ಗ್ರಾನೈಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗ್ರಾನೈಟ್ - ಸಾಮಾನ್ಯವಾಗಿ ಎಲ್ಲೆಲ್ಲೂ ದೊರೆಯುವ ಅಗ್ನಿಶಿಲೆ, ನಮ್ಮ ಸುತ್ತಮುತ್ತ ಕಾಣುವ ಬಿಳುಪು ಅಥವಾ ಕೆಂಪು ಛಾಯೆಯ ಬಂಡೆಗಳಾಕಾರದಲ್ಲಿ ನೆಲದ ಮೇಲೆ ಎದ್ದು ನಿಂತಿರುವ ಕಲ್ಲು. ಇದರ ಚಪ್ಪಡಿಗಳನ್ನು ಎಬ್ಬಿಸುವುದಕ್ಕೆ ಬೆಂಕಿಯನ್ನು ಉಪಯೋಗಿಸುವುದರಿಂದ ಇದಕ್ಕೆ ಸುಟ್ಟುಗಲ್ಲು ಎಂಬ ಹೆಸರು ವಾಡಿಕೆಯಲ್ಲಿದೆ.

ಗ್ರಾನೈಟ್ ಶಿಲೆ
ಗ್ರಾನೈಟ್ ಶಿಲೆ- ಹತ್ತಿರದಿಂದ ನೋಡಿದಾಗ

ರಚನೆ[ಬದಲಾಯಿಸಿ]

ಈ ಬಗೆಯ ಕಲ್ಲು ಭೂಮಿಯ ಒಳಗೆ ಅತಿ ಉಷ್ಣದ ಫಲವಾಗಿ ರೂಪುಗೊಳ್ಳುವುದರಿಂದ ಹರಳು ಹರಳಾಗಿರುವುದು. ಸಾಮಾನ್ಯವಾಗಿ ಆರ್ಥೋಕ್ಲೇಸ್, ಪ್ಲೇಜಿಯೋಕ್ಲೇಸ್, ಕ್ವಾಟ್ರ್ಸ್, ಹಾರ್ನ್‍ಬ್ಲೆಂಡ್ ಮತ್ತು ಬಯೊಟೈಟ್ ಖನಿಜಗಳು. ಗ್ರಾನೈಟಿನಲ್ಲಿ ಮುಖ್ಯವಾಗಿ ಸೇರಿರುತ್ತದೆ. ಅದಕ್ಕೂ ಕಡಿಮೆ ಪ್ರಮಾಣದಲ್ಲಿ ಮ್ಯಾಗ್ನೆಟೈಟ್, ಅಪೆಟೈಟ್, ಗಾರ್ನೆಟ್‍ಗಳೂ ಇರಬಹುದು. ಕಪ್ಪು ಬಣ್ಣದ ಖನಿಜಗಳಾದ ಹಾರ್ನ್‍ಬ್ಲೆಂಡ್ ಬಯೋಟೈಟ್ (ಕರಿ ಅಭ್ರಕ) ಇವು ಹೆಚ್ಚಿದ್ದರೆ ಕಲ್ಲು ಕಪ್ಪು ಛಾಯೆ ಪಡೆಯುತ್ತದೆ. ಫೆಲ್ಡ್ಸ್‍ಪಾರ್ ಖನಿಜ ಕೆಂಪು ಬಣ್ಣದ್ದಾಗಿದ್ದರೆ ಕಲ್ಲಿಗೆ ಕೆಂಪು ಛಾಯೆ ಬರುವುದು. ರಾಮನಗರ ಬಳಿ ದೊರೆಯುವ ಗ್ರಾನೈಟ್ ಕಲ್ಲು ತಿಳಿ ಬೂದು ಬಣ್ಣದ್ದು.

ವ್ಯುತ್ಪತ್ತಿ[ಬದಲಾಯಿಸಿ]

ಗ್ರಾನೈಟ್ ಪದದ ಮೂಲ ಲ್ಯಾಟಿನ್ನಿನ ಗ್ರಾನಮ್. ಅಲ್ಲಿ ಇದರ ಅರ್ಥ ಕಣ. ಕಣಕಣ ಒಟ್ಟುಗೂಡಿ ಹರಳು ಹರಳುಗಳಾಗಿ ಕಲ್ಲು ರೂಪುಗೊಂಡಿರುವುದರಿಂದ ಈ ಕಲ್ಲಿಗೆ ಗ್ರಾನೈಟ್ ಎಂದು ಹೆಸರು ಬಂದಿದೆ.

ಉಪಯೋಗ[ಬದಲಾಯಿಸಿ]

ಗ್ರಾನೈಟ್ ಅತ್ಯುತ್ತಮವಾದ ಕಟ್ಟಡ ಕಲ್ಲು. ಬಹುಕಾಲ ಬಾಳುವಂಥದ್ದು.

ಕರ್ನಾಟಕದಲ್ಲಿ ಗ್ರಾನೈಟ್[ಬದಲಾಯಿಸಿ]

ಗ್ರಾನೈಟ್ ಬೃಹದಾಕಾರದ ಶಿಲಾ ಸಮೂಹಗಳಾಗಿ ಕಂಗೊಳಿಸುತ್ತದೆ. ನಂದಿಬೆಟ್ಟ, ಸಾವನದುರ್ಗ, ಶಿವಗಂಗೆ ಚಾಮುಂಡಿ - ಈ ಬೆಟ್ಟಗಳಲ್ಲೆಲ್ಲ ಪೂರ್ತಿ ಗ್ರಾನೈಟಿನಿಂದ ರೂಪಿತವಾದವು. ಭೂಚರಿತ್ರೆಯ ಎಲ್ಲ ಕಾಲಗಳಲ್ಲಿಯೂ ಭೂಮಿಯ ಹೊರಪದರವನ್ನು ಭೇದಿಸಿ ಗ್ರಾನೈಟ್ ಹೊರಬಂದಿರುವುದು ಕಾಣುತ್ತದೆ. ಆದರೆ ವಿಶೇಷವಾಗಿ ಕಾಣುವುದು ಅತಿ ಪ್ರಾಚೀನವಾದ ಪ್ರೀಕೇಂಬ್ರಿಯನ್ ಯುಗದ ಶಿಲೆಗಳಲ್ಲಿ ಮಾತ್ರ. ಬೆಂಗಳೂರು ಸುತ್ತಮುತ್ತ ಕಾಣುವ ಗ್ರಾನೈಟ್ ಕಲ್ಲು ಸುಮಾರು ಮೂರು ಸಾವಿರ ಮಿಲಿಯನ್ ವರ್ಷಗಳಷ್ಟು ಹಳೆಯದು. ಕರ್ನಾಟಕ ರಾಜ್ಯದ ಬಹುಭಾಗ ಗ್ರಾನೈಟ್ ಸಂಬಂಧವಾದ ಶಿಲೆಗಳಿಂದ ಆವೃತವಾಗಿದೆ. ಈ ಕಲ್ಲನ್ನು ಕಟ್ಟಡಕ್ಕಾಗಿ ನಾನಾ ರೀತಿಯಲ್ಲಿ ಉಪಯೋಗಿಸುತ್ತಾರೆ. ಸೈಜುಕಲ್ಲಾಗಿ, ಚಪ್ಪಡಿಗಳಾಗಿ, ಕಲ್ಲುಕಂಬಗಳಾಗಿ, ಜಲ್ಲಿಯಾಗಿ ಇದರ ಉಪಯೋಗ ಉಂಟು.


ಕರ್ನಾಟಕದಲ್ಲಿ ಗ್ರಾನೈಟ್‍ ರಚನೆಗಳು[ಬದಲಾಯಿಸಿ]

ಸಾವಿರ ವರ್ಷ ಕಳೆದರೂ ಈಗಲೂ ಹೊಚ್ಚ ಹೊಸದಾಗಿ ಕಾಣಿಸುವ ಗೊಮ್ಮಟನ ಮಹಾಮೂರ್ತಿ ಗ್ರಾನೈಟ್ ಕಲ್ಲಿನಿಂದ ಕಡೆದದ್ದು. ಹಂಪೆಯ ದೇವಸ್ಥಾನಗಳು ಕಲಾಕೃತಿಗಳು ಗ್ರಾನೈಟ್‍ನಿಂದ ರೂಪಿತವಾದವು. ವಿಧಾನಸೌಧ ರಚಿತವಾಗಿರುವುದು ಮಲ್ಲಸಂದ್ರ ಮತ್ತು ದೊಡ್ಡ ಬಳ್ಳಾಪುರದ ಬಳಿ ದೊರೆಯುವ ಗ್ರಾನೈಟ್ ಕಲ್ಲಿನಿಂದ.


ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: