ನೀರ್ಗಲ್ಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಮುದ್ರದಲ್ಲಿ ತೇಲಿಬರುವ ಬಂಡೆಗಾತ್ರದ ಮಂಜುಗಡ್ಡೆಗಳನ್ನು ನೀರ್ಗಲ್ಲುಗಳೆಂದು ಕರೆಯುತ್ತಾರೆ. ಹಿಮನದಿಗಳಿಂದಲೋ ಧ್ರುವಪ್ರದೇಶಗಳಿಂದಲೋ ಮುರಿದುಕೊಂಡು ತೇಲಿಬರುವ ಸಿಹಿನೀರಿನ ಮಂಜುಗಡ್ಡೆಗಳಿವು.

ನೀರಿಗೋ ಜ್ಯೂಸಿಗೋ ಮತ್ತೊಂದಕ್ಕೋ ಹಾಕಿದ ಮಂಜುಗೆಡ್ಡೆ ತೇಲುವುದು ನಮಗೆಲ್ಲ ಗೊತ್ತೇ ಇದೆ; ಮಂಜುಗಡ್ಡೆ ಹಾಗೂ ನೀರಿನ ಸಾಂದ್ರತೆಗಳಲ್ಲಿ ವ್ಯತ್ಯಾಸವಿರುವುದು ಇದಕ್ಕೆ ಕಾರಣ. ನೀರ್ಗಲ್ಲುಗಳು ಸಮುದ್ರದಲ್ಲಿ ತೇಲುವುದೂ ಇದೇ ಕಾರಣದಿಂದ. ಆದರೆ ಹಾಗೆ ತೇಲುವಾಗ ಅವುಗಳ ಹತ್ತನೇ ಒಂದು ಭಾಗ ಮಾತ್ರ ನೀರಿನಿಂದ ಮೇಲಿರುತ್ತದೆ. ಫ್ರಿಜ್ಜಿನಲ್ಲಿ ನೀರಿಟ್ಟು ಐಸ್‌ಕ್ಯೂಬ್ ತಯಾರಿಸಿದಂತೆ ಐಸ್‌ಬರ್ಗ್ ಅನ್ನು ಯಾರೂ ತಯಾರಿಸಿರುವುದಿಲ್ಲವಲ್ಲ! ಹಾಗಾಗಿ ನೀರ್ಗಲ್ಲಿನ ನೀರಿನಡಿಯ ಭಾಗ ಯಾವ ಆಕಾರದಲ್ಲಿದೆಯೆಂದಾಗಲೀ ಎಷ್ಟು ದೊಡ್ಡದಿದೆಯೆಂದಾಗಲೀ ಪತ್ತೆಮಾಡುವುದು ಕಷ್ಟ. ಹೀಗಾಗಿಯೇ ಸಣ್ಣದಾಗಿ ಶುರುವಾಗುವ ದೊಡ್ಡ ಸಮಸ್ಯೆಗಳನ್ನು 'ನೀರ್ಗಲ್ಲಿನ ತುದಿ' ಅಥವಾ 'ಟಿಪ್ ಆಫ್ ದಿ ಐಸ್‌ಬರ್ಗ್' ಎಂದು ಗುರುತಿಸುತ್ತಾರೆ.

ಅಟ್ಲಾಂಟಿಕ್ ಸಾಗರದಲ್ಲಿ ಕಾಣಿಸಿಕೊಳ್ಳುವ ಬಹುತೇಕ ನೀರ್ಗಲ್ಲುಗಳ ಮೂಲ ಗ್ರೀನ್‌ಲ್ಯಾಂಡಿನ ಹಿಮನದಿಗಳು. ಇವುಗಳಲ್ಲಿನ ಹಿಮ ಗ್ರೀನ್‌ಲ್ಯಾಂಡ್ ಕರಾವಳಿ ತಲುಪಿದಾಗ ಚೂರುಗಳಾಗಿ ಒಡೆದು ನೀರ್ಗಲ್ಲುಗಳನ್ನು ರೂಪಿಸುತ್ತದೆ.

ನೂರು ವರ್ಷಗಳ ಹಿಂದೆ ಟೈಟಾನಿಕ್ ದುರಂತಕ್ಕೆ ಕಾರಣವಾದದ್ದು ಇಂತಹುದೇ ಒಂದು ನೀರ್ಗಲ್ಲು.