ವಿಷಯಕ್ಕೆ ಹೋಗು

ಕ್ಯಾಲಿಫೊರ್ನಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕ್ಯಾಲಿಫೋರ್ನಿಯಾ ಇಂದ ಪುನರ್ನಿರ್ದೇಶಿತ)
ಸ್ಟೇಟ್ ಆಫ್ ಕ್ಯಾಲಿಫೊರ್ನಿಯ
Flag of ಕ್ಯಾಲಿಫೊರ್ನಿಯ State seal of ಕ್ಯಾಲಿಫೊರ್ನಿಯ
ಧ್ವಜ ಮುದ್ರೆ
ಅಡ್ಡಹೆಸರು: The Golden State
ಧ್ಯೇಯ: Eureka[೧]
[[Image:|center|Map of the United States with ಕ್ಯಾಲಿಫೊರ್ನಿಯ highlighted]]
ಅಧಿಕೃತ ಭಾಷೆ(ಗಳು) English
ರಾಜಧಾನಿ ಸ್ಯಾಕ್ರಮೆಂಟೊ
ಅತಿ ದೊಡ್ಡ ನಗರ ಲಾಸ್ ಏಂಜಲೆಸ್
ವಿಸ್ತಾರ  Ranked 3rd in the US
 - ಒಟ್ಟು 163,696 sq mi
(423,970 km²)
 - ಅಗಲ 250 miles (400 km)
 - ಉದ್ದ 770 miles (1,240 km)
 - % ನೀರು 4.7
 - Latitude 32° 32′ N to 42° N
 - Longitude 114° 8′ W to 124° 26′ W
ಜನಸಂಖ್ಯೆ  1stನೆಯ ಅತಿ ಹೆಚ್ಚು
 - ಒಟ್ಟು 36,756,666 (2008 est.)[೨]
33,871,648 (2000)
 - ಜನಸಂಖ್ಯಾ ಸಾಂದ್ರತೆ 234.4/sq mi  (90.49/km²)
11thನೆಯ ಸ್ಥಾನ
 - Median income  US$54,385 (11th)
ಎತ್ತರ  
 - ಅತಿ ಎತ್ತರದ ಭಾಗ Mount Whitney[೩]
14,505 ft  (4,421 m)
 - ಸರಾಸರಿ 2,900 ft  (884 m)
 - ಅತಿ ಕೆಳಗಿನ ಭಾಗ Death Valley[೩]
-282 ft  (-86 m)
ಸಂಸ್ಥಾನವನ್ನು ಸೇರಿದ್ದು  September 9, 1850 (31st)
Governor Gavin Newsom (D)
Lieutenant Governor Eleni Kounalakis (D)
U.S. Senators Dianne Feinstein (D)
Alex Padilla (D)
Congressional Delegation 34 Democrats, 19 Republicans (list)
Time zone Pacific: UTC-8/-7
Abbreviations CA Calif. US-CA
Website ca.gov

ಕ್ಯಾಲಿಫೊರ್ನಿಯ ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿನ ಅತ್ಯಂತ ಜನನಿಬಿಡ ರಾಜ್ಯ, ಮತ್ತು ವಿಸ್ತೀರ್ಣದಲ್ಲಿ ಮೂರನೆಯ ಅತಿ ದೊಡ್ಡ ರಾಜ್ಯವಾಗಿದೆ. ಇದು ಶಾಂತ ಮಹಾಸಾಗರದ ಪಕ್ಕದಲ್ಲಿ ಅಮೇರಿಕ ದೇಶದ ಪಶ್ಚಿಮ ಕರಾವಳಿಯಲ್ಲಿ ಸ್ಥಿತವಾಗಿದೆ. ಇದರ ಉತ್ತರದಲ್ಲಿ ಆರೆಗಾನ್, ಪೂರ್ವದಲ್ಲಿ ನವಾಡ, ದಕ್ಷಿಣಪೂರ್ವದಲ್ಲಿ ಆರಿಜೋನ, ದಕ್ಷಿಣದಲ್ಲಿ ಮೆಕ್ಸಿಕೋದ ರಾಜ್ಯವಾದ ಬಾಹಾ ಕ್ಯಾಲಿಫೊರ್ನಿಯವನ್ನು ಗಡಿಯಾಗಿ ಹೊಂದಿದೆ. ಲಾಸ್ ಏಂಜಲೆಸ್, ಸ್ಯಾನ್ ಡಿಯೇಗೊ, ಸ್ಯಾನ್ ಹೋಸೆ, ಮತ್ತು ಸ್ಯಾನ್ ಫ್ರಾನ್ಸಿಸ್ಕೊ ಇದರ ನಾಲ್ಕು ಅತಿ ದೊಡ್ಡ ನಗರಗಳು.

ಕ್ಯಾಲಿಫೋರ್ನಿಯವು ಅಮೆರಿಕ ಸಂಯುಕ್ತಸಂಸ್ಥಾನದ ನೈಋತ್ಯ ಭಾಗದಲ್ಲಿ, ಪೆಸಿಫಿಕ್ ಸಾಗರ ತೀರದಲ್ಲಿದೆ.

`ಚಿನ್ನದ ರಾಜ್ಯವೆಂದು ಇದಕ್ಕೆ ಅಡ್ಡ ಹೆಸರುಂಟು. ಆರಂಭದಲ್ಲಿ ಏಕಪ್ರಕಾರವಾಗಿ ಇಲ್ಲಿ ಚಿನ್ನ ಸಿಕ್ಕುತ್ತಿದ್ದುದೇ ಈ ಹೆಸರಿಗೆ ಕಾರಣ. ಉತ್ತರದಲ್ಲಿ ಅರೆಗನ್, ಪೂರ್ವದಲ್ಲಿ ನೆವಾಡ ಮತ್ತು ಆರಿಜೋóನ, ದಕ್ಷಿಣದಲ್ಲಿ ಮೆಕ್ಸಿಕೋದ ಕೆಳ ಕ್ಯಾಲಿಫೋರ್ನಿಯ ಪ್ರದೇಶ, ಪಶ್ಚಿಮಕ್ಕೆ ಪೆಸಿಫಿಕ್ ಸಾಗರ-ಇವು ಇದರ ಮೇರೆಗಳು. ಉ.ಅ.32030'-420 ಮತ್ತು ಪ.ರೇ.1140-124029' ನಡುವೆ ಹಬ್ಬಿರುವ ಈ ರಾಜ್ಯದ ವಿಸ್ತೀರ್ಣ, 2,120 ಚ.ಮೈ. ಜಲಪ್ರದೇಶವೂ ಸೇರಿ, 1,58,693 ಚ.ಮೈ. ಇದು ವಿಸ್ತೀರ್ಣದಲ್ಲಿ ಅಮೆರಿಕ ಸಂಯುಕ್ತಸಂಸ್ಥಾನದ ಮೂರನೆಯ ರಾಜ್ಯ, ಇದಕ್ಕೆ 1,264 ಮೈ. ಉದ್ದದ ಕರಾವಳಿ ಇದೆ.

ಭೌತಲಕ್ಷಣ[ಬದಲಾಯಿಸಿ]

ಕ್ಯಾಲಿಫೋರ್ನಿಯದ ಪಶ್ಚಿಮ ತೀರದಲ್ಲಿ ಪರ್ವತ ಸೆರಗೊಂದು ಹಾದುಹೋಗಿವೆ. ರಾಜ್ಯದ ಪೂರ್ವಭಾಗದಲ್ಲಿ ಪರ್ವತಶ್ರೇಣಿ ಇದೆ. ಎರಡು ತುದಿಗಳಲ್ಲೂ ಇದು ಕ್ಯಾಲಿಫೋರ್ನಿಯದ ಮಧ್ಯಭಾಗ. ಪೆಸಿಫಿಕ್ ತೀರದ ಪರ್ವತಶ್ರೇಣಿಯ ಅಗಲ 20-40 ಮೈ. ಇಲ್ಲಿ ಹುಟ್ಟುವ ಸಣ್ಣ ನದಿಗಳು ಕಂದರಗಳನ್ನು ಕೊರೆದು ಹರಿದು ಧುಮ್ಮಿಕ್ಕುತ್ತವೆ. ಪೂರ್ವಶ್ರೇಣಿಯ ಎತ್ತರ 2,000'-8.000'. ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿಯ ಬಳಿಯಲ್ಲಿಯ ಶಿಖರಗಳು ಸುಮಾರು 4,000' ಎತ್ತರವಾಗಿವೆ. ಅವುಗಳಲ್ಲಿ ಮುಖ್ಯವಾದವು ಡಿಯಾಬ್ಲೊ (3,849'); ಸೇಂಟ್ ಹೆಲೆನಾ (4,343'). ಇಲ್ಲಿಂದ ಉತ್ತರಕ್ಕೂ ದಕ್ಷಿಣಕ್ಕೂ ಹಬ್ಬಿರುವ ಶ್ರೇಣಿಯ ಎತ್ತರ ಹೆಚ್ಚು. ರಾಜ್ಯದ ಪೂರ್ವಶ್ರೇಣಿ ಸಿಯೆರ ನೆವಾಡ 400 ಮೈ. ಉದ್ದಕ್ಕೆ ಹಬ್ಬಿದೆ. ಪೂರ್ವದ ಶ್ರೇಣಿ ಪಶ್ಚಿಮದ ಶ್ರೇಣಿಗಿಂತ ಉನ್ನತವಾದ್ದು. ಇದರ ನಡುನಡುವೆ 2,000'-5,000' ಆಳದ ಕಮರಿಗಳುಂಟು. ಈ ಶ್ರೇಣಿಯ ಪೂರ್ವದ ಪಕ್ಕ ಬಹಳ ಕಡಿದಾಗಿದೆ. ಕಣಿವೆಗಳು ಕಡಿಮೆ. ಅತ್ಯಂತ ತಗ್ಗಿನ ಕಣಿವೆ ಫ್ರೆಜ್óನೋ (9,000'). ಹೆಚ್ಚು ಸಂಚಾರವಿರುವುದು ಟೈಯೋಗಾ ಕಣಿವೆಯಲ್ಲಿ (11,000'). ಶ್ರೇಣಿಯಲ್ಲಿ 14,000' ಗಿಂತ ಎತ್ತರವಾಗಿರುವ ಶಿಖರಗಳು ನಾಲ್ಕು. ಅತ್ಯುನ್ನತ ಶಿಖರ ಹ್ವಿಟ್ನಿ (14,495').

ಕ್ಯಾಲಿಫೋರ್ನಿಯದ ಪರ್ವತದೃಶ್ಯ ಅತ್ಯಂತ ರಮಣೀಯವಾದ್ದು. ಓವೆನ್ಸ್ ಸರೋವರದ ಎದುರಿಗೆ ಹತ್ತು ಮೈ. ದೂರದಲ್ಲಿ 10,000' ಕೆಳಕ್ಕಿಳಿಯುವ ಗ್ರಾನೈಟ್ ಶೃಂಗಗಳ ಸಾಲು, ಸುತ್ತಣ ಮೈದಾನದಿಂದ ಥಟ್ಟನೆ 11,000' ಮೇಲೆದ್ದು ನಿಂತಿರುವ ಹಿಮಾಚ್ಛಾದಿತ ಷ್ಯಾಸ್ತ ಶಿಖರ, ಕರಾವಳಿಯ ಶ್ರೇಣಿಯ ಕಣಿವೆಗಳು, ಕಿಂಗ್ಸ್ ನದಿಯ ದಕ್ಷಿಣ ಕವಲು-ಒಂದೊಂದೂ ವಿಶಿಷ್ಟ ಸೌಂದರ್ಯಯುಕ್ತವಾದ್ದು. ಯೂಸೆಮಿಟಿ ಕಣಿವೆಯ ದೃಶ್ಯವಂತೂ ಅಸದೃಶ. ಕ್ಯಾಲಿಫೋರ್ನಿಯದ ಪರ್ವತಗಳ ರಮ್ಯ ಸನ್ನಿವೇಶಗಳು ಹಿಂದೊಮ್ಮೆ ಇಲ್ಲಿದ್ದ ಹಿಮನದಿಗಳ ನಗ್ನೀಕರಣ ಕಾರ್ಯಗಳಿಂದ ಸಂಭವಿಸಿದಂಥವು. ಆಳವಾದ ಕಮ್ಮರಿಗಳು ನದಿಗಳ ಕೊರೆತದ ಫಲ. ಕ್ಯಾಲಿಫೋರ್ನಿಯದಲ್ಲಿ ಅನೇಕ ಸರೋವರಗಳೂ ಉಂಟು. ಇವುಗಳಲ್ಲಿ ಅತ್ಯಂತ ಸುಂದರವಾದ್ದು ಟಾಹೋ. ಇದು ಸಮುದ್ರಮಟ್ಟದಿಂದ 6,229' ಎತ್ತರದಲ್ಲಿದೆ. ಇದರ ಸುತ್ತಲೂ 4,000'-5,000' ಮೇಲೆದ್ದಿರುವ ಶೃಂಗಗಳು ಭವ್ಯತೆಯ ಪರಾಕಾಷ್ಠೆಯನ್ನು ಮುಟ್ಟಿಸುತ್ತವೆ.

ಪರ್ವತಶ್ರೇಣಿಯ ಉತ್ತರ ಭಾಗ ಬಹುತೇಕ ಲಾವದಿಂದ ಆವೃತವಾದ್ದು. ಇಲ್ಲಿ ಅನೇಕ ಕುಳಿಗಳೂ ಬೂದಿ ಗುಡ್ಡಗಳೂ ಉಂಟು. ಅಗ್ನಿ ಪರ್ವತ ಶಿಖರಗಳಲ್ಲಿ ಕೆಲವು ಇತ್ತೀಚಿನವು. ಇವುಗಳಲ್ಲಿ ಷಾಸ್ತ ಶಿಖರ ಒಂದು. ಓವೆನ್ಸ್ ಕಣಿವೆಯಲ್ಲಿ ಮೃತ ಹೊಂದಿದ ಮತ್ತು ಸುಪ್ತ ಜ್ವಾಲಾಮುಖಿಗಳ ಗುಚ್ಛವೊಂದುಂಟು.

ಕ್ಯಾಲಿಫೋರ್ನಿಯದ ತೀರಪ್ರದೇಶಗಳಲ್ಲಿ ಭೂಕಂಪಗಳಾಗುತ್ತಿರುತ್ತವೆ. 1812ರಲ್ಲಿ ಸಂಭವಿಸಿದ ಭೂಕಂಪದಿಂದ ಕ್ಯಾಲಿಫೋರ್ನಿಯದ ದಕ್ಷಿಣ ಭಾಗದಲ್ಲಿ ನಷ್ಟವುಂಟಾಯಿತು. 1868ರಲ್ಲಿ ಸ್ಯಾನ್‍ಫ್ರಾನ್ಸಿಸ್ಕೋ ಪ್ರದೇಶದಲ್ಲಿ ಭಾರಿ ಭೂಕಂಪವಾಯಿತು. 1872ರಲ್ಲಿ ನೆವಾಡ ರಾಜ್ಯ ಮತ್ತು ಸಿಯೆರ ಪ್ರದೇಶ ಕಂಪಿಸಿತು. 1906ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ನಗರಕ್ಕೆ ಬಹಳ ನಷ್ಟವಾಯಿತು. 1925ರಲ್ಲಿ ಸ್ಯಾಂಟ ಬಾರ್ಬರ ತೀವ್ರ ಕಂಪನಕ್ಕೊಳಗಾಯಿತು.

ಉತ್ತರ ದಕ್ಷಿಣಗಳಲ್ಲಿ ಕೂಡಿಕೊಂಡಂತಿರುವ ಪೂರ್ವ ಪಶ್ಚಿಮ ಪರ್ವತಶ್ರೇಣಿಗಳ ನಡುವೆ ಇರುವ ಕಣಿವೆ ಕ್ಯಾಲಿಫೋರ್ನಿಯದ ಮಧ್ಯಭಾಗ. ಸ್ಯಾನ್‍ಫ್ರಾನ್ಸಿಸ್ಕೋದ ಗೋಲ್ಡನ್ ಗೇಟ್‍ನ ಹಿಂಬದಿಯಲ್ಲಿ ಮಾತ್ರ ಇದು ಹೊರಕ್ಕೆ ತೆರೆದುಕೊಂಡಿದೆ. ಒಳನಾಡಿನ ನೀರೆಲ್ಲ ಹರಿದುಹೋಗಲು ಇರುವ ತೆರವು ಇದೊಂದೇ. ಈ ಕಣಿವೆಯ ಉದ್ದ 450 ಮೈ. ಸರಾಸರಿ ಅಗಲ 40 ಮೈ. ಕಣಿವೆ ಪ್ರದೇಶದ ಉತ್ತರ ಭಾಗದಲ್ಲಿ ಸ್ಯಾಕ್ರಮೆಂಟೊ ನದಿಯೂ ದಕ್ಷಿಣ ಭಾಗದಲ್ಲಿ ಸ್ಯಾನ್ ವಾಕೀನ್ ನದಿಯೂ ಹರಿಯುತ್ತವೆ. ಸಮುದ್ರಕ್ಕೆ ಸ್ವಲ್ಪದೂರ ಇರುವಾಗ ಸ್ಯಾಕ್ರಮೆಂಟೊ ನದಿಯನ್ನು ಸ್ಯಾನ್ ವಾಕೀನ್ ಕೂಡಿಕೊಳ್ಳುತ್ತದೆ. ಸಾಗರ ತೀರದ ಪರ್ವತಗಳಿಂದ ನಡುವಣ ಕಣಿವೆಯತ್ತ ಯಾವ ಜೀವನದಿಯೂ ಹರಿಯುವುದಿಲ್ಲ. ರಾಜ್ಯದ ಪೂರ್ವಭಾಗದಿಂದ ಸ್ಯಾಕ್ರಮೆಂಟೊ ಮತ್ತು ಸ್ಯಾನ್ ವಾಕೀನ್ ನದಿಗಳಿಗೆ ಅನೇಕ ನದಿಗಳು ಬಂದು ಕೂಡುತ್ತವೆ. ಸ್ಯಾಕ್ರಮೆಂಟೊದ ಪ್ರಮುಖ ಉಪನದಿ ಫೆದರ್. ಇಲ್ಲಿಯ ಅನೇಕ ನದಿಗಳು ನಡುವೆಯೇ ಬತ್ತಿಹೋಗುತ್ತವೆ; ಇಲ್ಲವೇ ಡೆತ್‍ಕಣಿವೆಯಲ್ಲಿ ಕಂಡುಬರುವಂತೆ ಸ್ವಲ್ಪದೂರ ಭೂಮಿಯೊಳಗೆ ಹರಿದು ಇಂಗಿಹೋಗುತ್ತವೆ.

ಪಾಯಿಂಟ್ ಕನ್‍ಸೆಪ್‍ಷನ್‍ಗೆ ದಕ್ಷಿಣದ ಕರಾವಳಿ ಫಲವತ್ತಾದ್ದು. ಒಳನಾಡ ಮರುಭೂಮಿಗೂ ಇದಕ್ಕೂ ನಡುವೆ ಉತ್ತುಂಗ ಪರ್ವತಶ್ರೇಣಿಯುಂಟು. 5,000'-7,000' ಎತ್ತರವಿರುವ ಈ ಶ್ರೇಣಿಯಲ್ಲಿ 10,000'ಗೂ ಎತ್ತರವಿರುವ ಕೆಲವು ಶಿಖರಗಳುಂಟು. ಇವುಗಳಲ್ಲಿ ಸ್ಯಾನ್ ಬರ್ನಡೀನೋ (11,630'), ಸ್ಯಾನ್ ಜಸಿಂಟೋ (10.805'), ಸ್ಯಾನ್ ಅಂಟೋನಿಯೋ (10,080') ಮುಖ್ಯವಾದವು. ಈ ಶ್ರೇಣಿಯಲ್ಲಿ ಅನೇಕ ಕಣಿವೆಗಳಿವೆ. ರೈಲುಮಾರ್ಗಗಳು ಈ ಕಣಿವೆಗಳ ಮೂಲಕ ತೀರಪ್ರದೇಶಕ್ಕೆ ಸಾಗುತ್ತವೆ. ದಕ್ಷಿಣ ಕ್ಯಾಲಿಫೋರ್ನಿಯದಲ್ಲಿ ಬಿಸಿಲು ಹೆಚ್ಚು. ಇಲ್ಲಿಯ ಪ್ರದೇಶ ಬಹುಮಟ್ಟಿಗೆ ಬಂಜರು. ಕೆರ್ನ್, ಲಾಸ್ ಆಂಜೆಲೆಸ್ ಮತ್ತು ಸಾನ್ ಬರ್ನಡೀನೋ ಪ್ರದೇಶಗಳ ಭಾಗಗಳನ್ನು ಮೊಹಾವೆ ಮರಳುಗಾಡು ಆಕ್ರಮಿಸಿಕೊಂಡಿದೆ. ದಕ್ಷಿಣ ಕ್ಯಾಲಿಫೋರ್ನಿಯದಲ್ಲಿ ಸಮುದ್ರಕ್ಕೆ ಹರಿಯುವ ನದಿಗಳಿಲ್ಲ. ಸಾನ್ ಡಿಯೇಗೋ, ಇಂಪೀರಿಯಲ್ ಮತ್ತು ರಿವರ್‍ಸೈಡ್ ಪ್ರದೇಶಗಳಲ್ಲಿ ಕೆಲವು ಹೊಳೆಗಳು ಹರಿಯುತ್ತವೆ.

ಡೆತ್ ಕಣಿವೆ ಇರುವುದು ಓವೆನ್ಸ್ ಸರೋವರದ ಪೂರ್ವಕ್ಕೆ, 40 ಮೈ. ದೂರದಲ್ಲಿ. ಅಮರ್ಗೋಸಾ ನದಿ ನೆವಾಡ ರಾಜ್ಯದಿಂದ ಈ ಕಣಿವೆಯನ್ನು ಹೊಕ್ಕು ಇಲ್ಲಿಯ ಉಪ್ಪುಭೂಮಿಯಲ್ಲಿ ಬತ್ತಿಹೋಗುತ್ತದೆ. ಬೋರ್ಯಾಕ್ಸ್, ನೈಟ್ರೇಟ್ ಆಫ್ ಸೋಡ ಇವು ಇಲ್ಲಿ ಸಿಗುತ್ತವೆ. ಇಡೀ ಖಂಡದ ಅತ್ಯಂತ ತಗ್ಗಿನ ಪ್ರದೇಶ ಡೆತ್ ಕಣಿವೆಯಲ್ಲಿದೆ. ಇದು ಇರುವುದು ಸಮುದ್ರ ಮಟ್ಟಕ್ಕಿಂತ 282' ಕೆಳಗೆ.

ವಾಯುಗುಣ[ಬದಲಾಯಿಸಿ]

ಕ್ಯಾಲಿಫೋರ್ನಿಯದ ವಾಯುಗುಣ ವಿಶಿಷ್ಟವಾದ್ದು: ತೀರ ಪ್ರದೇಶದಲ್ಲಿ ಉಷ್ಣತೆಯ ಅಂತರ ಕಡಿಮೆ. ಪರ್ವತಪ್ರದೇಶಗಳಲ್ಲಿ ಹೊರತು ಇತರ ಕಡೆಗಳಲ್ಲಿ ಚಳಿಗಾಲದಲ್ಲಿ ಉಷ್ಣತೆ ಬಹಳ ಕಡಿಮೆಯಿರುವುದಿಲ್ಲ. ಸಿಯೆರ ಪರ್ವತ ಭಾಗದಲ್ಲೂ ವಾಯವ್ಯ ಕೌಂಟಿಗಳಲ್ಲೂ 40" ಗಿಂತ ಹೆಚ್ಚು ಮಳೆಯಾಗುತ್ತದೆ. ಇನ್ಯೋ, ಕರ್ನ್, ಸ್ಯಾನ್ ಬರ್ನಡೀನೋ ಮತ್ತು ಇಂಪೀರಿಯಲ್ ಕೌಂಟಿಗಳಲ್ಲಿ ಅಲ್ಲಿ ಮಳೆ 10"ಗಿಂತ ಕಡಿಮೆ. ಉಳಿದ ಕಡೆ ಸರಾಸರಿ ಮಳೆ 10"-20". 6,000'-7,000' ಗಿಂತ ಎತ್ತರವಿರುವ ಪರ್ವತಗಳಲ್ಲಿ ಅವಪತನವಾಗುವುದು ಹಿಮರೂಪದಲ್ಲಿ. ಇದು ಬೇಸಗೆಯಲ್ಲಿ ಕರಗಿ ಹರಿದು ನೀರಾವರಿಗೆ ಅನುಕೂಲ ಕಲ್ಪಿಸಿದೆ. ಸ್ಯಾನ್ ಫ್ರಾನ್‍ಸಿಸ್ಕೋಗೆ ಉತ್ತರದಲ್ಲಿ ಮೇ-ಸೆಪ್ಟೆಂಬರ್ ನಡುವೆ ರಾತ್ರಿಯ ವೇಳೆ ಮಂಜು ಬೀಳುತ್ತದೆ. ರಾಜ್ಯದ ಆಗ್ನೇಯ ಭಾಗದಲ್ಲಿ ಬಿಸಿಲು ಹೆಚ್ಚು. ಕಾಲೊರಾಡೋ ಮರುಭೂಮಿಯೂ ಅದರ ಅಂಚಿನ ಆರಿಜೋóನ ರಾಜ್ಯದ ಹೀಲ ಕಣಿವೆಯೂ ಅಮೆರಿಕ ಸಂಯುಕ್ತಸಂಸ್ಥಾನದ ಅತ್ಯಂತ ಉಷ್ಣತೆಯ ಪ್ರದೇಶಗಳು. ಪೆಸಿಫಿಕ್ ಸಾಗರದ ದಕ್ಷಿಣ ಅಂಚಿನ ಉಷ್ಣತೆ 1240-1290 ಫ್ಯಾ. ರಾಜ್ಯದ ಅತ್ಯಂತ ಕಡಿಮೆ ಉಷ್ಣತೆ ಇರುವುದು ತಾಹೋ ಸರೋವರದ ಬಳಿ. ಅಲ್ಲಿ ಉಷ್ಣತೆ 200-360 ಫ್ಯಾ. ಇರುವುದುಂಟು.

ಸಸ್ಯಪ್ರಾಣಿಜೀವನ: ಕ್ಯಾಲಿಫೋರ್ನಿಯ ರಾಜ್ಯದ ಸಸ್ಯಪ್ರಾಣಿಜೀವನ ವೈವಿಧ್ಯಮಯವಾದ್ದು. ಇಲ್ಲಿಯ ಅರಣ್ಯಗಳಲ್ಲಿ ಪೈನ್ ಮತ್ತು ರೆಡ್‍ವುಡ್ ಮರಗಳು ಯಥೇಚ್ಛವಾಗಿವೆ. ಈ ರಾಜ್ಯದಲ್ಲಿ ಸಸ್ತನಿಪ್ರಾಣಿಗಳ 400 ಪ್ರಭೇದಗಳುಂಟು. ಅವುಗಳಲ್ಲಿ ಪ್ರಮುಖವಾದವು ಪಾಕೆಟ್ ಗೋಫರ್, ಕರಿಬಾಲದ ಮೊಲ, ಕ್ಯಾಲಿಫೋರ್ನಿಯ ಬ್ಯಾಡ್ಜರ್, ಕಯೋಟ್, ಯನ ಕೂಗರ್, ಕಾಡುಕುರಿ, ಜಿಂಕೆ ಮತ್ತು ಎಲ್ಕ್. ಇಲ್ಲಿಯ ಪಕ್ಷಿಪ್ರಭೇದಗಳು 600. ಕ್ವೇಲ್, ಪಾರಿವಾಳ, ಗೂಬೆ, ಹಮಿಂಗ್‍ಬರ್ಡ್ ಮುಂತಾದ ಅನೇಕ ಪಕ್ಷಿಗಳುಂಟು.

ಆರ್ಥಿಕತೆ[ಬದಲಾಯಿಸಿ]

ನೀರಾವರಿ ಅಭಿವೃದ್ಧಿ, ಉತ್ತಮ ವ್ಯವಸಾಯ ಪದ್ಧತಿ ಮತ್ತು ಸಣ್ಣ ಭೂತಾಕುಗಳು-ಇವುಗಳಿಂದಾಗಿ ಕ್ಯಾಲಿಫೋರ್ನಿಯ ರಾಜ್ಯ ಮುಖ್ಯ ಕೃಷಿ ಪ್ರದೇಶವಾಗಿದೆ. ಹಣ್ಣುಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಕೇಂದ್ರ ಕಣಿವೆ ಭಾಗದಲ್ಲಿ ಫ್ರಿಯಾಂಟ್ ಮತ್ತು ಷಾಸ್ತ ಜಲಾಶಯಗಳ ನಿರ್ಮಾಣದಿಂದ ವ್ಯವಸಾಯಕ್ಕೆ ಹೆಚ್ಚು ಅನುಕೂಲವಾಯಿತು. ಹತ್ತಿ, ಬಾರ್ಲಿ, ಗೋಧಿ, ಅಕ್ಕಿ, ಆಲೂಗೆಡ್ಡೆ, ಸಕ್ಕರೆ ಬೀಟ್, ದ್ರಾಕ್ಷಿ, ಕಿತ್ತಳೆ, ನಿಂಬೆ, ವಾಲ್‍ನಟ್, ಮರಸೇಬು, ಬಾದಾಮಿ, ಏಪ್ರಿಕಾಟ್, ಸೇಬು, ಅಂಜೂರ ಮುಂತಾದವು ಈ ರಾಜ್ಯದಲ್ಲಿ ಹೇರಳವಾಗಿ ಬೆಳೆಯುತ್ತವೆ. ಮೆಕ್ಸಿಕೋ ದೇಶದಿಂದ ವಲಸೆ ಬಂದ ಕಾರ್ಮಿಕರು ಕೃಷಿ ಭೂಮಿಗಳಲ್ಲಿ ಕೆಲಸ ಮಾಡುತ್ತಾರೆ. ಕ್ಯಾಲಿಫೋರ್ನಿಯದ ಬೀಜರಹಿತ ಕಿತ್ತಳೆ ಅಮೆರಿಕದಲ್ಲಿ ಪ್ರಸಿದ್ಧವಾಗಿದೆ. 1940-50ರ ದಶಕಗಳಲ್ಲಿ ಕ್ಯಾಲಿಫೋರ್ನಿಯದಲ್ಲಿ ಹತ್ತಿ ವ್ಯವಸಾಯವನ್ನು ಅಭಿವೃದ್ಧಿಗೊಳಿಸಿದರು. ಸ್ಯಾನ್ ವಾಕೀನ್ ಕಣಿವೆಯಲ್ಲಿ ಹೆಚ್ಚು ನೆಲವನ್ನು ಹತ್ತಿಯ ವ್ಯವಸಾಯಕ್ಕೆ ಒಳಪಡಿಸಲಾಗಿದೆ. ಈ ರಾಜ್ಯ ಸ್ಪೇನ್ ಮತ್ತು ಮೆಕ್ಸಿಕೋಗಳ ಅಧೀನದಲ್ಲಿದ್ದಾಗ ಫ್ರಾನ್‍ಸಿಸ್ಕನ್ ಪಾದ್ರಿಗಳು ಇಲ್ಲಿ ಪಶುಪಾಲನೆಯನ್ನು ಉಪಕ್ರಮಿಸಿದರು.

ಕ್ಯಾಲಿಫೋರ್ನಿಯ ಕಡಲ ತೀರದಲ್ಲಿ ಆಧುನಿಕ ರೀತಿಯಲ್ಲಿ ಮೀನುಗಾರಿಕೆ ಅಭಿವೃದ್ಧಿಯಾಗಿದೆ. ಮೀನು ಹಿಡಿಯುವ ಮುಖ್ಯ ರೇವುಗಳು ಯುರೀಕ, ಸ್ಯಾನ್ ಫ್ರಾನ್ಸ್‍ಸ್ಕೋ, ಮಾಂಟೆರೇ, ಸ್ಯಾಂಟ ಬಾರ್ಬರ, ಲಾಸ್ ಆಂಜೆಲೆಸ್ ಮತ್ತು ಸ್ಯಾನ್ ಡಿಯೇಗೋ.

1860ರ ಸಮಯದಲ್ಲಿ ಕ್ಯಾಲಿಫೋರ್ನಿಯಕ್ಕೆ ಅಗತ್ಯವಾಗಿದ್ದ ಬಹುತೇಕ ಎಲ್ಲ ಸರಕುಗಳೂ ಅಮೆರಿಕದ ಪೂರ್ವ ರಾಜ್ಯಗಳಿಂದ ಇಲ್ಲವೆ ಯೂರೋಪಿನಿಂದ ಬರುತ್ತಿದ್ದುವು. ಕಲ್ಲಿದ್ದಲ್ಲಿನ ಅಭಾವದಿಂದಾಗಿ ಕೈಗಾರಿಕೆ ಹಿಂದೆ ಬಿದ್ದಿತ್ತು. ಮತ್ತು ವಿದ್ಯುಚ್ಛಕ್ತಿ ಬಂದಮೇಲೆ ಕೈಗಾರಿಕೆಗಳು ಬೆಳೆಯತೊಡಗಿದವು. 1919ರ ವೇಳೆಗೆ ವ್ಯವಸಾಯಕ್ಕಿಂತ ಕೈಗಾರಿಕೆ ಹೆಚ್ಚು ಪ್ರಾಮುಖ್ಯ ಗಳಿಸಿತು. ವಿಮಾನ ಮತ್ತು ಮೋಟಾರು ತಯಾರಿಕೆ, ಹಡಗು ನಿರ್ಮಾಣ ಇವು ಇಲ್ಲಿಯ ಕೈಗಾರಿಕೆಗಳ ಪೈಕಿ ಮುಖ್ಯವಾದವು. ಆಹಾರ ವಸ್ತುಗಳ ಉತ್ಪಾದನೆ, ಮಾಂಸ ಕೈಗಾರಿಕೆಗಳ ಪೈಕಿ ಮುಖ್ಯವಾದವು. ಆಹಾರ ವಸ್ತುಗಳ ಉತ್ಪಾದನೆ, ಮಾಂಸ ಸಂವೇಷ್ಟನ, ಮುದ್ರಣ, ಮರಗೆಲಸ, ಹತ್ತಿ ಜವಳಿ ಇವು ಇತರ ಕೆಲವು ಮುಖ್ಯ ಕೈಗಾರಿಕೆಗಳು. ಚೌಬೀನೆ ಉತ್ಪಾದನೆಯಲ್ಲಿ ಕ್ಯಾಲಿಫೋರ್ನಿಯ ಅಮೆರಿಕ ಸಂಯುಕ್ತಸಂಸ್ಥಾನದಲ್ಲಿ ಎರಡನೆಯದು. ಹಾಲಿವುಡ್ ಪ್ರಮುಖ ಚಲನಚಿತ್ರ ತಯಾರಿಕಾ ಕೇಂದ್ರ. ಕ್ಯಾಲಿಫೋರ್ನಿಯದ ಕೆಲವು ಭಾಗಗಳಲ್ಲಿ ಚಿನ್ನವಿದ್ದದ್ದು 1848ಕ್ಕೆ ಹಿಂದೆಯೇ ಜನರಿಗೆ ತಿಳಿದಿತ್ತು. ಸ್ವಲ್ಪಕಾಲ ಇದು ಪ್ರಮುಖ ಸ್ವಣೋತ್ಪಾದಕ ರಾಜ್ಯವಾಗಿತ್ತು. ಈ ಶತಮಾನದ ನಡುಗಾಲದಿಂದ ಚಿನ್ನದ ಗಣಿಗಾರಿಕೆ ಪ್ರಾಮುಖ್ಯ ಬಹಳ ಮಟ್ಟಿಗೆ ತಗ್ಗಿದೆ. ಪೆಟ್ರೋಲಿಯಂ ಬಹಳ ಮುಖ್ಯ ಖನಿಜ. ಕಚ್ಚಾ ತೈಲದ ಉತ್ಪಾದನೆಯಲ್ಲಿ ಈ ರಾಜ್ಯದ್ದು ಅಮೆರಿಕ ಸಂಯುಕ್ತಸಂಸ್ಥಾನದಲ್ಲಿ ಎರಡನೆಯ ಸ್ಥಾನ. ಇಡೀ ದೇಶದ ಉತ್ಪಾದನೆಯಲ್ಲಿ 15% ಕ್ಯಾಲಿಫೋರ್ನಿಯದ ಪಾಲು. ವಿಲ್ಮಿಂಗ್ಟನ್, ಲಾಂಗ್ ಬೀಚ್, ಹಂಟಿಂಗ್ಟನ್ ಬೀಚ್, ಮಿಡ್ವೇ-ಸನ್ಸೆಟ್, ಕೆಟ್ಲ್‍ಮನ್ ಬೆಟ್ಟಗಳು, ಕೊಲಿಂಗ-ಇವು ರಾಜ್ಯದ ಪ್ರಮುಖ ತೈಲೋತ್ಪಾದಕ ಪ್ರದೇಶಗಳು. ಬೋರಾನ್, ಯುರೇನಿಯಂ, ಉಪ್ಪು, ಸೀಸ, ಮೆಗ್ನೀಷಿಯಂ, ಜಿಪ್ಸಂ-ಇವು ರಾಜ್ಯದ ಇತರ ಕೆಲವು ಖನಿಜಗಳು.

1869ರಲ್ಲಿ ಸೆಂಟ್ರಲ್ ಪೆಸಿಫಿಕ್ ಮತ್ತು ಯೂನಿಯನ್ ಪೆಸಿಫಿಕ್ ರೈಲುಮಾರ್ಗಗಳನ್ನು ಸೇರಿಸಿದಾಗ ಪೆಸಿಫಿಕ್ ತೀರದಿಂದ ಅಟ್ಲಾಂಟಿಕ್ ತೀರದ ವರೆಗೆ ರೈಲ್ವೆ ಸಂಪರ್ಕ ಏರ್ಪಡಿಸಿದ ಫಲವಾಗಿ ಸಾರಿಗೆ ಬಹಳ ಶೀಘ್ರವಾಗಿ ಬೆಳೆಯಿತು. 1919ರ ತರುವಾಯ ಅನೇಕ ಹೆದ್ದಾರಿಗಳು ಅಭಿವೃದ್ಧಿ ಹೊಂದಿದುವು. ಈ ರಾಜ್ಯದಲ್ಲಿ ವಾಹನ ಸಂಚಾರ ಹೆಚ್ಚು. ಇಬ್ಬರಿಗೆ ಒಂದರಂತೆ ಇಲ್ಲಿ ಮೋಟಾರ್ ಕಾರುಗಳಿವೆ.

ಕ್ಯಾಲಿಫೋರ್ನಿಯದ ರೇವುಗಳಿಂದ ವಿಶ್ವದ ವಿವಿಧ ಭಾಗಗಳಿಗೆ ಸಮುದ್ರಯಾನ ಸೌಲಭ್ಯವುಂಟು. ಸ್ಯಾನ್‍ಫ್ರಾನ್ಸಿಸ್ಕೋ ಮತ್ತು ಲಾಸ್ ಆಂಜೆಲೆಸ್ ರೇವುಗಳಿಂದ ವಿಶ್ವದ ಹಲವು ಕಡೆಗಳಿಗೆ ಹಡಗುಗಳು ಸಂಚರಿಸುತ್ತವೆ. ಸ್ಯಾನ್ ಡಿಯೇಗೋದಲ್ಲಿ ಉತ್ತಮವಾದ ಬಂದರಿದೆ. ಅದು ಮುಖ್ಯವಾಗಿ ನೌಕಾಬಲದ ಉಪಯೋಗದಲ್ಲಿದೆ. ಈ ರಾಜ್ಯದಿಂದ ರಫ್ತಾಗುವ ಸರಕುಗಳು ಪೆಟ್ರೋಲ್, ಧಾನ್ಯಗಳು, ಹಣ್ಣು, ತರಕಾರಿ, ಮೀನು ಮತ್ತು ಕೈಗಾರಿಕಾ ಸರಕುಗಳು.

ಜನಸಂಖ್ಯೆ, ಶಿಕ್ಷಣ: 1858ರಲ್ಲಿ ಕ್ಯಾಲಿಫೋರ್ನಿಯದ ಜನಸಂಖ್ಯೆ 92,597 ಇದ್ದದ್ದು 1950ರ ವೇಳೆಗೆ 1,05,56,223 ಆಯಿತು. 1960ರ ಗಣತಿಯ ಪ್ರಕಾರ 1,57,17,204. ಕ್ಯಾಲಿಫೋರ್ನಿಯದ ಕೆಲವು ದೊಡ್ಡ ನಗರಗಳು ಇವು: ಲಾಸ್ ಆಂಜೆಲೆಸ್ (24,79,015), ಲಾಂಗ್ ಬೀಚ್ (3,44,161), ಸ್ಯಾನ್‍ಫ್ರಾನ್ಸಿಸ್ಕೋ (7,40,316), ಸ್ಯಾಕ್ರಮೆಂಟೋ (1,91,667), ಸ್ಯಾನ್ ಬರ್ನಡೀನೋ (919,22) ಸ್ಯಾನ್ ಡಿಯೇಗೋ (5,73,224), ಬೇಕರ್ಸ್ ಫೀಲ್ಡ್ (54,848), ಬರ್ಕ್‍ಲಿ (1,11,268), ಗ್ಲೆಂಡೇಲ್ (1,19,442), ಓಕ್‍ಲೆಂಡ್ (3,67,548), ಆಲಮೇಡ (68,855), ಪೊಮೋನ (67,157), ಗ್ಲೆಂಡೇಲ್ (1,19,442), ಪ್ಯಾಸಡೀನ (1,16,407) ಮತ್ತು ರಿವರ್‍ಸೈಡ್ (84,332). ರಾಜಧಾನಿ ಸ್ಯಾಕ್ರಮೆಂಟೋ. ರಾಜ್ಯದ ಒಟ್ಟು ಜನಸಂಖ್ಯೆ 1,57,17,204.

ಕ್ಯಾಲಿಫೋರ್ನಿಯದ ಶಾಲೆಗಳಲ್ಲಿ ಉಚಿತಶಿಕ್ಷಣ ಸೌಲಭ್ಯವಿದೆ. ಶಿಶುವಿಹಾರ ಮತ್ತು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಪುಸ್ತಕಗಳನ್ನು ಉಚಿತವಾಗಿ ಒದಗಿಸುವ ಏರ್ಪಾಡಿದೆ.

ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯ 1858ರಲ್ಲಿ ಸ್ಥಾಪಿತವಾಯಿತು. ಇದರ ಕೇಂದ್ರ ಕಚೇರಿ ಇರುವುದು ಬಕ್ರ್ಲಿಯಲ್ಲಿ. ಇದಲ್ಲದೆ ಇನ್ನೂ ಏಳು ಕಡೆಗಳಲ್ಲಿ ಇದು ಶಿಕ್ಷಣ ನೀಡುತ್ತಿದೆ. ಇದು ರಾಜ್ಯದ ಅತ್ಯಂತ ದೊಡ್ಡ ವಿಶ್ವವಿದ್ಯಾಲಯ. ರಾಜ್ಯದಲ್ಲಿ ತಾಂತ್ರಿಕಶಿಕ್ಷಣ ಶಾಲೆಗಳೂ ಕುರುಡ ಮತ್ತು ಕಿವುಡರಿಗಾಗಿ ಶಾಲೆಗಳೂ ಕಲಾ ಶಾಲೆಗಳೂ ಇವೆ. ಪ್ಯಾಲೋ ಆಲ್ಟೋದ ಸ್ಟಾನ್‍ಫರ್ಡ್ ವಿಶ್ವವಿದ್ಯಾಲಯ ಮತ್ತು ಲಾಸ್ ಆಂಜೆಲೆಸ್‍ನ ದಕ್ಷಿಣ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯ ಇವು ರಾಜ್ಯದ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಅತ್ಯಂತ ದೊಡ್ಡವು.

ಕ್ಯಾಲಿಫೋರ್ನಿಯದ ಇತಿಹಾಸ[ಬದಲಾಯಿಸಿ]

ಕ್ಯಾಲಿಫೋರ್ನಿಯ ಎಂಬ ಹೆಸರು ಗಾರ್ಸಿ ಓರ್ಡೋನೆಜ್ó ಡಿ ಮಾಂಟಾಲ್ವೋ ಎಂಬವನ ಬರೆವಣಿಗೆಯೊಂದರಿಂದ (1510) ತೆಗೆದುಕೊಂಡದ್ದು. ಇದು ಇಂಡೀಸಿನ ಬಲಕ್ಕಿರುವ ಒಂದು ದ್ವೀಪವೆಂದು ಆತ ಬಣ್ಣಿಸಿದ್ದ. 1533-34ರ ಸುಮಾರಿನಲ್ಲಿ ಕೆಳ ಕ್ಯಾಲಿಫೋರ್ನಿಯಕ್ಕೆ ಈ ಹೆಸರು ಬಂದಿರಬೇಕು. ತರುವಾಯ ಸ್ಯಾನ್ ಲೂಕಾಸ್ ಭೂಶಿರದಿಂದ ಪೆಸಿಫಿಕ್ ಸಾಗರದ ಅಂಚಿನ ವರೆಗೆ ಇಡೀ ಪ್ರದೇಶಕ್ಕೆ ಈ ಹೆಸರು ಅನ್ವಯವಾಯಿತು. ಕಾಲೊರಾಡೋ ನದಿಯ ದಕ್ಷಿಣ ಭಾಗವನ್ನು 1540ರಲ್ಲಿ ಕಂಡುಹಿಡಿಯಲಾಯಿತು. ಪರಿಶೋಧಕರು ಕ್ಯಾಲಿಫೋರ್ನಿಯವನ್ನು ಕಂಡರೂ ಅದರ ಒಳಹೊಕ್ಕಿರಲಿಲ್ಲ. 1542-43ರಲ್ಲಿ ವಾನ್‍ರೊಡ್ರಿಕ್ವೆಸ್ ಕಾಬ್ರಿಲ್ಲೋ ಇದರ ಪರಿಶೋಧನೆ ನಡೆಸಿದ. ಅವನ ತರುವಾಯ ಈ ಕೆಲಸವನ್ನು ಮುಂದುವರಿಸಿದವನು ಬಾರ್ತೊಲೋಮಿ ಫೆರೆಲೊ. 1579ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋಗೆ ಉತ್ತರದಲ್ಲಿ ಬೊಡೀಗಾ ಕೊಲ್ಲಿಯಲ್ಲಿ ಫ್ರಾನ್ಸಿಸ್ ಡ್ರೇಕ್ ತನ್ನ ನಾವೆಗಳನ್ನು ಸರಿಪಡಿಸಿಕೊಂಡನೆಂದು ತಿಳಿದುಬರುತ್ತದೆ. ಫಿಲಿಪೀನ್ಸ್‍ನಿಂದ ಮೆಕ್ಸಿಕೋದ ಅಕಪುಲ್ಕೊ ರೇವಿಗೆ ಸಂಚರಿಸುತ್ತಿದ್ದ ಸ್ಟ್ಯಾನಿಷ್ ಹಡಗುಗಳು ಕ್ಯಾಲಿಫೋರ್ನಿಯದ ತೀರವನ್ನು ವೀಕ್ಷಿಸುತ್ತಿದ್ದುವು. ಸೆಬಾಸ್ಟಿಯನ್ ವಿಜ್óಕೇನೊ 1602-03ರಲ್ಲಿ ತೀರವನ್ನು ಪರಿಶೋಧಿಸಿ ಮಾಂಟಿರೇ ಕೊಲ್ಲಿಯನ್ನು ಕಂಡುಹಿಡಿದ. ತರುವಾಯ 150 ವರ್ಷಗಳವರೆಗೆ ಯಾವ ಪರಿಶೋಧನೆಯೂ ನಡೆಯಲಿಲ್ಲ. ಕ್ಯಾಲಿಫೋರ್ನಿಯ ಒಂದು ದ್ವೀಪವಾಗಿರಬೇಕೆಂಬುದೇ ಆಗಿನ ಕಲ್ಪನೆಯಾಗಿತ್ತು. ಜೆಸುóಯಿಟರು ಕೆಳ ಕ್ಯಾಲಿಫೋರ್ನಿಯ ಪ್ರದೇಶದಲ್ಲಿ 1697ರಲ್ಲಿ ನೆಲಸಿದರು. 1767ರಲ್ಲಿ ಸ್ಪೇನ್ ದೊರೆ 3ನೆಯ ಚಾರಲ್ಸ್ ಇವರನ್ನು ಹೊರದೂಡಿ ಆಜ್ಞೆ ಹೊರಡಿಸುವವರೆಗೂ ಅಲ್ಲಿದ್ದರು. ಅಲಾಸ್ಕವನ್ನು ರಷ್ಯನರು ಪರಿಶೋಧಿಸುವವರೆಗೂ ಅವರು ಉತ್ತರ ಕ್ಯಾಲಿಫೋರ್ನಿಯವನ್ನು ಆಕ್ರಮಿಸಿಕೊಳ್ಳುವ ಯೋಚನೆ ಮಾಡಲಿಲ್ಲ. ಸಾನ್‍ಡಿಯೇಗೋವನ್ನು 1769ರಲ್ಲೂ, ಮಾಂಟೆರೇಯನ್ನು 1770ರಲ್ಲೂ ಸ್ಪೇನ್ ಆಕ್ರಮಿಸಿಕೊಂಡಿತು.

ಕ್ಯಾಲಿಫೋರ್ನಿಯದ ಪ್ರಾರಂಭಿಕ ಇತಿಹಾಸದಲ್ಲಿ ಪಾದ್ರಿಗಳು ವಹಿಸಿದ ಪಾತ್ರ ಪ್ರಮುಖವಾದ್ದು. 1769 ಮತ್ತು 1823ರ ನಡುವೆ 21 ಕ್ರೈಸ್ತ ಮಿಷನ್‍ಗಳು ಇಲ್ಲಿ ಸ್ಥಾಪಿತವಾದುವು. ಈ ಪ್ರದೇಶದ ಆರ್ಥಿಕ ಅಭಿವೃದ್ಧಿ ಸಾಧಿಸಲು ಇವು ಕಾರಣ. ಮಾಂಟೆರೇ ನಗರದ ಸ್ಪ್ಯಾನಿಷ್ ಸೈನ್ಯಾಧಿಕಾರಿಗಳ ಆಡಳಿತಕ್ಕೆ ಈ ಪ್ರದೇಶ ಒಳಪಟ್ಟಿತ್ತು. 1808ರಲ್ಲಿ ಸ್ಪೇನ್ ಮತ್ತು ಮೆಕ್ಸಿಕೋ ದೇಶಗಳಲ್ಲಿ ಸಂಭವಿಸಿದ ರಾಜಕೀಯ ಕ್ಷೋಭೆಗಳ ಬಿಸಿ ಈ ಭಾಗಕ್ಕೆ ತಟ್ಟಲಿಲ್ಲ. ಮೆಕ್ಸಿಕೋದಲ್ಲಿ 1810ರಲ್ಲಿ ಕ್ರಾಂತಿ ಸಂಭವಿಸಿದಾಗ ಕ್ಯಾಲಿಫೋರ್ನಿಯ ಸ್ಪೇನಿಗೆ ನಿಷ್ಠೆಯಿಂದಿತ್ತು. ಮೆಕ್ಸಿಕೋ ಸ್ವಾತಂತ್ರ್ಯ ಗಳಿಸಿದ ಮೇಲೆ 1822ರಲ್ಲಿ ಕ್ಯಾಲಿಫೋರ್ನಿಯ ಆ ದೇಶದ ಅಧೀನಕ್ಕೆ ಒಳಪಟ್ಟಿತು.

1824ರಿಂದ 1840ರವರೆಗೆ ಅಲ್ಲಿ ಅವ್ಯವಸ್ಥೆ ಇತ್ತು. ಸ್ಪೇನ್ ದೇಶಕ್ಕೆ ನಿಷ್ಠೆ ಹೊಂದಿದ್ದ ಫ್ರಾನ್‍ಸಿಸ್ಕನ್ ಪಾದ್ರಿಗಳಿಗೆ ಮೆಕ್ಸಿಕೋದಲ್ಲಿ ಕ್ಯಾಲಿಪೋರ್ನಿಯದ ವಿಲೀನ ಒಪ್ಪಿಗೆಯಾಗಿರಲಿಲ್ಲ. ಪಾದ್ರಿಗಳ ಸಂಸ್ಥೆಗಳನ್ನು ಲೌಕಿಕಗೊಳಿಸುವುದು ಕ್ಯಾಲಿಫೋರ್ನಿಯದ ಮುಖ್ಯ ಸಮಸ್ಯೆಯಾಯಿತು. ಪಾದ್ರಿಗಳ ಸಮಸ್ಯೆ 1831ರಲ್ಲಿ ಪರಮಘಟ್ಟವನ್ನು ಮುಟ್ಟಿ, ಗವರ್ನರ್ ಮಾನ್ಯುಯೆಲ್ ವಿಕ್ಟೋರಿಯನ ಆಡಳಿತವನ್ನು ಎದುರಿಸಿ ಜನ ದಂಗೆಯೆದ್ದರು. ಈ ದಂಗೆಗೆ ಕಾರಣ ಮೆಕ್ಸಿಕೋ ಆಡಳಿತದ ಬಗ್ಗೆ ಅತೃಪ್ತಿ ಮತ್ತು ಉತ್ತರ ಹಾಗೂ ದಕ್ಷಿಣ ಕ್ಯಾಲಿಫೋರ್ನಿಯ ಭಾಗಗಳ ಜನರ ನಡುವಣ ವೈಮನಸ್ಯ. ಮೆಕ್ಸಿಕೋ ಆಡಳಿತದಿಂದ ಕ್ಯಾಲಿಫೋರ್ನಿಯಕ್ಕೆ ಹೆಚ್ಚಿನ ಪ್ರಯೋಜನವಾಗಿರಲಿಲ್ಲ. 1831ರಲ್ಲಿ ಗವರ್ನರ್ ವಿಕ್ಟೋರಿಯ ಪದಚ್ಯುತಿಗೊಂಡ. 1836ರಲ್ಲಿ ಗವರ್ನರ್ ಮಾರಿಯಾನೋ ಚೀಕೋ ಭೀತಿಗೊಂಡು ಪಲಾಯನ ಮಾಡಿದ. ಅದೇ ವರ್ಷ ಗವರ್ನರ್ ನಿಕೊಲಾಸ್ ಗ್ಯುಟಿರೆಜ್ ಮತ್ತು 1844-45ರಲ್ಲಿ ಗವರ್ನರ್ ಮಾನ್ಯುಯೆಲ್ ಮಿಚಿಲ್‍ಬೋರಿನ ಇವರನ್ನು ಅಧಿಕಾರದಿಂದ ಅಟ್ಟಿದರು. ಹೀಗೆ ಮೆಕ್ಸಿಕನ್ ಗವರ್ನರ್‍ಗಳನ್ನು ಓಡಿಸಿ ಸ್ವತಂತ್ರ ರಾಜ್ಯವನ್ನು ಸ್ಥಾಪಿಸಿಕೊಳ್ಳಲು ಅಲ್ಲಿಯ ಜನ ಅನುವಾದರು.

19ನೆಯ ಶತಮಾನದ ಆದಿಯಲ್ಲಿ. ಕ್ಯಾಲಿಫೋರ್ನಿಯ ಪ್ರದೇಶ ಸ್ಪೇನ್ ದೇಶದ ಆಡಳಿತಕ್ಕೆ ಒಳಪಟ್ಟಿದ್ದಾಗ ಸ್ಪೇನಿನ ಕಾನೂನುಗಳಿಗೆ ವಿರುದ್ಧವಾಗಿ ಕ್ಯಾಲಿಫೋರ್ನಿಯದ ವಿದೇಶಿ ವ್ಯಾಪಾರ ಬೆಳೆಯುತ್ತಿತ್ತು. ಸ್ಪೇನ್ ಅಮೆರಿಕ ಕ್ರಾಂತಿಗಳ ಕಾಲದಲ್ಲಿ ಈ ವ್ಯಾಪಾರಕ್ಕೆ ಮತ್ತಷ್ಟು ಉತ್ತೇಜನ ದೊರಕಿತು. ರಷ್ಯನರು ಈ ಭಾಗಕ್ಕೆ 1805ರಲ್ಲಿ ಬಂದು 1812ರಲ್ಲಿ ರಾಸ್ ಕೋಟೆಯನ್ನು ಸ್ಥಾಪಿಸಿ ಅದನ್ನು 1841ರವರೆಗೆ ತಮ್ಮ ವಶದಲ್ಲಿಟ್ಟುಕೊಂಡಿದ್ದರು. ತುಪ್ಪುಳು ಸಂಗ್ರಹಕ್ಕಾಗಿ ಅವರು ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿಯವರೆಗೂ ಬಂದಿದ್ದರು. 1826ರಲ್ಲಿ ಅಮೆರಿಕ ಸಂಯುಕ್ತಸಂಸ್ಥಾನದ ಬೇಟೆಗಾರರು ಈ ರಾಜ್ಯವನ್ನು ದಾಟಿ ಸಾಗರತೀರವನ್ನು ಮುಟ್ಟಿದರು. 1830ರಲ್ಲಿ ಹಡ್‍ಸನ್ ಬೇ ಕಂಪನಿ ತುಪ್ಪುಳಿಗಾಗಿ ಉತ್ತರ ಕ್ಯಾಲಿಫೋರ್ನಿಯದಲ್ಲಿ ಕಾಯಾಚರಣೆ ನಡೆಸಿತು. ಕೊನೆಗೆ 1840ರ ಹೊತ್ತಿಗೆ ಅಮೆರಿಕನರು ಕ್ರಮಕ್ರಮವಾಗಿ ಈ ಭಾಗಕ್ಕೆ ವಲಸೆ ಬರಲಾರಂಭಿಸಿದರು. 1835ರಲ್ಲಿ ಅಮೆರಿಕ ಸಂಯುಕ್ತಸಂಸ್ಥಾನದ ಅಧ್ಯಕ್ಷ ಆಂಡ್ರ್ಯೂ ಜಾಕ್‍ಸನ್ ಕ್ಯಾಲಿಫೋರ್ನಿಯವನ್ನು ಕೊಳ್ಳಲು ನೀಡಿದ ಸಲಹೆಯನ್ನು ಮೆಕ್ಸಿಕೋ ನಿರಾಕರಿಸಿತು. 1845ರಲ್ಲಿ ಕ್ಯಾಲಿಫೋರ್ನಿಯವನ್ನು ಮೆಕ್ಸಿಕೋದಿಂದ ಪ್ರತ್ಯೇಕಿಸಲು ಮಾಂಟೆರೇ ನಗರದಲ್ಲಿದ್ದ ಅಮೆರಿಕನ್ ರಾಯಭಾರಿ ತನ್ನ ಸರ್ಕಾರದ ಪರವಾಗಿ ವ್ಯವಹರಿಸಿದ. ಮೆಕ್ಸಿಕೋದೊಂದಿಗೆ ಯುದ್ಧ ಸಂಭವಿಸಿದ ಪಕ್ಷದಲ್ಲಿ ಕ್ಯಾಲಿಫೋರ್ನಿಯದ ಬಂದರುಗಳನ್ನು ಹಿಡಿದುಕೊಳ್ಳುವಂತೆ ಅದೇ ಸಮಯದಲ್ಲಿ ಅಮೆರಿಕ ಸರ್ಕಾರ ತನ್ನ ನೌಕಾಧಿಕಾರಿಗಳಿಗೆ ಸೂಚನೆ ನೀಡಿತ್ತು. ಅಮೆರಿಕನರು 1846ರಲ್ಲಿ ಸೊನೊಮವನ್ನು ಆಕ್ರಮಿಸಿದರು. ಜಾನ್ ಡ್ರೇಕ್ ಸ್ಲೋಟ್ ಜುಲೈ 1846ರಲ್ಲಿ ಮಾಂಟೆರೇ ನಗರದಲ್ಲಿ ಅಮೆರಿಕದ ಧ್ವಜವನ್ನು ಹಾರಿಸಿದ. ಕ್ಯಾಲಿಫೋರ್ನಿಯ ಅಮೆರಿಕ ಸಂಯುಕ್ತಸಂಸ್ಥಾನಕ್ಕೆ ಸೇರಿದ ಪ್ರದೇಶವೆಂದು ಘೋಷಿಸಿದ.

1848ರ ಕೌಲಿನ ಪ್ರಕಾರ ಕ್ಯಾಲಿಫೋರ್ನಿಯವನ್ನು ಅಮೆರಿಕ ಸಂಯುಕ್ತಸಂಸ್ಥಾನಕ್ಕೆ ಮೆಕ್ಸಿಕೋ ಬಿಟ್ಟುಕೊಟ್ಟಿತು. ಆ ತರುವಾಯ ಅಲ್ಲಿ ಚಿನ್ನ ಸಿಕ್ಕಿದ್ದರಿಂದ ಅದರ ಪ್ರಾಮುಖ್ಯ ಹೆಚ್ಚಿತು. ಅಮೆರಿಕನ್ ನೌಕೆಗಳಿಗೆ ಸ್ಯಾನ್‍ಫ್ರಾನ್ಸಿಸ್ಕೋ ಒಂದು ಬಂದರಾಯಿತು. ಈ ಮಧ್ಯೆ ಕ್ಯಾಲಿಫೋರ್ನಿಯದಲ್ಲಿ ಜನರ ನೆಮ್ಮದಿ ಸಾಧಿಸಲು ಯುಕ್ತ ಕಾಯಿದೆಗಳ ಅಗತ್ಯವಿತ್ತು. ಅರಾಜಕತೆಯನ್ನು ತಡೆಯಲು 1849ರಲ್ಲಿ ಹಂಗಾಮಿ ಸ್ಥಳೀಯ ಸರ್ಕಾರಗಳು ನಾನಾ ನಗರಗಳಲ್ಲಿ ಸ್ಥಾಪಿತವಾದವು. 1850ರಲ್ಲಿ ಅಮೆರಿಕದ ಕಾಂಗ್ರೆಸ್ ಅಂಗೀಕರಿಸಿದ ವಿಧೇಯಕದ ಪ್ರಕಾರ ಕ್ಯಾಲಿಫೋರ್ನಿಯ ಒಂದು ರಾಜ್ಯವಾಯಿತು. ಈ ಮಧ್ಯೆ ಚಿನ್ನದ ಆಸೆಯಿಂದ ಅಮೆರಿಕದ ಜನರು ಕ್ಯಾಲಿಫೋರ್ನಿಯದ ಪರ್ವತಭಾಗಗಳತ್ತ ಸಾಗಿದರು. ಕ್ಯಾಲಿಫೋರ್ನಿಯದಲ್ಲಿ ಶಿಸ್ತನ್ನು ಕಠಿಣ ಕಾಯಿದೆಗಳಿಂದ ರಕ್ಷಿಸಬೇಕಾಯಿತು. ಅಲ್ಲಿ ಗುಲಾಮರ ಸಮಸ್ಯೆ ಬಗೆಹರಿದಿರಲಿಲ್ಲ. ಸೆನೆಟ್ ಸದಸ್ಯ ವಿಲಿಯಂ ಎಂ.ಗ್ವಿನ್ ಕ್ಯಾಲಿಫೋರ್ನಿಯವನ್ನು ಎರಡು ರಾಜ್ಯಗಳನ್ನಾಗಿ ವಿಭಜಿಸಲು ಪ್ರಯತ್ನಿಸಿದ. ಅಮೆರಿಕ ಸಂಯುಕ್ತಸಂಸ್ಥಾನದ ಅಂತರ್ಯುದ್ಧದ ಕಾಲದಲ್ಲಿ ಈ ರಾಜ್ಯ ಒಕ್ಕೂಟಕ್ಕೆ ನಿಷ್ಠೆಯಿಂದಿತ್ತು. ರಾಜ್ಯದ ಆಡಳಿತದಲ್ಲಿ ಸುಧಾರಣೆಗಳನ್ನು ತಂದು ಅದನ್ನು ಹೆಚ್ಚು ಪ್ರಜಾಸತ್ತಾತ್ಮಕವಾಗಿ ಮಾಡಲು ಕ್ರಮ ಕೈಕೊಂಡದ್ದು 20ನೆಯ ಶತಮಾನದ ಆದಿಯಲ್ಲಿ. 1925ರಿಂದೀಚೆಗೆ ಇದರ ಇತಿಹಾಸ ಅಮೆರಿಕ ಸಂಯುಕ್ತಸಂಸ್ಥಾನದ ಇತಿಹಾಸದಲ್ಲಿ ಸೇರಿಹೋಗಿದೆ.

ಇದನ್ನು ನೋಡಿ[ಬದಲಾಯಿಸಿ]

ಮೂಲಗಳು[ಬದಲಾಯಿಸಿ]

  1. "Government Code Section 420-429.8". Official California Legislative Information. Archived from the original on 2009-06-28. Retrieved 2007-02-26.
  2. "Table 1: Annual Estimates of the Resident Population for the United States, Regions, States, and Puerto Rico". U.S. Census Bureau. December 22, 2008. Retrieved 2009-01-15.
  3. ೩.೦ ೩.೧ ಉಲ್ಲೇಖ ದೋಷ: Invalid <ref> tag; no text was provided for refs named usgs