನೊಳಗೆ ಕರಕೊಳ್ಳಿ' ಎಂದು 'ಮುಳ್ಳಾಗೆ ಕಲ್ಲಾಗೆ ಬಂದೇವಯ್ಯ ತಂದೇವಿ ದೀಪವ ಕೊಳ್ಳೀರೀ' ಮುಂತಾಗಿ ಹಾಡಿಸಿ ಬಾಗಿಲು ತೆಗೆಸಿ 'ಜ್ಯೋತಿಗೆಣ್ಣೆಯರೆಯ ಬನ್ನಿ' ಎಂಬಂತಹ ಹಾಡುಗಳನ್ನು ಹೇಳಿ ತಮ್ಮ ಹಣತೆಯಿಂದ ಅವರಿಗೆ ದೀಪದ ಕುಡಿ ಕೊಡುತ್ತಾರೆ. ಅನಂತರ ಮನೆಯ ಜಗುಲಿಯನ್ನೇರಿ ಅರ್ಜುನ ಜೋಗಿಯ ಹಾಡು, ಉತ್ತರದೇವಿಯ ಹಾಡು, ತೆರೆ ಅಳೆಯುವ ಹಾಡು, ಕರು ಹಾಡು ಇತ್ಯಾದಿ ಧೀರ್ಘ ಗೀತೆಗಳನ್ನು ಒಕ್ಕೊರಲಿಂದ ಹಾಡುತ್ತಾರೆ. ಕೊನೆಯಲ್ಲಿ ಮಂಗಳಗೀತೆ ಹೇಳುತ್ತಾರೆ. ಹಾಡುಗಳಲ್ಲಿ ಹೆಚ್ಚಿನವು ತ್ರಿಪದಿಗಳು. ಉಳಿದವು ದ್ವಿಪದಿ, ಚೌಪದಿ ಮುಂತಾದ ಸರಳಗಳೂ ರಚನೆಗಳು, ಅಪರೂಪವಾಗಿ ಲಾವಣಿ ಅಥವಾ ಕೋಲಾಟದ ಮಟ್ಟುಗಳೂ ಇರುತ್ತವೆ. ಹಾಡುವಾಗ ಯಾವುದೇ ವಾದ್ಯ ಜೊತೆಗೆ ಇರುವುದಿಲ್ಲ. ಕಥನಗೀತೆಗಳಲ್ಲಿ ಸಾಮಾನ್ಯವಾಗಿ ಶಿವನ, ಶಿವಭಕ್ತರ ಅಪರೂಪವಾಗಿ ಐತಿಹಾಸಿಕ, ಕೌಟುಂಬಿಕ ಕಥೆಗಳು ಸೇರಿರುತ್ತವೆ. ಹಾಡುವವರಿಗೆ ಮನೆಮನೆಯಲ್ಲೂ ದೀಪಕ್ಕೆ ಎಣ್ಣೆ ಬಟ್ಟೆ ಅಕ್ಕಿ ಹಣ್ಣು ತೆಂಗಿನಕಾಯಿ ಹಬ್ಬದ ತಿಂಡಿ ಚಿಲ್ಲರೆ ಹಣ ಕೊಡುತ್ತರೆ. ಹೀಗೆ ಮೂರು ರಾತ್ರಿ ಪರ್ಯಂತ ದೀಪ ನೀಡುವುದು ನಡೆಯುತ್ತದೆ. ದೀಪ ಹಚ್ಚುವುದು ಮತ್ತು ದೀಪವನ್ನು ಊರೂರಿಗೆ ಹೊತ್ತೊಯ್ಯುವ ಈ ಸಂಪ್ರದಾಯ ಪ್ರಧಾನವಾಗಿ ಬೆಳಕು ನೀಡಿವ ಕ್ರಿಯೆಗೆ ಸಂಬಂಧಿಸಿದ್ದಾದರೂ ಕಲಾವಿದರು ಹಾಡುವ ಪದಗಳು ಆಷ್ಟಕ್ಕೆ ಸೀಮಿತಗೊಂಡಿಲ್ಲ. ದಾರಿ ಸಾಗಬೇಕಾದ ಕಾರಣ ಹಲವಾರು ಕಥನ ಕವನಗಳೂ ಇವರಿಗೆ ಕರಗತವಾಗಿದೆ. ಹೀಗಾಗಿ ಇವರು ಹಾಡುವ ಪದಗಳನ್ನು ಎರಡು ರೀತಿಯಲ್ಲಿ ವಿಂಹಡಿಸಬಹುದಾಗಿದೆ. ೧.ದೀಪದ ಯಾತ್ರೆಗೆ ಸಂಬಂಧಿಸಿದ ಪದಗಳು. ೨.ಇತರೆ ಪದಗಳು. ದೀಪದ ಯಾತ್ರೆಯ ವಿವಿಧ ಘಟ್ಟಗಳನ್ನು ಶಾಸ್ತ್ರೋಕ್ತವಾಗಿ ಪೂರೈಸುವ ಹಾಡಿನ ಪ್ರಕಾರಗಳೆಂದರೆ ೧. ಬಾಗಿಲು ತೆಗೆಯುವ ಹಾಡು. ೨.ದೀಪ ಹಚ್ಚುವ ಹಾಡು. ೩. ಬಲೀಂದ್ರನ ಹಾಡು. ೪. ಗ್ರಾಮದೇವತೆ ಹಾಡು. ೫. ಎಣ್ಣೆ ಎರೆಯುವ ಹಾಡು. ೬. ಭಾವನೆಂಟರ ಹಾಡು. ೭. ದೀಪ ಆರಿಸುವ ಪದ. ೮. ಜಟ್ಟಿಗನ ಪದ. ಎರಡನೆ ಪ್ರಕಾರದಲ್ಲಿ ಯಾವ ಪ್ರಕಾರವಾದರೂ ಆಗಬಹುದು. ಅಂಥವುಗಳಲ್ಲಿ ಮುಖ್ಯವಾಗಿ ಗೋವಿನ ಪದ, ದ್ರೌಪದಿ ಪದ, ಜೋಗುಳ ಪದ, ಗಂಗೆ ಗೌರಿ ಪದ, ಥರಣಮ್ಮನ ಪದ, ಬಂಜೆ ಪದ, ಗುಣಸಾಗರೀ ಪದ, ಕವಲೇ ಪದ, ಶಿವಯೋಗಿ ಪದ, ಉತ್ತರ ದೇವಿ ಪದ ಇತ್ಯಾದಿ ಕಥನಗಳಿರುತ್ತವೆ. ಉದಾಹರಣೆಗಾಗಿ ದೀಪದ ಯಾತ್ರಗೆ ಸಂಬಮಧಿಸಿದ ಒಂದೆರಡು ಹಾಡುಳ ತುಣುಕುಗಳನ್ನು ನೋಡಬಹುದು. ಊರಿಗೆ ಪ್ರವೇಶಿಸಿದ ಮೊದಲಲ್ಲಿ: ದಿಮ್ಮಿಸಾಲ್ಹೊಡಿರಣ್ಣ ದಿಮ್ಮಿಸಾಲ್ಹೊಡಿರಣ್ಣ ದಿಮ್ಮಿಸಾಲ್ಹೊಡಿರಣ್ಣ ಒಂದೊಂದೆ ದನಿಗೆ ಎತ್ತಿದ ಸಲಿಗೆ ಕಿತ್ತೆದ್ದು ಬರಲೋ ಈ ಊರ ದೇವರಿಗೆ ಎನೇನ ಉಡುಗರೋ ಈ ಊರ ಜಟಿಗಪ್ಪಗೆ ಎನೇನ ಉಡುಗರೋ ಊರ ಮಾಸ್ತ್ಯಮ್ಮಾಗೆ ಎನೇನ ಉಡುಗರೋ ಹೇರಲ್ಲಿ ಕಾಯೋ ಹೆಡಿಗಲ್ಲಿ ಹಣ್ಣೊ ಸತ್ಯವಂತನಾದರೆ ಸಭೆ ಮುಂದೆ ಬರಲೋ ಸಭೆಗೆ ನಮಗು ಸಮತೋಷ ತರಲೋ ಆಚೆಯ ದಡದಾಗೆ ಯಾತರ ಬೆಳಕು ಸ್ವನಾಗರ ಹುಡುಗಿಯ ಪಟ್ಟಿಯ ಬೆಳಕೋ ಕಾಮಣ್ಣ ಭೀಮಣ್ಣ ಎನು ಮಾಡಿತ್ತಿದ್ದಿರೋ ಕಗ್ಗಲ್ಲ ಕಡಿದು ಹಿಟ್ಟು ಮಾಡುತ್ತಿದ್ದರೋ

ಮೇಳದ ಮುಕ್ತಾಯ

[ಬದಲಾಯಿಸಿ]

ಮೂರು ದಿನವಾದ ಮೇಲೆ ದೀಪದ ಬತ್ತಿಯನ್ನು ಹಣತೆಯಿಂದ ತೆಗೆದು ಹಲಸಿನ ಮರದ ಕೊಂಬೆಯ ಮೇಲಿಟ್ಟು ಅದಕ್ಕೆ ಕೈ ಮುಗಿಯುತ್ತಾರೆ.“ಅಂಟಿಕೆ-ಪಂಟಿಕೆ ಔಂತ್ಲ” ಎಂದು ಕರೆಯುವ ಸಾಮೂಹಿಕ ಔತಣಕೂಟವನ್ನು ಏರ್ಪಡಿಸುತ್ತಾರೆ. ಮೇಳದಲ್ಲಿ ಸಂಗ್ರಹಿಸಿದ ದವಸ-ಧಾನ್ಯ ಹಾಗೂ ಹಣದಿಂದ ಔತಣಕೂಟದ ಖರ್ಚುಗಳನ್ನು ಭರಿಸುತ್ತಾರೆ. ಅಂದು ಊರಿನವರಲ್ಲದೆ ಸುತ್ತಲಿನ ಊರಿನವರನ್ನು ಸ್ವಾಗತಿಸುತ್ತಾರೆ. ಜ್ಯೋತಿ ಕಳುಹಿಸಲು ಒಂದು ನಿಗದಿತ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಊರಿನ ಹಲಸಿನ ತೋಪಿನ ದೊಡ್ಡ ಬಯಲೇ ಸಮಾರಂಭದ ಸ್ಥಳವಾಗಿರುತ್ತದೆ. ಹಾಲು ಸುರಿಸುವ ಆಲ, ಹಲಸು ಮರಗಳ ಬುಡದಲ್ಲಿ ಜ್ಯೋತಿಯನ್ನು ಇಟ್ಟು, ಎಡೆ ಮಾಡಿ, ಪೂಜೆ ಸಲ್ಲಿಸುತ್ತಾರೆ.ಈ ಸಂದರ್ಭದಲ್ಲಿ ದೀಪ ಹಿಡಿದ ದೀಪಧಾರಿಗಳು ಜ್ಯೋತಿ ಕಳುಹಿಸುವ ಪದಗಳನ್ನು ಹಾಡುತ್ತಾರೆ. “ಒಂದೇ ಬಟ್ಟಲು ಒಂದೇ ಬೆಲ್ಲದಚ್ಚು, ಒಂದೆಲೆ ಹಲಸು ಬಲಬಂದು, ಒಂದೆಲೆ ಹಲಸು ಬಲಬಂದು ಜ್ಯೋತಮ್ಮ ತಾಯಿ, ಒಂದೆ ದೀವಿಗೆಲೆ ಗುಡಿದುಂಬಿ, ಒಂದೆ ದೀವಿಗೆಲೆ ಗುಡಿದುಂಬಿ ಜ್ಯೋತಮ್ಮ ತಾಯಿ, ಇಂದ್ಹೋಗಿ ಮುಂದೆ ಬರಬೇಕು” ಎಂದು ಹಾಡುತ್ತಾರೆ. ಈ ಸಂಪ್ರದಾಯವು ದೀಪ ಮತ್ತು ಅದಕ್ಕೆ ಸಂಬಂಧಿಸಿದ ನಂಬಿಕೆಯ ಅಂಶ ಎದ್ದು ಕಾಣುತ್ತದೆ. ದೀಪ ಅಂಟಿಸುವ ಕ್ರಿಯೆ ಪ್ರಧಾನವಾಗಿಯೂ, ಸುಗ್ಗಿ ಒಳ್ಳೆಯದನ್ನು ಹೊತ್ತು ತರಲಿ ಎಂಬ ಹಾರೈಕೆ ವ್ಯಕ್ತವಾಗಿದೆ. ಮಲೆನಾಡಿನ ಸಾಂಸ್ಕೃತಿಕ ಕನ್ನಡಿಯಂತಿರುವ ಈ ಸಂಪ್ರದಾಯವು ಅಜ್ಞಾನವನ್ನು, ಕತ್ತಲನ್ನು ಆ ಮೂಲಕ ಸಂಕಷ್ಟಗಳನ್ನು ಕಳೆಯುವ ಮುಖ್ಯ ಆಶಯವನ್ನು ಹೊಂದಿದೆ.

ಹಬ್ಬಾಡುವ ಪದ

ಉಲ್ಲೇಖ

[ಬದಲಾಯಿಸಿ]

http://www.classicalkannada.org/DataBase/KANNADA%20UNICODE%20HTML/Folklore%20and%20Folk%20literature/ANTIGE-PANTIGE.htm http://kanaja.in/%E0%B2%9C%E0%B2%BE%E0%B2%A8%E0%B2%AA%E0%B2%A6-%E0%B2%B8%E0%B2%BE%E0%B2%B9%E0%B2%BF%E0%B2%A4%E0%B3%8D%E0%B2%AF-%E0%B2%A6%E0%B2%B0%E0%B3%8D%E0%B2%B6%E0%B2%A8-%E0%B2%B9%E0%B2%9F%E0%B3%8D%E0%B2%9F/ http://kanaja.in/%E0%B2%86%E0%B2%95%E0%B2%B0-%E0%B2%97%E0%B3%8D%E0%B2%B0%E0%B2%82%E0%B2%A5%E0%B2%97%E0%B2%B3%E0%B3%81/