ವಿಷಯಕ್ಕೆ ಹೋಗು

ಮಿಶ್ರ ಲೋಹ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉಕ್ಕು ಇದರ ಮುಖ್ಯ ಲೋಹ ಕಬ್ಬಿಣವಾಗಿದ್ದು, ಇಂಗಾಲ ಮಿಶ್ರಣಕ್ಕೆ ಉಪಯೋಗಿಸಲ್ಪಟ್ಟ (ಶೇಕಡಾ ೦.೦೨ರಷ್ಟು) ಇನ್ನೊಂದು ಮೂಲಧಾತುವಾಗಿದೆ.
ಎಡದಿಂದ ಬಲಕ್ಕೆ: ಮೂರು ಮಿಶ್ರಲೋಹಗಳು (ಬೆರಿಲಿಯಮ್ ತಾಮ್ರ, ಇನ್ಕೊನೆಲ್, ಉಕ್ಕು) ಮತ್ತು ಮೂರು ಶುದ್ಧ ಲೋಹಗಳು (ಟೈಟೇನಿಯಮ್, ಅಲ್ಯುಮಿನಿಯಮ್, ಮೆಗ್ನೀಸಿಯಮ್)

ಮಿಶ್ರಲೋಹ ಎಂದರೆ ಒಂದಕ್ಕಿಂತ ಹೆಚ್ಚಿನ ಮೂಲಧಾತುಗಳ ಮಿಶ್ರಣ. ಇದು ಲೋಹಗಳ ಮಿಶ್ರಣ ಅಥವಾ ಲೋಹಗಳೊಂದಿಗೆ ಅಲೋಹಗಳ ಮಿಶ್ರಣ (ಉದಾ: ಇಂಗಾಲ, ಸಿಲಿಕಾನ್, ಸಾರಜನಕ, ಆಮ್ಲಜನಕ, ಗಂಧಕ, ರಂಜಕ) ಕೂಡ ಆಗಬಹುದು.[][] ಮಿಶ್ರಲೋಹದ ಉತ್ಪಾದನೆಯಲ್ಲಿ ಇವು ಅದರಲ್ಲಿ ಪ್ರಾಸಂಗಿಕವಾಗಿ ಸೇರಿಕೊಂಡಿರಬಹುದು ಅಥವಾ ಅಂಗಲೋಹಗಳಲ್ಲಿದ್ದ ಕಶ್ಮಲಗಳಾಗಿದ್ದಿರಬಹುದು. ಇಲ್ಲವೆ ಉಕ್ಕಿನ ತಯಾರಿಕೆಯಲ್ಲಿ ಶುದ್ದ ಕಬ್ಬಿಣಕ್ಕೆ ಉದ್ದೇಶಪೂರ್ವಕವಾಗಿ ಸೇರಿಸುವ ಇಂಗಾಲದಂತೆ ಅಗತ್ಯವಾದ ಅಂಗಧಾತುವಾಗಿರಬಹುದು. ಮೂಲಲೋಹಗಳಲ್ಲಿರುವ ಮೃದುತ್ವ, ತುಕ್ಕು ಹಿಡಿಯುವಿಕೆ ಮುಂತಾದ ಅನಾನುಕೂಲತೆಗಳನ್ನು ಹೋಗಲಾಡಿಸಲು ಮಿಶ್ರಲೋಹಗಳನ್ನು ಸೃಷ್ಟಿಸುತ್ತಾರೆ.

ವರ್ಗೀಕರಣ

[ಬದಲಾಯಿಸಿ]

ಕೈಗಾರಿಕಾ ಮಹತ್ತ್ವವುಳ್ಳ ಮಿಶ್ರಲೋಹಗಳನ್ನು ಫೆರಸ್ (ಕಬ್ಬಿಣ) ಮಿಶ್ರಲೋಹಗಳು ಮತ್ತು ನಾನ್‌ಫರೆಸ್ (ಕಬ್ಬಿಣೇತರ) ಮಿಶ್ರಲೋಹಗಳು ಎಂದು ವಿಂಗಡಿಸುವುದು ವಾಡಿಕೆ. ಇವುಗಳ ಹೆಸರೇ ಸೂಚಿಸುವಂತೆ ಮೊದಲನೆಯ ವರ್ಗದ ಬೇರೆ ಒಂದೊ ಎರಡೊ ಲೋಹಗಳ ಅಂಶ ಪ್ರಧಾನ. ಇನ್ನೊಂದು ವರ್ಗೀಕರಣ ವಿಧಾನದ ಪ್ರಕಾರ ಅಂಗಧಾತುಗಳ ಸಂಖ್ಯೆಗೆ ಅನುಗುಣವಾಗಿ ದ್ವಿಘಟಕ (ಬೈನರಿ) ತ್ರಿಘಟಕ (ಟರ್ನರಿ) ಇತ್ಯಾದಿ ಮಿಶ್ರಲೋಹಗಳೆಂದು ಹೆಸರಿಸಲಾಗುವುದು.

ತಯಾರಿಕೆ

[ಬದಲಾಯಿಸಿ]

ಮಿಶ್ರಲೋಹಗಳ ತಯಾರಿಕೆಯಲ್ಲಿ ಒಂದು ಮೂಲಲೋಹವಿರುತ್ತದೆ. ಸಾಮಾನ್ಯವಾಗಿ ಮಿಶ್ರಲೋಹಗಳನ್ನು ತಯಾರಿಸಲು ಅಂಗಲೋಹಗಳನ್ನು ಒಟ್ಟಿಗೆ ಕರಗಿಸಬೇಕು. ಈ ಲೋಹವನ್ನು ಕರಗಿಸಿ ಇದಕ್ಕೆ ಬೇರೆ ಮೂಲಧಾತುಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಸೇರಿಸುತ್ತಾರೆ. ಇದನ್ನು ಬೇಕಾದ ಅಚ್ಚುಗಳಿಗೆ ಹೊಯ್ದು ತಣಿಸುತ್ತಾರೆ. ಕೆಲವು ಮಿಶ್ರಲೋಹಗಳನ್ನು ಲೋಹಗಳ ಪುಡಿಯನ್ನು ಮಿಶ್ರಣಮಾಡಿ ಒತ್ತಡದಲ್ಲಿ ಬಿಸಿಮಾಡುವ ವಿಧಾನದಿಂದಲೂ ತಯಾರಿಸಬಹುದು.

ಅಂಗಲೋಹಗಳ ದ್ರವನಬಿಂದುಗಳಲ್ಲಿ ಅಪಾರ ವ್ಯತ್ಯಾಸವಿದ್ದರೆ ಅಥವಾ ಇವುಗಳಲ್ಲೊಂದು ಹೆಚ್ಚು ಪಟುವಾಗಿದ್ದರೆ ಆಗ ಮೊದಲು ಒಂದು ನಾಯಕ (ಮಾಸ್ಟರ್) ಮಿಶ್ರಲೋಹವನ್ನು ರೂಪಿಸಿಕೊಂಡು ಅನಂತರ ಅದನ್ನು ಕೊಂಚ ಕೊಂಚವಾಗಿ ಇತರ ಅಂಗಲೋಹಗಳೊಡನೆ ಕೂಡಿಸಿ ಕರಗಿಸುವುದು ಕ್ರಮ. ಮಿಶ್ರಲೋಹದ ಸ್ವಭಾವಕ್ಕೆ ಅನುಗುಣವಾಗಿ ದ್ರವನಕಾರ್ಯವನ್ನು ಅನಿಲ, ತೈಲ, ಕೋಕ್ ಅಥವಾ ವಿದ್ಯುತ್ತಿನಿಂದ ಕಾಸಲ್ಪಟ್ಟ ಕುಲುಮೆಗಳಲ್ಲಿ ನಡೆಸುವರು. ಅದುರುಗಳಿಂದ ಲೋಹೋದ್ಧರಣ ಮಾಡುವಾಗ ಕೆಲವು ವೇಳೆ ಮಿಶ್ರಲೋಹಗಳು ಲಭಿಸುವುದುಂಟು. ಇದಕ್ಕೆ ಮಾನಲ್ ಮೆಟಲ್ ನಿದರ್ಶನ. ಅಂಗಲೋಹಗಳನ್ನು ನುಣ್ಣಗೆ ಪುಡಿಮಾಡಿ ಬೆರೆಸಿ ಉನ್ನತ ಒತ್ತಡಕ್ಕೆ ಗುರಿಮಾಡಿ ಒಗ್ಗೂಡಿದ ಮಿಶ್ರಣವನ್ನು ಸಿಂಟರಿಂಗ್ ಘನದ್ರಾವಣವಾಗಿ ಪರಿವರ್ತಿಸುವುದೂ ರೂಢಿಯಲ್ಲಿದೆ.

ಮಿಶ್ರಲೋಹಗಳ ರಚನೆ

[ಬದಲಾಯಿಸಿ]

ಮಿಶ್ರಲೋಹಗಳ ಗುಣಗಳು ಅವುಗಳ ರಚನೆಯನ್ನು ಅವಲಂಬಿಸಿರುವುವು. ಬರಿಗಣ್ಣಿಗೆ ಗೋಚರಿಸದಿದ್ದರೂ ಘನಲೋಹಗಳು ಸ್ಫಟಿಕರೂಪಿಗಳು. ಅಂದರೆ ಅವುಗಳಲ್ಲಿರುವ ಪರಮಾಣುಗಳು ನಿರ್ದಿಷ್ಟ ತ್ರಿಆಯಾಮ ಆಕೃತಿಗಳಲ್ಲಿ ಜೋಡಣೆಯಾಗಿರುತ್ತವೆ. ಬಹುತೇಕ ಲೋಹಗಳು ಕಾಯಮಧ್ಯ ಘನಾಕೃತಿ (ಬಾಡಿ ಸೆಂಟರ್ಡ್ ಕ್ಯೂಬಿಕ್), ಮುಖಮಧ್ಯ ಘನಾಕೃತಿ (ಫೇಸ್ ಸೆಂಟರ್ಡ್ ಕ್ಯೂಬಿಕ್) ಮತ್ತು ಒತ್ತುಕಟ್ಟಿನ ಷಟ್ಕೋನಾಕೃತಿ (ಕ್ಲೋಸ್ ಪ್ಯಾಕ್ಡ್ ಹೆಕ್ಸಾಗನಲ್) ರಚನೆಗಳ ಪೈಕಿ ಯಾವುದಾದರೂ ಒಂದು ಜ್ಯಾಮಿತೀಯ ಆಕೃತಿಯಲ್ಲಿ ಸ್ಪಟಿಕೀಕರಿಸುವುವು. ಪ್ರತಿಯೊಂದು ರಚನೆಯೂ ತನ್ನದೇ ಆದ ಎಕ್ಸ್ ಕಿರಣ ನಮನನಮೂನೆಯನ್ನು (ಡಿಫ್ರ್ಯಾಕ್ಷನ್ ಪ್ಯಾಟರ್ನ್) ಕೊಡುವುದರಿಂದ ಘಟಕಕೋಶದ ಗಾತ್ರವನ್ನು ಲೆಕ್ಕಹಾಕುವುದು ಸುಲಭ. ಒಂದು ಧಾತುವಿನ ಸ್ಫಟಿಕಜಾಲಕದಲ್ಲಿ ಎರಡು ಪರಮಾಣುಗಳ ನಡುವಣ ಕನಿಷ್ಠದೂರವನ್ನು ಪರಮಾಣುವ್ಯಾಸ ಎನ್ನುತ್ತೇವಷ್ಟೆ. ಮಿಶ್ರಲೋಹಗಳ ರಚನೆ ಇದನ್ನು ಅವಲಂಬಿಸಿದೆ.

ಎರಕಹೊಯ್ದ ಮಿಶ್ರಲೋಹಗಳ ಅಂಗಧಾತುಗಳು ನೈಜ ಉಷ್ಣಚಲನೀಯ ಸಮತೋಲನದಲ್ಲಿರುವುದಿಲ್ಲ. ಅಂದರೆ ಮಂಡಲದ ಮುಕ್ತಶಕ್ತಿ ಕನಿಷ್ಠ ಮಟ್ಟದಲ್ಲಿರದು. ಆದರೆ ಅಂಥ ಮಿಶ್ರಲೋಹವನ್ನು ಅದರ ದ್ರವನ ಬಿಂದುವಿಗಿಂತ ಸ್ವಲ್ಪ ಕಡಿಮೆ ಉಷ್ೞತೆಯಲ್ಲಿ ಮಾರ್ದವನ (ಅನೀಲಿಂಗ್) ಮಾಡಿದರೆ ಪರಮಾಣುಗಳ ಮರುಜೋಡಣೆಯಾಗಿ ಕ್ರಮೇಣ ಸಮತೋಲನ ಸ್ಥಿತಿಯಲ್ಲಿ ಸಮೀಪಿಸುವುದು. ಅನಂತರ ಅದನ್ನು ತಣ್ಣೀರಿನಲ್ಲಿ ಅದ್ದಿ ಕ್ಷಿಪ್ತವಾಗಿ ತಣಿಸಿದರೆ ಅದೇ ಸ್ಥಿತಿಯಲ್ಲಿ ಉಳಿಸಿಕೊಂಡು ಬರುತ್ತದೆ. A ಮತ್ತು B ಎಂಬ ಎರಡು ಘಟಕಗಳನ್ನು ಒಳಗೊಂಡ ಮಿಶ್ರಲೋಹ ತಯಾರಿಸುವಾಗ ಪರಿಶುದ್ಧ A ಗೆ B ಯನ್ನು ಸ್ವಲ್ಪವಾಗಿ ಸೇರಿಸುತ್ತ ಬಂದು ಮಿಶ್ರಣದ ಎಕ್ಸ್ ಕಿರಣ ನಮನ ನಮೂನೆಯನ್ನು ತೆಗೆದರೆ ಅದು A ಘಟಕದ ನಮೂನೆಯನ್ನೇ ಹೋಲುವುದು. ಅಂದರೆ ಎರಡರ ರಚನೆಗಳೂ ಒಂದೇ ಎಂದಾಯಿತು. ಇಂಥವನ್ನು  ಪ್ರಾಥಮಿಕ (ಪ್ರೈಮರಿ) ಘನದ್ರಾವಣಗಳು ಎಂದು ಕರೆಯುತ್ತಾರೆ.

ಘನದ್ರಾವಣಗಳಲ್ಲಿ ಎರಡು ಮುಖ್ಯ ಬಗೆಗಳುಂಟು.

ಅಂತರಾಲಿ ಬಗೆ: ಮೊದಲನೆಯದು ಅಂತರಾಲೀ (ಇಂಟರ್‌ಸ್ಟಿಷಿಯಲ್) ಸ್ವಭಾವದ್ದು. ಇಲ್ಲಿ ದ್ರಾವ್ಯವಸ್ತುವಿನ ಪರಮಾಣುಗಳು ದ್ರಾವಕದ ಪರಮಾಣುಗಳ ನಡುವೆ ಇರುವ ರಂಧ್ರ ಅಥವಾ ಕಂಡಿಗಳನ್ನು (ಇಂಟರ್‌ಸ್ಪೇಸ್) ಆಕ್ರಮಿಸಿಕೊಳ್ಳುವುದರಿಂದ ದ್ರಾವಕದ ಜಾಲಕ ಹಿಗ್ಗುವುದು. ಹೀಗಾಗಲು ದ್ರಾವ್ಯವಸ್ತುವಿನ ಪರಮಾಣುಗಳು ಗಾತ್ರದಲ್ಲಿ ದ್ರಾವಕದ ಪರಮಾಣುಗಳಿಗಿಂತ ಕಡಿಮೆಯಾಗಿರಬೇಕು. ಹೀಗೆ ಲೋಹಗಳಲ್ಲಿ ವಿಲೀನವಾಗುವ ಧಾತುಗಳೆಂದರೆ ಹೈಡ್ರೋಜನ್, ಬೋರಾನ್, ಕಾರ್ಬನ್, ನೈಟ್ರೊಜನ್ ಮತ್ತು ಆಕ್ಸಿಜನ್. ಮುಖಮಧ್ಯ ಘನಾಕೃತಿ ರಚನೆಯುಳ್ಳ ಗ್ಯಾಮಾಕಬ್ಬಿಣದಲ್ಲಿ  ಕಾರ್ಬನ್ ವಿಲೀನವಾದಾಗ ಉಂಟಾಗುವ ಘನದ್ರಾವಣ ಉನ್ನತ ಉಷ್ೞತೆಯಲ್ಲಿ ಮಾತ್ರ ಸ್ಥಿರ. ಉಕ್ಕಿನ ಅನೇಕ ಗುಣಗಳಿಗೆ ಈ ರಚನೆ ಕಾರಣ.

ಆದೇಶನೀಯ ಬಗೆ: ದ್ರಾವಕ ಮತ್ತು ದ್ರಾವ್ಯವಸ್ತುವಿನ ಪರಮಾಣುಗಾತ್ರಗಳು ಹೆಚ್ಚು ಕಡಿಮೆ ಸಮವಾಗಿದ್ದರೆ (ಅಂದರೆ ಅವು ಪರಮಾಣು ವ್ಯಾಸದ 15% ಮಿತಿಯೊಳಗಿರತಕ್ಕದ್ದು) ಅವೆರಡೂ ತಮ್ಮ ಸ್ಥಾನಗಳನ್ನು ಸರಾಗವಾಗಿ ಅದಲುಬದಲು ಮಾಡಿಕೊಳ್ಳಬಲ್ಲವು. ಅಂದರೆ ಜಾಲಕದಲ್ಲಿ ಒಂದು ಪರಮಾಣುವಿನ ಬದಲು ಮತ್ತೊಂದು ಆದೇಶಿತವಾಗಲು ಅಡ್ಡಿಯಿಲ್ಲ. ಇಂಥ ಘನದ್ರಾವಣಗಳು ಆದೇಶನೀಯ (ಸಬ್‌ಸ್ಪಿಟ್ಯೂಷನಲ್) ಎನಿಸಿಕೊಳ್ಳುತ್ತವೆ. ಪ್ರಾಥಮಿಕ ಘನದ್ರಾವಣಗಳಾಗಲು ಪರಮಾಣು ಗಾತ್ರವೊಂದೇ ನಿರ್ಣಾಯಕ ಅಂಶವಲ್ಲ. ಅಂಗಧಾತುಗಳ ವಿದ್ಯುದ್ರಾಸಾಯನಿಕ ಲಕ್ಷಣಗಳಲ್ಲಿ ಅತಿಶಯ ವ್ಯತ್ಯಾಸವಿರಕೂಡದು. ಇದೂ ಮುಖ್ಯ. ಉದಾಹರಣಗೆ ಮ್ಯೆಗ್ನಿಸಿಯಮ್ಮಿನಲ್ಲಿ ಆಂಟಿಮೊನಿ ಹೆಚ್ಚು ವಿದ್ಯುದೃಣ ಧಾತುವಾದ್ದರಿಂದ ಮೆಗ್ನೀಸಿಯಮ್ ಆಂಟಿಮೊನೈಡ್ ಎಂಬ ಅತಿಸ್ಥಿರ ಸಂಯುಕ್ತ ಉಂಟಾಗಿ ಪ್ರಾಥಮಿಕ ಘನದ್ರಾವಣವಾಗುವ ಸಾಧ್ಯತೆ ಸೀಮಿತವಾಗುತ್ತದೆ. ಪ್ರಾಥಮಿಕ ಘನದ್ರಾವಣಗಳಲ್ಲಿ ದ್ರಾವ್ಯವಸ್ತುವಿನ ಪರಮಾಣುಗಳೂ ದ್ರಾವಕದ ಪರಮಾಣುಗಳೂ ಒಂದೇ ಜಾಲಕದಲ್ಲಿ ಯಾದೃಚ್ಛಿಕವಾಗಿ ಹಂಚಿಕೊಂಡಿರುವುದೇನೊ ನಿಜ. ಆದರೆ ದ್ರಾವ್ಯ ವಸ್ತುವಿನ ಪರಮಾಣುಗಳು ಅಕ್ಕಪಕ್ಕದಲ್ಲಿರದೆ ಆದಷ್ಟು ದೂರದೂರವೇ ಉಳಿಯಲು ಪ್ರಯತ್ನಿಸುವುವು. ಹಾಗಿದ್ದರೆ ಮಾತ್ರ ಮಿಶ್ರಲೋಹದ ಪ್ರಯಾಸಶಕ್ತಿ (ಸ್ಟ್ರೇನ್ ಎನರ್ಜಿ) ಕಡಿಮೆ ಆಗಿರುತ್ತದೆ. ಆದ್ದರಿಂದ ಈ ಪ್ರವೃತ್ತಿ ಸಹಜವಾದದ್ದು. ಇದು ನಿಯಮವೇನಲ್ಲ. ಅಲ್ಯೂಮಿನಿಯಮ್-ಸತುವಿನ ಕೆಲವು ಮಿಶ್ರಲೋಹಗಳಲ್ಲಿ ತದ್ವಿರುದ್ಧ ಪರಿಸ್ಥಿತಿ ಇರುವುದೆಂದು ಗೊತ್ತಾಗಿದೆ. ಅಂದರೆ ಅವುಗಳಲ್ಲಿ ದ್ರಾವ್ಯವಸ್ತುವಿನ ಪರಮಾಣುಗಳು ಹತ್ತಿರ ಸರಿದು ಗುಂಪುಗೂಡಲು ಹವಣಿಸುತ್ತವೆ.

ಲೋಹಗಳು ವಿದ್ಯುದ್ವಾಹಿಗಳು, ಉಷ್ಣತೆ ಏರಿದಂತೆ ಅವುಗಳ ವಿದ್ಯುನ್ನಿರೋಧ ಕಡಿಮೆ ಆಗುತ್ತ ಹೋಗಿ ಅಂತಿಮವಾಗಿ ನಿರಪೇಕ್ಷಶೂನ್ಯದಲ್ಲಿ ಸೊನ್ನೆ ಆಗುತ್ತದೆ. ತಮ್ಮ ಅಲೆಲಕ್ಷಣಗಳ ದೆಸೆಯಿಂದ ಎಲೆಕ್ಟ್ರಾನುಗಳು ಶುದ್ಧಲೋಹದ ಸ್ಫಟಿಕ ಜಾಲಕದಲ್ಲಿ ನಿರಾತಂಕವಾಗಿ ಓಡಾಡಿಕೊಂಡಿರುತ್ತವೆ. ಆದರೆ ಅವು ಮಿಶ್ರಲೋಹದಲ್ಲಿ ಭಾಗಿಯಾದಾಗ ಸ್ಫಟಿಕ ಜಾಲಕ ವಿಕೃತಿಗೊಂಡು ಎಲೆಕ್ಟ್ರಾನುಗಳ ಸಂಚಾರ ಸ್ವಾತಂತ್ರ್ಯಕ್ಕೆ ಅಡ್ಡಿಯುಂಟಾಗಿ ಅದರ ವಿದ್ಯುನ್ನಿರೋಧದ ಬದಲಾವಣೆ ಅತ್ಯಲ್ಪವಾಗಿರಬೇಕೆಂದು ಅಪೇಕ್ಷಿಸುತ್ತೇವೆಯೊ ಅಲ್ಲಿ (ಅಂದರೆ ಅಂಥ ಉಪಕರಣಗಳಲ್ಲಿ) ಮ್ಯಾಂಗನೀಸ್ ಮಿಶ್ರಲೋಹವನ್ನು (82% Cu, 15% Mn, ಕಬ್ಬಿಣ ಮತ್ತು ನಿಕ್ಕಲ್) ಬಳಸುವುದಾಗಿದೆ.

ಗಡಸುತನ ಮತ್ತು ಬಲ: ಮಿಶ್ರಲೋಹಗಳು ಶುದ್ಧಲೋಹಗಳಿಂತ ಹೆಚ್ಚು ಗಡಸು ಮತ್ತು ಬಲಯುತವಾದವು. ಇದು ಅನುಭವ. ಮಿಶ್ರ ಲೋಹಗಳು ವಿಶೇಷವಾಗಿ ನಿರ್ಮಾಣ ಕಾರ್ಯಗಳಲ್ಲಿ ಬಳಕೆಯಾಗುವುದರಿಂದ ಅವುಗಳ ಯಾಂತ್ರಿಕಗುಣಗಳ ಸುಧಾರಣೆಗೆ ಇಲ್ಲಿ ಆದ್ಯಗಮನ. ಶುದ್ಧಲೋಹಗಳ ಸ್ಫಟಿಕಜಾಲಕದಲ್ಲಿ ಪರಮಾಣುಗಳ ಜೋಡಣೆ ಪರಿಪೂರ್ಣ ಎನ್ನಲಾಗದು. ಅಲ್ಲಲ್ಲಿ ಸ್ಥಾನಚ್ಯುತಿಗಳುಂಟು (ಡಿಸ್‍ಲೋಕೇಷನ್ಸ್). ಇದರಿಂದ ಬೇರೆ ಬೇರೆ ಸಮತಲಗಳಲ್ಲಿರುವ ಪರಮಾಣು ಪದರಗಳು ಒಂದರ ಮೇಲೊಂದು ಸರಾಗವಾಗಿ ಜಾರಬಲ್ಲವು. ಶುದ್ಧಲೋಹಗಳ ದೌರ್ಬಲ್ಯಕ್ಕೆ ಇದು ಕಾರಣ. ಆದರೆ ಅವು ಘನದ್ರಾವಣಗಳಾಗಿ ಮಿಶ್ರಲೋಹಗಳನ್ನು ಉಂಟುಮಾಡಿದಾಗ ದ್ರಾವ್ಯಲೋಹದ ಪರಮಾಣುಗಳು ಈ ಸ್ಥಾನಚ್ಯುತಿಗಳೊಡನೆ ಹೊಂದಿಕೊಂಡು ಪರಮಾಣು ಪದರಗಳ ಜಾರಿಕೆಗೆ ಅಡ್ಡಿಯಾಗುವುದರಿಂದ ಮಿಶ್ರಲೋಹಕ್ಕೆ ಹೆಚ್ಚು ಗಡಸುತನ ಮತ್ತು ಬಲ ಬರುತ್ತವೆ. ಆದರೆ ಗಡಸುತನ ಹೆಚ್ಚಿದಂತೆ ಮಿಶ್ರಲೋಹದ ತನ್ಯತೆ (ಡಕ್ಟಿಲಿಟಿ) ಕಡಿಮೆಯಾಗುವುದು ಅನಿವಾರ್ಯ. ಈಗ ನಿರ್ದಿಷ್ಟ ಮಿಶ್ರಲೋಹಗಳ ಗುಣವೈಶಿಷ್ಯಗಳನ್ನು ಪರಿಶೀಲಿಸೋಣ.

ಕಬ್ಬಿಣ ಪ್ರಧಾನ ಮಿಶ್ರಲೋಹಗಳು

[ಬದಲಾಯಿಸಿ]

ಗುಣವೈವಿಧ್ಯದಲ್ಲಿ ಮತ್ತು ಅಧಿಕ ಉತ್ಪಾದನಾ ದೃಷ್ಟಿಯಿಂದ ಇವುಗಳಿಗೆ ಮೊದಲ ಸ್ಥಾನ. ಉಕ್ಕುಗಳೂ ಈ ವರ್ಗಕ್ಕೆ ಸೇರುತ್ತವೆ. ಇವು ಮೂಲತಃ ಕಬ್ಬಿಣ ಕಾರ್ಬನ್ ಮಿಶ್ರಲೋಹಗಳು. ಕಾರ್ಬನ್ ಕಬ್ಬಿಣದ ಉನ್ನತ ಉಷ್ಣತಾರೂಪವಾದ ಗ್ಯಾಮಾಕಬ್ಬಿಣದೊಡನೆ ಮಾತ್ರ ಘನದ್ರಾವಣವನ್ನು ಕೊಡಬಲ್ಲದು, ಉಷ್ಣತಾರೂಪವಾದ ಆಲ್ಫಾಕಬ್ಬಿಣದಲ್ಲಿ ವಿಲೀನವಾಗುವುದಿಲ್ಲ ಮತ್ತು ಅಂತಿಮವಾಗಿ ಕಬ್ಬಿಣದ ಕಾರ್ಬೈಡಾಗಿ ಬೇರ್ಪಡುವುದು. ಇದು ಯಾವ ರೀತಿ ಬೇರ್ಪಡುವುದು ಎಂಬುದನ್ನು ಅವಲಂಬಿಸಿ ಉಕ್ಕಿಗೆ ವಿಶಿಷ್ಟಗುಣಗಳು ಪ್ರಾಪ್ತವಾಗುತ್ತದೆ. ಕೆಂಗಾವಿಗೆ ಕಾಸಿದ ಉಕ್ಕನ್ನು ನೀರಿನಲ್ಲಿ ಅದ್ದಿ ತಣಿಸಿದಾಗ ಅದು ಗಡಸಾಗುವುದಷ್ಟೆ. ಗ್ಯಾಮಾ ಘನದ್ರಾವಣ ಮತ್ತು ಆಲ್ಫಾರೂಪಗಳ ನಡುವಣ ಒಂದು ಪರ್ವಸ್ಥಿತಿಯಾದ ಮಾರ್ಟೆನ್‌ಸೈಟ್ ಮೈದಳೆಯುವುದರಿಂದ ಹೀಗಾಗುತ್ತದೆ. ನಿಧಾನವಾಗಿ ಕಡಿಮೆ ಉಷ್ಣತೆಗೆ ಕಾಸಿ ಹದಮಾಡಿದರೆ ಕಬ್ಬಿಣದ ಕಾರ್ಬೈಡ್ ಹೆಚ್ಚು ಕಡಿಮೆ ಸ್ಥೂಲ ಲಕ್ಷಣಗಳಾಗಿ ಮಾರ್ಪಟ್ಟು ಕಣಗಾತ್ರಕ್ಕೆ ಅನುಗುಣವಾಗಿ ಗಡಸುತನ ಉಳಿಯುತ್ತದೆ. ಕಾರ್ಬನ್ ಉಕ್ಕಿಗೆ ಇತರ ಲೋಹಗಳನ್ನು ಸೇರಿಸಿ ಮಿಶ್ರ ಉಕ್ಕುಗಳನ್ನೂ ಮಾಡಿಕೊಳ್ಳಬಹುದು. ಟಂಗ್‌ಸ್ಟನ್ ಮತ್ತು ಮಾಲಿಬ್ಡಿನಮ್ ಲೋಹಗಳಿದ್ದರೆ ಉಕ್ಕು ಕೆಂಗಾವಿನಲ್ಲೂ ಮೆದುವಾಗುವುದಿಲ್ಲ. ಅತಿ ವೇಗದಲ್ಲಿ ಕತ್ತರಿಸಿದಾಗ ಘರ್ಷಣೆಯಿಂದ ಹುಟ್ಟುವ ಕಾವು ಇವುಗಳ ಮೇಲೆ ಯಾವ ಪರಿಣಾಮವನ್ನೂ ಉಂಟುಮಾಡದಿರುವುದರಿಂದ ಇವುಗಳಿಗೆ ತ್ವರಿತಗತಿ ಉಕ್ಕುಗಳು (ಹೈಸ್ಪೀಡ್ ಸ್ಟೀಲ್ಸ್) ಎಂದು ಹೆಸರಾಗಿದೆ. ಕ್ರೋಮಿಯಮ್ ಕೂಡಿಸುವುದರಿಂದ ಉಕ್ಕಿಗೆ ತುಕ್ಕು ನಿರೋಧಕ ಶಕ್ತಿ ಬರುವುದು. ಉತ್ತಮದರ್ಜೆ ಸ್ಟೇನ್‌ಲೆಸ್ ಉಕ್ಕಿನಲ್ಲಿ 18-30% ಕ್ರೋಮಿಯಮ್ ಮತ್ತು 8% ನಿಕ್ಕಲುಗಳಿರುತ್ತವೆ.

ಕಬ್ಬಿಣದ ಕಾಂತೀಯಗುಣವನ್ನು ಅವಲಂಬಿಸಿ ಇತರ ಮಿಶ್ರಲೋಹಗಳನ್ನು ರೂಪಿಸಲಾಗಿದೆ. ವಿದ್ಯುತ್ ಪರಿವರ್ತಕಗಳ (ಟ್ರಾನ್ಸ್‌ಫಾರ್ಮರ್ಸ್) ಗರ್ಭವನ್ನು ಸಿಲಿಕಾನ್-ಕಬ್ಬಿಣ ಮಿಶ್ರಲೋಹಗಳಿಂದ ಮಾಡಿರುತ್ತಾರೆ. ಏಕೆಂದರೆ ಅವು ಕಾಂತೀಯವಾಗಿ ಮೆದು. ಕೋಬಾಲ್ಟ್, ಅಲ್ಯೂಮಿನಿಯಮ್ ಮತ್ತು ನಿಕ್ಕಲ್‌ಗಳಿರುವ ಕಬ್ಬಿಣದ ಮಿಶ್ರಲೋಹಗಳು ಶಾಶ್ವತಕಾಂತಗಳನ್ನು ತಯಾರಿಸಲು ಪ್ರಶಸ್ತ. ಒಟ್ಟಾರೆ ಹೇಳುವುದಾದರೆ ಅಲ್ಫಾಕಬ್ಬಿಣವನ್ನು ಒಳಗೊಂಡ ಎಲ್ಲ ಮಿಶ್ರಲೋಹಗಳಿಗೂ ಕಾಂತೀಯಗುಣವುಂಟು. ಪರಮಾಣು ವ್ಯವಸ್ಥೆಗೆ ಭಂಗವಿಲ್ಲದೆ ಕಾಂತಕ್ಷೇತ್ರವೂ ವಿಸ್ತಾರವಾಗಿದ್ದರೆ ಆಗ ಮಿಶ್ರಲೋಹದ ವ್ಯಾಪ್ಯತೆ (ಪರ್ಮಿಯಬಿಲಿಟಿ) ಹೆಚ್ಚು ಮತ್ತು ನಿರ್ಬಂಧಕ ಶಕ್ತಿ (ಕೋಹೆಸಿವ್ ಫೋರ್ಸ್) ಕಡಿಮೆ. ಅದೇ ಮಿಶ್ರಲೋಹವನ್ನು ಅತಿ ಸೂಕ್ಷ್ಮಕಣಗಳಾಗಿ ಒಡೆದು ಒತ್ತರಿಸಿ ಕಾಂತಕ್ಷೇತ್ರವನ್ನು ಸಂಕುಚಿತಗೊಳಿಸಿದರೆ ಅದರ ನಿರ್ಬಂಧಕಶಕ್ತಿ ಹೆಚ್ಚುವುದು. ಆದ್ದರಿಂದಲೇ ಕಬ್ಬಿಣದ ಮಿಶ್ರಲೋಹಗಳು ಕಾಂತೀಯವಾಗಿ ಉಪಯುಕ್ತವಾಗಬೇಕಾದರೆ ಅವು ಘನದ್ರಾವಣಗಳಾಗಿರಬೇಕು. ಇಲ್ಲವೆ ಅವುಗಳ ವಿಭಜನೆ ಉತ್ಪನ್ನಗಳಾಗಿರಬೇಕು. ಕೋಬಾಲ್ಟ್ ಮಿಶ್ರಿತ ಕಬ್ಬಿಣ ಕಾಂತೀಯವಾಗಿ ಪರ್ಯಾಪ್ತವಾದ ಕ್ಷಣ ಕಾಂತಕ್ಷೇತ್ರದ ಬಲವರ್ಧನೆಯಾಗುವುದು ಒಂದು ವೈಶಿಷ್ಟ್ಯ. 40% -50% ನಿಕ್ಕಲ್ ಇರುವ ಕಬ್ಬಿಣದ ಮಿಶ್ರಲೋಹಗಳೂ ಘನದ್ರಾವಣಗಳು. ಇನ್ವಾರ್ ಈ ಗುಂಪಿಗೆ ಸೇರಿದ ಮಿಶ್ರಲೋಹ. ಸಾಮಾನ್ಯ ಉಷ್ೞತೆಯಲ್ಲಿ ಅದರ ವಿಕಸನಗುಣಾಂಕ ಸೊನ್ನೆ. ಹೀಗೆ ಕಾರ್ಬನ್ ಉಕ್ಕಿಗೆ ಒಂದು ಅಥವಾ ಹೆಚ್ಚು ಲೋಹಗಳನ್ನು ಕೂಡಿಸಿ ನಮ್ಮ ಇಷ್ಟಾನುಸಾರ ಅದರ ಗಡಸುತನ, ಭಾರಧಾರಣಸಾಮರ್ಥ್ಯ, ತುಕ್ಕುನಿರೋಧಕ ಶಕ್ತಿ ಮತ್ತು ವಿಕಸನಗುಣಾಂಕಗಳನ್ನು ಬದಲಾಯಿಸಿಕೊಳ್ಳಬಹುದು. ಇತರ ಲೋಹಗಳ ಸಂಯೋಜನೆಯಿಂದ ಉಕ್ಕಿನ ಗುಣಗಳಲ್ಲಿ ತೋರಿಬರುವ ವ್ಯತ್ಯಾಸಗಳನ್ನು ಮುಂದಿನ ಪಟ್ಟಿಯಲ್ಲಿ ಕೊಟ್ಟಿದೆ.

ಮಿಶ್ರಲೋಹ
ಸಂಯೋಜಿತ ಲೋಹ ಸುಮಾರು ಪ್ರಮಾಣ
(ಶೇಕಡಾ)
ಪ್ರಾಪ್ತವಾಗುವ ವಿಶಿಷ್ಟ ಗುಣ ಉಪಯೋಗ
ನಿಕ್ಕಲ್ ೩.೬ ಬಲವರ್ಧನ ಸ್ಥಿತಿಸ್ಥಾಪನಾಶಕ್ತಿಯ
ಮಿತಿ ಹೆಚ್ಚುವುದು
ಕೇಬಲ್‌ಗಳು, ಯುದ್ಧನೌಕೆಗಳಿಗೆ

ತೊಡಿಸುವ ರಕ್ಷಾಕವಚಗಳು,

ವಿಮಾನ ಮತ್ತು ಮೋಟರ್

ವಾಹನಗಳ ಬಿಡಿಭಾಗಗಳು.

೩೫ ಇದರೊಡನೆ ಸ್ವಲ್ಪ ಮ್ಯಾಂಗನೀಸ್

ಸಹ ಇದ್ದರೆ ಅಂಥ ಮಿಶ್ರಲೋಹಕ್ಕೆ

ಇನ್ವಾರ್ ಎಂದು ಹೆಸರು. ಇದರ

ವಿಕಸನ ಗುಣಾಂಕ ಸೊನ್ನೆ

ಎನ್ನಬಹುದು. || ಗಡಿಯಾರಗಳ ಲೋಲಕಗಳು. ಅಳತೆಯು ಪಟ್ಟಿಗಳು ಮತ್ತಿತರ

ಅಳತೆಸಾಧನಗಳು

೪೬ ಪ್ಲಾಟಿನಮ್‌ನಂತೆ ಇಂಥ ಉಕ್ಕಿನ

ವಿಕಸನ ಗುಣಾಂಕ ಗಾಜಿನದರಷ್ಟೆ

ಇರುವುವು. ಆದ್ದರಿಂದ ಇದಕ್ಕೆ

ಪ್ಲಾಟಿನೈಟ್ ಎಂದು ಹೆಸರು

ಉದಾಹರಣೆ
ಮ್ಯಾಂಗನೀಸ್ ೭-೧೭ ಭಾರಧಾರುಣ ಸಾಮರ್ಥ್ಯ ಗಣನೀಯ

ಸವೆತವನ್ನು ತಡೆಯಬಲ್ಲದು.

ಬಂಡೆಗಳನ್ನು ಪುಡಿ ಮಾಡುವ

ಯಂತ್ರಗಳ ದವಡೆ ಹಲ್ಲುಗಳು,

ಕಬ್ಬಿಣದ ಪೆಟ್ಟಿಗೆಗಳು ಮತ್ತು ರೈಲ್ವೆ

ಹಳಿಗಳು.

ಕ್ರೋಮಿಯಮ್ ೧.೫-೨ ಅತಿ ಗಡಸುತನ ಯುದ್ಧ ಸಾಮಗ್ರಿಗಳ ಕವಚಗಳನ್ನು

ಭೇದಿಸಬಲ್ಲ ಗುಂಡುಗಳು,

ಕತ್ತರಿಸುವ ಮತ್ತು ಅರೆಯುವ

ಯಂತ್ರ ಭಾಗಗಳು.

೧೮+೮ ನಿಕ್ಕಲ್ ತುಕ್ಕು ಹಿಡಿಯದು, ಗಾಳಿ ನೀರು

ಮತ್ತು ರಾಸಾಯನಿಕಗಳ ವರ್ತನೆಗೆ

ಮಣಿಯದು.

ಇದೇ ಚಿರಪರಿಚಿತವಾದ ಸ್ಟೇನ್‍ಲೆಸ್

ಉಕ್ಕು. ಇದರ ಬಳಕೆ ವ್ಯಾಪಕ.

ವೆನೇಡಿಯಮ್ ೦.೧೫+೧

ಕ್ರೋಮಿಯಮ್

ಭಾರಧಾರುಣ ಸಾಮರ್ಥ್ಯ ಹೆಚ್ಚುವುದು. ಯಂತ್ರಗಳ ಅಚ್ಚು ಮತ್ತು

ಕಾಂಡಗಳು ಮೋಟಾರ್

ಕಾರುಗಳ ಚೌಕಟ್ಟುಗಳು.

ಟಂಗ್‍ಸ್ಟನ್ ೧೪-೨೦ ಕೆಂಗಾವಿನಲ್ಲೂ ಮೆದುವಾಗದೆ

ಗಡುಸುತನ ಉಳಿಸಿಕೊಳ್ಳುವ

ಸಾಮರ್ಥ್ಯ.

ವೇಗವಾಗಿ ತಿರುಗುವ

ಯಂತ್ರಭಾಗಗಳನ್ನು ಮಾಡಲು

ಇದು ಯುಕ್ತ.

ತಾಮ್ರ ಪ್ರಧಾನ ಮಿಶ್ರಲೋಹಗಳು

[ಬದಲಾಯಿಸಿ]
ಎರಕಹೊಯ್ಯುವ ವೇಳೆ ದ್ರವ ಕಂಚನ್ನು ಅಚ್ಚುಗಳಲ್ಲಿ ಸುರಿಯಲಾಗುತ್ತಿದೆ
ಹಿತ್ತಾಳೆಯ ದೀಪ

ಸಂಖ್ಯಾಬಾಹುಳ್ಯ ದೃಷ್ಟಿಯಿಂದ ಕಬ್ಬಿಣದ ಮಿಶ್ರಲೋಹಗಳಿಗೆ ಮೊದಲನೆಯ ಸ್ಥಾನವಾದರೆ ಇವುಗಳಿಗೆ ಎರಡನೆಯ ಸ್ಥಾನ. ಹಿತ್ತಾಳೆ ಮತ್ತು ಕಂಚು ಈ ವರ್ಗದ ಪರಿಚಿತ ಮಿಶ್ರಲೋಹಗಳು. ಹಿತ್ತಾಳೆಯೆಂಬುದು ವರ್ಗನಾಮವೇ ಹೊರತು ನಿದಿಷ್ಟ ಮಿಶ್ರಲೋಹದ ಹೆಸರಲ್ಲ. 55% -70% ತಾಮ್ರವನ್ನು ಒಳಗೊಂಡ ಎಲ್ಲ ತಾಮ್ರಸತುವಿನ ಮಿಶ್ರಲೋಹಗಳನ್ನೂ ಹಿತ್ತಾಳೆಗಳೆಂದು ಕರೆಯುತ್ತಾರೆ. ಮಿಶ್ರಲೋಹದಲ್ಲಿ ತಾಮ್ರದ ಅಂಶ ಹೆಚ್ಚಿದಂತೆ ತನ್ಯತೆಯೂ ವರ್ಧಿಸುವುದು. 70% ತಾಮ್ರದಿಂದ ಹಿತ್ತಾಳೆಗೆ ತೋಟಾಹಿತ್ತಾಳೆ (ಕಾರ್ಟ್ರಿಡ್ಜ್ ಬ್ರಾಸ್) ಎನ್ನುತ್ತಾರೆ. ತೋಟಾಕವಚಗಳ ತಯಾರಿಕೆಗೆ ಅತಿತನವಾದ ಒಂದು ಮಿಶ್ರಲೋಹ ಅವಶ್ಯಕ. ಇದು ಆ ಅಗತ್ಯವನ್ನು  ಪೂರೈಸುವುದರಿಂದ ಈ ಹೆಸರು ಅನ್ವರ್ಥವಾಗಿದೆ. ಹಿತ್ತಾಳೆಗಳೆಲ್ಲ ಘನದ್ರಾವಣಗಳು. ಹಿತ್ತಾಳೆಯಲ್ಲಿಯ ತಾಮ್ರದ ಅಂಶ 63% ಕ್ಕಿಂತ ಕೆಳಗಿಳಿದರೆ ಅದರಲ್ಲಿ ಬೀಟಾ ಎಂಬ ಇನ್ನೊಂದು ಘನದ್ರಾವಣ ಇರುತ್ತದೆ. ಆಗ ಬಿಸಿಯಾದ ಮಿಶ್ರಲೋಹಕ್ಕೆ 1.5% ಸೀಸ ಸೇರಿಸಿದರೂ ಬಾಧಕವಿಲ್ಲದೆ ಸರಾಗವಾಗಿ ಯಂತ್ರದಿಂದ ಅದನ್ನು ಇಷ್ಟಾನುಸಾರ ರೂಪಿಸಬಹುದು. ತಾಮ್ರದೊಡನೆ ತವರ ಕೂಡಿದರೆ ಕಂಚು ಎನಿಸಿಕೊಳ್ಳುವುದು. ತವರ ಅಷ್ಟು ಹೇರಳವಾಗಿ ಸಿಕ್ಕುವ ಲೋಹವಲ್ಲ. ಆದ್ದರಿಂದ ಕಂಚುಗಳ ಉಪಯೋಗ ವ್ಯಾಪಕವಾಗಿಲ್ಲ. ತವರದ ಪ್ರಮಾಣ ಅತ್ಯಲ್ಪವಾಗಿದ್ದರೂ ಮಿಶ್ರಲೋಹವನ್ನು ಕಂಚು ಎಂದೇ ಕರೆಯುವುದು ರೂಢಿ. ಮ್ಯಾಂಗನೀಸ್ ಕಂಚಿನಲ್ಲಿ ತಾಮ್ರ, ತವರ, ಮ್ಯಾಂಗನೀಸ್ ಮತ್ತು ಕಬ್ಬಿಣಗಳಿವೆ. ಸದಾ ಸಮುದ್ರದ ಉಪ್ಪು ನೀರಿನ ಸಂಪರ್ಕದಲ್ಲಿರುವ ಹಡಗಿನ ನೋದಕಗಳನ್ನು (ಪ್ರೊಪೆಲರ್ಸ್) ಇದರಿಂದ ಮಾಡಿರುತ್ತಾರೆ. ಏಕೆಂದರೆ ಸಮುದ್ರದ ನೀರಿನಲ್ಲಿರುವ ಲವಣಗಳಿಂದ ಇದು ಪ್ರಭಾವಿತವಾಗದು. ಬೇರಿಲಿಯಮ್ ಕಂಚು ತಾಮ್ರ ಮತ್ತು ಬೇರಿಲಿಯಮ್ ಲೋಹಗಳಿಂದಾದುದು. ಇದನ್ನು ಉಕ್ಕಿನಂತೆ ವಿವಿಧ ಉಷ್ಣತೆಗಳಿಗೆ ಗುರಿಮಾಡಿ ಹದಕೊಟ್ಟು ನಿರ್ದಿಷ್ಟ ಕೆಲಸಗಳಿಗೆ ಬಳಸಬಹುದು.[] ತಲಾ 20% ಮ್ಯಾಂಗನೀಸ್ ಮತ್ತು ನಿಕ್ಕಲ್‌ಗಳನ್ನು ಒಳಗೊಂಡ ತಾಮ್ರದ ಒಂದು ಮಿಶ್ರಲೋಹಕ್ಕೆ ಇದೇ ಗುಣವಿದೆ. ಹಿತ್ತಾಳೆಗಳಂತೆ ಇವು ಸಹ ವಿಭಜನೆಯ ವಿವಿಧ ಹಂತಗಳಲ್ಲಿರುವ ಘನದ್ರಾವಣಗಳು.1%-10% ತವರ ಮತ್ತು ಲೇಶಮಾತ್ರ ರಂಜಕವುಳ್ಳ ತಾಮ್ರದ ಮಿಶ್ರಲೋಹಗಳಿಗೆ ರಂಜಕದ ಕಂಚು ಎಂದು ಹೆಸರು. ಇದಕ್ಕೆ ಸವೆತವನ್ನು ತಡೆದುಕೊಳ್ಳಬಲ್ಲ ಶಕ್ತಿ ಇರುವುದರಿಂದ ಬೇರಿಂಗುಗಳ ಮಿಶ್ರಲೋಹಗಳನ್ನು ನಿಕ್ಕಲ್-ಬೆಳ್ಳಿ ಎಂದು ಕರೆಯುತ್ತಾರೆ ಮತ್ತು 18%-30% ನಿಕ್ಕಲ್ ಇರುತ್ತದೆ.[] ಇವು ಬಲವಾದ ತುಕ್ಕು ನಿರೋಧಕ ಮತ್ತು ಬೆಳ್ಳಿಯಂತೆ ಬಿಳುಪಾದ ಮಿಶ್ರಲೋಹಗಳು. ಊಟದ ಮೇಜಿನ ಸಲಕರಣೆಗಳಾದ ತಟ್ಟೆ, ಬಟ್ಟಲು, ಚಮಚ, ಚಾಕು, ಮುಳ್ಳುಚಮಚ ಮತ್ತು ಅಲಂಕಾರಿಕ ಸಾಧನಗಳನ್ನು ಇದರಿಂದ ಮಾಡುತ್ತಾರೆ.

ಅಲ್ಯೂಮಿನಿಯಮ್ ಪ್ರಧಾನ ಮಿಶ್ರಲೋಹಗಳು

[ಬದಲಾಯಿಸಿ]

ವಿಮಾನ ಕೈಗಾರಿಕೆ ವಿಸ್ತರಿಸಿದಂತೆಲ್ಲ ವಿಮಾನದ ಬಿಡಿಭಾಗಗಳ ತಯಾರಿಕೆಗೆ ಅಗತ್ಯವಾದ ಹಗುರ ಮಿಶ್ರಲೋಹಗಳಿಗೆ ಬೇಡಿಕೆ ಹೆಚ್ಚುತ್ತಿದೆ. 12% ಸಿಲಿಕಾನ್ ಇರುವ ಅಲ್ಯೂಮಿನಿಯಮ್ ಮಿಶ್ರಲೋಹಗಳನ್ನು ಎರಕಗಳಿಗೆ ಬಳಸುತ್ತಾರೆ. ತಯಾರಿಕಾ ಕಾಲದಲ್ಲಿ ಕೊಂಚ ಸೋಡಿಯಮ್ ಸೇರಿಸಿದರೆ ಈ ಮಿಶ್ರಲೋಹಗಳು ಇಷ್ಟಾನುಸಾರ ಸ್ಫಟೀಕರಿಸುತ್ತದೆ. 4% ತಾಮ್ರ ಮತ್ತು 0.6% ಮೆಗ್ನಿಸೀಯಮ್ ಅಥವಾ ತಲಾ 1% ಸಿಲಿಕಾನ್ ಮತ್ತು ಮೆಗ್ನಿಸೀಯಮ್ ಇರುವ ಮಿಶ್ರಲೋಹಗಳು ಯಾಂತ್ರಿಕ ವಿನ್ಯಾಸಕ್ಕೆ ಬಗ್ಗುವುವು. ವಿಮಾನದ ಬಿಡಿಭಾಗಗಳ ತಯಾರಿಕೆಗೆ ಪ್ರಶಸ್ತವೆನಿಸಿರುವ ಡ್ಯೂರಲ್ಯೂಮಿನ್ ಇಂಥ ಮಿಶ್ರಲೋಹ.[] ಮೆಗ್ನೇಲಿಯಮ್ ಮಿಶ್ರಲೋಹದಲ್ಲಿ ಅಲ್ಯೂಮಿನಿಯಮ್ ಮತ್ತು ಮೆಗ್ನೀಸಿಯಮ್ ಲೋಹಗಳು 90:10 ಪ್ರಮಾಣದಲ್ಲಿವೆ. ಇದರಿಂದ ವೈಜ್ಞಾನಿಕ ಉಪಕರಣಗಳು ಮತ್ತು ಕೃತಕಮೂಳೆಗಳನ್ನು ತಯಾರಿಸುವರಾಗಿ ಮಿಶ್ರಲೋಹದಲ್ಲಿ 93.5% Al, 4% Cu, 2% Ni ಮತ್ತು 0.5% Mg ಇವೆ. ಕೊರತೆಗಳ ತಯಾರಿಕೆಗೆ ಇದು ಉಪಯುಕ್ತ. ಘನದ್ರಾವಣಗಳನ್ನು ಶಾಖಸಂಸ್ಕರಣಕ್ಕೆ ಒಳಪಡಿಸಿದಾಗ ಅವು ವಿವಿಧ ಮಟ್ಟಗಳಿಗೆ ವಿಭಜಿಸುವುವೆಂದೂ ತತ್ಫಲವಾಗಿ ಮಿಶ್ರಲೋಹದ ಗುಣಲಕ್ಷಣಗಳು ಮಾರ್ಪಡುವುವೆಂದೂ ಗೊತ್ತಾದದ್ದು ಡ್ಯೂರಲ್ಯೂಮಿನ್‌ನ ಸಂಶೋಧನೆಯ ಕಾಲದಲ್ಲೆ.

ನಿಕ್ಕಲ್ ಪ್ರಧಾನ ಮಿಶ್ರಲೋಹಗಳು

[ಬದಲಾಯಿಸಿ]

ಇವುಗಳಲ್ಲಿ ಮಾನೆಲ್ ಮೆಟಲ್ ಮುಖ್ಯವಾದುದು. ಇದು 30% ತಾಮ್ರವುಳ್ಳ ನಿಕ್ಕಲಿನ ಮಿಶ್ರಲೋಹ. ಹಿಂದೆ ನಿಕ್ಕಲ್ ಮತ್ತು ತಾಮ್ರದ ಅದುರುಗಳನ್ನು ಒಟ್ಟಾಗಿ ಕರಗಿಸಿ ಇದನ್ನು ತಯಾರಿಸಲಾಗುತ್ತಿತ್ತು. ಈಗ ಹೊಸ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಲೋಹಜೀರಣ (ಕರೋಷನ್) ನಿರೋಧಿಯಾದ್ದರಿಂದ ಇದಕ್ಕೆ ಪ್ರಾಶಸ್ತ್ಯ. 20% ಕ್ರೋಮಿಯಮ್ ಇರುವ ಮಿಶ್ರಲೋಹವೇ ನೈಕ್ರೋಮ್. ಇದರ ವಿದ್ಯುನ್ನಿರೋಧಶಕ್ತಿ ಅಪಾರ. ಉನ್ನತ ಉಷ್ಣತೆಯಲ್ಲಿ ಉತ್ಕರ್ಷಿತವಾಗದು. ಆದ್ದರಿಂದ ವಿದ್ಯುತ್ ಒಲೆಗಳ ಉಷ್ಣಜನಕಗಳನ್ನು (ಹೀಟಿಂಗ್ ಎಲಿಮೆಂಟ್ಸ್) ಇದರಿಂದ ತಯಾರಿಸುವರು. ಅನೇಕ ನಿಕ್ಕಲ್ ಪ್ರಧಾನ ಮಿಶ್ರಲೋಹಗಳಿಗೆ ಕಾಂತೀಯ ಗುಣವಿದೆ. ಉದಾಹರಣೆಗೆ 78. 5% Ni ಮತ್ತು 21.5% Fe ಉಳ್ಳ ಮಿಶ್ರಲೋಹ ದುರ್ಬಲ ಕ್ಷೇತ್ರಗಳಲ್ಲೂ ಗಣನೀಯ ವ್ಯಾಪ್ಯತೆ ಪ್ರದರ್ಶಿಸುತ್ತದೆ. ಅದನ್ನು ಪರ್ಮಲಾಯ್ ಎಂದು ಕರೆಯುತ್ತಾರೆ. ಸಮುದ್ರದಡಿಯಲ್ಲಿ ಹಾದುಹೋಗುವ ಖಂಡಾಂತರ ದೂರವಾಣಿ ಕೇಬಲ್‌ಗಳಿಗೆ ಇದು ಯುಕ್ತ.

ಸೀಸ ಮತ್ತು ತವರದ ಮಿಶ್ರಲೋಹಗಳು

[ಬದಲಾಯಿಸಿ]

ಈ ವರ್ಗದ ಪರಿಚಿತ ಮಿಶ್ರಲೋಹವೆಂದರೆ ಸಾಲ್ಡರ್. ಇದರಲ್ಲಿ 40%-50% ತವರವಿದೆ. ಇದರ ದ್ರವನ ಬಿಂದು ಅತಿ ಕಡಿಮೆಯಾದ್ದರಿಂದ ಲೋಹಗಳನ್ನು ಬೆಸೆಯಲು ಉಪಯುಕ್ತ. ಸಾಲ್ಡರುಗಳಲ್ಲಿರುವ ಅಂಗಲೋಹಗಳು ದ್ರವಸ್ಥಿತಿಯಲ್ಲಿ ಎಲ್ಲ ಪ್ರಮಾಣಗಳಲ್ಲಿ ಬೆರೆತರೂ ಘನೀಭವಿಸಿದಾಗ ಎರಡು ಅವಸ್ಥೆಗಳಾಗಿ ಬೇರ್ಪಡುತ್ತವೆ. ಘನೀಭವನ ಪ್ರಾರಂಭವಾಗುವ ಬಿಂದುವಿಗೂ ಅದು ಕೊನೆಗೊಳ್ಳುವ ಬಿಂದುವಿಗೂ ಇರುವ ಅಂತರ ಹೆಚ್ಚು. ಇದಕ್ಕೆ ಪ್ಲಾಸ್ಟಿಕ್ ಮಿತಿ ಎಂದು ಹೆಸರು. ಈ ಅವಧಿಯಲ್ಲಿ ಮಿಶ್ರಲೋಹ ಆಂಶಿಕವಾಗಿ ಘನಸ್ಥಿತಿಯಲ್ಲಿರುವುದರಿಂದ ಅದನ್ನು ಅಪೇಕ್ಷಿತ ಆಕಾರಕ್ಕೆ ತರುವುದು ಸುಲಭ. ಬೆಸುಗೆ ಕ್ರಮದಲ್ಲಿ ಈ ವಿಧಿಯನ್ನು ಒರಸಿಕೆ (ವೈಪಿಂಗ್) ಎಂದು ಕರೆಯುತ್ತಾರೆ.

ಸೀಸ ಮತ್ತು ತಾಮ್ರಗಳು ದ್ರವ ಘನ ಸ್ಥಿತಿಗಳೆರಡರಲ್ಲೂ ಬೆರೆಯುವುದಿಲ್ಲ. ಆದರೆ ಗಂಧಕದಂಥ ಮೂರನೆಯ ಪದಾರ್ಥವನ್ನು ಕೂಡಿಸಿದರೆ ದ್ರವಿತಲೋಹಗಳು ಎಮಲ್ಷನ್ ಆಗುತ್ತದೆ. ಘನೀಭವಿಸಿದ ಬಳಿಕ ಪರೀಕ್ಷಿಸಿದರೆ ಮೆದುಸೀಸದ ಮಾಧ್ಯಮದಲ್ಲಿ ಗಡುಸಾದ ತಾಮ್ರದ ಗುಳಿಗೆಗಳು ನಿಲಂಬಿತವಾಗಿರುವುದು ಗೋಚರಿಸುತ್ತದೆ. ಹೀಗಿದ್ದರೆ ಬೇರಿಂಗುಗಳಿಗೆ ಅನುಕೂಲ. 10%-13% ಅಂಟಿಮೊನಿಯನ್ನು ಒಳಗೊಂಡ ಮಿಶ್ರಲೋಹಕ್ಕೆ ಗಡಸುಸೀಸ ಎಂದು ಹೆಸರು. ವಿದ್ಯುತ್ ಸಂಚಯನಕೋಶಗಳ (ಸ್ಟೋರೇಜ್ ಸೇಲ್ಸ್) ಫಲಕಗಳನ್ನು ಮಾಡಲು ಇದು ಯೋಗ್ಯ. 3% ತವರವಿರುವ ಸೀಸದಿಂದ ಕೇಬಲ್‌ಕವಚಗಳ ತಯಾರಿಸುವರು. ಈಗ ತವರದ ಬದಲು 1% ಆಂಟಿಮೊನಿ ಸೇರಿಸುವುದು ವಾಡಿಕೆ.

ಬೇರಿಂಗ್ ಮಿಶ್ರಲೋಹಗಳಲ್ಲಿ ಬ್ಯಾಬಿಟ್ ಮೆಟಲ್ ಜನಪ್ರಿಯವಾಗಿದೆ. ಇದರ ಸಂಯೋಜನೆ 83%-91% ತವರ 4.5% -8.5% ಆಂಟಿಮೊನಿ ಮತ್ತು 3.5% -8.5% ತಾಮ್ರ. ತವರ ಆಂಟಿಮೊನಿಯ ಗಡಸು ಹರಳುಗಳು ಮೆದು ಹಂದರದಲ್ಲಿ ನಿಲಂಬಿತವಾಗಿರುವುದರಿಂದ ಬೇರಿಂಗ್ ಲೋಹಗಳ ಪಾತ್ರವನ್ನು ಇವು ಯಶಸ್ವಿಯಾಗಿ ನಿರ್ವಹಿಸಬಲ್ಲವು. ಅಚ್ಚುಕೂಟದ ಮೊಳೆಗಳನ್ನು ತಯಾರಿಸಲು ವಿಶಿಷ್ಟ ಮಿಶ್ರಲೋಹ ಅಗತ್ಯ. ಅದರಲ್ಲಿ ಸಾಮಾನ್ಯವಾಗಿ 11%-25% ಆಂಟಿಮೊನಿ, 3%-13% ತವರ, ಉಳಿದ ಭಾಗ ಸೀಸ. ಆಧುನಿಕ ವ್ಯೂಟರ್ ಮಿಶ್ರಲೋಹದಲ್ಲಿ 4%-6.5% ಆಂಟಿಮೊನಿ, 1%-1.5% ತಾಮ್ರ, ಉಳಿದ ಭಾಗ ತವರ.

ಮ್ಯಾಂಗನೀಸ್ ಪ್ರಧಾನ ಮಿಶ್ರಲೋಹಗಳು

[ಬದಲಾಯಿಸಿ]

ನಿರ್ದಿಷ್ಟ ಸಂಯೋಜನೆಯ ಮ್ಯಾಂಗನೀಸ್-ತಾಮ್ರ-ನಿಕ್ಕಲ್ ಮಿಶ್ರಲೋಹದ ವಿಕಸನಗುಣಾಂಕ ಅಸಾಧಾರಣ. ಅದೇ 20% ತಾಮ್ರ ಮಾತ್ರ ಇರುವ ಒಂದು ಮ್ಯಾಂಗನೀಸ್ ಮಿಶ್ರಲೋಹಕ್ಕೆ ಕಂಪನ ಭಂಗಸಾಮರ್ಥ್ಯ (ವೈಬ್ರೇಷನ್ ಡ್ಯಾಂಪಿಂಗ್ ಕೆಪ್ಯಾಸಿಟಿ) ಅತಿಶಯ. ಪರಿಣಾಮವಾಗಿ ಅದರ ವಿರೂಪಕ ಒತ್ತಡ ನಿಯತಾಂಕ (ಷಿಯರ್ ಮಾಡ್ಯುಲಸ್) ವಿಪರೀತ ಇಳಿಯುವುದು. ಇದರಿಂದ ಕ್ಯಾಮ್‌ಗಳು ಮತ್ತಿತರ ಘರ್ಷಣ ಡ್ರೈವ್‌ಗಳಿಗೆ ಅಗತ್ಯವಾದ ಮೇಲ್ಮೈರಚನೆ ಉಂಟಾಗುತ್ತದೆ.

ಅಮೂಲ್ಯ ಲೋಹಮಿಶ್ರಣಗಳು

[ಬದಲಾಯಿಸಿ]

ಪರಿಚಿತ ಸ್ಟರ್ಲಿಂಗ್ ಬೆಳ್ಳಿಯಲ್ಲಿ 92.5% ಬೆಳ್ಳಿ, ಉಳಿದ ಭಾಗ ತಾಮ್ರ. ಬೆಳ್ಳಿಯ ನಾಣ್ಯಗಳಲ್ಲಿ 50%-90% ಬೆಳ್ಳಿ ಇರುವುದುಂಟು. ಉಳಿದ ಭಾಗ ತಾಮ್ರ. ಅಮೆರಿಕ ಸಂಯುಕ್ತ ಸಂಸ್ಥಾನಗಳ ಬೆಳ್ಳಿಯ ನಾಣ್ಯಗಳಲ್ಲಿ 90% ಬೆಳ್ಳಿ ಇರುವುದೆಂದು ವರದಿ. ಬೆಳ್ಳಿಯೊಂದಿಗೆ ತಾಮ್ರವನ್ನು ಬೆರೆಸದ ಹೊರತು ಅದಕ್ಕೆ ಗಡಸುತನ ಮತ್ತು ಬಲ ಬರುವುದಿಲ್ಲ. ತಾಮ್ರ, ಸತುವು ಮತ್ತು ಬೆಳ್ಳಿಗಳನ್ನು ಒಳಗೊಂಡ ಸಾಲ್ಡರ್ ಸಾಮಾನ್ಯ ಸಾಲ್ಡರ್‌ಗಿಂತ ಹೆಚ್ಚು ಸತ್ತ್ವಶಾಲಿ. ಚಿನ್ನದ ಮಿಶ್ರಲೋಹಗಳು ವಿರಳ. ಆಭರಣಗಳ ತಯಾರಿಕೆಯಲ್ಲಿ ಚಿನ್ನದೊಡನೆ ತಾಮ್ರ ಅಥವಾ ಬೆಳ್ಳಿಯನ್ನು ಕೂಡಿಸುವುದು ಅನಿವಾರ್ಯ. ಮಿಶ್ರಲೋಹದಲ್ಲಿರುವ ಚಿನ್ನದ ಅಂಶವನ್ನು ಕ್ಯಾರೆಟ್‌ಗಳಲ್ಲಿ ಸೂಚಿಸುವುದು ವಾಡಿಕೆ. 24 ಕ್ಯಾರೆಟ್ ದರ್ಜೆ ಶುದ್ಧ ಚಿನ್ನದ ಪ್ರತೀಕ. 14 ಕ್ಯಾರೆಟ್ ಚಿನ್ನವೆಂದರೆ ಅದರಲ್ಲಿ   ಚಿನ್ನವಿದೆ ಎಂದರ್ಥ. ಬಿಳಿಚಿನ್ನ ಎಂಬ ಮಿಶ್ರಲೋಹದಲ್ಲಿ ನಿಕ್ಕಲ್ ಇರುತ್ತದೆ. ಪ್ಲಾಟಿನಮ್ ಮಿಶ್ರಲೋಹಗಳಲ್ಲಿ ಅದೇ ವರ್ಗದ ಇರಿಡಿಯಮ್ ಮತ್ತು ರುಥೆನಿಯಮ್ ಇರುವುವು. ಇವುಗಳ ದೆಸೆಯಿಂದ ಪ್ಲ್ಯಾಟಿನಮ್ ಗಡಸಾಗುವುದು. ಎಲೆಕ್ಟ್ರೋಡುಗಳು, ವೈಜ್ಞಾನಿಕ ಸಲಕರಣೆಗಳು ಮತ್ತು ಆಭರಣಗಳನ್ನು ತಯಾರಿಸಲು ಇವು ಉಪಯುಕ್ತ.

ಇತರ ಮಿಶ್ರಲೋಹಗಳು

[ಬದಲಾಯಿಸಿ]

ಟೈಟೇನಿಯಮ್ ಮಿಶ್ರಲೋಹಗಳು

[ಬದಲಾಯಿಸಿ]

ಇವು ಹಗುರ ಮತ್ತು ಬಲಯುತವಾದವು. ಎಂದೇ ಪ್ರಾಮುಖ್ಯ. ಇವುಗಳಲ್ಲಿ ಸಾಮಾನ್ಯವಾಗಿ 8% ಮ್ಯಾಂಗನೀಸ್ ಅಥವಾ 4% ಅಲ್ಯೂಮಿನಿಯಮ್ ಮತ್ತು 4% ಮ್ಯಾಂಗನೀಸ್ ಅಥವಾ 5% ಅಲ್ಯೂಮಿನಿಯಮ್ ಮತ್ತು 3% ಕ್ರೋಮಿಯಮ್ ಇರುವುವು.

ಕೋಬಾಲ್ಟ್‌ನ ಮಿಶ್ರಲೋಹಗಳು

[ಬದಲಾಯಿಸಿ]

ಉನ್ನತ ಉಷ್ಣತೆಯಲ್ಲಿಯೂ ಇವು ಗಡಸಾಗಿಯೇ ಉಳಿಯುತ್ತವೆ. ಉತ್ಕರ್ಷಿತವಾಗುವುದಿಲ್ಲ. ಇವುಗಳಿಂದ ಜೆಟ್ ಎಂಜಿನ್ನುಗಳ ಮತ್ತು ರಾಕೆಟ್ಟುಗಳ ಬಿಡಿಭಾಗಗಳನ್ನು ಮಾಡುತ್ತಾರೆ. ಆದ್ದರಿಂದ ಇವನ್ನು ಅತಿಮಿಶ್ರಲೋಹಗಳು (ಸೂಪರ್ ಅಲಾಯ್ಸ್) ಎಂದು ಕರೆಯುವರು. ಕೋಬಾಲ್ಟ್ ಮತ್ತು ಕ್ರೋಮಿಯಮ್‌ಗಳೊಡನೆ ನಿಕ್ಕಲ್, ಮಾಲಿಬ್ಡಿನಮ್, ಟಂಗ್‌ಸ್ಟನ್ ಮತ್ತು ಕೊಲಂಬಿಯಮ್ಮುಗಳ ಪೈಕಿ ಯಾವುದಾದರೂ ಒಂದನ್ನು ಕೂಡಿಸಿ ಇವನ್ನು ತಯಾರಿಸಬಹುದು.

ಬಿಸ್ಮತ್ ಮತ್ತು ಕ್ಯಾಡ್ಮಿಯಮ್ ಮಿಶ್ರಲೋಹಗಳು

[ಬದಲಾಯಿಸಿ]

ತವರ ಮತ್ತಿ ಸೀಸಗಳೊಡನೆ ಬಿಸ್ಮತ್ ಮತ್ತು ಕ್ಯಾಡ್ಮಿಯಮ್ ಲೋಹಗಳನ್ನು ವಿವಿಧ ಪ್ರಮಾಣದಲ್ಲಿ ಕೂಡಿಸಿದರೆ ಸ್ರಾವಕಮಿಶ್ರಲೋಹಗಳು (ಫ್ಯೂಸಿಬಲ್ ಅಲಾಯ್ಸ್) ದೊರೆಯುತ್ತವೆ. ಈ ಮುಂದಿನ ಉದಾಹರಣೆಗಳನ್ನು ಗಮನಿಸಬಹುದು:

ಲಿಪೊವಿಟ್ಸ್ ಮಿಶ್ರಲೋಹ

ದ್ರವನಬಿಂದು ೬೦ C

ವುಡ್ಸ್ ಮೆಟಲ್

ದ್ರವನಬಿಂದು ೬೦ C

10% Cd 12.5% Cd
13% Sn 12.5% Sn
27% Pb 25% Pb
50% Bi 50% Bi
ರೋಸ್ ಮೆಟಲ್

ದ್ರವನಬಿಂದು ೮೦ C

ನ್ಯೂಟನ್ ಮೆಟಲ್

ದ್ರವನಬಿಂದು ೯೪ C

22% Sn 19% Sn
28% Pb 31% Pb
50% Bi 50% Bi

ನೀರಿನ ಕುದಿಬಿಂದುವಿಗಿಂತ ಅಂದರೆ 1000C ಗಿಂತ ಕಡಿಮೆ ಉಷ್ಣತೆಯಲ್ಲಿ ಇವು ದ್ರವಿಸುವುದರಿಂದ ಈ ಹೆಸರು ಬಂದಿದೆ. ಇಂಡಿಯಮ್ ಸಹ ಸೇರಿಸಿದರೆ ಮಿಶ್ರಲೋಹದ ದ್ರವನಬಿಂದುವನ್ನು 470C ಇಳಿಸುವುದು.

ಲೋಹಗಳ ಪ್ರಮಾಣವನ್ನು ಯುಕ್ತರೀತಿಯಲ್ಲಿ ವ್ಯತ್ಯಾಸಗೊಳಿಸಿ, ಸೀಸದ ದ್ರವನಬಿಂದುವಿಗಿಂತಲೂ ಕಡಿಮೆಯಿರುವ, 600C ಗಿಂತಲೂ ಹೆಚ್ಚಿನ ದ್ರವನ ಬಿಂದುವನ್ನು ಪಡೆದಿರುವ ಮಿಶ್ರಲೋಹವನ್ನು ತಯಾರಿಸಬಹುದು. ಈ ಬಗೆಯ ಕೆಲವು ಮಿಶ್ರಲೋಹಗಳಲ್ಲಿ ದ್ರವನಬಿಂದು ನಿರ್ದಿಷ್ಟವಾಗಿದರೆ ಅವುಗಳ ಮೆದುಬಿಂದುವಿಗೂ (ಸಾಫನಿಂಗ್ ಪಾಯಿಂಟ್) ಪೂರ್ಣವಾಗಿ ಲೋಹ ದ್ರವನಬಿಂದುವಿಗೂ ಸಾಕಷ್ಟು ಅಂತರ ಇರುತ್ತದೆ. ಇಂಥ ಮಿಶ್ರಲೋಹಗಳು ಒಂದು ನಿರ್ದಿಷ್ಟ ಉಷ್ಣತಾವ್ಯಾಪ್ತಿಯಲ್ಲಿ ತಮ್ಮ ಗಡಸುತನ, ಸಾಮರ್ಥ್ಯಗಳನ್ನು ಕಳೆದುಕೊಳ್ಳುತ್ತವೆ. ಈ ನಿರ್ದಿಷ್ಟ ಬಿಂದುವಿಗೆ ಬಾಗುವ ಉಷ್ಣತೆ (ಯೀಲ್ಡ್ ಟೆಂಪರೇಚರ್) ಎಂದು ಹೆಸರು. ಹೆಚ್ಚು ಬಳಕೆಯಲ್ಲಿರುವ ಸ್ರಾವಕ ಮಿಶ್ರಲೋಹಗಳ ಪೈಕಿ ಹಲವಕ್ಕೆ ಪ್ರತ್ಯೇಕ ಹೆಸರುಗಳಿವೆ.

ಲಿಖ್ಟೆನ್‌ಬರ್ಗ್ ಮಿಶ್ರಲೋಹ - ಬಿಸ್ಮತ್ 50%, ತವರ 20%, ಸೀಸ 30%; ದ್ರವನಬಿಂದು ವ್ಯಾಪ್ತಿ 960-1000C

ಲಿಪೋವಿಟ್ಜ್ ಮಿಶ್ರಲೋಹ - ಬಿಸ್ಮತ್ 50%, ತವರ 12.3%, ಸೀಸ 26.7%, ಕ್ಯಾಡ್ಮಿಯಮ್ 10%; ದ್ರವನಬಿಂದು ವ್ಯಾಪ್ತಿ 700-730 C

ಮಲಾಟ್  ಮಿಶ್ರಲೋಹ - ಬಿಸ್ಮತ್ 46%, ತವರ 34%, ಸೀಸ 20%; ದ್ರವನಬಿಂದು ವ್ಯಾಪ್ತಿ 960-1230C

ನ್ಯೂಟನ್ ಮಿಶ್ರಲೋಹ - ಬಿಸ್ಮತ್ 50%, ತವರ 18.8%, ಸೀಸ 31.2%; ದ್ರವನಬಿಂದು ವ್ಯಾಪ್ತಿ 960-970C

ಆನಿಯನ್‌ಮಿಶ್ರಲೋಹ - ಬಿಸ್ಮತ್ 50%, ತವರ 20%, ಸೀಸ 30%; ದ್ರವನಬಿಂದು ವ್ಯಾಪ್ತಿ 960-1000C

ಈ ಮಿಶ್ರಲೋಹಗಳಲ್ಲದೆ, ಅಂಕಿತನಾಮಗಳಿಲ್ಲದ ಸುಮಾರು ಐವತ್ತು ಬಗೆಯ ಸ್ರಾವಕ ಮಿಶ್ರಲೋಹಗಳೂ ಬಳಕೆಯಲ್ಲಿವೆ. ಇವುಗಳ ದ್ರವನಬಿಂದು ವ್ಯಾಪ್ತಿ ಸುಮಾರು 650-2000 C ವರೆಗೆ. 48%ಕ್ಕಿಂತಲೂ ಕಡಿಮೆ ಬಿಸ್ಮತ್ ಉಳ್ಳ ಮಿಶ್ರಲೋಹಗಳು ದ್ರವರೂಪದಿಂದ ಘನರೂಪಕ್ಕೆ ತಿರುಗುವಾಗ (ಇಲ್ಲಿ ಲೋಹ ತಣ್ಣಗಾಗುವ ಕ್ರಿಯೆ ಜರುಗಿರುತ್ತದೆ) ಕುಗ್ಗುತ್ತವೆ. 48-55% ಅಂಶ ಬಿಸ್ಮತ್ ಇರುವ ಮಿಶ್ರಲೋಹಗಳಲ್ಲಿ ದ್ರವ-ಘನಸ್ಥಿತಿ ವ್ಯತ್ಯಾಸಗೊಂಡಾಗ ಯಾವ ಬಗೆಯ ಗಾತ್ರ ವ್ಯತ್ಯಾಸವೂ ಕಂಡುಬರುವುದಿಲ್ಲ. 55% ಕ್ಕಿಂತಲೂ ಹೆಚ್ಚಿನ ಅಂಶ ಬಿಸ್ಮತ್ ಉಳ್ಳ ಮಿಶ್ರಲೋಹಗಳು ದ್ರವದಿಂದ ಘನಸ್ಥಿತಿಗೆ ತಿರುಗುವಾಗ ಅವುಗಳ ಗಾತ್ರ ಹೆಚ್ಚುತ್ತದೆ. ಬಿಸ್ಮತ್ ಮತ್ತು ಸೀಸಗಳೆರಡನ್ನೂ ಉಳ್ಳ ಮಿಶ್ರಲೋಹಗಳಲ್ಲಿ ಈ ಲೋಹಗಳ ಪ್ರಮಾಣ 1: 2ರಿಂದ 2:1ರೊಳಗೆ ಇದ್ದಾಗ, ದ್ರವ ಘನೀಭವಿಸಿದ ಮೇಲೂ ಗಾತ್ರ ಕ್ರಮೇಣ ಹೆಚ್ಚುತ್ತ ಹೋಗುತ್ತದೆ. ಘನೀಭವಿಸಿದ ಅನಂತರದ 12-24 ಗಂಟೆಯೊಳಗಾಗಿ ಗಾತ್ರವೃದ್ಧಿ 90% ರಷ್ಟು ಮುಗಿದಿರುತ್ತದಾದರೂ ಹಲವು ಮಿಶ್ರಲೋಹಗಳ ಗಾತ್ರ 500-1000 ಗಂಟೆಗಳ ತನಕವೂ ನಿಧಾನವಾಗಿ ಹೆಚ್ಚುತ್ತ ಹೋಗುತ್ತದೆ. ಇಂಥ ಮಿಶ್ರಲೋಹಗಳನ್ನು ಎರಕಹೊಯ್ದು ಅನಂತರ ಹಠಾತ್ತನೆ ಅದ್ದಿ ತಣಿಸಿದರೆ (ಕ್ವೆಂಚಿಂಗ್) ಬೆಳೆವಣಿಗೆ ಅಥವಾ ಗಾತ್ರದ ವೃದ್ಧಿಯ ವೇಗವೂ ಹೆಚ್ಚುತ್ತದೆ. ಎಂದರೆ, ಕೆಲವೇ ಗಂಟೆಗಳಲ್ಲಿ ಬೆಳೆವಣಿಗೆ ಪೂರ್ಣಗೊಳ್ಳುತ್ತದೆ. ಆದರೆ ಒಟ್ಟು ಬೆಳೆವಣಿಗೆಯ ಗಾತ್ರದಲ್ಲಿ ಯಾವ ವ್ಯತ್ಯಾಸವೂ ಆಗುವುದಿಲ್ಲ. ಘನೀಭವಿಸಿದ ಅನಂತರ ಆಗುವ ಈ ಬಗೆಯ ಬೆಳೆವಣಿಗೆ ಪ್ರತಿ ಇಂಚು ಮೂಲಮಾನಕ್ಕೆ 0.08 ಇಂಚಿನವರೆಗೂ ಇರಬಹುದು. ಈ ಗಾತ್ರ ವ್ಯತ್ಯಾಸ ಮಿಶ್ರಲೋಹದಲ್ಲಿರುವ ಲೋಹಗಳ ಪ್ರಮಾಣವನ್ನಷ್ಟೆ ಅವಲಂಬಿಸಿರುತ್ತದೆ. ಸ್ರಾವಕ ಮಿಶ್ರಲೋಹಗಳೆಲ್ಲ ತಕ್ಕಮಟ್ಟಿಗೆ ಮೆದುವಾಗಿರುವುದರಿಂದ ಒತ್ತಡದ ಪ್ರಯೋಗ ಅವುಗಳ ಆಕಾರವನ್ನು ಸ್ವಲ್ಪಮಟ್ಟಿಗೆ ಬದಲಾಯಿಸುವುದು ಕಂಡುಬಂದಿದೆ.

ಈ ಮಿಶ್ರಲೋಹಗಳ ದ್ರವನಬಿಂದು ಮತ್ತು ಬಾಗುವ ಬಿಂದುಗಳು ಬಲು ಕಡಿಮೆ ಇರುವುದಿಂದ, ಇವುಗಳಿಂದ ಮಾಡಿದ ಉಪಕರಣಗಳ ಸುತ್ತಲಿನ ಪರಿಸರದ ಉಷ್ಣತೆ ಸ್ವಲ್ಪ ಹೆಚ್ಚಿದರೂ ಇವುಗಳಿಂದ ಮಾಡಿದ ಭಾಗಗಳು ಕರಗುತ್ತವೆ ಇಲ್ಲವೆ ಮೆದುವಾಗಿ ಮುರಿಯುತ್ತವೆ. ಆದ್ದರಿಂದ ಅಗ್ನಿಪ್ರಮಾದ ಉಂಟಾಗಿರುವುದನ್ನು ಅರಿಯಲು ಉಪಯೋಗಿಸುವ ಉಪಕರಣಗಳಲ್ಲಿಯೋ ಅಂಥ ಸಂದರ್ಭದಲ್ಲಿ ತಾವಾಗಿ ಕೆಲಸ ಮಾಡಬಲ್ಲ ಎಚ್ಚರದ ಗಂಟೆ ಮತ್ತು ನೀರೆರಚುವ ಶಾಮಕಯಂತ್ರಗಳ ತಯಾರಿಕೆಯಲ್ಲಿಯೂ, ಅತಿ ಉಷ್ಣತೆಯಿಂದ ಕೆಡಬಲ್ಲ ಅಥವಾ ಹಾನಿಯನ್ನು ಉಂಟುಮಾಡಬಲ್ಲ ಉಪಕರಣಗಳಲ್ಲಿ ಉಷ್ಣತೆ ಹೆಚ್ಚಿದಾಗ ಎಚ್ಚರಿಕೆ ನೀಡುವ ಸಾಧನಗಳಲ್ಲಿಯೂ ಈ ಮಿಶ್ರಲೋಹಗಳನ್ನು ಬಳಸಲಾಗುತ್ತಿದೆ.

ಉಪಯೋಗಗಳು

[ಬದಲಾಯಿಸಿ]

ಸೀಸ ಮತ್ತು ತವರದ ಮಿಶ್ರಲೋಹವು ಕಡಿಮೆ ಕರಗುವ ಬಿಂದು ಹೊಂದಿದೆ. ಆದ್ದರಿಂದ ವಿದ್ಯುತ್ ತಂತಿಗಳನ್ನು ಬೆಸೆಯಲು ಉಪಯುಕ್ತ.

ಉಲ್ಲೇಖಗಳು

[ಬದಲಾಯಿಸಿ]
  1. Britannica, The Editors of Encyclopaedia. "alloy". Encyclopedia Britannica, 15 Oct. 2022, https://www.britannica.com/technology/alloy. Accessed 19 July 2023.
  2. "Alloy ." The Gale Encyclopedia of Science. . Encyclopedia.com. 29 Jun. 2023 <https://www.encyclopedia.com>.
  3. National Bronze & Metals | Beryllium Copper
  4. Lewis Brass & Company | Copper Alloy Data Archived 2021-05-12 ವೇಬ್ಯಾಕ್ ಮೆಷಿನ್ ನಲ್ಲಿ.
  5. Jacobs, M.H. Precipitation Hardnening Archived 2012-12-02 ವೇಬ್ಯಾಕ್ ಮೆಷಿನ್ ನಲ್ಲಿ.. University of Birmingham. TALAT Lecture 1204. slideshare.net

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
  • Surface alloys Archived 2008-09-08 ವೇಬ್ಯಾಕ್ ಮೆಷಿನ್ ನಲ್ಲಿ.
  •  Chisholm, Hugh, ed. (1911). "Alloys" . Encyclopædia Britannica (11th ed.). Cambridge University Press. {{cite encyclopedia}}: Cite has empty unknown parameters: |separator= and |HIDE_PARAMETER= (help)