ಪಟದ ಕುಣಿತ
ಗೋಚರ
ಪಟದ ಕುಣಿತ ವು ವೈಷ್ಣವ ಸಂಪ್ರದಾಯದ ಕುಣಿತಗಳಲ್ಲಿ ಒಂದು. ಇದು ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಕಂಡುಬರುವುದು. ಈ ಕುಣಿತವನ್ನು ಕಂಡಾಗ ಸುಗ್ಗಿಯ ಕುಣಿತದಂತಿದ್ದರೂ ಕಲಾವಿದರ ಕೈಯಲ್ಲಿ ಹಿಡಿದಂತಹ ಪಟಗಳಿಂದ ವಿಶಿಷ್ಟ ಕಲೆಯೆನಿಸಿರುವುದು. ಹತ್ತು, ಹದಿನೈದು ಅಡಿ ಉದ್ದದ ಪಟದ ಬಿದಿರಿನ ಕೋಲಿಗೆ ಬಣ್ಣದ ರೇಷ್ಮೆ ಜಾಲರಿ ಬಟ್ಟೆಯಿಂದ ಸುತ್ತಿ ಅಲಂಕಾರವನ್ನು ಮಾಡಿರುತ್ತಾರೆ.ಪಟದ ತುದಿಯಲ್ಲಿ ಹಿತ್ತಾಳೆ ಅಥವಾ ಬೆಳ್ಳಿಯ ಛತ್ರಿಯನ್ನು ಅಳವಡಿಸಿರುತ್ತಾರೆ. ಪಟದ ಕುಣಿತವು ಸಾಮಾನ್ಯವಾಗಿ ಒಂದೇ ಸಾಲಿನಲ್ಲಿ, ಎದುರು ಬದುರಿನ ಸಾಲಿನಲ್ಲಿ ಕುಣಿತವು ನಡೆಯುವುದನ್ನು ಕಾಣಬಹುದು. ಈ ಕುಣಿತವನ್ನು ಕಂಡಾಗ ವಿಜಯದ ಸಂಭ್ರಮದ ಸಂಕೇತವಾಗಿ ಗೋಚರಿಸುವುದು. ಕೆಲವು ಕಡೆ ಈ ಕುಣಿತವು ಭಾಗವಂತಿಕೆಯ ಜೊತೆಯಲ್ಲಿ ಪಟದ ಕುಣಿತ ನಡೆಯುವುದುಂಟು. ಮಂಡ್ಯ ಜಿಲ್ಲೆಯ ಸ್ಥಳಗಳಲ್ಲಿ ದೀವಳಿಗೆ ತಿಂಗಳಲ್ಲಿ ಮಾತ್ರ ಪಟವನ್ನು ಮುಟ್ಟುವ ಸಂಪ್ರದಾಯವಿದೆ ಎಂದು ಹೇಳುವುದು ತಿಳಿಯುತ್ತದೆ.
ಇತಿವೃತ್ತ
[ಬದಲಾಯಿಸಿ]- ಒಕ್ಕಲಿಗ ಸಂಪ್ರದಾಯದವರು ಈ ಪಟದ ಕುಣಿತವನ್ನು ಹಬ್ಬ,ಜಾತ್ರೆ, ಉತ್ಸವಗಳಲ್ಲಿ ಮಾಡುವರು. ನಗಾರಿಗಳ ಬಡಿತವು ಈ ಪಟದ ಕುಣಿತಕ್ಕೆ ಹಿನ್ನೆಲೆಯ ವಾದ್ಯವಾಗಿರುವುದು. ಬಿಳಿಯ ಕಾಸೆಪಂಚೆ, ಬಿಳಿಯ ನಿಲುವಂಗಿ, ಬಿಳಿಯ ರುಮಾಲು, ಸೊಂಟಕ್ಕೆ ಬಿಗಿದ ಬಣ್ಣದ ವಸ್ತ್ರ, ಕೊರಳಿಗೆ ಮಣಿಸರ, ಒಂದು ಕೈಯಲ್ಲಿ ಬಿಳಿಯ ಚೌಕ, ಕಾಲಿಗೆ ಗೆಜ್ಜೆಯನ್ನು ಕಲಾವಿದರು ಧರಿಸಿರುತ್ತಾರೆ.
- ಹೆಗಲಿಗೆ ಅಡ್ಡವಾಗಿ ಹಾಕಿಕೊಂಡಂತಹ ಬಟ್ಟೆಯ ’ನವಾರ’ದಲ್ಲಿ ಸಿಕ್ಕಿಸಿದ ಪಟದ ಕೋಲನ್ನು ಬಲಗೈಯಲ್ಲಿ ಹಿಡಿದು ವಾದ್ಯದ ದಾಟಿಗೆ ತಕ್ಕಂತೆ ವಿವಿಧ ಭಂಗಿಯಲ್ಲಿ ಕುಣಿಯುವುದು ಕಂಡುಬರುವುದು. ಪಟದ ಕುಣಿತಕ್ಕೆ ಇಷ್ಟೆ ಕಲಾವಿದರೂ ಇರಬೇಕೆಂಬ ನಿಯಮವೇನೂ ಇಲ್ಲ . ಪಟದ ಕುಣಿತದ ಸಂದರ್ಭದಲ್ಲಿ ಪಟದ ಜವಳಿಗಳು ಬಾಗುವಾಗುವುದು.
ವಿಧಗಳು
[ಬದಲಾಯಿಸಿ]ಪಟದ ಕುಣಿತದಲ್ಲಿ-
- ಗೆಜ್ಜೆ ಕುಣಿತ,
- ಎರಡ್ಹೆಜ್ಜೆ ಕುಣಿತ,
- ಪೂಜಾ ಕುಣಿತ.
- ಮೂರು ಹೆಜ್ಜೆ ಕುಣಿತ ಮೊದಲಾದ ವಿಧಗಳಿರುವುದು.