ಅನ್ವೇಷಣೆ (ಭೂವಿಜ್ಞಾನ)
ಭೂವಿಜ್ಞಾನದಲ್ಲಿ, ಅನ್ವೇಷಣೆ ಎಂದರೆ ಒಂದು ಪ್ರಾಂತ್ಯದ ಭೂವೈಜ್ಞಾನಿಕ ವಿಶ್ಲೇಷಣೆಯ ಮೊದಲ ಹಂತವಾಗಿರುತ್ತದೆ. ಇದು ಖನಿಜಗಳು, ಪಳೆಯುಳಿಕೆಗಳು, ಅಮೂಲ್ಯ ಲೋಹಗಳು, ಅಥವಾ ಖನಿಜ ಮಾದರಿಗಳ ಹುಡುಕಾಟವಾಗಿರುತ್ತದೆ.[೧][೨][೩]
ಖನಿಜಾನ್ವೇಷಣೆ ಎಂದರೆ ಖನಿಜ ನಿಕ್ಷೇಪಗಳನ್ನು ಲಾಭದಾಯಕವಾದ ಮತ್ತು ಉಪಯುಕ್ತವಾದ ರೀತಿಯಲ್ಲಿ ರೂಢಿಸಿಕೊಳ್ಳುವ ಬಗೆಗೆ ಸಂಬಂಧಿಸಿದ ವಿವರವಾದ ಅಧ್ಯಯನ (ಮಿನರಲ್ ಪ್ರಾಸ್ಪೆಕ್ಟಿಂಗ್). ಅಂದರೆ ಒಂದು ಪ್ರದೇಶ ಅಥವಾ ನಿಕ್ಷೇಪದಲ್ಲಿ ಸಿಗುವ ಖನಿಜವನ್ನು ಯಾವ ರೀತಿಯಲ್ಲಿ ರೂಢಿಸಲು ಸಾಧ್ಯ ಅಥವಾ ಅದು ಸಾಧ್ಯವಿಲ್ಲವೇ ಎಂಬುದನ್ನು ತಿಳಿದುಕೊಳ್ಳಬೇಕು. ಭೂಶೋಧನೆ ಮತ್ತು ಖನಿಜಾನ್ವೇಷಣೆ ಈ ಎರಡು ವಿಧಾನಗಳು ತತ್ತ್ವಶಃ ಬೇರೆಯಾಗಿದ್ದರೂ ಅವನ್ನು ನಿರ್ದಿಷ್ಟವಾಗಿ ಬೇರ್ಪಡಿಸುವುದು ಕೊಂಚ ಕಷ್ಟವೇ. ಬಹುಮಟ್ಟಿಗೆ ಒಂದು ಮತ್ತೊಂದರೊಡನೆ ವಿಲೀನಗೊಳ್ಳುತ್ತದೆ.
ಪ್ರಚೋದನೆಗೆ ಮೂಲವಾದ ಕುರುಹುಗಳು: ಖನಿಜಾನ್ವೇಷಣೆಯ ಪ್ರಚೋದನೆಗೆ ಮೂಲವಾದ ಮೂರು ಮುಖ್ಯ ಕುರುಹುಗಳೆಂದರೆ:
- ನೆಲದ ಮೇಲೆ ತಾವಾಗಿ ಎದ್ದು ಕಾಣಿಸಿಕೊಳ್ಳುವ ಖನಿಜದ ಅದುರುಗಳು.
- ಅನುಕೂಲಕರವಾದ ಭೂ ಸನ್ನಿವೇಶ ಮತ್ತು
- ಒಂದು ಪ್ರದೇಶದಲ್ಲಿ ನಡೆದಿರುವ ಪುರಾತನ ಗಣಿ ಕೆಲಸದ ಅವಶೇಷ ಅಥವಾ ಕುರುಹುಗಳು.
ಇವುಗಳಲ್ಲೆಲ್ಲ ಅತಿ ಮುಖ್ಯವಾದದ್ದು ಅನುಕೂಲಕರವಾದ ಭೂ ಸನ್ನಿವೇಶ.
ಸಹಾಯಕವಾಗುವ ಅಂಶಗಳು: ಖನಿಜಾನ್ವೇಷಣೆಗೆ ಸಹಾಯಕವಾಗುವ ಭೂವೈಜ್ಞಾನಿಕ ಅಂಶಗಳು: ಖನಿಜ ನಿಕ್ಷೇಪದ ಆಕಾರ, ಗಾತ್ರ, ವಿಸ್ತರಣೆ, ಹುದುಗಿರುವ ಜಾಡು ಮತ್ತು ಅದರಲ್ಲಿ ದೊರೆಯುವ ಖನಿಜಾಂಶ ಇವೆಲ್ಲವೂ ಅದರ ಅನ್ವೇಷಣೆಗೆ ಬಹುಮುಖ್ಯ. ನಿಕ್ಷೇಪವಿರುವ ಪ್ರದೇಶದ ನಿಖರವಾದ ಭೂಲಕ್ಷಣವನ್ನು ತಿಳಿದಲ್ಲಿ ಅನ್ವೇಷಣೆಗೂ ಹೆಚ್ಚಿನ ಸಹಾಯವಾದೀತು. ಕೆಲವು ಸಂದರ್ಭಗಳಲ್ಲಿ ಭೂಶೋಧನೆ ನಿಖರವಾದ ಅಂಶಗಳನ್ನು ಒದಗಿಸದ ಕಾರಣ ಅನ್ವೇಷಣೆಗೆ ಹೆಚ್ಚಿನ ಸಹಾಯವಾಗಲಾರದು. ನಿಕ್ಷೇಪ ಉಂಟಾದ ರೀತಿಯಿಂದ ಅದರ ಆಕಾರ, ಗಾತ್ರ ಮತ್ತು ಅದಿರುವ ಸನ್ನಿವೇಶವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ತನ್ಮೂಲಕ ಆ ನಿಕ್ಷೇಪದಲ್ಲಿ ದೊರೆಯುವ ಖನಿಜದ ಮೊತ್ತ ಮತ್ತು ಅದನ್ನು ಹೊರತೆಗೆದು ಒಪ್ಪಮಾಡುವುದು ಲಾಭದಾಯಕವೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದು. ನಿಕ್ಷೇಪ ಉಂಟಾದ ಮೇಲೆ ಅದರ ಹೊರಮೈಯಲ್ಲಿ ಉಂಟಾಗುವ ಬದಲಾವಣೆಗಳು ಅನೇಕ ವೇಳೆ ಆಳದಲ್ಲಿ ಹುದುಗಿರುವ ಮುಖ್ಯ ನಿಕ್ಷೇಪದ ಗಾತ್ರ, ಆಕಾರ ಇವೇ ಮುಂತಾದ ಅಂಶಗಳನ್ನು ಊಹಿಸಲು ಬಹು ಸಹಾಯಕವಾಗಿರುತ್ತವೆ. ಖನಿಜ ನಿಕ್ಷೇಪಗಳು ಭೂಮಿಯ ಚಟುವಟಿಕೆಗಳಿಗೆ ಗುರಿಯಾದಾಗ ರೂಪಾಂತರಗೊಳ್ಳಬಹುದು ಮತ್ತು ಕೆಲವು ಸಂದರ್ಭಗಳಲ್ಲಿ ಮಡಿಕೆ ಬೀಳಬಹುದು. ಇಲ್ಲವೆ ಅವುಗಳ ಹರವಿನಲ್ಲಿ ಸ್ತರಭಂಗ ಉಂಟಾಗಿ ಅವ್ಯವಸ್ಥೆ ತಲೆದೋರಲೂಬಹುದು. ಹೀಗಾಗುವುದರಿಂದ ಖನಿಜಾನ್ವೇಷಣೆಯಲ್ಲಿ ಕೆಲವು ಕ್ಲಿಷ್ಟ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದರೆ ನುರಿತ ಭೂಶೋಧಕನಿಗೆ ಇವು ಖನಿಜ ಅನ್ವೇಷಣೆಯಲ್ಲಿ ಅಷ್ಟು ತೊಂದರೆಯನ್ನು ಒಡ್ಡಲಾರವು.
ವಿಧಾನಗಳು
[ಬದಲಾಯಿಸಿ]ಅನ್ವೇಷಣೆಯಲ್ಲಿ ವಿಧಾನಗಳು: ಇವನ್ನು ಮೂರು ಗುಂಪಾಗಿ ವಿಂಗಡಿಸಬಹುದು.
- ಭೂ ವೈಜ್ಞಾನಿಕ ವಿಧಾನಗಳು,
- ಭೂ ರಾಸಾಯನಿಕ ವಿಧಾನಗಳು ಮತ್ತು
- ಭೂ ಭೌತ ವಿಧಾನಗಳು.
ಭೂ ವೈಜ್ಞಾನಿಕ ವಿಧಾನಗಳು
[ಬದಲಾಯಿಸಿ]ಒಂದು ಪ್ರದೇಶದಲ್ಲಿ ಹರಡಿರುವ ತೇಲಿಕೆ ಅದುರನ್ನು ಗುರುತಿಸುವುದು, ಆ ಪ್ರದೇಶದ ಮಣ್ಣನ್ನೋ ಮರಳನ್ನೋ ನುರುಜನ್ನೋ ಜಾಲಿಸಿ ಅದರಿಂದ ಅದುರನ್ನು ಗುರುತಿಸುವುದು, ತೋಡಗತೆಯಿಂದ ಒಳಹುದುಗಿರುವ ಅದುರನ್ನು ಹೊರತೆಗೆಯುವುದು, ಹೆಚ್ಚಿನ ಆಳಕ್ಕೆ ರಂಧ್ರ ಕೊರೆದು ಅದುರನ್ನು ಪತ್ತೆ ಹಚ್ಚುವುದು ಇವೇ ಮುಂತಾದವು ಇಲ್ಲಿ ಅನುಸರಿಸುವ ವಿಧಾನಗಳು.
ತೇಲಿಕೆ ಅದುರನ್ನು ಗುರುತಿಸುವುದು
[ಬದಲಾಯಿಸಿ]ಅದುರು ಹುದುಗಿರುವ ಶಿಲೆ ಶಿಥಿಲಗೊಂಡ ಮೇಲೆ ಅದುರಿನ ಚೂರುಗಳನ್ನು ಬೀಸುವ ಗಾಳಿಯೋ, ಹರಿಯುವ ನೀರೋ ದೂರ ಸಾಗಿಸಿಕೊಂಡು ಹೋಗಿ ಅನುಕೂಲ ಸನ್ನಿವೇಶವಿರುವ ಕಡೆ ಶೇಖರಿಸುತ್ತದೆ. ಹೀಗಾಗಿ ಅನ್ವೇಷಕನಿಗೆ ಬೆಟ್ಟದ ಇಳಿಜಾರಿನಲ್ಲೋ ನದಿಯ ಪಾತ್ರದಲ್ಲೋ ಅದುರು ಚೂರುಗಳು ದೊರೆತು ಆ ಜಾಡನ್ನೇ ಅನುಸರಿಸಿ ಹೋದಲ್ಲಿ ಅದುರಿನ ಮೂಲವನ್ನು ಹೆಚ್ಚು ಶ್ರಮವಿಲ್ಲದೆ ಪತ್ತೆ ಹಚ್ಚಬಹುದು. ಈ ಚೂರುಗಳ ಆಕಾರ ಮತ್ತು ಗಾತ್ರ ಸಮೃದ್ಧಿಗಳನ್ನು ಅನುಸರಿಸಿ ಅವು ಮೂಲನಿಕ್ಷೇಪದಿಂದ ಎಷ್ಟು ದೂರ ಸರಿದಿವೆ ಎಂಬುದನ್ನೂ ನಿರ್ಧರಿಸಬಹುದು. ಖನಿಜ ಗಡಸಾಗಿದ್ದಲ್ಲಿ ಇದು ಉತ್ತಮ ವಿಧಾನ. ಇಲ್ಲವಾದಲ್ಲಿ ಮೂಲದಿಂದ ಪ್ರವಹಿಸುವ ದಾರಿಯಲ್ಲೇ ಒಡೆದು ಚೂರಾಗಿ ಯಾವ ಉಪಯೋಗವೂ ಆಗಲಾರದು. ಚಿನ್ನ, ಪ್ಲಾಟಿನಂ ಮುಂತಾದ ಅನರ್ಘ್ಯ ಲೋಹಗಳಿದ್ದಲ್ಲಿ ಜಾಲಿಸುವುದರ ಮೂಲ ಪ್ಲವನ (ಗ್ರೇಡಿಯಂಟ್) ನಿಕ್ಷೇಪದ ಮೊತ್ತ ಮತ್ತು ಮೌಲ್ಯವನ್ನು ನಿರ್ಧರಿಸಬಹುದು.
ತೋಡಗತೆಯ ವಿಧಾನ
[ಬದಲಾಯಿಸಿ]ಭೂಮಟ್ಟದಿಂದ ಹೆಚ್ಚಿನ ಆಳದಲ್ಲಿ ಹುದುಗಿರುವ ಖನಿಜಗಳ ಅನ್ವೇಷಣೆಗೆ ಇದು ಉತ್ಕೃಷ್ಟವಾದದ್ದು. ಹುದುಗಿರುವ ಆಳ ಹೆಚ್ಚೆಂದರೆ 2 ಮೀ-2.12ಮೀ. ಮೀರಿರಬಾರದು. ಅಲ್ಲದೆ ಖನಿಜ ನಿಕ್ಷೇಪ ಬಹು ಗಡುಸಾಗಿರಲೂಬಾರದು. ಅಗಳುಗಳನ್ನು ನಿಕ್ಷೇಪದ ಹರವಿಗೆ ಲಂಬವಾಗಿ ತೋಡಬೇಕು. ಇವು ಅಷ್ಟು ಆಳವಾಗಿಯಾಗಲೀ ಬಹು ಆಳವಾಗಿಯಾಗಲೀ ಇರಬಾರದು. ಮೇಲ್ಭಾಗದಲ್ಲಿ ಹೆಚ್ಚು ಅಗಲವಾಗಿಯೂ (457ಮಿ.ಮೀ. - 366ಮಿ.ಮೀ.) ಇದ್ದು ಸುಮಾರು 0.61ಮೀ.-0.76ಮೀ. ಯಷ್ಟು ಆಳವಾಗಿರಬೇಕು. ನಿಕ್ಷೇಪ ಹೆಚ್ಚು ಶಿಥಿಲಗೊಂಡು ಅಗಳಿನ ಆಳವನ್ನು ತಕ್ಕ ಮಟ್ಟಿಗೆ ಹೆಚ್ಚಿಸಬಹುದು.
ಪರೀಕ್ಷಾ ಗುಳಿಗಳನ್ನು (ಟ್ರಯಲ್ ಪಿಟ್ಸ್) ಮೆಕ್ಕಲು ಪ್ರದೇಶಗಳಲ್ಲಿ ತೋಡಬೇಕು. ಸಾಮಾನ್ಯವಾಗಿ ಇವುಗಳ ಆಳ ಅಗಳಿನ ಆಳಕ್ಕಿಂತಲೂ ಹೆಚ್ಚು. ಸುಮಾರು 30 ಮೀ. ಆಳದವರೆಗೂ ಇವನ್ನು ತೋಡಬಹುದು. ನಿಕ್ಷೇಪಗಳು ಬೃಹದಾಕಾರವಾಗಿದ್ದಲ್ಲಿ ಈ ಬಗೆಯ ತೋಡುಗುಳಿಗಳ ಉಪಯುಕ್ತತೆ ಹೆಚ್ಚು. ಗುಳಿಗಳು ಗುಂಡಾಗಿ ಇಲ್ಲವೇ ಆಯಾಕಾರವಾಗಿ ಇರಬಹುದು. ವೃತ್ತಾಕಾರವಾಗಿದ್ದಲ್ಲಿ ವ್ಯಾಸ 762 ಮಿ.ಮೀ-914 ಮಿ.ಮೀ. ಗಳಷ್ಟೂ, ಆಯಾಕಾರವಾಗಿದ್ದಲ್ಲಿ 1524 ಮಿ.ಮೀ-121948 ಮಿ.ಮೀ. ಗಳಷ್ಟೂ ಇರುತ್ತದೆ. ಖನಿಜಾನ್ವೇಷಣೆಗೆ ಸಾಮಾನ್ಯವಾಗಿ ಆಯಾಕಾರದ ಗುಳಿಗಳೇ ಉತ್ತಮ.
ಬೈರಿಗೆ ಕೊರೆಯುವ ವಿಧಾನ
[ಬದಲಾಯಿಸಿ]ಖನಿಜ ನಿಕ್ಷೇಪ ಹೆಚ್ಚಿನ ಆಳದಲ್ಲಿ ಹುದುಗಿದ್ದಾಗ ಮತ್ತು ಇತರ ವಿಧಾನಗಳು ಅನುಪಯುಕ್ತವೆನಿಸಿದಾಗ ಇದೇ ಅತ್ಯುತ್ತಮ ವಿಧಾನ. ಎಷ್ಟು ಆಳಕ್ಕೆ ಬೇಕಾದರೂ ರಂಧ್ರ ಕೊರೆದು ಶಿಲೆಯನ್ನು ಹೊರತೆಗೆದು ಪರೀಕ್ಷಿಸಬಹುದು. ಆ ಮೂಲಕ ವಿವರವಾದ ಅಧ್ಯಯನ ನಡೆಸಿ ಹುದುಗಿರುವ ಆಳ, ಅದರೊಡನಿರುವ ವಿವಿಧ ಶಿಲೆಗಳು, ಅದುರಿನ ಗುಣ, ಅದರಲ್ಲಿರುವ ಲೋಹ ಮೊತ್ತ ಇವನ್ನೆಲ್ಲ ನಿರ್ಧರಿಸಬಹುದು. ಲೋಹ ಖನಿಜಾನ್ವೇಷಣೆಯಲ್ಲಿ ಡೈಮಂಡ್ ಮತ್ತು ಚರ್ನ್ ಎಂಬ ವಿಶೇಷ ರೀತಿಯ ಬೈರಿಗೆಗಳನ್ನು ಉಪಯೋಗಿಸುತ್ತಾರೆ. ಹ್ಯಾಮರ್ ಬೈರಿಗೆಗಳನ್ನು ನಿಕ್ಷೇಪಗಳ ಇಕ್ಕೆಲಗಳ ವಿಶೇಷ ಪರೀಕ್ಷೆಗೆ ಉಪಯೋಗಿಸುವರು. ತೈಲಾನ್ವೇಷಣೆಯಲ್ಲಿ ರೋಟರಿ ಬೈರಿಗೆಗಳನ್ನೂ, ಪೊಳ್ಳು ಪೊಳ್ಳಾದ ನಿಕ್ಷೇಪಗಳಿದ್ದಲ್ಲಿ ವಾಷ್ ಬೋರಿಂಗ್ ಬೈರಿಗೆಗಳನ್ನೂ ಉಪಯೋಗಿಸುತ್ತಾರೆ. ಹಲವು ಸಂದರ್ಭಗಳಲ್ಲಿ ಈ ಬಗೆಯ ನಿಕ್ಷೇಪಗಳ ಅನ್ವೇಷಣೆಯಲ್ಲಿ ಹ್ಯಾಂಡ್ ಆಗರ್ಸ್ ಎಂಬ ನೆಲಬೈರಿಗೆಯನ್ನು ಉಪಯೋಗಿಸಬಹುದು. ಮೆಕ್ಕಲು ನಿಕ್ಷೇಪಗಳಲ್ಲಿ ಅನ್ವೇಷಣೆ ನಡೆಸುವಾಗ ಎಂಪೈರ್ ಟೈಪ್ ಎಂಬ ಬೈರಿಗೆ ಉತ್ತಮವಾದುದು.
ಭೂ ರಾಸಾಯನಿಕ ವಿಧಾನ
[ಬದಲಾಯಿಸಿ]ವಿಸ್ತಾರವಾದ ಪ್ರದೇಶದಲ್ಲಿ ಖನಿಜ ಹರಡಿರುವಾಗ ಈ ವಿಧಾನ ಹೆಚ್ಚು ಉಪಯುಕ್ತವಾದುದು. ನಿಕ್ಷೇಪದಲ್ಲಿ ಒಂದೇ ಒಂದು ಮೂಲವಸ್ತುವಾಗಲೀ ಖನಿಜವಾಗಲೀ ಹೆಚ್ಚಿನ ಮೊತ್ತದಲ್ಲಿ ಕೇಂದ್ರೀಕೃತವಾಗಿರುವ ಕಾರಣ ಅದನ್ನು ಒಂದು ತೆರನಾದ ಅಸಂಗತಿ ಎಂದು ಪರಿಗಣಿಸಲಾಗುತ್ತದೆ. ಇದೇ ಭೂ ರಾಸಾಯನಿಕ ಅಸಂಗತಿ ಅಥವಾ ವ್ಯತಿಕ್ರಮ, ಖನಿಜಕ್ಷೇಪ ಭೂಮಿಯ ಅಕ್ಕಪಕ್ಕದ ಶಿಲೆಗಳಲ್ಲೂ ಭೂಭಾಗಗಳಲ್ಲೂ ಪ್ರಸರಿಸುತ್ತದೆ. ಕೆಲವು ವೇಳೆ ನಿಕ್ಷೇಪದ ಮೇಲಿರುವ ನೆಲಭಾಗ ಮತ್ತು ಅದನ್ನು ಆವರಿಸಿರುವ ನೀರು ಮತ್ತು ಸಸ್ಯವರ್ಗಗಳಲ್ಲಿ ಸಹ ಈ ಮೂಲವನ್ನು ಪ್ರವಹಿಸಿ ನಿರ್ದಿಷ್ಟ ರೀತಿಯ ಪ್ರಸಾರ ರೂಪಿಕೆಗಳನ್ನು ಉಂಟುಮಾಡುತ್ತದೆ. ಭೂ ರಾಸಾಯನಿಕ ಅಸಂಗತಗಳನ್ನು ಮತ್ತು ಪ್ರಸಾರ ರೂಪಿಕೆಗಳನ್ನು ಗುರುತಿಸಲು ಖನಿಜಗಳ ರಾಸಾಯನಿಕ ಗುಣಗಳಿಗೆ ಅನುಸಾರವಾಗಿ ಕ್ರಮಬದ್ಧ ಸಂಶೋಧನೆಗಳನ್ನು ನಡೆಸಬೇಕಾಗುವುದು. ಈ ಬಗೆಯ ಕಾರ್ಯಕ್ರಮಕ್ಕೆ ಅತ್ಯಂತ ಎಚ್ಚರಿಕೆಯಿಂದ ನಿಕ್ಷೇಪದ ಮಾದರಿಗಳನ್ನು ಅಲ್ಲಲ್ಲೇ ಶೇಖರಿಸಬೇಕು. ಅವೆಲ್ಲವನ್ನೂ ರಾಸಾಯನಿಕ ಪರೀಕ್ಷೆಗಳಿಗೆ ಒಳಪಡಿಸಬೇಕು. ಈ ಬಗೆಯ ಶೋಧನೆಯನ್ನು ಇಡೀ ಪ್ರಾಂತ್ಯಕ್ಕೆ ಅಥವಾ ಖನಿಜ ನಿಕ್ಷೇಪ ಹುದುಗಿರುವ ಭೂಭಾಗಕ್ಕೆ ಅನ್ವಯಿಸಿದಾಗ ಖನಿಜ ಯಾವ ರೀತಿಯಲ್ಲಿ ಆ ಪ್ರಾಂತ್ಯದ ವಿವಿಧ ಭಾಗಗಳಲ್ಲಿ ಶೇಖರವಾಗಿದೆ ಎಂಬುದರ ಅರಿವುಂಟಾಗುತ್ತದೆ. ಇಷ್ಟೇ ಅಲ್ಲದೆ, ಅದು ದೊರೆಯುವ ಸನ್ನಿವೇಶ, ಭೂಭಾಗದ ಗುಣಗಳು ಮುಂತಾದವನ್ನೆಲ್ಲ ಗ್ರಹಿಸಬಹುದು. ಒಂದು ಭೂ ರಾಸಾಯನಿಕ ಅಸಂಗತಿಯನ್ನಾಗಲೀ, ಅದರ ಅಧ್ಯಯನದಿಂದ ತೋರಿಬರುವ ಪ್ರಸಾರ ರೂಪಿಕೆಯನ್ನಾಗಲೀ ಗುರುತಿಸಲು ಆ ಭೂ ಸನ್ನಿವೇಶದಲ್ಲಿ ದೊರೆಯುವ ಯಾವುದಾದರೂ ಒಂದು ಖನಿಜ ಅಥವಾ ಮೂಲಧಾತುವಿನ ಮೊತ್ತವನ್ನು ಮೊದಲು ನಿರ್ಧರಿಸಬೇಕು. ಇದಕ್ಕಾಗಿ ಅಲ್ಲಿ ದೊರೆಯುವ ಖನಿಜ ಅಥವಾ ಶಿಲೆಯ ಹರವಿನ ನಾನಾ ಭಾಗಗಳಿಂದ ಮಾದರಿಗಳನ್ನು ಶೇಖರಿಸಿ ಅವನ್ನು ರಾಸಾಯನಿಕವಾಗಿ ವಿಭಜಿಸಿ ಪರೀಕ್ಷಿಸಬೇಕು. ಹಲವಾರು ಸಂದರ್ಭಗಳಲ್ಲಿ ಈ ಬಗೆಯ ಅಧ್ಯಯನಗಳಿಂದ ದೊರೆತ ಫಲಿತಾಂಶಗಳು ಇಡೀ ಪ್ರದೇಶದಲ್ಲೆಲ್ಲ ಚದರಿ ಹೋಗಿ ಯಾವ ನಿರ್ದಿಷ್ಟ ಅಭಿಪ್ರಾಯವೂ ಕಾಣದಿರಬಹುದು. ಆದರೆ ಅನೇಕ ಸಂದರ್ಭಗಳಲ್ಲಿ ಅವು ಒಂದು ನಿರ್ದಿಷ್ಟವಾದ ಜಾಡಿನಲ್ಲಿ ಅಡಕವಾಗಿರುತ್ತದೆ. ಇವುಗಳ ಸಹಾಯದಿಂದ ಆ ಪ್ರದೇಶದಲ್ಲಿ ಖನಿಜ ಎಷ್ಟು ಹೇರಳವಾದ ಮೊತ್ತದಲ್ಲಿ ದೊರೆಯುತ್ತದೆಂಬ ಅಂಶವನ್ನು ನಿರ್ಧರಿಸಬಹುದು. ಖನಿಜ ಅಥವಾ ಶಿಲಾ ಮಾದರಿಗಳಲ್ಲಿ ಸುಮಾರು ಎರಡರಷ್ಟು ಕಡಿಮೆ ಮೊತ್ತ ಕಂಡು ಬಂದರೆ ಅವನ್ನು ಅಸಂಗತಿ ಅಥವಾ ವ್ಯತಿಕ್ರಮಗಳೆಂದು ಪರಿಗಣಿಸಲಾಗುವುದು. ಈ ಅಂಶಗಳನ್ನೆಲ್ಲ ಒಟ್ಟುಗೂಡಿಸಿದಾಗ ಒಂದು ನಿರ್ದಿಷ್ಟ ರೂಪಿಕೆ ಕಂಡು ಬರುತ್ತದೆ. ಇದು ಖನಿಜ ನಿಕ್ಷೇಪದ ಉತ್ಪತ್ತಿಗೆ ಸಹ ಕಾರಣವಾಗಿರಬಹುದು.
ಮುಖ್ಯ ಭೂ ರಾಸಾಯನಿಕ ವ್ಯೂಹದಲ್ಲಿ ಶಿಲೆಗಳು ಮತ್ತು ಖನಿಜಗಳು ಸ್ತರೀಕರಣ, ರೂಪಾಂತರೀಕರಣ, ಶಿಥಿಲೀಕರಣ ಮುಂತಾದ ಭೂ ಚಟುವಟಿಕೆಗಳಿಗೆ ಒಳಗಾದಾಗ ನಾನಾ ರೀತಿಯಲ್ಲಿ ತಮ್ಮ ಆಕಾರದಲ್ಲೂ ಸಂಯೋಜನೆಯಲ್ಲೂ ಬದಲಾವಣೆ ಹೊಂದುತ್ತವೆ. ಹೀಗಾಗುವಾಗ ಖನಿಜದ ಪ್ರತಿ ಮೂಲಧಾತುವೂ ಅದರ ರಾಸಾಯನಿಕ ಮತ್ತು ಭೌತಿಕ ಗುಣಗಳಿಗನುಸಾರವಾಗಿ ಭೂ ಭಾಗದ ಯಾವುದಾದರೂ ಒಂದು ಪ್ರದೇಶದಲ್ಲಿ ಕೇಂದ್ರೀಕೃತವಾಗುತ್ತದೆ. ಅಥವಾ ನಿರ್ದಿಷ್ಟ ರೀತಿಯಲ್ಲಿ ಚದುರಿ ಹೋಗುತ್ತದೆ. ಏಕರೂಪ ಗುಣಗಳನ್ನುಳ್ಳ ಮೂಲಧಾತುಗಳು ಒಂದೇ ತೆರನಾದ ಕೇಂದ್ರೀಕರಣ ಅಥವಾ ಚದರಿಕೆಗೆ ಒಳಗಾಗುತ್ತದೆ. ಭೂತಲದಿಂದ ಆಳಕ್ಕೆ ಹೋದಂತೆಲ್ಲ ಉಷ್ಣ, ಒತ್ತಡ ಮುಂತಾದವು ಹೆಚ್ಚುತ್ತ ಹೋಗುತ್ತವೆ. ಈ ಕಾರಣದಿಂದ ಮೂಲಧಾತುಗಳ ಸಾರೀಕರಣವಾಗಲೀ ಚದರಿಕೆಯಾಗಲೀ ಒಂದೇ ತೆರನಾಗಿರಲು ಸಾಧ್ಯವಿಲ್ಲ. ಆಳದಲ್ಲಿ ಏಕರೂಪ ಸಾರೀಕರಣ ಅಥವಾ ಚದರಿಕೆಯನ್ನು ತೋರುವ ಖನಿಜಗಳು ನೆಲದ ಮೇಲೆ ಅದೇ ಬಗೆಯ ಏಕರೂಪತೆಯನ್ನು ತೋರಿಸಲಾರವು.
ಇದಕ್ಕೆ ಉತ್ತಮ ಉದಾಹರಣೆ ಸೀಸ ಮತ್ತು ಸತು. ಇವು ಅನೇಕ ಖನಿಜ ನಿಕ್ಷೇಪಗಳಲ್ಲಿ ಒಟ್ಟಿಗೆ ದೊರೆಯುತ್ತವೆ. ಆದರೆ ಭೂ ಮೇಲ್ಭಾಗದಲ್ಲಿನ ನಿಕ್ಷೇಪಗಳಲ್ಲಿ ಈ ಎರಡೂ ಖನಿಜಗಳೂ ಒಟ್ಟಿಗಿರುವುದಿಲ್ಲ. ಸೀಸ ಮೂಲಶಿಲೆಗೆ ಸಮೀಪವಾಗಿಯೂ ಸತು ಮೂಲದಿಂದ ಬಹುದೂರದವರೆಗೂ ಹರಡಿರುತ್ತದೆ.
ಭೂ ರಾಸಾಯನಿಕ ಅಸಂಗತಿಗಳನ್ನು ಮೂಲ ಮತ್ತು ಅನುಷಂಗಿಕ ಎಂದು ಎರಡು ವಿಧಗಳಾಗಿ ವಿಂಗಡಿಸಬಹುದು. ಮೂಲಶಿಲೆಯಲ್ಲಿ ಖನಿಜ ಕೇಂದ್ರೀಕರಣ ಶಿಲೆಯೊಡನೆಯೇ ಉಂಟಾಗಿದ್ದಲ್ಲಿ ಅದನ್ನು ಮೂಲ ಭೂ ರಾಸಾಯನಿಕ ಅಸಂಗತಿ ಎಂದೂ, ಶಿಲೆ ಉಂಟಾದ ಬಹುಕಾಲದ ಮೇಲೆ ಸಾರೀಕರಣವಾಗಿದ್ದಲ್ಲಿ ಅದನ್ನು ಅನುಷಂಗಿಕ ಭೂ ರಾಸಾಯನಿಕ ಅಸಂಗತಿ ಎಂದೂ ವಿವರಿಸಬಹುದು. ಖನಿಜ ಹುದುಗಿದ್ದ ಮೂಲಶಿಲೆ ಮತ್ತು ಶಿಥಿಲಗೊಂಡ ಶಿಲೆಯಲ್ಲಿ ಕಂಡುಬರುವ ರಾಸಾಯನಿಕ ಮತ್ತು ಖನಿಜ ವೈವಿಧ್ಯಗಳನ್ನು ಪ್ರಸಾರ ಮಾದರಿಗಳೆಂದು ಪರಿಗಣಿಸಲಾಗಿದೆ. ಖನಿಜೋತ್ಪತ್ತಿ ವಲಯಗಳು, ಪ್ರಸಾರಮಂಡಲಗಳು ಮತ್ತು ಮೂಲಧಾತುವಿನ ನಷ್ಟದಿಂದ ತಲೆದೋರಿದ ಪರಿವೇಷಗಳು ವಿಲಕ್ಷಣವಾದ ಮೂಲಮಾದರಿಗಳನ್ನು ಉಂಟುಮಾಡುತ್ತದೆ. ಖನಿಜೋತ್ಪತ್ತಿ ವಲಯಗಳನ್ನು ಭೂಮಿಯ ಹೊರಚಿಪ್ಪಿನಲ್ಲಿ ಕೆಲವು ಧಾತುಗಳನ್ನು ಅತಿ ಹೆಚ್ಚಿನ ಮೊತ್ತದಲ್ಲಿ ಪಡೆದಿರುವ ಭೂಭಾಗಗಳೆಂದು ಪರಿಗಣಿಸಲಾಗಿದೆ. ಈ ಬಗೆಯ ಭೂಭಾಗಗಳನ್ನು ಆ ಪ್ರದೇಶದಲ್ಲಿರುವ ಶಿಲೆಗಳು ಮತ್ತು ಖನಿಜಗಳಲ್ಲಿ ತೋರಿಬರುವ ಪ್ರಾದೇಶಿಕ ಪ್ರಸಾರ ಮಾದರಿಗಳಿಂದ ಸುಲಭವಾಗಿ ಗುರುತಿಸಬಹುದು. ಇವುಗಳ ಉತ್ಪತ್ತಿಗೆ ಆ ಭೂಭಾಗದ ಅದುರಿನ ಉತ್ಪತ್ತಿಯೊಡನೆ ನಿಕಟ ಸಂಬಂಧ ಉಂಟು.
ಇದಕ್ಕೆ ಉತ್ತಮ ಉದಾಹರಣೆಯೆಂದರೆ ಸತುವಿನ ಅದುರು ಪ್ರಾಂತದಲ್ಲಿ ಕಂಡುಬರುವ ವಿಶೇಷಾಂಶ. ಇಲ್ಲಿನ ಪೆಗ್ಮಟೈಟ್ ಶಿಲೆಗಳಲ್ಲಿ ಸಾಮಾನ್ಯವಾಗಿ ಹೆಚ್ಚಿನ ಮೊತ್ತದಲ್ಲಿ ಸತುವಿನ ಅಂಶವೂ, ಚಿನ್ನದ ಅದುರು ಪ್ರಾಂತಗಳಲ್ಲಿನ ಅಗ್ನಿಶಿಲೆಗಳಲ್ಲಿ ಹೆಚ್ಚಿನ ಮೊತ್ತದಲ್ಲಿ ಚಿನ್ನದ ಅಂಶವೂ ಕಂಡುಬರುತ್ತದೆ. ಖನಿಜ ಕೇಂದ್ರೀಕೃತವಾದ ಮುಖ್ಯ ವಲಯಕ್ಕೆ ಹೊಂದಿಕೊಂಡಿರುವ ಶಿಲಾ ಜಾಡುಗಳಲ್ಲಿ ಅದುರಿನ ಖನಿಜಾಂಶ ಪ್ರಸಾರವಾಗುವುದರಿಂದ ಪ್ರಸಾರ ಪರಿವೇಷಗಳು ತಲೆದೋರುತ್ತವೆ. ಈ ಪ್ರಸಾರಕಾರ್ಯ ಕಾಯಾಂತರದ ಮೂಲಕ ಅಥವಾ ನಾಡಶಿಲೆಯ ಸೂಕ್ಷ್ಮಬಿರುಕುಗಳಲ್ಲಿ ಅದುರಿನ ಅಂಶ ಶೇಖರವಾಗುವುದರ ಮೂಲಕ ಉಂಟಾಗುತ್ತದೆ. ಬಹುಮಟ್ಟಿಗೆ ಈ ಬಗೆಯ ಪರಿವೇಷಗಳು ಖನಿಜ ನಿಕ್ಷೇಪದಿಂದ ಬಹು ದೂರ ಸರಿದಿರುತ್ತದೆ. ಇವು ಸಾಮಾನ್ಯವಾಗಿ ಭೂ ಚಲನೆಗೆ ಒಳಗಾದ ಪ್ರದೇಶಗಳಲ್ಲಿ ಅಂದರೆ ಬಿರಿತ, ಸ್ತರಭಂಗ ಇವುಗಳಿಗೊಳಗಾದ ಪ್ರದೇಶಗಳಲ್ಲಿ ಮೂಲ ನಿಕ್ಷೇಪದಿಂದ ಬಹುದೂರದವರೆಗೆ (ಸುಮಾರು 500'ಗಳ ವರೆಗೂ) ಕಂಡುಬಂದಿದೆ.
ಅನುಷಂಗಿಕ ಪ್ರಸಾರ ಮಾದರಿಗಳು ಖನಿಜ ಹುದುಗಿರುವ ಭೂಭಾಗಗಳು ಶಿಥಿಲೀಕರಣಕ್ಕೊಳಗಾದ ಪ್ರದೇಶಗಳಲ್ಲಿ ಮೈದೋರುತ್ತವೆ. ಶಿಥಿಲೀಕರಣದಿಂದ ಶಿಲೆಯಲ್ಲಿನ ಖನಿಜ ಮತ್ತು ಮೂಲಧಾತುಗಳು ಹೊರಬರುವುದರಿಂದ ಅವುಗಳಲ್ಲಿ ಒಂದು ಬಗೆಯ ಪುನರ್ವಿಂಗಡಣೆ ಉಂಟಾಗಿ ಇಂಥ ಪ್ರಸಾರ ಮಾದರಿಗಳು ತಲೆದೋರುತ್ತವೆ. ಇವುಗಳ ವಿಸ್ತಾರ ಮತ್ತು ಹರಡುವಿಕೆ ಮೂಲಧಾತುಗಳ ಪ್ರಸಾರಶಕ್ತಿ ಮತ್ತು ವೇಗವನ್ನು ಅವಲಂಬಿಸಿವೆ. ಈ ವೇಗಕ್ಕೆ ಅನುಗುಣವಾಗಿ ಒಂದು ಕ್ರಮಪಟ್ಟಿಯನ್ನೇ ತಯಾರಿಸಲಾಗಿದೆ; (1) ಕಬ್ಬಿಣ, (2) ಆರ್ಸೆನಿಕ್, (3) ಸೀಸ, (4) ಚಿನ್ನ, (5) ತಾಮ್ರ, (6) ಕೊಬಾಲ್ಟ್, (7) ಸತು ಮತ್ತು (8) ಬೆಳ್ಳಿ. ಅಂದರೆ ಕಬ್ಬಿಣಕ್ಕೆ ಗರಿಷ್ಠ ಪ್ರಸಾರವೇಗವೂ ಇದ್ದಂತಾಯಿತು. ವೇಗಪರಿಮಿತಿ ಅನೇಕ ವೇಳೆ ಸುತ್ತಲಿನ ಸನ್ನಿವೇಶವನ್ನು ಕೂಡ ಅವಲಂಬಿಸಿದೆ. ಆಮ್ಲೀಯ ಸನ್ನಿವೇಶದಲ್ಲೂ, ಸಲ್ಫೈಡ್ ಖನಿಜ ಪ್ರದೇಶದಲ್ಲೂ ಮೇಲೆ ಕಾಣಿಸಿದ ಕ್ರಮಪಟ್ಟಿಗೆ ಅನುಗುಣವಾಗಿ ಖನಿಜಗಳಲ್ಲಿ ಪ್ರಸಾರವೇಗ ಪರಿಮಿತಿ ಇರುತ್ತದೆ. ಆದರೆ ಆಲ್ಕಲೈನ್, ಕ್ಲೋರೈಡ್ ಅಥವಾ ಕಾರ್ಬೊನೇಟ್ ಸನ್ನಿವೇಶಗಳಲ್ಲಿ ಈ ತೆರನಾದ ವೇಗ ಪರಿಮಿತಿ ಇರುವುದಿಲ್ಲ. ಅಲ್ಲದೆ ಈ ಬಗೆಯ ಸನ್ನಿವೇಶದಲ್ಲಿ ತಾಮ್ರ ಮತ್ತು ಬೆಳ್ಳಿಯ ವಿದ್ಯುದ್ವಾಹಿ ಕಣಗಳ ಪ್ರಸಾರವೇ ಬಹುಮಟ್ಟಿಗೆ ಕುಂಠಿತವಾಗುತ್ತದೆ.
ಭೂ ರಾಸಾಯನಿಕ ಶೋಧನೆ
[ಬದಲಾಯಿಸಿ]ಅಧ್ಯಯನ ಮಾಡುವ ವಸ್ತುವಿಗೆ ಅನುಗುಣವಾಗಿ ಮೃತ್ತಿಕಾ ಸಮೀಕ್ಷಣ, ಜಲ ಸಮೀಕ್ಷಣ ಮತ್ತು ಸಸ್ಯ ಸಮೀಕ್ಷಣ ಎಂದು ಮುಂತಾಗಿ ಕರೆಯಲಾಗಿದೆ.
- ಮೃತ್ತಿಕಾ ಸಮೀಕ್ಷಣದಲ್ಲಿ ಅನುಕೂಲವಾದ ಜಾಡನ್ನು ಮೊದಲು ಆರಿಸಿ ಆ ಜಾಡಿನುದ್ದಕ್ಕೂ ಮಣ್ಣಿನ ಮಾದರಿಗಳನ್ನು ಅಲ್ಲಲ್ಲೆ ಸಂಗ್ರಹಿಸಬೇಕು.
- ಹೀಗೆಯೇ ಜಲ ಸಮೀಕ್ಷಣದಲ್ಲಿ ಹರಿಯುವ ನೀರು ಅಥವಾ ಅಂತರ್ಜಲವನ್ನು ಒಂದು ಭೂ ಭಾಗದ ನಾನಾ ಕಡೆಗಳಿಂದ ಸಂಗ್ರಹಿಸಬೇಕು. ನೀರಿನಲ್ಲಿ ಕರಗಿ ಅಡಕವಾಗಿರುವ ಖನಿಜಾಂಶಗಳನ್ನು ಪತ್ತೆ ಹಚ್ಚಲು ಈ ಬಗೆಯ ಶೋಧನೆ ಅತ್ಯುತ್ತಮವಾದುದು.
ಹೀಗೆ ಸಂಗ್ರಹಿಸಿದ ಮಣ್ಣು, ಜಲ, ಶಿಲೆ, ಸಸ್ಯವರ್ಗ ಇವುಗಳ ಮಾದರಿಗಳನ್ನು ರಾಸಾಯನಿಕವಾಗಿ ವಿಭಜಿಸಬೇಕು. ಅತ್ಯಾಧುನಿಕ ರಾಸಾಯನಿಕ ವಿಧಾನಗಳಿಂದ ಕ್ಯಲೋರಿಮೆಟ್ರಿ, ಕ್ರೊಮಟಾಗ್ರಫಿ, ಪೊಲಾರೋಗ್ರಫಿ ಮತ್ತು ರೋಹಿತಲೇಖ (ಸ್ಪೆಕ್ಟ್ರಾಸ್ಕೊಪಿ) ಇವನ್ನು ಈ ಬಗೆಯ ಸಂಶೋಧನೆಯಲ್ಲಿ ಬಳಸಬಹುದು.
ಭೂಭೌತ ಶೋಧನೆ
[ಬದಲಾಯಿಸಿ]ಭೂಮಿಯ ಹೊರ ಚಿಪ್ಪಿನಲ್ಲಿರುವ ಶಿಲೆಗಳು ತಮ್ಮ ಸಾಂದ್ರತೆ, ಕಾಂತತೆ, ಕಾಠಿಣ್ಯ ಮತ್ತು ಸಂಕೋಚ್ಯತೆಗಳಲ್ಲಿ ಒಂದೇ ಸಮವಾಗಿರದೆ ಏರುಪೇರುಗಳನ್ನು ತೋರಿಸುತ್ತದೆ. ಸುಧಾರಿತ ಯಂತ್ರೋಪಕರಣಗಳ ಸಹಾಯದಿಂದ ಇವುಗಳಲ್ಲಿ ಹಲವಾರು ಏರುಪೇರುಗಳನ್ನು ಅಳೆದು ನಿರ್ಧರಿಸಬಹುದು. ಹೀಗೆ ದೊರೆತ ಅಂಕಿಅಂಶಗಳನ್ನು ಉಪಯೋಗಿಸಿಕೊಂಡು ಭೂಮಿಯ ಒಳಗೆ ಹುದುಗಿರುವ ಶಿಲಾ ಸಮೂಹದ ಹಲವಾರು ಗುಣಗಳನ್ನೂ, ಅವುಗಳ ತತ್ತ್ವಗಳನ್ನೂ ಅಳವಡಿಸಿಕೊಂಡಿರುವ ಶೋಧನೆಯೇ ಭೂಭೌತ ಶೋಧನೆ ಅಥವಾ ಭೂಭೌತ ಖನಿಜಾನ್ವೇಷಣೆ. ಈ ಬಗೆಯ ಅನ್ವೇಷಣೆಗೆ ಒಳಗಾದ ಭೂಭಾಗದಲ್ಲಿರುವ ಶಿಲೆಗಳ ಭೌತ ಗುಣಗಳಲ್ಲಿ ಕಂಡುಬರುವ ಗಮನಾರ್ಹವಾದ ವ್ಯತ್ಯಾಸಗಳು ಅಸಂಗತಿಗಳೆನಿಸಿಕೊಳ್ಳುತ್ತವೆ. ಭೂಭೌತ ಖನಿಜಾನ್ವೇಷಣೆಯಲ್ಲಿ ಮುಖ್ಯವಾದ ನಾಲ್ಕು ವಿಧಾನಗಳಿವೆ:
- ಕಾಂತತ್ವ ವಿಧಾನ,
- ವಿದ್ಯುದ್ವಿಧಾನ,
- ಭೂ ಕಂಪನ ವಿಧಾನ ಮತ್ತು
- ಗುರುತ್ವಾಕರ್ಷಣ ವಿಧಾನ.
ಇವುಗಳಲ್ಲಿ ಕಾಂತತ್ವ ವಿಧಾನ ಮತ್ತು ವಿದ್ಯುದ್ವಿಧಾನಗಳು ಲೋಹ ಖನಿಜಗಳ ಅನ್ವೇಷಣೆಯಲ್ಲಿ ಬಹು ಉಪಯುಕ್ತವಾದುವು. ಹಾಗೆಯೇ ಗುರುತ್ವಾಕರ್ಷಣ ವಿಧಾನಗಳು ಪೆಟ್ರೋಲಿಯಮ್ ಅನ್ವೇಷಣೆಯಲ್ಲಿ ಬಹು ಉಪಯುಕ್ತವಾದುದು. ಹೀಗೆಯೇ ಪರಮಾಣ್ವಕ ಖನಿಜಗಳ ಅನ್ವೇಷಣೆಯಲ್ಲಿ ಮತ್ತೊಂದು ಹೊಸವಿಧಾನವನ್ನೆ ಬಳಸಲಾಗಿದೆ. ಇದರಂತೆ ಖನಿಜಗಳ ವಿಕಿರಣಪಟುತ್ವವನ್ನು ಅಳೆದು ತನ್ಮೂಲಕ ಖನಿಜ ನಿಕ್ಷೇಪಗಳನ್ನು ಪತ್ತೆಮಾಡಲಾಗುವುದು.
ಕಾಂತತ್ವ ವಿಧಾನ
[ಬದಲಾಯಿಸಿ]ಕೆಲವು ಖನಿಜಗಳಿಗೆ-ಉದಾಹರಣೆಗೆ ಮ್ಯಾಗ್ನಟೈಟ್,[೪][೫] ಪಿರ್ಹೊಟೈಟ್[೬] ಮತ್ತು ಇಲ್ಮೆನೈಟ್-ಅತಿ ಹೆಚ್ಚಿನ ಕಾಂತತ್ವ ಉಂಟು. ಇವುಗಳ ಹೆಚ್ಚಿನ ಮೊತ್ತದಲ್ಲಿರುವ ಶಿಲೆಗಳು ಈ ಕಾರಣದಿಂದ ಕಾಂತತ್ವವನ್ನು ಹೆಚ್ಚಿನ ಮೊತ್ತದಲ್ಲಿ ಪ್ರದರ್ಶಿಸುತ್ತವೆ. ಹೀಗಾಗಿ ಖನಿಜಗಳಿಗಾಗಿ ಶೋಧನೆ ನಡೆಸುತ್ತಿರುವ ಪ್ರದೇಶದ ಕಾಂತಕ್ಷೇತ್ರವನ್ನು ಸರಿಯಾಗಿ ನಿರ್ಧರಿಸಿ ಗುರುತಿಸಿದಲ್ಲಿ ಅಲ್ಲಿ ಹುದುಗಿರುವ ಖನಿಜ ನಿಕ್ಷೇಪವನ್ನು ಸುಲಭವಾಗಿ ಪತ್ತೆಮಾಡಬಹುದು. ಈ ಶೋಧನೆಗೆ ಸಾಮಾನ್ಯವಾಗಿ ಅತಿ ಸರಳವಾದ ರೀತಿಯಲ್ಲಿ ರಚಿತವಾಗಿರುವ ನತಿಸೂಚಿ (ಡಿಪ್ ನೀಡ್ಲ್) ಮತ್ತು ಹೆಚ್ಚು ಕ್ಲಿಷ್ಟಕರವಾದ ರೀತಿಯಲ್ಲಿ ರಚಿತವಾಗಿರುವ ಕಾಂತತ್ವಮಾಪಿ (ಮ್ಯಾಗ್ನೆಟೊಮೀಟರ್) ಅಥವಾ ವೇರಿಯೋಮೀಟರ್ ಎಂಬ ಕಾಂತತ್ವಮಾಪಕ ಯಂತ್ರೋಪಕರಣಗಳನ್ನು ಬಳಸಲಾಗುವುದು. ಇವುಗಳ ಸಹಾಯದಿಂದ ಖನಿಜಗಳ ಕಾಂತತ್ವವನ್ನು ಅಳತೆಮಾಡಿ ನಿರ್ಧರಿಸಬಹುದು. ಹೀಗೆ ದೊರೆತ ಅಂಕಿಅಂಶಗಳನ್ನು ಉಪಯೋಗಿಸಿಕೊಂಡು ಒಂದು ಪ್ರದೇಶದ ಕಾಂತತ್ವ ನಕ್ಷೆಗಳನ್ನು ರಚಿಸಲಾಗುವುದು. ಇವುಗಳಲ್ಲಿನ ಸಮಕಾಂತತ್ವ ಕ್ಷೇತ್ರದಲ್ಲಿ ಆಗುವ ವ್ಯತ್ಯಾಸಗಳನ್ನು ಮತ್ತು ಆಗಾಗ ಕಂಡು ಬರುವ ಬಿರುಗಾಳಿಗಳನ್ನು ಅನುಸರಿಸಿ ಹಲವಾರು ಸಣ್ಣಪುಟ್ಟ ತಿದ್ದುಪಡಿಗಳನ್ನು ಮಾಡಲಾಗುವುದು. ಈಗ ಈ ಬಗೆಯ ಶೋಧನೆಗಳನ್ನು ಬಹು ತೀವ್ರಗತಿಯಲ್ಲಿ ನಡೆಸಲಾಗುತ್ತಿದೆ. ಇದಕ್ಕಾಗಿ ವಿಮಾನದಲ್ಲಿ ಅಳವಡಿಸಿರುವ ಒಂದು ವಿಶೇಷ ಕಾಂತತ್ವಮಾಪಿಯನ್ನು ಬಳಸುತ್ತಾರೆ. ಶೋಧನೆ ನಡೆಸುವ ಕ್ಷೇತ್ರದ ಮೇಲಿನ ನಿರ್ದಿಷ್ಟ ಜಾಡುಗಳಲ್ಲಿ ಇಂಥ ವಿಮಾನ ಹಾರಾಡಿ ಆ ಮೂಲಕ ಆ ಪ್ರದೇಶದ ಕಾಂತತ್ವ ನಕ್ಷೆಗಳನ್ನು ತಯಾರಿಸಲು ಅಂಕಿ ಅಂಶಗಳನ್ನು ಒದಗಿಸುತ್ತದೆ. ಇವುಗಳ ಅಧ್ಯಯನದಿಂದ ಆ ಪ್ರದೇಶದಲ್ಲಿನ ಖನಿಜ ನಿಕ್ಷೇಪಗಳನ್ನು ಗುರುತಿಸಲು ಸಾಧ್ಯವಾಗುವುದು.
ವಿದ್ಯುತ್ ವಿಧಾನಗಳು
[ಬದಲಾಯಿಸಿ]ಶಿಲೆಗಳಲ್ಲಿ ವಿದ್ಯುದ್ವಾಹಕತ್ವ ಮತ್ತು ವಿದ್ಯುನ್ನಿರೋಧಕತ್ವ ಒಂದೇ ತೆರನಾಗಿರದೆ ಒಂದರಿಂದ ಮತ್ತೊಂದಕ್ಕೆ ವ್ಯತ್ಯಾಸಗೊಳ್ಳುತ್ತವೆ. ಶಿಲೆಯ ಅಂತರ್ಗತ ಗುಣಗಳೇ ಅಲ್ಲದೆ ಅವು ಭೂಮಿಯಲ್ಲಿ ಹುದುಗಿರುವ ಆಳವೂ ಇದಕ್ಕೆ ಕಾರಣ. ಸಾಮಾನ್ಯ ಶಿಲೆಗಳಾದ ಗ್ರಾನೈಟ್, ಸೈಸ್ ಮತ್ತು ಪಾರ್ಫಿರಿಗಳಿಗಿಂತ ಲೋಹ ಖನಿಜಗಳಿಗೂ ಅದುರುಗಳಿಗೂ ಹೆಚ್ಚಿನ ಮೊತ್ತದ ವಿದ್ಯುದ್ವಾಹಕ ಶಕ್ತಿ ಉಂಟು. ಸಾಮಾನ್ಯವಾಗಿ ಸಲ್ಫೈಡ್ ಅದುರುಗಳು ಅತ್ಯುತ್ತಮ ವಿದ್ಯುದ್ವಾಹಕಗಳು ಮತ್ತು ಇವುಗಳ ನಿರೋಧಕ ಶಕ್ತಿ ಅತ್ಯಂತ ಕನಿಷ್ಠ ಮಟ್ಟದ್ದು. ಆದರೆ ಈ ವರ್ಗದ ಸ್ಫಾಲರೈಟ್ ಎಂಬ ಸತುವಿನ ಅದುರು ಮಾತ್ರ ಹೀಗಿರದೆ ಉತ್ತಮ ಬಗೆಯ ವಿದ್ಯುದ್ವಾಹಕವೆನಿಸಿಲ್ಲ.[೭] ವಿದ್ಯುದ್ವಾಹಕ ಶಕ್ತಿಯಲ್ಲಿ ಲೋಹ ಖನಿಜಗಳಿಗೂ ಅವು ಹುದುಗಿರುವ ಅಥವಾ ಅವುಗಳ ಅಕ್ಕಪಕ್ಕದಲ್ಲಿರುವ ಶಿಲೆಗಳಿಗೂ ಇರುವ ಹೆಚ್ಚಿನ ವ್ಯತ್ಯಾಸಗಳ ಆಧಾರದ ಮೇಲೆ ವಿದ್ಯುದ್ವಿಧಾನಗಳನ್ನು ರೂಪಿಸಲಾಗಿದೆ. ಕನಿಷ್ಠ ದರ್ಜೆಯ ವಿದ್ಯುನ್ನಿರೋಧಕ ಶಕ್ತಿಯ ಸಹಾಯದಿಂದ ಚಾಲ್ಕೊಪೈರೈಟ್, ಗ್ಯೆಲೀನಾ ಮತ್ತು ಪೈರೈಟ್ ಖನಿಜ ನಿಕ್ಷೇಪಗಳನ್ನು ಪತ್ತೆಮಾಡಬಹುದು. ಈ ಅನ್ವೇಷಣೆಯಲ್ಲಿ ವಿದ್ಯುಚ್ಛಕ್ತಿಯನ್ನು ಕೃತಕ ರೀತಿಯಲ್ಲಿ ನೆಲದೊಳಗೆ ಕಳುಹಿಸಲಾಗುವುದು. ಆಗ ಆ ಶಕ್ತಿಯ ಅಲೆಗಳು ಅಲ್ಲಿರುವ ವಸ್ತುಗಳ ಮೂಲಕ ವಿವಿಧ ಪರಿಮಾಣಗಳಲ್ಲಿ ಪ್ರವಹಿಸುತ್ತವೆ. ಈ ಪ್ರವಾಹ ವೇಗವನ್ನು ಸೂಕ್ತ ಯಂತ್ರಗಳ ಮೂಲಕ ಅಳೆದು ಗುರುತಿಸಲಾಗುತ್ತದೆ. ಪ್ರವಾಹ ವೇಗ ಒಂದೇ ತೆರನಾಗಿರದೆ ಖನಿಜದಿಂದ ಖನಿಜಕ್ಕೂ, ಶಿಲೆಯಿಂದ ಶಿಲೆಗೂ ವ್ಯತ್ಯಾಸಗೊಳ್ಳುತ್ತವೆಂಬುದನ್ನು ಮರೆಯಬಾರದು. ಈ ಬಗೆಯ ಪ್ರಯೋಗಗಳಲ್ಲಿ ಭೂಮಿ ಯಾವ ಬಗೆಯ ಅಡಚಣೆಯನ್ನೂ ಒಡ್ಡುವುದಿಲ್ಲ. ಆದರೆ ದಸಿಗಳ ಸಮೀಪದಲ್ಲಿ ಮಾತ್ರ ಹೆಚ್ಚಿನ ನಿರೋಧವಿರುತ್ತದೆ. ಒಟ್ಟಿನಲ್ಲಿ ವಿದ್ಯುಚ್ಛಕ್ತಿ ಪ್ರವಹಿಸಿದ ರೀತಿಯನ್ನು ಅನುಸರಿಸಿ ಉತ್ತಮ ವಾಹಕತ್ವ ಕಂಡುಬಂದ ಸ್ಥಳಗಳನ್ನು, ಕೇಂದ್ರಗಳನ್ನು ಮತ್ತು ಜಾಡನ್ನು ಆ ಭೂಭಾಗದ ನಕ್ಷೆಯ ಮೇಲೆ ನಿರ್ದೇಶಿಸಲಾಗುವುದು. ಸಲ್ಫೈಡ್ ಅದುರಿರುವ ಪ್ರದೇಶದಲ್ಲಿ ರಾಸಾಯನಿಕ ಬದಲಾವಣೆಗಳು ಸತತವಾಗಿ ಆಗುತ್ತಲೇ ಇರುತ್ತವೆ. ಖನಿಜಗಳಲ್ಲಿನ ಬಿರುಕುಗಳಲ್ಲಿ ನೀರು ಜಿನುಗಿದಾಗ ಸಲ್ಫೈಡಿಗೂ ನೀರಿಗೂ ಪರಸ್ಪರ ಸಂಪರ್ಕವುಂಟಾಗಿ ರಾಸಾಯನಿಕ ಕ್ರಿಯೆ ನಡೆದು ಸಲ್ಫೈಡ್ ಅಂಶ ಆಮ್ಲೀಕರಣಕ್ಕೊಳಗಾಗುತ್ತದೆ. ಈ ತೆರನಾದ ರಾಸಾಯನಿಕ ಕ್ರಿಯೆ ವಿದ್ಯುದಲೆಗಳನ್ನು ಪ್ರಚೋದಿಸುತ್ತದೆ.
ಹೀಗೆ ಉಂಟಾದ ಸೈಸರ್ಗಿಕ ವಿದ್ಯುತ್ಪ್ರವಾಹಗಳನ್ನು ಯಂತ್ರಗಳ ಮೂಲಕ ಗುರುತಿಸುವುದೇ ಅಲ್ಲದೆ ಆ ಅಂಶಗಳ ಆಧಾರದ ಮೇಲೆ ಹುದುಗಿರುವ ಸಲ್ಫೈಡ್ ಮುಂತಾದ ಖನಿಜ ನಿಕ್ಷೇಪಗಳನ್ನು ಗುರುತಿಸುವುದು ಕೂಡ ಸಾಧ್ಯ. ಇಂಥ ವಿದ್ಯುತ್ಪ್ರವಾಹಗಳನ್ನು ಭೂಮಿಯಲ್ಲಿ ಇತರ ರೀತಿಯಲ್ಲಿ ಉಂಟಾಗುವ ವಿದ್ಯುತ್ಪ್ರವಾಹಗಳಿಂದ ಬೇರ್ಪಡಿಸಬಹುದು. ಇವುಗಳ ಪ್ರವಾಹ ವೇಗ ಅತ್ಯಂತ ಹೆಚ್ಚಿನ ಮಟ್ಟದಲ್ಲಿರುತ್ತದೆ. ಸಲ್ಫೈಡ್ ಅದುರಿನ ನಿಕ್ಷೇಪಗಳನ್ನು ವಿದ್ಯುತ್ಕಾಂತ ವಿಧಾನಗಳಿಂದ ಕೂಡ ಗುರುತಿಸಬಹುದು. ಪರ್ಯಾಯ ವಿದ್ಯುಚ್ಛಕ್ತಿಯನ್ನು ಖನಿಜ ನಿಕ್ಷೇಪವಿರುವ ಭೂಭಾಗದೊಳಕ್ಕೆ ಕಳುಹಿಸಲಾಗುವುದು. ಅದು ಸುತ್ತ ಮುತ್ತಲ ಪ್ರದೇಶದಲ್ಲೆಲ್ಲ ವಿದ್ಯುದಲೆಗಳನ್ನು ಪ್ರವಹಿಸುತ್ತದೆ. ಹೀಗಾಗುವುದರಿಂದ ವಿದ್ಯುಚ್ಛಕ್ತಿ ನಾನಾಬಗೆಯ ಶಿಲೆಗಳ ಮೂಲಕವೂ ವಿವಿಧ ರೀತಿಯಲ್ಲಿ ಮತ್ತು ವಿವಿಧ ಮೊತ್ತದಲ್ಲಿ ಪ್ರವಹಿಸಿ ಅದಕ್ಕಾಗಿ ಸಿದ್ಧಪಡಿಸಿರುವ ಯಂತ್ರೋಪಕರಣಗಳಲ್ಲಿ ತನ್ನ ಪ್ರಯಾಣ ವೇಗವನ್ನು ಸೂಚಿಸುತ್ತದೆ. ಈ ಅಂಶಗಳನ್ನು ಉಪಯೋಗಿಸಿಕೊಂಡು ನೆಲದಲ್ಲಿ ಹುದುಗಿರುವ ಖನಿಜ ನಿಕ್ಷೇಪವನ್ನು ಗುರುತಿಸಬಹುದು. ಇದಕ್ಕೆ ಪ್ರಚೋದನ ವಿಧಾನವೆಂದು ಹೆಸರು. ಈಚಿನ ವರ್ಷಗಳಲ್ಲಿ ಈ ವಿಧಾನವನ್ನು ವಿಮಾನಗಳ ಮೂಲಕ ನಡೆಸುವ ವಿದ್ಯುತ್ಕಾಂತ ಅನ್ವೇಷಣೆಗಳಲ್ಲಿ ಬಳಸಲಾಗಿದೆ. ಹೆಲಿಕಾಪ್ಟರಿನಲ್ಲಿ ಪ್ರೇಷಣ ಸುರುಳಿಯೊಂದನ್ನು ವೃತ್ತಾಕಾರದಲ್ಲಿ ಒಯ್ದು ಖನಿಜದಿಂದ ಹೊರಬರುವ ವಿದ್ಯುಚ್ಛಕ್ತಿಯ ತೀವ್ರತೆಯನ್ನು ಅಳೆದು ನಿರ್ಧರಿಸಲಾಗುವುದು. ಈ ಬಗೆಯ ತೀವ್ರತೆ ಖನಿಜದಿಂದ ಖನಿಜಕ್ಕೆ, ಶಿಲೆಯಿಂದ ಶಿಲೆಗೆ ವ್ಯತ್ಯಾಸ ಹೊಂದುತ್ತದೆಂಬುದನ್ನು ಮರೆಯಬಾರದು.
ಭೂಕಂಪ ವಿಧಾನ
[ಬದಲಾಯಿಸಿ]ಖನಿಜ ನಿಕ್ಷೇಪಕ್ಕಾಗಿ ಅನ್ವೇಷಣೆ ನಡೆಸುವ ಭೂಭಾಗದಲ್ಲಿ ಸ್ಫೋಟನವನ್ನುಂಟುಮಾಡಿ ಆಗ ಉಂಟಾದ ಕಂಪನಗಳು ಸುತ್ತಮುತ್ತಲ ಶಿಲಾವರ್ಗಗಳಲ್ಲಿ ಹಾದುಹೋಗುವಂತೆ ಮಾಡಲಾಗುವುದು. ಈ ಕಂಪನಗಳು ವಿವಿಧ ಶಿಲೆಗಳಲ್ಲಿ ಒಂದೇ ವೇಗದಲ್ಲಿ ಪ್ರವಹಿಸಿವುದಿಲ್ಲ. ಪ್ರವಾಹ ವೇಗ ಒಂದು ಶಿಲೆಯಿಂದ ಮತ್ತೊಂದು ಶಿಲೆಗೆ ವ್ಯತ್ಯಾಸಗೊಳ್ಳುತ್ತದೆ. ಅಲೆಗಳು ಕೇಂದ್ರದಿಂದ ನೇರವಾಗಿ ಪ್ರವಹಿಸದೆ ವಕ್ರಮಾರ್ಗದಲ್ಲಿ ಹಾದು ನೆಲದ ಮೇಲಿರುವ ಭೂಕಂಪಲೇಖಿಯಲ್ಲಿ (ಸೀಸ್ಮೋಗ್ರಾಫ್) ತಮ್ಮ ಪ್ರವಾಹ ವೇಗವನ್ನು ಸೂಚಿಸುತ್ತವೆ. ಸ್ಫೋಟನೆಯುಂಟಾದ ನಿರ್ದಿಷ್ಟ ಕಾಲಯಂತ್ರಕ್ಕೆ ಲಗತ್ತಾಗಿರುವ ಸದಾ ಚಲಿಸುತ್ತಿರುವ ಚಿಕ್ಕ ಪೀಪಾಯಿಯ (ಡ್ರಂ) ಮೇಲಿನ ಫೋಟೋಗ್ರಾಫಿಕ್ ಕಾಗದದ ಮೇಲೆ ಗುರುತಿಸಲ್ಪಡುವುದು. ಹೀಗೆ ಯಂತ್ರವನ್ನು ಮೊದಲ ಕಂಪನ ಮುಟ್ಟಿದ ಕಾಲವೂ ಗುರುತಿಸಲ್ಪಡುತ್ತದೆ. ಇವುಗಳ ಸಹಾಯದಿಂದ ಖನಿಜ ನಿಕ್ಷೇಪ ನೆಲದೊಳಗೆ ಹುದುಗಿರುವ ಸ್ಥಳವನ್ನೂ ಅದರ ಗಾತ್ರ ಮತ್ತು ಆಕಾರಗಳನ್ನೂ ನಿರ್ಧರಿಸಬಹುದು. ಈ ವಿಧಾನದ ಮೂಲತತ್ತ್ವವನ್ನು ಚಿತ್ರದಲ್ಲಿ ಕಾಣಬಹುದು. ಇವುಗಳಲ್ಲಿ ಪ್ರತಿಫಲನ ವಿಧಾನ ಮತ್ತು ರಿಫ್ರೇಕ್ಷಣ ವಿಧಾನ ಎಂದು ಎರಡು ಬಗೆ. ಪ್ರತಿಫಲನ ವಿಧಾನವನ್ನು ಬಹುಮಟ್ಟಿಗೆ ಪೆಟ್ರೋಲಿಯಮ್ ಅನ್ವೇಷಣೆಯಲ್ಲಿ ಬಳಸಲಾಗುತ್ತಿದೆ. ಅಲ್ಲದೆ ನೆಲದೊಳಗಿನ ರಚನೆಯನ್ನು ನಿರ್ಧರಿಸಲು ಸಹ ಈ ವಿಧಾನ ಹೆಚ್ಚು ಉಪಯೋಗಕರವಾದುದು. ರಿಫ್ರೇಕ್ಷಣ ವಿಧಾನ ನೆಲಭಾಗದಲ್ಲಿನ ಶಿಲಾಪದರಗಳ ದಪ್ಪವನ್ನು ಅಳತೆ ಮಾಡುವುದರಲ್ಲೂ, ಸಾಗರಗಳ ಆಳದ ನಿರ್ಧಾರದಲ್ಲೂ, ಶೀತವಲಯದಲ್ಲಿರುವ ನೀರ್ಗಲ್ಲಿನ ಹಾಳೆಗಳ ಹರವು ಮತ್ತು ದಪ್ಪವನ್ನು ಗೊತ್ತುಪಡಿಸುವುದಕ್ಕೂ ಬಹು ಉಪಯುಕ್ತವಾದುದು.
ಗುರುತ್ವಾಕರ್ಷಣ ವಿಧಾನ
[ಬದಲಾಯಿಸಿ]ಭೂಮಿಯ ವಿವಿಧ ಭಾಗಗಳಲ್ಲಿ ಗುರುತ್ವ ಬಲವನ್ನು ಅಳತೆ ಮಾಡಿದಲ್ಲಿ ಹಲವಾರು ಏರುಪೇರುಗಳು ಕಂಡುಬರುತ್ತವೆ. ಇವು ಮುಖ್ಯವಾಗಿ ಅಕ್ಷಾಂಶವನ್ನೂ, ಭೂಮಿಯ ಮೇಲ್ಮೈ ಲಕ್ಷಣವನ್ನೂ, ನೆಲಭಾಗದ ಸಂಯೋಜನೆಯನ್ನೂ ಅನುಸರಿಸಿದೆ. ಇದೇ ಅಲ್ಲದೆ ಭೂಭಾಗದ ಉತ್ತರ ಪ್ರದೇಶಗಳಲ್ಲಿ ಹುದುಗಿರುವ ವಿವಿಧ ಸಾಂದ್ರತೆಯುಳ್ಳ ಶಿಲೆಗಳ ಹರವಿನಲ್ಲಿಯ ಏರುಪೇರುಗಳಿಂದ ಸಹ ಗುರುತ್ವ ಬಲದಲ್ಲಿ ವ್ಯತ್ಯಾಸಗಳು ತೋರಿಬರುತ್ತವೆ. ಈ ಅಂಶಗಳನ್ನು ಉಪಯೋಗಿಸಿಕೊಂಡು ನೆಲದಲ್ಲಿ ಹುದುಗಿರುವ ಶಿಲೆಗಳಿಗೆ ಸಂಬಂಧಿಸಿದ ಅಂಶಗಳನ್ನೂ, ಅವು ಹರಡಿರುವ ರೀತಿಯನ್ನೂ ಗ್ರಹಿಸಲು ಸಾಧ್ಯ. ಶಿಲೆಗಳು ಮಡಿಕೆ ಬಿದ್ದಾಗ ಹೆಚ್ಚು ಸಾಂದ್ರತೆಯನ್ನು ಪಡೆದಿರುವ ಶಿಲೆಗಳು ಮೇಲಕ್ಕೆ ಒಯ್ಯಲ್ಪಡುವುದೂ ಉಂಟು. ಅಂತೆಯೇ ಹಗುರವಾದ (ಕಡಿಮೆ ಸಾಂದ್ರತೆಯುಳ್ಳ) ಶಿಲೆಗಳು ಹೆಚ್ಚಿನ ಆಳಕ್ಕೆ ನೂಕಲ್ಪಡುತ್ತವೆ. ಲವಣಗುಮ್ಮಟ (ಸಾಲ್ಟ್ ಡೋಂ) ಅಥವಾ ಜ್ವಾಲಾಮುಖಿ ಅಡಚಣೆಗಳಿರುವ (ವಾಲ್ಕ್ಯಾನಿಕ್ ಪ್ಲಗ್) ಪ್ರದೇಶಗಳಲ್ಲಿ ಸಹ ಗುರುತ್ವ ಬಲದಲ್ಲಿ ಏರುಪೇರುಗಳನ್ನು ಕಾಣಬಹುದು. ಶಿಲಾಪ್ರಸ್ತರಗಳಲ್ಲಿ ಬಿರುಕಾಗಲೀ ಭಂಗವಾಗಲೀ ಉಂಟಾದಾಗ ಸನ್ನಿವೇಶದಲ್ಲಿ ವಿವಿಧ ಸಾಂದ್ರತೆಗಳ ಶಿಲೆಗಳು ಒಂದರ ಪಕ್ಕಕ್ಕೊಂದು ಸರಿದು ನಿಲ್ಲುತ್ತದೆ. ಗುರುತ್ವಮಾಪಕ ಇಲ್ಲವೇ ಗ್ರ್ಯಾವಿಮೀಟರ್ ಮೊದಲಾದ ಉಪಕರಣಗಳ ಸಹಾಯದಿಂದ ಒಂದು ಭೂಭಾಗದ ನಿರ್ದಿಷ್ಟ ಕೇಂದ್ರಗಳಲ್ಲಿ ಗುರುತ್ವ ಬಲವನ್ನು ಅಳೆಯಲಾಗುವುದು. ಈ ಅಂಕಿ-ಅಂಶಗಳನ್ನು ಉಪಯೋಗಿಸಿಕೊಂಡು ಆ ಪ್ರದೇಶಕ್ಕೆ ಸಂಬಂಧಿಸಿದಂತೆ ನಕ್ಷೆಗಳನ್ನು ತಯಾರಿಸಲಾಗುವುದು. ಇವುಗಳ ಅಧ್ಯಯನದಿಂದ ಆ ಭೂಭಾಗದಲ್ಲಿ ಹುದುಗಿರುವ ಖನಿಜ ನಿಕ್ಷೇಪಗಳ ವಿಷಯವಾಗಿ ಹೆಚ್ಚು ಅಂಶಗಳನ್ನು ಗ್ರಹಿಸಲಾಗುವುದು. ಗುರುತ್ವ ಬಲವನ್ನು ಮಿಲಿಗಾಲುಗಳಲ್ಲಿ ವಿವರಿಸಲಾಗುವುದು.[೮][೯][೧೦] ಒಂದು ಮಿಲಿಗಾಲ್ ಅಂದರೆ ಭೂಮಿಯ ಸಾಮಾನ್ಯ ಗುರುತ್ವ ಬಲದ ಮಿಲಿಯನ್ ವಿಭಾಗಗಳಲ್ಲಿ ಒಂದಂಶ. ಭೂಶೋಧನೆಗಳಿಗೆ ಸಂಬಂಧಿಸಿದ ಗುರುತ್ವ ಅಸಂಗತಿಗಳು ಸಾಮಾನ್ಯವಾಗಿ ಗಾತ್ರದಲ್ಲಿ 10 ಮಿಲಿಗಾಲುಗಳಿಗಿಂತ ಹೆಚ್ಚಾಗಿರಲಾರದು.
ಪರಮಾಣ್ವಕ ಖನಿಜಗಳು
[ಬದಲಾಯಿಸಿ]ವಿಕಿರಣಪಟು ಖನಿಜಗಳು ಆಲ್ಫ, ಬೀಟ ಮತ್ತು ಗ್ಯಾಮ ಕಿರಣಗಳನ್ನು ಹೊರಸೂಸುತ್ತವೆ. ಇವುಗಳಲ್ಲಿ ಗ್ಯಾಮ ಕಿರಣಗಳು ಪರಮಾಣ್ವಕ ಖನಿಜ ಇರುವುದೆಂಬುದನ್ನು ಪತ್ತೆ ಹಚ್ಚಲು ಬಹು ಉತ್ತಮ ಸಾಧನ. ಇವುಗಳ ಸಹಾಯದಿಂದ ಶಿಲೆಯಲ್ಲಿ ಹುದುಗಿರುವ ಖನಿಜವನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಈ ಬಗೆಯ ಅನ್ವೇಷಣೆಯಲ್ಲಿ ಬಳಸುವ ಆಧುನಿಕ ಯಂತ್ರೋಪಕರಣಗಳಲ್ಲಿ ಅತಿ ಸೂಕ್ಷ್ಮಸಾಧನಗಳಾದ ವಿದ್ಯುದ್ವಾಹಿಕಣ ಪರಿವರ್ತನ ಕೋಶ, ಗೀಗರ್ ಮುಲ್ಲರ್ ಗುಣಕ ಮುಂತಾದವು ಅಡಕವಾಗಿದ್ದು, ಗ್ಯಾಮ ಕಿರಣಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ.[೧೧] ಈ ಪ್ರಯೋಗಗಳನ್ನು ನೆಲದ ಮೇಲಾಗಲೀ, ನೀರಿನಲ್ಲಾಗಲೀ, ಭೂರಂಧ್ರಗಳಲ್ಲಾಗಲೀ ಪ್ರಯೋಗ ಶಾಲೆಯಲ್ಲೇ ಶಿಲೆ ಅಥವಾ ಮಣ್ಣಿನ ಮಾದರಿಗಳ ಮೇಲಾಗಲೀ ಪ್ರಯೋಗಿಸಬಹುದು.
ಉಪಸಂಹಾರ
[ಬದಲಾಯಿಸಿ]ಒಟ್ಟಿನಲ್ಲಿ ಭೂಭೌತಶಾಸ್ತ್ರದ ಅನ್ವೇಷಣ ವಿಧಾನಗಳು ಗಣಿಗಳನ್ನು ರೂಢಿಸುವುದರಲ್ಲಿ, ಖನಿಜ ನಿಕ್ಷೇಪಗಳು ಹುದುಗಿರುವ ಸ್ಥಳವನ್ನು ನಿರ್ದೇಶಿಸುವುದರಲ್ಲಿ, ಭೂಮಿಯ ಒಳಗಿನ ಶಿಲಾವಿನ್ಯಾಸವನ್ನು ಅರ್ಥ ಮಾಡಿಕೊಳ್ಳುವುದರಲ್ಲಿ, ವಿವಿಧ ಶಿಲಾ ನಿಕ್ಷೇಪಗಳಿಗಿರುವ ಸಂಬಂಧವನ್ನು ಗುರುತಿಸುವುದರಲ್ಲಿ ಬಹು ಉಪಯುಕ್ತವಾದ ಪಾತ್ರವನ್ನು ವಹಿಸುತ್ತವೆ. ಹೀಗೆ ಖನಿಜಾನ್ವೇಷಣ ಒಂದು ದೇಶದ ಹಿರಣ್ಯಗರ್ಭವನ್ನು ರೂಢಿಸಿಕೊಳ್ಳುವುದರಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ. ಅನ್ವೇಷಣ ಮಾರ್ಗಗಳನ್ನು ಆಧುನಿಕವಾಗಿ ಸುಧಾರಿಸಿದ ಹೊರತು ಆಳದಲ್ಲಿ ಹುದುಗಿರುವ ಪ್ರಕೃತಿಯ ಅತುಲೈಶ್ವರ್ಯ ಮಾನವನಿಗೆ ದಕ್ಕಲಾರದು.
ಉಲ್ಲೇಖಗಳು
[ಬದಲಾಯಿಸಿ]- ↑ Hustrulid, William Andrew. "prospecting". Encyclopedia Britannica, 19 Aug. 2021, https://www.britannica.com/technology/prospecting-mining. Accessed 22 August 2024.
- ↑ "prospecting ." The Columbia Encyclopedia, 6th ed.. . Encyclopedia.com. 15 Aug. 2024 <https://www.encyclopedia.com>.
- ↑ Cranstone, Donald et al. "Prospecting". The Canadian Encyclopedia, 08 June 2015, Historica Canada. www.thecanadianencyclopedia.ca/en/article/prospecting. Accessed 22 August 2024.
- ↑ Hurlbut, Cornelius Searle; W. Edwin Sharp; Edward Salisbury Dana (1998). Dana's minerals and how to study them. John Wiley and Sons. pp. 96. ISBN 978-0-471-15677-2.
- ↑ Wasilewski, Peter; Günther Kletetschka (1999). "Lodestone: Nature's only permanent magnet - What it is and how it gets charged". Geophysical Research Letters. 26 (15): 2275–78. Bibcode:1999GeoRL..26.2275W. doi:10.1029/1999GL900496. S2CID 128699936.
- ↑ Sagnotti, L., 2007, Iron Sulfides; in: Encyclopedia of Geomagnetism and Paleomagnetism; (Editors David Gubbins and Emilio Herrero-Bervera), Springer, 1054 pp., p. 454-459.
- ↑ Deng, Jiushuai; Lai, Hao; Chen, Miao; Glen, Matthew; Wen, Shuming; Zhao, Biao; Liu, Zilong; Yang, Hua; Liu, Mingshi; Huang, Lingyun; Guan, Shiliang; Wang, Ping (June 2019). "Effect of iron concentration on the crystallization and electronic structure of sphalerite/marmatite: A DFT study". Minerals Engineering. 136: 168–174. Bibcode:2019MiEng.136..168D. doi:10.1016/j.mineng.2019.02.012. S2CID 182111130.
- ↑ Barry N. Taylor, Guide for the Use of the International System of Units (SI), 1995, NIST Special Publication 811, Appendix B.
- ↑ BIPM SI brochure, 8th ed. 2006, Table 9: Non-SI units associated with the CGS and the CGS-Gaussian system of units Archived 2007-10-18 ವೇಬ್ಯಾಕ್ ಮೆಷಿನ್ ನಲ್ಲಿ..
- ↑ Some sources, such as the University of North Carolina Archived 2012-02-18 ವೇಬ್ಯಾಕ್ ಮೆಷಿನ್ ನಲ್ಲಿ., the European Space Agency, and ConversionTables.com Archived 2009-05-19 ವೇಬ್ಯಾಕ್ ಮೆಷಿನ್ ನಲ್ಲಿ. state that the unit name is "galileo". The NIST and the BIPM are here considered as more authoritative sources regarding the proper unit name.
- ↑ ’’Geiger Muller Tubes; issue 1’’ published by Centronics Ltd, UK.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Prospecting in Tasmania Archived 2019-08-21 ವೇಬ್ಯಾಕ್ ಮೆಷಿನ್ ನಲ್ಲಿ.
- Prospecting in Nova Scotia
- Prospecting in Northwestern Ontario
- Historical pictures of prospectors and the Gold Rush
- Prospecting in the West Archived 2009-05-24 ವೇಬ್ಯಾಕ್ ಮೆಷಿನ್ ನಲ್ಲಿ.
- Prospecting in Indonesia