ವಿಷಯಕ್ಕೆ ಹೋಗು

ಬಾಗಲಕೋಟ ಜಾನಪದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಾಗಲಕೋಟೆ ಜಿಲ್ಲೆಯ ಜಾನಪದ

[ಬದಲಾಯಿಸಿ]

ಕರ್ನಾಟಕದಲ್ಲಿ ಜಾನಪದದ ಮೊದಲ ನೇಗಿಲ ಪೂಜೆ ನೆರವೇರಿಸಿದವರು ಬಾಗಲಕೋಟ ಜಿಲ್ಲೆಯವರು ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ .ಬಾಗಲಕೋಟ ಜಿಲ್ಲೆಯಲ್ಲಿಯೇ ಕನ್ನಡ ಜಾನಪದದ ಮೊದಲ ರೂಪ, ಸಂಗ್ರಹ, ಸಂಪಾದನಾ ಕಾರ್ಯ ಹಾಗೂ ಸಂಶೋಧನೆ ಕಾರ್ಯಗಳೆಲ್ಲ ಜರುಗಿದ್ದು, ಇತಿಹಾಸದಲ್ಲಿ ದಾಖಲಾರ್ಹವಾಗುತ್ತದೆ . "ಕ್ರಿ.ಶ. 700ರ ಬಾದಾಮಿಯ ಕಪ್ಪೆಅರಭಟನ ಶಾಸನದಲ್ಲಿ ಸಿಕ್ಕುವ ತ್ರಿಪದಿ ಕನ್ನಡ ಜನಪದ ಸಾಹಿತ್ಯದ ತಾಯಿಬೇರು ಎನಿಸಿದೆ ಅಲ್ಲದೆ ಕನ್ನಡ ಜಾನಪದದ ಸಂಗ್ರಹಣೆಯ ಪ್ರಯತ್ನ 1816ರ ವೇಳೆಗೆ ನಡೆಯಿತೆಂದು ಗುರುತಿಸಲಾಗಿದೆ. ಆದರೆ, ಅಧಿಕೃತವಾಗಿ ಸಂಪಾದನಾ ದೃಷ್ಠಿಯಿಂದ ಸಮರ್ಪಕ ಕಾರ್ಯ ನಡೆದಿದ್ದು, ಜಾನ್ ಫೇಯ್ತಫುಲ್ ಫ್ಲೀಟ್ ರಿಂದ ಜಾನ್ ಫ್ಲೀಟ್ 1885ರ ಮೊದಲು ಸಂಗ್ರಹಿಸಿದ ಲಾವಣಿಗಳನ್ನು 1874ರಲ್ಲಿ ಗುಳೇದಗುಡ್ಡದ ಬಾಳಿ ಇಂಟೆ ಎಂಬುವರು 5 ಹಾಡುಗಳನ್ನು, ಬಾದಾಮಿಯ ಪರಯ್ಯ ವೀರಭದ್ರಯ್ಯ ಗಣಾಚಾರಿ ಎಂಬುವವರು 6 ಹಾಡುಗಳನ್ನು ಸಂಗ್ರಹಿಸಿ ಕೊಟ್ಟಿದ್ದಾರೆ. ಇವನ್ನು ಬಾದಾಮಿ ತಾಲೂಕಿನ ಒಂದು ಶಾಲೆಯ ಹೆಡ್ ಮಾಸ್ಟರ್‍ರಾಗಿದ್ದ ನಾರಾಯಣ ಅಯ್ಯಾಜಿ ಅವರು 06-02-1874ರಂದು ಫ್ಲೀಟರಿಗೆ ಒಪ್ಪಿಸಿದ್ದಾರೆ. ಇದನ್ನು ನೋಡಿದಾಗ ಬಾದಾಮಿ ತಾಲೂಕಿನ ಈ ಮೂವರೂ ಕನ್ನಡ ಜನಪದ ಸಾಹಿತ್ಯದ ಪ್ರಪ್ರಥಮ ಸಂಗ್ರಹಕಾರರಾಗುವ ಮೂಲಕ ಬಾಗಲಕೋಟ ಜಿಲ್ಲೆಯಿಂದಲೇ ಜನಪದ ಸಾಹಿತ್ಯ ಮೊದಲ ಸಂಗ್ರಹ ಹಾಗೂ ಸಂಪಾದನಾ ಕಾರ್ಯ ಆರಂಭವಾಯಿತು. ಬಾದಾಮಿ ತಾಲೂಕಿನ ಕೆರೂರಿನ ಡಾ. ಬಿ.ಎಸ್. ಗದ್ದಗಿಮಠರು, ಪ್ರೊ. ಕುಂದಣಗಾರ ಅವರ ಮಾರ್ಗದರ್ಶನದಲ್ಲಿ "ಕನ್ನಡ ಜಾನಪದ ಗೀತೆಗಳು" ವಿಷಯದ ಮೇಲೆ ಪ್ರಬಂಧ ಬರೆದು 1955ರಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದರು. ಇದು ಕನ್ನಡ ಜಾನಪದ ಕ್ಷೇತ್ರಕ್ಕೆ ಸಂಬಂಧಿಸಿದ ಮೊಟ್ಟ ಮೊದಲ ಸಂಶೋಧನಾ ಪ್ರಬಂಧವಾಯಿತು. ಹೀಗೆ ಹಲವು ಪ್ರಥಮಗಳೊಂದಿಗೆ ಜಾನಪದದ ಶ್ರೀಮಂತಿಕೆಯ ಜಿಲ್ಲೆಯಲ್ಲಿ ಇಂದಿಗೂ ಉಳಿದುಕೊಂಡು ಬಂದಿದೆ. ಜನಪದ ಸಂಪಾದನಾ ಕಾರ್ಯದಲ್ಲಿ ಡಾ. ಗದ್ದಗಿಮಠರ ನಂತರ ಜಿ.ಬಿ. ಖಾಡೆ, ಡಾ. ಸಂಗಮೇಶ ಬಿರಾದಾರ, ಡಾ. ಶ್ರೀರಾಮ ಇಟ್ಟಣ್ಣವರ, ಡಾ. ವೀರೇಶ ಬಡಿಗೇರ, ಡಾ. ಪ್ರಕಾಶ ಖಾಡೆ, ಮೊದಲಾದವರು ತೊಡಗಿದ್ದಾರೆ.ಜಿ.ಬಿ.ಖಾಡೆ ಅವರ 'ಕಾಡು ಹೂಗಳು',ಬೆಳವಲ ಬೆಳಕು.ಹಳ್ಳಿ ಹಬ್ಬಿಸಿದ ಹೂಬಳ್ಳಿ ಜನಪದ ಕೃತಿಗಳು.ಡಾ.ಪ್ರಕಾಶ ಜಿ.ಖಾಡೆ ಅವರ ಕೃಷ್ಣಾ ತೀರದ ಜನಪದ ಒಗಟುಗಳು,ನೆಲಮೂಲ ಸಂಸ್ಕೃತಿ,ಬಾಗಲಕೋಟ ಜಿಲ್ಲೆಯ ಜನಪದ ಹಾಡುಗಳು,ಜನಪದ ಕೋಗಿಲೆ ಗೌರಮ್ಮ ಚಲವಾದಿ ಹಾಗೂ ಜಾನಪದ ಹೆಬ್ಬಾಗಿಲು,ಡಾ.ಇಟ್ಟಣ್ಣವರ ಅವರ ಲಾವಣಿಗಳು ಮೊದಲಾದವು ಜಿಲ್ಲೆಯ ಮುಖ್ಯ ಜನಪದ ಕೃತಿಗಳು. ಜಿಲ್ಲೆಯಲ್ಲಿ ಜನಪದ ಕಲೆ ನಾಡಿನಲ್ಲಿಯೇ ಅತ್ಯಂತ ಶ್ರೀಮಂತವಾಗಿದೆ. ಬಯಲಾಟಗಳ ರಾಜ ನೆನೆಸಿದ ಶ್ರೀ ಕೃಷ್ಣ ಪಾರಿಜಾತ ಸಣ್ಣಾಟ ನಿತ್ಯ ಒಂದಿಲ್ಲೊಂದು ಊರಲ್ಲಿ ಪ್ರದರ್ಶಿತವಾಗುತ್ತಿವೆ. ಜಿಲ್ಲೆಯಲ್ಲಿ ಕಣ್ಮರೆಯಾಗುತ್ತಿರುವ ದಾಸರಾಟ, ಕುಟಕನಕೇರಿ ಕೆಂದೂರ ಗ್ರಾಮಗಳ ಮೋಡಿಯಾದವರು, ಬುಡ ಬುಡಕಿಯವರು, ಕುರು ಮಾಮಾಗಳು, ಕಿಳ್ಳೆ ಕ್ಯಾತರು, ದುರುಗು ಮುರುಗಿಯರು, ಗೊಂದಲಿಗರು, ಭಜನಾ ಮೇಳಗಳು, ಡೊಳ್ಳು, ಹಲಗೆ ಮತ್ತು ಕರಡಿ ಮಜಲಿನವರು ಜಿಲ್ಲೆಯ ತುಂಬ ಜಾನಪದವನ್ನು ಜೀವಂತವಾಗಿಟ್ಟುಕೊಂಡು ಬರೆದಿದ್ದಾರೆ.