ವಿಷಯಕ್ಕೆ ಹೋಗು

ಜಯಪ್ರಕಾಶ ನಾರಾಯಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲೋಕ ನಾಯಕ

ಜಯಪ್ರಕಾಶ ನಾರಾಯಣ
ಜಯಪ್ರಕಾಶ ನಾರಾಯಣ
ಜನನ(೧೯೦೨-೧೦-೧೧)೧೧ ಅಕ್ಟೋಬರ್ ೧೯೦೨
ಸಿತಾಬ್ದಿಯರ, ಸರಣ್, Bengal Presidency, British India
ಮರಣ8 October 1979(1979-10-08) (aged 76)
ರಾಷ್ಟ್ರೀಯತೆಭಾರತೀಯ
ಇತರೆ ಹೆಸರುಜೆಪಿ , ಜಯಪ್ರಕಾಶ,ಲೋಕನಾಯಕ
Organization(s)Indian National Congress, Janata Party
ಚಳುವಳಿIndian Independence movement, Sarvodaya movement, Indian emergency

ಜಯಪ್ರಕಾಶ ನಾರಾಯಣ(ಅಕ್ಟೋಬರ್ ೧೧, ೧೯೦೨ - ಅಕ್ಟೋಬರ್ ೦೮, ೧೯೭೯)ಭಾರತದ ಜನನಾಯಕ, ದೇಶಪ್ರೇಮಿ, ಅನ್ಯಾಯದ ವಿರುದ್ಧ ಸತತವಾಗಿ ಹೋರಾಟ ನಡೆಸಿದವರು. ಅವರನ್ನು ಭಾರತದ ಜನತೆ ಪ್ರೀತಿಯಿಂದ ಜೆ ಪಿ ಎಂದು ಕರೆದರು. ಸ್ವಾತಂತ್ರ ಚಳುವಳಿಯಲ್ಲಿ ಪಾತ್ರವಹಿಸಿದ ಇವರು ಮಹಾತ್ಮ ಗಾಂಧಿ ಮತ್ತು ಎಂ.ಎನ್.ರಾಯ್ ಅವರ ವಿಚಾರಗಳಿಂದ ಪ್ರಭಾವಿತರಾಗಿದ್ದರು. ಗಾಂಧಿಯವರ ಹಾದಿಯಲ್ಲಿ ಮುನ್ನಡೆದ ಮಹಾ ನಿಷ್ಠಾವಂತ.

ಜನನ, ಬಾಲ್ಯ ಹಾಗೂ ವಿದ್ಯಾಬ್ಯಾಸ

[ಬದಲಾಯಿಸಿ]

1902 ರ ಅಕ್ಟೋಬರ್ 11 ರಂದು ಬಿಹಾರ್ ಪ್ರಾಂತ್ಯದ (ಈಗಿನ ಬಿಹಾರ್ ರಾಜ್ಯ) ಸರನ್ ಜಿಲ್ಲೆಯ ಸಿತಾಬ್ ದಿಯಾರಾದಲ್ಲಿ ಜಯಪ್ರಕಾಶರ ಜನನವಾಯಿತು. ರೆವೆನ್ಯೂ ಇಲಾಖೆಯಲ್ಲಿ ಚಿಕ್ಕ ಅಧಿಕಾರಿಯಾಗಿದ್ದ ಹರಸೂ ದಯಾಳ್ ಇವರ ತಂದೆ. ಧಾರ್ಮಿಕ ಪ್ರವೃತ್ತಿಯ ಸರಳ ಸ್ವಭಾವದ ಗೃಹಿಣಿ ಪೂಲ್‍ರಾಣಿ ಇವರ ತಾಯಿ. ಜಯಪ್ರಕಾಶರು ಆ ದಂಪತಿಗಳ ನಾಲ್ಕನೆಯ ಮಗು. ಅಣ್ಣನೂ ಒಬ್ಬ ಅಕ್ಕನೂ ಚಿಕ್ಕಂದಿನಲ್ಲೇ ತೀರಿಕೊಂಡರು. ಜಯಪ್ರಕಾಶರ ಅನಂತರ ಆ ದಂಪತಿಗಳಿಗೆ ಇನೊಬ್ಬ ಮಗ ಹುಟ್ಟಿದರು. ಜಯಪ್ರಕಾಶರ ತಂದೆಯ ತಂದೆ ದೇವಕಿನಂದನಲಾಲ್ ಪೋಲಿಸ್ ಅಧಿಕಾರಿ. ತಮ್ಮ ಬ್ರಿಟಿಷ್ ಮೇಲಧಿಕಾರಿಯನ್ನೇ ಹೊಡೆದ ಪ್ರಸಿದ್ದಿ ಅವರದು. ಜಯಪ್ರಕಾಶ್ ನಾರಾಯಣರದು ಬಿಹಾರದ ಮಧ್ಯಮ ವರ್ಗದ ಕಾಯಸ್ಥ ಕುಟುಂಬ.

ಜಯಪ್ರಕಾಶರ ಬಾಲ್ಯವೆಲ್ಲಾ ಹಳ್ಳಿಯಲ್ಲಿ ಕಳೆಯಿತು. ಅವರು ಅಲ್ಲೇ ಆರಂಭದ ವಿದ್ಯಾಭ್ಯಾಸ ಪಡೆದರು. ಅನಂತರ ಪಟ್ನಾದ ಕೊಲಿಜಿಯೇಟ್ ಶಾಲೆ ಸೇರಿದರು. ಮೆಟ್ರಿಕ್ ಪರೀಕ್ಷೆ ಮುಗಿಸಿದ ನಂತರ ಪಟ್ನಾ ವಿಶ್ವವಿದ್ಯಾಲಯದಲ್ಲಿ ವಿಜ್ಞಾನ ವಿಭಾಗದಲ್ಲಿ ಇಂಟರ್ ತರಗತಿ ಸೇರಿದರು. ಆಗ ಇವರು ಅಸಹಕಾರ ಚಳುವಳಿಯಿಂದ ಪ್ರಭಾವಿತರಾಗಿ ಕಾಲೇಜನ್ನು ತೊರೆದು ಬಂದು ಬಿಹಾರ್ ವಿದ್ಯಾಪೀಠವನ್ನು ಸೇರಿ ವಿದ್ಯಾಭ್ಯಾಸ ಮುಂದುವರಿಸಿ ಆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು. ಅಮೆರಿಕಾಕ್ಕೆ ತೆರಳಿ ಎಂಟು ವರ್ಷಗಳವರೆಗೆ ಅಲ್ಲಿ ಇದ್ದು ಕ್ಯಾಲಿಫೋರ್ನಿಯಾ, ಐಯೋವಾ, ವಿಸ್ಕಾನ್ಸಿನ್ ಹಾಗೂ ಒಹೈಯೋ ವಿಶ್ವವಿದ್ಯಾಲಯಗಳಲ್ಲಿ ವಿಜ್ಞಾನ ಸಮಾಜವಿಜ್ಞಾನಗಳ ಅಧ್ಯಯನ ಮಾಡಿ ಒಹೈಯೋ ವಿಶ್ವವಿದ್ಯಾಲಯದಿಂದ ಎಂ. ಎ ಪದವಿ ಪಡೆದರು. ಪ್ರತಿಭಾಶಾಲಿ ವಿದ್ಯಾರ್ಥಿಯಾಗಿದ್ದ ಜಯಪ್ರಕಾಶರು ಅಮೇರಿಕಾದಲ್ಲಿ ಕಾರ್ಖಾನೆಗಳಲ್ಲಿ, ಹೋಟೆಲುಗಳಲ್ಲಿ, ಹೊಲಗಳಲ್ಲಿ ದುಡಿದು ಹಣ ಗಳಿಸಿ ತಮ್ಮ ಜೀವನ ಮತ್ತು ಶಕ್ಷಣ ವೆಚ್ಚವನ್ನು ನಿರ್ವಹಿಸಿಕೊಂಡರು.

ಅಮೆರಿಕವನ್ನು ಬಿಡುವ ಹೊತ್ತಿಗೆ ಜಯಪ್ರಕಾಶರು ಮಾರ್ಕ್ಸ್‍ವಾದಿಯಾಗಿದ್ದರು. ಎಂ. ಎನ್ ರಾಯರ ವಿಚಾರಧಾರೆ ಇವರ ರಾಜಕೀಯ ಪ್ರಜ್ಞೆಯ ಮೇಲೆ ಪ್ರಭಾವ ಬೀರಿತು. ಅಮೆರಿಕಾಕ್ಕೆ ತೆರಳುವ ಮುನ್ನ ಬ್ರಜ್ ಕಿಶೋರ್ ಪ್ರಸಾದರ ಮಗಳು ಪ್ರಭಾವತಿ ದೇವಿಯವರು ಗಾಂಧೀಯವರ ಆಶ್ರಮದಲ್ಲಿದ್ದು ಗಾಂಧೀ ಮಾರ್ಗದಲ್ಲಿ ನಿಷ್ಠೆ ಗಳಿಸಿದ್ದರು. ಬ್ರಹ್ಮಚರ್ಯೆ ದೀಕ್ಷೆ ತಳೆದಿದ್ದ ಪ್ರಭಾವತಿಯವರ ಭಾವನೆಗಳನ್ನು ಜಯಪ್ರಕಾಶರು ಪುರಸ್ಕರಿಸಿ ತಾವೂ ಅದನ್ನು ಪಾಲಿಸಿದರು. ಇಷ್ಟಾದರೂ ಇವರಿಗೆ ಗಾಂಧಿಯವರ ಅಹಿಂಸಾವಾದದಲ್ಲಿ ಆಗ ನಂಬಿಕೆ ಇರಲಿಲ್ಲ.

ವೃತ್ತಿಜೀವನ

[ಬದಲಾಯಿಸಿ]

ಅಮೆರಿಕದಿಂದ ಮರಳಿದ ಜಯಪ್ರಕಾಶರು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಸಮಾಜ ಶಾಸ್ತ್ರದ ಅಧ್ಯಾಪಕರಾಗಬೇಕೆಂದು ಯೋಚಿಸಿದ್ದರು. ಆದರೆ ನೆಹರೂ ಅವರೊಂದಿಗೆ ಇವರ ಪರಿಚಯ ಬೆಳೆಯಿತು. ನೆಹರೂ ಸೂಚಿಸಿದಂತೆ ಕಾಂಗ್ರೆಸ್ಸಿನ ಕಾರ್ಮಿಕ ಶಾಖೆಯ ನೇತೃತ್ವ ವಹಿಸಲು ಒಪ್ಪಿಕೊಂಡರು. ಆಗ ಗಾಂಧೀಜಿಯವರೊಂದಿಗೆ ಇವರ ಸಂಪರ್ಕ ಹೆಚ್ಚಾಯಿತು. ಸ್ವಾತಂತ್ರ್ಯ ಚಳುವಳಿಯಲ್ಲಿ ಇವರು ಭಾಗವಹಿಸಿ ದಸ್ತಗಿರಿಯಾದರು. ಸರ್ಕಾರ ಇವರನ್ನು ನಾಸಿಕದಲ್ಲಿ ಸೆರೆಯಿಟ್ಟಿತು. ಅಲ್ಲಿ ಅಚ್ಯುತ ಪಟವರ್ಧನ, ಮೀನು ಮಸಾನಿ ಮುಂತಾದವರ ಸಂಪರ್ಕ ಪಡೆದರು. ಮುಂದೆ ಆಚಾರ್ಯ ನರೇಂದ್ರದೇವರ ಸಹಕಾರ ಪಡೆದು ಜಯಪ್ರಕಾಶ್ ನಾರಾಯಣರು ಅಖಿಲ ಭಾರತೀಯ ಕಾಂಗ್ರೆಸ್ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದರು. ತಮ್ಮ ಧೋರಣೆಯ ಸಮರ್ಥನೆಗೆಂದು 1936 ರಲ್ಲಿ ಸಮಾಜವಾದವೇ ಏಕೆ ? ಎಂಬ ಗ್ರಂಥವನ್ನು ಬರೆದರು.

ಸ್ವಾತಂತ್ರ್ಯ ಹೋರಾಟ

[ಬದಲಾಯಿಸಿ]

ಎರಡನೆಯ ಮಹಾಯುದ್ದ ಆರಂಭವಾದಾಗ ತಮಗೆ ಬೇಡದ ಯುದ್ದದಲ್ಲಿ ಬ್ರಿಟಿಷರೊಂದಿಗೆ ಭಾರತ ಸಹಕರಿಸಬಾರದೆಂಬುದು ಜಯಪ್ರಕಾಶರ ಅಭಿಪ್ರಾಯವಾಗಿತ್ತು. ಸಮಾಜವಾದಿ ಬಂಡಾಯ ಆಗಬೇಕೆಂದು ಪ್ರಚಾರ ಮಾಡುತ್ತಾ ಇವರು ದೇಶದ ಹಲವೆಡೆ ಸಂಚರಿಸಿದರು. ಸರ್ಕಾರ ಇವರನ್ನು 1940 ರಲ್ಲಿ ದಸ್ತಗಿರಿ ಮಾಡಿ 1941 ರಲ್ಲಿ ಬಿಡುಗಡೆ ಮಾಡಿತು. ಮತ್ತೆ 1941ರಲ್ಲಿ ಇವರು ದಸ್ತಗಿರಿಯಾದರು. ಇವರನ್ನು ಬಂದಿಗಳ ಶಿಬಿರದಲ್ಲಿ ಅತ್ಯಂತ ಕಟ್ಟುನಿಟ್ಟಾದ ಸೆರೆಯಲ್ಲಿಡಲಾಗಿತ್ತು. ಇವರ ಕ್ರಾಂತಿಕಾರಿ ಭಾವನೆಗಳಿಂದಾಗಿ ಬ್ರಿಟಿಷ್ ಸರ್ಕಾರ ತುಂಬಾ ಬೆದರಿತ್ತು. ಬ್ರಿಟಿಷರು ಭಾರತ ಬಿಟ್ಟು ತೊಲಗಬೇಕೆಂದು ಚಳುವಳಿ ಹೂಡಲು 1942ರಲ್ಲಿ ಕಾಂಗ್ರೆಸ್ಸು ನಿರ್ಣಯಮಾಡಿದಾಗ ಜಯಪ್ರಕಾಶರು ಬಂಧನದಲ್ಲೇ ಇದ್ದರು. ರಾಷ್ಟ್ರದ ಮುಖಂಡರನ್ನೆಲ್ಲಾ ಸರ್ಕಾರ ದಸ್ತಗಿರಿ ಮಾಡಿತು. ನಾಯಕರಿಲ್ಲದ ಆ ಸಮಯದಲ್ಲಿ ತಾವು ಹೇಗಾದರೂ ಮಾಡಿ ಸೆರೆಮನೆಯಿಂದ ಹೊರಬಿದ್ದು ಜನತೆಯ ಹೋರಾಟವನ್ನು ನಿರ್ದೇಶಿಸಬೇಕೆಂದು ಜಯಪ್ರಕಾಶ್ ನಾರಾಯಣರು ನಿರ್ಧಸಿದರು. ಗೆಳೆಯರೊಂದಿಗೆ ಕೂಡಿ ಯೋಜನೆ ಮಾಡಿಕೊಂಡು ಕಾರಾಗೃಹದ ಗೋಡೆಯನ್ನು ಹಾರಿ ಕಾಡಿನಲ್ಲಿ ನುಸುಳಿ ಅಗಾಧ ಕಷ್ಟ ಅನುಭವಿಸಿ ಪಾರಾದರು. ಬ್ರಿಟಿಷ್ ಆಡಳಿತಕ್ಕೆ ಕಿರುಕುಳ ಕೊಡುವ ನಾನಾ ಕಾರ್ಯಗಳಲ್ಲಿ ತೊಡಗಿದ್ದವರಿಗೆ ಸೂಚನೆ ನೀಡುವ ಹೊಣೆ ಹೊತ್ತರು. ತಂತಿ ಕತ್ತರಿಸುವುದು, ಬ್ರಿಟಿಷ್ ಸರ್ಕಾರದ ಆಡಳಿತ ವ್ಯವಸ್ಥೆಗಳನ್ನು ತುಂಡರಿಸುವುದು ಇಂಥ ಯಾವ ಕಾರ್ಯವೂ ತಪ್ಪಲ್ಲ ಎಂಬುದು ಇವರ ನಂಬಿಕೆಯಾಗಿತ್ತು. ಭೂಗತರಾದ ಜಯಪ್ರಕಾಶರನ್ನು ಹಿಡಿದುಕೊಟ್ಟವರಿಗೆ ಅಥವಾ ಇವರ ಸುಳಿವು ನೀಡಿದವರಿಗೆ ಬಹುಮಾನ ನೀಡುವುದಾಗಿ ಸರ್ಕಾರ ಘೋಷಿಸಿತು. ಆದರೆ, ಜಯಪ್ರಕಾಶರು ಸರ್ಕಾರದ ಕಣ್ಣು ತಪ್ಪಿಸಿ ತಿರುಗುತ್ತ ಹೋರಾಟದಲ್ಲಿ ನಿರತರಾಗಿದ್ದರು. ಸರ್ಕಾರ ಇವರನ್ನು ಮತ್ತೆ ದಸ್ತಗಿರಿ ಮಾಡಿ ಸೆರೆಯಲ್ಲಿಟ್ಟಿತ್ತು.

ಸ್ವಾತಂತ್ರ್ಯಾನಂತರ

[ಬದಲಾಯಿಸಿ]

ಸ್ವಾತಂತ್ರ್ಯಾನಂತರ ಮತ್ತು ಗಾಂಧೀಜಿಯವರ ಮರಣದ ಅನಂತರ ಜಯಪ್ರಕಾಶರು ಕ್ರಮಕ್ರಮವಾಗಿ ಗಾಂಧಿ ವಿಚಾರದತ್ತ ಹೆಚ್ಚು ಹೆಚ್ಚು ಸರಿಯತೊಡಗಿದರು. ಹಳ್ಳಿ ನಗರಗಳ ನಡುವಿನ ಆರ್ಥಿಕ ಅಂತರ ಇನ್ನೂ ಉಳಿದ ಅಸ್ಪ್ರಷ್ಯತೆಯೇ ಮುಂತಾದ ಸಾಮಾಜಿಕ ಅನ್ಯಾಯಗಳು, ಸುತ್ತಲೂ ಬೆಳೆಯುತ್ತಿರುವ ರಾಜಕೀಯ ಭೃಷ್ಟಾಚಾರ, ವಂಚನೆ ಇವು ಜಯಪ್ರಕಾಶರ ಚಿತ್ತಸ್ವಾಸ್ಥ್ಯವನ್ನು ಕೆಡಿಸಿದವು. ಭಾರತದ ಬೃಹತ್ ಸಮಸ್ಯೆಗಳನ್ನು ಬಗೆಹರಿಸಲು ಕೆಲವು ಮುಖಂಡರು ಗ್ರಾಮಗಳಿಗೆ ತೆರಳಿ ಕೆಲಸ ಮಾಡುವುದು ಅಗತ್ಯವೆಂದು ನಂಬಿದ ಜಯಪ್ರಕಾಶರು ಅದಕ್ಕಾಗಿಯೇ ವಿನೋಬಾಜಿಯವರೊಂದಿಗೆ ಸೇರಿ ಸರ್ವೋದಯ ಕಾರ್ಯಕ್ರಮಗಳನ್ನು ರಾಷ್ಟ್ರವ್ಯಾಪಿ ಪ್ರಮಾಣದಲ್ಲಿ ಸಂಘಟಿಸಿದರು.

ಭಾರತದ ಸ್ವಾತಂತ್ರ್ಯಾಂದೋಲನದಲ್ಲಿ ಆಂದೋಲನಕ್ಕೆ ಯಶಸ್ಸು ದೊರೆತಗಳಿಗೆಯಲ್ಲೂ ಜಯಪ್ರಕಾಶರು ಮಂಚೂಣಿಯ ನಾಯಕರಾಗಿ ಜನಪ್ರಿಯರಾಗಿ ಇದ್ದರಾದರೂ ಪ್ರಚಾರ, ಪ್ರಸಿದ್ದಿ ಹಾಗೂ ಉನ್ನತ ಅಧಿಕಾರ ಸ್ಥಾನಗಳನ್ನು ಅವರು ಎಂದೂ ಬಯಸಲಿಲ್ಲ. ಸ್ವ ಪ್ರೇರಣೆಯಿಂದ ಅವರು ಅವುಗಳಿಂದ ದೂರ ಸರಿದು ಗ್ರಾಮಮಟ್ಟದಲ್ಲಿ ಸಮಾಜಸೇವೆಗಾಗಿ ತಮ್ಮನ್ನು ಮುಡಿಪಾಗಿಟ್ಟುಕೊಂಡರು. ಸ್ವಾವಲಂಬಿ ಯೋಜನೆಗಳನ್ನು ರೂಪಿಸುತ್ತಾ, ಜಾತಿಮತಿಗಳ ಸಂಕೋಲೆಗಳ ವಿರುದ್ಧ ಧ್ವನಿಯೆತ್ತುತ್ತ ಭೃಷ್ಟಾಚಾರಗಳನ್ನು ಬಯಲಿಗೆಳೆಯುತ್ತ ಚುನಾವಣೆಗಳಲ್ಲಿ ಮತ ಸಿಗಲಾರದೆಂಬ ಭಯದಿಂದ ಇತರರು ಗಮನಿಸದಿದ್ದ ಅನೇಕ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳುತ್ತಾ ಇವರು ದೇಶದಲ್ಲೆಲ್ಲಾ ಸಂಚರಿಸಿದರು.

ಚಳುವಳಿಗಳು

[ಬದಲಾಯಿಸಿ]

ಜಯಪ್ರಕಾಶರಿಗೆ ಹಿಂಸಾತ್ಮಕ ಕ್ರಾಂತಿಯಲ್ಲಿ ನಂಬಿಕೆಯಿರಲಿಲ್ಲ. ಜೆ. ಪಿ.ಯವರ ಅಹಿಂಸಾತ್ಮಕವಾದ ಪ್ರಾಮಾಣಿಕ ಸರಣಿ ಅವರ ಸಮಾಜವಾದಿ ಕಾರ್ಯಕ್ರಮಗಳಿಗೆ ಯಶಸ್ಸನ್ನು ತಂದ ಅನೇಕ ನಿದರ್ಶನಗಳಿವೆ. ಭೂದಾನ ಚಳವಳಿ ಅಂತಹುಗಳಲ್ಲೊಂದು. 1967 ರಲ್ಲಿ ಬಿಹಾರದಲ್ಲಿ ಬರ ಬಂದಾಗ ಜೆ. ಪಿ. ಯವರ ಒಂದು ಬೇಡಿಕೆ ಅನೇಕ ದೇಶಗಳ ಸದ್ವಿವೇಕವನ್ನು ಜಾಗೃತಗೊಳಿಸಿ ನೆರವು ಪ್ರವಹಿಸುವಂತೆ ಮಾಡಿತು. ಹತ್ತು ವರ್ಷಗಳ ಕಾಲ ಕೂಟ ಯುದ್ದದಲ್ಲಿ ತೊಡಗಿದ್ದ ನಾಗಾಬಂಡಾಯಗಾರರನ್ನು ನಿರ್ಭಯವಾಗಿ ಸಂದರ್ಶಿಸಿದ ಜಯಪ್ರಕಾಶರು ತಮ್ಮ ಸೌಜನ್ಯಪೂರ್ಣ ವಿವರಣೆಯಿಂದ ನಾಗಾಗಳ ಮನವೊಲಿಸಿ ಅವರು ಯುದ್ದ ನಿಲ್ಲಿಸಿ ಮಾತುಕತೆಗೆ ಒಡಂಬಡುವಂತೆ ಅವರನ್ನು ಅಣಿಮಾಡಿದರು. ಕಾಶ್ಮೀರದ ವಿಚಾರದಲ್ಲಿ ಮತ್ತು ಪಾಕಿಸ್ತಾನದ ಜೊತೆಗಿನ ಸಂಬಂಧದ ವಿಚಾರದಲ್ಲಿ ಜೆ. ಪಿ. ಅನೇಕ ಸಲ ಸರ್ಕಾರಕ್ಕೆ ಮತ್ತು ಜನನಾಯಕರಿಗೆ ಅಷ್ಟೊಂದು ರುಚಿಸದ, ಆದರೆ, ಅರ್ಥಪೂರ್ಣವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಪ್ರಜಾಸತ್ತೆ ಅವಿಭಾಜ್ಯವಾದ ಮೌಲ್ಯ. ನಾವು, ಹೊರಗಿನವರಿಗೆ ಪ್ರಜಾತಂತ್ರವಾದಿಗಳಾಗಿ ಆಂತರಿಕವಾಗಿ ಪ್ರಜಾತಂತ್ರ ವಿರೋಧಿಗಳಾಗಲು ಶಕ್ಯವಿಲ್ಲ. ಇದು ಜೆ.ಪಿ. ಆವರ ಸ್ಪಷ್ಟ ಆಭಿಪ್ರಾಯ.

ಭಾರತ-ಪಾಕಿಸ್ತಾನಗಳ ನಡುವಣ ಯುದ್ಧದ ಸಂದರ್ಭದಲ್ಲಿ ಪೂರ್ವ ಪಾಕಿಸ್ತಾನದಿಂದ (ಈಗ ಬಾಂಗ್ಲಾದೇಶ) ಬಂದ ನಿರ್ವಾಸಿತರಿಗೆ ಜಯಪ್ರಕಾಶರ ಸರ್ವೋದಯ ಕಾರ್ಯಕರ್ತರ ಸೇವೆ ಸಿದ್ಧವಾಗಿತ್ತು. ಇವರು ಹದಿನಾರು ರಾಷ್ಟ್ರಗಳಿಗೆ ಸಂಚರಿಸಿ, ಭಾರತದ ಗಡಿಯಲ್ಲಿ ಏನು ನಡೆದಿದೆ ಎಂಬುದನ್ನು ಪ್ರಪಂಚಕ್ಕೆ ತಿಳಿಸಿ ಬಂದರು. ಆದರೂ ಬಾಂಗ್ಲಾದೇಶದ ವಿಮೋಚನೆ ಆದೊಡನೆಯೇ ಈ ಉಪಖಂಡದ ರಾಷ್ಟ್ರಗಳಿಗೆ ಶಾಂತಿಯುತ ಸಹಜೀವನದ ಮಹತ್ವವನ್ನು ಒತ್ತಿ ಹೇಳಿದವರಲ್ಲಿ ಇವರೇ ಮೊದಲಿಗರು.

ತುರ್ತುಪರಿಸ್ಥಿತಿ

[ಬದಲಾಯಿಸಿ]

1973ರ ಏಪ್ರಿಲ್‍ನಲ್ಲಿ ಜಯಪ್ರಕಾಶರ ಪತ್ನಿ ಪ್ರಭಾವತಿ ತೀರಿಕೊಂಡರು. ಸ್ವತಃ ಅನಾರೋಗ್ಯಕ್ಕೆ ಒಳಗಾಗಿದ್ದ ಜಯಪ್ರಕಾಶರು ಆ ವೇಳೆಗೆ ಇನ್ನೊಂದು ಮಹಾಚಳುವಳಿಯ ನೇತಾರರಾಗುವುದು ಅನಿವಾರ್ಯವಾಯಿತು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಅಧಿಕಾರ ನಡೆಸುತ್ತಿದ್ದ ಕಾಂಗ್ರೆಸ್ ಸರ್ಕಾರದ ಏಕಾಧಿಕಾರದ ವಿರುದ್ದ ಇವರು ಹೋರಾಟ ಆರಂಭಿಸಿದರು. ರಾಜತಂತ್ರ ಪ್ರಬಲವಾಗಿ ಜನತಂತ್ರವನ್ನು ಕಡೆಗಣಿಸಿದುದನ್ನು ಇವರು ವಿರೋಧಿಸಿದರು. ಪ್ರಜಾಪ್ರಭುತ್ವದ ಅಂಗಗಳಾದ ಸಂಸತ್ತು, ನ್ಯಾಯಾಲಯ, ಆಡಳಿತ ಮೂರು ಸಂವಿಧಾನಬದ್ದವಾಗಿ ಕೆಲಸಮಾಡುವಂಥ ವಾತಾವರಣ ದೇಶದಲ್ಲಿ ಸೃಷ್ಟಿಯಾಗಬೇಕೆಂದು ಇವರು ಬಯಸಿದರು. ಭೃಷ್ಟಾಚಾರ, ಸರ್ವಾಧಿಕಾರ ಇವನ್ನು ಎದುರಿಸಲು ಮಹಾಚಳುವಳಿಯೊಂದು ದೇಶದಲ್ಲಿ ಆರಂಭವಾಯಿತು. ದೇಶದ ಈ ಪರ್ವಕಾಲದಲ್ಲಿ ಜಯಪ್ರಕಾಶರು ಅದರ ನಿರ್ದೇಶನದ ಹೊಣೆ ವಹಿಸಿಕೊಂಡರು.

ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರ ಪ್ರತಿಸ್ಪರ್ಧಿ ಅಲಹಾಬಾದ್ ಉಚ್ಚನ್ಯಾಯಾಲಯದಲ್ಲಿ ಹೂಡಿದ್ದ ಮೊಕದ್ದಮೆಯಲ್ಲಿ ಇಂದಿರಾಗಾಂಧಿಯವರ ವಿರುದ್ದ ತೀರ್ಪು ಹೊರಬಿದ್ದಾಗ ಚಳುವಳಿ ತೀವ್ರವಾಯಿತು. ಇಂದಿರಾಗಾಂಧಿಯವರು ರಾಜೀನಾಮೆ ಕೊಡಬೇಕೆಂಬ ಕೂಗು ಎದ್ದಿತು. ಇಂದಿರಾಗಾಂಧಿಯವರು ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲರ್ಜಿ ಸಲ್ಲಿಸಿದರಲ್ಲದೆ ದೇಶದಲ್ಲಿ ತುರ್ತುಪರಿಸ್ಥಿಯನ್ನು ಘೋಷಿಸಿದರು. ಜಯಪ್ರಕಾಶರ ನಾರಾಯಣ್ ಮೊದಲುಗೊಂಡು ಅನೇಕ ನಾಯಕರು ದಸ್ತಗಿರಿಯಾದರು (1975). ಇವರನ್ನು ಸ್ಥಾನಬದ್ದತೆಯಲ್ಲಿಡಲಾಯಿತು.

1976ರ ಕೊನೆಯಲ್ಲಿ ಜಯಪ್ರಕಾಶರ ಬಿಡುಗಡೆಯಾಯಿತು. ಆದರೆ ಇವರ ಆರೋಗ್ಯ ಹದಗೆಟ್ಟಿತು. ಜನತಂತ್ರಬಾಹಿರವಾದ ಕೃತ್ಯವೆಸಗಿ ಸರ್ಕಾರ ಅನ್ಯಾಯ ಮಾಡುತ್ತಿದೆಯೆಂಬ ಜಯಪ್ರಕಾಶರ ನಿಲುವಿನಲ್ಲಿ ಬದಲಾವಣೆಯಾಗಿರಲಿಲ್ಲ. ಮುಂದಿನ ಹಲವು ವಾರಗಳ ಕಾಲ ಇವರು ಜಸ್‍ಲೋಕ್ ಆಸ್ಪತ್ರೆಯಲ್ಲಿ ಸಾವಿನ ಎದುರು ಹೋರಾಟ ನಡೆಸಿದರು.

1977ರ ಜನವರಿಯಲ್ಲಿ ಇಂದಿರಾಗಾಂಧಿಯವರು ತುರ್ತುಪರಿಸ್ಥಿಯನ್ನು ಸಡಿಲಿಸಿ ಲೋಕಸಭೆಗೆ ಚುನಾವಣೆ ಘೋಷಿಸಿದರು. ಹಲವು ವಿರೋಧ ಪಕ್ಷಗಳು ಒಂದಾಗಿ ಜನತಾಪಕ್ಷ ಸ್ಥಾಪಿತವಾಯಿತು. ಅದು ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿ ಸರ್ಕಾರ ರಚಿಸಿತು.

ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತೆ ಸ್ಥಾಪಿತವಾಯಿತೆಂದು ಜಯಪ್ರಕಾಶರಿಗೆ ಸಮಾಧಾನವಾಯಿತಾದರೂ ಅವರಿಗೆ ಅಷ್ಟಕ್ಕೆ ತೃಪ್ತಿಯಿರಲಿಲ್ಲ. ದೇಶದಲ್ಲಿ ಸಂಪೂರ್ಣ ಕ್ರಾಂತಿಯಾಗಬೇಕು, ಭೃಷ್ಟಾಚಾರ ತೊಲಗಬೇಕು, ನಿಜವಾದ ಜನಶಕ್ತಿಯ ಆಳ್ವಿಕೆ ಆರಂಭವಾಗಬೇಕು. ಆಡಳಿತದ ವಿಕೇಂದ್ರಿಕರಣವಾಗಬೇಕು, ಹೊಸ ಶಿಕ್ಷಣ ರೂಪುಗೊಳ್ಳಬೇಕು. ಇದು ಇವರ ಬಯಕೆಯಾಗಿತ್ತು. ಅಮೆರಿಕಾದ ಸಿಯಾಟ್‍ನಲ್ಲಿ ಶಸ್ತ್ರಚಿಕಿತ್ಸೆ ಹೊಂದಿ ಮರಳಿದ ಮೇಲೆ ಜಯಪ್ರಕಾಶರು ಈ ಆದರ್ಶ ಸಮಾಜದ ಸ್ಥಾಪನೆಗಾಗಿ ತಮ್ಮ ಕೆಲಸ ಮುಂದುವರಿಸಿದರು. ಜಯಪ್ರಕಾಶ್ ನಾರಾಯಣರು 1979ರ ಅಕ್ಟೋಬರ್ 8 ರಂದು ನಿಧನ ಹೊಂದಿದರು.

ಯಶಸ್ಸು

[ಬದಲಾಯಿಸಿ]

ಯಾವ ತೊಡಕಿನ ಸಮಸ್ಯೆಯನ್ನೇ ಆಗಲಿ ಬಿಡಿಸುವಲ್ಲಿ ಜೆ.ಪಿ.ಯವರು ತೋರಿಸುತ್ತಿದ್ದ ಅಪೂರ್ವ ತಾಳ್ಮೆ, ವಿವಿಧ ಅಭಿಪ್ರಾಯಗಳನ್ನು ಕೇಳುವ ಕುತೂಹಲ, ಮನುಷ್ಯನ ಮೂಲಭೂತ ಒಳ್ಳೆಯತನದಲ್ಲಿ ನಂಬಿಕೆ, ಈ ಒಳ್ಳೆಯತನವನ್ನು ಮುಟ್ಟುವ ತಟ್ಟುವ ಅವರ ಪ್ರಾಮಾಣಿಕ ಪ್ರಯತ್ನ - ಇವೇ ಅವರ ಯಶಸ್ಸಿನ ಗುಟ್ಟು. 200 ಜನ ಪೋಲಿಸರು ವರ್ಷಾನುವರ್ಷ ಇಡೀ ಚಂಬಲ್ ಕಣಿವೆಯನ್ನು ಜಾಲಾಡಿಸಿ ಹುಡುಕಾಡಿದರೂ ವ್ಯಮಾನಿಕರು ಆ ಭಾಗಗಳಲ್ಲಿ ಬಾಂಬು ಸುರಿಸಿದರೂ ಆಗದಂಥ ಕೆಲಸ - ನೂರಾರೂ ಜನ ಕೊಲೆಗಡುಕರು, ಸುಲಿಗೆದಾರರು ತಮ್ಮ ಜೀವನವಿಧಾನವನ್ನೇ ಬದಲಿಸಿ ಬಂದು ಒಬ್ಬ ವ್ಯಕ್ತಿಗೆ ಶರಣಾಗತವಾದ್ದು- ಸಾಮಾನ್ಯವಲ್ಲ. ಒಳ್ಳೆಯ ಶೀಲ, ಚಾರಿತ್ರ್ಯ, ಪ್ರಾಮಾಣಿಕತೆ, ತ್ಯಾಗಗಳಿಂದ ಒಬ್ಬ ವ್ಯಕ್ತಿ ಏನು ಸಾಧಿಸಬಹುದು ಎಂಬುದಕ್ಕೆ ಜಯಪ್ರಕಾಶ ನಾರಾಯಣರು ಉತ್ತಮ ನಿದರ್ಶನವಾಗಿದ್ದರು.

ಬ್ರಿಟಿಷ್ ಕೂಲಿಗಾರ ಪಕ್ಷದ ಸಂಸತ್ ಸದಸ್ಯ ಲಾರ್ಡ್ ಬ್ರಾಕ್‍ವೇ ಹೇಳಿದಂತೆ, ಜಯಪ್ರಕಾಶ್ ನಾರಾಯಣರು ಸ್ವಾತಂತ್ರ್ಯಾಂದೋಲನದಲ್ಲಿ ಭಾರತದಲ್ಲಿ ಉತ್ತಮವಾದುದನ್ನೆಲ್ಲಾ ಪ್ರತಿನಿಧಿಸಿದರು. ಔದಾರ್ಯ, ರಚನಾತ್ಮಕ ದೃಷ್ಟಿ, ಕಟುತ್ವವಿಲ್ಲದ ವರ್ತನೆ- ಇವು ಜಯಪ್ರಕಾಶರ ವೈಶಿಷ್ಟ್ಯ. ಗಾಂಧೀಜಿಯವರ ಅನಂತರ ಭಾರತದ ಪರಿಸ್ಥಿತಿಯ ಬಗ್ಗೆ ಸತ್ಯವಾದ ಮಾತುಗಳನ್ನು ಸ್ಪಷ್ಟವಾಗಿ ಹೇಳಿದ ಮತ್ತು ಹೇಳಬಲ್ಲವರಾಗಿದ್ದ ಏಕೈಕ ವ್ಯಕ್ತಿಯೆಂದರೆ ಜಯಪ್ರಕಾಶ್ ನಾರಾಯಣ್. ಪಟ್ನಾದಲ್ಲಿ ತನ್ನ ಮಗಳ ಮದುವೆಗೆ ಸಹಾಯ ಬೇಡಿ ಬರುತ್ತಿದ್ದ ಹಳ್ಳಿಯ ರೈತನಿಂದ ಹಿಡಿದು ರಾಜಕೀಯ ಸಮಸ್ಯೆಗಳಿಂದ ತಲೆಕಾಯಿಸಿಕೊಂಡು ಬರುತ್ತಿದ್ದ ಸರಕಾರಿ ಮಂತ್ರಿಗಳವರೆಗೆ ಎಲ್ಲರಿಗೂ ಜೆ. ಪಿ. ಯವರ ಮೃದುಮಧುರ ಸೌಮ್ಯ ಭಾವನೆ ಸಿದ್ದವಿರುತ್ತಿತ್ತು.

ಬರಹಗಾರ,ಚಿಂತಕ

[ಬದಲಾಯಿಸಿ]

ಜಯಪ್ರಕಾಶ್ ನಾರಾಯಣರು ಪ್ರಖ್ಯಾತ ಬರಹಗಾರರೂ, ಚಿಂತಕರೂ ಆಗಿದ್ದರು. ಸಮಾಜವಾದವೇ ಏಕೆ, ಸಂಘರ್ಷದೇಡೆಗೆ, ಲಾಹೋರ್ ಕೋಟೆಯಲ್ಲಿ, ಭಾರತೀಯ ರಾಜನೀತಿಯ ಪುನನಿರ್ಮಾಣಕ್ಕೊಂದು ಮನವಿ, ಸಮಾಜವಾದದಿಂದ ಸರ್ವೋದಯದ ಕಡೆಗೆ, ಜನತೆಗಾಗಿ ಸ್ವರಾಜ್ಯ-ಇವನ್ನು ಕುರಿತು ಇವರು ಇಂಗ್ಲೀಷ್‍ನಲ್ಲಿ ಕೃತಿರಚನೆ ಮಾಡಿದ್ದಾರೆ. +

ಪ್ರಶಸ್ತಿಗಳು

[ಬದಲಾಯಿಸಿ]

ಭಾರತ ಸರ್ಕಾರ ಇವರಿಗೆ 1999ರಲ್ಲಿ ಮರಣೊತ್ತರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. 2002ರಲ್ಲಿ ದೇಶದ್ಯಾಂತ ಜಯಪ್ರಕಾಶ್ ನಾರಾಯಣ್ ಅÀವರ ಶತಮಾನೋತ್ಸವವನ್ನು ಆಚರಿಸಲಾಯಿತು. ೧೯೬೫ರಲ್ಲಿ ಇವರಿಗೆ ರೋಮನ್ ಮ್ಯಾಗ್ಸೇಸೆ ಪ್ರಶಸ್ತಿ ದೊರೆತಿದೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: