ಟೈಟಾನಿಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಟೈಟಾನಿಕ್ ಹಡಗು
ಟೈಟಾನಿಕ್ ಹಡಗು

ಟೈಟಾನಿಕ್ - ೧೯೧೨ರಲ್ಲಿ ಇಂಗ್ಲೆಂಡಿನ ಸೌತ್‌ಹ್ಯಾಂಪ್ಟನ್‌ನಿಂದ ಅಮೆರಿಕಾದ ನ್ಯೂಯಾರ್ಕ್‌ಗೆ ಹೊರಟು, ತನ್ನ ಮೊದಲ ಯಾನದಲ್ಲೇ ಅಪಘಾತಕ್ಕೀಡಾಗಿ ಮುಳುಗಿಹೋದ ಬೃಹತ್ ಹಡಗು. 'ಮುಳುಗಲಾರದ ಹಡಗು' ಎಂದು ಭಾರೀ ಪ್ರಚಾರ ಪಡೆದು ವಿಶ್ವಪ್ರಖ್ಯಾತವಾಗಿದ್ದ ಟೈಟಾನಿಕ್‌ನ ದಾರುಣ ಅಂತ್ಯ ಮಾನವ ಇತಿಹಾಸದ ಅತ್ಯಂತ ಭೀಕರ ದುರ್ಘಟನೆಗಳಲ್ಲೊಂದು.

'ವೈಟ್ ಸ್ಟಾರ್ ಲೈನ್' ಎಂಬ ಸಾರಿಗೆ ಸಂಸ್ಥೆಯ ಒಡೆತನದಲ್ಲಿದ್ದ ಟೈಟಾನಿಕ್ ಅನ್ನು ಬೆಲ್‌ಫಾಸ್ಟ್‌ನ ಹಾರ್ಲಂಡ್ ಅಂಡ್ ವುಲ್ಫ್ ಎಂಬ ಸಂಸ್ಥೆ ನಿರ್ಮಿಸಿತ್ತು. ಆ ಸಮಯದ ಅತ್ಯಂತ ದೊಡ್ಡ ಹಾಗೂ ವೈಭವೋಪೇತ ಹಡಗುಗಳಲ್ಲಿ ಟೈಟಾನಿಕ್ ಅಗ್ರಸ್ಥಾನ ಪಡೆದಿತ್ತು. ಇಷ್ಟು ಭರ್ಜರಿಯಾಗಿದ್ದ ಹಡಗು ಮುಳುಗುವುದು ಅಸಾಧ್ಯವೆಂದೇ ಎಲ್ಲರ ಭಾವನೆಯಾಗಿತ್ತು.

ತನ್ನ ಮೊದಲ ಯಾನದಲ್ಲಿ ನ್ಯೂಯಾರ್ಕ್‌ಗೆ ತೆರಳುತ್ತಿದ್ದ ಟೈಟಾನಿಕ್ ೧೯೧೨ರ ಏಪ್ರಿಲ್ ೧೪ - ೧೫ರ ಮಧ್ಯರಾತ್ರಿ ನ್ಯೂಫೌಂಡ್‌ಲ್ಯಾಂಡಿನ ತೀರದಿಂದ ಸುಮಾರು ೬೪೦ ಕಿಲೋಮೀಟರ್ ದಕ್ಷಿಣದಲ್ಲಿ ನೀರ್ಗಲ್ಲೊಂದಕ್ಕೆ ಡಿಕ್ಕಿ ಹೊಡೆಯಿತು. ನೀರ್ಗಲ್ಲು ಅಪ್ಪಳಿಸಿದ ಮೂರು ಗಂಟೆಗಳೊಳಗೆಯೇ, ಏಪ್ರಿಲ್ ೧೫ರ ಮುಂಜಾನೆ ೨.೨೦ರ ಸಮಯದಲ್ಲಿ ಟೈಟಾನಿಕ್ ಸುಮಾರು ೧೫೦೦ ಪ್ರಯಾಣಿಕರೊಡನೆ ಸಂಪೂರ್ಣವಾಗಿ ಮುಳುಗಿಹೋಯಿತು.

ಟೈಟಾನಿಕ್‌ನಲ್ಲಿದ್ದ ಸುಮಾರು ೨೨೨೦ ಪ್ರಯಾಣಿಕರಲ್ಲಿ ೧೭೦೦ ಜನರಿಗೆ ಮಾತ್ರ ಸಾಲುವಷ್ಟು ಲೈಫ್ ಬೋಟುಗಳಿದ್ದದ್ದು ಈ ದುರಂತವನ್ನು ಮತ್ತಷ್ಟು ಘೋರವನ್ನಾಗಿಸಿತು. ಅಲ್ಲಿ ಲಭ್ಯವಿದ್ದ ಕೆಲವೇ ಲೈಫ್ ಬೋಟುಗಳನ್ನೂ ಸಹ ಸರಿಯಾಗಿ ಉಪಯೋಗಿಸಿಕೊಳ್ಳಲಾಗಲಿಲ್ಲ; ಅನೇಕ ಲೈಫ್ ಬೋಟುಗಳು ತಮ್ಮ ಪೂರ್ಣ ಸಾಮರ್ಥ್ಯಕ್ಕಿಂತ ಕಡಿಮೆ ಜನರನ್ನು ಕೊಂಡೊಯ್ದವು. ಕಡೆಗೆ ಈ ದುರಂತದಲ್ಲಿ ಬದುಕುಳಿದವರ ಸಂಖ್ಯೆ ಕೇವಲ ೭೦೫.

ಲೈಫ್ ಬೋಟುಗಳಲ್ಲಿ ಹೊರಟ ಈ ಜನರನ್ನು 'ಕಾರ್ಪೇಥಿಯಾ' ಎಂಬ ಹಡಗು ರಕ್ಷಿಸಿತು. ಈ ಹಡಗು ಟೈಟಾನಿಕ್‌ನಿಂದ ಕಳುಹಿಸಲ್ಪಟ್ಟಿದ್ದ ಅಪಾಯದ ಸಂಕೇತವನ್ನು ಗ್ರಹಿಸಿ ಸಹಾಯಕ್ಕಾಗಿ ತೆರಳುತ್ತಿತ್ತು. ಆದರೆ ಟೈಟಾನಿಕ್ ನೀರ್ಗಲ್ಲಿಗೆ ಡಿಕ್ಕಿ ಹೊಡೆದ ಸಮಯದಲ್ಲಿ ಅದರ ಸಮೀಪದಲ್ಲೇ ಇದ್ದ 'ಕ್ಯಾಲಿಫೋರ್ನಿಯನ್' ಎಂಬ ನೌಕೆಯ ರೇಡಿಯೋ ಗ್ರಾಹಕ ನಿಷ್ಕ್ರಿಯವಾಗಿದ್ದರಿಂದ ಟೈಟಾನಿಕ್‌ಗೆ ಸರಿಯಾದ ಸಮಯದಲ್ಲಿ ನೆರವು ದೊರಕಲಿಲ್ಲ.

ಟೈಟಾನಿಕ್‌ನಲ್ಲಿದ್ದ ಮೊದಲ ಮತ್ತು ಎರಡನೇ ದರ್ಜೆ ಪ್ರಯಾಣಿಕರಲ್ಲಿ ಬಹುತೇಕ ಎಲ್ಲ ಮಕ್ಕಳು ಹಾಗೂ ಮಹಿಳೆಯರು ಉಳಿದುಕೊಂಡರು. ತೃತೀಯ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದ ಮಕ್ಕಳಲ್ಲಿ ಸುಮಾರು ಮೂರನೇ ಎರಡು ಭಾಗದಷ್ಟು ಬದುಕುಳಿಯಲಿಲ್ಲ. ಹಡಗಿನಲ್ಲಿದ್ದ ಅನೇಕ ಆಗರ್ಭ ಶ್ರೀಮಂತರೂ ಈ ದುರಂತದಲ್ಲಿ ಜೀವತೆತ್ತರು. ಇವರಲ್ಲಿ ಟೈಟಾನಿಕ್‌ನಲ್ಲಿದ್ದ ಅತ್ಯಂತ ಶ್ರೀಮಂತ ವ್ಯಕ್ತಿ ಜಾನ್ ಜೇಕಬ್ ಆಸ್ಟರ್, ಟೈಟಾನಿಕ್‌ನ ಕ್ಯಾಪ್ಟನ್ ಎಡ್ವರ್ಡ್ ಜೆ. ಸ್ಮಿತ್, ಟೈಟಾನಿಕ್‌ನ ವಿನ್ಯಾಸಕಾರ ಥಾಮಸ್ ಆಂಡ್ರೂಸ್, ವಾಣಿಜ್ಯೋದ್ಯಮಿಗಳಾದ ಇಸಿಡಾರ್ ಸ್ಟ್ರಾಸ್, ಬೆಂಜಮಿನ್ ಗುಗನ್‌ಹೀಮ್ ಸೇರಿದಂತೆ ಅನೇಕ ಪ್ರಸಿದ್ಧರೂ ಇದ್ದರು.

Titanic in Cork harbour, 11 April 1912
Titanic in Cork harbour, 11 April 1912
Titanic in Cork harbour, 11 April 1912 
The route of Titanic's maiden voyage, with the coordinates of her sinking
The route of Titanic's maiden voyage, with the coordinates of her sinking
The route of Titanic's maiden voyage, with the coordinates of her sinking 

ಈ ದುರಂತದ ಪರಿಣಾಮವಾಗಿ ನೌಕಾಯಾನದ ಸುರಕ್ಷತೆಯ ಬಗೆಗೆ ವಿಶ್ವದ ಗಮನ ಹರಿಯಿತು. ಪ್ರತಿಯೊಂದು ಹಡಗಿನಲ್ಲೂ ಎಲ್ಲ ಪ್ರಯಾಣಿಕರಿಗೂ ಸಾಲುವಷ್ಟು ಲೈಫ್‌ಬೋಟುಗಳಿರಬೇಕಾದುದನ್ನು ಕಡ್ಡಾಯಗೊಳಿಸಲಾಯಿತು. 'ಕ್ಯಾಲಿಫೋರ್ನಿಯನ್' ನೌಕೆಯ ರೇಡಿಯೋ ಗ್ರಾಹಕ ಕಾರ್ಯನಿರತವಾಗಿದ್ದಿದ್ದಲ್ಲಿ ಟೈಟಾನಿಕ್ ದುರಂತದ ತೀವ್ರತೆಯನ್ನು ಕಡಿಮೆ ಮಾಡಬಹುದಾಗಿತ್ತೆಂಬುದನ್ನು ಮನಗಂಡ ನಂತರ ಹಡಗುಗಳಲ್ಲಿನ ಸಂಪರ್ಕ ಸಾಧನಗಳು ದಿನದ ೨೪ ಗಂಟೆಗಳೂ ಚಾಲನೆಯಲ್ಲಿರಬೇಕೆಂಬ ನಿಯಮವನ್ನೂ ಜಾರಿಗೆ ತರಲಾಯಿತು. ಸಮುದ್ರದಲ್ಲಿ ನೀರ್ಗಲ್ಲುಗಳ ಕುರಿತು ಮಾಹಿತಿನೀಡಿ ಅಪಘಾತಗಳನ್ನು ತಡೆಯಲು ಅಂತರರಾಷ್ಟ್ರೀಯ ಐಸ್ ಪಟ್ರೋಲ್ ಅನ್ನು ಸ್ಥಾಪಿಸಲಾಯಿತು.