ಸಿಂಹ ನೃತ್ಯ
ಸಿಂಹ ನೃತ್ಯವು ಮನರಂಜನೆಯ ಒಂದು ಕಲೆಯಾಗಿರುವುದು. ವನರಾಜನಾದ ಸಿಂಹದ ಗಾಂಭಿರ್ಯ, ದರ್ಪ, ಬೇಟೆ ಹೊಂಚು, ಸಂಚು, ಆಕ್ರಮಣದ ವೈಖರಿಯ ಅಭಿನಯವೇ ಸಿಂಹನೃತ್ಯವಾಗಿರುವುದು. ಇದು 'ಜಾಂಬವತಿ ಕಲ್ಯಾಣದಲ್ಲಿ ಬರುತ್ತಿದ್ದ ಸಿಂಹದ ಪಾತ್ರವನ್ನೇ ಪ್ರತ್ಯೇಕವಾಗಿ ಅಭಿನಯಿಸುವ ಪದ್ದತಿಯಾಗಿದೆ. ಸಿಂಹದ ಪಾತ್ರಕ್ಕೆ ತಕ್ಕ ಹಾಗೆ ಹೊರ ಮೈಯನ್ನು ಹೋಲುವಂತಹ ಅಂಗಿ. ಇದನ್ನು 'ಪುಂಡಿ' ಎಂಬ ಜಾತಿಯ್ ಗಿಡದ ಹೊರ ತೊಗಟೆಯನ್ನು ನೀರಿನಲ್ಲಿ ಕೊಳೆ ಹಾಕಿ ತಯಾರಿಸಿದ ನಾರಿನಿಂದ ಸಿದ್ದಪಡಿಸಿ ಬಣ್ಣ ಕೊಡುವುದರಿಂದ ಈ ನಾರಿನ ಹೊರಮೈ ನಿಜವಾದ ಸಿಂಹದಂತೆಯೇ ಭಾಸವಾಗುವುದು. ಮುಖವಾಡವನ್ನು ಹತ್ತಿಯಿಂದ ನಿರ್ಮಿಸಲಾಗಿರುತ್ತದೆ. ಮುಖದ ಆಕಾರಕ್ಕೆ ತಕ್ಕಂತೆ ಉಬ್ಬು, ತಗ್ಗುಗಳ್ಳನ್ನು ಅಂಟಿನ ಸಹಾಯದಿಂದ ಮಾಡಲಾಗಿರುತ್ತದೆ. ಹಲ್ಲು, ಉಗುರು, ಮೀಸೆ ಎಲ್ಲವು ಕೃತಕವಾಗಿರುತ್ತದೆ. ಇವುಗಳನ್ನು ನೈಜದಂತೆ ಮಾಡುವುದು ಒಂದು ಕಲೆಯೇ ಆಗಿರುವುದು. ಸಿಂಹ ನೃತ್ಯಕ್ಕೆ ತಕ್ಕ ಹಾಗೆ ಸೂಕ್ತವಾದ ರಂಗ ಸಜ್ಜಿಕೆಯನ್ನು ಅಳವಾಡಿಸಲಾಗಿರುತ್ತದೆ. ಕಾಡಿನ ದೃಶ್ಯಕ್ಕೆ ತಕ್ಕಂತೆ ಮರದ ಟೊಂಗೆಗಳನ್ನು ನೆಟ್ಟು , ಎತ್ತರವಾದ ಹುಲ್ಲಿನಿಂದ ಕೃತಕ ಪೊದೆಗಳನ್ನು ನಿರ್ಮಿಸಲಾಗಿರುತ್ತದೆ. ಇವುಗಳ ನಡುವೆ ಎತ್ತರವಾದ ವಸ್ತುಗಳನ್ನು ಇಟ್ಟು ಅವುಗಳನ್ನು ಒರಟು ಬಟ್ಟೆಯಿಂದ ಮುಚ್ಚಿ ದಿಬ್ಬದ ಕಲ್ಪನೆಯು ಬರುವಂತೆ ಮಾಡಲಾಗಿರುತ್ತದೆ. ಸೂಕ್ತವಾದ ಬೆಳಕನ್ನು ಅಳವಾಡಿಸಲಾಗಿರುತ್ತದೆ. ಕುಣಿತಕ್ಕೆ ತಕ್ಕ ಹಾಗೆ ಹಿನ್ನೆಲೆಯಾಗಿ ಡೋಲು, ನಗಾರಿ, ಮೃದಂಗ, ಚಂಡೆ, ತಾಳ, ಶೃತಿ, ವಾದ್ಯಗಳನ್ನು ಬಳಸುತ್ತಾರೆ. ಈ ವಾದ್ಯಗಳನ್ನು ಎರಡು ಬಗೆಯಾಗಿ ಕಾಣಬಹುದು. ಡೋಲು, ನಗಾರಿಗಳನ್ನು ಕಾಡಿನ ಭಯಾನಕ ವಾತಾವರಣ, ಸಿಂಹದ ಗರ್ಜನೆಯ ಹಿನ್ನೆಲೆಯನ್ನು ಬಳಸಿದರೆ, ಮೃದಂಗ, ತಾಳ, ಶೃತಿ, ಚಂಡೆಗಳನ್ನು ಸಿಂಹದ ಕುಣಿತಕ್ಕೆ ಒದಗಿಸಲಾಗಿರುತ್ತದೆ. ಕಲೆಯ ಪ್ರಾರಂಭದಲ್ಲಿ ಅರಣ್ಯದ ದೃಶ್ಯ ಕಾಣುತ್ತದೆ. ನಂತರ ಕಾಡಿನ್ ಭಯಾನಕತೆಯನ್ನು ಸೂಚಿಸುವ ಡೋಲು, ನಗಾರಿಗಳ ಸದ್ದು, ಮೃಗಗಳ ಕೂಗು, ದೂರದಿಂದ ಸಿಂಹದ ಗರ್ಜನೆ, ಕುರಿಯ ಕಿರಿಚುವಿಕೆ ಶಬ್ದ ಕೇಳಿಬರುತ್ತದೆ. ಸಿಂಹವು ಮೊದಲು ತನ್ನ ನಡಿಗೆಯೊಂದಿಗೆ ಪ್ರವೇಶಿಸಿ ನಂತರ ಮರದ ಕೆಳಗೆ ಮಲಗುತ್ತದೆ. ಕುರಿಯ ಕೂಗು ಕೇಳಿದೊಡನೆ ತನ್ನ ಕಿವಿಯನ್ನು ಚುರುಕುಗೊಳಿಸಿಕೊಂಡು ಬೇಟೆಗಾಗಿ ಹೊಂಚು ಹಾಕುವುದು, ದಿಣ್ಣೆಯಿಂದ ದಿಣ್ಣೆಗೆ ನೆಗೆಯುತ್ತಾ ಸದ್ದಾಗದಂತೆ ಸಮೀಪಿಸಿ, ಆಕ್ರಮಣ ಮಾಡಿ ಹಿಡಿದು ಕರುಳು ಬಗೆದು ತಿನ್ನುವುದು, ತಿಂದ ನಂತರ ನಾಲಿಗೆಯಿಂದ ಕೈ ಬಾಯಿ ಒರೆಸಿಕೊಂಡು ಶುಚಿಯಾಗಿ ಪುನಃ ಗಂಭೀರ ನಡಿಗೆಯಿಂದ ಓಡಾಡುವುದು. ನೈಜವಾಗಿ ಪ್ರದರ್ಶನ ನಡೆಯುವುದು ಕುತೂಹಲಕಾರಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹೊನ್ನ್ನಾವರ ತಾಲ್ಲೂಕಿನಲ್ಲಿ ಕಂಡುಬರುವ ಈ ಕಲೆಯು ಉತ್ಸವ ಮೊದಲಾದ ಸಂದರ್ಭಗಳಲ್ಲಿ ಪ್ರದರ್ಶಿಸುತ್ತಾರೆ.
ಉಲ್ಲೇಖಗಳು
[ಬದಲಾಯಿಸಿ]ಕರ್ನಾಟಕ ಜನಪದ ಕಲೆಗಳು: ಸಂಪಾದಕ-ಗೊ.ರು.ಚನ್ನಬಸಪ್ಪ, ಕನ್ನಡ ಸಾಹಿತ್ಯ ಪರಿಶತ್ತು, ೧೯೭೭