ವಿಷಯಕ್ಕೆ ಹೋಗು

ಕಲ್ಯಾಣ್ ಕುಮಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಲ್ಯಾಣ್ ಕುಮಾರ್
Kalyan Kumar
ಚಿತ್ರ:Kalyan kumar.jpg
Born
ಚೊಕ್ಕಣ್ಣ

1929
Died೧ ಆಗಸ್ಟ್ ೧೯೯೯
Other namesಸಂಪತ್ ಕುಮಾರ್,ಚೊಕ್ಕಣ್ಣ
Occupation(s)ನಟ,ನಿರ್ದೇಶಕ
Years active೧೯೫೪ - ೧೯೯೯
Spouseರೇವತಿ

'ಚೊಕ್ಕಣ್ಣ ಅಯ್ಯಂಗಾರ್' ಎಂದು ಮನೆಯಲ್ಲಿ ಕರೆಯಲ್ಪಡುತ್ತಿದ್ದ, 'ಸಂಪತ್ ಅಯ್ಯಂಗಾರ್' ಎಂಬ ಹೆಸರಿನ ಯುವಕನ ಹೆಸರನ್ನು ಕನ್ನಡ ಚಲನಚಿತ್ರರಂಗದಲ್ಲಿ ಕಲ್ಯಾಣ್ ಕುಮಾರ್ ಎಂದು ಬದಲಾಯಿಸಲಾಯಿತು. ಐವತ್ತರ ದಶಕದಲ್ಲಿ ಅತ್ಯಂತ ಯಶಸ್ಸುಗಳಿಸಿದ ಹಾಗೂ ಕನ್ನಡ ಚಿತ್ರರಂಗವನ್ನಾಳಿದ 'ಕುಮಾರ ತ್ರಯ'ರಲ್ಲಿ ಮೊದಲನೆಯವರೆಂದರೆ ಈ ಕಲ್ಯಾಣಕುಮಾರ್ ರವರೇ. ಇನ್ನಿಬ್ಬರು ರಾಜಕುಮಾರ್ ಮತ್ತು ಉದಯಕುಮಾರ್ ರವರುಗಳು. ಕಾಲಾನುಕ್ರಮದಲ್ಲಿ, ಮುಂದೆ 'ಅಶ್ವಥ್' ಮುಂತಾದ ಕಲಾವಿದರ ಆಗಮನವಾಯಿತು.

ಜನನ ಹಾಗೂ ಬಾಲ್ಯ

[ಬದಲಾಯಿಸಿ]

೧೯೩೬ ರಲ್ಲಿ ಜನಿಸಿದರು. ತಂದೆ ತಾಯಿಗಳಿಗೆ ಇವರು ಡಾಕ್ಟರ್ ಆಗಲೆಂಬ ಆಸೆ. ಆದರೆ ಇವರಿಗೆ ಅಭಿನಯದ ಹುಚ್ಚು. ಇವರು ಅಭಿನಯಿಸಿದ ಮೊದಲ ಚಿತ್ರ ೧೯೫೪ ರಲ್ಲಿ ತೆರೆಕಂಡ ಚಿತ್ರ ನಟಶೇಖರ. ಅದೇ ಮುಂದೆ ಇವರಿಗೆ ಬಿರುದಾಯಿತು. ಸುಮಾರು ೨೦೦ ಚಿತ್ರಗಳಲ್ಲಿ ನಟಿಸಿದ ಕಲ್ಯಾಣ್ ಕುಮಾರ್ ಭಾವಪೂರ್ಣ ಅಭಿನಯಕ್ಕೆ ಹೆಸರುವಾಸಿ. ವಾಸ್ತವದಲ್ಲಿ, ಇವರೇ ಕನ್ನಡದ ಮೊದಲ ಸೂಪರ್ ಸ್ಟಾರ್. ಆ ಕಾಲದಲ್ಲಿ ಇವರು ರಾಜ್ ಗಿಂತ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದರು. ಕಲ್ಯಾಣ್‌ ಕುಮಾರ್ ಎಂದೊಡನೆ ಮೊದಲು ನೆನಪಾಗುವದು ಕನ್ನಡದ ಮೊದಲ ವರ್ಣಚಿತ್ರ ಅಮರಶಿಲ್ಪಿ ಜಕಣಾಚಾರಿ. ಅದರಲ್ಲಿ ಜಕ್ಕಣಾಚಾರಿಯ ಪಾತ್ರಕ್ಕೆ ಜೀವ ತುಂಬಿದವರೇ ಈ ಕಲ್ಯಾಣ್‌ಕುಮಾರ್.

ಕಲ್ಯಾಣ್ ಕುಮಾರ್, ನಟಿಸಿದ ಕೆಲವು ಚಿತ್ರಗಳು

[ಬದಲಾಯಿಸಿ]

ಹಾಗೆಯೇ ಅಂದಿನ ಕೆಲವು ಅತ್ತ್ಯುತ್ತಮ ಚಿತ್ರಗಳಾದ ಮತ್ತು ಒಳ್ಳೆಯ ಅಭಿನಯದ ಚಿತ್ರಗಳು ಸುಬ್ಬಾಶಾಸ್ತ್ರಿ, ಬೆಳ್ಳಿಮೋಡ , ಸದಾರಮೆ, ರಾಯರ ಸೊಸೆ, ಬದುಕುವ ದಾರಿ, ಮಾವನ ಮಗಳು, ಪ್ರೇಮಕ್ಕೂ ಪರ್ಮಿಟ್ಟೇ , ಅರಿಶಿನ ಕುಂಕುಮ , ಬೇಡಿ ಬಂದವಳು , ಆನಂದ ಕಂದ , ಬೆಟ್ಟದ ಕಳ್ಳ ಮತ್ತು ಕುಮಾರ ತ್ರಯರು ಕೂಡಿ ನಟಿಸಿದ ಒಂದೇ ಒಂದು ಚಿತ್ರ ಭೂದಾನ. ಇವರು ಅಂದಿನ ದಿನಗಳಲ್ಲಿ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ನೆಚ್ಚಿನ ನಟ. ಈ ಜೋಡಿಯ ಬೆಳ್ಳಿ ಮೋಡ, ಕಥಾಸಂಗಮ, ಮತ್ತು ಕಾಲೇಜು ರಂಗ ಎಲ್ಲವೂ ಅದ್ಭುತ ಚಿತ್ರಗಳೇ.

ಎಂದೂ ಮರೆಯದ ಹಾಡುಗಳು

[ಬದಲಾಯಿಸಿ]

ಇವರ ಚಿತ್ರಗಳ ಕೆಲವು ಹಾಡುಗಳು ಇಂದಿಗೂ ಮೆಲುಕು ಹಾಕುವಂತಿವೆ. ಬೆಳ್ಳಿಮೋಡ ಚಿತ್ರದ ಬೆಳ್ಳಿಮೋಡದ ಅಂಚಿನಿಂದಾ ಓಡಿಬಂದಾ ಮಿನುಗುತಾರೆ ಎಂಬ ಹಾಡೇ ನಟಿ ಕಲ್ಪನಾರವರಿಗೆ 'ಮಿನುಗುತಾರೆ' ಎಂಬ ಬಿರುದನ್ನು ನೀಡಿದ್ದು. ಇದಲ್ಲದೆ ಬೇಡಿ ಬಂದವಳು ಚಿತ್ರದ "ನೀರಿನಲ್ಲಿ ಅಲೆಯ ಉಂಗುರಾ,ಭೂಮಿ ಮೇಲೆ ಹೂವಿನುಂಗುರಾ,ಮನಸೆಳೆದ ನಲ್ಲೆ ಕೊಟ್ಟಳಲ್ಲಾ ಕೆನ್ನೆ ಮೇಲೆ ಪ್ರೇಮದುಂಗುರಾ" ನಿಜಕ್ಕೂ ಕನ್ನಡದ ಅತ್ತ್ಯುತ್ತಮ ಗೀತೆಗಳಲ್ಲೊಂದು. ಅಮರ ಶಿಲ್ಪಿ ಜಕಣಾಚಾರಿ ಚಿತ್ರದ "ನಿಲ್ಲು ನೀ, ನಿಲ್ಲು ನೀ, ನೀಲವೇಣಿ", ಬೆಳ್ಳಿ ಮೋಡ ಚಿತ್ರದ ಇನ್ನೊಂದು ಗೀತೆ "ಒಡೆಯಿತೆ ಒಲವಿನ ಕನ್ನಡಿ, ಅಳಿಸಿತೆ ಬಾಳಿನ ಮುನ್ನುಡಿ" ಮಧುರವೊ ಮಧುರ. "ಅರಿಶಿನ ಕುಂಕುಮ" ಚಿತ್ರದ ದ.ರಾ.ಬೇಂದ್ರೆ ವಿರಚಿತ ಗೀತೆ "ಇಳಿದು ಬಾ ತಾಯೇ ಇಳಿದು ಬಾ" ಎಂದೆಂದಿಗೂ ಅಮರ ಗೀತೆ. 'ಕಥಾ ಸಂಗಮ' ಚಿತ್ರದ ಪುಟ್ಟಣ್ಣ ಚಿತ್ರಿಸಿದ "ಕಾಳಿದಾಸನ ಕಾವ್ಯ ಲಹರಿಗೆ ಕಾರಣ ಹೆಣ್ಣಿನ ಅ೦ದಾ, ಉಮರ ಖಯ್ಯಾಮನ ಕಾವ್ಯದ ಖುಷಿಗೆ ಕಾರಣ ಹೆಣ್ಣಿನ ಆನಂದಾ" ಎಂಬ ಹಾಡು ಕನ್ನಡದ ಅತ್ತ್ಯುತ್ತಮ ಶೃಂಗಾರ ಗೀತೆಗಳಲ್ಲೊಂದು.

ನಾಯಕಿಯರು

[ಬದಲಾಯಿಸಿ]
  • ಬಿ.ಸರೋಜಾದೇವಿ, ಸಾಹುಕಾರ್ ಜಾನಕಿ, ಕಲ್ಪನಾ, ಜಯಂತಿ, ಭಾರತಿ, ವಂದನಾ, ಚಂದ್ರಕಲಾ, ಆರತಿ, ಮೈನಾವತಿ, ಬಿ.ವಿ.ರಾಧ, ಜಯಲಲಿತಾ (ತಮಿಳು ನಾಡಿನ ಮುಖ್ಯ ಮಂತ್ರಿ) ಇವರೆಲ್ಲಾ ಕಲ್ಯಾಣ ಕುಮಾರ್ ಜೊತೆ ನಟಿಸಿದ ಜನಪ್ರಿಯ ನಾಯಕಿಯರು.
  • ಕನ್ನಡ ಚಿತ್ರರಂಗದ ಭೀಷ್ಮ ಜಿ.ವಿ.ಅಯ್ಯರ್ ರವರ ಭೂದಾನ, ತಾಯಿ ಕರುಳು ಮತ್ತು ಲಾಯರ್ ಮಗಳು ಇವು ಇವರ ಇನ್ನೂ ಕೆಲವು ಉತ್ತಮ ಚಿತ್ರಗಳು.
  • ಕಲ್ಯಾಣ ಕುಮಾರ್‌ರನ್ನು ಒಂದು ರೀತಿ ಹಿಂದಿ ಚಿತ್ರರಂಗದ ನಟ ರಾಜೇಂದ್ರ ಕುಮಾರ್‌ಗೆ ಹೋಲಿಸಲಾಗಿದೆ. ಅವರ ಚಿತ್ರಗಳಂತೆ ಇವರ ಚಿತ್ರಗಳೂ ಭಾವಪೂರ್ಣ ಮತ್ತು ಹೆಂಗಳೆಯರ ಮೆಚ್ಚಿನ ಚಿತ್ರಗಳೂ ಹೌದು (ಇವರ ಚಿತ್ರಗಳಲ್ಲಿ ನಾಯಕನಷ್ಟೇ ನಾಯಕಿ ಪ್ರಧಾನವಾಗಿರುವುದೂ ಇದಕ್ಕೆ ಕಾರಣ).
  • ಕಲ್ಯಾಣ ಕುಮಾರ್ ಕೇವಲ ಕನ್ನಡವಷ್ಟೇ ಅಲ್ಲ ತೆಲುಗು ಮತ್ತು ತಮಿಳು ಚಿತ್ರಗಳಲ್ಲೂ ನಟಿಸಿದ್ದರು.
  • ತಮಿಳಿನಲ್ಲಂತೂ ಒಂದು ಕಾಲದಲ್ಲಿ ಇವರಿಗೆ ಶಿವಾಜಿ ಗಣೇಶನ್ ಮತ್ತು ಎಂ.ಜಿ.ರಾಮಚಂದ್ರನ್‌ ಅವರಿಗೆ ಸಮಾನವಾದ ಜನಪ್ರಿಯತೆ ಇತ್ತು.
  • ಆ ಜನಪ್ರಿಯತೆಯೇ ಇವರಿಗೆ ಮುಂದೆ ಮುಳುವಾಯಿತು. ತಮಿಳಿನಲ್ಲಿ ಸಿಕ್ಕ ಜನಪ್ರಿಯತೆ ಮತ್ತು ಹೆಚ್ಚಿನ ಹಣದಾಸೆಗೆ ಮುಂದೆ ಕನ್ನಡ ಚಿತ್ರರಂಗವನ್ನು ನಿರ್ಲಕ್ಷಿಸಿ ತಮಿಳಿಗೆ ವಲಸೆ ಹೋದ ಕಲ್ಯಾಣ್‌ ಕುಮಾರ್, ಅಲ್ಲಿ ಕೆಲವು ದಿನ ಜನಪ್ರಿಯರಾಗಿ ಮೆರೆದರು.ಆದರೆ ಕನ್ನಡದ ನಟನೊಬ್ಬನ ಜನಪ್ರಿಯತೆ ಸಹಿಸದ ಅಂದಿನ ತಮಿಳು ಸೂಪರ್ ಸ್ಟಾರ್‌ಗಳ ರಾಜಕೀಯಕ್ಕೆ ಬಲಿಯಾಗಿ ಜನಪ್ರಿಯತೆ ಕಳೆದುಕೊಂಡು, ಮತ್ತೆ ಕನ್ನಡ ಚಿತ್ರರಂಗಕ್ಕೆ ಬರುವಷ್ಟರಲ್ಲೇ ತುಂಬಾ ತಡವಾಗಿತ್ತು, ರಾಜ್‌ ಕುಮಾರ್ ಆಗಲೇ "ಕನ್ನಡಿಗರ ಕಣ್ಮಣಿ" ಯಾಗಿದ್ದರು.
  • ಮತ್ತೆ ಕನ್ನಡದಲ್ಲಿ ಮರಳಿ ಜನಪ್ರಿಯತೆಗಳಿಸಲಾಗದೇ ನಿರಾಶೆಯಿಂದ ಕುಡಿತದ ಚಟಕ್ಕೆ ಬಿದ್ದ ಕಲ್ಯಾಣ್‌ ಕುಮಾರ್ ಮತ್ತಷ್ತು ಪಾತಾಳಕ್ಕೆ ಜಾರಿದರು. (ಹೀಗೆ ಜನಪ್ರಿಯತೆಯ ಅಲೆಯಲ್ಲಿ ಮದ್ಯ-ವ್ಯಸನಕ್ಕೆ ಬಿದ್ದು ತಮ್ಮ ದೇಹ ಸೌಂದರ್ಯ ಕೆಡಿಸಿಕೊಂಡು ಖಳನಾಯಕನ ಪಾತ್ರಕ್ಕೆ ಹಿಂಬಡ್ತಿ ಪಡೆದ ಇನ್ನೊಬ್ಬ ನಾಯಕ ಉದಯಕುಮಾರ್).

ಕಲ್ಯಾಣಕುಮಾರ್ ರವರ, ಚಿತ್ರ-ಜೀವನದ ಏರಿಳಿತಗಳು

[ಬದಲಾಯಿಸಿ]
  • ನಟನೆಯ ಜೊತೆ ತಮ್ಮ ನಿಜ ನಾಮಧೇಯ ಸಂಪತ್‌ ಕುಮಾರ್ ಹೆಸರಿನಲ್ಲಿ "ಲವ್ ಇನ್ ಬ್ಯಾಂಗಳೂರ್" ಎಂಬ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ ಕಲ್ಯಾಣ ಕುಮಾರ್ ಈ ಚಿತ್ರದಲ್ಲಿ ನಟಿ ಭಾರತಿಯವರನ್ನು ನಾಯಕಿಯಾಗಿ ಪರಿಚಯಿಸಿದರು. ನಂತರ ಜಿ.ವಿ.ಐಯ್ಯರ್ ನಿರ್ಮಾಣದ ಕಲ್ಲು ಸಕ್ಕರೆ ಚಿತ್ರದ ನಿರ್ದೇಶನವನ್ನೂ ಮಾಡಿದರು. ಆದರೆ ಈ ಎರಡೂ ಚಿತ್ರಗಳು ಅವರಿಗೆ ಹೆಸರು ತಂದವೇ ಹೊರತು ದುಡ್ಡು ತರಲಿಲ್ಲ. ಅವರ ಅರ್ಥಿಕ ಸ್ಥಿತಿ ಒಮ್ಮೆಲೇ ಮುಗ್ಗರಿಸಿತು. ಇದಲ್ಲದೇ ಅಹಂಕಾರದ ನಡೆವಳಿಕೆ, ಕುಡಿತ, ಇದರ ಮೇಲೆ ಕಳಸವಿಟ್ಟಂತೆ ಹೆಚ್ಚಿನ ದುಡ್ಡಿಗಾಗಿ ಬೇಡಿಕೆ, ಅದಕ್ಕಾಗೇ 'ತಮಿಳು ಚಿತ್ರಗಳ ವ್ಯಾಮೋಹ'ದಿಂದ ಹಲವು ಕನ್ನಡ ಚಿತ್ರಗಳನ್ನು ಕಳೆದುಕೊಂಡು ಕೊನೆಗೊಮ್ಮೆ ಚಿತ್ರ ರಂಗದಿಂದಲೇ ದೂರವಾಗಬೇಕಾಯಿತು.
  • ಇಂಥ ಪರಿಸ್ಥಿತಿಯಲ್ಲೂ ೫೫೫ ಸಿಗರೇಟ್ ಮತ್ತು ಕುಡಿತದ ಶೋಕಿ ಅವರಿಂದ ದೂರವಾಗಲಿಲ್ಲ. ಹೀಗಾಗಿ ದುಡ್ದಿನಾಸೆಗೆ ಅನೇಕ ವ್ಯಾಪಾರ/ವ್ಯವಹಾರ ಗಳಿಗೂ ಕೈ ಹಾಕಿದ ಕಲ್ಯಾಣ್ ಕುಮಾರ್ ಹೋಟಲ್ ಮತ್ತು ಕೋಳಿ ಫಾರ್ಮ್ ಉದ್ಯಮಗಳಿಗೂ ಕೈ ಹಾಕಿದರು. ಆದರೆ ಅವೂ ಇವರಿಗೆ ಲಾಭ ತಂದು ಕೊಡಲಿಲ್ಲ.
  • ಇಂಥ ಕಠಿಣ ಪರಿಸ್ಥಿತಿಯಲ್ಲಿದ್ದ ಕಲ್ಯಾಣ್ ಕುಮಾರ್ ಗೆ ಮತ್ತೆ ಪಾತ್ರವಿತ್ತು ಜೀವದಾನ ಮಾಡಿದ್ದು ನಿರ್ಮಾಪಕ ಅಬ್ಬಯ್ಯ ನಾಯ್ಡು ತಮ್ಮ ತಾಯಿಯ ನುಡಿ ಚಿತ್ರದ ಮೂಲಕ ಕಲ್ಯಾಣ್‌ ಕುಮಾರ್ ಚಿತ್ರರಂಗದ ಮರುಪ್ರವೇಶಕ್ಕೆ ಕಾರಣರಾದರು. ಆದರೆ ನಾಯಕನಾಗಿ ಅಲ್ಲ, ತಮ್ಮ ವಯಸ್ಸಿಗೊಪ್ಪುವ ಚಾರಿತ್ರಿಕ ಪಾತ್ರಗಳಲ್ಲಿ. ಆದೇ ಭಾವಪೂರ್ಣ ಅಭಿನಯ ನೀಡಿದ ಕಲ್ಯಾಣ್‌ ಕುಮಾರ್ ತಮ್ಮಲ್ಲಿನ್ನೂ ಅಭಿನಯ ಸಾಮರ್ಥ್ಯ ಕುಗ್ಗಿಲ್ಲ ಎಂದು ನಿರೂಪಿಸಿದರು ಮತ್ತು ನಾಯಕನ ಪಾತ್ರಗಳಲ್ಲಿ ಅಲ್ಲದಿದ್ದರೂ ಚಾರಿತ್ರಿಕ ಪಾತ್ರಗಳಿಂದ ಮತ್ತೊಮ್ಮೆ ಜನ ಮನ ಗೆದ್ದರು. ಮತ್ತೆ ಚಿತ್ರರಂಗ ಅವರನ್ನು ಒಪ್ಪಿಕೊಂಡಿತು. ಆರ್ಥಿಕ ಪರಿಸ್ಥಿತಿಯೂ ಸುಧಾರಿಸಿತು.
  • ನಟಿ ರೇವತಿಯವರನ್ನು ಕಲ್ಯಾಣ ಕುಮಾರ್ ಮದುವೆಯಾದರು, ನಟಿ ಕಲ್ಪನಾಳ ಪ್ರೇಮ ಪಾಶಕ್ಕೆ ಸಿಲುಕಿ, ನಿರಾಕರಿಸಲ್ಪಟ್ಟು ನಿರಾಶೆ ಹೊಂದಿದ್ದು, ಅವರ ಖಾಸಗಿ ಜೀವನದ ಒಂದು ಘಟನೆ. 'ಮದ್ಯಪಾನ ವ್ಯಸನ'ಕ್ಕೆ ಅವರು ಬಲಿಯಾದರು.

ಚಿತ್ರರಂಗ ಹಾಗೂ ರಂಗಭೂಮಿಯಲ್ಲಿ ದುಡಿದು ಹಣ್ಣಾದ , ಸಂದರ್ಭ -ಸನ್ನಿವೇಶಗಳಿಂದ ಅಶಕ್ತರಾದ ಕಲಾವಿದರ ಬಗ್ಗೆ ಕಲ್ಯಾಣ್ ಕುಮಾರ್ ಅಪಾರ ಗೌರವ ಅನುಕಂಪ ಹೊಂದಿದ್ದರು . ಹೇಗಾದರೂ , ಎಂತಾದರೂ ಅವರ ಬದುಕಿನಲ್ಲಿ ನೆರವಾಗುವ ಅದಮ್ಯ ಆಸೆ. ೧೯೬೯ ರಲ್ಲಿ "ಅಶಕ್ತ ಕಲಾವಿದರ ಕಲ್ಯಾಣ ಸಮಿತಿ"ಯನ್ನು ಸಹ ಆರಂಭಿಸಿ , ಸ್ಥಾಪಕ ಅಧ್ಯಕ್ಷರಾಗಿ ಮೂರು ವರ್ಷಕಾಲ ದುಡಿದರು . ತಮ್ಮ ಅಭಿನಯದ ಚಿತ್ರಗಳ ಪ್ರದರ್ಶನವೇರ್ಪಡಿಸಿ ಕನ್ನಡ ಚಳವಳಿ ನೇತಾರ ಮ. ರಾಮಮೂರ್ತಿಯವರ ಕುಟುಂಬಕ್ಕೆ ನೆರವೊದಗಿಸುವಂತಹ ಹೃದಯ ವೈಶಾಲ್ಯ ಕಲ್ಯಾಣ್‍ರದ್ದು. ಕನ್ನಡ ಚಿತ್ರರಂಗದಲ್ಲಿ ಸ್ವಂತ ಕಾರು ಹೊಂದಿದ್ದ ಮೊದಲ ಕಲಾವಿದನೆಂಬ ಹೆಗ್ಗಳಿಕೆ ,ಮುಂದೆ ರಾಜಕೀಯ ನಾಯಕಿಯಾದ ಜಯಲಲಿತ ಅವರೊಂದಿಗೆ ಅಭಿನಯಿಸಿದ ಹೆಗ್ಗಳಿಕೆಯೂ ಇವರಿಗಿದೆ."ನಮನ"

ನಂತರ 'ಮನೆತನ' ಎಂಬ ದೂರದರ್ಶನದ ಧಾರಾವಾಹಿಯ ಮುಖಾಂತರ ಮನರಂಜನೆಯ ಮತ್ತೊಂದು ಮಾಧ್ಯಮಕ್ಕೆ ಕಾಲಿಟ್ಟ ಕಲ್ಯಾಣ್‌ ಕುಮಾರ್ ಅತ್ಯಂತ ಜನಪ್ರಿಯರಾದರು. ಈ ಧಾರಾವಾಹಿಯ ಚಿತ್ರೀಕರಣ ಇನ್ನೂ ನಡೆಯುತ್ತಿದ್ದಾಗಲೇ, ಅವರು ತಮ್ಮ ೭೦ನೇ ವಯಸ್ಸಿನಲ್ಲಿ, 'ಇಹಲೋಕ ಯಾತ್ರೆ' ಮುಗಿಸಿದರು.