ಪ್ರಜಾಪ್ರಭುತ್ವ
ಪ್ರಜಾಪ್ರಭುತ್ವ ಎಂದರೆ ಯಾವುದೇ ವರ್ಗ, ಗುಂಪು ಅಥವಾ ವ್ಯಕ್ತಿಯ ಅಧೀನದಲ್ಲಿಲ್ಲದೆ ಜನತೆಯ ಅಧೀನದಲ್ಲಿರುವ ಸರ್ಕಾರ (ಡೆಮಾಕ್ರಸಿ). ಪ್ರಜಾಪ್ರಭುತ್ವದ ವಿಚಾರ ಇಂದು ನಿನ್ನೆಯದಲ್ಲ. ಪ್ರಜಾಪ್ರಭುತ್ವ ಎಂಬ ಪದವನ್ನು ಹಲವಾರು ಅರ್ಥಗಳಲ್ಲಿ ಬಳಸಲಾಗುತ್ತದೆ. ಹಾಗೂ ಪ್ರಜಾ ಪ್ರಭುತ್ವವನ್ನು ಅಬ್ರಹಾಂ ಲಿಂಕನ್ ರವರು ಹೇಳಿರುವಂತೆ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ರಚಿತವಾಗಿರುವ ಸರಕಾರವೇ ಪ್ರಜಾಪ್ರಭುತ್ವ.ಪುರಾತನ ಕಾಲದಲ್ಲಿ ಗ್ರೀಕ್ ನಗರ ರಾಜ್ಯವಾದ ಆತೆನ್ಸ್‌ನಲ್ಲಿ ಪ್ರತ್ಯಕ್ಷ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿತ್ತು. ಅಲ್ಲದೆ, ಪ್ರಾಚೀನ ಭಾರತದಲ್ಲಿದ್ದ ಗಣರಾಜ್ಯಗಳ ಬಗ್ಗೆ ಸಾಕಷ್ಟು ಸಂಶೋಧನೆಯಾಗಿದೆ. ಇತರ ಕೆಲವು ದೇಶಗಳಲ್ಲೂ ಇಂಥ ಪ್ರಜಾಪ್ರಭುತ್ವವಿದ್ದುದನ್ನು ಕಾಣಬಹುದಾಗಿದೆ.
ಹಿನ್ನೆಲೆ
[ಬದಲಾಯಿಸಿ]ಪ್ರಜಾಪ್ರಭುತ್ವ ಸರ್ಕಾರದ ರಚನೆಯ ಪ್ರಶ್ನೆ ಮೊಟ್ಟಮೊದಲು ಉದ್ಭವವಾದದ್ದು 19ನೆಯ ಶತಮಾನದಲ್ಲಿ. 18ನೆಯ ಶತಮಾನದವರೆಗೆ ಇದರ ಪೂರ್ಣ ಪರಿಕಲ್ಪನೆಯಾಗಿರಲಿಲ್ಲ. ಸಾಮಾಜಿಕ ಜೀವನದಲ್ಲೂ ರಾಜಕೀಯ ಜೀವನದಲ್ಲೂ ಸಮಾನತೆಗಾಗಿ ಕಾರ್ಖಾನೆಗಳ ಮಾಲಿಕರಿಗೂ ಕಾರ್ಮಿಕರಿಗೂ ಘರ್ಷಣೆ ಮೊದಲಾಗಿ, ಸಮಾನತೆಯನ್ನು ಪ್ರಜಾಪ್ರಭುತ್ವದ ತತ್ವವಾಗಿ ಪರಿಗಣಿಸಲಾದ್ದು 18ನೆಯ ಶತಮಾನದಿಂದ ಈಚೆಗೆ. ಆ ಕಾಲದಲ್ಲಿ ಪ್ರಜಾಪ್ರಭುತ್ವ ಪ್ರಚಲಿತವಾಗಿರಲಿಲ್ಲ. ಆಧುನಿಕ ಕಾಲದವರೆಗೆ ಪ್ರಚಲಿತವಾಗಿದ್ದ ಪ್ರಮುಖ ರಾಜ್ಯ ಪದ್ಧತಿ ಎಂದರೆ ಅರಸೊತ್ತಿಗೆ. ಆದರೆ, ಇಂದಿನ ಪರಿಸ್ಥಿತಿಯೇ ಬೇರೆ. ಹದಿನಾರನೆಯ ಶತಮಾನದಿಂದೀಚೆಗೆ ಅರಸೊತ್ತಿಗೆ ಕ್ಷೀಣಿಸುತ್ತ ಬಂದಿದೆ. ಈಗ ಪ್ರಜಾಪ್ರಭುತ್ವದ ತತ್ವಗಳು, ಆದರ್ಶಗಳು ಆಳವಾಗಿ ಬೇರೂರಿಕೊಂಡಿವೆ. ಪ್ರಪಂಚದ ಕೆಲವು ಭಾಗಗಳನ್ನು ಬಿಟ್ಟರೆ ಎಲ್ಲೆಡೆಯಲ್ಲೂ ಸರ್ಕಾರಗಳನ್ನು ಪ್ರಜಾಪ್ರಭುತ್ವದ ಕೆಲವು ತತ್ವಗಳಿಗೆ ಅನುಕೂಲವಾಗಿ ರಚಿಸಲಾಗಿದೆ. ಅವುಗಳ ಸ್ವರೂಪದಲ್ಲಿ ಭಿನ್ನತೆಗಳಿದ್ದರೂ, ಕೆಲವು ತತ್ವಗಳೂ ಆಚರಣೆಗಳೂ ವಿವಾದಾಸ್ಪದವಾಗಿದ್ದರೂ ಪ್ರಜಾಪ್ರಭುತ್ವ ಪದ್ಧತಿಗೆ ಬಹುತೇಕ ಎಲ್ಲರೂ ನಿಷ್ಠೆ ತೋರಿಸುತ್ತಾರೆ.
ಅರ್ಥವಿವರಣೆ
[ಬದಲಾಯಿಸಿ]ಪ್ರಜಾಪ್ರಭುತ್ವದ ಅರ್ಥವನ್ನು ಪ್ರಮುಖರನೇಕರು ಅನೇಕ ರೀತಿಯಲ್ಲಿ ಪ್ರತಿಪಾದಿಸಿದ್ದಾರೆ. ಅಂತೆಯೇ ಅದರ ಬಗ್ಗೆ ವ್ಯಾಖ್ಯೆಗಳು ಸಾಕಷ್ಟಿವೆ. ಅವುಗಳಲ್ಲಿ ಕೆಲವು ಪ್ರಸಿದ್ಧ ವ್ಯಾಖ್ಯೆಗಳು ಹೀಗಾಗಿವೆ: ಪೆರಿಕ್ಲಿಸ್ : (ಕ್ರಿ.ಪೂ. 430) ನಮ್ಮದು ಪ್ರಜಾಪ್ರಭುತ್ವ. ಏಕೆಂದರೆ ಆಡಳಿತ ಕೆಲವೇ ಜನರ ಕೈಯ್ಯಲ್ಲಿರದೆ ಜನಸಾಮಾನ್ಯರ ಕೈಯ್ಯಲ್ಲಿದೆ. ಸೀಲಿ : ಪ್ರತಿಯೊಬ್ಬನೂ ಪಾಲ್ಗೊಳ್ಳಲು ಅವಕಾಶವಿರುವ ಸರ್ಕಾರವೇ ಪ್ರಜಾಪ್ರಭುತ್ವ. ಏಬ್ರಹಾಮ್ ಲಿಂಕನ್ : ಪ್ರಜೆಗಳಿಂದ ಪ್ರಜೆಗಳಿಗಾಗಿ ನಡೆಯುವ ಪ್ರಜೆಗಳ ಸರ್ಕಾರ. ಲಾರ್ಡ್ ಬ್ರೈಸ್ : ಪ್ರಜಾಪ್ರಭುತ್ವ ಎಂದ ಮೇಲೆ ಪ್ರಜೆಗಳ ಇಚ್ಛೆಯಂತೆಯೇ ಎಲ್ಲ ಮುಖ್ಯ ವಿಷಯಗಳೂ ಇತ್ಯರ್ಥವಾಗಬೇಕು. ಜಾರ್ಜ್ ಬರ್ನಾಡ್ ಷಾ : ಪ್ರಜಾಪ್ರಭುತ್ವವೆಂದರೆ ಭೇದಭಾವವಿಲ್ಲದೆ ಪ್ರತಿಯೊಬ್ಬನ ಹಿತಕ್ಕೆ ಅನುಗುಣವಾದ ಸಮಾಜ ವ್ಯವಸ್ಥೆ, ಶ್ರೀಮಂತ ವರ್ಗದ ವಿಶೇಷ ಹಕ್ಕುಗಳನ್ನು ರಕ್ಷಿಸುವ ಸಮಾಜ ವ್ಯವಸ್ಥೆಯಲ್ಲ.
ಮೇಲಿನ ವ್ಯಾಖ್ಯೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದರೆ, ಪ್ರಜಾಪ್ರಭುತ್ವದ ಅರ್ಥ ಎಷ್ಟು ವ್ಯಾಪಕ ಹಾಗೂ ಎಷ್ಟು ಅನಿಶ್ಚಿತವಾದ್ದು ಎಂಬ ಅಂಶ ಸ್ಪಷ್ಟವಾಗುತ್ತದೆ. ಆದರೂ ಕೆಲವು ಸಾಮಾನ್ಯ ಸೂತ್ರಗಳನ್ನೂ ತತ್ತ್ವಗಳನ್ನೂ ಇಲ್ಲಿ ಗುರುತಿಸಬಹುದು.
ಪ್ರಜಾಪ್ರಭುತ್ವ ಅರಸೊತ್ತಿಗೆಯಂತೆ ನಿರಂಕುಶ ಪ್ರಭುತ್ವವಲ್ಲ, ಅಥವಾ ಶ್ರೀಮಂತ ವರ್ಗದ ರಾಜ್ಯವಲ್ಲ, ಇದು ಪ್ರಜೆಗಳ ರಾಜ್ಯ. ಲೋಕವಾಣಿಯೇ ದೇವವಾಣಿ ಎಂದು ಪ್ರತಿಪಾದಿಸುವ ಪದ್ಧತಿ ಇದು. ಇಂದಿನ ಪ್ರಜಾಪ್ರಭುತ್ವದಲ್ಲಿ ಆಳುವವರೂ ಆಳಲ್ಪಡುವವರೂ ಪ್ರಜೆಗಳೇ ಆಗಿರುವುದರಿಂದ ಹೆಚ್ಚು ಕಡಿಮೆ ಎಂಬ ತಾರತಮ್ಯವಿಲ್ಲ.
ಇಂದು ಜಾರಿಯಲ್ಲಿರುವ ಪ್ರಾತಿನಿಧಿಕ ಅಥವಾ ಪರೋಕ್ಷ ಪ್ರಜಾಪ್ರಭುತ್ವದಲ್ಲಿ ಒಬ್ಬ ವ್ಯಕ್ತಿಯೇ ಆಗಲಿ ಕೆಲವು ವ್ಯಕ್ತಿಗಳೇ ಆಗಲಿ ಸ್ವೇಚ್ಛೆಯಾಗಿ ಆಳಲು ಎಡೆಯಿಲ್ಲ. ಪ್ರಜೆಗಳ ಪ್ರತಿನಿಧಿಗಳು ಪ್ರಜೆಗಳ ಹತೋಟಿಯೊಳಗೆ ಇರಬೇಕಾಗುತ್ತದೆ. ಇಂಥ ಹತೋಟಿಗಳನ್ನು ಪರಿಣಾಮಕಾರಕವಾಗಿಸಲು ಸಂವಿಧಾನದಲ್ಲಿ ಮತ್ತು ಶಾಸನಗಳಲ್ಲಿ ಸೂಕ್ತ ನಿರ್ದೇಶನಗಳಿರುತ್ತವೆ. ಸಂವಿಧಾನ ಹಾಗೂ ಕಾನೂನುಗಳ ಆಚೆಗೂ ಹಲವಾರು ಹತೋಟಿಗಳಿವೆ.
ಪ್ರಜೆಗಳು ಅದರಲ್ಲೂ ಮತದಾರರು ತಮ್ಮ ಪ್ರತಿನಿಧಿಗಳ ಮೇಲೆ ಪರಿಣಾಮಕಾರಿ ನಿಯಂತ್ರಣವನ್ನಿಟ್ಟುಕೊಳ್ಳಲು ಪ್ರಾತಿನಿಧಿಕ ಪ್ರಜಾಪ್ರಭುತ್ವ ಅನುವು ಮಾಡಿಕೊಡುತ್ತದೆ. ನಿಯಮಿತ ಕಾಲದಲ್ಲಿ ಚುನಾವಣೆಗಳು ನಡೆಯುತ್ತವೆ. ಪ್ರತಿನಿಧಿಗಳು ನಿಶ್ಚಿತ ಅವಧಿಯಲ್ಲಿ ಮಾತ್ರ ಅಧಿಕಾರದಲ್ಲಿರುತ್ತಾರೆ. ಇಂದಿನ ಪ್ರತಿನಿಧಿಗಳು ಚೆನ್ನಾಗಿ ಕಾರ್ಯ ಮಾಡದಿದ್ದರೆ, ತಮ್ಮ ಕ್ಷೇತ್ರಗಳ ಬಗ್ಗೆ ಉಪೇಕ್ಷೆ ತೋರಿದರೆ ಮುಂದಿನ ಚುನಾವಣೆಗಳಲ್ಲಿ ಅವರ ಬದಲಾಗಿ ಬೇರೆ ಅಭ್ಯರ್ಥಿಗಳನ್ನು ಆರಿಸಬಹುದಾಗಿದೆ. ಅಯೋಗ್ಯನೆನಿಸಿದ ಪ್ರತಿನಿಧಿಯನ್ನು ಅವಧಿ ಮುಗಿಯುವ ಮುಂಚೆಯೇ ಕರೆಯಿಸಿಕೊಳ್ಳುವ ಅಧಿಕಾರ ಕೆಲವು ದೇಶಗಳಲ್ಲಿ ಮತದಾರರಿಗೆ ಇರುತ್ತದೆ. ಜಾಗೃತ ಶಾಸಕರು ಕಾರ್ಯಾಂಗದ ವಿವಿಧ ಚಟುವಟಿಕೆಗಳನ್ನು ಗಮನವಿಟ್ಟು ನೋಡುತ್ತಿರುತ್ತಾರೆ. ಲೋಪದೋಷಗಳು ಕಂಡುಬಂದರೆ ಶಾಸನ ಸಭೆಗಳಲ್ಲಿ ಟೀಕೆ, ಟಿಪ್ಪಣೆ ಮಾಡುತ್ತಾರೆ : ಸೂಚನೆಗಳನ್ನು ನೀಡುತ್ತಾರೆ. ಸರ್ಕಾರದ ಇಂಥ ಲೋಪದೋಷಗಳನ್ನು ಪತ್ರಿಕೆಗಳು ಪ್ರಕಟಿಸುವುದರಿಂದ ಅವು ಜನತೆಯ ಗಮನಕ್ಕೆ ಬರುವುದು ಸಹಜ.
ಮತ ಎಂಬುದು ಪ್ರಜೆಗಳ ಕೈಯಲ್ಲಿಯ ಒಂದು ಪ್ರಬಲ ಅಸ್ತ್ರ. ಅದನ್ನು ಜಾಣತನದಿಂದ ಪರಿಣಾಮಕಾರಿಯಾಗಿ ಉಪಯೋಗಿಸದಿದ್ದರೆ ಜನತಂತ್ರ ಸರಿಯಾಗಿ ನಡೆಯಲಾರದು. ಪ್ರಜೆಗಳು ರಾಜಕೀಯ ವಿಷಯಗಳ ಬಗ್ಗೆ ಅನಾಸಕ್ತಿ ತೋರುವುದರಿಂದ ಅವರಿಗೆ ಹಾನಿ. ತಮ್ಮ ರಾಜ್ಯದಲ್ಲಿ, ರಾಷ್ಟ್ರದಲ್ಲಿ ಪ್ರಪಂಚದಲ್ಲಿ ಏನು ನಡೆದಿದೆ ಎಂಬುವುದರ ಅರಿವು ಅವರಿಗಿರಬೇಕಾಗುತ್ತದೆ.
ಚಿರಂತನ ಜಾಗೃತಿಯೇ ಪ್ರಜಾಪ್ರಭುತ್ವದ ಬೆಲೆ. ತಮಗೆ ಹಕ್ಕುಗಳೊಂದಿಗೆ ಕರ್ತವ್ಯಗಳೂ ಇವೆ ಅನ್ನುವುದರ ಪ್ರಜ್ಞೆ ಪ್ರಜೆಗಳಿಗಿರಬೇಕು. ಪ್ರಜೆಗಳಲ್ಲಿ ರಾಜಕೀಯ ಪ್ರಜ್ಞೆ ಬೆಳೆಸಿ ಉಳಿಸಿಕೊಳ್ಳುವುದರಲ್ಲಿ ಸ್ವತಂತ್ರ ಹಾಗೂ ನಿರ್ಭೀತ ಪತ್ರಿಕೆಗಳ ಪಾತ್ರ ಹಿರಿಯದು. ರಾಜಕೀಯ ಪಕ್ಷಗಳು ಪತ್ರಿಕೆಗಳಂತೆ ಪ್ರಜಾಪ್ರಭುತ್ವದ ಜೀವಾಳವಾಗಿವೆ. ಅವು ಜನರ ಹಾಗೂ ಸರ್ಕಾರದ ನಡುವಣ ಸೇತುವೆಗಳು. ಚುನಾವಣೆಗೆ ಮುನ್ನ ನೀಡಿದ ಆಶ್ವಾಸನೆಗಳನ್ನು ಪೂರೈಸಲು ಪರಿಣಾಮಕಾರಿ ಕಾರ್ಯಕ್ರಮಗಳನ್ನು ಅನುಷ್ಠಾನದಲ್ಲಿ ತರುವ ಅತಿ ಮುಖ್ಯ ಕಾರ್ಯ ರಾಜಕೀಯ ಪಕ್ಷಗಳದ್ದಾಗಿದೆ. ಅಧಿಕಾರರೂಢ ಪಕ್ಷವಷ್ಟೇ ವಿರೋಧ ಪಕ್ಷವೂ ಪ್ರಜಾಪ್ರಭುತ್ವ ಪದ್ಧತಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಇಂದಿನ ಪ್ರಜಾಪ್ರಭುತ್ವವನ್ನು ಬಹುಮತದ ಸರ್ಕಾರವೆಂದು ಕರೆಯಲಾಗಿದೆ. ಬಹುಮತ ಗಳಿಸಿದ ಪಕ್ಷ ಸರ್ಕಾರ ರಚಿಸಿದರೂ ಅಲ್ಪಸಂಖ್ಯಾತರಿಗೆ ಹಾಗೂ ರಾಜಕೀಯ ವಿರೋಧಿಗಳಿಗೆ ತೊಂದರೆ, ಅನಾನುಕೂಲತೆಗಳು ಒದಗದಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯವಾಗಿರುತ್ತದೆ. ಪರಸ್ಪರ ತಿಳಿವಳಿಕೆ, ವಿಚಾರ ವಿನಿಮಯಗಳು ಪ್ರಜಾಪ್ರಭುತ್ವದ ಮುಖ್ಯ ಲಕ್ಷಣಗಳು.
ಕೊನೆಯದಾಗಿ ಪ್ರಜಾಪ್ರಭುತ್ವ ಒಂದು ಜೀವನ ವಿಧಾನವೇ ಆಗಿದೆ. ಆರ್ಥಿಕ ಸಾಮಾಜಿಕ ಸಮಾನತೆ ಹಾಗೂ ರಾಜಕೀಯ ಸ್ವಾತಂತ್ರ್ಯ ಒದಗಿಸಿಕೊಡಲು ಅದು ಹೋರಾಡುತ್ತದೆ. ನಾಗರಿಕರಲ್ಲಿ ಪರಸ್ಪರ ತಿಳಿವಳಿಕೆ, ವಿಚಾರ ವಿನಿಮಯ, ಸಹಕಾರ, ಸಹಾನುಭೂತಿ, ರಚನಾತ್ಮಕ ವಿಮರ್ಶೆ ಜೀವಂತ ಪ್ರಜಾಪ್ರಭುತ್ವದ ಲಕ್ಷಣಗಳಾಗಿರುತ್ತವೆ.
ಪ್ರಜಾಪ್ರಭುತ್ವದ ಪ್ರಕಾರಗಳು
[ಬದಲಾಯಿಸಿ]ಪ್ರಜಾಪ್ರಭುತ್ವದಲ್ಲಿ ಮುಖ್ಯವಾಗಿ ಎರಡು ಬಗೆಗಳಿವೆ. 1. ಪ್ರತ್ಯಕ್ಷ ಅಥವಾ ನೇರ ಪ್ರಜಾಪ್ರಭುತ್ವ 2. ಪ್ರಾತಿನಿಧಿಕ ಅಥವಾ ಪರೋಕ್ಷ ಪ್ರಜಾಪ್ರಭುತ್ವ.
ನೇರ ಅಥವಾ ಪ್ರತ್ಯಕ್ಷ ಪ್ರಜಾಪ್ರಭುತ್ವ ಪ್ರಾಚೀನ ಕಾಲದಲ್ಲಿ ಗ್ರೀಸಿನ ನಗರ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿತ್ತು. ಈ ಪದ್ಧತಿಯಲ್ಲಿ ರಾಷ್ಟ್ರದ ಜನರೆಲ್ಲರೂ ಆಡಳಿತದಲ್ಲಿ ನೇರವಾಗಿ ಭಾಗವಹಿಸುತ್ತಿದ್ದರು. ಈ ಪದ್ಧತಿಯ ವೈಶಿಷ್ಟ್ಯವೆಂದರೆ ನಾಗರಿಕರು ತಮ್ಮ ಪ್ರತಿನಿಧಿಗಳನ್ನು ಚುನಾಯಿಸದೆ ತಾವೇ ನೇರವಾಗಿ ತಮ್ಮ ರಾಜ್ಯಾಡಳಿತ ನಡೆಸುತ್ತಿದ್ದರು. ಅಂದಿನ ನಗರ ರಾಜ್ಯಗಳು ಕ್ಷೇತ್ರ ವಿಸ್ತಾರ ಹಾಗೂ ಜನಸಂಖ್ಯೆಯ ದೃಷ್ಟಿಯಿಂದ ಬಹಳ ಚಿಕ್ಕವಾಗಿದ್ದುದರಿಂದ ಪ್ರತ್ಯಕ್ಷ ಪ್ರಜಾಪ್ರಭುತ್ವ ಆಗ ಸಾಧ್ಯವಿತ್ತು ಅಲ್ಲದೆ ಅದು ಸೀಮಿತವೂ ಗುಲಾಮಗಿರಿಯ ಮೇಲೆ ನಿರ್ಮಿತವಾದ್ದು ಆಗಿತ್ತು. ಯಾವ ಗ್ರೀಕ್ ರಾಜ್ಯದಲ್ಲೇ ಆಗಲಿ ಸ್ವತಂತ್ರ ಪ್ರಜೆಗಳು ಬಹುಸಂಖ್ಯಾತರಾಗಿರಲಿಲ್ಲ. ಅದು ಅಲ್ಪಸಂಖ್ಯಾತರ ಪ್ರಭುತ್ವವಾಗಿತ್ತು.
ಆಧುನಿಕ ಕಾಲದಲ್ಲಿ ಪ್ರಾತಿನಿಧಿಕ ಅಥವಾ ಪರೋಕ್ಷ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದೆ. ಇಂದು ಪ್ರತ್ಯಕ್ಷ ಪ್ರಜಾಪ್ರಭುತ್ವದ ಪ್ರಯೋಗ ಯಶಸ್ವಿಯಾಗಲಾರದು. ಇಂದಿನ ರಾಷ್ಟ್ರ ವಿಶಾಲ ಭೂ ಪ್ರದೇಶವನ್ನೂ ಮತ್ತು ಹೆಚ್ಚು ಜನಸಂಖ್ಯೆಯನ್ನು ಹೊಂದಿರುವುದರಿಂದ ಮತ್ತು ಅದು ನಿರ್ವಹಿಸಬೇಕಾದ ಕಾರ್ಯಗಳು ಅಸಂಖ್ಯವೂ ವೈವಿಧ್ಯಪೂರ್ಣವೂ ಆಗಿರುವುದರಿಂದ ನೇರ ಪ್ರಜಾಪ್ರಭುತ್ವ ಇಂದು ಸಾಧ್ಯವಿಲ್ಲ. ಎಲ್ಲ ನಾಗರಿಕರು ಒಂದೆಡೆ ಕೂಡುವುದಾಗಲಿ ಒಟ್ಟಿಗೆ ಅವರು ಆಡಳಿತದಲ್ಲಿ ಭಾಗವಹಿಸುವುದಾಗಲಿ ಕಲ್ಪನೆಗೆ ಮೀರಿದ ಮಾತು. ಇಂದು ಪ್ರಜಾಪ್ರಭುತ್ವ ಎಷ್ಟೊಂದು ಆಕರ್ಷಕವಾಗಿದೆಯೆಂದರೆ ಅದರಲ್ಲಿ ವಿಶ್ವಾಸವಿಲ್ಲದವರೂ ಅದರ ಹೆಸರನ್ನು ಬಳಸಿಕೊಳ್ಳುತ್ತಾರೆ.
ಪ್ರಜಾಪ್ರಭುತ್ವದ ಮೂಲ ಸೂತ್ರಗಳು
[ಬದಲಾಯಿಸಿ]- ಸಮಾನತೆ : ಪ್ರಜಾಪ್ರಭುತ್ವದ ಮೊದಲನೆಯ ಮೂಲ ಸೂತ್ರವೆಂದರೆ ಸಮಾನತೆ. ಪ್ರಜಾಪ್ರಭುತ್ವದ ಬೆಳವಣಿಗೆಯಲ್ಲಿ ರಾಜಕೀಯ ಮತ್ತು ಸಾಮಾಜಿಕ ಸಮತೆಯನ್ನೂ ಸ್ಥಾಪಿಸುವುದು ಒಂದು ಪ್ರಧಾನ ಅಂಶವಾಗಿ ಕಂಡುಬಂದಿದೆ. ರಾಷ್ಟ್ರ ಶಕ್ತಿ ಮತ್ತು ಪರಮಾಧಿಕಾರ ರಚನೆ ಸಮತೆಯ ಆಧಾರದ ಮೇಲೆ ಸಾಧ್ಯವೇ ಹೊರತು ಅಸಮತೆಯ ಮೇಲಲ್ಲ. ಸಮತೆಯ ತತ್ವವನ್ನು ಕಡೆಗಣಿಸಿದರೆ ಕ್ರಾಂತಿ ಅನಿವಾರ್ಯವೆಂಬುದು ಅರಿಸ್ಟಾಟಲನ ಅಭಿಮತ. ಸಮತೆಗಾಗಿ ನಡೆದ ಸಂಗ್ರಾಮಗಳೇ ಪ್ರಜಪ್ರಭುತ್ವದ ಚರಿತ್ರೆಯ ಮುಖ್ಯಾಂಶಗಳು. ಮತಾಧಿಕಾರವನ್ನು ಹೆಚ್ಚಿಸುವುದರಲ್ಲಿ, ಸರ್ಕಾರದ ರಚನೆ ಶಿಸ್ತುಗಳಲ್ಲಿ ವ್ಯಕ್ತಿ ಭಾಗವಹಿಸುವುದರಲ್ಲಿ ಬಹುಸಂಖ್ಯಾತ ವರ್ಗದ ಅಭಿಮತ ಸ್ಥಾಪನೆಯಲ್ಲಿ, ಹೆಂಗಸರ ಮತ್ತು ಕಾರ್ಮಿಕರ ಹಕ್ಕು ಬಾದ್ಯತೆಗಳ ಆವಿಷ್ಕರಣದಲ್ಲಿ, ಆರ್ಥಿಕ ಸಾಮಾಜಿಕ ವಿಚಾರಗಳಲ್ಲಿ ಸಮತೆಯನ್ನು ಸಾಧಿಸುವುದರಲ್ಲೇ ಪ್ರಜಾಪ್ರಭುತ್ವದ ತತ್ವ ಅಡಗಿದೆ.
ಸಾಮಾಜಿಕ ಸಮತೆಯಿಂದಲೇ ವ್ಯಕ್ತಿಯ ಸಹಜ ಗುಣಗಳು ಪೂರ್ಣಗೊಳ್ಳಲು ಸಾಧ್ಯವೆಂಬುದನ್ನು ಪ್ರಜಾಪ್ರಭುತ್ವ ಸ್ವೀಕರಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ಸಮಾಜದಲ್ಲಿ ಸುಖಾನುಭವದ ಹಕ್ಕಿದೆ. ಸಾಮೂಹಿಕ ಸಂಪತ್ತನ್ನು ಸಮವಾಗಿ ಭಾಗಿಸುವ ಭಾವನೆಯುಳ್ಳ ಸಮಾಜ ರಚನೆಯಲ್ಲಿ ವ್ಯಕ್ತಿ ವಿಕಾಸಕ್ಕೂ ಸುಖಾನುಭವಕ್ಕೂ ಬೇಕಾಗುವ ಸಾಧನಗಳು ಅಂತರ್ಗಗವಾಗಿವೆ. - ಸ್ವಾತಂತ್ರ್ಯ : ಪ್ರಜಾಪ್ರಭುತ್ವದಲ್ಲಿ ವ್ಯಕ್ತಿಗತ ಮತ್ತು ಸಾಮಾಜಿಕ ಸ್ವಾತಂತ್ರ್ಯ ಸಾಮ್ಯತೆ ಮತ್ತು ಭ್ರಾತೃತ್ವ ಸಿದ್ಧಾಂತಗಳ ಪ್ರತಿಪಾದನೆ ಮತ್ತು ಸಾಧನೆಗಳು ಮುಖ್ಯ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಪರಮಾಧಿಕಾರದಲ್ಲಿ ಪ್ರಜಾ ಸರ್ಕಾರದ ಅಂಗೀಕಾರದಲ್ಲಿ ಸ್ವಾತಂತ್ರ್ಯ ಗೋಚರವಾಗುತ್ತದೆ. ಸ್ವತ್ತಿನ ರಕ್ಷಣೆ, ವಾಕ್ ಮತ್ತು ಮುದ್ರಣ ಸ್ವಾತಂತ್ರ್ಯ ಇವೂ ಪೌರ ಸ್ವಾತಂತ್ರ್ಯದ ಅಂಶಗಳು. ಪಂಚಾಯಿತಿ ಸಭೆಯ ಸದಸ್ಯತ್ವದಿಂದ ಹಿಡಿದು ಮೇಲ್ಮಟ್ಟದವರೆಗೆ ಸರ್ಕಾರದೊಡನೆ ಸಹಕರಿಸುತ್ತ ರಾಜಕೀಯ ಸ್ವಾತಂತ್ರ್ಯವನ್ನು ವ್ಯಕ್ತಿ ಅನುಭವಿಸುತ್ತಾನೆ. ಸರ್ಕಾರದ ದಬ್ಬಾಳಿಕೆ ಮತ್ತು ಅನ್ಯದೇಶೀಯರ ಆಕ್ರಮಣ ಒದಗಿದರೆ ವೈಯುಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಬರುತ್ತದೆ. ಹದಿನೆಂಟನೆಯ ಶತಮಾನದವರೆಗೆ ಆಸ್ತಿ ಇಲ್ಲದ ಪ್ರಜೆಗಳಿಗೆ ಸರ್ಕಾರದ ಮತ್ತು ಆಡಳಿತದ ಬಗ್ಗೆ ಆಸ್ಥೆ ಇರಲಿಲ್ಲ. ಈಚೆಗೆ ನೈಸರ್ಗಿಕ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಕ್ರಾಂತಿಯಿಂದಲಾದರೂ ಗಳಿಸಬಹುದೆಂಬ ನಂಬಿಕೆ ಬಲವಾಯಿತು. ವ್ಯಕ್ತಿಯ ವಿಕಾಸಕ್ಕೆ ಪ್ರತಿಬಂಧಕಗಳಾದ ಪ್ರಾಚೀನ ಪದ್ಧತಿಯ ಭಾವನೆ ಮತ್ತು ಸಂಸ್ಥೆಗಳನ್ನು ಕ್ರಾಂತಿಯಿಂದಲಾದರೂ ನಾಶ ಮಾಡಿ ಪ್ರಜೆಗಳ ಪರಮಾಧಿಕಾರವನ್ನು ಪಡೆಯಬೇಕೆಂಬ ಚಳವಳಿ ಉಗ್ರರೂಪವನ್ನು ತಾಳಿತು. ಹದಿನೆಂಟನೆಯ ಶತಮಾನದಲ್ಲಿ ಸರ್ಕಾರದ ಕಲಾಪಗಳಲ್ಲಿ ಸಾಮಾನ್ಯ ಪ್ರಜೆಗಳು ಭಾಗವಹಿಸಬೇಕಾದರೆ ಅದನ್ನು ಕ್ರಾಂತಿಯಿಂದಲೇ ಸಾಧಿಸಬೇಕೆಂಬ ಭಾವನೆ ಅಂಕುರಿಸಿತ್ತು. ಹತ್ತೊಂಬತ್ತನೆಯ ಶತಮಾನದಲ್ಲಿ ಪ್ರಜೆಗಳು ಮತ ನೀಡುವ ಅಧಿಕಾರವನ್ನು ಪಡೆದು ತಮ್ಮ ಹಕ್ಕುಗಳನ್ನು ಕಾಪಾಡಿಕೊಳ್ಳಲು ಮೊದಲು ಮಾಡಿದ ಮೇಲೆ ಜನ್ಮಸಿದ್ಧವಾದ ಹಕ್ಕುಗಳ ರಕ್ಷಣೆಗಾಗಿ ಕ್ರಾಂತಿ ಅತ್ಯಾವಶ್ಯಕ ಎಂಬ ಭಾವನೆ ಅಳಿದು ಹೋಯಿತು.
- ಭ್ರಾತೃತ್ವ : ಜನತೆಯಲ್ಲಿ ಸಹೋದರತ್ವದ ಭಾವನೆಯನ್ನು ಪೋಷಿಸುವುದು ಪ್ರಜಾಪ್ರಭುತ್ವದ ಉದಾತ್ತ ಧ್ಯೇಯ. ಹದಿನೆಂಟು ಮತ್ತು ಹತ್ತೊಂಬತ್ತನೆಯ ಶತಮಾನಗಳಲ್ಲಿ ವ್ಯಕ್ತಿ ಸ್ವಾತಂತ್ರ್ಯ ಸಮತೆಗಳನ್ನು ಪಡೆಯುವ ಆಕಾಂಕ್ಷೆ ಸಮಾಜದಲ್ಲಿ ಪ್ರಬಲವಾಗಿತ್ತು. ಪ್ರಜಾಪ್ರತಿನಿಧಿ ಪ್ರಭುತ್ವ, ವಿಧಿಬದ್ಧ ಸರ್ಕಾರ ಪ್ರಜಾವರ್ಗಗಳಲ್ಲಿಯ ತಾರತಮ್ಯದ ಮತ್ತು ವಿಶೇಷ ಹಕ್ಕುಗಳ ರದ್ದು ಇವುಗಳಿಂದ ಸ್ವಾತಂತ್ರ್ಯ ಮತ್ತು ಸಮತೆಗಳನ್ನು ಸಾಧಿಸಲಾಯಿತು. ವ್ಯಕ್ತಿ ಇತರರೊಡನೆ ಸಹಕರಿಸಿ ವಿಕಾಸ ಹೊಂದುವುದು ಸ್ವಾತಂತ್ರ್ಯ, ಸಹಕಾರ ಸಹಯೋಗಗಳಿಂದ ಸಮ್ಮಿಳಿತ ರೂಪದಲ್ಲಿ ಸಮಾಜದ ಜೀವನವನ್ನು ಪವಿತ್ರಗೊಳಿಸುವುದು ಸಮತೆಯ ಭಾವನೆ, ವ್ಯವಹಾರದಲ್ಲಿ ಪ್ರಜಾವರ್ಗಗಳ ಮತ್ತು ವ್ಯಕ್ತಿಗಳ ಸಮತೆ ಇಲ್ಲದಿದ್ದರೂ ಪ್ರಜಾವರ್ಗಗಳು ಮತ್ತು ವ್ಯಕ್ತಿಗಳು ಪರಸ್ಪರ ಸೌಹಾರ್ದದಿಂದ ವರ್ತಿಸಬೇಕೆಂಬ ಭಾವನೆ ಮೂಡಿದ್ದರೆ, ಸಮಾಜದಲ್ಲಿ ಸಹಕಾರ ಜೀವನ ಸಾಧ್ಯವಾಗುವುದು ಮತ್ತು ನೀತಿ ಸಮ್ಮತವಾಗುವುದೂ ಎಂದು ಸ್ಮಿತ್ ಎಂಬ ರಾಜಶಾಸ್ತ್ರಜ್ಞ ಹೇಳಿದ್ದಾನೆ. ಸಹೋದರ ಭಾವನೆ ಎಂದರೆ ಪರಾರ್ಥ ಜೀವನದಲ್ಲಿ ಸ್ವಾರ್ಥವನ್ನು ಮರೆಯುವುದು ; ಪರರ ಅಭ್ಯುದಯದಲ್ಲಿ ತನ್ನ ಅಭ್ಯುದಯವನ್ನು ಕಾಣುವುದು ; ಆತ್ಮಾರ್ಪಣೆಯಿಂದ ಸಾಮೂಹಿಕ ಜೀವನ ಮಟ್ಟವನ್ನು ಎತ್ತುವುದು ; ಆತ್ಮಾವಲಂಬನೆಯಿಲ್ಲದ ಸಂಘಜೀವನ ನಡೆಸುವುದು. ಸಾರ್ವಜನಿಕ ಹಿತಚಿಂತನೆಯೇ ವ್ಯಕ್ತಿಯ ಸಹಜ ಗುಣಗಳನ್ನು ನೀತಿಯುತವನ್ನಾಗಿ ಮಾಡಿ ಸಮಾಜದಲ್ಲಿ ಹಕ್ಕುಗಳನ್ನಾಗಿ ರೂಪಾಂತರಿಸುವುದು ಎಂದು ರೂಸೋ ಮತ್ತು ಟಿ. ಎಚ್. ಗ್ರೀನ್ ಎಂಬ ಧ್ಯೇಯವಾದಿಗಳು ಹೇಳಿದ್ದಾರೆ. ಸಮಾಜ ಜೀವನದಲ್ಲಿ ಸಹಕರಿಸದ ವ್ಯಕ್ತಿಯ ಜೀವನ ನೀತಿಯಿತವಾದುದಲ್ಲ. ಸಮಾಜದ ಸಂಘಟನೆ ಪ್ರಜಾಪ್ರಭುತ್ವದ ಪ್ರಧಾನ ತತ್ವ ಎಂದು ಡಿಗ್ಬಿ ಮತ್ತು ಕ್ರಾಬ್ ಎಂಬ ರಾಜ್ಯಶಾಸ್ತ್ರಜ್ಞರು ಪ್ರತಿಪಾದಿಸಿದ್ದಾರೆ.
- ರಾಜಕೀಯ ಪಕ್ಷಗಳು ಹಾಗೂ ಸಂಘ ಸಂಸ್ಥೆಗಳು : ವ್ಯಕ್ತಿ ಸ್ವಾತಂತ್ರ್ಯದ ಜೊತೆಗೆ ಸಂಘ ಸ್ವಾತಂತ್ರ್ಯವೂ ಬೇಕು. ಪೌರರು ತಮಗೆ ಬೇಕಾದ ಸಂಘ ಸಂಸ್ಥೆಗಳನ್ನಾಗಲಿ ರಾಜಕೀಯ ಪಕ್ಷಗಳನ್ನಾಗಲಿ ಕಟ್ಟುವ ಅಥವಾ ಸೇರುವ ಸ್ವಾತಂತ್ರ್ಯವಿರಬೇಕು. ಪ್ರಜಾಪ್ರಭುತ್ವದ ಯಶಸ್ಸಿಗೆ ಕನಿಷ್ಠಪಕ್ಷ ಎರಡು ಪ್ರಬಲವಾದ ರಾಜಕೀಯ ಪಕ್ಷಗಳಾದರೂ ಇರಬೇಕಾಗುತ್ತದೆ. ದಕ್ಷತೆ ಪ್ರಮಾಣಿಕತೆಗಳ ಕಡೆಗೆ ಅಧಿಕಾರಾರೂಢ ಪಕ್ಷ ಗಮನ ಕೊಡಬೇಕು. ಹಾಗೂ ಸಂಯಮ ಜಾಗರೂಕತೆಗಳಿಂದ ವರ್ತಿಸಬೇಕು. ರಾಜಕೀಯ ವಿರೋಧಿಗಳ ಅಲ್ಪಸಂಖ್ಯಾತರ ಅಗತ್ಯಗಳ ಹಾಗೂ ಆಶೋತ್ತರಗಳನ್ನೂ ಹಿತಾಸಕ್ತಿಗಳನ್ನೂ ಲಕ್ಷ್ಯದಲ್ಲಿಟ್ಟುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು. ವಿರೋಧ ಪಕ್ಷಗಳು ಜವಾಬ್ದಾರಿಯಿಂದ ಶಿಸ್ತಿನಿಂದ ತಮ್ಮ ಪಾತ್ರ ವಹಿಸಬೇಕು.
- ಸಮರ್ಥ ಮುಖಂಡತ್ವ : ನಿಷ್ಠೆ ಪ್ರಾಮಾಣಿಕತೆಗಳಿಂದ ಜನಸೇವೆಯ ಉದ್ದೇಶದಿಂದ ದುಡಿಯುವ ಧುರೀಣರ ಕೊರತೆ ಎಲ್ಲ ದೇಶಗಳಲ್ಲಿ ಕಾಲಕಾಲಕ್ಕೂ ಇದೆ. ಮುಖಂಡರಿಗೆ ಮೇಧಾಶಕ್ತಿ, ವಾಕ್ ಪಟುತ್ವ ಮಾತ್ರ ಇದ್ದರೆ ಸಾಲದು. ಅವರು ಸಚ್ಚಾರಿತ್ರ್ಯಶೀಲರಾಗಿರಬೇಕು, ವಿಶ್ವಾಸಾರ್ಹ ವ್ಯಕ್ತಿಗಳಾಗಿರಬೇಕು. ಅವರ ನೀತಿ ಮತ್ತೆ ಪ್ರಶ್ನಾತೀತವಾಗಿರಬೇಕು. ಕೇವಲ ಹಿಂಬಾಲಿಸುವವರ ಬೆಂಬಲದಿಂದ ಮುಂದಾಳಾಗಿ ಮೆರೆಯುವವರು ಜನಸೇವಕರಾಗದೆ ಸ್ವಾರ್ಥ ಸಾಧಕರಾಗುತ್ತಾರೆ. ಇಂಥವರು ಪ್ರಜಾಪ್ರಭುತ್ವಕ್ಕೆ ಕೆಟ್ಟ ಹೆಸರು ತರುತ್ತಾರೆ.
- ವ್ಯಕ್ತಿ ಗೌರವ ಹಾಗೂ ಶಿಕ್ಷಣ : ಪ್ರಜಾಪ್ರಭುತ್ವದಲ್ಲಿ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆ ಇದೆ. ವ್ಯಕ್ತಿಯ ಗೌರವಕ್ಕೆ ಚ್ಯುತಿ ಬರದಂತೆ, ವ್ತಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ಅದು ನೋಡಿಕೊಳ್ಳುತ್ತದೆ. ವ್ಯಕ್ತಿಗಳೇ ಪ್ರಜಾಪ್ರಭುತ್ವದ ಶಕ್ತಿ, ನಾಗರಿಕ ಪ್ರಜ್ಞೆ ಜನರಲ್ಲಿ ಮೂಡುವಂತೆ ಮಾಡುವ, ದೇಶದ ಆಗುಹೋಗುಗಳ ಬಗ್ಗೆ ವಿಚಾರಿಸುವಂತೆ ಮತ್ತು ವಿಮರ್ಶಿಸುವಂತೆ ಪ್ರಜೆಗಳನ್ನು ಸುಶಿಕ್ಷಿತರನ್ನಾಗಿ ಮಾಡುವ ಶಿಕ್ಷಣದ ಅವಶ್ಯಕತೆ ಪ್ರಜಾಪ್ರಭುತ್ವದಲ್ಲಿ ಮಹತ್ವದ ಪಾತ್ರ ವಹಿಸಿದೆ.
- ತಾಳ್ಮೆ, ಸಹಾನುಭೂತಿ ಹಾಗೂ ಸಹಕಾರ ಮನೋಭಾವ : ಸಮಾಜದಲ್ಲಿ ಮಧುರವಾದ ಸೌಹಾರ್ದಮಯ ವಾತಾವರಣ, ಪರಸ್ಪರರಲ್ಲಿ ತಾಳ್ಮೆ, ಸಹಾನುಭೂತಿ ಹಾಗೂ ಸಹಕಾರ ಮನೋಭಾವ ಮೂಡಿ ಬಂದರೆ ಪ್ರಜಾಪ್ರಭುತ್ವ ಪದ್ಧತಿ ಯಶಸ್ವಿಯಾದಂತೆ. ಎಲ್ಲ ಬಣಗಳ ಎಲ್ಲ ಮತ ಜಾತಿ ಬಾಂಧವರ ಮನೋಭಾವದ ಹೊಂದಾಣಿಕೆ ಇದ್ದರೆ ದೇಶ ಪ್ರಗತಿ ಹೊಂದುತ್ತದೆ.
ಪ್ರಜಾಪ್ರಭುತ್ವದ ಗುಣಗಳು
[ಬದಲಾಯಿಸಿ]ಪ್ರಜಾಪ್ರಭುತ್ವದಲ್ಲಿ ನಿರಂಕುಶ ಪ್ರಭುತ್ವಕ್ಕೆ ಎಡೆಯಿಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಪ್ರತಿಯೊಬ್ಬನೂ ಒಂದಿಲ್ಲೊಂದು ರೀತಿಯಲ್ಲಿ ತನ್ನ ದೇಶದ ಮತ್ತು ಸರ್ಕಾರದ ವ್ಯವಹಾರಗಳಲ್ಲಿ ಭಾಗವಹಿಸಲು ಇಲ್ಲಿ ಸಾಧ್ಯವಿದೆ. ಹಕ್ಕುಗಳ ರೂಪದಲ್ಲಿ ಹಲವಾರು ಅವಕಾಶಗಳನ್ನು ಇಲ್ಲಿ ನೀಡಲಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಲೋಕವಾಣಿಯೇ ಪ್ರಭುವಾಣಿ.
ಪ್ರಜಾಪ್ರಭುತ್ವದಲ್ಲಿ ಸರ್ಕಾರ ಜನತೆಗೆ ಹೊಣೆಯಾಗಿರುತ್ತದೆ. ಜನತಾ ಪ್ರತಿನಿಧಿಗಳಿಂದೊಡಗೂಡಿದ ಶಾಸನಾಂಗವನ್ನು ಧಿಕ್ಕರಿಸಿ ನಡೆದರೆ ಅಂಥ ಸರ್ಕಾರವನ್ನು ಅವಿಶ್ವಾಸದ ಗೊತ್ತುವಳಿಯ ಮೂಲಕ ಉರುಳಿಸಬಹುದು. ಮಂತ್ರಿಗಳು, ಅಧಿಕಾರಿಗಳು, ಶಾಸಕರು ಮನಬಂದಂತೆ ವರ್ತಿಸಲು ಅವಕಾಶವಿಲ್ಲ. ಹೊಣೆಗೆಟ್ಟ ಸರ್ಕಾರವನ್ನು ಜಾಗೃತ ಜನತೆಯೇ ದಾರಿಗೆ ತರಬೇಕಾಗುತ್ತದೆ.
ಪ್ರಜಾಪ್ರಭುತ್ವ ಯಾವುದೇ ವಿಶಿಷ್ಟ ವ್ಯಕ್ತಿ ಅಥವಾ ವರ್ಗಗಳ ಹಿತಕ್ಕಾಗಿ ಶ್ರಮಿಸುವುದಿಲ್ಲ. ಸರ್ವರಿಗೂ ಸಂವೈಧಾನಿಕ ರಕ್ಷಣೆ ಇದೆ. ಇಡೀ ಸಮಾಜದ ಕಲ್ಯಾಣವೇ ಪ್ರಜಾಪ್ರಭುತ್ವದ ಗುರಿಯಾಗಿದೆ. ಅದರಲ್ಲೂ ಸಾಮಾನ್ಯ ಜನರ ಏಳ್ಗೆಗಾಗಿ ಇದು ವಿಶೇಷವಾಗಿ ಗಮನ ನೀಡುತ್ತದೆ.
ವ್ಯಕ್ತಿತ್ವದ ಬೆಳವಣಿಗೆಗೆ ಅತ್ಯಂತ ಅವಶ್ಯವೆನಿಸುವ ಸ್ವಾತಂತ್ರ್ಯ ಸಮಾನತೆ ಮುಂತಾದ ಗುಣಗಳು ಪ್ರಜಾಪ್ರಭುತ್ವದಲ್ಲಿ ಅಡಗಿವೆ. ಇಂದು ಪೌರನಿಗೆ ಅನೇಕ ಬಗೆಯ ಸ್ವಾತಂತ್ರ್ಯಗಳು ಲಭ್ಯವಾಗಿವೆ. ವಾಕ್ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ಸಂಚಾರ ಸ್ವಾತಂತ್ರ್ಯ, ಸಂಘ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ, ರಾಜಕೀಯ ಸ್ವಾತಂತ್ರ್ಯ-ಹೀಗೆ ಹಲವಾರು ಬಗೆಯ ಸ್ವಾತಂತ್ರ್ಯಗಳನ್ನು ಪ್ರಜಾಪ್ರಭುತ್ವದಲ್ಲಿ ನಾಗರಿಕ ಪಡೆಯುತ್ತಾನೆ. ಎಲ್ಲರೂ ಕಾನೂನಿನ ಮುಂದೆ ಸಮಾನರು. ಉಚ್ಚ ನೀಚ ಎಂಬ ಭೇದ ಇಲ್ಲಿ ಕಾಣದು. ಜಾತಿ, ಧರ್ಮ, ಭಾಷೆ, ಲಿಂಗ ಹಾಗೂ ಪಕ್ಷ ಪಂಗಡಗಳ ಆಧಾರದ ಮೇಲೆ ಯಾವುದೇ ಪಕ್ಷಪಾತಕ್ಕೆ ಇಲ್ಲಿ ಎಡೆಯಿಲ್ಲ.
ಇಲ್ಲಿ ಹಿಂಸಾಚಾರ, ಬಲಪ್ರಯೋಗಗಳಿಗೆ ಸ್ಥಾನವಿಲ್ಲ. ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಬಂದೂಕುಗಳನ್ನು ಉಪಯೋಗಿಸದೆ ಮತದ ಪೆಟ್ಟಿಗೆಗಳನ್ನಿಲ್ಲಿ ಉಪಯೋಗಿಸಲಾಗುತ್ತದೆ. ಸರ್ಕಾರ ಜನತೆಯ ಮನವನ್ನು ಒಲಿಸುವುದರ ಮೂಲಕ, ಕಾರ್ಯಕ್ರಮಗಳನ್ನು ವಿವರಿಸಿ ಅವುಗಳನ್ನು ಅನುಷ್ಠಾನದಲ್ಲಿ ತರುವುದರ ಮೂಲಕ ಶಾಂತಿಯುತ ಪ್ರಗತಿಯನ್ನು ಸಾಧಿಸುತ್ತದೆ.
ಒತ್ತಾಯದ ಕೆಲಸ, ಗುಲಾಮಗಿರಿ, ಆರ್ಥಿಕ ಶೋಷಣೆಗಳಿಗೆ ಇಲ್ಲಿ ಆಸ್ಪದವಿಲ್ಲ. ವ್ಯಕ್ತಿಯ ಸ್ವಾತಂತ್ರ್ಯಕ್ಕೆ ಚ್ಯುತಿ ಬರದಂತೆ ಜನತಾ ಕಲ್ಯಾಣವನ್ನು ಸಾಧಿಸಲಾಗುತ್ತದೆ.
ದೋಷಗಳು
[ಬದಲಾಯಿಸಿ]ಪ್ರಜಾಪ್ರಭುತ್ವದ ಆದರ್ಶ ದೊಡ್ಡದಾದರೂ ಅನುಷ್ಠಾನದಲ್ಲಿ ಅದು ಪರಿಪೂರ್ಣ ರಾಜ್ಯ ವ್ಯವಸ್ಥೆಯಲ್ಲ. ಅದೂ ಅನೇಕ ನ್ಯೂನತೆಗಳನ್ನೊಳಗೊಂಡಿದೆ. ಇಂದಿನ ಪ್ರಜಾಪ್ರಭುತ್ವ ಪದ್ಧತಿಯಲ್ಲಿ ಎದ್ದು ಕಾಣುವ ಅವಗುಣಗಳನ್ನು ಹೀಗೆ ಪಟ್ಟಿ ಮಾಡಬಹುದು.
- ಅಜ್ಞರ ಅದಕ್ಷ ಆಡಳಿತ : ಪ್ರಜಾಪ್ರಭುತ್ವದಲ್ಲಿ ಗುಣಕ್ಕೆ ಬೆಲೆ ಇರುವುದಿಲ್ಲ. ಬರಿಯ ತಲೆಗಳನ್ನು ಎಣಿಸಲಾಗುತ್ತದೆ. ಹಣವಂತರು, ಆಷಾಡಭೂತಿಗಳು ಹಾಗೂ ಚಳವಳಿಗಾರರು ಅಧಿಕಾರ ಗದ್ದುಗೆಯನ್ನೇರುತ್ತಾರೆ. ಹೀಗಾಗಿ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರಕದೆ ಪ್ರಗತಿ ಕುಂಟುತ್ತದೆ. ರಾಜಕಾರಣವನ್ನೇ ವೃತ್ತಿಯಾಗಿ ಮಾಡಿಕೊಂಡಿರುವವರಲ್ಲಿ ಸ್ವಾರ್ಥ, ಅಧಿಕಾರ ದಾಹ ತಾಂಡವವಾಡುತ್ತಿರುತ್ತವೆ. ಅಪ್ರಮಾಣಿಕತೆ, ಸಮಯ ಸಾಧಕತೆ, ಭ್ರಷ್ಟಾಚಾರಗಳ ಉದಾಹರಣೆಗಳು ಪ್ರಜಾಪ್ರಭುತ್ವದಲ್ಲಿ ಹೇರಳವಾಗಿ ಸಿಗಬಲ್ಲವು.
- ದುಂದುಗಾರಿಕೆ : ಕಾಲಕಾಲಕ್ಕೆ ನಡೆಯುವ ಚುನಾವಣೆಗಳಿಗಾಗಿ ಪ್ರಜಾಪ್ರಭುತ್ವದಲ್ಲಿ ಆಗುವ ವೆಚ್ಚ ಅಗಾಧವಾಗಿರುತ್ತದೆ. ಯೋಗ್ಯತೆ ಇದ್ದರೂ ಹಣವಿಲ್ಲದಿದ್ದರೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗದು. ಸಂಸತ್ತು ಹಾಗೂ ವಿಧಾನಸಭೆಗಳಲ್ಲಿ ಭಾಷಣ, ಚರ್ಚೆ, ಆರೋಪಪ್ರತ್ಯಾರೋಪಗಳಲ್ಲಿಯೇ ಸಮಯದ ಅಪವ್ಯಯವಾಗುತ್ತದೆ. ಪ್ರಜಾಪ್ರಭುತ್ವವೆಂದರೆ ಕೊಳೆಯುತ್ತಿರುವ ಹೆಣ, ವಿಧಾನಮಂಡಳಗಳೆಂದರೆ ಮಾತಿನ ಮಂಟಪಗಳು, ಮತದಾರರೆಂದರೆ ಪಶುಗಳು ಎಂದೂ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಹೇಳಿದ್ದುಂಟು.
- ಭ್ರಷ್ಟಾಚಾರ ಹಾಗೂ ವಿಳಂಬ ಸರ್ಕಾರ : ಸರ್ಕಾರದ ವಿಳಂಬ ನೀತಿಯೇ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುತ್ತದೆ. ಅಧಿಕಾರಶಾಹಿಯ ಚಕ್ರವ್ಯೂಹದಲ್ಲಿ ಸಿಕ್ಕಿಬಿದ್ದ ಫೈಲುಗಳ ವಿಲೇವಾರಿ ಬೇಗ ಆಗುವುದಿಲ್ಲ. ತಮ್ಮ ಕೆಲಸ ಬೇಗ ಆಗಬೇಕೆನ್ನುವವರು ಲಂಚ ಕೊಟ್ಟು ಕಾರ್ಯ ಪೂರೈಸಿಕೊಳ್ಳುತ್ತಾರೆ. ಚುನಾವಣೆಯ ಕಾಲಕ್ಕೆ ರಾಜಕೀಯ ಪಕ್ಷಗಳು ಶ್ರೀಮಂತರಿಂದ ಹಣ ಪಡೆಯುವುದರಿಂದ ಶ್ರೀಮಂತರು ತಮ್ಮಿಂದ ಉಪಕೃತವಾದ ಅಧಿಕಾರರೂಢ ಪಕ್ಷದಿಂದ ಅನೇಕ ಸವಲತ್ತು ಸೌಲಭ್ಯಗಳನ್ನು ಅಪೇಕ್ಷಿಸುತ್ತಾರೆ.
- ವ್ಯಕ್ತಿ ಸ್ವಾತಂತ್ರ್ಯಕ್ಕೆ ಚ್ಯುತಿ : ಸ್ವಾತಂತ್ರ್ಯ, ಸಮಾನತೆ ಎಂಬ ಶಬ್ಧಗಳು ಬರೀ ಸಂವಿಧಾನದ ಹಾಳೆಗಳಲ್ಲಿ ಉಳಿದಿದೆ. ಅವಕಾಶ ಅನುಕೂಲತೆಗಳನ್ನೊದಗಿಸದೆ ವ್ಯಕ್ತಿ ಸ್ವಾತಂತ್ರ್ಯಕ್ಕೆ ಅರ್ಥ ಬರುವಂತಿಲ್ಲ. ಆರ್ಥಿಕ ಅಸಮಾನತೆ, ಹಸಿವು, ನಿರುದ್ಯೋಗ, ಬಡತನ, ಅಸಂತೃಪ್ತಿ ಇವು ಪ್ರಜಾಸತ್ತೆಯ ವೈರಿಗಳಾಗಿವೆ. ವ್ಯಕ್ತಿ ಸ್ವಾತಂತ್ರ್ಯಕ್ಕೆ ಚ್ಯುತಿ ಬರುವ ಕೆಲಸಗಳು ಪ್ರಜಾಪ್ರಭುತ್ವದಲ್ಲಿ ನಡೆಯುತ್ತಿರುತ್ತವೆ. ಪ್ರಜಾಪ್ರಭುತ್ತ ಸರ್ವಾಂಗೀಣವಾಗಬೇಕಾದರೆ ಎಲ್ಲ ಕ್ಷೇತ್ರಗಳಲ್ಲೂ ಸಮಾನತೆಯನ್ನು ಸಾಧಿಸುವತ್ತ ಶ್ರಮಿಸಬೇಕಾಗುತ್ತದೆ.
- ಬಹುಸಂಖ್ಯಾತರ ನಿರಂಕುಶಾಡಳಿತ : ಜನ ಹಾಗೂ ಧನ ಬಲಗಳಿಗಳಿಂದ ಆರಿಸಿ ಬಂದ ಜನತಾ ಪ್ರತಿನಿಧಿಗಳ ಬಹುಮತ ಬೆಂಬಲ ಇರುವುದರಿಂದ ಆಳುವ ಪಕ್ಷ ತನಗೆ ಅನುಕೂಲಕರವಾದ ಕಾನೂನುಗಳನ್ನು ರಾಜಕೀಯ ಲೆಕ್ಕಾಚಾರದಿಂದ ರಚಿಸಿಕೊಳ್ಳುತ್ತದೆ. ಸಂವಿಧಾನಕ್ಕೆ ಅನ್ಯಾವಶ್ಯಕ ತಿದ್ದುಪಡಿಗಳನ್ನೂ ತರಬಹುದು. ತಲೆಗಳನ್ನು ಎಣಿಸುವ ಪ್ರಜಾಪ್ರಭುತ್ವದಲ್ಲಿ ಸಂಖ್ಯೆಗೆ ಮಹತ್ವ ಇರುತ್ತದೆ. ಒಂದು ರೀತಿಯ ಬಹುಸಂಖ್ಯಾತರ ನಿರಂಕುಶಾಡಳಿತ ಏರ್ಪಡುವ ಅಪಾಯವಿದೆ.
- ಪ್ರಜಾಪ್ರಭುತ್ವದಲ್ಲಿ ಇಷ್ಟೊಂದು ದೋಷಗಳಿದ್ದರೂ ಅನೇಕ ದೇಶಗಳು ಈ ಪದ್ಧತಿಯನ್ನೇ ಒಪ್ಪಿಕೊಂಡಿವೆ. ಏಕೆಂದರೆ ಈ ಪದ್ಧತಿಯನ್ನು ಇನ್ನಿತರ ರಾಜ್ಯ ಪದ್ಧತಿಗಳೊಡನೆ ಹೋಲಿಸಿ ನೋಡಿದಾಗ ಇದರ ಹೆಗ್ಗಳಿಕೆ ಸ್ಪಷ್ಟವಾಗಿ ಎದ್ದುಕಾಣುತ್ತದೆ. ಪ್ರಜಾಪ್ರಭುತ್ವದ ಶ್ರೇಷ್ಠತೆಯನ್ನೂ ಒಪ್ಪಿಕೊಂಡವರೆಲ್ಲ ಅದರ ಸಮರ್ಥ ಪ್ರತಿಪಾದಕರಾಗಿದ್ದಾರೆ. ಅಲ್ಲದೆ ಪ್ರಜಾಪ್ರಭುತ್ವದ ಪರಿಕಲ್ಪನೆ ಸ್ಥಾಯಿಯಾದ್ದಲ್ಲ. ಗ್ರೀಕ್ ರಾಜ್ಯಗಳ ಕಾಲದಿಂದ ಇಂದಿನವರೆಗೆ ಅದು ವಿಕಾಸ ಹೊಂದುತ್ತಲೇ ಬಂದಿದೆ. ಅದರ ಅರ್ಥವ್ಯಾಪ್ತಿ ವಿಸ್ತರಿಸುತ್ತಲೇ ಇದೆ. ಪ್ರಜಾಪ್ರಭುತ್ವದಲ್ಲಿ ಪರಿಪೂರ್ಣತೆಯಂಬುದು ಗುರಿ, ಅದರತ್ತ ಸಾಗುತ್ತಿರುವುದೇ ನಾಗರಿಕತೆಯ ಇತಿಹಾಸವಾಗಿದೆ.[೧]
ನೋಡಿ
[ಬದಲಾಯಿಸಿ]- ಭಾರತದಲ್ಲಿ ಪ್ರಜಾಪ್ರಭುತ್ವ:ವಿಶ್ಲೇಷಣೆ | ಬೀದರ್ನ ಶಾಹೀನ್ ಶಾಲೆಯ ಪ್ರಕರಣ ಅತ್ಯಂತ ಕ್ರೂರ ಮತ್ತು ಅಮಾನವೀಯ;ಕೃಷ್ಣ ಪ್ರಸಾದ್;d: 12 ಫೆಬ್ರವರಿ 2020
- ಗಣರಾಜ್ಯೋತ್ಸವ ಪೆರೇಡ್ ಮತ್ತು ಕೋಷ್ಟಕ [೧] Archived 2022-12-15 ವೇಬ್ಯಾಕ್ ಮೆಷಿನ್ ನಲ್ಲಿ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Democracy at the Stanford Encyclopedia of Philosophy
- Dictionary of the History of Ideas: Democracy Archived 2008-03-20 ವೇಬ್ಯಾಕ್ ಮೆಷಿನ್ ನಲ್ಲಿ.
- The Economist Intelligence Unit's index of democracy
- Alexis de Tocqueville, Democracy in America Archived 1997-04-11 ವೇಬ್ಯಾಕ್ ಮೆಷಿನ್ ನಲ್ಲಿ. Full hypertext with critical essays on America in 1831–32 from American Studies at the University of Virginia
- Data visualizations of data on democratisation and list of data sources on political regimes on 'Our World in Data', by Max Roser.
- [೨] Archived 2018-08-17 ವೇಬ್ಯಾಕ್ ಮೆಷಿನ್ ನಲ್ಲಿ. MaxRange Classifying political regime type and democracy level to all states and months 1789–2015
- "Democracy", BBC Radio 4 discussion with Melissa Lane, David Wootton and Tim Winter (In Our Time, 18 October 2001)
- Democracy (1945) on YouTube Encyclopædia Britannica Films
ಉಲ್ಲೇಖಗಳು
[ಬದಲಾಯಿಸಿ]