ಸಿರಿಯಜ್ಜಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಿರಿಯಜ್ಜಿ ಹತ್ತು ಸಾವಿರಕ್ಕೂ ಮಿಕ್ಕಿದ ಹಾಡುಗಳನ್ನು ನೆನಪಿನಲ್ಲಿರಿಸಿ, ಅವೆಲ್ಲವನ್ನೂ ಕಂಪ್ಯೂಟರಿಗಿರುವ ವೇಗಕ್ಕಿಂತ ಹೆಚ್ಚಿನ ರೀತಿಯಲ್ಲಿ ತೆಗೆದಿರಿಸುತ್ತಿದ್ದ ಆಕೆಯ ಸ್ಮೃತಿ ವೇಗಕ್ಕೆ ಸರಿಸಾಟಿಯೇ ಇರಲಿಲ್ಲ. ಹೀಗಾಗಿ ಆಕೆ ಅಸಾಧಾರಣ ಸ್ಮರಣಶಕ್ತಿಯಿಂದ 'ಜನಪದಸಿರಿ ಸಿರಿಯಜ್ಜಿ' ಎಂದೇ ಪ್ರಖ್ಯಾತರಾಗಿದ್ದವರು.

ಜನನ, ಜೀವನ[ಬದಲಾಯಿಸಿ]

  • ಜಾನಪದ ಸಿರಿಯಜ್ಜಿ ಹುಟ್ಟಿದ್ದು ಚಳ್ಳಕೆರೆ ತಾಲ್ಲೂಕು ಯಲಗಟ್ಟೆ ಗೊಲ್ಲರಹಟ್ಟಿಯಲ್ಲಿ, ಈರಪ್ಪ-ಕಾಡಮ್ಮ ದಂಪತಿಗಳ ಮಗಳು ಈಕೆ. ವಿದ್ಯಾಭ್ಯಾಸದಿಂದ ವಂಚಿತಳಾದರೂ ವಿದ್ವತ್ತಿನ ಗಣಿಯಾಗಿ ಸಾವಿರಾರು ಪದಗಳ ಒಡತಿಯಾಗಿ ಜನಮನ ಗೆದ್ದವರು. ಈ ಜಿಲ್ಲೆಯ ಕಾಡುಗೊಲ್ಲರ ಜನಾಂಗವು ಈ ನಾಡಿನ ಒಂದು ಸಂಸ್ಕೃತಿಯ ಜೀವಂತ ಪಳೆಯುಳಿಕೆ. ಈ ಜನಾಂಗವು ಸಂಪ್ರದಾಯ, ನಂಬಿಕೆ ಮತ್ತು ಆಚರಣೆಗಳಿಂದಾಗಿ ತನ್ನದೇ ಆದ ವೈಶಿಷ್ಟವನ್ನು ಮೆರೆದಿತ್ತು.
  • ಹಬ್ಬ-ಹರಿದಿನಗಳ ಆಚರಣೆ, ಮದುವೆಯಂತಹ ಶುಭ ಸಮಾರಂಭಗಳಲ್ಲಿ -ಹೀಗೆ ವೇದಿಕೆ ಅಥವಾ ಕೇಳುಗರು ಸಿಕ್ಕ ಹಾಗೆಲ್ಲಾ ಸಿರಿಯಜ್ಜಿಯ ಹಾಡು ಗಂಗೆಯಂತೆ ಅಲೆ ಅಲೆಯಾಗಿ ಹರಿದು ಬರುತ್ತಿತ್ತು. ಬಾಲ್ಯದಲ್ಲಿ ಸಸಿ ನಾಟಿ ಮಾಡುವಾಗ, ದಿನ ನಿತ್ಯದ ಕೆಲಸಕಾರ್ಯ ಮಾಡುವಾಗ, ಕಳೆ ಕೀಳುವಾಗ, ಧಾನ್ಯ ಕುಟ್ಟುವಾಗ, ಬೀಸುವಾಗ ಹಬ್ಬ-ಹರಿದಿನ ಹಾಗೂ ಮದುವೆ- ಮುಂಜಿಗಳಲ್ಲಿ ತಮ್ಮ ಅಜ್ಜಿ ಮತ್ತು ತಾಯಿ ಹಾಡುತ್ತಿದ್ದ ಹಾಡುಗಳನ್ನು ಅಜ್ಜಿ ತಮ್ಮ 'ಸಿರಿಕಂಠ'ದಲ್ಲಿ ಆಸ್ತಿಯೆಂಬಂತೆ ಜೋಪಾನವಾಗಿಟ್ಟು ಕೊಂಡಿದ್ದರು.
  • ಮದುವೆ ಸಂಪ್ರದಾಯ, ಜುಂಜಪ್ಪ, ಕ್ಯಾತಪ್ಪ, ಎತ್ತಪ್ಪ, ಚಿತ್ತಯ್ಯ, ಕಾಟಯ್ಯ, ಈರಣ್ಣ, ಕದರಿ ನರಸಿಂಹ, ಗೌರಸಮುದ್ರದ ಮಾರಮ್ಮ, ತಿರುಪತಿ ತಿಮ್ಮಪ್ಪ, ಕೊಂಡದ ಚಿತ್ತವ್ವ, ಕಾಟವ್ವ, ನಾಗಮ್ಮ ಮುಂತಾದ ಇಷ್ಟದೈವಗಳ ಮೇಲೆ ಪದ ಕಟ್ಟಿ ಹಾಡುವ ಕಲೆ, ಜ್ಞಾನ ಭಂಡಾರ ಸಿರಿಯಜ್ಜಿಗೆ ದೈವದತ್ತ ಕೊಡುಗೆಯಾಗಿತ್ತು.

ಜಾನಪದ ವಿದ್ವಾಂಸರು ಕಂಡಂತೆ ಸಿರಿಯಜ್ಜಿ[ಬದಲಾಯಿಸಿ]

  • ಬೆಳಗೆರೆ ಕೃಷ್ಣಶಾಸ್ತ್ರಿಗಳ ಪ್ರೊತ್ಸಾಹದಿಂದಾಗಿ, ಸಿರಿಯಜ್ಜಿಯ ಜನಪದ ಹಾಡುಗಳ ಭಂಡಾರವೇ ತೆರೆದುಕೊಂಡಿತು.
  • ‘ಮಹಾಸತಿ ಕಾಟವ್ವ’, ‘ಕತ್ತಲೆ ದಾರಿ ದೂರ’ ಎನ್ನುವ ಇವರ ಕಥನಗೀತೆಗಳು ಜನಮನ ಗೆದ್ದವು.
  • ಗೊಲ್ಲ ಜನಾಂಗದ ದೇವರ ಹಾಡುಗಳು ಜನರನ್ನು ಭಕ್ತಿ ಪರವಶರನ್ನಾಗಿಸಿದವು.
  • ಡಾ. ಎ.ಕೆ.ರಾಮಾನುಜಮ್, ಜೀಶಂಪ, ಡಾ.ಎಚ್.ಎಲ್.ನಾಗೇಗೌಡ, ಬೆಳಗೆರೆ ಕೃಷ್ಣಶಾಸ್ತ್ರೀ, ಡಾ.ತೀ.ನಂ. ಶಂಕರನಾರಾಯಣ, ಡಾ.ಕೃಷ್ಣಮೂರ್ತಿ ಹನೂರು, ಡಾ.ಎಂ.ಚಿದಾನಂದಮೂರ್ತಿ, ಡಾ.ಮಲ್ಲೇಪುರಂ ಜಿ. ವೆಂಕಟೇಶ್ ಮುಂತಾದ ಅನೇಕ ಮಹಾನ್ ವಿದ್ವಾಂಸರು ಈಕೆಯನ್ನು ಭೇಟಿಮಾಡಿ ಆಕೆಯ ಅಗಾಧ ಪ್ರತಿಭೆಗೆ ತಲೆದೂಗಿದ್ದರು.
  • ಜನಪದ ವಿದ್ವಾಂಸ ಡಾ.ಕೃಷ್ಣಮೂರ್ತಿ ಹನೂರು ಅವರು ಸಿರಿಯಜ್ಜಿಯಿಂದ ಸಂಗ್ರಹಿಸಿದ್ದ ಜಾನಪದ ಕಥನ ಗೀತೆಗಳನ್ನು ಕನ್ನಡ ವಿಶ್ವವಿದ್ಯಾಲಯವು 'ಸಾವಿರ ಸಿರಿ ಬೆಳಗು' ಎಂಬ ಹೆಸರಿನಲ್ಲಿ ಪುಸ್ತಕವಾಗಿ ಪ್ರಕಟಿಸಿತ್ತು.
  • ಸಿರಿಯಜ್ಜಿಯ 'ಬದುಕು ಮತ್ತು ಕಾವ್ಯ' (ಲೇಖಕ: ಡಾ.ಮೀರಾಸಾಬಿಹಳ್ಳಿ ಶಿವಣ್ಣ) ಕುರಿತ ಪುಸ್ತಕವನ್ನು ಬೆಂಗಳೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಸಂಸ್ಥೆ ಪ್ರಕಟಿಸಿತ್ತು.

ಪ್ರಶಸ್ತಿ/ಗೌರವ ಪುರಸ್ಕಾರ[ಬದಲಾಯಿಸಿ]

  1. ಗುಂಡೂರಾಯರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಈ ಸಿರಿಯಜ್ಜಿಗೆ ‘ಜನಪದ ಸಿರಿ’ ಎಂಬ ಬಿರುದನ್ನಿತ್ತು ಸನ್ಮಾನಿಸಲಾಗಿತ್ತು.
  2. ನಾಡಿನ ಪ್ರತಿಷ್ಠಿತ ಪ್ರಶಸ್ತಿಯಾದಂತಹ‘ ನಾಡೋಜ’ ಪ್ರಶಸ್ತಿಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯವು ನೀಡಿ ಗೌರವಿಸಿತು.
  3. ಕರ್ನಾಟಕ ಜನಪದ ಅಕಾಡೆಮಿಯ ‘ಜಾನಪದಶ್ರೀ’ ಎಂಬ ಬಿರುದನ್ನು ನೀಡಿ ಪುರಸ್ಕರಿಸಿತು.
  4. ಅನೇಕ ಸಂಘ-ಸಂಸ್ಥೆಗಳು, ಜನಪದ ಮೇಳ, ಮಠ ಮಾನ್ಯಗಳಿಂದ ಪ್ರಶಸ್ತಿ ಪಡೆದ ಸಿರಿಯಜ್ಜಿ ‘ನಡೆದಾಡುವ ಜಾನಪದ ಕೋಶ’ ಎಂದೇ ಪ್ರಸಿದ್ಧರಾಗಿದ್ದರು.

ನಿಧನ[ಬದಲಾಯಿಸಿ]

ಜಾನಪದ ಸಿರಿಯಜ್ಜಿ ೨೦೦೯ರಲ್ಲಿ ತಮ್ಮ ೯೭ ನೇ ವಯಸ್ಸಿನಲ್ಲಿ ಚಳ್ಳಕೆರೆ ತಾಲೂಕು ಯಲಗಟ್ಟೆ ಗೊಲ್ಲರಹಟ್ಟಿಯಲ್ಲಿ ತೀವ್ರ ಅನಾರೋಗ್ಯದಿಂದ ನಿಧನರಾದರು.