ವಿಷಯಕ್ಕೆ ಹೋಗು

ಮಧುಕೇಶ್ವರ ದೇವಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಧುಕೇಶ್ವರ ದೇವಾಲಯ

ಮಧುಕೇಶ್ವರ ದೇವಾಲಯ,ಬನವಾಸಿ[ಬದಲಾಯಿಸಿ]

ಮಧುಕೇಶ್ವರ ದೇವಾಲಯವು[೧] ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ತಾಲೂಕಿನ ಬನವಾಸಿಯಲ್ಲಿದೆ. ಇದು ಸಿರ್ಸಿ ಮತ್ತು ಸೊರಬ ಪಟ್ಟಣಗಳಿಂದ ಸುಮಾರು ೨೪ ಕಿಮೀ ದೂರದಲ್ಲಿದೆ. ಸುಮಾರು ೧೫೦೦ ವರ್ಷದ ಹಿಂದೆ ಕದಂಬರು, ಚಾಲುಕ್ಯರು, ಹೊಯ್ಸಳರ ಕಾಲದಲ್ಲಿ ದೇವಾಲಯವನ್ನು ಕಟ್ಟಲಾಗಿದೆ. ಪ್ರಸಿದ್ಧ ಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಈ ದೇವಾಲಯವನ್ನು ನಿರ್ಮಿಸಿದನೆಂದು ನಂಬಿಕೆ. ಪವಿತ್ರ ವರದಾ ನದಿಯು ದೇವಾಲಯದ ಎದುರಿಗೆ ಹರಿಯುತ್ತಿದೆ. ಶ್ರೀ ಮಧುಕೇಶ್ವರ ಇಲ್ಲಿನ ಆರಾಧ್ಯದೈವ. ದೇವಾಲಯವು ಕರ್ನಾಟಕದ ಏಳು ಮುಕ್ತಿ ಸ್ಥಳಗಳಲ್ಲೊಂದು ಎಂದು ಪ್ರಸಿದ್ಧವಾಗಿದೆ.

ಮಧುಕೇಶ್ವರ ದೇವಾಲಯದ ಹೊರನೋಟ

ಪೌರಾಣಿಕ ಐತಿಹ್ಯ[ಬದಲಾಯಿಸಿ]

ಮಾರ್ಕಂಡೇಯ ಪುರಾಣದ ಕಥೆಯ ಪ್ರಕಾರ ಕೃತಯುಗದಲ್ಲಿ ಮಹಾವಿಷ್ಣುವಿನ ಕಿವಿಯಿಂದ ಮಧು,ಕೈಟಭರೆಂಬ ಇಬ್ಬರು ದೈತ್ಯರು ಉತ್ಪತ್ತಿಯಾಗುತ್ತಾರೆ. ಅವರು ಈಶ್ವರನನ್ನು ಕುರಿತು ತಪಸ್ಸು ಮಾಡಿ ವರ ಪಡೆದು ಅಜರಾಮರರಾಗುತ್ತಾರೆ. ಕ್ರಮೇಣ ಅವರಲ್ಲಿ ಗರ್ವ ಉಂಟಾಗಿ ಲೋಕ ಕಂಟಕರಾಗುತ್ತಾರೆ. ಭೂಲೋಕಗಳನ್ನೆಲ್ಲ ಜಯಿಸಿ ಬ್ರಹ್ಮನ ಕಾರ್ಯಕ್ಕೆ,ಶಿವನ ಕಾರ್ಯಕ್ಕೆ ತೊಂದರೆ ಉಂಟುಮಾಡುತ್ತಾರೆ. ಆಗ ಬ್ರಹ್ಮ ವಿಷ್ಣುವಿನಲ್ಲಿ ಮೊರೆಯಿಟ್ಟು ಈ ಲೋಕ ಕಂಟಕ ರಾಕ್ಷಸರನ್ನು ಸಂಹರಿಸಲು ಕಳಚಿಕೊಳ್ಳುತ್ತಾನೆ. ವಿಷ್ಣುವು ಸಮ್ಮತಿಸಿ ಮಧು,ಕೈಟಭರೊಂದಿಗೆ ಯುದ್ಧಕ್ಕೆ ಆಹ್ವಾನಿಸುತ್ತಾನೆ. ಅವರೊಡನೆ ಐದು ಸಹಸ್ರ ವರ್ಷಗಳವರೆಗೆ ಯುದ್ಧ ಮಾಡಿದರೂ ಸೋಲಿಸಲಾಗುವುದಿಲ್ಲ. ಕೊನೆಗೆ ವಿಷ್ಣು ಉಪಾಯದಿಂದ ಯೋಚಿಸಿ ವರವೇನಾದರೂ ಬೇಕಿದ್ದರೆ ಕೇಳಿ, ಕೊಡುತ್ತೇನೆ., ಎಂದಾಗ ಮತಾಂಧರಾದ ದೈತ್ಯರು ನಾವೇ ನಿನಗೆ ವರ ಕೊಡುತ್ತೇವೆ ಕೇಳಿಕೋ ಎಂದು ಹೇಳುತ್ತಾರೆ. ಇದನ್ನೇ ಆಶಿಸಿದ್ದ ವಿಷ್ಣುವು ಹಸನ್ಮುಖದಿಂದ ಹಾಗಾದರೆ ನನ್ನಿಂದ ನೀವು ಹತರಾಗುವ ವರ ಕೊಡಿರೆಂದು ಕೇಳುತ್ತಾನೆ. ಈ ಮಾತನ್ನು ಕೇಳಿ ಗರಬಡಿದವರಂತೆ ಆಗಿ ಅಹಂಕಾರ ಅಳಿದು ಮಧು-ಕೈಟಭರು ತಾವಾಗೇ ಇಂಥ ಪ್ರಸಂಗ ತಂದುಕೊಂಡೆವಲ್ಲ ಎಂದು ಚಿಂತಿಸಿ, ಮರುಗಿ ನಮ್ಮನ್ನು ಸಂಹರಿಸಿ ನಮ್ಮ ಪ್ರತೀಕವಾಗಿ ಇಲ್ಲಿ ಈಶ್ವರಾಲಯ ನಿರ್ಮಿಸಬೇಕೆಂದು ಪ್ರಾರ್ಥಿಸುತ್ತಾರೆ. ಮಹಾವಿಷ್ಣು ಹಾಗೇ ಆಗಲೆಂದು ಅವರೀರ್ವರನ್ನು ಸಂಹರಿಸಿ ಬನವಾಸಿಯಲ್ಲಿ ಮಧುಕೇಶ್ವರ ದೇವಾಲಯವನ್ನು, ಹಾಗು ಅಲ್ಲಿಂದ ೧೫ ಕಿ.ಮೀ.ದೂರದ ಆನವಟ್ಟಿಯ ಬಳಿ ಕೈಟಭೇಶ್ವರ ದೇವಾಲಯವನ್ನು ನೆಲೆಗೊಳಿಸಿದನೆಂಬ ಪ್ರತೀತಿಯಿದೆ. ಈಗಲೂ ಬನವಾಸಿಯಲ್ಲಿ ಮಧುಕೇಶ್ವರ ದೇವಾಲಯ, ಸೊರಬ ತಾಲೂಕಿನ ಆನವಟ್ಟಿಯ ಸಮೀಪ ಕೋಟೆಪುರದಲ್ಲಿ ಕೈಟಭೇಶ್ವರ ದೇವಾಲಯವಿದೆ.

ನಿರ್ಮಾಣ[ಬದಲಾಯಿಸಿ]

ಮಧುಕೇಶ್ವರ ದೇವಾಲಯವು ಒಂದೇ ಹಂತದಲ್ಲಿ ಕಟ್ಟಿದುದಲ್ಲ.ಕ್ರಿ.ಶ.ಮೊದಲನೆಯ ಶತಮಾನದ ಶಾತವಾಹನರಿಂದ ಹಿಡಿದು ೧೮ ನೆಯ ಶತಮಾನದ ಸೋದೆ ಅರಸರು ಕಾಲಕಾಲಕ್ಕೆ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿದ್ದಾರೆ.ಮಯೂರವರ್ಮನ ಮೊಮ್ಮಗನಾದ ಕಾಕುಸ್ಥವರ್ಮ ಮತ್ತು ಅವನ ಮೊಮ್ಮಗನಾದ ಮೃಗೇಶವರ್ಮ ಮತ್ತು ರವಿವರ್ಮರ ಕಾಲ ಅತ್ಯಂತ ಸುಖಸಂಪತ್ತಿನಿಂದ ಕೂಡಿದ್ದೂ ಆಗಿತ್ತು.ಇವರ ಕುಲದೇವರು ಮಧುಕೇಶ್ವರ.ಪ್ರಾರಂಭದಲ್ಲಿ ಇವರು ಬನವಾಸಿಯಲ್ಲಿ ಮಧುಕೇಶ್ವರನ ಚಿಕ್ಕ ಆಲಯವನ್ನು ಕಟ್ಟಿಸಿದ್ದಾದರೂ ಮುಂದೆ ಬಂದ ಬೇರೆ ಬೇರೆ ರಾಜಮನೆತನದವರು ದೇವಾಲಯವನ್ನು ಸಾಕಷ್ಟು ವಿಸ್ತರಿಸಿದರು.ಕದಂಬರ ಕಾಲದಲ್ಲಿ ಇಟ್ಟಿಗೆಯಿಂದ ದೇವಾಲಯದ ಛಾವಣಿ ಕಟ್ಟಲಾಗಿತ್ತು.ಮುಂದೆ ರಾಷ್ಟ್ರಕೂಟ ಅರಸರ ಕಾಲದಲ್ಲಿ ದೇವಾಲಯದ ಗರ್ಭಗೃಹದ ಸುತ್ತಲೂ ಇರುವ ಪ್ರದಕ್ಷಿಣಪಥ ಮತ್ತು ಒಳಮಂಟಪಗಳು,ದೇವಸ್ಥಾನದ ಮೂಲಭಾಗಗಳನ್ನು ಕಲ್ಲಿನಿಂದ ೮ನೇ ಶತಮಾನದಲ್ಲಿ ಕಟ್ಟಿದರು.ಮುಂದಿನ ಮಹಾಮಂಟಪವನ್ನು ಕಲ್ಯಾಣಿ ಚಾಲುಕ್ಯರು ಮತ್ತು ಹೊಯ್ಸಳರು ೧೨ನೇ ಶತಮಾನದಲ್ಲಿ ತಮ್ಮ ಶೈಲಿಯಲ್ಲಿ ಕಟ್ಟಿಸಿದ್ದಾರೆ.ಆ ನಂತರ ವಿಜಯನಗರದ ಅರಸನಾದ ಹರಿಹರನ ಕಾಲದಲ್ಲಿ ಅವನ ಮಂತ್ರಿ ಚೌಂಡಮಾಧವ ೧೪ನೇ ಶತಮಾನದಲ್ಲಿ ಸುಹಾಸಿನಿ ನಂದಿ ವಿಗ್ರಹವನ್ನು ಕಟ್ಟಿಸಿದನು.ಹೊರಗಿನ ಪ್ರಾಕಾರ ಮತ್ತು ಪಾರ್ವತಿ,ಸದಾಶಿವನಗುಡಿಗಳನ್ನು ೧೫ನೇ ಶತಮಾನದಲ್ಲಿ ವಿಜಯನಗರದ ಸೋದೆ ಅರಸರು ನಿರ್ಮಿಸಿದರು.ಗರ್ಭಗುಡಿಯ ಬಾಗಿಲಿನ ಎಡಭಾಗದ ಕೋಣೆಯಲ್ಲಿರುವ ಆದಿ ಮಾಧವನ ಮೂರ್ತಿಯು ಬಾದಾಮಿಚಾಲುಕ್ಯರ ಕಾಲದ್ದಾಗಿದೆ.ಕಲ್ಲಿನಲ್ಲಿ ಕೆತ್ತಿದ ತ್ರೈಲೋಕ್ಯ ಮಂಟಪವನ್ನು ಸೋದೆಯ ಸದಾಶಿವರಾಯ ೧೬೩೮ ರಲ್ಲಿ ಶ್ರೀ ದೇವರಿಗೆ ಅರ್ಪಿಸಿದನು.ದೇವಾಲಯದ ಪ್ರಾಂಗಣದ ದಕ್ಷಿಣ ಭಾಗದಲ್ಲಿ ಪ್ರತ್ಯೇಕವಾಗಿ ದ್ರಾವಿಡ ಶೈಲಿಯಲ್ಲಿ ಕಟ್ಟಿರುವ ಸೂಕ್ಷ್ಮ ಕುಸುರಿ ಕೆತ್ತನೆಗಳಿಂದ ಕೂಡಿದ ಕಲ್ಲಿನ ಮಂಟಪವನ್ನು ಸೋದೆಯ ಅರಸ ರಘುನಾಥ ನಾಯಕನು ವಸಂತ ಕಾಲದಲ್ಲಿ ದೇವರ ಉಪಯೋಗಕ್ಕಾಗಿ ೧೭೨೯ನೇ ಇಸವಿಯಲ್ಲಿ ಮಾಡಿಸಿಕೊಟ್ಟನು.ಕ್ರಿ.ಶ. ೧೭೭೯ರಲ್ಲಿ ಸದಾಶಿವರಾವ ಪೇಶ್ವೆಯವರ ಧರ್ಮಪತ್ನಿ ಪಾರ್ವತಿಬಾಯಿಯವರು ಬನವಾಸಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀ ದೇವರಿಗಾಗಿ ಒಂದು ದೊಡ್ಡ ಕಂಚಿನ ಗಂಟೆಯನ್ನು ಮಾಡಿಸಿಕೊಟ್ಟಿದ್ದಾರೆ.ಉತ್ತರ ಪಾರ್ಶ್ವದಲ್ಲಿರುವ ಆದಿಶೇಷ (ನಾಗ) ಪ್ರತಿಮೆಯನ್ನು ಚುಟುವಂಶದ ರಾಣಿ ಶಿವಸ್ಕಂದ ನಾಗಶ್ರೀ ಕೆತ್ತಿಸಿದ್ದಾಳೆ.

ಕಲ್ಲಿನಿಂದ ಕೆತ್ತಲಾದ ತ್ರಿಲೋಕ ಮಂಟಪ

ವಾಸ್ತುಶಿಲ್ಪದ ವೈಶ್ಶಿಷ್ಟ್ಯತೆ[ಬದಲಾಯಿಸಿ]

ದಕ್ಷಿಣ ಭಾರತದಲ್ಲೇ ಅತೀ ಪ್ರಾಚೀನ ದೇವಾಲಯಗಳಲ್ಲಿ ಒಂದಾದ ಕದಂಬರ ನಿರ್ಮಿತ ಶ್ರೀ ಮಧುಕೇಶ್ವರ ದೇವಾಲಯ ತನ್ನದೇ ಆದ ಪ್ರತ್ಯೇಕ ಶೈಲಿ ಹೊಂದಿದೆ.ಇದು ಸುಮಾರು ಹದಿನೈದು ಶತಮಾನಗಳ ವಿವಿಧ ಶಿಲ್ಪಕಲಾ ಶೈಲಿಯ ಸಂಗಮವಾಗಿರುವುದಕ್ಕೆ ಹತ್ತು ಹಲವು ರಾಜಮನೆತನಗಳು ಕಾಲಕಾಲಕ್ಕೆ ನೀಡಿರುವ ಕೊಡುಗೆಯೇ ಕಾರಣವಾಗಿದೆ.ಕರ್ನಾಟಕದ ಪ್ರಾಚೀನ ಇತಿಹಾಸದ ಎಲ್ಲ ಶಿಲ್ಪಕಲಾ ವಿನ್ಯಾಸಗಳನ್ನು ಈ ದೇವಾಲಯ ಹೊಂದಿದೆ.ಗುಡಿಯ ಪ್ರಾಂಗಣದಲ್ಲಿ ಕೆತ್ತಿದ ಹನ್ನೊಂದು ಏಕಾದಶ ರುದ್ರರ ಮೂರ್ತಿಗಳು,ಹನ್ನೆರೆಡು ದ್ವಾದಶ ಆದಿತ್ಯರ ಮೂರ್ತಿಗಳು ಮತ್ತು ಅಷ್ಟದಿಕ್ಪಾಲಕರನ್ನು ಅವರವರ ದಿಕ್ಕಿನಲ್ಲಿ ಪತ್ನಿ,ಆಯುಧ,ಹಾಗೂ ವಾಹನಗಳ ಮೇಲೆ ವಿಗ್ರಹಗಳನ್ನು ಕೆತ್ತಿ ಸ್ಥಾಪಿಸಿರುವುದು ನೋಡಲು ಲಭ್ಯವಿರುವುದು ಇದೊಂದೇ ಸ್ಥಳದಲ್ಲಿ.ದೇವಾಲಯದ ಹೊರವಲಯದಲ್ಲಿರುವ ೪೦ ಅಡಿ ಎತ್ತರದ ದೀಪಸ್ತಂಭ,ಧ್ವಜಸ್ತಂಭಗಳು ಒಂದೇ ಕಲ್ಲಿನಿಂದ ಮಾಡಲ್ಪಟ್ಟಿವೆ.ಕದಂಬರಿಂದ ನಿರ್ಮಿತವಾದ ಕದಂಬ ಶಿಲ್ಪವನ್ನು ಉಪನಾಗರ ಶೈಲಿ ಎಂದು ಹೇಳಲಾಗಿದೆ.ಮಧುಕೇಶ್ವರ ದೇವಾಲಯದ ಗೋಪುರವನ್ನು 'ಕದಂಬವಿಮಾನ' ಎಂದು ಹೇಳುತ್ತಾರೆ.ಇದು ಉತ್ತರ ಭಾರತದ ನಾಗರ ಬೌದ್ಧ ಪ್ರಸ್ತಾನದ ಸುಧಾರಿಸಿದ ಆವೃತ್ತಿಯಾಗಿದೆ.ದೇವಾಲಯದ ಗರ್ಭಗುಡಿ ಈಗ ಆರ್ವಾಚೀನ ಆಕಾರವನ್ನು ತಳೆದಿದೆ.ಸುಂದರ ಕೆತ್ತನೆಯ ಕಂಬ,ಕೂಡುಕಟ್ಟೆಗಳಿಂದ ಆವೃತ್ತವಾದ ಸುಖನಾಸಿನಿ,ಮುಖಮಂಟಪ,ಪ್ರದಕ್ಷಿಣಾಪಥಗಳು ದೇವಾಲಯದ ಆಕರ್ಷಣೆಗಳು.೨ನೇ ಶತಮಾನದ ಐದು ಹೆಡೆಗಳ ನಾಗರ ಶಿಲ್ಪದ ಮೇಲೆ ಶಾಸನ ಪ್ರಾಕೃತ ಭಾಷೆಯಲ್ಲಿ ಬರೆದಿದ್ದಾರೆ.

ದೇವಾಲಯದ ಪ್ರಮುಖ ಆಕರ್ಷಣೆಗಳು[ಬದಲಾಯಿಸಿ]

ಮಧುಕೇಶ್ವರ ಲಿಂಗ[ಬದಲಾಯಿಸಿ]

ಶ್ರೀ ಮಧುಕೇಶ್ವರ ಲಿಂಗವು ೫.೫ ಅಡಿ ಎತ್ತರವಿದ್ದು,ಲಿಂಗದ ಶಿಲೆಯು ಜೇನು ತುಪ್ಪ(ಮಧು)ದ ಬಣ್ಣದಲ್ಲಿದೆ.ಅಂತೆಯೇ ಮಧುಕೇಶ್ವರ ಲಿಂಗವೆಂದು ಹೆಸರು.ಇಂತಹ ಕಲ್ಲಿನ ಶಿವಲಿಂಗಗಳು ಅತಿವಿರಳ.

ಪೂಜಾಸಮಯದಲ್ಲಿ ಅಲಂಕೃತವಾದ ಮಧುಕೇಶ್ವರ ಲಿಂಗ

ಮಾಯಾದೇವಿ ನಾಟ್ಯಮಂಟಪ[ಬದಲಾಯಿಸಿ]

ಗುಡಿಯ ಮುಖಮಂಟಪದ ಮಧ್ಯದಲ್ಲಿ ನಾಟ್ಯಮಂಟಪವಿದೆ.ಮಮಕಾರ ರಾಜನ ಮಗಳಾದ ಮಾಯಾದೇವಿ ಶಿವನನ್ನೇ ಒಲಿಸಿಕೊಳ್ಳಬೇಕೆಂದು ನಾಟ್ಯಸೇವೆ ಮಾಡುತ್ತಿರುವಾಗ ಅಲ್ಲಮ ಪ್ರಭುವು ಮದ್ದಳೆಕಾರನಾಗಿ ಬಂದು ಮದ್ದಳೆ ನುಡಿಸಿ ಮಾಯೆಯನ್ನು ಸೋಲಿಸಿದನೆಂದು ಪ್ರಭುಲಿಂಗಲೀಲೆಯಲ್ಲಿ ಹೇಳಿದೆ.ಈ ಮಂಟಪದ ದುಂಡಗಿನ ನಾಲ್ಕು ಕಂಬಗಳಲ್ಲಿ ನಮ್ಮ ಪ್ರತಿಬಿಂಬವು ಏಕಕಾಲದಲ್ಲಿ ನೇರವಾಗಿ,ತಲೆ ಕೆಳಗಾಗಿಯೂ ಕಾಣುತ್ತದೆ.

ನಂದಿ ವಿಗ್ರಹ[ಬದಲಾಯಿಸಿ]

ನಾಟ್ಯಮಂಟಪದ ಎದುರು ೭.೫ ಅಡಿ ಎತ್ತರದ ಬೃಹತ್ ನಂದಿ ಇದೆ.ಇದು ಹಾನಗಲ್ ಕದಂಬರ ಕಾಲಕ್ಕೆ ಸೇರಿದ್ದಾಗಿದೆ.ಈ ನಂದಿಯು ಎಡಗಣ್ಣಿನಿಂದ ಎದುರಿಗೆ ಶಿವನನ್ನು ಬಲಗಣ್ಣಿನಿಂದ ಪಕ್ಕದಲ್ಲಿರುವ ಪಾರ್ವತಿ ಗುಡಿಯಲ್ಲಿರುವ ಪಾರ್ವತಿಯನ್ನು ನೋಡುತ್ತಿದೆ.ನಂದಿಯನ್ನು ಅತ್ಯಂತ ನುಣುಪಾದ ಬಳಪದ ಕಲ್ಲಿನಿಂದ ಮಾಡಲಾಗಿದೆ.

ಕಲ್ಲು ಮಂಚ[ಬದಲಾಯಿಸಿ]

ದೇವಾಲಯದ ದಕ್ಷಿಣ ಪಾರ್ಶ್ವದಲ್ಲಿರುವ ಕಲ್ಲಿನಮಂಚವು ಗ್ರೆನೈಟ್ ಶಿಲೆಯಿಂದ ಮಾಡಿದ್ದಾಗಿದೆ.ಇದು ಹತ್ತು ತುಂಡು ಕಲ್ಲಿನಿಂದ ಮಾಡಿದುದಾಗಿದೆ.ಇದು ಹೊಳಪಿನಿಂದ ಕೂಡಿದ್ದು ಇದರ ಮೇಲೆ ಶಾಸನಗಳನ್ನು ಕೆತ್ತಲಾಗಿದೆ.ಮಂಚದ ಮೇಲೆ ಗಿಳಿ,ಸಿಂಹಗಳು,ಆನೆಗಳು,ಛಾವಣಿಯ ಕಮಲಗಳನ್ನು ಕೆತ್ತಲಾಗಿದೆ.ಸೋಂದೆಯ ರಘುನಾಥ ನಾಯಕನು ೧೬೨೮ರಲ್ಲಿ ಇದನ್ನು ಮಧುಕೇಶ್ವರನಿಗೆ ಅರ್ಪಿಸಿದನು.

ಅರ್ಧಗಣಪತಿ[ಬದಲಾಯಿಸಿ]

ಗುಡಿಯ ಬಲಭಾಗಕ್ಕೆ ಅನನ್ಯವಾದ ಅರ್ಧಗಣಪತಿಯ ಮೂರ್ತಿಯಿದೆ.ಇದರ ಇನ್ನೊಂದು ಅರ್ಧಭಾಗ ವಾರಣಾಸಿಯಲ್ಲಿದೆಯೆಂದು ನಂಬಲಾಗಿದೆ.ಇದು ಅರ್ಧಾಂಗಿಯಿಲ್ಲದೇ ನಿಂತಿರುವ ಏಕದಂತನ ಬ್ರಹ್ಮಚರ್ಯವನ್ನು ಸಂಕೇತಿಸುತ್ತದೆ.

ಇತರ ಆಕರ್ಷಣೆಗಳು[ಬದಲಾಯಿಸಿ]

ಮಧುಕೇಶ್ವರ ದೇವಾಲಯದ ಗರ್ಭಗುಡಿ ಶುಕನಾಸಿ,ಮುಖಮಂಟಪಗಳ ಸುತ್ತಲಿನ ಪ್ರದಕ್ಷಿಣಾ ಪಥದ ಎಡಗಡೆ ಇರುವ ಮಹಾವರಣಭಸ್ತಿಯಲ್ಲಿ ದೊಡ್ಡದಾದ ಅಷ್ಟದಿಕ್ಪಾಲಕರ ಎಂಟು ಮೂರ್ತಿ ಪತ್ನಿ ವಾಹನ ಸಮೇತರಾಗಿ ಆಯಾ ದಿಕ್ಕಿಗೆ ಸ್ಥಾನಕ್ಕೆ ಸರಿಯಾಗಿ ಪೂರ್ವಕ್ಕೆ ಇಂದ್ರ,ಆಗ್ನೇಯಕ್ಕೆ ಅಗ್ನಿ,ದಕ್ಷಿಣಕ್ಕೆ ಯಮ,ನೈಋತ್ಯಕ್ಕೆ ನಿರಋತಿ,ಪಶ್ಚಿಮಕ್ಕೆ ವರುಣ,ವಾಯುವ್ಯಕ್ಕೆ ವಾಯು,ಉತ್ತರಕ್ಕೆ ಕುಬೇರ,ಈಶಾನ್ಯಕ್ಕೆ ಈಶಾನಗಳನ್ನು ಪ್ರತ್ಯೇಕವಾಗಿ ಸ್ಥಾಪಿಸಿದ್ದಾರೆ.ಇದರ ನಡುವೆ ಅಲ್ಲಲ್ಲಿ ಪಾಂಡುರಂಗ,ಕಾಶಿ ವಿಶ್ವೇಶ್ವರ,ವರದೇಶ್ವರ,ಹಾವಳಿ ಮಧುಕೇಶ್ವರ,ಅಮೃತೇಶ್ವರ,ಕೇದಾರೇಶ್ವರ,ಸಪ್ತಮಾತೃಕೆ,ಚಿಂತಾಮಣಿಯರ ಪಟ್ಟಿ,ನರಸಿಂಹದೇವರ ಗುಡಿ,ವೆಂಕಟರಮಣ,ಅಮೃತಶಿಲೆಯ ರಾಮ-ಲಕ್ಷ್ಮಣ-ಸೀತೆ,ದತ್ತಪಾದುಕೆ,ದುಂಡಿರಾಜ,ಉಮಾಮಹೇಶ್ವರ,ಬಸಲಿಂಗೇಶ್ವರ,ಸೂರ್ಯ,೨ನೇ ಶತಮಾನದ ೫ ಹೆಡೆಯುಳ್ಳ ಆದಿಶೇಷ,ಕೇಶವ,ಉತ್ತರದ್ವಾರ,ಪೂರ್ವದ್ವಾರ,ಚೌಡೇಶ್ವರಿ,ದುರ್ಗೆ-ಪಾರ್ವತಿಯರ ಗುಡಿ,ಸಾಕ್ಷಿ ಗಣಪತಿ,ಚಂಡೇಶ್ವರ,ಕಡಲೆ ಮಾರುತಿ,ಕಬ್ಬು ಮಾರುತಿ,ವೀರಭದ್ರ,ಸದಾಶಿವ,ಕದಂಬೇಶ್ವರ,ತಿಥಿಕಂಠೇಶ್ವರ ಗುಡಿಗಳಿವೆ.

ಮನ್ಮಹಾಸ್ಯಂದನ ರಥೋತ್ಸವ[ಬದಲಾಯಿಸಿ]

ರಥೋತ್ಸವ ಬನವಾಸಿಯ ದೊಡ್ಡ ಹಬ್ಬಗಳಲ್ಲೊಂದು.ಕಳೆದ ೩೮೦ ವರ್ಷಗಳಿಂದ ಪ್ರತಿ ವರ್ಷ ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಎರಡು ದಿನಗಳಂದು ರಥೋತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದೆ.ಈ ಉತ್ಸವ ಶಿವಪಾರ್ವತಿಯರ ವಿವಾಹ ಮಹೋತ್ಸವವೂ ಹೌದು.ಇದರಲ್ಲಿ ಅತಿ ವಿಶೇಷವೆಂದರೆ ರಥದಲ್ಲಿ ಸಾಲಂಕೃತವಾದ ಮಧುಕೇಶ್ವರ,ಪಾರ್ವತಿ ಜೊತೆಗೆ ಗಣಪತಿ,ಸುಬ್ರಹ್ಮಣ್ಯರ ಉತ್ಸವಮೂರ್ತಿಗಳನ್ನು ಸ್ಥಾಪನೆ ಮಾಡಿ ದೀಪಾಲಂಕಾರಗಳೊಂದಿಗೆ ರಥವನ್ನು ಎಳೆಯಲಾಗುತ್ತದೆ.ಒಟ್ಟಾರೆ ಬನವಾಸಿಯಲ್ಲಿ ೪ ರಥಗಳಿವೆ. 1. ಹಗಲೋತ್ಸವ ರಥ 2. ತಿರುಗುಣಿ ರಥ 3. ಹೂವಿನ ರಥ 4. ಶ್ರೀ ಮನ್ಮಹಾಸ್ಯಂದನ ರಥ ಶ್ರೀ ಮನ್ಮಹಾಸ್ಯಂದನ ರಥವನ್ನು 'ದೊಡ್ಡ ತೇರು' ಎಂದು ಕರೆಯಲಾಗುತ್ತದೆ.ಇದು ಭಾರತದ ಅತಿ ದೊಡ್ಡ ರಥಗಳಲ್ಲೊಂದು.ಇದನ್ನು ಸೋಂದೆಯ ಅರಸ ಶ್ರೀ ರಾಮಚಂದ್ರ ನಾಯಕ ೧೬೦೮ರಲ್ಲಿ ಮಧುಕೇಶ್ವರ ಉತ್ಸವಕ್ಕೆಂದು ದಾನವಾಗಿ ನೀಡಿದನು.ರಥವು ೭೫ ಅಡಿ ಎತ್ತರವಿದ್ದು,ಸುಮಾರು ೧೫೦ ಟನ್ ತೂಕವಿದ್ದು ೬ ಚಕ್ರಗಳನ್ನು ಹೊಂದಿದೆ.ಈ ರಥವು ಕರ್ನಾಟಕದ ಅತ್ಯಂತ ಹಳೆಯ ರಥಗಳಲ್ಲೊಂದಾಗಿದೆ(೪೦೪ ವರ್ಷ).

ಇತರ ಹಬ್ಬಗಳು[ಬದಲಾಯಿಸಿ]

ಮಧುಕೇಶ್ವರ ದೇವಾಲಯದಲ್ಲಿ ಆಚರಿಸುವ ಇನ್ನೊಂದು ದೊಡ್ಡ ಹಬ್ಬವೆಂದರೆ ಮಹಾಶಿವರಾತ್ರಿ.ಪ್ರಪಂಚದ ಎಲ್ಲಾ ಮೂಲೆಗಳಿಂದ ಜನ ಈ ಅದ್ಧೂರಿ ಹಬ್ಬದಾಚರಣೆಗೆ ಮಧುಕೇಶ್ವರ ದೇವಾಲಯದಲ್ಲಿ ಸೇರುತ್ತಾರೆ.ಮಹಾಶಿವರಾತ್ರಿ ಪ್ರತಿವರ್ಷ ಫಾಲ್ಗುಣ ಮಾಸದಲ್ಲಿ(ಫೆಬ್ರುವರಿ ಅಥವಾ ಮಾರ್ಚ್) ಬರುತ್ತದೆ.ಈ ದಿನದ ರಾತ್ರಿಯಂದು ಶಿವ ತಾಂಡವನೃತ್ಯವಾಡಿದನೆಂದು ಹೇಳಲಾಗುತ್ತದೆ.ಈ ದಿನ ಭಕ್ತರು ಉಪವಾಸವಿದ್ದು ಮಧುಕೇಶ್ವರನಿಗೆ ಪ್ರಾರ್ಥನೆ,ಹಾಲು,ಸಿಹಿ ಹಾಗೂ ಫಲಪುಷ್ಪಗಳನ್ನು ಅರ್ಪಿಸುತ್ತಾರೆ.ರಾತ್ರಿ ಭಕ್ತರು ದೇವಾಲಯದಲ್ಲಿ ಜಾಗರಣೆಯನ್ನು ಮಾಡುತ್ತಾರೆ.

  • ಲಕ್ಷದೀಪೋತ್ಸವ

ಈ ಹಬ್ಬವನ್ನು ಜನರು ಚಳಿಗಾಲದಲ್ಲಿ ಅಂದರೆ ನವೆಂಬರ್ ಅಥವಾ ಡಿಸೆಂಬರ್ ತಿಂಗಳಿನಲ್ಲಿ ಆಚರಿಸುತ್ತಾರೆ.ಅಂದು ಸಾವಿರಾರು ಜನರು ದೇವಾಲಯದ ಒಳಗೆ ಹಾಗೂ ಸುತ್ತಮುತ್ತಲೂ ಚಿಕ್ಕ ದೀಪಗಳನ್ನು ಹಚ್ಚುತ್ತಾರೆ.

ಇವನ್ನೂ ನೋಡಿ[ಬದಲಾಯಿಸಿ]

  • ಪಂಪವನ,ಬನವಾಸಿ

ಮಧುಕೇಶ್ವರ ದೇವಾಲಯವನ್ನು ಬಿಟ್ಟರೆ ಬನವಾಸಿಯಲ್ಲಿ ನೋಡಬೇಕಾದ ಮುಖ್ಯವಾದ ಸ್ಥಳವೆಂದರೆ ಪಂಪವನ.ಇದೊಂದು ಸಣ್ಣ ಸಸ್ಯೋದ್ಯಾನವಾಗಿದ್ದು ಅನೇಕ ವಿಧದ ಔಷಧೀಯ ಗಿಡಗಳು ಮತ್ತು ಬಗೆಬಗೆ ಜಾತಿಯ ಮರಗಳನ್ನು ಹೊಂದಿದೆ.ಉದ್ಯಾನವನದಲ್ಲಿ ಶ್ರೀ ಆದಿಮಧುಕೇಶ್ವರ ದೇವಸ್ಥಾನ,ದೇವಿ ಅಮ್ಮನವರ ದೇವಸ್ಥಾನ ಅಗಸ್ತ್ಯ ಹೊಂಡ ಮತ್ತು ವಸಿಷ್ಠ ತೀರ್ಥಗಳಿವೆ.ಆದಿಕವಿ ಪಂಪ ಇಲ್ಲಿ ತುಂಬಾ ಪುರಾಣಗಳನ್ನು ರಚಿಸಿದ್ದರಿಂದ ಈ ಉದ್ಯಾನವನಕ್ಕೆ ಪಂಪವನವೆಂದು ಹೆಸರಿಡಲಾಗಿದೆ.ಕದಂಬರ ಕಾಲದಲ್ಲಿ ಸಮಯಕ್ಕೆ ಸರಿಯಾಗಿ ಮಳೆ ಬರದ ಪ್ರಯುಕ್ತ ಅವರ ವಂಶದ ದೇವರಾದ ಮಧುಕೇಶ್ವರನನ್ನು ಮೆಚ್ಚಿಸಿ ವರುಣನ ಕೃಪಾಶೀರ್ವಾದ ಪಡೆಯಲು ಇಲ್ಲಿರುವ ಅಗಸ್ತ್ಯ ಹೊಂಡದಿಂದ ನೀರೆತ್ತಿ ತಂದು ಆದಿ ಮಧುಕೇಶ್ವರ ಲಿಂಗವನ್ನು ನೀರಿನಿಂದ ತುಂಬಿಸಿ ಪೂಜೆಗೈದು ಮಳೆರಾಯನ ಕೃಪೆ ಹೊಂದುತ್ತಿದ್ದರು.ಗತ ಸಂಗತಿಗೆ ಆಧಾರವಾಗಿ ಇಲ್ಲಿಯ ಮಧುಕೇಶ್ವರ ಲಿಂಗ ನೀರಿನಿಂದ ತುಂಬಿ ಮುಳಗಿಸಬಹುದೆಂಬುದಕ್ಕೆ ನಾಲ್ಕು ಅಡಿ ಆಳದಲ್ಲಿ ಸುತ್ತಲಿನ ಕಲ್ಲಿನ ಭದ್ರಗೋಡೆಗಳಿರುವುದೇ ಸಾಕ್ಷಿ.

  • ವರ್ಣಲೋಕ ಕಲಾ ಗ್ಯಾಲರಿ,ಬನವಾಸಿ

ದೇವಾಲಯದ ಹಿಂಭಾಗದಲ್ಲೇ ಇರುವ ಈ ಚಿತ್ರಶಾಲೆಯಲ್ಲಿ ಪ್ರತಿಭಾನ್ವಿತ ಕುಶಲಕರ್ಮಿಗಳಾದ ಶ್ರೀಪಾದ ಪುರೋಹಿತರವರು ಬನವಾಸಿಯ ಸಮಕಾಲೀನ ಜೀವನವನ್ನು ವಿವಿಧ ವಸ್ತುಗಳ ಶಿಲ್ಪಗಳಿಂದ ಬಿಂಬಿಸಿದ್ದಾರೆ.ಒಂದು ಮಹಿಳೆಯರ ಗುಂಪಿನಿಂದ ಚೀಲ ತಯಾರಿಸುವ ಘಟಕವೊಂದು ಸ್ಥಾಪಿತಗೊಂಡಿದೆ.ಇವರು ಇಳಕಲ್ ರೇಷ್ಮೆ ಸೀರೆಗಳಿಂದ ಚೀಲಗಳನ್ನು ಮಾಡುತ್ತಾರೆ ಮತ್ತು ಬಟ್ಟೆಗಳನ್ನು ಗಾಜು,ಕಸೂತಿ ಮತ್ತು ತೆನೆಗಳಿಂದ ಸುಂದರಗೊಳಿಸುತ್ತಾರೆ.

  • ವರದಾ ನದಿ,ಬನವಾಸಿ

ಛಾಯಾಚಿತ್ರಗಳು[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2016-03-04. Retrieved 2015-11-07.