ಗೊರವರ ಕುಣಿತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
goravara kunitha



ಗೊರವರ ಕುಣಿತ ಕರ್ನಾಟಕದ ವಿಶಿಷ್ಟ ಜನಪದ ಕಲೆ. ಗೊರವರು ತಮ್ಮನ್ನು ಮೈಲಾರಲಿಂಗನ ಶಿಷ್ಯರೆಂದೂ, ಮುಡುಕುತೊರೆ ಮಲ್ಲಿಕಾರ್ಜುನ ಸ್ವಾಮಿಯ ಒಕ್ಕಲಿನವರೆಂದು ಗುರ್ತಿಸಿಕೊಳ್ಳುತ್ತಾರೆ. ಪ್ರತಿ ಗೊರವನು ತನ್ನ ಮೊದಲ ಮಗನಿಗೆ ಮೈಲಾರಲಿಂಗನ ದೀಕ್ಷೆ ಕೊಡಿಸುವ ಮೂಲಕ ಸತ್ಸಂಪ್ರದಾಯ ಮುಂದುವರೆಸುತ್ತಾನೆ.

ಪುರಾಣದ ಹಿನ್ನೆಲೆ[ಬದಲಾಯಿಸಿ]

ಗೊರವರು ಧರಿಸುವ ವೇಷಭೂಷಣಗಳಿಗೆ ಪುರಾಣದ ಹಿನ್ನೆಲೆಯೊಂದಿದೆ. ಒಮ್ಮೆ ಶಿವ-ಪಾರ್ವತಿ ಪಗಡೆಯಾಡುತ್ತಾ ಕುಳಿತಿರುವಾಗ, ಪಾರ್ವತಿ 'ನಾನು ಧೈರ್ಯವಂತೆ, ಮೂರುಲೋಕದಲ್ಲಿ ಏನೇ ಮಾಡಿದರು ನನ್ನನ್ನು ಹೆದರಿಸುವುದಕ್ಕೆ ಯಾರಿಗೂ ಸಾಧ್ಯವಿಲ್ಲ, ಏಕೆಂದರೆ ನಾನು ಆದಿಶಕ್ತಿ' ಎಂದೆಲ್ಲಾಜಂಭದ ಮಾತುಗಳನ್ನಾಡುತ್ತಾಳೆ. ಅದೇ ಸಮಯಕ್ಕೆ ಸರಿಯಾಗಿ ಶಿವಗಣದವರು ಓಡಿ ಬಂದು "ಇಲ್ಲಿ ತಾರಾಕಾಸುರನ ಹಾವಳಿ ಹೆಚ್ಚಾಗಿದೆ, ಹೀಗೆ ಮುಂದುವರೆದರೆ ನರಮಾನವರಿಗೆ ಉಳಿಗಾಲವಿಲ್ಲ. ಪರಮೇಶ್ವರರಾದ ನೀವು ಬಂದು ನಮ್ಮನ್ನು ರಕ್ಷಣೆ ಮಾಡಬೇಕು" ಎಂದು ದೀನರಾಗಿ ಕೇಳಿದಾಗ, ಶಿವ ತಾರಕಾಸುರನನ್ನು ಕೊಂದು, ಪಾರ್ವತಿ ಆಡಿದ ಜಂಭದ ಮಾತುಗಳು ನೆನಪಿಗೆ ಬಂದು, ತಾರಾಕಾಸುರನ ಹಲ್ಲುಗಳನ್ನು ಕಿತ್ತು ಕವಡೆ ಮಣಿಮಾಡಿ ಮಾಡಿ, ಮೈಯಚರ್ಮ ಸುಲಿದು ಡಮರುಗಕ್ಕೆ ಬಿಗಿದು, ನರಗಳನ್ನು ದಾರ ಮಾಡಿ, ಕತ್ತರಿಸಿದ ಬೆರಳಿನಿಂದ ಗೊಂಡೆ ಮಾಡಿ, ಹುಲಿಚರ್ಮ ಧರಿಸಿ, ಜಾಂಬವಂತನ ಕೂದಲನ್ನು ಕುಲಾವಿ ಮಾಡಿಕೊಂಡು, ಪಿಳ್ಳಂಗೋವಿ ಊದುತ್ತಾ, ಕೈಲಾಸಕ್ಕೆ ಬಂದು 'ಭವತಿ ಬಿಕ್ಷಾಂದೇಹಿ' ಎನ್ನುತ್ತಾ ಡಮರುಗ ನುಡಿಸಿ ರೌದ್ರನಾಗಿ ಕುಣಿಯುತ್ತಾನೆ. ಇದನ್ನು ಕಂಡ ಪಾರ್ವತಿ ಬೆದರಿ ನಡು ನಡುಗಿ ಚಳಿಜ್ವರಕ್ಕೆ ತುತ್ತಾಗಿ ಅಡಗಿಕೊಳ್ಳುತ್ತಾಳೆ. ಇದನ್ನು ಕಂಡ ಶಿವ ನಸುನಗುತ್ತಾ ವೇಷ ತೆಗೆದು, ಚಳಿಜ್ವರ ಬಂದು ಅಡಗಿಕೊಂಡಿದ್ದ ಪಾರ್ವತಿಯ ಬಳಿ ಬಂದು ಅವಳ ಜಂಭ ಮುರಿಯುತ್ತಾನೆ.

ಜನಪದೀಯ ಐತಿಹ್ಯ[ಬದಲಾಯಿಸಿ]

ಜನಪದೀಯ ಐತಿಹ್ಯದಂತೆ ಶಿವನ ಜಾತಿ ಬೇಡಕುಲ. ಗಂಗೆ ಉತ್ತಮ ಕುಲದವಳು. ಇವರಿಬ್ಬರ ನಡುವೆ ಪ್ರೇಮವಾಗಿ ಬಿಟ್ಟಿರಲಾರದ ಅನ್ಯೋನ್ಯತೆಯಿಂದ ಮದುವೆಯಾಗಲು ಮುಂದಾದಾಗ ಗಂಗೆ ಹೆದರಿ ಶಿವನು ತನ್ನ ಅಣ್ಣಂದಿರ ಕೈಗೆ ಸಿಕ್ಕಿದರೆ ಆಗಬಹುದಾದ ಅನಾಹುತವನ್ನು ಅರಿತು, ಕೊನೆಗೆ ಪರಶಿವ ಗೊರವಯ್ಯನ ವೇಷ ಧರಿಸಿ, ಡಮರುಗ ನುಡಿಸುತ್ತಾ ತಂಡದ ಸಮೇತ ಗಂಗೆಯ ಮನೆಗೆ ಬಂದು ಉಪದಾನ ಕೇಳುವನು. ಭಿಕ್ಷೆ ನೀಡಲು ಬಂದ ಗಂಗೆಯನ್ನ ತನ್ನ ಉಡಿಯಲ್ಲಿ ಇರಿಸಿಕೊಂಡು ಅಪಹರಿಸಿ ಕೈಲಾಸಕ್ಕೆ ಅವಳನ್ನು ಕೊಂಡೊಯ್ಯುತ್ತಾನೆ.

ಕುಣಿತಕ್ಕೆ ಧರಿಸುವ ವೇಷಭೂಷಣಗಳು[ಬದಲಾಯಿಸಿ]

ಗೊರವರು ಧರಿಸುವ ವೇಷಭೂಷಣಗಳು ಆಕರ್ಷಕವೂ, ಅರ್ಥಪೂರ್ಣವೂ ಆಗಿವೆ. ಬಿಳಿಧೋತಿ, ಕಚ್ಚೆಪಂಚೆ, ಬಿಳಿ ಮುಂಗೈಯಂಗಿ, ಸೊಂಟಕ್ಕೊಂದು ನಡುಪಟ್ಟಿ, ಕವಡೆಗಳಿಂದ ಅಲಂಕೃತಗೊಂಡ ಕೆಂಪು ಬಣ್ಣದ ಬನಾತು, ಕೊರಳಲ್ಲಿ ರುದ್ರಾಕ್ಷಿ ಮಾಲೆ, ರುಮಾಲು, ರುಮಾಲಿನ ಮೇಲೆ ೧೫ ಇಂಚು ಅಗಲದ ಕರಡಿಚರ್ಮದ ಕುಲಾವಿ, ನೊಸಲಲ್ಲಿ ಮೂರು ಪಟ್ಟೆಯ ವಿಭೂತಿ, ಎಡಬಗಲಲ್ಲಿ ಜೋಳಿಗೆ, ಎಡಗೈಯಲ್ಲಿ ಬಿದಿರಿನ ಪಿಳ್ಳಂಗೋವಿ, ಬಲಗೈಯಲ್ಲಿ ಮೇಕೆ ಚರ್ಮದಿಂದ ತಯಾರಿಸಿದ ಡಮರುಗ ಮತ್ತು ಮೇಲಂಗಿಯ ಮೇಲೆ ಕರಿಕಂಬಳಿಯನ್ನು ಕತ್ತು ಬಳಸಿ ಇಳಿ ಬಿಡುತ್ತಾರೆ.

ಗೊರವರ ಕುಣಿತ[ಬದಲಾಯಿಸಿ]

ಹಾಲುಮಣೆಯ ಸೇವೆ ಇವರ ಸಾಂಪ್ರದಾಯಿಕ ಕುಣಿತ. ಹರಕೆ ಹೊತ್ತವರ ಮನೆಯಂಗಳದಲ್ಲಿ ಐದಾರು ಜನ ನಿಂತು ವಿಶಿಷ್ಟ ರೀತಿಯಲ್ಲಿ ನೃತ್ಯ ಮಾಡಿ, ಸತ್ಸಂಪ್ರದಾಯ ಮೆರೆಯುತ್ತಾರೆ. ವಿಶೇಷ ವೇಷಭೂಷಣ ಧರಿಸಿದ ಗೊರವರು ಏಕಾಗ್ರತೆಯಿಂದ ವರ್ತುಲಾಕಾರದಲ್ಲಿ ನಿಂತು, ಕೆಲವೊಮ್ಮೆ ನೇರವಾಗಿಯೇ ನಿಂತುಕೊಂಡು ನರ್ತಿಸುತ್ತಾರೆ. ಕುರುಬ ಜನಾಂಗದಲ್ಲಿ ಮಾತ್ರ ಆಚರಣೆಯಲ್ಲಿರುವ ಈ ಕುಣಿತ ಅನ್ಯ ಜನಾಂಗದವರಿಗೂ ವಿಸ್ತರಿಸಲ್ಪಡಬೇಕಾದ ಅಗತ್ಯತೆ ಇದೆ.ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳಲ್ಲಿ ಉಪ್ಪಾರ ಜನಾಂಗದವರು ಆಚರಿಸುತ್ತಾರೆ

ಕೃತಿ ನೆರವು[ಬದಲಾಯಿಸಿ]

  • ಹೊನ್ನಹೊಳೆ - ಸಂಪಾದಕರು:ಮಲೆಯೂರು ಗುರುಸ್ವಾಮಿ