ಪರಮ ವೀರ ಚಕ್ರ
ಪರಮ ವೀರ ಚಕ್ರ ಭಾರತ ಸೇನೆಯ ಶೌರ್ಯ ಪುರಸ್ಕಾರ. ಯುದ್ಧದ ವೇಳೆ ಅಪ್ರತಿಮ ಸಾಧನೆ ಮಾಡಿದವರಿಗೆ ಸಲ್ಲುವ ಪ್ರಶಸ್ತಿ. ಭಾರತದ ಅತ್ಯುಚ್ಚ ಸೇನಾ ಪುರಸ್ಕಾರ. ಸಂಸ್ಕೃತದಲ್ಲಿ ಇದರ ಅರ್ಥ ಶೂರರಲ್ಲಿ ಶೂರ ಎಂದು.
ಪರಮವೀರ ಚಕ್ರವನ್ನು ಜನವರಿ ೨೬ ೧೯೫೦ (ಗಣರಾಜ್ಯೋತ್ಸವ)ದಂದು ಆಗಸ್ಟ್ ೧೫ ೧೯೪೭ (ಭಾರತದ ಸ್ವಾತಂತ್ರ್ಯ ದಿನಾಚರಣೆ)ದಿಂದ ಜಾರಿಯಾಗುವಂತೆ ಸ್ಥಾಪಿಸಲಾಯಿತು. ಭಾರತದ ರಾಷ್ಟ್ರಪತಿಗಳು ಪ್ರದಾನ ಮಾಡುವ ಈ ಪುರಸ್ಕಾರವು ಭಾರತ ರತ್ನದ ನಂತರ ದೇಶದ ಎರಡನೇ ಅತಿ ದೊಡ್ಡ ಪುರಸ್ಕಾರ.
ಈ ಪುರಸ್ಕಾರವನ್ನು ಹೊಂದಿದವರು ತಮ್ಮ ಹೆಸರಿನ ಜೊತೆಗೆ ಇದರ ಹೆಸರನ್ನು ಉಪಯೊಗಿಸುವ ಅಧಿಕಾರ ಪಡೆದಿರುತ್ತಾರೆ. ಸ್ಸೆಕಂಡ್ ಲೆಫ್ಟಿನೆಂಟ್ ಅಥವಾ ಅದ್ಕ್ಕಿಂತ ಕಡಿಮೆ ಹುದ್ದೆಯಲ್ಲಿರುವ ಸೈನಿಕರಿಗೆ ಧನಯೋಗವೂ ಇದೆ. ಪುರಸ್ಕೃತರ ನಿಧನದ ನಂತರ ಅವರ ಪತ್ನಿಗೆ ಅವರ ಮರಣ ಅಥವಾ ಮರುವಿವಾಹದ ತನಕ ಮಾಸಾಶನ ಕೊಡುವ ಪದ್ಧತಿಯೂ ಇದೆ. ಆದರೆ ಈ ಮಾಸಾಶನ್ಅವು ಅತಿ ಕಡಿಮೆಯಾಗಿರುವುದು ವಿವಾದಾತ್ಮಕವಾಗಿದೆ. ಮಾರ್ಚ್ ೧೯೯೯ರಲ್ಲಿ ಇದು ತಿಂಗಳಿಗೆ ರೂ.೧,೫೦೦ ಆಗಿತ್ತು. ಆದರೆ ಬಹಳಷ್ಟು ರಾಜ್ಯಗಳು ಈ ಮಾಸಾಶನಕ್ಕಿಂತ ಹೆಚ್ಚು ದುಡ್ಡು ಈ ಮಹಿಳೆಯರಿಗೆ ಸಲ್ಲುವ ಹಾಗೆ ಮಾಡಿವೆ.
ವಿನ್ಯಾಸ
[ಬದಲಾಯಿಸಿ]ಈ ಪದಕವನ್ನು ಶ್ರೀಮತಿ ಸಾವಿತ್ರಿ ಖನೋಲನ್ಕರ್ (ಮೂಲನಾಮ ಈವಾ ಯುವೊನ್ ಲಿಂಡಾ ಮಡೇ-ಡಿ-ಮರೋಸ್, ಇವರು ಭಾರತ ಭೂಸೇನೆಯ ಅಧಿಕಾರಿಯೊಬ್ಬರ ಪತ್ನಿ)ಅವರು ವಿನ್ಯಾಸಗೊಳಿಸಿದ್ದಾರೆ. ಕಾಕತಾಳೀಯವಾಗಿ ಪ್ರಥಮ ಪರಮ ವೀರ ಚಕ್ರವು ಇವರ ಅಳಿಯ ಮೇಜರ್ ಸೋಮನಾಥ ಶರ್ಮಾ ಅವರಿಗೆ ಸಂದಯವಾಯಿತು. ಪಾಕಿಸ್ತಾನದ ಬಂಡುಕೋರರನ್ನು ಶ್ರೀನಗರ ವಿಮಾನ ನಿಲ್ದಾಣದಿಂದ ಹೊರಗಟ್ಟುವಾಗ ಇವರು ಮಡಿದರು.
ಈ ಪದಕವು ಕಂಚಿನದಾಗಿದ್ದು ದುಂಡಗಿದೆ. ಇದರ ವ್ಯಾಸ ಸುಮಾರು ಮೂರೂವರೆ ಸೆಂ.ಮಿ. ಮಧ್ಯದಲ್ಲಿ ಭಾರತ ದೇಶದ ಲಾಂಛನವಿದೆ. ಇದರ ಸುತ್ತಲೂ ಇಂದ್ರನ ವಜ್ರದ ನಾಲ್ಕು ಚಿತ್ರಗಳಿವೆ. ಹಿಂಬದಿಯಲ್ಲಿ ಎರಡು ಆಖ್ಯಾನಗಳು, ಅವುಗಳ ಮಧ್ಯೆ ಕಮಲದ ಹೂವು. ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪರಮ ವೀರ ಚಕ್ರ ಎಂದು ಬರೆದಿದೆ.
ಪದಕವನ್ನು ಹೊಂದಿದ ರಿಬ್ಬನ್ ೩೨ ಮಿ.ಮಿ. ಉದ್ದವಿದ್ದು ನೇರಳೆ (purple) ಬಣ್ಣದ್ದಾಗಿದೆ. ಇಂದ್ರನಿಗೆ ತನ್ನ ತೊಡೆಯ ಮೂಳೆಯನ್ನು ವಜ್ರಾಯುಧವನ್ನಾಗಿ ಮಾಡಿಕೊಟ್ಟ ಋಷಿ ದಧೀಚಿಯ ಸಂಕೇತವಾಗಿ ಈ ಪುರಸ್ಕಾರವನ್ನು ವಿನ್ಯಾಸಗೊಳಿಸಲಾಗಿದೆ. ಶಿವಾಜಿಯ ಖಡ್ಗವಾದ ಭವಾನಿಯ ಚಿತ್ರವೂ ಇದೆ.
ಪುರಸ್ಕೃತ ಸೈನಿಕರು
[ಬದಲಾಯಿಸಿ]ಹೆಸರು | ವರ್ಷ | ಯುದ್ಧ | ಕದನ | ರೆಜಿಮೆಂಟ್ | ಟಿಪ್ಪಣಿಗಳು |
---|---|---|---|---|---|
ಮೇಜರ್ ಸೋಮನಾಥ್ ಶರ್ಮಾ | ೧೯೪೭ | ಜಮ್ಮು ಕಾಶ್ಮೀರ ಯುದ್ಧ ೧೯೪೭-೪೮ | ಬಡ್ಗಾಮ್ ಕದನ | ೪ ಕುಮಾಯೋ | ಮರಣೋಪರಾಂತ |
ಲಾನ್ಸ್ ನಾಯಕ್ ಕರಮ್ ಸಿಂಗ್ | ೧೯೪೮ | ಜಮ್ಮು ಕಾಶ್ಮೀರ ಯುದ್ಧ ೧೯೪೭-೪೮ | ರಿಚ್ಮಾರ ಗಲಿ ಕದನ | ೧ ಸಿಖ್ | |
ಸೆಕಂಡ್ ಲೆಫ್ಟಿನೆಂಟ್ ರಾಮ ರಾಘೋಬ ರಾಣೆ | ೧೯೪೮ | ಜಮ್ಮು ಕಾಶ್ಮೀರ ಯುದ್ಧ ೧೯೪೭-೪೮ | ರಾಜೌರಿ ಕದನ | ಬಾಂಬೆ ಇಂಜಿನೀಯರ್ಸ | |
ನಾಯಕ್ ಜದೂನಾಥ ಸಿಂಗ್ | ೧೯೪೮ | ಜಮ್ಮು ಕಾಶ್ಮೀರ ಯುದ್ಧ ೧೯೪೭-೪೮ | ತೈನ್ಧಾರ್ ಕದನ | ೧ ರಾಜಪೂತ್ | ಮರಣೋಪರಾಂತ |
ಕಂಪನಿ ಹವಿಲ್ದಾರ್ ಮೇಜರ್ ಪೀರು ಸಿಂಗ್ | ೧೯೪೮ | ಜಮ್ಮು ಕಾಶ್ಮೀರ ಯುದ್ಧ ೧೯೪೭-೪೮ | ದಾರಾಪರಿ ಕದನ | ೬ ರಾಜಪುತನಾ ರೈಫಲ್ಸ್ | ಮರಣೋಪರಾಂತ |
ಕ್ಯಾಪ್ಟನ್ ಗುರುಬಚನ್ ಸಿಂಗ್ ಸಲಾರಿಯಾ | ೧೯೬೧ | ಬೆಲ್ಗಿಯನ್ ಕಾಂಗೋದಲ್ಲಿ ಸಂಯುಕ್ತ ರಾಷ್ಟ್ರದ ಶಾಂತಿಪಾಲನೆ ೧೯೬೦ | ೩/೧ ಗೋರ್ಖಾ ರೈಫಲ್ಸ್ | ಮರಣೋಪರಾಂತ | |
ಮೇಜರ್ ಧಾನ್ ಸಿಂಗ್ ಥಾಪಾ | ೧೯೬೨ | ಭಾರತ-ಚೀನಾ ಯುದ್ಧ ೧೯೬೨ | ಸಿರಿಜಪ್ ಕದನ | ೧/೮ ಗೋರ್ಖಾ ರೈಫಲ್ಸ್ | |
ಸುಬೇದಾರ್ ಜೋಗಿಂದರ್ ಸಿಂಗ್ | ೧೯೬೨ | ಭಾರತ-ಚೀನಾ ಯುದ್ಧ ೧೯೬೨ | ಬುಮ್ಲಾ ಕದನ | ೧ ಸಿಖ್ | ಮರಣೋಪರಾಂತ |
ಮೇಜರ್ ಶೈತಾನ್ ಸಿಂಗ್ | ೧೯೬೨ | ಭಾರತ-ಚೀನಾ ಯುದ್ಧ ೧೯೬೨ | ರೆಜಾಂಗ್ ಲಾ ಕದನ | ೧೩ ಕುಮಾವೊ | ಮರಣೋಪರಾಂತ |
ಕಂಪನಿ ಕ್ವಾರ್ಟರ್ ಮಾಸ್ಟರ್ ಹವಿಲ್ದಾರ್ ಅಬ್ದುಲ್ ಹಮೀದ್ | ೧೯೬೫ | ಭಾರತ-ಪಾಕಿಸ್ಥಾನ ಯುದ್ಧ ೧೯೬೫ | ಅಸಲ್ ಉತ್ತರ್ ಕದನ | ೪ ಗ್ರೆನೇಡಿಯರ್ಸ | ಮರಣೋಪರಾಂತ |
ಲೆಫ್ಟಿನೆಂಟ್ ಕರ್ನಲ್ ಆರ್ದೇಶಿರ್ ತಾರಾಪೋರ್ | ೧೯೬೫ | ಭಾರತ-ಪಾಕಿಸ್ಥಾನ ಯುದ್ಧ ೧೯೬೫ | ಚವಿಂಡಾ ಕದನ | ಪೂನಾ ಹಾರ್ಸ(೧೭ ಹಾರ್ಸ) | ಮರಣೋಪರಾಂತ |
ಲಾನ್ಸ್ ನಾಯಕ್ ಆಲ್ಬರ್ಟ್ ಎಕ್ಕ | ೧೯೭೧ | ಭಾರತ-ಪಾಕಿಸ್ಥಾನ ಯುದ್ಧ ೧೯೭೧ (ಬಾಂಗ್ಲಾ ವಿಮೋಚನೆ) | ಗಂಗಾಸಾಗರ್ ಕದನ | ೧೪ ಗಾರ್ಡ್ಸ | ಮರಣೋಪರಾಂತ |
ಮೇಜರ್ ಹೋಶಿಯಾರ್ ಸಿಂಗ್ | ೧೯೭೧ | ಭಾರತ-ಪಾಕಿಸ್ಥಾನ ಯುದ್ಧ ೧೯೭೧ (ಬಾಂಗ್ಲಾ ವಿಮೋಚನೆ) | ಪಶ್ಚಿಮದ ಕದನ | ೩ ಗ್ರೆನೇಡಿಯರ್ಸ | |
ಲೆಫ್ಟಿನೆಂಟ್ ಅರುಣ್ ಖೇತ್ರಪಾಲ್ | ೧೯೭೧ | ಭಾರತ-ಪಾಕಿಸ್ಥಾನ ಯುದ್ಧ ೧೯೭೧ (ಬಾಂಗ್ಲಾ ವಿಮೋಚನೆ) | ಪೂನಾ ಹಾರ್ಸ | ಮರಣೋಪರಾಂತ | |
ಫ್ಲಯಿಂಗ್ ಆಫಿಸರ್ ನಿರ್ಮಲಜಿತ್ ಸಿಂಗ್ ಸೆಖೋನ್ | ೧೯೭೧ | ಭಾರತ-ಪಾಕಿಸ್ಥಾನ ಯುದ್ಧ ೧೯೭೧ (ಬಾಂಗ್ಲಾ ವಿಮೋಚನೆ) | ಮರಣೋಪರಾಂತ | ||
ನೈಬ್ ಸುಬೇದಾರ್ ಬಾಣಾ ಸಿಂಗ್ | ೧೯೮೭ | ಸಿಯಾಚಿನ್ ಯುದ್ಧ | ಕೈದ್ ಪೋಸ್ಟ್ | ೧೩ ಜಮ್ಮು ಮತ್ತು ಕಾಶ್ಮೀರ ಲೈಟ್ ಇನ್ಫೆಂಟರಿ | |
ಮೇಜರ್ ರಾಮಸ್ವಾಮಿ ಪರಮೇಶವರನ್ | ೧೯೮೭ | ಭಾರತೀಯ ಶಾಂತಿ ಪಾಲನಾ ಪಡೆ - ಶ್ರೀಲಂಕಾ | ೮ ಮಹಾರ್ | ಮರಣೋಪರಾಂತ | |
ಕ್ಯಾಪ್ಟನ್ ವಿಕ್ರಮ್ ಬಾತ್ರಾ | ೧೯೯೯ | ಕಾರ್ಗಿಲ್ ಯುದ್ಧ | ಹಂಪ್, Pt ೫೧೪೦, Pt ೪೮೭೫ | ೧೩ ಜಮ್ಮು ಮತ್ತು ಕಾಶ್ಮೀರ ರೈಫಲ್ಸ್ | ಮರಣೋಪರಾಂತ |
ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ | ೧೯೯೯ | ಕಾರ್ಗಿಲ್ ಯುದ್ಧ | ಖಾಲುಬಾರ್ ಕದನ | ೧/೧೧ ಗೋರ್ಖಾ ರೈಫಲ್ಸ್ | ಮರಣೋಪರಾಂತ |
ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್ | ೧೯೯೯ | ಕಾರ್ಗಿಲ್ ಯುದ್ಧ | ಟೈಗರ್ ಹಿಲ್ | ೧೮ ಗ್ರೆನೇಡಿಯರ್ಸ | |
ರೈಫಲ್ ಮ್ಯಾನ್ ಸಂಜಯ ಕುಮಾರ್ | ೧೯೯೯ | ಕಾರ್ಗಿಲ್ ಯುದ್ಧ | Pt ೪೮೭೫ | ೧೩ ಜಮ್ಮು ಮತ್ತು ಕಾಶ್ಮೀರ ರೈಫಲ್ಸ್ |
ಕಾಕತಾಳೀಯವಾಗಿ ಮೊದಲ ಮತ್ತು ಕೊನೆಯ ಪುರಸ್ಕೃತರು ಹಿಮಾಚಲ ಪ್ರದೇಶದ ಪಾಲಂಪುರ ಎಂಬ ಒಂದೇ ಹಳ್ಳಿಗೆ ಸೇರಿದವರಾಗಿದ್ದಾರೆ.
ನೆನಪಿಗಾಗಿ
[ಬದಲಾಯಿಸಿ]೧೯೯೦ರಲ್ಲಿ ದೂರದರ್ಶನದಲ್ಲಿ ಪರಮ ವೀರ ಚಕ್ರ ಎಂಬ ಧಾರಾವಾಹಿ ಪ್ರಸಾರವಾಯಿತು. ಇದು ೧೫ ಕಂತುಗಳಲ್ಲಿ ಮೂಡಿಬಂತು. ಇದರಲ್ಲಿ ಪ್ರಖ್ಯಾತ ಕಲಾವಿದರು ಅಭಿನಯಿಸಿದರು. ಇವರಲ್ಲಿ ಫರೂಖ್ ಶೇಖ್, ಪುನೀತ್ ಇಸ್ಸರ್, ವಿಜಯೇಂದ್ರ ಘಾಟ್ಗೆ, ನಸೀರುದ್ದೀನ್ ಷಾ, ಶಾರೂಖ್ ಖಾನ್ ಮತ್ತು ಅನ್ನು ಕಪೂರ್ ಸೇರಿದ್ದಾರೆ. ಭಾರತದ ಸೇನಾ ದಳಗಳಿಂದ ಈ ಧಾರಾವಾಹಿಯ ನಿರ್ಮಾಣಕ್ಕೆ ಸಂಪೂರ್ಣ ಸಹಾಯ ದೊರೆತಿತು. ಇದರ ಶೀರ್ಷಿಕೆ ಗೀತೆ 'ಶಾನ್ ತೇರೀ ಕಮ್ ನ ಹೋ (ನಿನ್ನ ಖ್ಯಾತಿ ಎಂದೂ ಕಡಿಮೆಯಾಗದಿರಲಿ) ಬಹು ಜನಪ್ರಿಯವಾಯಿತು.
೨೦೨೦ರವರೆಗೆ…ಪರಮವೀರಚಕ್ರ ಪಡೆದ ಸೇನಾನಿಗಳು ೨೦೨೦ರವರೆಗೆ ನಮ್ಮೊಂದಿಗೆ ಇರುವ ವೀರಸೇನಾನಿಗಳು
ಸುಬೇದಾರ್ ಮೇಜರ್ ಬಾಣಾ ಸಿಂಗ್, ಸುಬೇದಾರ್ ಯೋಗೇಂದ್ರ ಸಿಂಗ್ ಯಾದವ್, ನಾಯಕ್ ಸುಬೇದಾರ್ ಸಂಜಯ್ ಕುಮಾರ್. ಇವರಲ್ಲಿ ಸುಬೇದಾರ್ ಯೋಗೇಂದ್ರ ಸಿಂಗ್ ಯಾದವ್, ನಾಯಕ್ ಸುಬೇದಾರ್ ಸಂಜಯ್ ಕುಮಾರ್ ಇನ್ನು ಸೇನೆಯಲ್ಲಿ ಸೇವಾ ನಿರತರಾಗಿದ್ದಾರೆ.
ಕೆಲವು ಸಂಗತಿಗಳು
[ಬದಲಾಯಿಸಿ]- ೨೧ ಪುರಸ್ಕೃತರಲ್ಲಿ ೨೦ ಸೈನಿಕರು ಭಾರತೀಯ ಭೂಸೇನೆ ಮತ್ತು ಒಬ್ಬರು ಭಾರತೀಯ ವಾಯುಸೇನೆಯವರಾಗಿದ್ದಾರೆ.
- ೧೪ ಸೈನಿಕರಿಗೆ ಮರಣೋತ್ತರವಾಗಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
- ಈ ಪುರಸ್ಕಾರ ದೊರೆತ ಅತಿ ದೊಡ್ಡ ಹುದ್ದೆಯೆಂದರೆ ಲೆಫ್ಟಿನೆಂಟ್ ಕರ್ನಲ್
- ಈ ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆ ಅತಿ ಕಠಿಣವಾದದ್ದು ಎಂದು ಹೇಳಲಾಗುತ್ತದೆ.
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಪರಮ ವೀರ ಚಕ್ರ ಪುರಸ್ಕೃತರ ಬಗ್ಗೆ ಭಾರತೀಯ ಭೂಸೇನೆಯ ತಾಣ Archived 2013-08-15 ವೇಬ್ಯಾಕ್ ಮೆಷಿನ್ ನಲ್ಲಿ.
- ಶ್ರೀಮತಿ ಸಾವಿತ್ರಿ ಖನೋಲ್ಕರ್ ಬಗ್ಗೆ ಮಾಹಿತಿ
- ಪರಮ ವೀರ ಚಕ್ರದ ಬಗ್ಗೆ ಉಪಯುಕ್ತ ಮಾಹಿತಿ Archived 2008-07-25 ವೇಬ್ಯಾಕ್ ಮೆಷಿನ್ ನಲ್ಲಿ.
- ಪರಮ ವೀರ ಚಕ್ರದ ಬಗ್ಗೆ ಭಾರತ ರಕ್ಷಕ ತಾಣ Archived 2008-07-11 ವೇಬ್ಯಾಕ್ ಮೆಷಿನ್ ನಲ್ಲಿ.
- ಭಾರತೀಯ ಭೂಸೇನೆಯ ಬಗ್ಗೆ ಕೆಲವು ಸಂಗತಿಗಳು Archived 2009-07-10 ವೇಬ್ಯಾಕ್ ಮೆಷಿನ್ ನಲ್ಲಿ.