ವಿಷಯಕ್ಕೆ ಹೋಗು

ಕಣಜ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಣಜ ೧

ಬೆಳೆ ಬೆಳೆಯುವ ರೈತರು ಬಂದ ಬೆಳೆಯನ್ನು ಕಾಪಾಡಿಕೊಳ್ಳಲು ಪುರಾತನ ಕಾಲದಿಂದಲೂ ಮಾಡಿಕೊಂಡಿರುವ ಒಂದು ವ್ಯವಸ್ಥೆ. ಅದರಲ್ಲೂ ಮುಖ್ಯವಾಗಿ ಭತ್ತದ ಬೆಳೆಗಾರರು ಇದನ್ನು ಹೆಚ್ಚಾಗಿ ಬಳಸುತ್ತಾರೆ.

ಕನ್ನಡದಲ್ಲಿ ಒಂದು ಸೊಗಸಾದ ಗಾದೆಯೂ ಇದೆ."ಹನಿ ಹನಿ ಕೂಡಿದರೆ ಹಳ್ಳ,; ತೆನೆ ತೆನೆ ಕೂಡಿದರೆ ಬಳ್ಳ. ಬಳ್ಳ ಎಂದರೆ ಧವಸ-ಧಾನ್ಯಗಳನ್ನು ಅಳೆಯುವ ಸಾಧನ. ಹಿಂದೆ ರಾಜ-ಮಹಾರಾಜರು ರೈತರಿಂದ ಧವಸ-ಧಾನ್ಯಗಳನ್ನು ವಸೂಲಿ ಮಾಡಿ ಅವನೆಲ್ಲ ಸಂಗ್ರಹಿಸಿ ದೊಡ್ಡದೊಂದು ಉಗ್ರಾಣವನ್ನು ಕಟ್ಟಿಸಿ ಅದರೊಳಗೆ ವರ್ಷಗಟ್ಟಲೆ ಶೇಖರಿಸಿ ಇಡುತ್ತಿದ್ದರು. ಊರಿಗೆ ಬರಗಾಲ, ಕ್ಷಾಮ ಬಂದಾಗ ಉಗ್ರಾಣದಲ್ಲಿನ ಧವಸ-ಧಾನ್ಯಗಳನ್ನು ಜನರಿಗೆ ದಾನ ಮಾಡುತ್ತಿದ್ದರು. ಈಗಲೂ ಅಂತಹ ಬೃಹತ್ ಉಗ್ರಾಣ/ಕಣಜವನ್ನು ಹಾವೇರಿ ಜಿಲ್ಲೆಯಲ್ಲಿರುವ ಬಂಕಾಪುರದಲ್ಲಿ ಕಾಣಬಹುದು.

ಜನಪದರ ಇಡೀ ಜೀವನವೇ ಕಣಜದಲ್ಲಿ ಅಡಗಿರುತ್ತದೆ ಎಂಬ ಮಾತಿದೆ. ಜನ ಸಾಮಾನ್ಯರು ರಾಜ-ಮಹಾರಾಜರಂತೆ ಉಗ್ರಾಣಗಳನ್ನು ಕಟ್ಟಿಸುವ ಶಕ್ತಿ ಇಲ್ಲದುದರಿಂದ ತಮ ತಮಗೆ ಅನುಕೂಲವಾಗುವ ರೀತಿಯಲ್ಲಿ ಬಿದಿರಿನಿಂದ ಮಾಡಿದ ಗುಡಾಣ/ಕಣಜಗಳನ್ನು ಸಗಣಿಯಿಂದ ತಾರಿಸಿ ಧವಸ-ಧಾನ್ಯಗಳ ಶೇಖರಣೆಗೆ ಬಳಸುತ್ತಾರೆ.

ಕೆಲವರು ಮನೆಯೊಳಗೆ ಸಿಮೆಂಟಿನಲ್ಲಿ ಉಗ್ರಾಣ/ಕಣಜವನ್ನು ಕಟ್ಟಿಸಿದರೆ, ಹಿರಿಯರು ಬೃಹತ್ ಮಡಕೆಯಲ್ಲಿ ಕಣಜವನ್ನು ತಯಾರಿಸಿ ಅದರಲ್ಲಿ ಧವಸ-ಧಾನ್ಯಗಳ ಶೇಖರಿಸಿ ಇಡುತ್ತಿದ್ದರು. ಕಣಜಗಳನ್ನು ಹೊರಗಿನಿಂದ ನೋಡಿದರೆ ಪುಟ್ಟ ಗುಡಿಸಿಲಿನಂತೆ ಗೋಚರಿಸುತ್ತದೆ. ಕಣಜಕ್ಕೆ ಮಳೆ, ಗಾಳಿ ,ಬಿಸಿಲು ಬೀಳದಂತೆ ಜತನ ಮಾಡುತ್ತಿದ್ದರು. ಸಾಮಾನ್ಯವಾಗಿ ಮನೆಯೊಳಗಿನ ಕಡೆಯ ಕತ್ತಲೆ ಕೋಣೆಯೊಳಗೆ, ಇದನ್ನು ಇಡುತ್ತಿದ್ದರು. ಮನೆಯ ಹಿರಿಯರಿಗೆ ಮಾತ್ರ ಕಣಜದ ಕೋಣೆಯೊಳಗೆ ಪ್ರವೇಶ ಇರುತ್ತಿತ್ತು.

ಕಣಜ

‘ಕಣಜ’ - ಒಂದು ನುಡಿ ನಡೆಯ ನೋಟ

[ಬದಲಾಯಿಸಿ]

ಬಿದಿರು ಸೀಳುಗಳಿಂದ ಆಳೆತ್ತರಕ್ಕೆ ಕೊೞವೆ ಪರಿಜಿಗೆ ಎಣೆದು ಸಗಣಿ ಅಲ್ಲದಿದ್ದರೆ ಕೆಮ್ಮಣ್ಣಿಂದ ಸಾರಿಸಿ ಧವಸಗಳನ್ನು ಕೂಡಿಡಲು ಮಾಡಿದ கூடை ಕೂಡೈ(ತ) > ಗೂಡೆ ‘ಕಣಜ’ ಎನಿಸುತ್ತದೆ. ಇದನ್ನು ಮನೆಯ ಒಳಗಾಗಲೀ ಹೊಱಗೆ ಜಗಲಿಯಲ್ಲಾಗಲೀ ಇಡುವುದು ವಾಡಿಕೆ. ಈ ಕಣಜ ತಮಿೞಿನಲ್ಲಿ களஞ்சியம் ಕಳಞ್ಜಿಯಮ್, தொம்பை ತೊಮ್ಬೈ ಎಂದು ಕರೆಸಿಕೊಳ್ಳುತ್ತದೆ. ತೊಮ್ಬೈ ಕನ್ನಡಕ್ಕೆ ಬರುವಾಗ ತೊಂಬೆ ಆಗುತ್ತದೆ.

ಇನ್ನೂ ಹೆಚ್ಚು ಧವಸ ಉಳ್ಳವರು ಆಱೆಂಟು ಅಡಿಗಳ ಹಲಗೆಗಳನ್ನು ಪೆಟ್ಟಿಗೆಯ ಪರಿಜಿಗೆ ಹೊಂದಿಸಿ ದವಸಗಳನ್ನು ಕೂಡಿಡಲು ಅಲ್ಲದೆ ಬೞಸಲು ಬೇಕಾದಾಗ ತಳಮಟ್ಟದಲ್ಲಿ ಹೊಂದಿಸಿರುವ ಎರಡು ಹಿಡಿಗಳಲ್ಲಿ ಮೇಲಿನದನ್ನು ಎೞೆದು ಮತ್ತೆ ಅದನ್ನು ಒಳತಳ್ಳಿದಾಗ ಅದಱ ಕೆಳಕ್ಕೆ ತಳವಿರುವ ಒಂದು ಅಡಿ ಚಚ್ಚೌಕದ ಚೌಕಟ್ಟಿಗೆ ಧವಸ ತುಂಬಿಕೊಳ್ಳುತ್ತದೆ. ಇದನ್ನು ಹೊಱ ಎೞೆದು ದವಸವನ್ನು ಹೊಱ ಹಾಕಿ ತಳಚೌಕಟ್ಟನ್ನ ಒಳತಳ್ಳಿ ಬಿಡಬಹುದು, ಇಲ್ಲವೆ ಮುಂದುರಿಸಬಹುದು. ಹೀಗೆ ಕಣಜದ ಬೞಕೆಯಾಗುತ್ತದೆ.

ಇನ್ನೂ ಹೆಚ್ಚಿನ ಧವಸ ಇದ್ದಲ್ಲಿ ಮನೆಯ ಹೊಱಗೆ, ಕಲ್ಲುನೆಲದಲ್ಲಿ, ಬಾಯಿ ಕಿಱಿದಾಗಿ ಒಳಗೆ ಅಗಲವಾಗಿ ಗುಡಾಣದ ಪಾಂಗಿನಲ್ಲಿ/ರೀತಿಯಲ್ಲಿ, ಗುಂಡಿ ಅಗೆದು, ಅವುಗಳಲ್ಲಿ ರಾಗಿ ಜೋೞ ಮುಂತಾದವುಗಳನ್ನು ಕೂಡಿಟ್ಟು, ಮೇಲೆ ಕಲ್ಲ ಮುಚ್ಚಳ ಮುಚ್ಚಿ ಅದಱ ಮೇಲೆ ಮೞೆಯ ನೀರು ಇೞಿಯದಂತೆ ಜೇಡಿಮಣ್ಣು ಎೞೆದು ಕೂಡಿ ಇಡುವ ಕಣಜ 'ಅಗೇವು' ಎನಿಸುತ್ತದೆ. ಬಱಗಾಲದಲ್ಲಿ ಬಡವರಿಗೆ ಹಂಚಲೂ ಒದಗುತ್ತದೆ.

ಕಡಿಮೆ ಅಳವಿನಲ್ಲಿ ಅಕ್ಕಿ, ಕಾೞುಗಳನ್ನು ಕೂಡಿಡಲು ಬೞಸುವ ಹಿತ್ತಾಳೆ ಮುಂತಾದವುಗಳಿಂದಾದ ಗುಡಾಣವೂ ಒಂದು ಸಣ್ಣ ಕಣಜ; ಇದಕ್ಕೆ ಕನ್ನಡದಲ್ಲಿ ‘ಮಣಿಕ’ ಎಂಬ ಮತ್ತೊಂದು ಹೆಸರೂ ಉಂಟು. ಕಾೞುಗಳ ತೆನೆ (ಕ.ತ.)ಗಳಲ್ಲಿ ‘ கதிர் ಕದಿರ್ ’ ಎನಿಸಿದರೆ ಕಾೞುಗಳನ್ನು ಕೂಡಿಡುವ ಮಣ್ಣಿನ ಗುಡಾಣ ತಮಿೞಿನಲ್ಲಿ ‘ குதிர் ಕುದಿರ್ ’ ಎನಿಸುತ್ತದೆ.

ಕುಟುಕುವ ಕೊಂಡಿ, ಹಾಱುವ ಱೆಕ್ಕೆ ಎರಡೂ ಉಳ್ಳ ( ಕೆಮ್ + ಚಿಗಿ=ಕೆಞ್ಜಿಗಿ )ವ =ಕೆಂಚನೆಯ ಬಣ್ಣದ ಹಾಱುವ ಕೆಂಜಿಗ ಇಱವೆಯೂ ಕಣಜ ಎನಿಸುತ್ತದೆ. ಕಾಡುವ ಈ ಕಣಜವನ್ನು ‘ಕಡಜ’ ಎಂದೂ ಕರೆಯಲಾಗುತ್ತದೆ. ಕಾಟ ಕೊಟ್ಟು ಕಾಡುವ ಮಕ್ಕಳನ್ನು ಕಡಜ ಎಂದು ತಾಯಂದಿರು ಕರೆಯುತ್ತಾರೆ.

ಕನ್ನಡದ ಕೇಶಿರಾಜರು ಸಂಸ್ಕೃತವಿಬುಧರಿಗೆ ಧಾತುಪಾಠವನ್ನು ಹೇೞುವಲ್ಲಿ ‘ಕುಡುಕು’ ಎನ್ನುವುದಕ್ಕೆ ‘ಧಾನ್ಯಾದಿ ದ್ರವ್ಯೇ ಚ ’ ಎಂದಿರುತ್ತಾರೆ ; ಅಂದರೆ ಧನತೀತಿ – ಚರಿಸಿದಪುದೆಂದುಬು - ಧನಃ – ಪಶು ; ಧನಂ – ದ್ರವ್ಯಂ ; ಧಾನ್ಯಂ - ಧವಸ ಮೊದಲಾದ ಬೞಕೆಯವು ಗಳನ್ನು ಒಟ್ಟುಗೂಡಿಸಿ ಇಡುವಲ್ಲಿ ಈ ‘ಕಡುಕು’ ಸೊಲ್ಲಿನ ನಡೆಬೞಕೆ ಎನ್ನುವರು ಹಿರಿಯರು.

ಈ ಕುಡುಕು ತಮಿೞಾಗುವಾಗ ‘ கொடுக்கு ಕೊಡುಕ್ಕು ’ ಎಂದೂ ಆಮೇಲೆ ಕನ್ನಡದಲ್ಲಿ ‘ಕುಡಿಕೆ’ ಎಂದೂ ಆಗುತ್ತದೆ. ‘ಕೂತು ಉಂಬವನಿಗೆ ಕುಡಿಕೇ ಹಣವೂ ಸಾಲದು.’ ಎನ್ನುವ ಗಾದೆ ಕಣಜ ಎಂಬದು ಹಣ ಕೂಡಿಡುವ ಕುಡಿಕೆಗೂ ಆಗತ್ತದೆ ಎಂಬುದನ್ನು ತಿಳಿಗೊಳಿಸುತ್ತದೆ.

பண்ட ಪಣ್ಡ (ತ) ಎನ್ನುವುದು ಸರಕು. ಒಂದು ಸರಕು ಕೊಟ್ಟು ಮತ್ತೊಂದು ಸರಕು ಕೊಳ್ಳುವ ಮಾಱಾಟ, ಸಾಟಿ > ಚಾಟಿ ಎನಿಸತ್ತದೆ. ಇದಕ್ಕೆ ಬಂಡವಾಳ ಬೇಕಿಲ್ಲ. பண்ட> ಬಂಡ ಎನ್ನುವುದು ರೊಕ್ಕ. ರೊಕ್ಕವನ್ನು ಸೇರಿಸಿ ಇಡುವ ಎಡೆ ‘ಬೊಕ್ಕಸ’ ಎನಿಸುತ್ತದೆ.

'ಖಜಾನೆ'/'ಭಂಡಾರ’ ಎನ್ನುವುದು ರೊಕ್ಕದ ಮನೆ. ಅವನೇ பண்டாரம் ಪಣ್ಡಾರಮ್(ತ). ಆಡಳಿತ ನಡೆಸುವವನು ‘ಭಂಡಾರಿ’ ; ಇಲ್ಲಿ ಭಕ್ತಿಭಂಡಾರಿ ಬಸವೇಶ್ವರರನ್ನು ನೆನಯಬಹುದು. ಬಂಡಾರ > भण्डार ಭಂಡಾರ ಆಗಿ ಸಂಸ್ಕೃತಗೊಂಡು कोश ಕೋಶ ಆಗಿದೆ. ಅಲ್ಲಿಯೂ ಕೋಶಕ್ಕೆ श ಶ ಇರಬೇಕೋ ष ಷ ಇರಬೇಕೋ ಅನ್ನುವ ಗಲಬಿಲಿ/ಗೊಂದಲವೂ ಈಗಲೂ ಉಂಟು.

ಮುಂದೆ ಎಂದಿಗಾದರೂ ಯಾರಿಗಾದರೂ ತಿಳಿಯಬೇಕೆಂದಿರುವದಱ ಬಗೆಗೆ ಹೇೞಿಕೊಡುವ - ಡಿಕ್ಷ್ನರಿ, ಬಱಗಾಲಕ್ಕೆ ಇರಲಿ ಎಂದು *ಕಾೞುಕೂಡಿಡುವ - ಗ್ರಾನರಿ, ಕಡುಬಡತನ ಬಂದಾಗ ಒದಗಲಿ ಎಂದು ಹಣಕಾಸು ಸೇರಿಸಿ ಕೂಡಿಡುವ – ಟ್ರೆಷರಿ ಈ ಮೂಱೂರಿಂದ ಆದುದು ‘ಕಣಜ.’

ಇಲ್ಲಿ *ಕಾೞು ಅಂದದು ಗಟ್ಟಿ ನಾಡುನುಡಿಯ ನಯನಾಣಿಯ(ಣ್ಯ)ಗಳ ಅಱಿವಿನ ತಿಳಿವು ಮೈದೋಱುವ ನಾಣ್ಣುಡಿ ಜಾಣ್ಣುಡಿಗಳ ಬೊಕ್ಕಸವೇ ‘ಕಣಜ.’

ಈ ಲೇಖನ ‘ಕಣಜ ಅಂತರಜಾಲ ತಾಣ’ ಸ್ವೀಕರಿಸಿತಾದರೂ, ಇದರ ಪ್ರಯೋಜನ ಪಡೆಯಲಿಲ್ಲವಾಗಿ ವಿಕಿಪಿಡಿಯ ನೋಟಕರ ಅವಗಾಹನೆಗೆ ಇದನ್ನು ಇಡಲಾಗಿದೆ.

"https://kn.wikipedia.org/w/index.php?title=ಕಣಜ&oldid=1233812" ಇಂದ ಪಡೆಯಲ್ಪಟ್ಟಿದೆ