ವಿಷಯಕ್ಕೆ ಹೋಗು

ಬೆಟ್ಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಚಯ[ಬದಲಾಯಿಸಿ]

ತಡಿಯಂಡಮೋಳ್ ಬೆಟ್ಟ, ಕೊಡಗು ಜಿಲ್ಲೆ
ಕೊಡಗಿನ ಬ್ರಹ್ಮಗಿರಿ ಸಾಲುಗಳು

ಭೂಮಿಯ ಮೇಲ್ಮೈಯಲ್ಲಿ ಉಬ್ಬಿದ್ದು ಒಂದು ನಿರ್ದಿಷ್ಟ ಶಿಖರವಿರುವ ಪ್ರದೇಶಕ್ಕೆ ಬೆಟ್ಟವೆಂದು ಹೆಸರು. ಪರ್ವತ ಮತ್ತು ಬೆಟ್ಟಕ್ಕಿರುವ ವ್ಯತ್ಯಾಸ ನಿರ್ದಿಷ್ಟವಾಗಿಲ್ಲ; ಬರೇ ವಿಷಯನಿಷ್ಠವಾಗಿ ಹೇಳಲಾಗುತ್ತದೆ. ಬೆಟ್ಟವು ಪರ್ವತದಷ್ಟು ವಿಶಾಲವೂ ಎತ್ತರವೂ ಇರುವದಿಲ್ಲ. ಸುತ್ತಲಿನ ಪ್ರದೇಶಕ್ಕಿಂತ ೩೦೦ ಮೀಟರ್ (ಸುಮಾರು ೧೦೦೦ ಅಡಿ)ಗಳಿಗಿಂತ ಹೆಚ್ಚು ಎತ್ತರವಿಲ್ಲದಿರುವ ಭೂಭಾಗವನ್ನು ಬೆಟ್ಟವೆಂದು ಗುರುತಿಸಲಾಗುತ್ತದೆ[೧]. ಬ್ರಿಟನ್ನಿನಲ್ಲಿ ಭೂವಿಜ್ಞಾನಿಗಳು ಸಮುದ್ರ ಮಟ್ಟಕ್ಕಿಂತ ೩೦೦ ಮೀಟರ್ (೧೦೦೦ ಅಡಿ)ಗಳಿಗಿಂತ ಹೆಚ್ಚು ಎತ್ತರವಿದ್ದು ೬೦೦ ಮೀಟರ್ (ಸು ೨೦೦೦ ಅಡಿ)ಗಳಿಗಿಂತ ಕಡಿಮೆ ಎತ್ತರವಿರುವ ಭೂಪ್ರದೇಶವನ್ನು ಬೆಟ್ಟವೆಂದು ಪರಿಗಣಿಸುತ್ತಾರೆ[೨]. ಆದರೆ ದಕ್ಷಿಣ ಭಾರತದ ಘಟ್ಟಸಾಲುಗಳು ಮತ್ತು ಪೀಠಭೂಮಿ ಪ್ರದೇಶಗಳು ಸಮುದ್ರ ಮಟ್ಟದಿಂದ ೯೦೦ರಿಂದ ೧೫೦೦ ಮೀಟರ್ (ಸು ೩೦೦೦ದಿಂದ ೫೦೦೦ ಅಡಿ)ಗಳಷ್ಟು ಎತ್ತರದಲ್ಲಿವೆ.ಹೆಸರುಗಳು[ಬದಲಾಯಿಸಿ]

ಚಾರ್ಮಾಡಿ ಘಟ್ಟದಲ್ಲಿ ಒಂದು ಬೆಟ್ಟ

ಬೆಟ್ಟಕ್ಕೆ ಕುಂದ, ಕೊಂಡ, ಗಿರಿ, ಗೋತ್ರ [೩], ಮಲೆ, ಎಂಬಿತ್ಯಾದಿ ಹೆಸರುಗಳೂ ಇವೆ. ಸಣ್ಣ ಬೆಟ್ಟಕ್ಕೆ ಗುಡ್ಡ, ದಿಬ್ಬ, ದಿಣ್ಣೆ, ಬೋರೆ[೩], ಎಂದು ಮೊದಲಾದ ಹೆಸರುಗಳಿವೆ. ಇಲ್ಲಿಯೂ ಬೆಟ್ಟ ಮತ್ತು ಗುಡ್ಡಕ್ಕಿರುವ ವ್ಯತ್ಯಾಸವು ಸ್ಪಷ್ಟವಾಗಿಲ್ಲದೆ ವಸ್ತುನಿಷ್ಠವಾಗಿದೆ.

ರಚನೆ[ಬದಲಾಯಿಸಿ]

ಭೂಮಿಯ ಮೇಲಿನ ಅಗಾಧ ಬಿರುಕುಗಳು, ಸವಕಳಿ, ಹಿಮಪ್ರವಾಹ, ಭೂಮಿಯೊಳಗಿನ ಪದರಗಳ ಚಲನೆ, ಮುಂತಾದ ಅನೇಕ ರೀತಿಯ ಭೌಗೋಳಿಕ ಘಟನೆಗಳಿಂದ ಬೆಟ್ಟಗಳು ನಿರ್ಮಾಣಗೊಂಡಿವೆ.

ನಾಗರೀಕತೆ ಮತ್ತು ಧರ್ಮ[ಬದಲಾಯಿಸಿ]

ಬೆಟ್ಟಗಳು ಹಲವಾರು ನದಿಗಳ ಉಗಮ ಸ್ಥಾನಗಳೂ ಆಗಿವೆ. ಹಲವಾರು ಜನವಸಹಾತುಗಳೂ ಮಲೆಗಳಲ್ಲಿ ನಿರ್ಮಾಣಗೊಂಡಿವೆ. ಬಹುತೇಕ ದೇವಸ್ಥಾನಗಳು ಹಿಂದಿನಕಾಲದಲ್ಲಿ ಬೆಟ್ಟಗಳ ಮೇಲೆಯೇ ಕಟ್ಟಲ್ಪಡುತ್ತಿದ್ದವು. ಒಂದೇ ಕಲ್ಲಿನ ಬೆಟ್ಟವನ್ನು ಕಡಿದು ಶ್ರವಣಬೆಳಗೊಳದ ಗೊಮ್ಮಟೇಶ್ವರನ ದೇವಸ್ಥಾನ ಜನಪ್ರಸಿದ್ಧವಾಗಿರುವಂತೆಯೇ ಏಳು ಕೊಂಡಗಳ ಸ್ವಾಮಿಯೆನ್ನಿಸಿಕೊಂಡಿರುವ ತಿರುಪತಿಯ ವೆಂಕಟೇಶ್ವರನ ದೇವಸ್ಥಾನವೂ ಇದೆ.

ಕೋಟೆ ಮತ್ತು ಕದನಗಳು[ಬದಲಾಯಿಸಿ]

ರಾಜರು ಗಿರಿಗಳ ಮೇಲೆ ಕೋಟೆಗಳನ್ನು ರಚಿಸಿಕೊಂಡು ಉತ್ತಮ ರಕ್ಷಣಾವ್ಯವಸ್ಥೆಯನ್ನು ಮಾಡಿಕೊಂಡಿದ್ದರು. ಚಿತ್ರದುರ್ಗದ ಕೋಟೆ, ಟಿಪ್ಪುವಿನ ಸಾವನದುರ್ಗದ ಕೋಟೆ, ಇವುಗಳಲ್ಲಿ ಕೆಲವು. ಕಾಡುಗಳಿಂದ ಮುಚ್ಚಲ್ಪಟ್ಟ ಗಿರಿ-ಬೆಟ್ಟಗಳಲ್ಲಿದ್ದು ನಡೆಸುವ ಗೆರಿಲ್ಲಾ ಯುದ್ಧತಂತ್ರವು ಭಾರತದ ಬಹಳೆಡೆ ಪ್ರಚಲಿತವಾಗಿತ್ತು. ಅಕ್ಬರನ ವಿರುದ್ಧ ಮಹಾರಾಣಾ ಪ್ರತಾಪನ ಮತ್ತು ಟಿಪ್ಪುವಿನ ವಿರುದ್ಧ ಕೊಡಗಿನ ವೀರರ ಕದನಗಳು ಕೆಲವು ಉದಾಹರಣೆಗಳು.

ಕೃಷಿ[ಬದಲಾಯಿಸಿ]

ಬೆಟ್ಟಗಳಲ್ಲಿ ತೋಟಗಳು

ಕಾಫಿ, ಚಹಾ, ಏಲಕ್ಕಿ, ಕರಿಮೆಣಸು, ಮೊದಲಾದವುಗಳನ್ನು ಬೆಟ್ಟ-ಗುಡ್ಡಗಳಲ್ಲಿ ಬೆಳೆಸುತ್ತಾರೆ. ಕಾಫಿಯನ್ನು ಅರಬ್ಬಿನಿಂದ ಭಾರತಕ್ಕೆ ಮೊದಲು ತಂದು ಚಿಕ್ಕಮಗಳೂರಿನ ಬೆಟ್ಟಗಳಲ್ಲಿ ಬಳಿಕ ಕೊಡಗು, ಕೇರಳಗಳಲ್ಲಿ ಬೆಳೆಸಿದರು. ಚಹಾವನ್ನು ಚೀನಾದಿಂದ ತಂದು ಅಸ್ಸಾಮಿನಲ್ಲೂ, ಉದಕಮಂಡಲನೀಲಗಿರಿಬೆಟ್ಟಗಳಲ್ಲೂ ಬೆಳೆಸಿದರು.

ಸ್ಪರ್ಧೆಗಳು[ಬದಲಾಯಿಸಿ]

ಕಡಿದಾದ ಬೆಟ್ಟಗಳನ್ನೇರುವ ಚಾರಣವು ಇತ್ತೀಚೆಗಿನ ಒಂದು ಜನಪ್ರಿಯ ಸಾಹಸ. ಮಲೆಗಳ ಸುತ್ತು-ಬಳಸಿನ ರಸ್ತೆಗಳಲ್ಲಿ ಓಟದ ಸ್ಪರ್ಧೆ, ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನಗಳನ್ನು ಓಡಿಸುವದು ಇನ್ನೊಂದು ಬಗೆಯ ಪೈಪೋಟಿ. ಗಿರಿ-ಕಂದರಗಳಲ್ಲಿರುವ ಮೈದಾನಗಳಲ್ಲಿ ನಡೆಯುವ ಗಾಲ್ಫ್ ಆಟಗಳೂ ವಿಶೇಷ ಸ್ಪರ್ಧಾತ್ಮಕವಾಗಿರುತ್ತವೆ.ಉಲ್ಲೇಖ[ಬದಲಾಯಿಸಿ]

  1. The World Book Encyclopedia, H-Vol 9, 1990
  2. http://en.wikipedia.org/wiki/Hill
  3. ೩.೦ ೩.೧ ಕನ್ನಡ-ಇಂಗ್ಲಿಶ್ ನಿಘಂಟು, ಎಲ್ ಎಸ್ ಶೇಷಗಿರಿರಾವ್,೧೯೯೮
"https://kn.wikipedia.org/w/index.php?title=ಬೆಟ್ಟ&oldid=1140928" ಇಂದ ಪಡೆಯಲ್ಪಟ್ಟಿದೆ