ವಿಷಯಕ್ಕೆ ಹೋಗು

ಪರ್ವತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇರಾನ್‌ನ ಮೌಂಟ್ ಡ್ಯಾಮವ್ಯಾಂಡ್
ಅಜೆರ್ಬೈಜನ್‌ನ ಫೈವ್ ಫಿಂಗರ್ ಪರ್ವತ

ಪರ್ವತ ಎಂದರೆ ಸುತ್ತಮುತ್ತಲಿನ ಭೂಭಾಗದಿಂದ ಸೀಮಿತ ಪ್ರದೇಶದಲ್ಲಿ ಸಾಮಾನ್ಯವಾಗಿ ಶಿಖರದ ರೀತಿಯಲ್ಲಿ ಮೇಲಕ್ಕೆ ಚಾಚಿಕೊಂಡಿರುವ ಒಂದು ದೊಡ್ಡ ಭೂರೂಪ. ಪರ್ವತವು ಗುಡ್ಡ ಕ್ಕಿಂತ ಹೆಚ್ಚು ಕಡಿದಾಗಿರುತ್ತದೆ. ಮಲೆನಾಡಿನ ಎಂಬ ಗುಣವಾಚಕವನ್ನು ಪರ್ವತಗಳು ಹೆಚ್ಚಿರುವ ಪ್ರದೇಶಗಳನ್ನು ಮತ್ತು ಅವುಗಳಿಗೆ ಸಂಬಂಧಿಸಿದವುಗಳನ್ನು ವಿವರಿಸಲು ಬಳಸಲಾಗುತ್ತದೆ. ಪರ್ವತಗಳ ಬಗೆಗಿನ ಅಧ್ಯಯನವನ್ನು ಪರ್ವತ ವಿಜ್ಞಾನ(ಆರಾಗ್ರಫಿ) ಎಂದು ಕರೆಯುತ್ತಾರೆ.

ಎಕ್ಸೊಜಿಯಾಲಜಿಯು ಗ್ರಹಗಳ ಪರ್ವತಗಳ ಬಗ್ಗೆ ತಿಳಿಸುತ್ತದೆ. ವಿಜ್ಞಾನದ ಒಂದು ಅಂಗವಾದ ಇದನ್ನು ಸಾಮಾನ್ಯವಾಗಿ ಮಾಂಟೆಸ್ (ಏಕವಚನದಲ್ಲಿ - ಮಾನ್ಸ್ ) ಎನ್ನಲಾಗುತ್ತದೆ. ಭೂಮಿಯ ಅತ್ಯಂತ ಎತ್ತರವಾದ ಪರ್ವತ ಮೌಂಟ್ ಎವರೆಸ್ಟ್‌ (ಎತ್ತರ 8,848 ಮೀ). ಸೌರವ್ಯೂಹದಲ್ಲಿ ಬಹು ಎತ್ತರವಾದ ಪರ್ವತ ಮಂಗಳ ಗ್ರಹದಲ್ಲಿರುವ 21,171 m (69,459 ft) ಉನ್ನತಿಯ ಒಲಿಂಪಸ್ ಮಾನ್ಸ್‌.

ವ್ಯಾಖ್ಯಾನ

[ಬದಲಾಯಿಸಿ]

ಪರ್ವತದ ಬಗ್ಗೆ ಸಾರ್ವತ್ರಿಕವಾಗಿ-ಅಂಗೀಕಾರವಾದ ಯಾವುದೇ ವ್ಯಾಖ್ಯಾನವಿಲ್ಲ. ಪರ್ವತವನ್ನು ವ್ಯಾಖ್ಯಾನಿಸಲು ಎತ್ತರ, ಗಾತ್ರ, ಉಬ್ಬುತಗ್ಗು, ಕಡಿದಾಗಿರುವಿಕೆ, ಸ್ಥಳಾವಕಾಶ ಮತ್ತು ನಿರಂತರತೆಯನ್ನು ನಿರ್ಣಾಯಕ ಅಂಶವಾಗಿ ಬಳಸಿಕೊಳ್ಳಲಾಗುತ್ತದೆ.[] ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟಿನಲ್ಲಿ ಪರ್ವತವನ್ನು ಹೀಗೆಂದು ವ್ಯಾಖ್ಯಾನಿಸಲಾಗಿದೆ - "ಭೂಮಿಯ ಮೇಲ್ಮೈಯು ಸುತ್ತಮುತ್ತಲಿನ ಭಾಗಕ್ಕಿಂತ ಕಡಿದಾಗಿ ಸ್ವಲ್ಪ ಅಥವಾ ಹೆಚ್ಚು ಎತ್ತರಕ್ಕೆ ಬೆಳೆದು, ಎತ್ತರವನ್ನು ತಲುಪಿರುವ, ಹತ್ತಿರದ ಎತ್ತರಕ್ಕೆ ತುಲನಾತ್ಮಕವಾಗಿ ಪರಿಣಾಮಕಾರಿಯಾದ ಅಥವಾ ಗಮನಾರ್ಹವಾದ ನೈಸರ್ಗಿಕ ಉನ್ನತಿ."[]

ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ, ಭೂಗೋಳಶಾಸ್ತ್ರದ ತರಗತಿಗಳಲ್ಲಿ ಈ ಕೆಳಗಿನ ವಿಷಯಗಳನ್ನು ಮಾಪನವಾಗಿ ಬಳಸಲಾಗುತ್ತದೆ ಮತ್ತು ಕಲಿಸಲಾಗುತ್ತದೆ:[ಸೂಕ್ತ ಉಲ್ಲೇಖನ ಬೇಕು]

  • 500 ಅಡಿಯಿಂದ ಗರಿಷ್ಠ ಮಟ್ಟದವರೆಗೆ ನೆಲದಲ್ಲಿ ಹರಡಿಕೊಂಡಿರುವುದು - ಸಮತಟ್ಟಾದ ನೆಲ
  • ತಳದಿಂದ 501ರಿಂದ 999 ಅಡಿ ಎತ್ತರವಾಗಿರುವುದು - ಗುಡ್ಡ
  • ತಳದಿಂದ 1000 ಅಡಿ ಅಥವಾ ಅದಕ್ಕಿಂತ ಹೆಚ್ಚು ಎತ್ತರವಾಗಿರುವುದು - ಪರ್ವತ

ಒಂದು ಭೂರೂಪವನ್ನು ಪರ್ವತ ಎಂದು ಕರೆಯುವುದು ಸ್ಥಳೀಯ ಜನರಲ್ಲಿರುವ ಬಳಕೆಯನ್ನು ಆಧರಿಸಿರುತ್ತದೆ. ಮೌಂಟ್ ಡೇವಿಡ್ಸನ್‌ ಎಂದು ಕರೆಯುವ ಕ್ಯಾಲಿಫೋರ್ನಿಯಾಸ್ಯಾನ್‌ ಫ್ರಾನ್ಸಿಸ್ಕೊದ ಅತ್ಯಂತ ಎತ್ತರವಾದ ಭಾಗವು 990 ಅಡಿ ಎತ್ತರವಿದ್ದರೂ, ಅದು ಅಮೆರಿಕಾದ ಅಂಕಿತದ ಪರ್ವತವೊಂದರ ಕನಿಷ್ಠ ಎತ್ತರಕ್ಕಿಂತ ಹತ್ತು ಅಡಿ ಕಡಿಮೆಯಾಗುವಂತೆ ಮಾಡುತ್ತದೆ. ಅದೇ ರೀತಿ, ಒಕ್ಲಹೋಮದ ಲಾಟನ್‌ಮೌಂಟ್ ಸ್ಕಾಟ್ ಅದರ ತಳದಿಂದ ಕೇವಲ 824 ಅಡಿ ಎತ್ತರವಿದೆ.

"ಪರ್ವತ"ದ ಇತರ ವ್ಯಾಖ್ಯಾನಗಳೆಂದರೆ:[]

  • ತಳದಿಂದ ಕನಿಷ್ಠ 2,500 ಮೀ ಎತ್ತರವಿರಬೇಕು
  • ತಳದಿಂದ ಕನಿಷ್ಠ 1500–2500 ಮೀ ಎತ್ತರ ಮತ್ತು 2 ಡಿಗ್ರಿಗಳಿಗಿಂತ ಹೆಚ್ಚು ಇಳಿಜಾರಾಗಿರಬೇಕು
  • ತಳದಿಂದ ಕನಿಷ್ಠ 1000–1500 ಮೀ ಎತ್ತರ ಮತ್ತು 5 ಡಿಗ್ರಿಗಳಿಗಿಂತ ಹೆಚ್ಚು ಇಳಿಜಾರಾಗಿರಬೇಕು
  • ಸ್ಥಳೀಯ (7 ಕಿಮೀ ತ್ರಿಜ್ಯ) ಎತ್ತರ 300 ಮೀಗಿಂತ ಹೆಚ್ಚಿರಬೇಕು ಅಥವಾ ಸ್ಥಳೀಯ (7 ಕಿಮೀ ತ್ರಿಜ್ಯ) ಎತ್ತರ 300 ಮೀಗಿಂತ ಹೆಚ್ಚಿದ್ದರೆ 300–1000 ಮೀ ಇರಬೇಕು.

ಈ ವ್ಯಾಖ್ಯಾನದಿಂದ, ಪರ್ವತಗಳು ಏಷ್ಯಾದ 64%ನಷ್ಟು, ಯುರೋಪ್‌ನ 25%ನಷ್ಟು, ದಕ್ಷಿಣ ಅಮೆರಿಕಾದ 22%ನಷ್ಟು, ಆಸ್ಟ್ರೇಲಿಯಾದ 17%ನಷ್ಟು ಮತ್ತು ಆಫ್ರಿಕಾದ 3%ನಷ್ಟು ಭಾಗವನ್ನು ಆವರಿಸಿದೆ. 24%ನಷ್ಟು ಭೂಮಿಯ ಭೂಭಾಗವು ಪರ್ವತಮಯವಾಗಿದೆ ಮತ್ತು 10%ನಷ್ಟು ಜನರು ಪರ್ವತ ಪ್ರದೇಶಗಳಲ್ಲಿ ವಾಸಿಸುತ್ತಾರೆ.[] ಪ್ರಪಂಚದ ಬಹುತೇಕ ನದಿಗಳು ಪರ್ವತ ಮ‌ೂಲಗಳಿಂದ ಹುಟ್ಟುತ್ತವೆ. ಅಲ್ಲದೇ ಆರ್ದ್ರತೆಯ ಅರ್ಧಕ್ಕಿಂತಲೂ ಹೆಚ್ಚು ಭಾಗವು ತೇವಕ್ಕಾಗಿ ಪರ್ವತಗಳನ್ನು ಅವಲಂಬಿಸಿದೆ.[][]

ಗುಣಲಕ್ಷಣಗಳು

[ಬದಲಾಯಿಸಿ]
ಉತಾಹ್‌ನ ಕಾರ್ಬನ್ ಕೌಂಟಿ ಪರ್ವತ

ಅತಿ ಎತ್ತರದ ಪರ್ವತಗಳು ಮತ್ತು ಭೂಮಿಯ ಧ್ರುವಗಳಿಗೆ ಹತ್ತಿರದಲ್ಲಿರುವ ಪರ್ವತಗಳು ವಾತಾವರಣದ ಅತಿ ಹೆಚ್ಚು ಶೀತ ಪದರಗಳನ್ನು ತಲುಪುತ್ತವೆ. ಪರಿಣಾಮವಾಗಿ ಅವು ಹಿಮೀಕರಣಕ್ಕೆ ಮತ್ತು ಹಿಮಪಾತದಿಂದ ಸವಕಳಿಗೆ ಒಳಗಾಗುತ್ತವೆ. ಈ ಕ್ರಿಯೆಗಳು ಶಿಖರದಂತಹ ರೂಪವನ್ನು ರಚನೆ ಮಾಡುತ್ತವೆ. ಇಂತಹ ಕೆಲವು ಪರ್ವತಗಳು ಮಂಜುಗಡ್ಡೆಗಳು ಕರಗಿ ಉಂಟಾದ ಹಿಮಗಡ್ಡೆಯ ಕೊಳಗಳನ್ನು ಹೊಂದಿವೆ; ಉದಾಹರಣೆಗಾಗಿ, ಭೂತಾನ್‌ನಲ್ಲಿ 3,000 ಹಿಮಗಡ್ಡೆಯ ಕೊಳಗಳಿವೆ, ಎಂದು ಅಂದಾಜಿಸಲಾಗಿದೆ. ಪರ್ವತಗಳು ಕಾಲಕ್ಕೆ ಅನುಗುಣವಾಗಿ ಅವುಗಳ ಗುಣಲಕ್ಷಣಗಳನ್ನು ಬದಲಾಯಿಸಿಗೊಂಡು, ಸವೆದು ಹೋಗಬಹುದು. ಅಲ್ಲದೇ ಗಾಳಿಬಿಸಿಲುಗಳಿಗೆ ತುತ್ತಾಗಿ ಶಿಥಿಲವಾಗಬಹುದು.

ಗ್ರೀಸ್‌ನ ಮೌಂಟ್ ಒಲಿಂಪಸ್
ಸ್ವಿಟ್ಜರ್‌ಲ್ಯಾಂಡ್‌ನ ಆಲ್ಪ್ಸ್ ಪರ್ವತ

ಎತ್ತರದ ಪರ್ವತಗಳು ಅವುಗಳ ಬುಡಕ್ಕಿಂತ ಶಿಖರದಲ್ಲಿ ಭಿನ್ನ ಹವಾಮಾನ ಪರಿಸ್ಥಿತಿಯನ್ನು ಹೊಂದಿರುತ್ತವೆ. ಆದ್ದರಿಂದ ಅವು ಬೇರೆ ಬೇರೆ ಎತ್ತರಗಳಲ್ಲಿ ಬೇರೆ ಬೇರೆ ಜೀವ ವಲಯಗಳನ್ನು ಹೊಂದಿರುತ್ತವೆ. ಅತ್ಯಂತ ಎತ್ತರದಲ್ಲಿ ಮರಗಳು ಬೆಳೆಯುವುದಿಲ್ಲ. ಅಲ್ಲದೇ ಪಾಚಿ ಬಯಲನ್ನು ಹೋಲುವ ಆಲ್ಪೈನ್ ಪ್ರಕಾರದ ಗಿಡಗಳು ಮಾತ್ರ ಇರಬಹುದು[]. ಮರಗಳಿರುವ ವಲಯದ ಸ್ವಲ್ಪ ಕೆಳಕ್ಕೆ, ಶೀತ, ಶುಷ್ಕ ಪರಿಸ್ಥಿತಿಗಳನ್ನು ತಡೆದುಕೊಳ್ಳುವ ಸೂಜಿಎಲೆಗಳ ಮರಗಳಿರುವ ಉಪಆಲ್ಪೈನ್ ಕಾಡುಗಳನ್ನು ಕಾಣಬಹುದು.[] ಶುಷ್ಕ ಹವಾಗುಣದ ಪ್ರದೇಶಗಳಲ್ಲಿನ ಹಿಮಪಾತವು ಮತ್ತು ಕಡಿಮೆ ತಾಪಮಾನವು ಪರ್ವತದ ಪರಿಸ್ಥಿತಿಯನ್ನು ವ್ಯತ್ಯಾಸಗೊಳಿಸುತ್ತವೆ. ಇದರಿಂದಾಗಿ ಸಸ್ಯಸಂಪತ್ತು ಮತ್ತು ಪ್ರಾಣಿಸಂಕುಲವೂ ಬದಲಾಗುತ್ತದೆ.[][] ಈ ವಲಯಗಳಲ್ಲಿ ಕಂಡುಬರುವ ಕೆಲವು ಸಸ್ಯಗಳು ಮತ್ತು ಪ್ರಾಣಿಗಳು ಪ್ರತ್ಯೇಕವಾಗಿರುತ್ತವೆ, ಏಕೆಂದರೆ ಒಂದು ನಿರ್ದಿಷ್ಟ ವಲಯದ ಮೇಲಿನ ಮತ್ತು ಕೆಳಗಿನ ಪರಿಸ್ಥಿತಿಗಳು ನಿರಾಶ್ರಯವಾಗಿರುತ್ತದೆ; ಆದ್ದರಿಂದ ಅವುಗಳ ಚಲನೆ ಅಥವಾ ಚೆದುರುವಿಕೆಯು ನಿರ್ಬಂಧಿಸಲ್ಪಡುತ್ತದೆ. ಹಾರುವ ಸಾಮರ್ಥ್ಯ ಹೊಂದಿರುವ ಹಕ್ಕಿಗಳು, ಪರ್ವತದ ವಾಸಸ್ಥಾನಗಳ ಪ್ರಯೋಜನವನ್ನು ಪಡೆಯುತ್ತವೆ. ವಾಸಸ್ಥಾನವು ಉತ್ತಮವಾಗಿಲ್ಲದಿದ್ದರೆ ಅವು ಈ ಸ್ಥಳವನ್ನು ಬಿಟ್ಟು ವಲಸೆ ಹೋಗುತ್ತವೆ.[] ಈ ಪ್ರತ್ಯೇಕವಾದ ಪರಿಸರ ವ್ಯವಸ್ಥೆಗಳನ್ನು ಅಥವಾ ಅಲ್ಪಾವರಣದ ವಾಯುಗುಣಗಳನ್ನು ಸ್ಕೈ ಐಲ್ಯಾಂಡ್‌ಗಳೆಂದು ಕರೆಯಲಾಗುತ್ತದೆ.[೧೦]

ಪರ್ವತಗಳು ತಗ್ಗು ಪ್ರದೇಶಗಳಿಗಿಂತ ತಂಪಾಗಿರುವುದರ ಕಾರಣವು ಸೂರ್ಯನು ಭೂಮಿಯ ಮೇಲ್ಮೈಯನ್ನು ಹೇಗೆ ಬಿಸಿ ಮಾಡುತ್ತಾನೆ; ಎಂಬುದನ್ನು ಅವಲಂಬಿಸಿದೆ. ಸೂರ್ಯನ ವಿಕಿರಣವು ಗಾಳಿಗೆ ಹೊರಸೂಸುವಾಗ ನೆಲ ಮತ್ತು ಸಮುದ್ರವು ಹೀರಿಕೊಳ್ಳುತ್ತವೆ. ಗಾಳಿಯ ಪ್ರಮಾಣವು ಎತ್ತರ ಪ್ರದೇಶಗಳಲ್ಲಿ ಕಡಿಮೆಯಾಗುವುದರಿಂದ ಮತ್ತು ವಾತಾವರಣವು ತೆಳುವಾಗುವುದರಿಂದ ಗಾಳಿಯ ನಿರೋಧಕ ಶಕ್ತಿಯು ಕುಗ್ಗುತ್ತದೆ. ಇದರಿಂದ ಬಿಸಿಯನ್ನು ಹಿಡಿದಿಡುವ ಸಾಮರ್ಥ್ಯವು ಕಡಿಮೆಯಾಗುತ್ತದೆ. ಆದ್ದರಿಂದ ಗಾಳಿಯ ತಾಪಮಾನವು ಎತ್ತರ ಹೆಚ್ಚಾದಂತೆ ಸಾಮಾನ್ಯ ದರದಲ್ಲಿ ಕಡಿಮೆಯಾಗುತ್ತದೆ. ಈ ದರವನ್ನು ಅವನತಿ ದರ ಎಂದು ಕರೆಯುತ್ತಾರೆ. ಇದು ಪ್ರತಿ 1,000 ಮೀಗೆ 5.5 °C (3,000 ಅಡಿಗೆ 3 °F) ಇರುತ್ತದೆ.[೧೧][೧೨]

ಪರ್ವತಗಳು ಸಾಮಾನ್ಯವಾಗಿ ಮಾನವನ ಆವಾಸಕ್ಕೆ ತಗ್ಗುಪ್ರದೇಶಗಳಿಗಿಂತ ಕಡಿಮೆ ಯೋಗ್ಯವಾದವು; ಇಲ್ಲಿನ ವಾಯುಗುಣವು ಹೆಚ್ಚು ಅಸಹನೀಯವಾಗಿರುತ್ತದೆ. ಅದಲ್ಲದೇ ಕೃಷಿಗೆ ಸೂಕ್ತವಾದ ಭೂಪ್ರದೇಶ ಇರುವುದಿಲ್ಲ. ಹೆಚ್ಚು ಎತ್ತರದಲ್ಲಿ ಗಾಳಿಯಲ್ಲಿನ ಆಮ್ಲಜನಕದ ಪ್ರಮಾಣವು ಕಡಿಮೆಯಾಗಿರುತ್ತದೆ. ಆಗ ಸೂರ್ಯನ ವಿಕಿರಣದ (UV) ವಿರುದ್ಧದ ರಕ್ಷಣೆಯ‌ೂ ಕಡಿಮೆಯಾಗಿರುತ್ತದೆ. ತೀವ್ರ ಪರ್ವತ ರೋಗವು (ರಕ್ತದಲ್ಲಿ ಆಮ್ಲಜನಕದ ಕೊರತೆ - ಹೈಪಾಕ್ಸಿಯಾದಿಂದ ಉಂಟಾಗುತ್ತದೆ.) ಕೆಲವು ಗಂಟೆಗಳಿಗಿಂತ ಹೆಚ್ಚು 3,500 ಮೀಟರ್‌ಗಳಿಗಿಂತ (11,483 ಅಡಿ) ಎತ್ತರದಲ್ಲಿ ಬದುಕು ಸಾಗಿಸುವ ಸುಮಾರು ಅರ್ಧದಷ್ಟು ಕೆಳನಾಡಿನವರಲ್ಲಿ ಕಂಡುಬರುತ್ತದೆ.

ಪ್ರಪಂಚದಾದ್ಯಂತದ ಹೆಚ್ಚಿನ ಪರ್ವತಗಳನ್ನು ಮತ್ತು ಪರ್ವತ ಶ್ರೇಣಿಗಳನ್ನು ಅವುಗಳಿರುವ ನೈಸರ್ಗಿಕ ಸ್ಥಿತಿಯಲ್ಲಿಯೇ ಬಿಡಲಾಗಿತ್ತು. ಇಂದು ಅವುಗಳನ್ನು ಪ್ರಾಥಮಿಕವಾಗಿ ಮನರಂಜನೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಅಲ್ಲದೆ ಮರಗಳನ್ನು ಕಡಿದು ಬಳಕೆಗೆ ಬರುವಂತೆ ಸಿದ್ಧಪಡಿಸುವುದು, ಗಣಿಗಾರಿಕೆ, ಮೇಯಿಸಲು ಮೊದಲಾದವುಗಳಿಗೆ ಉಪಯೋಗಿಸಿಕೊಳ್ಳಲಾಗುತ್ತಿದೆ. ಕೆಲವು ಪರ್ವತಗಳು ಅವುಗಳ ಶಿಖರದಿಂದ ಅದ್ಭುತವಾದ ರಮಣೀಯ ದೃಶ್ಯ ವೀಕ್ಷಣೆಯನ್ನು ಒದಗಿಸುತ್ತವೆ. ಮತ್ತೆ ಕೆಲವು ದಟ್ಟವಾದ ಮರಗಳಿಂದ ಕೂಡಿರುತ್ತವೆ. ಶಿಖರದ ಗಮ್ಯತೆಯು ಎತ್ತರ, ಕಡಿದಾಗಿರುವಿಕೆ, ಅಕ್ಷಾಂಶ, ಭೂಪ್ರದೇಶ ಮತ್ತು ವಾಯುಗುಣಗಳ ಪ್ರಭಾವಕ್ಕೊಳಗಾಗುತ್ತದೆ. ರಸ್ತೆ, ಲಿಫ್ಟ್‌ ಅಥವಾ ಟ್ರ್ಯಾಂ ಮಾರ್ಗಗಳು ಪ್ರವೇಶವನ್ನು ಸುಲಭವಾಗಿಸುತ್ತವೆ. ಕಾಲ್ನಡಿಗೆಯಲ್ಲಿ ಏರುವುದು, ಆಹಾರ ಸಾಮಾಗ್ರಿಗಳನ್ನು ಹೊತ್ತುಕೊಂಡೇ ಮೇಲೇರುವುದು, ಪರ್ವತಾರೋಹಣ, ಬಂಡೆಗಳನ್ನು ಹತ್ತುವುದು, ಹಿಮಗಡ್ಡೆಗಳನ್ನು ಹತ್ತುವುದು, ಇಳಿಜಾರಿನಲ್ಲಿ ಜಾರುವುದು ಮತ್ತು ಹಿಮದ ಆರೋಹಣ ಮೊದಲಾದವು ಪರ್ವತಗಳಲ್ಲಿ ಆನಂದಿಸಲಾಗುವ ಮನರಂಜನೆಯ ಚಟುವಟಿಕೆಗಳು. ಹೆಚ್ಚು ಮನರಂಜನಾ ಚಟುವಟಿಕೆಗಳನ್ನು (ವಿಶೇಷವಾಗಿ ಇಳಿಜಾರಿನಲ್ಲಿ ಜಾರುವುದು) ಬೆಂಬಲಿಸುವ ಪರ್ವತಗಳು ಗಿರಿಧಾಮಗಳ ತಾಣವಾಗಿವೆ.

ಪರ್ವತಗಳು ಮಣ್ಣು ಮತ್ತು ಬಂಡೆಕಲ್ಲುಗಳಿಂದ ಮಾಡಲ್ಪಟ್ಟಿದೆ. ಮಣ್ಣಿನ ಅತ್ಯಂತ ಹೊರಗಿನ ಭಾಗವು ಅಥವಾ ಭೂಮಿಯ ಹೊರಪದರವು ಆರು ಸ್ತರಗಳಿಂದ ಸಂಯೋಜಿತವಾಗಿರುತ್ತವೆ. ಎರಡು ಸ್ತರಗಳು ಸರಿದರೆ ಅಥವಾ ಪರಸ್ಪರ ಘರ್ಷಣೆಗೊಳಗಾದರೆ, ಭೂಮಿಯ ಮೇಲ್ಮೈಯು ಉಬ್ಬಿಕೊಳ್ಳುತ್ತದೆ. ಅದರ ಪರಿಣಾಮವಾಗಿ ಪರ್ವತಗಳ ರಚನೆಯಾಗುತ್ತದೆ. ಪರ್ವತಗಳು ಹೇಗೆ ಉಂಟಾಗಿವೆ ಮತ್ತು ಅವುಗಳ ಗುಣಲಕ್ಷಣಗಳೇನು ಎಂಬುದರ ಬಗೆಗಿನ ಭೌಗೋಳಿಕ ಕ್ರಿಯೆಯ ಆಧಾರದಲ್ಲಿ ಪರ್ವತಗಳಲ್ಲಿ ಐದು ಪ್ರಮುಖ ವಿಧಗಳಿವೆ.

ಪದರ ಪರ್ವತಗಳು: ಪದರ ಪರ್ವತಗಳು ಹೆಚ್ಚು ಸಾಮಾನ್ಯ ಪ್ರಕಾರದ ಪರ್ವತಗಳಾಗಿವೆ. ಇವುಗಳಿಗೆ ಉದಾಹರಣೆಗಳೆಂದರೆ - ಹಿಮಾಲಯ (ಏಷ್ಯಾ), ಆಲ್ಪ್ಸ್ (ಯುರೋಪ್‌). ಎರಡು ಸ್ತರಗಳು ಘರ್ಷಣೆಗೊಳಗಾಗಿ, ಭೂಮಿಯ ಹೊರಪದರವು ಮಡಿಸಲ್ಪಟ್ಟು ಅವು ರಚನೆಯಾಗಿವೆ. ಎರಡೂ ಬದಿಗಳಲ್ಲಿ ಇಳಿಜಾರಾಗಿರುವ ಪದರವನ್ನು ಇಪ್ಪಾರು ಪದರ(ಆಂಟಿಕ್ಲೈನ್) ಎಂದು ಕರೆಯುತ್ತಾರೆ; ಒಂದು ಸಾಮಾನ್ಯ ಕೆಳಕೇಂದ್ರದಿಂದ ಮೇಲೇರುವ (ಎರಡೂ ಬದಿಗಳಲ್ಲಿ) ಪದರವನ್ನು ಅಭಿನತಿ(ಸಿಂಕ್ಲೈನ್) ಎನ್ನುತ್ತಾರೆ.

ಸ್ತರ-ಬ್ಲಾಕು ಪರ್ವತಗಳು: ಹೆಸರೇ ಸೂಚಿಸಿದಂತೆ ಸ್ತರ ಪರ್ವತಗಳು ಅಥವಾ ಸ್ತರ-ಬ್ಲಾಕು ಪರ್ವತಗಳು, ಕಲ್ಲು ಬಂಡೆಗಳ ಬ್ಲಾಕುಗಳು ಭೂಮಿಯ ಹೊರಪದರದಲ್ಲಿ ಸ್ತರಗಳಾಗಿ ಸರಿಯುವುದರಿಂದ ರಚನೆಯಾಗುತ್ತವೆ. ಬ್ಲಾಕು ಪರ್ವತಗಳಲ್ಲಿ ಎರಡು ಪ್ರಕಾರಗಳಿವೆ, ಅವುಗಳೆಂದರೆ ಮೇಲ್ಮುಖವಾದ ಮತ್ತು ಓರೆಯಾದ. ಮೇಲ್ಮುಖವಾದ ಪ್ರಕಾರದಲ್ಲಿ ಪರ್ವತವು ಎರಡು ಕಡಿದಾದ ಬದಿಗಳನ್ನು ಹೊಂದಿರುತ್ತದೆ; ಓರೆಯಾದ ಪ್ರಕಾರದಲ್ಲಿ ಒಂದು ಕಡಿದಾದ ಬದಿ ಮತ್ತು ಒಂದು ಸ್ವಲ್ಪ ಇಳಿಜಾರು ಬದಿ ಇರುತ್ತದೆ. ಸ್ತರ-ಬ್ಲಾಕು ಪರ್ವತಗಳಿಗೆ ಉದಾಹರಣೆ - ಸೈರ ನೆವಡ ಪರ್ವತಗಳು (ಉತ್ತರ ಅಮೆರಿಕ).

ಜ್ವಾಲಾಮುಖಿಯ ಪರ್ವತಗಳು: ಇವು ಜ್ವಾಲಾಮುಖಿಯ ಚಿಮ್ಮುವಿಕೆಯಿಂದ ರಚನೆಯಾಗುತ್ತವೆ. ಉದಾ. ಮೌಂಟ್ ಫ್ಯುಜಿ (ಜಪಾನ್) ಜ್ವಾಲಾಮುಖಿಯ ಶಿಲಾರಸವು ಹೊರಚಿಮ್ಮಿ, ಭೂಮಿಯ ಮೇಲ್ಮೆಯಲ್ಲಿ ರಾಶಿ ಹಾಕುವುದರಿಂದ ಈ ಪರ್ವತಗಳು ಉಂಟಾಗುತ್ತವೆ.

ಗುಮ್ಮಟಾಕಾರದ ಪರ್ವತಗಳು: ಬಿಸಿ ಶಿಲಾರಸವು ಮ್ಯಾಂಟಲ್‌ನಿಂದ ಮೇಲೇರಿ, ಭೂಮಿಯ ಹೊರಪದರದ ಹರಡಿಕೊಂಡಿರುವ ಸಂಚಿತ ಪದರವನ್ನು ಉಬ್ಬಿಸುವುದರಿಂದ ಈ ಗುಮ್ಮಟಾಕಾರದ ಪರ್ವತಗಳ ರಚನೆಯಾಗುತ್ತದೆ. ಈ ಕ್ರಿಯೆಯಲ್ಲಿ ಶಿಲಾರಸವು ಹೊರಚಿಮ್ಮುವುದಿಲ್ಲ, ಬದಲಿಗೆ ತಣ್ಣಗಾಗಿ ಪರ್ವತದ ಒಳಭಾಗದ ದಿಂಡಾಗುತ್ತದೆ. ಈ ಪರ್ವತಗಳಿಗೆ ಉದಾಹರಣೆ - ಉತಾಹ್‌ನಲ್ಲಿರುವ ನಾವೋಜ್ ಪರ್ವತ. ಗುಮ್ಮಟಾಕಾರ ಹೋಲುವುದರಿಂದ ಇವುಗಳನ್ನು ಗುಮ್ಮಟ ಪರ್ವತಗಳೆಂದು ಕರೆಯಲಾಗುತ್ತದೆ.

ಪ್ರಸ್ಥಭೂಮಿ ಪರ್ವತಗಳು: ಸವೆತದಿಂದ ರಚನೆಯಾದ ಇವು ತೋರ್ಪಡಿಕೆಯ ಅಥವಾ ಕೇವಲ ಪ್ರದರ್ಶನಾ ಪರ್ವತಗಳು. ಈ ಪರ್ವತಗಳಿಗೆ ಒಂದು ಉದಾಹರಣೆ - ಕ್ಯಾಟ್‌ಸ್ಕಿಲ್ ಪರ್ವತಗಳು (ನ್ಯೂಯಾರ್ಕ್). ಅವು ಸಾಮಾನ್ಯವಾಗಿ ಪದರ-ಪರ್ವತ ಶ್ರೇಣಿಗಳ ಹತ್ತಿರ ಕಂಡುಬರುತ್ತವೆ.

ಭೂಮಿಯ ಅನೇಕ ಶಕ್ತಿಗಳ ಪರಿಣಾಮವಾಗಿ ರಚನೆಯಾದ ಕೆಲವು ಪರ್ವತಗಳು ಅಸ್ತಿತ್ವದಲ್ಲಿವೆ. ಉತ್ತರ ಅಮೆರಿಕಾದಲ್ಲಿರುವ ರಾಕೀಸ್ ಪದರಗಳಿಂದಾಗಿ ರಚನೆಯಾಗಿದ್ದರೂ, ಅದೇ ಪ್ರದೇಶದಲ್ಲಿ ಸ್ತರಗಳಿಂದ ಮತ್ತು ಗುಮ್ಮಟಾಕಾರದ ರಚನೆಯಿಂದ ಉಂಟಾದ ಪರ್ವತಗಳೂ ಇವೆ. ನಿಸರ್ಗದಲ್ಲಿ ಹಿಮೀಕರಣ, ಮಣ್ಣಿನ ಸವಕಳಿ ಹಾಗೂ ಸ್ವಯಂಚಾಲಿತ ಮತ್ತು ರಾಸಾಯನಿಕವಾಗಿ ಗಾಳಿಬಿಸಿಲಿಗೆ ಒಡ್ಡಿ ಶಿಥಿಲಗೊಳ್ಳುವಿಕೆಯಂತಹ ಕ್ರಿಯೆಗಳು ನಿರಂತರವಾಗಿ ನಡೆಯುತ್ತಿರುತ್ತದೆ. ಇವೆಲ್ಲವೂ ಪರ್ವತಗಳ ಆಕಾರ ಮತ್ತು ಗುಣಲಕ್ಷಣಗಳನ್ನು ವ್ಯತ್ಯಾಸಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಭೂವಿಜ್ಞಾನ

[ಬದಲಾಯಿಸಿ]
ಕೊಮೊ ಲಾಂಜ್ಮ್ಯಾಕಲುಮೌಂಟ್ ಎವರೆಸ್ಟ್‌ಟಿಬೇಟ್ ಪ್ರಸ್ಥಭೂಮಿರೋಂಗ್ ನದಿಚ್ಯಾಂಗ್‌ಟ್ಸೆರೋಂಗ್‌ಬಕ್ ಗ್ಲೇಸಿಯರ್ನಾರ್ತ್ ಫೇಸ್ಈಸ್ಟ್ ರೋಂಗ್‌ಬಕ್ ಗ್ಲೇಸಿಯರ್ನಾರ್ತ್ ಕೋಲ್ ಉತ್ತರ ಪರ್ವತಶ್ರೇಣಿಯ ಮಾರ್ಗಲಾಟ್ಸೆನ್ಯೂಪ್‌ಟ್ಸೆಸೌತ್ ಕೋಲ್ ಮಾರ್ಗಗ್ಯಾಚುಂಗ್ ಕಾಂಗ್ಚೊ ಓಯುಪ್ರೆಸ್ ಹೈಪರ್‌‌ಲಿಂಕ್‌ಗಳು (ಅಥವಾ ಚಿತ್ರವನ್ನು ವರ್ಧಿಸಲಿರುವ ಗುಂಡಿಗಳು)
ಮೌಂಟ್ ಎವರೆಸ್ಟ್‌‌ನೊಂದಿಗೆ ಒಳಗೊಂಡಿರುವ ಹಿಮಾಲಯ ಪರ್ವತ ಶ್ರೇಣಿಗಳು.

ಪರ್ವತವು ಸಾಮಾನ್ಯವಾಗಿ ಭೂಮಿಯ ಹೊರಪದರಗಳ ಚಲನೆಯಿಂದ, ಅಥವಾ ಪರ್ವತೋತ್ಪತ್ತಿಯ ಚಲನೆಯಿಂದ ಅಥವಾ ಭೂಪದರಿನ ಚಲನೆಯಿಂದ, ರಚನೆಯಾಗುತ್ತದೆ. ಜ್ವಾಲಾಮುಖಿಯ ಅಂಶಗಳ ಸಮಸ್ಥಿತಿಯ ಮೇಲೇರಿಸುವಿಕೆ ಮತ್ತು ಒಳನುಗ್ಗಿಸುವಿಕೆಯು ಮೇಲ್ಮೈಯ ಶಿಲಾಪದರವನ್ನು ಮೇಲಕ್ಕೆ ತಳ್ಳುತ್ತದೆ. ಇಂತಹ ಸಂಕೋಚನ ಬಲಗಳು ಸುತ್ತಮುತ್ತಲಿನ ಮೇಲ್ಮೈಗಿಂತ ಎತ್ತರವಾದ ಭೂರೂಪವನ್ನು ರಚಿಸುತ್ತವೆ. ಈ ಭೂರೂಪದ ಎತ್ತರವು ಅದನ್ನು ಗುಡ್ಡವಾಗಿ ಅಥವಾ ಹೆಚ್ಚು ಎತ್ತರವಾಗಿದ್ದರೆ ಮತ್ತು ಕಡಿದಾಗಿದ್ದರೆ ಪರ್ವತವಾಗಿ ಮಾಡುತ್ತದೆ. ಪರ್ವತ ಮತ್ತು ಗುಡ್ಡಗಳೆಂದು ಹೇಳಲಾಗುವ ಭೂರೂಪಗಳ ಎತ್ತರವು ಪ್ರದೇಶದ ಕ್ಷೇತ್ರದಂತೆ ವ್ಯತ್ಯಾಸಗೊಳ್ಳುತ್ತದೆ. ಪ್ರಮುಖ ಪರ್ವತಗಳು ಭೂಮಿಯ ಹೊರಪದರದ ವಿರೂಪಗಳ ನಿಯಮಿತ ಗಡಿ ಮತ್ತು ಕ್ರಿಯೆಗಳನ್ನು ಸೂಚಿಸುತ್ತಾ ಏಕ ಕಮಾನಿನಲ್ಲಿ ಕಂಡುಬರುತ್ತವೆ. ಭೂಮಿಯ ಹೊರಪದರದ ವಿರೂಪಗಳ ಬಲಗಳಿಗೆ ಕಲ್ಲುಬಂಡೆಗಳು ಹೇಗೆ ಪ್ರತಿಕ್ರಿಯಿಸುತ್ತವೆ, ಎಂಬುದನ್ನು ಆಧರಿಸಿ ಎರಡು ಪ್ರಕಾರದ ಪರ್ವತಗಳು ರಚನೆಯಾಗಿವೆ - ಬ್ಲಾಕು ಪರ್ವತಗಳು ಮತ್ತು ಪದರ ಪರ್ವತಗಳು.

ಭೂಖಂಡಗಳ ಘರ್ಷಣೆಯಲ್ಲಿನ ಸಂಕೋಚನ ಬಲಗಳು ಸಂಕುಚಿತ ಪ್ರದೇಶವು ಗಟ್ಟಿಯಾಗುವಂತೆ ಮಾಡುತ್ತವೆ. ಆದ್ದರಿಂದ ಮೇಲಿನ ಮೇಲ್ಮೈಯು ಮೇಲ್ಭಾಗಕ್ಕೆ ತಳ್ಳಲ್ಪಡುತ್ತದೆ. ಭೂಮಿಯ ಮೇಲ್ಮೈಯ ಭಾರವನ್ನು ಸರಿದೂಗಿಸಲು, ಹೆಚ್ಚಿನ ಸಂಕುಚಿತ ಶಿಲೆಗಳು ಕೆಳಭಾಗಕ್ಕೆ ತಳ್ಳಲ್ಪಟ್ಟು, ಆಳವಾದ "ಪರ್ವತ ಮ‌ೂಲ"ವನ್ನು ರಚಿಸುತ್ತವೆ. [ಬುಕ್ ಆಫ್ "ಅರ್ಥ್" ಗಮನಿಸಿ, ಪ್ರೆಸ್ ಮತ್ತು ಸೈವರ್ ಪುಟ 413]. ಹೀಗೆ ಪರ್ವತಗಳ ಕೆಳಭಾಗ ಮತ್ತು ಮೇಲ್ಭಾಗ ರಚನೆಯಾಗುತ್ತದೆ. (ಸಮಸ್ಥಿತಿಯನ್ನು ಗಮನಿಸಿ). ಕೆಲವು ಭೂಖಂಡಗಳ ಘರ್ಷಣೆಯಲ್ಲಿ ಒಂದು ಭೂಖಂಡ ಭಾಗವು ಕ್ರಿಯೆಯಲ್ಲಿ ಅದುಮಲ್ಪಟ್ಟು ಇತರೆ ಭಾಗದೊಂದಿಗೆ ಅತಿಕ್ರಮಿಸುತ್ತದೆ .

ಸಾಗರ ತಳದಿಂದ ಹೆಚ್ಚು ಎತ್ತರಕ್ಕಿರುವ ಅನೇಕ ಸಣ್ಣ ದ್ವೀಪಗಳನ್ನೂ ಒಳಗೊಂಡಂತೆ ಕೆಲವು ಅಪೂರ್ವವಾದ ಪರ್ವತಗಳು ಜ್ವಾಲಾಮುಖಿಗಳಿಂದ ರಚಿಸಲ್ಪಟ್ಟಿವೆ.

USAಯ ವರ್ಜಿನಿಯಾದ ಶೇನಂದೋಹ್ ನ್ಯಾಶನಲ್ ಪಾರ್ಕ್‌ನ ಬ್ಲೂ ಹಿಡ್ಜ್ ಪರ್ವತಗಳು

ವಿಶಾಲ ಪ್ರದೇಶಗಳು ಸ್ತರಗಳಾಗಿ ವಿಭಾಗಿಸಲ್ಪಟ್ಟು ದೊಡ್ಡ ಲಂಬವಾಗಿರುವ ರಚನೆಯಿಂದ ಸ್ಥಳಪಲ್ಲಟಗೊಂಡಾಗ ಬ್ಲಾಕ್ ಪರ್ವತಗಳು ನಿರ್ಮಾಣವಾಗುತ್ತವೆ. ಇದು ಸರ್ವೇಸಾಮಾನ್ಯವಾಗಿ ಸಂಭವಿಸುತ್ತದೆ. ಮೇಲಕ್ಕೆತ್ತರಿಕೊಂಡ ಬ್ಲಾಕುಗಳೇ ಬ್ಲಾಕ್ ಪರ್ವತಗಳು ಅಥವಾ(ಎರಡೂ ಪಕ್ಕಕ್ಕೆ ವಾಲಿದ ಏರುಭೂಮಿ) ಹಾರ್ಸ್ಟ್‌‍‌‌‌ ಗಳು. ಮಧ್ಯದ ತಗ್ಗು ಬ್ಲಾಕುಗಳನ್ನು ತೂಗುಸ್ತರ(ಗ್ರಾಬನ್) ಎನ್ನಲಾಗುತ್ತದೆ: ಇವು ಸಣ್ಣದಾಗಿರಬಹುದು ಅಥವಾ ವ್ಯಾಪಕ ಬಿರುಕು ಕಮರಿ ರಚನೆಗಳಾಗಬಹುದು. ಈ ರೀತಿಯ ಭೂದೃಶ್ಯವು ಪೂರ್ವ ಆಫ್ರಿಕಾ, ವೋಸ್ಜೆಸ್, ಉತ್ತರ ಅಮೆರಿಕಾದ ಬೇಸಿನ್ ಮತ್ತು ರೇಂಜ್ ಪ್ರಾಂತ ಹಾಗೂ ರೈನೆ ಕಣಿವೆ ಮೊದಲಾದ ಕಡೆಗಳಲ್ಲಿ ಕಾಣಸಿಗುತ್ತದೆ. ಈ ಪ್ರದೇಶಗಳು, ಹೆಚ್ಚಾಗಿ ಪ್ರಾದೇಶಿಕ ಒತ್ತಡ ವ್ಯಾಪಕವಾಗಿದ್ದಾಗ ಮತ್ತು ಭೂಮಿಯ ಹೊರಪದರವು ತೆಳ್ಳಗಾದಾಗ ಕಂಡುಬರುತ್ತವೆ.

ಮಧ್ಯ-ಸಾಗರ ಬೆಟ್ಟಸಾಲುಗಳನ್ನು ಅವುಗಳ ಆಳಮಾಪನದ ಪ್ರಾಮುಖ್ಯತೆಯಿಂದ ಹೆಚ್ಚಾಗಿ ಸಮುದ್ರತಳದ ಪರ್ವತಶ್ರೇಣಿಗಳೆಂದು ಕರೆಯಲಾಗುತ್ತದೆ.

ಶಿಲೆಯನ್ನು ಸ್ತರವಾಗಿ ಮಾಡಲಾಗದು; ಆದರೆ ಸಮ್ಮಿತೀಯವಾಗಿ ಅಥವಾ ಅಸಮ್ಮಿತೀಯವಾಗಿ ಪದರ ಮಾಡಬಹುದು. ಮೇಲಿನ ಪದರಗಳನ್ನು ಇಪ್ಪಾರು ಪದರಗಳೆಂದು ಮತ್ತು ಕೆಳಪದರಗಳನ್ನು ಅಭಿನತಿ(ಎದುರುಬದುರು ಇಳಿಜಾರು ದಿಕ್ಕಿನಲ್ಲಿರುವ)ಗಳೆಂದು ಕರೆಯಲಾಗುತ್ತದೆ : ಅಸಮ್ಮಿತೀಯ ಪದರದಲ್ಲಿ ಚಾಚಿಕೊಂಡಿರುವ ಮತ್ತು ಬುಡಮೇಲಾಗಿರುವ ಪದರಗಳೂ ಇರಬಹುದು. ಜ್ಯೂರಾ ಪರ್ವತಗಳು ಪದರಗಳಿಗೆ ಒಂದು ಉದಾಹರಣೆ. ದೀರ್ಘಕಾಲದ ಸವೆತವು ಉಬ್ಬುಗಳಲ್ಲಿ ವ್ಯತ್ಯಯ ತರಬಹುದು, ಮೃದು ಮೇಲ್ಮುಖ ಶಿಲೆಯು ಸವೆದುಹೋಗಬಹುದು. ಹೀಗಾಗಿ ಇಪ್ಪಾರು ಪದರಗಳು ಅಭಿನತಿಗಳ(ಎದುರುಬದುರು ಇಳಿಜಾರು ದಿಕ್ಕಿನಲ್ಲಿರುವ) ಹೆಚ್ಚು ಗಟ್ಟಿಯಾದ ಸಂಕುಚಿತ ಶಿಲೆಗಳಿಗಿಂತ ಕಡಿಮೆ ಕಠಿಣವಾಗಿರುತ್ತವೆ.

ಚಿತ್ರಸಂಪುಟ

[ಬದಲಾಯಿಸಿ]

ಇವನ್ನೂ ನೋಡಿ

[ಬದಲಾಯಿಸಿ]

ಹೆಚ್ಚಿನ ಮಾಹಿತಿಗಾಗಿ

[ಬದಲಾಯಿಸಿ]
  • ಫ್ಯಾಂಕ್ನೋಯ್, A., ಮೋರಿಸನ್, D., & ವೋಲ್ಫ್, S. (2004). ವೋಯಜೆಸ್ ಟು ಪ್ಲಾನೆಟ್ಸ್. 3ನೇ ಆವೃತ್ತಿ ಬೆಲ್ಮಂಟ್: ಥಾಮ್ಸನ್ ಬುಕ್ಸ್/ಕೋಲೆ.

ಆಕರಗಳು

[ಬದಲಾಯಿಸಿ]
  1. ೧.೦ ೧.೧ ಗೆರಾರ್ಡ್, A. J. 1990. ಮೌಂಟೇನ್ ಎನ್ವೈರ್ನ್ಮೆಂಟ್ಸ್
  2. Blyth, S., Groombridge, B., Lysenko, I., Miles, L. & Newton, A. (2002). "Mountain Watch" (PDF). UNEP World Conservation Monitoring Centre, Cambridge, UK. Archived from the original (PDF) on 2008-05-11. Retrieved 2009-02-17.{{cite web}}: CS1 maint: multiple names: authors list (link)
  3. Panos (2002). "High Stakes". Retrieved 2009-02-17.[ಶಾಶ್ವತವಾಗಿ ಮಡಿದ ಕೊಂಡಿ]
  4. "International Year of Freshwater 2003". Archived from the original on 2006-10-07. Retrieved 2006-12-07.
  5. "The Mountain Institute". Archived from the original on 2006-07-09. Retrieved 2006-12-07.
  6. ೬.೦ ೬.೧ "Biotic Communities of the Colorado Plateau: C. Hart Merriam and the Life Zones Concept". Archived from the original on 4 ಫೆಬ್ರವರಿ 2013. Retrieved 30 January 2010.
  7. "Tree". Microsoft Encarta Reference Library 2003. Microsoft Corporation. 1993–2002. 60210-442-1635445-74407. {{cite encyclopedia}}: |access-date= requires |url= (help)CS1 maint: date format (link)
  8. "Mountain Environments" (PDF). United Nations Environment Programme World Conservation Monitoring Centre. Archived from the original (PDF) on 21 ಜೂನ್ 2006. Retrieved 30 January 2010.
  9. Taylor, Richard Cachor (2005). A Birder's Guide to Southeastern Arizona. American Birding Association. pp. 2–4. ISBN 1-878788-22-1.
  10. Tweit, Susan J. (1992). The Great Southwest Nature Factbook. Alaska Northwest Books. pp. 138–141. ISBN 0-88240-434-2.
  11. "Temperature". Microsoft Encarta Reference Library 2003. Microsoft Corporation. 1993–2002. 60210-442-1635445-74407. {{cite encyclopedia}}: |access-date= requires |url= (help)CS1 maint: date format (link)
  12. "Atmosphere". Microsoft Encarta Reference Library 2003. Microsoft Corporation. 1993–2002. 60210-442-1635445-74407. {{cite encyclopedia}}: |access-date= requires |url= (help)CS1 maint: date format (link)
"https://kn.wikipedia.org/w/index.php?title=ಪರ್ವತ&oldid=1240026" ಇಂದ ಪಡೆಯಲ್ಪಟ್ಟಿದೆ