ಕಿತ್ತೂರು ಚೆನ್ನಮ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಿತ್ತೂರು ರಾಣಿ ಚೆನ್ನಮ್ಮ
ಚೆನ್ನಮ್ಮ ಪ್ರತಿಮೆ
ಜನನ(೧೭೭೮-೧೦-೨೩)೨೩ ಅಕ್ಟೋಬರ್ ೧೭೭೮
ಮರಣ2 February 1829(1829-02-02) (aged 50)
ಬೈಲಹೊಂಗಲ, ಬೆಳಗಾವಿ
ಇತರೆ ಹೆಸರುಗಳುಭಾರತದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ, ಕನ್ನಡಿಗರ ತಾಯಿ.
ಪೋಷಕರು
  • ಧೂಳಪ್ಪಗೌಡರು (father)
ಕಿತ್ತೂರು ಕೋಟೆ
ಕಿತ್ತೂರಿನಲ್ಲಿ ರಾಣಿ ಚನ್ನಮ್ಮಳ ಪ್ರತಿಮೆ

ಕಿತ್ತೂರು ರಾಣಿ ಚೆನ್ನಮ್ಮ [೧] (೧೭೭೮-೧೮೨೯) ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಕಿರಿಯ ಹೆಂಡತಿ. ತನ್ನ ಪುಟ್ಟ ರಾಜ್ಯದ ಸ್ವಾತಂತ್ರ ರಕ್ಷಣೆಗಾಗಿ ಬ್ರಿಟಿಷರ ದೊಡ್ಡ ಸೈನ್ಯದ ವಿರುದ್ಧ ಹೋರಾಡಿದ್ದಳು[೨] . ಚೆನ್ನಮ್ಮ[೩] ನಿಂದ ಕಿತ್ತೂರು ಪ್ರಸಿದ್ಧವಾಗಿದೆ.

ರಾಣಿ ಚೆನ್ನಮ್ಮನ ಜೀವನ[ಬದಲಾಯಿಸಿ]

ಕಿತ್ತೂರು ಚೆನ್ನಮ್ಮ ಹುಟ್ಟಿದ್ದು ೨೩ ಅಕ್ಟೋಬರ್ ೧೭೭೮ರಲ್ಲಿ. ಬೆಳಗಾವಿಯಿಂದ ಉತ್ತರಕ್ಕೆ ಸುಮಾರು ೬ ಕಿ.ಮಿ. ದೂರದಲ್ಲಿರುವ ಕಾಕತಿ ಅವಳ ಹುಟ್ಟೂರು. ತಂದೆ ಕಾಕತಿಯ ದೇಸಾಯಿ ಧೂಳಪ್ಪಗೌಡರು. ಚೆನ್ನಮ್ಮ ಎಳೆ ವಯಸ್ಸಿನಲ್ಲಿಯೆ ಕುದುರೆ ಸವಾರಿ ಹಾಗು ಬಿಲ್ಲುವಿದ್ಯೆಗಳನ್ನು ಕರಗತ ಮಾಡಿಕೊಂಡಿದ್ದಳು. ಸ್ವಂತ ಮಕ್ಕಳಿಲ್ಲದ ರಾಣಿ ಚೆನ್ನಮ್ಮ ರಾಜನಿಷ್ಠರಾದ ಗುರುಸಿದ್ದಪ್ಪ, ಹಿಮ್ಮತಸಿಂಗ,ಸಂಗೊಳ್ಳಿ ರಾಯಣ್ಣ ನರಸಿಂಗರಾವ, ಗುರುಪುತ್ರ ಮತ್ತು ಇತರ ಬೆಂಬಲಿಗರ ನೆರವಿನಿಂದ ತನ್ನ ದತ್ತಕ ಮೊಮ್ಮಗನಿಗೆ ಪಟ್ಟ ಕಟ್ಟಿದಳು.

ಕಿತ್ತೂರು ಚೆನ್ನಮ್ಮ ಅವರು 1778 ರ ಅಕ್ಟೋಬರ್ 23 ರಂದು ಭಾರತದ ಕರ್ನಾಟಕದ ಪ್ರಸ್ತುತ ಬೆಳಗಾವಿ ಜಿಲ್ಲೆಯ ಕಾಕತಿ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದರು. ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿದ ಆಕೆ ಚಿಕ್ಕಂದಿನಿಂದಲೇ ಕುದುರೆ ಸವಾರಿ, ಕತ್ತಿವರಸೆ ಮತ್ತು ಬಿಲ್ಲುಗಾರಿಕೆಯಲ್ಲಿ ತರಬೇತಿ ಪಡೆದಿದ್ದಳು. ಅವರು ದೇಸಾಯಿ ಮನೆತನದ ರಾಜಾ ಮಲ್ಲಸರ್ಜ ಅವರನ್ನು 15 ನೇ ವಯಸ್ಸಿನಲ್ಲಿ ವಿವಾಹವಾದರು.[೪] [೫]

ಕಿತ್ತೂರಿನ ಇತಿಹಾಸ[ಬದಲಾಯಿಸಿ]

  • ಬ್ರಿಟಿಷರು ಭಾರತದಲ್ಲಿ ಕಾಲೂರುವ ಸಮಯದಲ್ಲಿ ಇಲ್ಲಿಯ ರಾಜಕೀಯ ಪರಿಸ್ಥಿತಿ ಬಹಳ ವಿಲಕ್ಷಣವಾಗಿತ್ತು. ಉತ್ತರ ಹಿಂದುಸ್ಥಾನದಲ್ಲಿ ಮೊಗಲ ಬಾದಶಾಹಿ ನಿರ್ಬಲವಾಗಿತ್ತು. ದಕ್ಷಿಣದಲ್ಲಿ ಸ್ವರಾಜ್ಯದ ವಿಸ್ತರಣೆಗಾಗಿ ಹೋರಾಡುತ್ತಿದ್ದ ಪೇಶವಾಯಿ, ಆಕ್ರಮಣಕಾರಿ ಧೋರಣೆಯ ಹೈದರಾಬಾದಿನ ನಿಜಾಮಶಾಹಿ ಹಾಗು ಮೈಸೂರಿನ ಹೈದರ್ ಅಲಿ ಇವರೆಲ್ಲರ ನಡುವೆ ತಮ್ಮ ಉಳಿವಿಗಾಗಿ ಹೋರಾಡುತ್ತಿದ್ದ ಚಿಕ್ಕ ಪುಟ್ಟ ಪಾಳೆಗಾರರು.
  • ಇಂತಹ ರಾಜಕೀಯ ಪರಿಸ್ಥಿತಿ ಧೂರ್ತ, ಕ್ರೂರ ಧೋರಣೆಯ ಬ್ರಿಟಿಷ ಈಸ್ಟ ಇಂಡಿಯಾ ಕಂಪನಿಗೆ ಸುವರ್ಣಾವಕಾಶವನ್ನು ಒದಗಿಸಿತ್ತು. ಇಂತಹ ಸಮಯದಲ್ಲಿ ಮಲ್ಲಸರ್ಜನ ದೊರೆಯನ್ನು ಟಿಪ್ಪು ಸುಲ್ತಾನನು ಸೆರೆ ಹಿಡಿದು ಕಪಾಲದುರ್ಗದಲ್ಲಿ ಸೆರೆಯಿಟ್ಟಿದ್ದನು. ಉಪಾಯದಿಂದ ತಪ್ಪಿಸಿಕೊಂಡ ದೊರೆ ೧೮೦೩ರಲ್ಲಿ ವೆಲ್ಲೆಸ್ಲಿಗೆ ನೆರವು ನೀಡಿ ಕಿತ್ತೂರನ್ನು ಭದ್ರ ಗೊಳಿಸಿದ್ದನು.
  • ೧೮೦೯ರಲ್ಲಿ ಪೇಶವೆಯವರಿಗೆ ರೂ.೧,೭೫,೦೦೦ ಕೊಟ್ಟು, ಅವರ ಸ್ಥಾನಿಕ ಕಾವಲು ಸೈನ್ಯದ ಖರ್ಚನ್ನು ನೀಡಿ ಅವರಿಂದ ಸನದು ಪಡೆದಿದ್ದನು. ಆದರೆ ಪೇಶ್ವೆಯವರು ವಿಶ್ವಾಸಘಾತ ಮಾಡಿ ಮಲ್ಲಸರ್ಜನನ್ನು ಸೆರೆ ಹಿಡಿದು ೩ ವರ್ಷ ಕಾಲ ಪುಣೆಯಲ್ಲಿಟ್ಟರು. ೧೮೧೬ರಲ್ಲಿ ಬಿಡುಗಡೆ ಹೊಂದಿ ಮರಳುವಾಗ ದಾರಿಯಲ್ಲಿಯೆ ಮಲ್ಲಸರ್ಜನು ಕೊನೆಯುಸಿರನ್ನೆಳೆದ. ಅವನ ಮಗ ಶಿವಲಿಂಗ ರುದ್ರಸರ್ಜನು ಮರಾಠ ಹಾಗು ಟಿಪ್ಪು ಸುಲ್ತಾನ ಇವರ ಕಿರಿಕಿರಿ ತಪ್ಪಿಸಲು ಬ್ರಿಟಿಷರ ಜೊತೆಗೆ ಸ್ನೇಹದಿಂದಿದ್ದ.
  • ಆದರೆ ಅದೆಂತಹ ಸ್ನೇಹವೆಂದರೆ! ಪ್ರತಿ ವರ್ಷ ರೂ. ೧,೭೦,೦೦೦ ಕಾಣಿಕೆ ಕೊಡುವ ಕರಾರಿನ ಮೇಲೆ ಬ್ರಿಟಿಷರು ಈ ದೊರೆಗೆ ಸನ್ನದು ನೀಡಿದರು. ಶಿವಲಿಂಗರುದ್ರ ಸರ್ಜನು ೧೧ ಸೆಪ್ಟೆಂಬರ ೧೮೨೪ ರಂದು ವಾರಸುದಾರರಿಲ್ಲದೆ ತೀರಿಕೊಂಡನು. ಈ ಎಳೆವಯಸ್ಸಿನ ದೊರೆಯ ಹೆಂಡತಿ ವೀರಮ್ಮನಿಗೆ ಆಗ ೧೧ ವರ್ಷ ವಯಸ್ಸು! ಮರಣದ ಪೂರ್ವದಲ್ಲಿ ಶಿವಲಿಂಗರುದ್ರಸರ್ಜ ಮಾಸ್ತಮರಡಿ ಗೌಡರ ಪುತ್ರ ಶಿವಲಿಂಗಪ್ಪನನ್ನು ದತ್ತಕ ತೆಗೆದುಕೊಂಡ.
  • ಈ ದತ್ತಕವನ್ನು ಧಾರವಾಡದ ಕಲೆಕ್ಟರ ಥ್ಯಾಕರೆ ತಿರಸ್ಕರಿಸುತ್ತಾನೆ. ೧೩ ಸೆಪ್ಟೆಂಬರ ೧೮೨೪ ರಂದು ಥ್ಯಾಕರೆ ಸ್ವತಃ ಕಿತ್ತೂರಿಗೆ ಬಂದು ಕಂಪನಿ ಸರ್ಕಾರದಿಂದ ಮುಂದಿನ ಆದೇಶ ಬರುವವರೆಗೂ ತಾತ್ಕಾಲಿಕವಾಗಿ ಮಲ್ಲಪ್ಪಶೆಟ್ಟಿ ಹಾಗು ಹಾವೇರಿ ವೆಂಕಟರಾವ ಇವರನ್ನು ಸಂಸ್ಥಾನದ ವ್ಯವಹಾರ ನಿರ್ವಹಿಸಲು ನೇಮಕ ಮಾಡುತ್ತಾನೆ ಹಾಗು ಕಿತ್ತೂರಿನ ಭಂಡಾರಕ್ಕೆ ಬೀಗ ಮುದ್ರೆ ಹಾಕುತ್ತಾನೆ. ಆದರೆ ಇದನ್ನು ಕೆಚ್ಚೆದೆಯಿಂದ ಎದುರಿಸಿದವಳು ಮೃತ ಶಿವಲಿಂಗರುದ್ರಸರ್ಜನ ಮಲತಾಯಿ ಚೆನ್ನಮ್ಮ!

ಕಿತ್ತೂರಿನ ಮೇಲೆ ಬ್ರಿಟಿಷರ ಆಕ್ರಮಣ/ಇತರ ರಾಜಕೀಯ ಬೆಳವಣಿಗೆ[ಬದಲಾಯಿಸಿ]

  • ಕಿತ್ತೂರಿನ ಮೇಲೆ ಬ್ರಿಟಿಷರು ಮಾಡಬಹುದಾದ ಆಕ್ರಮಣವನ್ನು ತಪ್ಪಿಸಲು ಚೆನ್ನಮ್ಮ ಥ್ಯಾಕರೆಗೆ, ಮನ್ರೋನಿಗೆ ಹಾಗು ಚಾಪ್ಲಿನ್ನನಿಗೂ ಸಹ ಸಂಧಾನಕ್ಕಾಗಿ ಪತ್ರ ಬರೆದಿದ್ದಾಳೆ. ಮುಂದಾಲೋಚನೆಯಿಂದ ಕೊಲ್ಲಾಪುರ ಮೊದಲಾದ ನೆರೆಯ ಸಂಸ್ಥಾನಗಳ ಸಹಾಯ ಕೋರಿ ಪತ್ರವ್ಯವಹಾರ ಮಾಡಿದ್ದಾಳೆ.
  • ೨೧ ಅಕ್ಟೋಬರ್ ೧೮೨೪ರಂದು ಥ್ಯಾಕರೆ ಕಿತ್ತೂರಿಗೆ ಬಂದನು. ಮೂರನೆಯ ದಿನ ಅಂದರೆ ಅಕ್ಟೋಬರ ೨೩ರಂದು ಕೋಟೆಯ ಮೇಲೆ ತೋಪು ಹಾರಿಸಲು ತನ್ನ ಸೈನ್ಯಕ್ಕೆ ಅಪ್ಪಣೆ ಕೊಟ್ಟ. ಥಟ್ಟನೆ ತೆಗೆದ ಕೋಟೆಯ ಬಾಗಿಲಿನಿಂದ ಸಾವಿರಾರು ಜನ ಕಿತ್ತೂರು ವೀರರು ಸರದಾರ ಗುರುಸಿದ್ದಪ್ಪನವರ ಮುಂದಾಳುತನದಲ್ಲಿ ಥ್ಯಾಕರೆಯ ಸೈನ್ಯದ ಮೆಲೆ ಮುಗಿಬಿದ್ದರು. ಚೆನ್ನಮ್ಮ ರಾಣಿಯ ಅಂಗರಕ್ಷಕ ಅಮಟೂರು ಬಾಳಪ್ಪನ ಗುಂಡಿಗೆ ಥ್ಯಾಕರೆ ಬಲಿಯಾದ. ಸ್ಟೀವನ್ಸನ್ ಹಾಗು ಈಲಿಯಟ್ ಸೆರೆಯಾಳಾದರು. ಈ ವಿಜಯೋತ್ಸವವನ್ನು ಕರ್ನಾಟಕ ಸರ್ಕಾರ ಕಿತ್ತೂರು ಉತ್ಸವ ಅನ್ನುವ ಹೆಸರಿನಲ್ಲಿ ಆಚರಣೆಗೆ ಜಾರಿಗೆ ತಂದಿದೆ. ಪ್ರತಿ ವರ್ಷವೂ ಸರ್ಕಾರವೇ ಆಚರಣೆ ಮಾಡುತ್ತದೆ
  • ದೇಶದ್ರೋಹಿಗಳಾದ ಕನ್ನೂರು ವೀರಪ್ಪ, ಸರದಾರ ಮಲ್ಲಪ್ಪ ಅವರೂ ಬಲಿಯಾದರು. ಚೆನ್ನಮ್ಮನಿಗೆ ಹಾಗು ಬ್ರಿಟಿಷರಿಗೆ ಮತ್ತೆ ಪತ್ರವ್ಯವಹಾರ ನಡೆಯುತ್ತದೆ. ೧೮೨೪ ಡಿಸೆಂಬರ್ ೨ ರಂದು ಸ್ಟೀವನ್ಸನ್ ಹಾಗು ಈಲಿಯಟ್ ಇವರ ಬಿಡುಗಡೆಯಾಗುತ್ತದೆ. ಆದರೆ ಮಾತಿಗೆ ತಪ್ಪಿದ ಬ್ರಿಟಿಷರು ಡಿಸೆಂಬರ್ ೩ ರಂದು ಅಪಾರ ಸೈನ್ಯದೊಂದಿಗೆ ಮುತ್ತಿಗೆ ಹಾಕಿ ಕೋಟೆಯನ್ನು ಒಡೆಯಲು ಪ್ರಾರಂಭಿಸುತ್ತಾರೆ.
  • ಡಿಸೆಂಬರ್ ೪ ರಂದು ಸರದಾರ ಗುರುಸಿದ್ದಪ್ಪ ಸೆರೆಯಾಳಾಗುತ್ತಾನೆ. ಡಿಸೆಂಬರ್ ೫ ರಂದು ಚೆನ್ನಮ್ಮ ತನ್ನ ಸೊಸೆಯರಾದ ವೀರಮ್ಮ ಮತ್ತು ಜಾನಕಿಬಾಯಿಯರ ಜೊತೆಗೆ ಕೈದಿಯಾಗುತ್ತಾಳೆ. ಡಿಸೆಂಬರ್೧೨ ರಂದು ಚೆನ್ನಮ್ಮ ಹಾಗು ವೀರಮ್ಮರನ್ನು ಬೈಲಹೊಂಗಲಕ್ಕೆ ಒಯ್ಯಲಾಗುತ್ತದೆ. ಅಲ್ಲಿ ೪ ವರ್ಷಗಳವರೆಗೆ ಸೆರೆಯಾಳಾಗಿ ಉಳಿದ ಚೆನ್ನಮ್ಮ ೧೮೨೯ ಫೆಬ್ರುವರಿ ೨ ರಂದು ನಿಧನಹೊಂದುತ್ತಾಳೆ.
  • ಮುಂದೆ ಮೇ ೨೦ರಂದು ಜಾನಕಿಬಾಯಿ ನಿಧನಳಾಗುತ್ತಾಳೆ. ಆದರೆ ದೇಶ ನಿಷ್ಠರ ಹೋರಾಟ ನಿಂತಿರುವುದಿಲ್ಲ. ಕಾಳಗದಲ್ಲಿ ಸೆರೆ ಸಿಕ್ಕು ಆ ಮೇಲೆ ಬಿಡುಗಡೆಯಾದ ಸಂಗೊಳ್ಳಿ ರಾಯಣ್ಣ ೧೮೨೯ರಲ್ಲಿ ಹೋರಾಟ ಮುಂದುವರೆಸುತ್ತಾನೆ. ಇವನ ಹೋರಾಟಕ್ಕೆ ನೆರವು ನೀಡುತ್ತಿರುವ ಸಂಶಯದ ಮೇಲೆ ವೀರಮ್ಮನನ್ನು ಬ್ರಿಟಿಷರು ಮೊದಲು ಕುಸುಗಲ್ಲಿಗೆ, ಆ ಬಳಿಕ ಬೇರೊಂದು ಸ್ಥಳಕ್ಕೆ ಒಯ್ಯುತ್ತಾರೆ.
  • ಇತ್ತ ರಾಯಣ್ಣನ ಹೋರಾಟ ಮುಂದುವರೆದಿರುತ್ತದೆ. ವಿಶ್ವಾಸದ್ರೋಹಿಗಳು ಇವನ ಸಂಗಡಿಗರಂತೆ ನಟಿಸುತ್ತ ೧೮೩೦ ಫೆಬ್ರುವರಿಯಲ್ಲಿ ಇವನನ್ನು ಬ್ರಿಟಿಷರಿಗೆ ಹಿಡಿದುಕೊಡುತ್ತಾರೆ. ಕಂಪನಿ ಸರಕಾರ ಈ ಕಾರ್ಯಕ್ಕಾಗಿ ಲಿಂಗನಗೌಡ ಮತ್ತು ವೆಂಕನಗೌಡರಿಗೆ ೩೦೦ ರೂಪಾಯಿ ಬಹುಮಾನ ಕೊಡುತ್ತದೆ.
  • ಮೇ ೧೮೩೦ ರಲ್ಲಿ ದತ್ತುಪುತ್ರ ಶಿವಲಿಂಗಪ್ಪ ಹಾಗು ಇತರ ೪೦೦ ಜನರು ಬ್ರಿಟಿಷರಿಗೆ ಸ್ವಯಂ ಸೆರೆಯಾಗುತ್ತಾರೆ. ಜುಲೈ ೧೮೩೦ ರಂದು ವೀರಮ್ಮ ಸೆರೆಮನೆಯಲ್ಲಿ ಮರಣಹೊಂದುತ್ತಾಳೆ. ವಿಷ ತೆಗೆದುಕೊಂಡು ಮರಣ ಹೊಂದಿದಳೆಂದೂ, ಇಂಗ್ಲಿಷರೆ ವಿಷ ಹಾಕಿ ಕೊಂದರೆಂದೂ ಪ್ರತೀತಿ. ೧೮೩೧ ಜನೆವರಿ ೨೬ ರಂದು ಸಂಗೊಳ್ಳಿ ರಾಯಣ್ಣನನ್ನು ನಂದಗಡದಲ್ಲಿ ಗಲ್ಲಿಗೇರಿಸಲಾಗುತ್ತದೆ.

ಉಲ್ಲೇಖ[ಬದಲಾಯಿಸಿ]



  1. "ಕಿತ್ತೂರಾಣಿ ಚೆನ್ನಮ್ಮ ಕನ್ನಡ ಪ್ರಬಂಧ". Archived from the original on 2021-11-08. Retrieved 2021-11-08.
  2. ನಮ್ಮ ನಾಡು, ನಮ್ಮ ಹೆಮ್ಮೆ, ವೀರ ಮಹಿಳೆಯರು
  3. ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ಕನ್ನಡದ ರಾಣಿ-ಕಿತ್ತೂರು ಚನ್ನಮ್ಮ
  4. "Rani Chennamma of Kitturu". pib.nic.in. Retrieved 2022-04-17.
  5. "Rani Kittur Chennamma: India's Valiant Freedom Fighter". pib.nic.in. Retrieved 2022-04-17.