ಬಿ.ಆರ್.ಅಂಬೇಡ್ಕರ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಭೀಮರಾವ್ ರಾಮ್‌ಜೀ ಅಂಬೇಡ್ಕರ್
Ambedkar speech at Yeola.png
೧೩ ಅಕ್ಟೋಬರ್ ೧೯೩೫ ರಲ್ಲಿ ಯೋಲ ನಾಸಿಕ್ನಲ್ಲಿ ರಾಲಿಯಲ್ಲಿ ಉದ್ದೇಶಿಸಿ ಭಾಷಣ ಮಾಡುತ್ತಿರುವ ಡಾ . . ಆಣದೂರೆ Babu .ಅಂಬೇಡ್ಕರ್

ಅಧಿಕಾರ ಅವಧಿ
೨೯ ಆಗಸ್ಟ್ ೧೯೪೭ – ೨೪ ಜನವರಿ ೧೯೫೦

ಅಧಿಕಾರ ಅವಧಿ
೧೫ ಆಗಸ್ಟ್ ೧೯೪೭ – ಸೆಪ್ಟೆಂಬರ್ ೧೯೫೧
ರಾಷ್ಟ್ರಪತಿ ರಾಜೇಂದ್ರಪ್ರಸಾದ್
ಪ್ರಧಾನ ಮಂತ್ರಿ ಜವಹರ್ಲಾಲ್ ನೆಹರು
ಪೂರ್ವಾಧಿಕಾರಿ ಸ್ಥಾನವನ್ನು ಸ್ಥಾಪಿಸಿದರು

ಅಧಿಕಾರ ಅವಧಿ
೧೯೪೨ – ೧೯೪೬
ಪೂರ್ವಾಧಿಕಾರಿ ಫಿರೋಜ್ ಖಾನ್ ನೂನ್
ಉತ್ತರಾಧಿಕಾರಿ ಸ್ಥಾನವನ್ನು ರದ್ದುಪಡಿಸಲಾಯಿತು
ವೈಯುಕ್ತಿಕ ಮಾಹಿತಿ
ಜನನ (1891-04-14)14 ಏಪ್ರಿಲ್ 1891
ಮೊವ್, ಕೇಂದ್ರೀಯ ಪ್ರಾಂತಗಳು, ಬ್ರಿಟಿಷ್ ಭಾರತ (ಈಗ ಮಧ್ಯಪ್ರದೇಶದಲ್ಲಿದೆ)
ಮರಣ 6 ಡಿಸೆಂಬರ್ 1956 (ತೀರಿದಾಗ ವಯಸ್ಸು ೬೫)
ದೆಹಲಿ, ಭಾರತ
ರಾಷ್ಟ್ರೀಯತೆ ಭಾರತೀಯ
ಸಂಗಾತಿ(ಗಳು) ರಮಾಬಾಯಿ (m. 1906)

ಸವಿತಾ ಅಂಬೇಡ್ಕರ್ (m. 1948)

ಅಭ್ಯಸಿಸಿದ ವಿದ್ಯಾಪೀಠ ಮುಂಬಯಿ ವಿಶ್ವವಿದ್ಯಾಲಯ
ಕೊಲಂಬಿಯಾ ವಿಶ್ವವಿದ್ಯಾಲಯ
ಲಂಡನ್ ವಿಶ್ವವಿದ್ಯಾಲಯದ
ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್
ಧರ್ಮ ಬೌದ್ಧಧರ್ಮ
ಸಹಿ
ಮಿಲಿಟರಿ ಸೇವೆ
ಪ್ರಶಸ್ತಿಗಳು ಭಾರತರತ್ನ
ಬಿ.ಆರ್. ಅಂಬೇಡ್ಕರ್
ಅಂಬೇಡ್ಕರ್ ವಿದ್ಯಾರ್ಥಿಯಾಗಿದಾಗ
1922 ರಲ್ಲಿ ನ್ಯಾಯವಾದಿಯಾಗಿ ಅಂಬೇಡ್ಕರ್
ಔರಂಗಾಬಾದ್ ನ ಮರಾಠವಾಡ ವಿಶ್ವವಿದ್ಯಾಲಯದಲ್ಲಿರುವ ಡಾ ಬಾಬಾಸಾಹೇಬ್ ಅಂಬೇಡ್ಕರ್ ನ ಪ್ರಮುಖ ಪ್ರತಿಮೆಗೆ ಜನರು ಗೌರವ ಸಲ್ಲಿಸುತ್ತಿರುವುದು
ದಿಕ್ಷಾಭೂಮಿ ನಾಗ್ಪುರದಲ್ಲಿ ಒಂದು ಸ್ತೂಪ, ಅಂಬೇಡ್ಕರ್ ಅವರ ಅನುಯಾಯಿಗಳ ಜೊತೆ ಬೌದ್ಧ ಧರ್ಮಕ್ಕೆ ಸೇರಿದ ಜಾಗ
Annal Ambedkar Manimandapam.jpg
ಅಂಬೇಡ್ಕರ್ ಮ್ಯೂಸಿಯಂನಲ್ಲಿ ಅಂಬೇಡ್ಕರ್ ಅವರ ಪ್ರತಿಮೆ ,ಪುಣೆ

ಡಾ.ಬಿ.ಆರ್. ಅಂಬೇಡ್ಕರ್ (ಏಪ್ರಿಲ್ ೧೪, ೧೮೯೧ - ಡಿಸೆಂಬರ್ ೬, ೧೯೫೬)- ಭೀಮರಾವ್ ರಾಮ್‌ಜೀ ಅಂಬೇಡ್ಕರ್, ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಲ್ಲೊಬ್ಬರು. ಬಹುಮಖ ವ್ಯಕ್ತಿತ್ವವನ್ನು ಹೊಂದಿದ್ದವರು. ಅವರ ಅಧ್ಯಯನಶೀಲತೆ ಅಪಾರವಾದುದು. ತಮ್ಮ ವಿದ್ವತ್, ಪಾಂಡಿತ್ಯದಿಂದ ಭಾರತದ ಸಂವಿಧಾನವನ್ನು ರಚಿಸಿದ ಇವರನ್ನು 'ಸಂವಿಧಾನ ಶಿಲ್ಪಿ' ಎಂದು ಕರೆಯುತ್ತಾರೆ. [೧] [೨] [೩] [೪]

ವಿದ್ಯಾಭ್ಯಾಸ[ಬದಲಾಯಿಸಿ]

 • ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯವರಾದ ಅಂಬೇಡ್ಕರರ ತಂದೆ ರಾಮ್ ಜೀ ಸಕ್ಪಾಲ್ ಅವರು ಮರಾಠಿ ಹಾಗೂ ಇಂಗ್ಲೀಷಿನಲ್ಲಿ ಕಲಿತರು. ಅವರು ಬ್ರಿಟಿಷ್ ಸೈನ್ಯದಲ್ಲಿ ಸುಬೇದಾರರಾಗಿ ಸೇವೆ ಸಲ್ಲಿಸಿದ್ದರು. ಇದರ ಆಧಾರದ ಮೇಲೆ ಅವರು ತಮ್ಮ ಮಕ್ಕಳಿಗೆ, ಅದರಲ್ಲಿಯೂ ಮುಖ್ಯವಾಗಿ ಭೀಮರಾಯರಿಗೆ, ಸ್ವತಃ ಕಲಿಸಿ ಅವರ ಜ್ಞಾನಾರ್ಜನೆಯಲ್ಲಿ ಪ್ರೋತ್ಸಾಹಿಸಲು ಸಾಧ್ಯವಾಯಿತು.
 • ೧೯೦೮ರಲ್ಲಿ ಅಂಬೇಡ್ಕರ್ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದಾಗ, ಆಗಿನ ಜಾತಿ ವ್ಯವಸ್ಥೆಯಲ್ಲಿ ಅಸ್ಪೃಶ್ಯ ಎಂದು ಕರೆಯಲ್ಪಡುತ್ತಿದ್ದ ತಮ್ಮ ಸಮಾಜಕ್ಕೆ ಮೊದಲನೆಯವರಾದರು. ನಾಲ್ಕು ವರ್ಷಗಳ ನಂತರ, ಅವರು ಮುಂಬಯಿ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರ ಮತ್ತು ರಾಜನೀತಿ ವಿಷಯಗಳಲ್ಲಿ ಬಿ.ಎ. ಪದವಿ ಗಳಿಸಿದರು.
 • ವಾಪಸು ಬಂದ ಮೇಲೆ ಬರೋಡ ಸಂಸ್ಥಾನದಲ್ಲಿ ಹತ್ತು ವರ್ಷ ಸೇವೆ ಸಲ್ಲಿಸಬೇಕು ಎಂಬ ಷರತ್ತಿನ ಮೇಲೆ ಅವರಿಗೆ ವಿದೇಶದಲ್ಲಿ ಓದು ಮುಂದುವರಿಸಲು ವಿದ್ಯಾರ್ಥಿವೇತನ ದೊರಕಿತು. ೧೯೧೩ರಿಂದ ೧೯೧೬ರವರೆಗೆ ನ್ಯೂಯಾರ್ಕಿನ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಅರ್ಥ ಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ತತ್ವ ಶಾಸ್ತ್ರ, ಮಾನವಶಾಸ್ತ್ರ ಮತ್ತು ರಾಜನೀತಿ/ರಾಜ್ಯಶಾಸ್ತೃ ಅಭ್ಯಾಸ ಮಾಡಿದರು.
 • ೧೯೧೫ರಲ್ಲಿ ಅರ್ಥ ಶಾಸ್ತ್ರದಲ್ಲಿ ಎಂ.ಎ, ಪದವಿ ಗಳಿಸಿದರು. ೧೯೧೬ರಲ್ಲಿ, ಅವರು ಮುಂದೆ ಪುಸ್ತಕರೂಪದಲ್ಲಿ ಪ್ರಕಟಿಸಿದ ಬ್ರಿಟಿಷ್ ಭಾರತದಲ್ಲಿ ಪ್ರಾಂತೀಯ ಹಣಕಾಸು ಪದ್ಧತಿಯ ವಿಕಾಸ ಎಂಬ ಮಹಾಪ್ರಬಂಧವನ್ನು ಮಂಡಿಸಿ, ಪಿ.ಹೆಚ್.ಡಿ. ಪದವಿಯನ್ನು ಪಡೆದು ಕೊಂಡರು.
 • ಭಾರತದಲ್ಲಿ ಜಾತಿ ಪದ್ಧತಿ: ತಂತ್ರ, ಹುಟ್ಟು ಮತ್ತು ಬೆಳವಣಿಗೆ ಎಂಬ ಪ್ರಬಂಧ ಅವರ ಮೊಟ್ಟ ಮೊದಲ ಪ್ರಕಾಶಿತ ಕೃತಿ. ೧೯೧೬ ಜೂನ್ ನಲ್ಲಿ ಅಮೇರಿಕದಲ್ಲಿ ಓದು ಮುಗಿಸಿದ ಅಂಬೇಡ್ಕರ್ ಮುಂದೆ ಲಂಡನ್ನಿನ “ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಎಂಡ್ ಪೊಲಟಿಕಲ್ ಸೈನ್ಸ್” ಸೇರಿ ನಂತರ ಗ್ರೇ'ಸ್ ಇನ್ ಸಂಸ್ಥೆಯನ್ನು ಸೇರಿದರು. ಮತ್ತೊಂದು ವರ್ಷದ ಕಳೆಯುವ ವೇಳೆಗೆ ಅವರ ವಿದ್ಯಾರ್ಥಿವೇತನ ಕೊನೆಗೊಂಡಿತು.
 • ೧೯೨೦ರವರೆಗೆ ಮುಂಬಯಿಯ ಕಾಲೇಜೊಂದರಲ್ಲಿ ಅಧ್ಯಾಪಕರಾಗಿ ವಿದ್ಯಾರ್ಥಿಗಳಿಗೆ ಕಲಿಸಿ, “ಮೂಕನಾಯಕ” ಎಂಬ ಮರಾಠಿ ಸಾಪ್ತಾಹಿಕವನ್ನು ಹೊರಡಿಸುತ್ತಿದ್ದ ಅಂಬೇಡ್ಕರ್ , ಮತ್ತೆ ಲಂಡನ್ನಿಗೆ ಮರಳಿ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ಮುಂದಿನ ಮೂರು ವರ್ಷಗಳಲ್ಲಿ ಅವರು “ ರೂಪಾಯಿಯ ಬಿಕ್ಕಟ್ಟು” (ದಿ ಪ್ರಾಬ್ಲಮ್ ಆಫ್ ರುಪಿ) ಎಂಬ ಮಹಾಪ್ರಬಂಧವನ್ನು ಬರೆದು, ಲಂಡನ್ ವಿಶ್ವವಿದ್ಯಾನಿಲಯದಿಂದ ಡಿ.ಎಸ್.ಸಿ. ಗೌರವವನ್ನು ಸಂಪಾದಿಸಿದರು.
 • ಇದರೊಂದಿಗೇ, ಬಾರ್-ಎಟ್-ಲಾ ಪದವಿ ಓದಿ ಬ್ಯಾರಿಸ್ಟರ್ ಆಗಿ, ಬ್ರಿಟಿಷ್ ಬಾರಿಗೆ ಸದಸ್ಯತ್ವ ಪಡೆದರು. ಇಂಗ್ಲೆಂಡಿನಿಂದ ಶಾಶ್ವತವಾಗಿ ವಾಪಸು ಬರುವ ಮುನ್ನ, ಅಂಬೇಡ್ಕರ್ ಮೂರು ತಿಂಗಳು ಜರ್ಮನಿಯಲ್ಲಿ ಬಾನ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಹೆಚ್ಚಿನ ಅಭ್ಯಾಸ ಮಾಡಿದರು. ೧೯೫೨ ಜೂನ್ ೧೫ರಂದು ಕೊಲಂಬಿಯಾ ವಿಶ್ವವಿದ್ಯಾನಿಲಯವು ಅವರಿಗೆ ಕಾನೂನಿನ ಡಾಕ್ಟರೇಟ್(ಎಲ್‌ಎಲ್‍.ಡಿ) ಗೌರವ ಪದವಿ ಪ್ರದಾನ ಮಾಡಿತು. ೧೯೫೩, ಜನವರಿ ೧೨ರಂದು ಉಸ್ಮಾನಿಯಾ ವಿಶ್ವವಿದ್ಯಾನಿಲಯವು ಅವರಿಗೆ ಎಲ್‌ಎಲ್‍.ಡಿ ಗೌರವ ಪದವಿ ಕೊಟ್ಟು ಪುರಸ್ಕರಿಸಿತು.

ವೃತ್ತಿ ಜೀವನ[ಬದಲಾಯಿಸಿ]

ಭಾರತಕ್ಕೆ ಮರಳಿ ಮುಂಬಯಿಯಲ್ಲಿ ನೆಲೆನಿಂತ ಅಂಬೇಡ್ಕರ್ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು. ಅವರು ಕಾಲೇಜೊಂದರಲ್ಲಿ ಬೋಧಿಸುತ್ತಲೇ, ವಿವಿಧ ಸರಕಾರೀ ಸಂಸ್ಥೆಗಳಲ್ಲಿ ಸಾಕ್ಷ್ಯ ನೀಡುತ್ತಲೇ, ಹೊಸ ವೃತ್ತ ಪತ್ರಿಕೆಯನ್ನು ನಡೆಸುತ್ತಲೇ, ಮುಂಬಯಿ ಲೆಜಿಸ್ಲೇಟಿವ್ ಕೌನ್ಸಿಲ್ಲಿಗೆ ನಾಮಕರಣಗೊಂಡು ಅಲ್ಲಿನ ಆಗುಹೋಗುಗಳಲ್ಲಿ ಸಕ್ರಿಯ ಪಾತ್ರ ವಹಿಸುತ್ತಲೇ, ಅದರೊಂದಿಗೇ ವಕೀಲಿ ವೃತ್ತಿಯನ್ನೂ ಆರಂಭಿಸಿದರು.

 • ಭಾರತದ ವಿವಿಧ ಪಂಗಡಗಳ ಮುಖಂಡರುಗಳೂ, ಮೂರು ಬ್ರಿಟಿಷ್ ರಾಜಕೀಯ ಪಕ್ಷಗಳೂ ಕಲೆತು, ಭಾರತದ ಭವಿಷ್ಯದ ಸಂವಿಧಾನದ ರೂಪು ರೇಷೆಗಳ ಬಗ್ಗೆ ಚರ್ಚೆ ನಡೆಸಲು ಲಂಡನ್ನಿನಲ್ಲಿ ಏರ್ಪಡಿಸಲಾಗಿದ್ದ ಮೂರು ದುಂಡು ಮೇಜಿನ ಪರಿಷತ್ತುಗಳಲ್ಲಿ ಭಾಗವಹಿಸಿದರು.
 • ಭಾರತಕ್ಕೆ ಹಿಂದಿರುಗಿದ ಮರುವರ್ಷವೇ “ಬಹಿಷ್ಕೃತ ಹಿತಕಾರಿಣೀ ಸಭಾ” ಎಂಬ ದಲಿತ ವರ್ಗದ ಕಲ್ಯಾಣ ಸಂಸ್ಥೆಯನ್ನು ಹುಟ್ಟು ಹಾಕಲು ಸಹಾಯ ಮಾಡಿದರು. ಅಸ್ಪೃಶ್ಯ ಹಾಗೂ ಇತರ ಕೆಳವರ್ಗಗಳಲ್ಲಿ ವಿದ್ಯೆ ಮತ್ತು ಸಂಸ್ಕೃತಿಯ ಅರಿವು ಮೂಡಿಸುವುದು, ಅವರ ಜೀವನ ಮಟ್ಟವನ್ನು ಸುಧಾರಿಸುವುದು ಹಾಗೂ ಈ ವರ್ಗವು ತಮ್ಮ ಕುಂದು ಕೊರತೆಗಳನ್ನು ಹೇಳಿಕೊಳ್ಳಲು ಧ್ವನಿ ಕೊಡುವುದು ಇವು ಈ ಸಂಸ್ಥೆಯ ಉದ್ದೇಶವಾಗಿತ್ತು.

ಅಸ್ಪೃಶ್ಯತೆಯ ವಿರುದ್ದ ಹೋರಾಟ[ಬದಲಾಯಿಸಿ]

 • ೧೯೨೭ರಿಂದ ೧೯೩೨ರವರೆಗೆ, ಅಹಿಂಸಾತ್ಮಕ ಆಂದೋಲನಗಳ ಮುಂದಾಳತ್ವ ವಹಿಸಿ ಅಸ್ಪೃಶ್ಯರಿಗೆ ದೇವಾಲಯ ಪ್ರವೇಶದ ಹಕ್ಕು, ಸಾರ್ವಜನಿಕ ಕೆರೆ, ಬಾವಿಗಳಿಂದ ನೀರು ಸೇದುವ ಹಕ್ಕು ಇತ್ಯಾದಿಗಳಿಗಾಗಿ ಹೋರಾಡಿದರು. ಇವುಗಳಲ್ಲಿ ನಾಸಿಕದಲ್ಲಿಯ ಕಾಳ ರಾಮನ ದೇವಸ್ಥಾನ ಮತ್ತು ಮಹಾಡದ ಚೌಡಾರ್ ಕೆರೆಯ ವಿಷಯವಾಗಿ ಅಸ್ಪೃಶ್ಯರನ್ನು ಹೊರಗಿಟ್ಟಿರುವರ ವಿರುದ್ಧ ಮಾಡಿದ ಆಂದೋಲನಗಳು ಗಮನಾರ್ಹವಾಗಿವೆ.
 • ಸಹಸ್ರಾರು ಅಸ್ಪೃಶ್ಯ ಸತ್ಯಾಗ್ರಹಿಗಳು ಭಾಗವಹಿಸಿದ ಈ ಅಹಿಂಸಾತ್ಮಕ ಚಳುವಳಿಗಳಿಗೆ ಸವರ್ಣೀಯರು ಹಿಂಸಾತ್ಮಕವಾಗಿ ಪ್ರತಿಕ್ರಿಯಿಸಿದರು. ನ್ಯಾಯಾಲಯದ ಕಟ್ಟೆ ಹತ್ತಿದ ಚೌಡಾರ್ ಕೆರೆಯ ಚಳುವಳಿಯು, ಅನೇಕ ವರ್ಷಗಳ ನಂತರ, ಕೆಳವರ್ಗಗಳ ಪರವಾಗಿ ವಿಜಯ ಸಾಧಿಸು ವುದರೊಂದಿಗೆ ಪರ್ಯವಸಾನ ಹೊಂದಿತು. ಅಸ್ಪೃಶ್ಯರನ್ನು ಸಮಾಜ ನಡೆಸಿಕೊಳ್ಳುತ್ತಿದ್ದ ಕ್ರೂರ ರೀತಿಗೆ ಮೂಲ ಕಾರಣ 'ಮನುಸ್ಮೃತಿ' ಎಂದು ಅಂಬೇಡ್ಕರ್ ನಂಬಿದ್ದರು.
 • ಮನುಸ್ಮೃತಿಯನ್ನು ಇದೇ ಚಳುವಳಿಯಲ್ಲಿ ವಿಧ್ಯುಕ್ತವಾಗಿ ದಹನ ಮಾಡಲಾಯಿತು. ಈ ಕೃತಿಯನ್ನು ಹೀಗೆ ಸಾರ್ವಜನಿಕವಾಗಿ ಅವಮರ್ಯಾದೆ ಮಾಡುವುದರ ಮೂಲಕ ಅಂಬೇಡ್ಕರರ ಅನುಯಾಯಿಗಳು ಸಮಾನತೆಯ ಹಕ್ಕು ಪ್ರತಿಪಾದನೆ ಮಾಡಬಯಸಿದ್ದರು. ಆದರೆ, ಹಿಂದೂ ಧರ್ಮದ ಅನುಯಾಯಿಗಳಲ್ಲಿ ಮನುಸ್ಮೃತಿಯ ಮಹತ್ವವೇನು ಎಂಬುದೇ ಅಸ್ಪಷ್ಟ ಹಾಗೂ ವಿವಾದಿತ ವಿಷಯವಾದ್ದರಿಂದ, ಅದರಲ್ಲಿಯೂ ಮುಖ್ಯವಾಗಿ ಮನುಸ್ಮೃತಿಯನ್ನು ಹಿಂದೂ ಧರ್ಮಶಾಸ್ತ್ರಗಳಲ್ಲಿ ಒಂದಾಗಿ ಪರಿಗಣಿಸದೇ ಇದ್ದು, ಹಳ್ಳಿಗಾಡುಗಳಿಂದ ಹೊರಗೆ ಅದಕ್ಕೆ ಧಾರ್ಮಿಕ ಮಹತ್ವವೂ ಇಲ್ಲದಿದ್ದುದರಿಂದ, ಈ ಉದ್ದೇಶ ನೆರವೇರಿತೋ ಇಲ್ಲವೂ ಎಂಬುದು ಚರ್ಚಾಸ್ಪದ.
 • ಮೊದಲೇ ತಮ್ಮ ಚಟುವಟಿಕೆಗಳಿಂದ ಸಂಪ್ರದಾಯಶೀಲ ಹಿಂದೂಗಳ ಅಸಮಾಧಾನವನ್ನು ಗಳಿಸಿದ್ದ ಅಂಬೇಡ್ಕರ್ , ೧೯೩೧-೩೨ ರಲ್ಲಿ ಮತ್ತಷ್ಟು ಅಪ್ರಿಯರಾದರು. ಅವರೇ ಹೇಳಿಕೊಂಡಂತೆ, ಭಾರತದ ಹಿಂದುಗಳು ಅತ್ಯಂತ ದ್ವೇಷಿಸುವ ವ್ಯಕ್ತಿಯಾದರು. ಅಂಬೇಡ್ಕರ್ ದಲಿತರಿಗೆ ಪ್ರತ್ಯೇಕ ಚುನಾವಣಾ ಕ್ಷೇತ್ರಕ್ಕಾಗಿ ಪಟ್ಟು ಹಿಡಿದದ್ದೇ ಈ ಅಸಮಾಧಾನಕ್ಕೆ ಕಾರಣವಾಗಿತ್ತು.
 • ಮಹಾತ್ಮ ಗಾಂಧಿ ಹಾಗೂ ಕಾಂಗ್ರೇಸ್ ಪಕ್ಷದ ಧೋರಣೆ ಇದಕ್ಕೆ ವಿರೋಧವಾಗಿತ್ತು. ಗಾಂಧಿ ಹಾಗೂ ಅಂಬೇಡ್ಕರರಲ್ಲಿ ಈ ವಿಷಯದ ಮೇಲೆ ಎರಡನೆಯ ದುಂಡು ಮೇಜಿನ ಪರಿಷತ್ತಿನಲ್ಲಿ ಚಕಮಕಿಯೂ ನಡೆದಿತ್ತು. ಹಿಂದೂ ಸಮಾಜದಿಂದ ಜಾತಿಪದ್ಧತಿ ಹಾಗೂ ತಾರತಮ್ಯ ವನ್ನು ನಿರ್ಮೂಲನ ಮಾಡುವ ಪರವಾಗಿದ್ದ ಗಾಂಧಿ, ದಲಿತರ ಹಿತರಕ್ಷಣೆಗಾಗಿ ದನಿಯೆತ್ತಿದ ಮೊದಲಿಗರಲ್ಲಿ ಒಬ್ಬರಾಗಿದ್ದರೂ, ಬ್ರಿಟಿಷರಿಗೆ ಈ ವಿಷಯದಲ್ಲಿ ಹಿಂದೂಗಳನ್ನು ಜಾತಿಯ ಆಧಾರದ ಮೇಲೆ, ರಾಜಕೀಯವಾಗಿ ಒಡೆಯಲು ಅವಕಾಶ ಕೊಡಬಾರದೆಂಬುದು ಅವರ ನಿಲುವಾಗಿತ್ತು.
 • ೧೯೩೨ರಲ್ಲಿ ಬ್ರಿಟಿಷರು ಜಾರಿಗೆ ತಂದ ಕೋಮುವಾರು ಕಾನೂನಿನಲ್ಲಿ ಅಸ್ಪೃಶ್ಯರಿಗೆ ಪ್ರತ್ಯೇಕ ಕ್ಷೇತ್ರವನ್ನು ಮಂಜೂರು ಮಾಡಲಾಯಿತು. ಇದಕ್ಕೆ ಪ್ರತಿಭಟನೆಯಾಗಿ ಗಾಂಧಿ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡ ಫಲವಾಗಿ, ಅಂಬೇಡ್ಕರ್, ಕಾಂಗ್ರೇಸ್ ಮತ್ತು ಸನಾತನ ಹಿಂದೂ ಮುಖಂಡರೊಂದಿಗೆ ಚರ್ಚಿಸಿ, ಕೊನೆಗೂ ಪ್ರತ್ಯೇಕ ಕ್ಷೇತ್ರ ಹಾಗೂ ಕೋಟಾ ಬೇಡಿಕೆಯನ್ನು ಕೈಬಿಟ್ಟರು.ಇದಕ್ಕೆ ಪ್ರತಿಯಾಗಿ, ಕಾಂಗ್ರೆಸ್ ಪಕ್ಷವು, ಅಸ್ಪೃಶ್ಯರಿಗೆ ಪ್ರಾತಿನಿಧ್ಯವನ್ನು ಹೆಚ್ಚುಮಾಡಲು ಒಪ್ಪಿಕೊಂಡಿತು.
 • ಹಿಂದೂ ಧಾರ್ಮಿಕ ಮುಖಂಡರುಗಳು ಅಸ್ಪೃಶ್ಯತೆಯ ಹಾಗೂ ಜಾತ್ಯಾಧಾರಿತ ತಾರತಮ್ಯದ ವಿರುದ್ಧವಾಗಿ ಹೆಚ್ಚು ಹೆಚ್ಚಾಗಿ ದನಿಯೆತ್ತ ತೊಡಗಿದರು. ಇಂದು ಡಾ. ಅಂಬೇಡ್ಕರ್ ಅವರನ್ನು ಭಾರತದ ಸಂವಿಧಾನ ಶಿಲ್ಪಿ ಎಂದು ಮುಕ್ತ ಕಂಠದಿಂದ ಹೇಳಲಾಗುತ್ತಿದೆ.ಇದೇ ವೇಳೆಗೆ ಸ್ವತಂತ್ರವಾದ ಅನೇಕ ದೇಶಗಳು ಸಾರ್ವಜನಿಕರ ಹಕ್ಕುಗಳನ್ನು ಕಾಪಾಡಲು ಅಸಮರ್ಥರಾದ ಹಿನ್ನೆಲೆಯಲ್ಲಿ ಭಾರತದ ಈ ಸಂವಿಧಾನ ಎದ್ದು ಕಾಣುತ್ತದೆ ಹಾಗೂ ಇದಕ್ಕೆ ಡಾ. ಅಂಬೇಡ್ಕರ್ ಕೊಡುಗೆಯನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳಲಾಗಿದೆ.
 • ಜಾತಿ ಪದ್ಧತಿಯ ಪುನರ್ವಿಮರ್ಶೆ ನಡೆಸಲು ಸನಾತನಿ ಹಿಂದೂಗಳ ಅನಾಸಕ್ತಿಯಿಂದ, ಭ್ರಮನಿರಸನವಾದಂತೆ ಅನ್ನಿಸಿದ್ದು ಹಾಗೂ ಮಹತ್ವದ ರಾಜಕೀಯ ವಿಷಯಗಳಲ್ಲಿ ಗಾಂಧಿಯವರ ಅಭಿಪ್ರಾಯಗಳಿಗೆ ಮಣಿಯಬೇಕಾಗಿ ಬಂದದ್ದು, ಅಂಬೇಡ್ಕರರನ್ನು ಅಸಮಾಧಾನಕ್ಕೀಡು ಮಾಡಿತು. ಪ್ರತ್ಯೇಕ ಚುನಾವಣಾ ಕ್ಷೇತ್ರದ ವಿಷಯದಲ್ಲಿ ಎದುರಿಸಿದ ಪ್ರತಿಭಟನೆ ಮತ್ತು, ಕೆಲವು ದೇವಸ್ಥಾನಗಳಲ್ಲಿ ಅಸ್ಪೃಶ್ಯರಿಗೆ ಪ್ರವೇಶ ಇನ್ನೂ ನಿಷಿದ್ಧವಾಗಿರುವುದು ಭಾಗಶಃ ಇವುಗಳ ಫಲವಾಗಿ, ಅಂಬೇಡ್ಕರ್ ತಮ್ಮ ಯೋಜನೆಯನ್ನು ಬದಲಾಯಿಸಿದರು.
 • ತಮ್ಮ ಅನುಯಾಯಿಗಳ ಜೀವನಮಟ್ಟವನ್ನು ಹೆಚ್ಚಿಸಿ ಕೊಂಡು , ರಾಜಕೀಯ ಅಧಿಕಾರವನ್ನು ಗಳಿಸುವತ್ತ ಲಕ್ಷ್ಯವಿಡಬೇಕೆಂದು ಆದೇಶಿಸಿದರು.ಜೊತೆಗೆ, "ಹಿಂದೂ ಧರ್ಮದಲ್ಲಿ ಅಸ್ಪೃಶ್ಯರ ಏಳಿಗೆ ಅಸಾಧ್ಯವಾದ್ದರಿಂದ ಅವರು ಬೇರೆಧರ್ಮಕ್ಕೆ ಮತಾಂತರಗೊಳ್ಳಬೇಕು"ಎಂಬ ಆಲೋಚನೆ ಮಾಡತೊಡಗಿದರು. ಇದಕ್ಕೆ ಹಿಂದೂ ಸಮಾಜ ದಿಂದ,ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆ ವರ್ಷದಲ್ಲಿ ಅಂಬೇಡ್ಕರ್ ಖಾಸಗಿ ಜೀವನದಲ್ಲಿ ಕೆಲವು ಮಹತ್ವದ ಘಟನೆಗಳು ಘಟಿಸಿದವು:
 • ಅಂಬೇಡ್ಕರರನ್ನು ಮುಂಬಯಿಯ ಸರಕಾರೀ ಕಾನೂನು ಕಾಲೇಜಿನ ಪ್ರಾಂಶುಪಾಲರಾಗಿ ನೇಮಕ ಮಾಡಿಕೂಳ್ಳಲಾಯಿತು. ನಂತರ ಅಂಬೇಡ್ಕರರು ತಮ್ಮದೇ ಆದ ಸ್ವಂತ ಮನೆ ಮಾಡಿ, ೫೦,೦೦೦ಕ್ಕೂ ಹೆಚ್ಚಿನ ಪುಸ್ತಕಗಳ ಗ್ರಂಥಾಲಯವನ್ನು ಕಟ್ಟಿಕೊಂಡರು. ಇದೇ ವರ್ಷ ಅವರ ಪತ್ನಿ ರಮಾಬಾಯಿಯವರು ಮರಣ ಹೊಂದಿದರು. ೧೯೦೮ರಲ್ಲಿ ಅವರ ಮದುವೆಯಾದಾಗ ಅಂಬೇಡ್ಕರ್ ವಯಸ್ಸು ಹದಿನಾರಾದರೆ, ಅವರ ಹೆಂಡತಿ ಕೇವಲ ಒಂಭತ್ತು ವರ್ಷದವರಾಗಿದ್ದರು. ಅವರಿಗೆ ಹುಟ್ಟಿದ ಐದು ಮಕ್ಕಳಲ್ಲಿ ಉಳಿದದ್ದು ಒಬ್ಬರೇ.

ಕೃತಿಗಳು[ಬದಲಾಯಿಸಿ]

ಸಂಶೋಧನಾಪ್ರಬಂಧಗಳು[ಬದಲಾಯಿಸಿ]

 1. ಬ್ರಿಟಿಷ್ ಭಾರತದಲ್ಲಿ ಪ್ರಾಂತೀಯ ಹಣಕಾಸು ಪದ್ಧತಿಯ ವಿಕಾಸ
 2. “ ರೂಪಾಯಿಯ ಬಿಕ್ಕಟ್ಟು” (ದಿ ಪ್ರಾಬ್ಲಮ್ ಆಫ್ ರುಪಿ)

ಮೊಟ್ಟ ಮೊದಲ ಪ್ರಕಾಶಿತ ಕೃತಿ[ಬದಲಾಯಿಸಿ]

 • ಭಾರತದಲ್ಲಿ ಜಾತಿ ಪದ್ಧತಿ: ತಂತ್ರ, ಹುಟ್ಟು ಮತ್ತು ಬೆಳವಣಿಗೆ

ರಾಜಕೀಯ ಜೀವನ[ಬದಲಾಯಿಸಿ]

 • ಮುಂದಿನ ಕೆಲವರ್ಷಗಳಲ್ಲಿ, ಅಂಬೇಡ್ಕರ್ ಸ್ವತಂತ್ರ್ತ ಕಾರ್ಮಿಕ ಪಕ್ಷ ( ಇಂಡಿಪೆಂಡೆಂಟ್ ಲೇಬರ್ ಪಾರ್ಟಿ) ಸ್ಥಾಪಿಸಿ, ೧೯೩೫ರ ಭಾರತ ಸರಕಾರದ ಕಾಯಿದೆಯ ಪ್ರಕಾರ ನಡೆಸಲ್ಪಟ್ಟ ಪ್ರಾಂತೀಯ ಚುನಾವಣೆಗಳಲ್ಲಿ ಭಾಗವಹಿಸಿದರು. ಈ ಚುನಾವಣೆಯಲ್ಲಿ ವಿಜಯಶಾಲಿಯಾದ ಅವರು, ಮುಂಬಯಿ ವಿಧಾನ ಸಭೆಯಲ್ಲಿ (ಲೆಜಿಸ್ಲೇಟಿವ್ ಕೌನ್ಸಿಲ್) ದೊಡ್ಡ ಭೂ ಹಿಡುವಳಿದಾರಿಕೆಯ ನಿಷೇಧ, ಕೈಗಾರಿಕಾ ಕಾರ್ಮಿಕರಿಗೆ ಮುಷ್ಕರದ ಹಕ್ಕು, ಜನಸಂಖ್ಯಾ ನಿಯಂತ್ರಣ ಜಾರಿ ಇತ್ಯಾದಿ ವಿಷಯಗಳ ಬಗ್ಗೆ ಒತ್ತಾಯಿಸಿ, ಮುಂಬಯಿ ರಾಜ್ಯದ (ಪ್ರೆಸಿಡೆನ್ಸಿ) ವಿವಿಧ ಕಡೆಗಳಲ್ಲಿ ಸಭೆ, ಸಮ್ಮೇಳನಗಳಲ್ಲಿ ಭಾಗವಹಿಸಿದರು.
 • ೧೯೩೯ರಲ್ಲಿ ಎರಡನೆಯ ಮಹಾಯುದ್ಧ ಆರಂಭವಾದಾಗ, ಅಂಬೇಡ್ಕರ್, ನಾಜಿ ತತ್ವಗಳು ಭಾರತೀಯರ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹವುಗಳು ಎಂಬ ನಿಲುವನ್ನು ತೆಗೆದುಕೊಂಡರು. ಬ್ರಿಟಿಷ್ ಸರಕಾರವನ್ನು ಈ ಯುದ್ಧದಲ್ಲಿ ಬೆಂಬಲಿಸಬೇಕೆಂದು ಸಾರ್ವಜನಿಕರಿಗೆ ಕರೆ ಕೊಟ್ಟ ಅವರು, ಅಸ್ಪೃಶ್ಯರನ್ನು ಭಾರತೀಯ ಸೇನೆಯಲ್ಲಿ ಭರ್ತಿಯಾಗುವಂತೆ ಪ್ರೋತ್ಸಾಹಿಸಿದರು. ೧೯೪೧ರಲ್ಲಿ ಅಂಬೇಡ್ಕರರನ್ನು ರಕ್ಷಣಾ ಸಲಹಾ ಸಮಿತಿಗೆ ( ಡಿಫೆನ್ಸ್ ಅಡ್ವೈಸರೀ ಕಮಿಟಿ) ನೇಮಕ ಮಾಡಲಾಯಿತು.
 • ಮರು ವರ್ಷ ವೈಸರಾಯ್ ಎಕ್ಸಿಕ್ಯೂಟಿವ್ ಕೌನ್ಸಿಲ್ಲಿನ ಕಾರ್ಮಿಕ ಸದಸ್ಯ ಎಂದು ನೇಮಕವಾದ ಅವರು, ಈ ಹುದ್ದೆಯಲ್ಲಿ ಮುಂದಿನ ನಾಲ್ಕು ವರ್ಷ ಮುಂದುವರಿದರು. ಇದೇ ಅವಧಿಯಲ್ಲಿ ಅವರು ಸ್ವತಂತ್ರ ಕಾರ್ಮಿಕ ಪಕ್ಷವನ್ನು ಅಖಿಲ ಭಾರತ ಪರಿಶಿಷ್ಟ ಜಾತಿ ಒಕ್ಕೂಟವಾಗಿ ಬದಲಾಯಿಸಿದರು; ಪ್ರಜಾ ಶಿಕ್ಷಣ ಸಮಾಜವನ್ನು(ಪೀಪಲ್ಸ್ ಎಜುಕೇಶನ್ ಸೊಸೈಟಿ) ಸ್ಥಾಪಿಸಿದರು.
 • ಅತ್ಯಂತ ವಿವಾದವನ್ನು ಹುಟ್ಟು ಹಾಕಿದ ಅನೇಕ ಪುಸ್ತಕಗಳನ್ನೂ, ಬಿಡಿಹಾಳೆಗಳನ್ನೂ (ಪಾಂಪ್ಲೆಟ್ಸ್) ಪ್ರಕಾಶಿಸಿದರು. ಅವುಗಳಲ್ಲಿ ಕೆಲವು “ ಪಾಕಿಸ್ತಾನದ ಬಗ್ಗೆ ವಿಚಾರಗಳು “ (ಥಾಟ್ಸ್ ಆನ್ ಪಾಕಿಸ್ತಾನ್) , "ಕಾಂಗ್ರೆಸ್ ಹಾಗೂ ಗಾಂಧಿ ಅಸ್ಪೃಶ್ಯರಿಗೆ ಮಾಡಿದ್ದೇನು" ( ವಾಟ್ ಕಾಂಗ್ರೆಸ್ ಅಂಡ್ ಗಾಂಧಿ ಹ್ಯಾವ್ ಡನ್ ಟು ಅನ್ಟಚಬಲ್ಸ್) ಮತ್ತು “ ಶೂದ್ರರು ಯಾರಾಗಿದ್ದರು?”( ಹೂ ವರ್ ದ ಶೂದ್ರಾಸ್?) ಮುಖ್ಯವಾದುವು.

ಭಾರತದ ಸಂವಿಧಾನ ಶಿಲ್ಪಿ[ಬದಲಾಯಿಸಿ]

 • ೧೯೪೭ರಲ್ಲಿ ಭಾರತ ಸ್ವತಂತ್ರವಾದ ಮೇಲೆ, ಈಗಾಗಲೇ ಸಂಸತ್ತು (ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿಯ) ಸದಸ್ಯರಾಗಿದ್ದ ಅಂಬೇಡ್ಕರರನ್ನು ಆಗಿನ ಪ್ರಧಾನಿ ಜವಹರಲಾಲ್ ನೆಹರೂ ತಮ್ಮ ಮಂತ್ರಿಮಂಡಲದಲ್ಲಿ ಕಾನೂನು ಸಚಿವರಾಗುವಂತೆ ಆಹ್ವಾನಿಸಿದರು. ಕೆಲ ವಾರಗಳ ನಂತರ ಸಂಸತ್ತು ಸಂವಿಧಾನವನ್ನು ತಯಾರು ಮಾಡುವ ಕಾರ್ಯವನ್ನು ಕರಡು ಸಮಿತಿಗೆ ಒಪ್ಪಿಸಿತು. ಈ ಸಮಿತಿಯು ಅಂಬೇಡ್ಕರರನ್ನು ತನ್ನ ಅಧ್ಯಕ್ಷರನ್ನಾಗಿ ಚುನಾಯಿಸಿತು.
 • ಸಂವಿಧಾನದ ಕರಡನ್ನು ಸಿದ್ಧ ಮಾಡಲು, ಬಹುತೇಕ ಒಬ್ಬಂಟಿಯಾಗಿ, ಮುಂದಿನ ಎರಡು ವರ್ಷ ದುಡಿದ ಅಂಬೇಡ್ಕರ್, ಅನಾರೋಗ್ಯವಿದ್ದಾಗ್ಯೂ, ೧೯೪೮ರ ಮೊದಲಿನಲ್ಲಿ ಈ ಕಾರ್ಯವನ್ನು ಪೂರ್ಣಗೊಳಿಸಿ, ಅದೇ ವರ್ಷದ ಕೊನೆಯಲ್ಲಿ ಸಂಸತ್ತಿನಲ್ಲಿ ಮಂಡಿಸಿ, ಸಂವಿಧಾನದ ಹಸ್ತಪ್ರತಿ ಯನ್ನು ಬೆಳ್ಳಿತಟ್ಟೆಯಲ್ಲಿಟ್ಟು, ಆಗಿನ ಪ್ರಧಾನಿ ಜವಹರಲಾಲ್ ನೆಹರೂ ಅವರ ಸಮ್ಮುಖದಲ್ಲಿ ಇಡೀ ರಾಷ್ಟೃಕ್ಕೆ ಅದನ್ನು ಲೋಕಾರ್ಪಣೆ ಮಾಡಿದರು.
 • ಸಂಸತ್ತಿನ ವ್ಯವಸ್ಥೆಯಲ್ಲಿ ಇದನ್ನು ಅವರು ಸಮರ್ಥವಾಗಿ ಮುಂದೊಯ್ದ ಪರಿಣಾಮವಾಗಿ, ಕೆಲವೇ ಕೆಲವು ತಿದ್ದುಪಡಿಗಳೊಂದಿಗೆ, ಇದು ಸಂಸತ್ತಿನ ಅಂಗೀಕಾರವನ್ನು ಪಡೆಯಿತು. ಅಂದಿನಿಂದ ಅಂಬೇಡ್ಕರ್ ಅವರು ಭಾರತದ ಸಂವಿಧಾನ ಶಿಲ್ಪಿಯೆಂದೇ ಹೆಸರಾದರು. ೧೯೫೧ರಲ್ಲಿ ಅಂಬೇಡ್ಕರ್ ಮಂತ್ರಿಮಂಡಲಕ್ಕೆ ರಾಜೀನಾಮೆ ನೀಡುವುದರೊಂದಿಗೆ ಅವರ ರಾಜಕೀಯ ಜೀವನಕ್ಕೆ ಬಹುತೇಕ ತೆರೆ ಬಿದ್ದಿತು.
 • ೧೯೫೨ರ ಮಹಾಚುನಾವಣೆಯಲ್ಲೇ ಆಗಲೀ, ಅದರ ಮರುವರ್ಷ ನಡೆದ ಮರುಚುನಾವಣೆಯಲ್ಲೇ ಆಗಲಿ, ಲೋಕಸಭೆಗೆ ಗೆದ್ದು ಬರಲು ವಿಫಲರಾದರು. ಆದರೆ ಮಾರ್ಚ್ ೧೯೫೨ರಲ್ಲಿ ಆಗಿನ ಮುಂಬಯಿ ರಾಜ್ಯದ ಹದಿನೇಳು ಚುನಾಯಿತ ಪ್ರತಿನಿಧಿಗಳಲ್ಲಿ ಒಬ್ಬರಾಗಿ ರಾಜ್ಯಸಭೆಯನ್ನು ಪ್ರವೇಶಿಸಿದರು. ಸರಕಾರದ ಮೇಲೆ ನಿಯಂತ್ರಣವಿಡಲು ಅವರು ಈ ಅವಕಾಶವನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಂಡರು.

ಡಾ.ಬಿ.ಆರ್.ಅಂಬೇಡ್ಕರ ಅವರ ಪ್ರಜಾಪ್ರಭುತ್ವದ ಕಲ್ಪನೆ[ಬದಲಾಯಿಸಿ]

 • ಡಾ.ಬಿ.ಆರ್.ಅಂಬೇಡ್ಕರ ಅವರ ಪ್ರಜಾಪ್ರಭುತ್ವದ ಕಲ್ಪನೆ ಹೇಗಿತ್ತು ಮತ್ತು ಅದರಿಂದ ಅವರು ಏನನ್ನು ನಿರೀಕ್ಷಿಸಿದ್ದರು ಅನ್ನುವುದರ ಬಗ್ಗೆ ಈ ಉಲ್ಲೇಖವು ಬಹಳಷ್ಟು ತಿಳಿಸುತ್ತದೆ. ಕ್ರಾಂತಿಕಾರಕ ಬದಲಾವಣೆಗಳನ್ನು ಕೇವಲ ಕ್ರಾಂತಿಯ ಮೂಲಕವೇ ತರಬಲ್ಲೆವು ಮತ್ತು ಕ್ರಾಂತಿ ಎಂದರೆ ರಕ್ತಪಾತ ಅನ್ನುವುದು ಸಾಮಾನ್ಯ ತಿಳಿವಳಿಕೆ. ಅಲ್ಲದೆ ಕ್ರಾಂತಿಗಳು ಮತ್ತು ಪ್ರಜಾಪ್ರಭುತ್ವಗಳು ಪರಸ್ಪರ ಹೊಂದಣಿಕೆಯಾಗಲಾರವು ಎಂಬ ಗುಪ್ತ ಗುಮಾನಿಯೊ ಇದೆ.
 • ಕ್ರಾಂತಿಯ ಬಗ್ಗೆಯ ಈ ಸಾಮಾನ್ಯ ಭಾವನೆಗಳು ತಾತ್ವಿಕವಾಗಿ ತಪ್ಪು ಎಂದು ಎತ್ತಿ ತೋರಿಸಬಹುದು. ಆ ವಿಷಯ ಬೇರೆ ಹಾಗೆಯೇ, ಪ್ರಜಾಪ್ರಭುತ್ವದ ಬಗ್ಗೆಯೂ ಕೆಲವು ಸಾಮಾನ್ಯ ಭಾವನೆಗಳಿವೆ. ಕ್ರಮಬದ್ದ ಚುನಾವಣೆ ಗಳು, ಅನೇಕ ರಾಜಕೀಯ ಪಕ್ಷಗಳು ಮತ್ತು ಪ್ರತಿ ವ್ಯಕ್ತಿಗೂ ಸಮಾನ ರಾಜಕೀಯ ಮೌಲ್ಯವನ್ನು ನೀಡುವ ಒಂದು ಪ್ರಾತಿನಿಧಿಕ ಸರ್ಕಾರದ ರೂಪ ಅದು ಎಂದು ಪರಿಗಣಿಸಲ್ಪಟ್ಟಿದೆ.
 • ಪ್ರಜಾಪ್ರಭುತ್ವದ ಎದ್ದು ಕಾಣುವ ಸ್ಥೂಲ ಸಂರಚನೆಯ ಮುಖ್ಯ ಶಿಲ್ಪಿ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಪರಿಗಣಿಸಲ್ಪಟ್ಟಿದ್ದರು. ಅಂಬೇಡ್ಕರ ಅವರ ಪ್ರಜಾಪ್ರಭುತ್ವದ ಕಲ್ಪನೆ ತೀರ ವಿಭಿನ್ನ ಸಮಾಜವನ್ನು ಆದರ್ಶ ಸಮಾಜವನ್ನಾಗಿ ತಮ್ಮ ಕಲ್ಪನೆಯ ಸುಖಿರಾಜ್ಯ ವನ್ನಾಗಿ ಬದಲಾಯಿಸಿ, ಸ್ವಾತಂತ್ರ್ಯ, ಸಮಾನತೆ ಮತ್ತು ಭಾತೃತ್ವ ಗಳನ್ನು ಒಟ್ಟಿಗೆ ಸಾಧಿಸಬಲ್ಲದೆಂಬಂತೆ ಪ್ರಜಾಪ್ರಭುತ್ವವನ್ನು ಅವರು ಕಲ್ಪಿಸಿಕೊಂಡ್ಡಿದರು.
 • ಪ್ರಜಾಪ್ರಭುತ್ವವೆಂದರೆ ಸರ್ಕಾರದ ಒಂದು ರೂಪವೆಂದು ಅದು ಹುಟ್ಟಿದ ಪ್ರಾಚೀನತೆಯಿಂದ ಇಂದಿನ ಆಧುನಿಕತೆಯವರೆಗೂ ಕಲ್ಪಿಸಿಕೊಳ್ಳಲಾಗಿದೆ. ಆದರೆ ಪ್ರಜಾಪ್ರಭುತ್ವವು ಕೇವಲ ಸರ್ಕಾರದ ಒಂದು ರೂಪವಲ್ಲ. ಅದು ಪ್ರಮುಖವಾಗಿ ಸಹಬಾಳ್ವೆಯ ಸೊಗಸು ಮತ್ತು ಅನುಭವವನ್ನು ಪರಸ್ಪರ ದಟೈಸುವ ಒಂದು ಜೋಡಣಿ. ಮೂಲಭೂತವಾಗಿ ಅದು ಸಹವರ್ತಿಗಳೆಡೆಗೆ ತೋರುವ ಗೌರವಾದರ ಭಾವನೆ ಎಂದು ಹೇಳಿದ್ದಾರೆ.
 • ಅವರ ದೃಷ್ಟಿಯಲ್ಲಿ ಪ್ರಜಾಪ್ರಭುತ್ವ ಪ್ರಜಾಸತ್ತಾತ್ಮಕ ಸಮಾಜವನ್ನು ನಿರೀಕ್ಷಿಸುತ್ತದೆ. ರಾಜಕಾರಣಿಗಳು ಪ್ರಜಾಪ್ರಭುತ್ವವು ಮೂಲಭೂತವಾಗಿ ಸಮಾಜದ ಒಂದು ಸ್ವರೂಪ ಕೇವಲ ಸರ್ಕಾರದ ಮಾದರಿ ಅಲ್ಲ ಅನ್ನುವುದನ್ನು ಗ್ರಹಿಸಲ್ಲಿಲ್ಲ. ಇದು ಎರಡು ಅಂಶಗಳನ್ನು ಒಳಗೊಂಡಿದೆ. ಮೊದಲನೆಯದು ಒಂದು ಮನೋಭಾವ, ಸಹವರ್ತಿಗಳಿಗೆ ಗೌರವ ಮತ್ತು ಸಮಾನತೆ.
 • ಎರಡನೆಯದು ಪೆಡಸಾದ ಸಾಮಾಜಿಕ ಅಡೆ-ತಡೆಗಳಿಂದ ಮುಕ್ತ ಸಮಾಜ.ಸಾಮಾಜಿಕ ಪ್ರಜಾಪ್ರಭುತ್ವವ ಅನ್ನುವ ಪದ ಸಾಮಾನ್ಯವಾಗಿ ಆರ್ಥಿಕ ಸಂಸ್ಧೆಗಳು ಹಾಗೂ ಬಂಡವಾಳ ಕ್ರಮೇಣ ಸಮಾಜವಾದಕ್ಕೆ ಹೊರಳುತ್ತದೆಂಬ ಫೇಬಿಯನ್ ನಂಬಿಕೆ ಗಳನ್ನು ಒಳಗೊಂಡಿರುತ್ತದೆ. ಆದರೆ ಅಂಬೇಡ್ಕರ ಅವರ ಪ್ರ್ರಕಾರ ಅದು ಶ್ರೇಣೀಕೃತವಲ್ಲದ, ವಿಂಗಡಣೆ ಮತ್ತು ಪ್ರತ್ಯೇಕಗಳಿಲ್ಲದ ಸಮಾಜ. ಅದು ಭಾರತಿಯ ಸಮಾಜ ಮತ್ತು ಅದರ ಜಾತಿಗಳ ವ್ಯವಸ್ಥೆಗೆ ತೀಕ್ಷ್ಣವಾಗಿ ಅನ್ವಯಿಸುತ್ತದೆ.
 • ಅದು ಮೇಲ್ನೋಟಕ್ಕೆ ಫೇಬಿಯನ್ ಕಲ್ಪನೆಯ "ಸಾಮಾಜಿಕ ಪ್ರಜಾಪ್ರಭುತ್ವ"ದೊಂದಿಗೆ ಅನೇಕ ಅಂಶಗಳನ್ನು ಹಂಚಿಕೊಂಡಿದೆ.ಸಹಕಾರ ಮತ್ತು ಸಮುದಾಯ (ಭ್ರಾತೃತ್ವವನ್ನು ಸೂಚಿಸುತ್ತದೆ). ಸಮಾನತೆ (ಅವಕಾಶ ಮತ್ತು ಗಳಿಕೆಗಳೆರಡರಲ್ಲೂ) ಮತ್ತು ಸ್ವಾತಂತ್ರ್ಯ-ಹೀಗೆ. ಆದರ ಜೊತೆಗೆ ಅವರು ಸಂಪನ್ಮೂಲಗಳ ಹಂಚಿಕೆಯಲ್ಲಿ ವ್ಯಕ್ತಿಗಳ ಸಮಾನ ಮೌಲ್ಯವನ್ನು ವಿವರಿಸುವ 'ಆರ್ಥಿಕ ಪ್ರಜಾಪ್ರಭುತ್ವ' ಅನ್ನುವ ಪದವನ್ನು ಬಳಸಿದ್ದಾರೆ. ಹೀಗೆ ಅಂಬೇಡ್ಕರರ ಪ್ರಜಾಪ್ರಭುತ್ವವು ಮೂರು ಭಾಗಗಳನ್ನು ಹೊಂದಿದೆ:
 1. ಔಪಚಾರಿಕ ಪ್ರಜಾಪ್ರಭುತ್ವವಾಗಿ ರಾಜಕೀಯ ಪ್ರಜಾಪ್ರಭುತ್ವ,
 2. ಸಾಮಾಜಿಕ ಸಮಾನತೆಗೆ ಅನ್ವಯಿಸುವ ಸಾಮಾಜಿಕ ಪ್ರಜಾಪ್ರಭುತ್ವ, ಮತ್ತು
 3. ಸಮಾಜವಾದಿ ಆರ್ಥಿಕತೆಯುಳ್ಳ ಆರ್ಥಿಕ ಪ್ರಜಾಪ್ರಭುತ್ವ. ಇವು ಮೂರು ತಮ್ಮ ಆದರ್ಶ ಸಮಾಜದ ಸ್ವರೂಪವಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಗಳೊಂದಿಗೆ ಸಮೀಕೃತಗೊಳ್ಳುತ್ತವೆ.

==ಕರಡು ಸಮಿತಿಯ ಅದ್ಯಕ್ಷರಾಗಿ 'ಬಿ.ಆರ್.ಅಂಬೇಡ್ಕರ್ ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರು [೫] .}}

 • ಸ್ವಾತಂತ್ರ್ಯದ ಸಂದರ್ಭದಲ್ಲಿ ನೆಹರೂ ಅವರಿಂದ ಕಾನೂನು ಸಚಿವರಾಗಲು ಆಹ್ವಾನ ಪಡೆದ ಅಂಬೇಡ್ಕರ್ ಅವರು, ಭಾರತದ ಸಂವಿಧಾನ ರೂಪಿಸುವ ಜವಾಬ್ಧಾರಿಯನ್ನು ಹೊತ್ತು ಅಪಾರವಾದ ಶ್ರಮವಹಿಸಿ ದೇಶಕ್ಕೆ ಸಂವಿಧಾನವನ್ನು ಕಟ್ಟಿಕೊಟ್ಟರು. ಇಂದು ಡಾ. ಅಂಬೇಡ್ಕರ್ ಅವರನ್ನು ಭಾರತದ ಸಂವಿಧಾನಶಿಲ್ಪಿ ಎಂದು ಮುಕ್ತ ಕಂಠದಿಂದ ಹೇಳಲಾಗುತ್ತಿದೆ. ಇಡೀ ವಿಶ್ವದಲ್ಲಿ ಸ್ವತಂತ್ರವಾದ ಅನೇಕ ದೇಶಗಳು ಸಾರ್ವಜನಿಕರ ಹಕ್ಕುಗಳನ್ನು ಕಾಪಾಡಲು ಅಸಮರ್ಥವಾಗಿವೆ ಎಂಬ ಹಿನ್ನೆಲೆಯಲ್ಲಿ ಭಾರತದ ಈ ಸಂವಿಧಾನ ಎದ್ದು ಕಾಣುತ್ತದೆ ಹಾಗೂ ಇದಕ್ಕೆ ಡಾ. ಅಂಬೇಡ್ಕರ್ ಕೊಡುಗೆಯನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳಲಾಗಿದೆ.
 • ರಾಜಕೀಯ ಪ್ರಜಾಪ್ರಭುತ್ವವು ಬಹುಮತವನ್ನು ತಿರುಚಿ ಬದಲಾಯಿಸಲು ಸಾಧ್ಯವಿಲ್ಲದಂತೆ ಸಮಾಜದ ಆರ್ಥಿಕ ಚೌಕಟ್ಟನ್ನು ಸಂವಿಧಾನದೊಳಗೆ ಭದ್ರವಾಗಿ ಅಳವಡಿಸಬೇಕೆಂದು ಅವರು ಬಯಸಿದ್ದರು. 'ಲಿಬರಿಸಂ'ನಲ್ಲಿ ಇಂತ ಹೊಳಹುಗಳು ಅಪರೂಪ. ಅಂಬೇಡ್ಕರ ಅವರು ಮೂಲಭೂತವಾಗಿ ಒಬ್ಬ ಲಿಬರಲ್ (ಉದಾರವಾದಿ) ಆಗಿದ್ದರೂ, 'ಲಿಬರಿಸಂ'ನ ಚೌಕಟ್ಟನ್ನು ಎಂದಿನಂತೆ ಅನಾಯಾಸವಾಗಿ ಮೀರಿದ್ದರು.
 • ಖಾಸಗಿ ಉದ್ದಿಮೆಯ ಮೇಲೆ ಆಧರಿಸಿದ ಆರ್ಥಿಕ ವ್ಯವಸ್ಥೆ ಪ್ರಜಾಪ್ರಭುತ್ವ ತತ್ವಗಳಿಗೆ ವಿರುದ್ದವಾದದ್ದು ಎಂದು ಅವರು ಸ್ಪಷ್ಟವಾಗಿ ತಿಳಿದಿದ್ದರು. ಖಾಸಗಿ ಉದ್ದಿಮೆಯು ಅದರ ಮೂಲದಲ್ಲಿ ಸಂಪತ್ತು ಮತ್ತು ತನ್ಮೂಲಕ ಅಧಿಕಾರವನ್ನು ಖಾಸಗಿ ವ್ಯಕ್ತಿಗಳ ಕೈಯಲ್ಲಿ ಕೇಂದ್ರೀಕರಿಸುತ್ತದೆ. ಇದು ಅನಿವಾರ್ಯವಾಗಿ ಬದುಕಿರಲು ದುಡಿಯಲೇಬೇಕಾದ ಜನರ ಹಕ್ಕುಗಳನ್ನು ಮೊಟಕುಗೊಳಿಸುತ್ತದೆ. ಮಾಲಿಕ ತಪ್ಪು ಮಾಡಿದ್ದರೂ ಕೆಲಸಗಾರ ಪ್ರಶ್ನಿಸಲಾಗದು.
 • ಪ್ರಶ್ನಿಸಿದರೆ ಅವನು ತನ್ನ ಕೆಲಸ ಕಳೆದುಕೊಳ್ಳಬಹುದು!ಅವರು ಹೇಳುತ್ತಾರೆ: "ಖಾಸಗಿ ಉದ್ದಿಮೆ ಮತ್ತು ವ್ಯೆಯಕ್ತಿಕ ಲಾಭಗಳಿಕೆಯನ್ನು ಆಧರಿಸುವ ಸಾಮಾಜಿಕ ಅರ್ಥವ್ಯವಸ್ಥೆಯನ್ನು ಅಭ್ಯಾಸ ಮಾಡುವ ಯಾರಾದರೂ ಇದು ಹೇಗೆ ಪ್ರಜಾಪ್ರಭುತ್ವದ ಮೂಲಾಧಾರವಾದ 'ವ್ಯಕ್ತಿಗಳ ಹಕ್ಕು'ಗಳನ್ನು ಕಿತ್ತುಕೊಳ್ಳದಿದ್ದರೂ ಬಹಳ ಮಟ್ಟಿಗೆ ಮೊಟಕು ಗೊಳಿಸುತ್ತದೆ ಅನ್ನುವುದನ್ನು ಮನಗಾಣುವರು.
 • ಜೀವನೋಪಾಯಕ್ಕಾಗಿ ಎಷ್ಟ್ಟು ಜನ ತಮ್ಮ ಹಕ್ಕುಗಳನ್ನು ಬಿಟ್ಟುಕೊಡ ಬೇಕಾಗುವುದು? ಎಷ್ಟ್ಟು ಜನ ಖಾಸಗಿ ಮಾಲೀಕರಿಂದ ಆಳಿಸಿಕೊಳ್ಳಲು ಸಿದ್ದರಾಗಬೇಕು?"ಆದ್ದರಿಂದ ಪ್ರಜಾಪ್ರಭುತ್ವವನ್ನು ಸಹಕಾರಗೊಳಿಸಲು ಉತ್ಪಾದನೆಯ ಸಾಧನಗಳು ಸಮಾಜದ ಒಡೆತನದಲ್ಲಿ ಇರಬೇಕೆಂದು ಅವರು ಬಯಸಿದರು. ಸಂವಿಧಾನ ರಚನಾಸಭೆ ಯಲ್ಲಿ ಜವಹರಲಾಲ್ ನೆಹರುರ ಅವರು ಮಂಡಿಸಿದ್ದರು.
 • ಸಂವಿಧಾನದ ಉದೇಳನವನ್ನು ಕುರಿತು ಠರಾವಿನ ಬಗ್ಗೆ ಮಾತನಾಡುತ್ತ ೧೭ ಡಿಸೆಂಬರ್ ೧೯೪೬ರಲ್ಲಿ ಅವರು, ಠರಾವಿ ನಲ್ಲಿ ಪ್ರಸ್ತಾಪಿಸಿದ್ದಂತೆ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ನ್ಯಾಯವನ್ನು ಖಾತ್ರಿಗೊಳಿಸಲು ಆರ್ಥಿಕ ವ್ಯವಸ್ಥೆಯಾಗಿರಬೇಕು ಎಂದು ಹೇಳಿದ್ದರು.ಆರ್ಥಿಕ ವ್ಯವಸ್ಥೆ ಸಮಾಜವಾದಿ ಆರ್ಥಿಕ ವ್ಯವಸ್ಥೆಯಾಗದ ಹೊರತು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ದೊರಕಿಸುವಲ್ಲಿ ನಂಬಿಕೆ ಇಟ್ಟ ಯಾವುದೇ ಮುಂದಿನ ಸರ್ಕಾರಕ್ಕೆ ಇದು ಹೇಗೆ ಸಾಧ್ಯ ಅನ್ನುವುದು ನನಗೆ ಅರ್ಥವಾಗದು. ವಾಸ್ತವವಾಗಿ ಸಂವಿಧಾನ ರಚನಾಸಭೆಯನ್ನು ತಾವು ರೂಪುಗೊಳಿಸಿದ್ದ 'ರಾಷ್ಟ್ರವೇ ನಿಯಂತ್ರಿಸುವ ಸಮಾಜವಾದ' ವ್ಯವಸ್ಥೆಗೆ ಅವರು ದನಿ ಕೊಡುತ್ತಿದ್ದರು.
 • ಸಮಾಜವಾದಿ ಚೌಕಟ್ಟು ಆಥಿಕ ವ್ಯವಸ್ಥೆಯು 'ಸಂವಿಧಾನದ ಒಂದು ಭಾಗ'ವಾಗಿರಬೇಕೆಂದು ಅವರ ಪ್ರಸ್ತಾವನೆ ಇತ್ತು.ಮೂಲ ಮತ್ತು ಪ್ರಮುಖ ಉದ್ದಿಮೆಗಳ ಒಡೆತನ ಮತ್ತು ನಿರ್ವಹಣೆ ರಾಷ್ಟ್ರ್ದದ (ಸರ್ಕಾರದ )ಕೈಯಲ್ಲಿರಬೇಕು; ವಿಮೆಯು ರಾಷ್ಟ್ರ್ದದ ಏಕಸ್ವಾಮ್ಯದಲ್ಲಿರಬೇಕು; ಪ್ರತಿಯೊಬ್ಬ ವಯಸ್ಕನಿಗೂ ಅದು (ವಿಮಾಪಾಲಿಸಿ) ಕಡ್ಡಾಯವಾಗಿದ್ದು ಅವನ ವೇತನಕ್ಕೆ ಅನುಗುಣವಾಗಿ ಇರತಕ್ಕದ್ದು.
 • ಕೃಷಿಯು ರಾಷ್ಟ್ರೀಕೃತ ಉದ್ದಿಮೆಯಾಗಿರಬೇಕು. ಖಾಸಗಿ ವ್ಯಕ್ತಿಗಳ ಕೈಯಲ್ಲಿರುವ ಇಂತಹ ಉದ್ದಿಮೆ ವಿಮೆ ಮತ್ತು ಕೃಷಿ ಭೂಮಿಯನ್ನು ರಾಷ್ಟ್ರ್ದ(ಸರ್ಕಾರ)ಅವುಗಳ ಮೌಲ್ಯಕ್ಕೆ ಅನುಗುಣವಾಗಿ ಡಿಬೆಂಚರುಗಳ ಮೂಲಕ ಪರಿಹಾರ ನೀಡಿ ರಾಷ್ಟ್ರ್ದ(ಸರ್ಕಾರ), ಅವುಗಳಲ್ಲಿ ನಿರ್ಣಾಯಕ ಹಕ್ಕುಗಳನ್ನು ಪಡೆದುಕೊಳ್ಳಬೇಕು.
 • ಕೃಷಿಯನ್ನು ಸಾಮೂಹಿಕ ಉದ್ದಿಮೆಯಾಗಿ ಸಂಘಟಿಸಬೇಕು; ಸರ್ಕಾರ ಸ್ವಾಧೀನ ಪಡಿಸಿಕೊಂಡ ಭೂಮಿಯನ್ನು ಒಂದೇ ಪ್ರಮಾಣದ ಫಾರ್ಮಗಳನ್ನಾಗಿ ವಿಂಗಡಿಸಿ ಜಾತಿ ಜನಾಂಗಗಳ ಭೇದವಿಲ್ಲದಂತೆ ಹಳ್ಳಿಗರಿಗೆ ಗುತ್ತಿಗೆ ಮೇಲೆ ಸಾಮೂಹಿಕ ಕೃಷಿಗಾಗಿ ಬಿಟ್ಟುಕೊಡಬೇಕು, ತಾನು ಒದಗಿಸುವ ಭೂಮಿಗೆ ಬಾಡಿಗೆ, ಕೃಷಿ ಸಲಕರಣೆಗಳು, ಒಳಸುರಿ ಮತ್ತು ಸಾಲಕ್ಕೆ ಪ್ರತಿಯಾಗಿ ಅವರು ಸರ್ಕಾರಕ್ಕೆ ಹಣ ಪಾವತಿ ಮಾಡತಕ್ಕದ್ದು- ಹೀಗಿತ್ತು ಅವರ ಪ್ರಸ್ತಾವನೆ.
 • ತಮ್ಮ 'ರಾಷ್ಟ್ರಗಳನ್ನು ಮತ್ತು ಅಲ್ಪಸಂಖಾತರು' ಅನ್ನುವ ಪುಸ್ತಕದಲ್ಲಿ ಅವರು ಈ ಬಗ್ಗೆ ಈ ವ್ಯವಸ್ಥೆಯ ಬಗ್ಗೆ ಇನ್ನಷ್ಟು ವಿಷಾದವಾಗಿ ಹೇಳಿದ್ದಾರೆ. ಸಂವಿಧಾನದ ಕಾರ್ಯದ ನಿರ್ವಹಣೆಯ ೬೦ ವರ್ಷಗಳ ಲೆಕ್ಕ ತೆಗೆದರೆ ಈ ನಿರ್ದೆಶಕ ತತ್ವಗಳನ್ನು ನಿರ್ಭಯವಾಗಿ ತುಳಿದು ಆಡಳಿತದ ನೀತಿ ನಿರೂಪಣೆ ಮಾಡಿರುವುದನ್ನು ಕಾಣುತ್ತೇವೆ. ಉದಾಹರಣೆಗೆ, ಜಾಗತೀಕರಣಕ್ಕೆ ಸಂಬಂಧಿಸಿದ ಇಡೀ ನೀತಿ ನಿರೂಪಣೆಯು ಸಂಪೂರ್ಣವಾಗಿ ಈ ನಿರ್ದೇಶಕ ತತ್ವಗಳ ಉಲ್ಲಂಘನೆ ಎಂದು ಪರಿಗಣಿಸಬಹುದು.

ಬೌದ್ಧ ಧರ್ಮಕ್ಕೆ ಮತಾಂತರ[ಬದಲಾಯಿಸಿ]

 • ಕೊನೆಯವರೆಗೂ ರಾಜ್ಯಸಭೆಯ ಕಲಾಪಗಳಲ್ಲಿ ಭಾಗವಹಿಸುತ್ತಿದ್ದರೂ , ಅಂಬೇಡ್ಕರರ ಶಕ್ತಿ ೧೯೫೨ರ ನಂತರ ಬೇರೆಯೇ ವಿಷಯಗಳಲ್ಲಿ ಹೆಚ್ಚು ಹೆಚ್ಚು ವ್ಯಯವಾಗತೊಡಗಿತು. ೧೯೩೫ರ ದಲಿತ ಸಮ್ಮೇಳನದಲ್ಲಿ (ಡಿಪ್ರೆಸ್ಡ್ ಕ್ಲಾಸಸ್ ಕಾನ್ಫರೆನ್ಸ್), “ನಾನೊಬ್ಬ ಹಿಂದೂವಾಗಿ ಹುಟ್ಟಿದ್ದರೂ, ಹಿಂದೂವಾಗಿಯೇ ಸಾಯಲಾರೆ” ಎಂದು ಘೋಷಿಸಿ, ಅಸ್ಪೃಶ್ಯರನ್ನು ಹಿಂದುವೆಂದು ಒಪ್ಪಿಕೊಂಡಿರದ ಹಿಂದೂಸಮಾಜಕ್ಕೆ/ಹಿಂದೂಸ್ತಾನಕ್ಕೆ ಆಘಾತ ಉಂಟು ಮಾಡಿದರು.
 • ಅಂಬೇಡ್ಕರ್, ಆಗಿನಿಂದಲೇ ಮತಾಂತರದ ಬಗ್ಗೆ ಗಂಭೀರ ಚಿಂತನೆ ನಡೆಸಿ, ಅಸ್ಪೃಶ್ಯರಿಗೆ ಹಿಂದೂಧರ್ಮ ದಲ್ಲಿ ಏಳಿಗೆಯಿಲ್ಲವಾದ್ದರಿಂದ ಮತಾಂತರ ಅನಿವಾರ್ಯ, ಹಾಗೂ ಬೌದ್ಧಧರ್ಮ ಮತಾಂತರಕ್ಕೆ ಅತ್ಯಂತ ಸೂಕ್ತವಾದದ್ದು ಎಂಬ ನಿರ್ಣಯಕ್ಕೆ ಬಂದರು.ಕೊಲಂಬೋದ ಯಂಗ್ ಮೆನ್ಸ್ ಬುದ್ಧಿಸ್ಟ್ ಅಸೋಸಿಯೇಷನ್ ಸಂಸ್ಥೆಯ ಆಹ್ವಾನದ ಮೇಲೆ ೧೯೫೦ರಲ್ಲಿ ಶ್ರೀಲಂಕಾ ಪ್ರಯಾಣ ಬೆಳೆಸಿದರು.
 • ಅಲ್ಲಿನ ಕ್ಯಾಂಡಿಯಲ್ಲಿ ವಿಶ್ವ ಬೌದ್ಧ ಸಮಾವೇಶದಲ್ಲಿ (ವರ್ಲ್ಡ್ ಫೆಲೋಶಿಪ್ ಆಫ್ ಬುದ್ಧಿಸ್ಟ್ಸ್) ಭಾಷಣ ಮಾಡಿದ ಅಂಬೇಡ್ಕರ್, ಶ್ರೀಲಂಕಾದ ಅಸ್ಪೃಶ್ಯರಿಗೆ ಬೌದ್ಧಧರ್ಮವನ್ನು ಆಲಂಗಿಸಲು ಕರೆಕೊಟ್ಟರು. ಪುರಾತನ ಭಾರತದಲ್ಲಿ ಸ್ತ್ರೀಯರ ಸ್ಥಾನಮಾನಗಳು ಕಡಿಮೆಯಾಗಲು ಗೌತಮ ಬುದ್ಧನೇ ಕಾರಣ ಎಂಬ ಆರೋಪಕ್ಕೆ ಪ್ರತಿಯಾಗಿ, ಬುದ್ಧನನ್ನು ಸಮರ್ಥಿಸಿ ೧೯೫೧ರಲ್ಲಿ ಲೇಖನವನ್ನು ಬರೆದರು.
 • ಅದೇ ವರ್ಷ, “ಬೌದ್ಧ ಉಪಾಸನಾ ಪಥ” ಎಂಬ ಹೆಸರಿನ ಬೌದ್ಧ ಧರ್ಮೀಯ ಗದ್ಯದ ಸಂಕಲನವನ್ನು ಹೊರತಂದರು. ೧೯೫೪ರಲ್ಲಿ ಅಂಬೇಡ್ಕರ್ ಬರ್ಮಾ ದೇಶವನ್ನು ಎರಡು ಬಾರಿ ಸಂದರ್ಶಿಸಿದರು. ವಿಶ್ವ ಬೌದ್ಧ ಸಮಾವೇಶದಲ್ಲಿ (ವರ್ಲ್ಡ್ ಫೆಲೋಶಿಪ್ ಆಫ್ ಬುದ್ಧಿಸ್ಟ್ಸ್) ಮೂರನೆಯ ಸಮ್ಮೇಳನದಲ್ಲಿ ಭಾಗವಹಿಸುವುದಕ್ಕಾಗಿ ಎರಡನೆಯ ಬಾರಿ ಭೇಟಿ ಮಾಡಿದರು.
 • ಭಾರತೀಯ ಬೌದ್ಧ ಮಹಾಸಭಾವನ್ನು (ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ) ಸ್ಥಾಪಿಸಿ, ಪುಣೆಯ ಸಮೀಪದ ದೇಹು ರೋಡ್ ನ ದೇವಾಲಯವೊಂದರಲ್ಲಿ ಗೌತಮ ಬುದ್ಧನ ಪ್ರತಿಮೆಯನ್ನು ೧೯೫೪ರ ಡಿಸೆಂಬರ್ ೨೫ರಂದು ಪ್ರತಿಷ್ಠಾಪಿಸಿದರು. ಆ ಸಂದರ್ಭದಲ್ಲಿ ನೆರೆದಿದ್ದ ಸಹಸ್ರಾರು ಅಸ್ಪೃಶ್ಯ ಜನಾಂಗದ ಸಭಿಕರೆದುರಿನಲ್ಲಿ ಬೌದ್ಧ ಧರ್ಮವನ್ನು ಭಾರತದ ಎಲ್ಲೆಡೆ ಹರಡುವುದಕ್ಕೆ ತನ್ನ ಉಳಿದ ಜೀವನವನ್ನು ಮೀಸಲಾಗಿಡುವುದಾಗಿ ಘೋಷಿಸಿದರು.
 • ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಬೌದ್ಧ ಧರ್ಮದ ಸಾರಸಂಗ್ರಹವನ್ನು ಬರೆದು ಪ್ರಕಟಿಸುವುದಾಗಿಯೂ ಅವರು ಈ ಸಭೆಯಲ್ಲಿ ನಿರ್ಣಯಿಸಿದರು. ಅದರ ಪ್ರಕಾರವೇ “ಬುದ್ಧ ಮತ್ತು ಅವರ ಧಮ್ಮ” (ಬುದ್ಧ ಅಂಡ್ ಹಿಸ್ ಧಮ್ಮ ) ಎಂಬ ಕೃತಿಯನ್ನು ಫೆಬ್ರುವರಿ ೧೯೫೬ರಲ್ಲಿ ಪೂರ್ಣಗೊಳಿಸಿದರು. ಇದಾದ ಸ್ವಲ್ಪ ಕಾಲದಲ್ಲಿಯೇ, ತಾವು ಅದೇ ವರ್ಷದ ಅಕ್ಟೋಬರಿನಲ್ಲಿ ಮತಾಂತರ ಗೊಳ್ಳುವುದಾಗಿ ಪ್ರಕಟಿಸಿದರು.
 • ನಾಗಪುರದಲ್ಲಿ ಈ ಕಾರ್ಯಕ್ರಮಕ್ಕೆ ವ್ಯವಸ್ಥೆಯಾಯಿತು.೧೯೫೬ರ ಅಕ್ಟೋಬರ್ ೧೪ರಂದು, ಬುದ್ಧ ಭಿಕ್ಷುವಿನಿಂದ ಸಾಂಪ್ರದಾಯಿಕ ದೀಕ್ಷೆ ಸ್ವೀಕರಿಸಿದ ಅಂಬೇಡ್ಕರ್, ತಮ್ಮ ಕರೆಗೆ ಸ್ಪಂದಿಸಿ ನಾಗಪುರಕ್ಕೆ ಬಂದಿದ್ದ ಸ್ತ್ರೀ ಪುರುಷ ಹಾಗೂ ಮಕ್ಕಳನ್ನೊಳಗೊಂಡ ೩,೮೦,೦೦೦ ಜನಸಮೂಹಕ್ಕೆ ತಾವೇ ದೀಕ್ಷೆ ಕೊಟ್ಟರು. ನಾಗಪುರ ಹಾಗೂ ಚಂದಾದಲ್ಲಿ ಇನ್ನೂ ಕೆಲವು ಇಂಥಾ ಮತಾಂತರ ಸಮಾರಂಭಗಳನ್ನು ನೆರವೇರಿಸಿ ಅಂಬೇಡ್ಕರ್ ದಿಲ್ಲಿಗೆ ಮರಳಿದರು.
 • ಕೆಲ ವಾರಗಳ ನಂತರ ನೇಪಾಳಕ್ಕೆ ತೆರಳಿ, ಅಲ್ಲಿ ವಿಶ್ವ ಬೌದ್ಧ ಸಮಾವೇಶದ ನಾಲ್ಕನೆಯ ಸಮ್ಮೇಳನದಲ್ಲಿ ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್ ಎಂಬ ವಿಷಯವಾಗಿ ಭಾಷಣ ಮಾಡಿದರು. ದಿಲ್ಲಿಗೆ ಮರಳುವಾಗ ದಾರಿಯಲ್ಲಿ ಬನಾರಸ್ ಹಾಗು ಬುದ್ಧ ಮೋಕ್ಷ ಪ್ರಾಪ್ತಿಹೊಂದಿದ ಕುಶೀನರ ಎಂಬಲ್ಲಿ ನಿಂತು ಭಾಷಣಗಳನ್ನು ಮಾಡಿದರು. ದಿಲ್ಲಿಗೆ ವಾಪಸಾದ ಮೇಲೆ ಅನೇಕ ಬೌದ್ಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
 • ರಾಜ್ಯಸಭೆಯ ಕಲಾಪಗಳಲ್ಲಿ ಭಾಗವಹಿಸಿ, ತಮ್ಮ ಕೃತಿ “ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್” ಪುಸ್ತಕದ ಕೊನೆಯ ಅಧ್ಯಾಯವನ್ನು ಬರೆದು ಮುಗಿಸಿದರು.೧೯೫೬ಡಿಸೆಂಬರ್ ೦೬ನೆಯ ತಾರೀಖು ಅಂಬೇಡ್ಕರ್ ಇಹಲೋಕ ವ್ಯಾಪಾರ ಮುಗಿಸಿದರು. ಅಂಬೇಡ್ಕರ್ ಬೌದ್ಧರಾದ ಮೇಲೆ, ಕೇವಲ ಏಳು ವಾರ ಮಾತ್ರ ಬದುಕಿದ್ದರು.
 • ಆ ಅಲ್ಪಕಾಲಾವಧಿಯಲ್ಲಿ ಬೌದ್ಧಧರ್ಮದ ಪ್ರಚಾರಕ್ಕಾಗಿ ಅವರು ಮಾಡಿದಷ್ಟು ಕಾರ್ಯವನ್ನು, ಅಶೋಕನನ್ನು ಬಿಟ್ಟರೆ, ಬಹುಶ: ಬೇರ್ಯಾರೂ ಮಾಡಿಲ್ಲ.ಅವರ ಮರಣದ ಹೊತ್ತಿಗಾಗಲೇ ಏಳೂವರೆ ಲಕ್ಷಕ್ಕೂ ಹೆಚ್ಚು ಮಂದಿ ಮತಾಂತರಗೊಂಡಿದ್ದರಷ್ಟೇ ಅಲ್ಲ, ಈ ಮಹಾನ್ ನಾಯಕನ ಹಠಾತ್ ನಿಧನದಿಂದ ಅನುಯಾಯಿಗಳಲ್ಲಿ ಅನಿಶ್ಚಿತತೆ ಮತ್ತು ಗೊಂದಲ ಉಂಟಾದರೂ ಸಹ, ಅವರ ಮರಣದ ಕೆಲ ತಿಂಗಳುಗಳಲ್ಲಿ ಇನ್ನೂ ಅನೇಕ ಲಕ್ಷ ಜನ ಬೌದ್ಧಮತೀಯರಾದರು.
 • ಅಂಬೇಡ್ಕರರ ಮಹಾಕೃತಿ ಎಂದು ಪರಿಗಣಿಸಲಾದ “ಬುದ್ಧ ಅಂಡ್ ಹಿಸ್ ಧಮ್ಮ” ವನ್ನು, ಅವರು ತೀರಿ ಕೊಂಡ ಸುಮಾರು ಒಂದು ವರ್ಷದ ನಂತರ , ೧೯೫೭ ನವೆಂಬರ್ ನಲ್ಲಿ ಜನ ಶಿಕ್ಷಣ ಸಮಾಜದ ವತಿಯಿಂದ ಪ್ರಕಟಿಸಲಾಯಿತು.

ಬೌದ್ಧಧರ್ಮಕ್ಕೆ ಸೇರುವಾಗ ಮಾಡಿದ ಪ್ರತಿಜ್ಞೆ[ಬದಲಾಯಿಸಿ]

 • ಅಂಬೇಡ್ಕರ್ ಮತ್ತು ಅವರ ಅನುಯಾಯಿಗಳು ಕೈಗೊಂಡ ಪ್ರಮಾಣ ಹೀಗಿತ್ತು:
 • ‘ನಾನು ಅಸ್ಪೃಶ್ಯತೆ ಆಚರಿಸುವುದಿಲ್ಲ ಮತ್ತು ಎಲ್ಲ ಮನುಷ್ಯರನ್ನು ಸಮಾನವಾಗಿ ಕಾಣುತ್ತೇನೆ’.
 • ‘ಕೊಲ್ಲುವುದಿಲ್ಲ, ಕದಿಯುವುದಿಲ್ಲ, ತಪ್ಪಾದ ಲೈಂಗಿಕ ವರ್ತನೆ ತೋರುವುದಿಲ್ಲ, ಮದ್ಯ ಕುಡಿಯುವುದಿಲ್ಲ ಮತ್ತು ಸುಳ್ಳು ಹೇಳುವುದಿಲ್ಲ ಎಂಬ ಪಂಚಶೀಲ ತತ್ವಗಳನ್ನು ಅನುಸರಿಸುತ್ತೇನೆ’.
 • ‘ಜ್ಞಾನ, ಸಹಾನುಭೂತಿ ಮತ್ತು ಕರ್ತವ್ಯದ ಮೂರು ಪ್ರಮುಖ ತತ್ವಗಳ ಆಧಾರದಲ್ಲಿ ನೆಲೆಯಾಗಿರುವ ಬೌದ್ಧ ಧರ್ಮ ಮಾತ್ರ ನಿಜವಾದ ಧರ್ಮ ಎಂದು ನಾನು ನಂಬಿದ್ದೇನೆ. ಹಾಗಾಗಿಯೇ ಹಿಂದೂ ಧರ್ಮವನ್ನು ತೊರೆದು ಬೌದ್ಧ ಧರ್ಮವನ್ನು ಅಪ್ಪಿಕೊಳ್ಳುವ ಮೂಲಕ ಹೊಸ ಹುಟ್ಟು ಪಡೆದುಕೊಂಡಿದ್ದೇನೆ’.[೬]

ಸ್ಮಾರಕ[ಬದಲಾಯಿಸಿ]

 • ಅಂಬೇಡ್ಕರ್ ದಿಲ್ಲಿಗೆ ವಸತಿ ಬದಲಾಯಿಸಿದ ಮೇಲೆ , ಬಹಳಷ್ಟು ಕಾಲ ಜೀವಿಸಿದ ಹಾಗೂ ಕೊನೆಯುಸಿರೆಳೆದ 26, ಆಲಿಪುರ ರಸ್ತೆಯ ಮನೆಯನ್ನು ಅಂಬೇಡ್ಕರ್ ಸ್ಮಾರಕವಾಗಿ ಕಾದಿಡಲಾಗಿದೆ ( ಪೂರ್ಣ ವಿಳಾಸ: 26,ಆಲಿಪುರ ರಸ್ತೆ, ಐಪಿ ಕಾಲೇಜಿನ ಹತ್ತಿರ, ಸಿವಿಲ್ ಲೈನ್ಸ್, ನವದೆಹಲಿ- 110 054).
 • ದಲಿತ ಸಂಘಟನೆಗಳು ಈ ಸ್ಮಾರಕಕ್ಕಾಗಿ ಸಾಕಷ್ಟು ಹೋರಾಟ ಮಾಡಿದ ಮೇಲೆ, ಸರಕಾರ ಈ ಮನೆಯನ್ನು ಅದರ ಮಾಲೀಕರಾದ ಜಿಂದಾಲ್ ಮನೆತನದವರಿಂದ ಪಡೆದುಕೊಂಡು ಸ್ಮಾರಕವನ್ನಾಗಿ ಪರಿವರ್ತಿಸಿತು.ಅವರ ಜನ್ಮದಿನವನ್ನು ಅಂಬೇಡ್ಕರ್ ಜಯಂತಿ ಎಂದು ರಾಷ್ಟ್ರೀಯ ರಜಾದಿನವಾಗಿ ಆಚರಿಸಲಾಗುತ್ತಿದೆ. ಅವರ ಅನೇಕ ಅಭಿಮಾನಿಗಳು ಆದರದಿಂದ ಅವರನ್ನು “ಬಾಬಾಸಾಹೇಬ್” ಎಂದು ಸಂಬೋಧಿಸುತ್ತಾರೆ.
 • ಅಂಬೇಡ್ಕರರ ಅನುಯಾಯಿಗಳು ಅವರ ಹೆಸರಿಂದ “ಜಯಭೀಮ” ಎಂದು ಪರಸ್ಪರ ಅಭಿವಾದಿಸುವುದುಂಟು. ಅಂಬೇಡ್ಕರ್ ಅವರಿಗೆ ಭಾರತದ ಪರಮೋಚ್ಛ ನಾಗರಿಕ ಪುರಸ್ಕಾರ “ಭಾರತ ರತ್ನ” ವನ್ನು ಮರಣೋತ್ತರವಾಗಿ ಪ್ರಧಾನ ಮಾಡಲಾಯಿತು.

ಪ್ರಶಸ್ತಿ, ಗೌರವ[ಬದಲಾಯಿಸಿ]

 1. ಕರಡು ಸಮಿತಿಯ ಅದ್ಯಕ್ಷರಾಗಿದ್ದ ಅಂಬೇಡ್ಕರ ಅವರು ಸಹಜವಾಗಿ 'ಸಂವಿಧಾನ ಶಿಲ್ಪಿ' ಎನಿಸಿದರು.
 2. ಅಂಬೇಡ್ಕರ್ ಅವರಿಗೆ ಭಾರತದ ಪರಮೋಚ್ಛ ನಾಗರಿಕ ಪುರಸ್ಕಾರ “ಭಾರತ ರತ್ನ” ವನ್ನು ಮರಣೋತ್ತರವಾಗಿ ಪ್ರಧಾನ ಮಾಡಲಾಯಿತು.
 3. ಸಂಸತ್ತು (ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿಯ) ಸದಸ್ಯರಾಗಿ
 4. ಅಂಬೇಡ್ಕರರನ್ನು ಆಗಿನ ಪ್ರಧಾನಿ ಜವಹರಲಾಲ್ ನೆಹರೂ ತಮ್ಮ ಮಂತ್ರಿಮಂಡಲದಲ್ಲಿ ಕಾನೂನು ಸಚಿವರಾಗುವಂತೆ ಆಹ್ವಾನಿಸಿದರು.
 5. ೧೯೫೨ ಜೂನ್ ೧೫ರಂದು ಕೊಲಂಬಿಯಾ ವಿಶ್ವವಿದ್ಯಾನಿಲಯವು ಅವರಿಗೆ ಕಾನೂನಿನ ಡಾಕ್ಟರೇಟ್(ಎಲ್‌ಎಲ್‍.ಡಿ) ಗೌರವ ಪದವಿ ಪ್ರದಾನ ಮಾಡಿತು.
 6. ೧೯೫೩, ಜನವರಿ ೧೨ರಂದು ಉಸ್ಮಾನಿಯಾ ವಿಶ್ವವಿದ್ಯಾನಿಲಯವು ಅವರಿಗೆ ಎಲ್‌ಎಲ್‍.ಡಿ ಗೌರವ ಪದವಿ ಕೊಟ್ಟು ಪುರಸ್ಕರಿಸಿತು.
 7. ೨೦೧೫- ವಿಶ್ವರತ್ನ ಪ್ರಶಸ್ತಿ-ಕೊಲಂಬಿಯ ವಿಶ್ವವಿದ್ಯಾನಿಲಯದಿಂದ (ಮರಣೋತ್ತರ)

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

References[ಬದಲಾಯಿಸಿ]

Further reading[ಬದಲಾಯಿಸಿ]

 • Arun Shourie: "Worshipping False Gods: Ambedkar and the Facts that have Been Erased", Publisher: Rupa Publications. (2005)
 • Michael, S.M. (1999). Untouchable, Dalits in Modern India. Lynne Rienner Publishers. ISBN 978-1-55587-697-5. 
 • Beltz, Johannes; Jondhale, S. (eds.). Reconstructing the World: B.R. Ambedkar and Buddhism in India. New Delhi: Oxford University Press. 
 • Sangharakshita, Urgyen. Ambedkar and Buddhism. ISBN 0-904766-28-4.  PDF
 • Jaffrelot, Christophe (2004). Ambedkar and Untouchability. Analysing and Fighting Caste. New York: Columbia University Press. 
 • Omvedt, Gail. Ambedkar: Towards an Enlightened India. ISBN 0-670-04991-3. 
 • Gautam, C. (May 2000). Life of Babasaheb Ambedkar (Second ed.). London: Ambedkar Memorial Trust. 
 • Kuber, W. N. Dr. Ambedkar: A Critical Study. New Delhi: People's Publishing House. 
 • Bholay, Bhaskar Laxman (2001). Dr Dr. Baba Saheb Ambedkar: Anubhav Ani Athavani. Nagpur: Sahitya Akademi. 
 • Kasare, M. L. Economic Philosophy of Dr. B.R. Ambedkar. New Delhi: B. I. Publications. 
 • Ahir, D. C. The Legacy of Dr. Ambedkar. Delhi: B. R. Publishing. ISBN 81-7018-603-X. 
 • Ajnat, Surendra (1986). Ambedkar on Islam. Jalandhar: Buddhist Publ. 
 • Fernando, W. J. Basil (2000). Demoralisation and Hope: Creating the Social Foundation for Sustaining Democracy—A comparative study of N. F. S. Grundtvig (1783–1872) Denmark and B. R. Ambedkar (1881–1956) India. Hong Kong: AHRC Publication. ISBN 962-8314-08-4.