ವಿಷಯಕ್ಕೆ ಹೋಗು

ಕಶೇರುಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Vertebrates
Temporal range: Cambrian-Recent, 525–0 Ma
Individual organisms from each major vertebrate group. Clockwise, starting from top left:

Fire Salamander, Saltwater Crocodile, Southern Cassowary, Black-and-rufous Giant Elephant Shrew, Ocean Sunfish

Scientific classification e
ಕ್ಷೇತ್ರ: Eukaryota
ಸಾಮ್ರಾಜ್ಯ: Animalia
ವಿಭಾಗ: ಕಾರ್ಡೇಟಾ
ಏಕಮೂಲ ವರ್ಗ: ಆಲ್‍ಫ್ಯಾಕ್ಟೊರೀಸ್
ಉಪವಿಭಾಗ: Vertebrata
Cuvier, 1812
Simplified grouping (see text)

ಕಶೇರುಕ ಕಾರ್ಡೇಟ ವಿಭಾಗದ ಒಂದು ಉಪವಿಭಾಗ (ವರ್ಟಿಬ್ರೇಟ್). ಬೆನ್ನೆಲುಬಿರುವ ಎಲ್ಲ ಪ್ರಾಣಿಗಳನ್ನೂ ಇದರಲ್ಲಿ ಸೇರಿಸಲಾಗಿದೆ. ಕಶೇರುಕಗಳಲ್ಲಿ ಆದಿಕಾರ್ಡೇಟುಗಳ (ಎಂದರೆ ಕೆಳದರ್ಜೆಯ ಕಾರ್ಡೇಟುಗಳ) ಗುಣಗಳ ಜೊತೆಗೆ ಕೆಲವು ವಿಶಿಷ್ಟ ಗುಣಗಳೂ ಸೇರಿವೆ. ಕಾರ್ಡೇಟುಗಳ ಮೂರು ಪ್ರಮುಖ ಗುಣಗಳು ಹೀಗಿವೆ_ನೋಟೊಕಾರ್ಡ್ ಅಥವಾ ಮೂಲ ಕಶೇರುಸ್ತಂಭ, ಗಂಟಲು ಕುಹರದಿಂದಾದ ಜೋಡಿ ಕಿವಿರು ರಂಧ್ರಗಳು, ಬೆನ್ನಿನಕಡೆ ನಳಿಕೆಯಂತಿರುವ ನರಹುರಿ. ಕಶೇರುಕ ಉಪವಿಭಾಗದಲ್ಲಿ ಇರುವ ನಾನಾ ಜಾತಿಯ ಜೀವಿಗಳು ಆಂತರಿಕವಾಗಿಯೂ ಬಾಹ್ಯವಾಗಿಯೂ ಭಿನ್ನ ರಚನಾ ವೈವಿಧ್ಯಗಳಿಂದ ಕೂಡಿದ್ದರೂ (ಸೈಕ್ಲೊಸ್ಟೊಮ್ಯಾಟ ವರ್ಗದಿಂದ ಹಿಡಿದು ಸ್ತನಿಗಳವರೆಗೆ ಈ ಜೀವಿಗಳಲ್ಲಿ ರಚನಾವೈವಿಧ್ಯವನ್ನು ನೋಡಬಹುದು). ಅವೆಲ್ಲವುಗಳಿಗೂ ಸಾಮಾನ್ಯವಾದ ಕೆಲವು ಮೂಲಭೂತ ಲಕ್ಷಣಗಳು ಇವೆ. ಈ ಆಧಾರದ ಮೇಲೆ ಕಶೇರುಕಗಳನ್ನು ವರ್ಗೀಕರಿಸಲಾಗಿದೆ.

ಲಕ್ಷಣಗಳು

[ಬದಲಾಯಿಸಿ]
  • ಒಳ ಹಾಗೂ ಹೊರ ಅಸ್ಥಿರಚನೆ
  • ಕಶೇರುಸ್ತಂಭ
  • ಮಸ್ತಕ
  • ಸೆಫಲೈಸೇಷನ್
  • ಮೇಲು ಮತ್ತು ತಳಭಾಗದ ನರಮೂಲಗಳು
  • ಅನುವೇದನ ನರಮಂಡಲ
  • ಪಿಟ್ಯೂಟರಿ ಮತ್ತು ಪೀನಿಯಲ್ ಅಂಗಗಳು
  • ಎದೆಯ ಭಾಗದಲ್ಲಿನ ಕೋಣೆಗಳಿಂದಾದ ಹೃದಯ
  • ಹೆಪ್ಯಾಟಿಕ್ ಪೋರ್ಟಲ್ ರಕ್ತ ಪರಿಚಲನೆ
  • ಕೆಂಪುರಕ್ತ ಕೋಶಗಳು
  • ಚಲನಾಂಗಗಳು
  • ಗುದದ್ವಾರದಿಂದ ಹಿಂದಿರುವ ಬಾಲ
  • ನಿರ್ನಾಳ ಗ್ರಂಥಿಗಳು.

ಕಶೇರುಕಗಳ ಐದು ವಿಧಗಳು

[ಬದಲಾಯಿಸಿ]

ಪ್ರಾಣಿಗಳನ್ನು ಕಶೇರುಕಗಳು ಮತ್ತು ಅಕಶೇರುಕಗಳು ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ.ಬೆನ್ನುಮೂಳೆ ಹೊಂದಿರುವ ಪ್ರಾಣಿಗಳನ್ನು ಕಶೇರುಕಗಳೆಂದೂ, ಬೆನ್ನುಮೂಳೆ ಇಲ್ಲದ ಪ್ರಾಣಿಗಳನ್ನು ಅಕಶೇರುಕಗಳೆಂದೂ ಕರೆಯುತ್ತಾರೆ. ಕಶೇರುಕಗಳನ್ನು ಅವುಗಳ ಆವಾಸಸ್ಥಾನ,ಆಹಾರ ಮತ್ತು ಅವುಗಳ ಅಂಗರಚನೆಗಳಿಗೆ ಅನುಗುಣವಾಗಿ ಐದು ಭಾಗಗಳಾಗಿ ವಿಂಗಡಿಸಲಾಗಿದ್ದು, ಅವುಗಳೆಂದರೆ ಮೀನುಗಳು, ಉಭಯವಾಸಿಗಳು, ಸರೀಸೃಪಗಳು,ಪಕ್ಷಿಗಳು ಮತ್ತು ಸಸ್ತನಿಗಳು.

ಮೀನುಗಳು

[ಬದಲಾಯಿಸಿ]
ಮೀನು

ಮೀನುಗಳಲ್ಲಿ 5 ಜೊತೆ ಕಿವಿರು ಸೀಳಿಕೆ ಇರುತ್ತವೆ. ಇದರ ಮೂಲಕ ಮೀನುಗಳು ಉಸಿರಾಡುತ್ತವೆ.ಮೀನುಗಳಲ್ಲಿ 3 ವಿಧ.ದವಡೆ ಇಲ್ಲದೆ ಮೀನು,ಮಧ್ವಸ್ಥಿಮೀನು ಮತ್ತು ಮೂಳೆ ಇರುವ ಮೀನು.

ವಿಶೇಷತೆಗಳು

[ಬದಲಾಯಿಸಿ]
  • ಮೀನಿನಲ್ಲಿರುವ ಸೆಫಾಲಿನ್ ಎಂಬ ಪ್ರೊಟೀನ್ ಮಾನವನಲ್ಲಿ ಪಕಶಕ್ತಿಯನ್ನು ಹೆಚ್ಚು ಮಾಡುತ್ತದೆ.
  • ಹಿಪೊಕ್ಯಾಂಪಸ್ ಎಂಬ ಮೀನಿನ ತಲೆ ಕುದುರೆಯಾಕಾರ ಇರುವುದರಿಂದ ಅದನ್ನು ಕಡಲ ಕುದುರೆ ಎನ್ನುತ್ತಾರೆ.
  • ಆಸ್ಟ್ರೇಷಿಯನ್ ಎಂಬ ಮೀನಿನ ತಲೆಯ ಮುಂಭಾಗದಲ್ಲಿ ಕಣ್ಣುಗಳ ಮುಂದೆ ಒಂದು ಜೊತೆ ಕೊಂಬುಗಳು ಇರುವುದರಿಂದ ಹಸು ಮೀನು ಎನ್ನುತ್ತಾರೆ.

ಉಭಯವಾಸಿಗಳು

[ಬದಲಾಯಿಸಿ]
ಕಪ್ಪೆ

ನೀರು ಮತ್ತು ಭೂಮಿ ಎರಡೂ ಕಡೆ ವಾಸಿಸುವ ಪ್ರಾಣಿಗಳನ್ನು ಉಭಯವಾಸಿಗಳು ಎನ್ನುವರು, ಉದಾಹರಣೆಗೆ ಕಪ್ಪೆ,ಸಾಲಮ್ಯಾಂಡರ್,ನ್ಯೂಟ್ ಮುಂತಾದವು.

ವಿಶೇಷತೆಗಳು

[ಬದಲಾಯಿಸಿ]
  • ಇವು ಶೀತರಕ್ತ ಪ್ರಾಣಿಗಳಾಗಿದ್ದು, ಚರ್ಮದಿಂದ ಉಸಿರಾಡುತ್ತವೆ.
  • ಉಭಯವಾಸಿಗಳಲ್ಲಿ ಪ್ರೊಲಾಕ್ಟಿನ್ ಎಂಬ ಹಾರ್ಮೋನ್ ಮೊಟ್ಟೆಯಿಂದ ಲಾರ್ವ ಮತ್ತು ವಯಸ್ಕ ಹಂತಕ್ಕೆ ರೂಪಾಂತರವಾಗುವುದನ್ನು ನಿಯಂತ್ರಿಸುತ್ತದೆ.
  • ಉಭಯವಾಸಿಗಳಿಗೆ ಅತ್ಯುತ್ತಮ ಉದಾಹರಣೆಯೆಂದರೆ ಕಪ್ಪೆ. ಮರಿಕಪ್ಪೆಯನ್ನು ಟ್ಯಾಡ್ ಪೋಲ್ ಎನ್ನುತ್ತಾರೆ.
  • ಜಗತ್ತಿನ ಅತಿ ದೊಡ್ಡ ಉಭಯವಾಸಿಯೆಂದರೆ ಚೀನಾದಲ್ಲಿ ಕಂಡು ಬರುವ ಸಾಲೆಮಾಂಡರ್ ಜಾತಿಗೆ ಸೇರಿದ ದಾವಿಡಿಯಾಸ್.

ಸರೀಸೃಪಗಳು

[ಬದಲಾಯಿಸಿ]
ಹಾವು

ಹರಿದಾಡುವ ಪ್ರಾಣಿಗಳೇ ಸರೀಸೃಪಗಳು. ಉದಾಹರಣೆಗೆ ಹಾವು,ಹಲ್ಲಿ,ಆಮೆ,ಮೊಸಳೆ ಇತ್ಯಾದಿ. ಇಂಗ್ಲೀಷಿನಲ್ಲಿ ಇವುಗಳನ್ನುರೆಪಟೈಲ್ಸ್ ಎಂದು ಕರೆಯುತ್ತಾರೆ. ಈ ಹೆಸರಿಟ್ಟಿದ್ದು ಆಸ್ಟ್ರೀಯಾದ ವಿಜ್ಞಾನಿ ಜೋಸಿಪುಸ್ ನಿಕೋಲಸ್ ಲಯುರೆನಟಿ.

ವಿಶೇಷತೆಗಳು

[ಬದಲಾಯಿಸಿ]
  • ಸರೀಸೃಪಗಳ ಅಧ್ಯಯನಕ್ಕೆ ಹರ್ಪಿಟಾಲಜಿ ಎಂದು ಹೆಸರು.
  • ಮೊಟ್ಟೆ ಇಡುವ ಸರೀಸೃಪಗಳನ್ನು ಓವಿಪರಸ್ ಎನ್ನುತ್ತಾರೆ.
  • ಹಾವಿನ ಪೊರೆಯು ಕ್ಯಾರಟಿನ್ ಎಂಬ ವಸ್ತುವನ್ನು ಹೊಂದಿರುತ್ತದೆ.
  • ಕಮಾಂಡೋ ಡ್ರಾಗನ್ ಎಂಬ ಹಲ್ಲಿ ಜಾತಿಯ ಸರೀಸೃಪವು ಅತಿ ಹೆಚ್ಚು ಕಾಲ ಬದುಕುತ್ತದೆ.
  • ಬ್ಲ್ಯಾಕ್ ಮ್ಯಾಂಬಾ ಎಂಬ ಹಾವು ಅತಿ ಹೆಚ್ಚು ವಿಷಪೂರಿತವಾಗಿದೆ.
  • ಬಣ್ಣ ಬದಲಿಸುವ ಸರೀಸೃಪ ಊಸರವಳ್ಳಿ.
  • ಉಪ್ಪು ನೀರಿನ ಮೊಸಳೆ ಅಥವಾ ಇಶ್ಚುರಿನ್ ಮೊಸಳೆಯು ಜೀವಂತವಾಗಿರುವ ಅತಿ ದೊಡ್ಡ ಸರೀಸೃಪವಾಗಿದ್ದು, ಭಾರತದ ಪಶ್ವಿಮ ಕರಾವಳಿ ಮತ್ತು ಆಸ್ಟ್ರೇಲಿಯಾದ ಉತ್ತರ ಭಾಗದಲ್ಲಿ ಕಂಡು ಬರುತ್ತದೆ.

ಇನ್ನು ಇತರೆ ಉದಾಹರಣೆಗಳು: ಆಮೆ, ಉಡ, ಕೇರೆಹಾವು, ಹಲ್ಲಿ.

ಪಕ್ಷಿಗಳು

[ಬದಲಾಯಿಸಿ]
ಬ್ಲ್ಯಾಕ್ ಲೋರಿ (Chalcopsitta atra), Gembira Loka Zoo, Yogyakarta 2015-03-15 03
ಕೊಕ್ಕರೆ

ಪಕ್ಷಿಗಳಲ್ಲಿ ಮಾಂಸಹಾರಿ ಮತ್ತು ಸಸ್ಯಹಾರಿ ಪಕ್ಷಿಗಳಿವೆ. ಪಕ್ಷಿಗಳ ಶ್ವಾಸನಾಳದ ತಳಭಾಗದಲ್ಲಿ ಇರುವ ಸಿರಿಕ್ಸ್ ಎಂಬ ಧ್ವನಿಪೆಟ್ಟಿಗೆಗಳ ಮೂಲಕ ಧ್ವನಿ ಉಂಟಾಗುತ್ತದೆ.ಪಕ್ಷಿಗಳ ದೇಹದ ಉಷ್ಣತೆ ಮಾನವನಿಗಿಂತಲೂ ಹೆಚ್ಚಾಗಿದ್ದು, ಇವುಗಳನ್ನು ಬಿಸಿರಕ್ತ ಪ್ರಾಣಿಗಳೆಂದು ಕರೆಯುತ್ತಾರೆ. ಪಕ್ಷಿಗಳು ಎಂದ ತಕ್ಷಣ ರೆಕ್ಕೆಗಳಿರುವುದು ಸಹಜ.ಆದರೆ, ನ್ಯೂಜಿಲೆಂಡ್ ನಲ್ಲಿ ಕಂಡುಬರುವ ಮೋಯಾ ಎಂಬ ಪಕ್ಷಿಗಳು ರೆಕ್ಕೆಗಳನ್ನು ಹೊಂದಿಲ್ಲ. ಇವು ಜಗತ್ತಿನಲ್ಲೇ ರೆಕ್ಕೆ ಹೊಂದಿಲ್ಲದ ಏಕೈಕ ಪಕ್ಷಿ.

ಕೆಲವು ಇತರ ಉದಾಹರಣೆಗಳು: ಚೋರೆ ಹಕ್ಕಿ, ಜಾತಕ ಹಕ್ಕಿ, ಚುಕ್ಕೆ ರಾಟವಳ, ಚಿತ್ರ ಪಕ್ಷಿ.

ವಿಶೇಷತೆಗಳು

[ಬದಲಾಯಿಸಿ]

ಸಸ್ತನಿಗಳು

[ಬದಲಾಯಿಸಿ]
ಆನೆ

ಮರಿ ಹಾಕಿ ಹಾಲುಣಿಸುವ ಜೀವ ಜಾತಿಗಳೇ ಸಸ್ತನಿಗಳು. ಬುದ್ಧಿವಂತ ಮತ್ತು ಮೇಲ್ವರ್ಗದ ಸಸ್ತನಿ ಎಂದರೆ ಅದು ಮನುಷ್ಯ. ಸಸ್ತನಿಗಳಲ್ಲಿ ತಾಯಿಯ ದೇಹಕ್ಕೂ ಮತ್ತು ಭ್ರೂಣಕ್ಕೂ ಇರುವ ಸಂಬಂಧವನ್ನು ಪ್ಲಾಸೆಂಟ್ ಎಂಬ ಅಂಗವು ಏರ್ಪಡಿಸುತ್ತದೆ.

ವಿಶೇಷತೆಗಳು

[ಬದಲಾಯಿಸಿ]
  • ಮೊಟ್ಟೆ ಇಟ್ಟು ಮರಿ ಮಾಡುವ ಸಸ್ತನಿಯನ್ನು ಮಾನೋಟ್ರಿಮ್ ಎಂದು ಕರೆಯುತ್ತಾರೆ.
  • ಅತ್ಯಂತ ವೇಗವಾಗಿ ಚಲಿಸುವ ಸಸ್ತನಿ-ಚಿರತೆ. ಇದು ಗಂಟೆಗೆ 120 ಕಿ.ಮೀ.ವೇಗದಲ್ಲಿ ಚಲಿಸುತ್ತದೆ.
  • ಅತಿ ಚಿಕ್ಕ ಸಸ್ತನಿ- ಪಿಗ್ಮಿ ಶ್ರೂ. ಇದರ ಅಂದಾಜು ತೂಕ 1.8ಗ್ರಾಂನಿಂದ 2.5ಗ್ರಾಂ.
  • ಅತಿ ದೊಡ್ಡ ಸಸ್ತನಿ- ನೀಲಿ ತಿಮಿಂಗಿಲ. ಇದರ ಉದ್ದ ಸುಮಾರು 30ಮೀ. ಮತ್ತು ತೂಕ ಅಂದಾಜು 200 ಮೆಟ್ರಿಕ್ ಟನ್.
  • ಹಾರಾಡುವ ಸಸ್ತನಿ-ಬಾವಲಿ.
  • ಸ್ಲಾತ್ ಎಂಬ ಸಸ್ತನಿಯು ತಲೆಕೆಳಗಾಗಿ ನಡೆಯುತ್ತದೆ ಮತ್ತು ನಿದ್ರೆ ಮಾಡುತ್ತದೆ.
  • ಬೀವರ್ ಎಂಬ ಸಸ್ತನಿಯನ್ನು ಪ್ರಾಣಿ ಪ್ರಪಂಚದ ವಾಸ್ತುಶಿಲ್ಪಿ ಎನ್ನುತ್ತಾರೆ.
  • ಕಾಂಗರೂ, ಕೊಯಾಲ ಮುಂತಾದ ಹೆಣ್ಣು ಪ್ರಾಣಿಗಳು ಚೀಲದೊಳಗೆ ಮರಿಯನ್ನಿಡುತ್ತವೆ ಮತ್ತುಆನೆ, ಮಾನವ,ಗೊರಿಲ್ಲ ಮುಂತಾದವುಗಳು ಕರುಳಬಳ್ಳಿ ಹೊಂದಿರುವ ಸಸ್ತನಿಗಳಾಗಿದ್ದು, ದೇಹದೊಳಗೆ ಮರಿಯನ್ನು ಬೆಳೆಸುತ್ತವೆ.
  • ಮೊಟ್ಟೆ ಇಡುವ ಸಸ್ತನಿಗಳು;ಪ್ಲಾಟಿಪಸ್,ಯಕಿಡ್ನಾ ಮುಂತಾದವು.

ಕೆಲವು ಉದಾಹರಣೆಗಳು: ಕಾಡು ಕೋಣ, ಚಿಪ್ಪು ಹಂದಿ, ಡೊಲ್ಪಿನ್, ಝಿಬ್ರಾ

ಅಸ್ಥಿರಚನೆ

[ಬದಲಾಯಿಸಿ]
Fossilized skeleton of Diplodocus carnegii, showing an extreme example of the backbone that characterizes the vertebrates. Exhibited at the Museum für Naturkunde (Museum of Natural Science), Berlin.

ಇದು ಮೃದ್ವಸ್ಥಿಯಿಂದಾಗಿರಬಹುದು ಅಥವಾ ಮೂಳೆಯಿಂದಾಗಿರಬಹುದು. ಇವೆರಡೂ ಸೇರಿಯೂ ಆಗಿರಬಹುದು. ಕಶೇರುಕಗಳ ಬೆಳೆವಣಿಗೆಯ ಪ್ರಥಮಾವಸ್ಥೆಯಲ್ಲಿ ಕಶೇರುಸ್ತಂಭ ನೋಟೊಕಾರ್ಡ್ ಅವಸ್ಥೆಯಿಂದಲೇ ಪ್ರಾರಂಭವಾಗುತ್ತದೆ. ಜೀವಿ ಬೆಳೆದಂತೆ ಮೃದ್ವಸ್ಥಿಯಿಂದಾದ ಅಥವಾ ಮೂಳೆಯಿಂದಾದ ಕಶೇರುಸ್ತಂಭದ ಬೆಳೆವಣಿಗೆಯಾಗುತ್ತದೆ. ಹೀಗೆ ಕಶೇರುಸ್ತಂಭ ಬೆಳೆದಾಗ ನೋಟೊಕಾರ್ಡ್ ಕರಗಿಹೋಗುತ್ತದೆ. ಕಶೇರುಕಗಳಿಗೆ ಶರೀರದ ಮೇಲೆ ಶಲ್ಕಗಳು ಅಥವಾ ಚರ್ಮದಿಂದಲೇ ಉದ್ಭವಗೊಂಡ ತಟ್ಟೆಗಳಂಥ ರಚನೆಗಳು ಇರುತ್ತವೆ. ಈ ರೀತಿಯ ಹೊದಿಕೆ ಆದಿಕಶೇರುಕಗಳಲ್ಲಿ ಇತ್ತೆಂಬುದನ್ನು ಆಸ್ಟ್ರಕೋಡರ್ಮಿ ಎಂಬ ಪಳೆಯುಳಿಕೆಗಳು ಸ್ಪಷ್ಟಪಡಿಸಿವೆ. ಈ ಮೀನುಗಳ ಮೈಮೇಲೆ ಮೂಳೆಯಿಂದಾದ ತಟ್ಟೆಗಳಂಥ ಹೊದಿಕೆ ಇತ್ತು. ಇದು ಶರೀರದ ಮುಂದಿನ ಭಾಗದಲ್ಲಿ ಹೆಚ್ಚಾಗಿತ್ತು. ಅಸ್ಥಿ ಫಲಕಗಳು ಒಂದರೊಡನೊಂದು ಬೆಸೆದುಕೊಂಡಂತೆ ಜೋಡಿಸಿಕೊಂಡಿದ್ದುವು. ಹಿಂದಿದ್ದ ಕಶೇರುಕಗಳಲ್ಲಿ ಒಳ ಅಸ್ಥಿ ಹಾಗೂ ಹೊರ ಅಸ್ಥಿರಚನೆಗಳ ಬೆಳೆವಣಿಗೆ ಸಮನಾಗಿರುವುದು ಕಂಡುಬರುತ್ತದೆ. ಆದರೆ ಉಚ್ಚಮಟ್ಟದ ಇಂದಿನ ಕಶೇರುಕಗಳಲ್ಲಿ ಹೊರ ಅಸ್ಥಿ ಚರ್ಮದಿಂದ ಶರೀರದೊಳಕ್ಕೆ ಹೂತುಹೋಗಿ ಒಳ ಅಸ್ಥಿಯೊಡನೆ ಬೆರೆತುಹೋಯಿತೆಂದು ತಿಳಿದುಬರುತ್ತದೆ. ಇದರಿಂದಾಗಿ ಉಚ್ಚಮಟ್ಟದ ಕಶೇರುಕಗಳಲ್ಲಿ ಹೊರ ಅಸ್ಥಿರಚನೆಗಳಿಲ್ಲ.

ಕಶೇರುಸ್ತಂಭ

[ಬದಲಾಯಿಸಿ]

ಕಶೇರುಕಗಳ ಮೂಲ ಲಕ್ಷಣ ಕಶೇರುಸ್ತಂಭ. ಇದರಿಂದಾಗಿಯೇ ಕಶೇರುಕ ಎಂಬ ಹೆಸರು ಬಂದಿದೆ. ಅಕಶೇರುಕಗಳಲ್ಲಿ ಕಶೇರುಸ್ತಂಭ ಇಲ್ಲ. ಕೆಳ ದರ್ಜೆಯ ಕಾರ್ಡೇಟಗಳಲ್ಲಿಯೂ ಕಶೇರುಸ್ತಂಭವಿಲ್ಲ. ಇದಕ್ಕೆ ಬದಲಾಗಿ ಸೂಕ್ಷ್ಮ ಸರಳಿನಂಥ ನೋಟೊಕಾರ್ಡ್ ಇವುಗಳಲ್ಲಿದೆ. ನಿಮ್ನವರ್ಗದ ಕಶೇರುಕಗಳಾದ ಸೈಕ್ಲೊಸ್ಟೊಮ್ಯಾಟಗಳಲ್ಲಿ ಕಶೇರುಸ್ತಂಭದ ಜೊತೆಯಲ್ಲಿಯೇ ನಶಿಸಿಹೋಗಿರುವ ನೋಟೊಕಾರ್ಡನ್ನು ಕಾಣಬಹುದು. ಕಶೇರುಸ್ತಂಭ ತನ್ನ ಬೆಳೆವಣಿಗೆಯ ಪ್ರಥಮ ಹಂತದಲ್ಲಿ ಮಣಿಗಳಂಥ ಮೃದ್ವಸ್ಥಿ ಅಥವಾ ಮೂಳೆಗಳ ರಚನೆಯಂತೆ ಕಂಡುಬರುತ್ತದೆ. ಈ ಮಣಿಗಳು ಆ ಜೀವಿಯ ಖಂಡಗಳಿಗೆ ಅನುಗುಣವಾಗಿ ಒಂದರ ಹಿಂದೆ ಒಂದರಂತೆ ಜೋಡಿಕೊಂಡಿರುತ್ತವೆ. ಹೀಗೆ ಬೆಳೆಯುವ ಕಶೇರುಮಣಿಗಳು ಕೊನೆಗೆ ನೋಟೊಕಾರ್ಡಿನ ಬದಲಿನ ರಚನೆಯಾಗುತ್ತದೆ. ಅಂದರೆ ನೋಟೋಕಾರ್ಡ್ನ ಅಂಗಾಂಶ ಕಶೇರುಮಣಿಯ ರಚನೆಯೊಳಕ್ಕೆ ಸೇರಿಹೋಗುತ್ತದೆ. ಪ್ರತಿ ಕಶೇರುಮಣಿಯಲ್ಲಿಯೂ ಮೇಲುಗಡೆ ನರಹುರಿಯನ್ನು ರಕ್ಷಿಸುವ ಕಮಾನು ಮತ್ತು ಕೆಳಗಡೆ ರಕ್ತನಾಳದ ಪ್ರವಾಹಕ್ಕೆ ಬೇಕಾದ ಕಮಾನುಗಳು ಬೆಳೆಯುತ್ತವೆ. ಉನ್ನತಮಟ್ಟದ ಕಶೇರುಕಗಳಲ್ಲಿ ಕಮಾನುಗಳು ಕಶೇರುಮಣಿಯ ಮೂಲ ರಚನೆಯೊಡನೆ ಸೇರಿಹೋಗಿ ಕಶೇರುಮಣಿ ಗಟ್ಟಿಯಾದ ಘನವಸ್ತುವಿನಂತಾಗಲು ಸಹಾಯಮಾಡುತ್ತವೆ. ಕಶೇರುಮಣಿಗಳು ಒಂದರೊಡನೊಂದು ಕೀಲಿಸಿಕೊಂಡು ಕಶೇರುಸ್ತಂಭವಾಗುತ್ತದೆ. ಕಶೇರುಮಣಿಗಳ ಕೀಲುಗಳು ಕಶೇರುವಿನ ಚಲನೆಗೆ ಅನುಕೂಲ ಮಾಡಿಕೊಟ್ಟಿವೆ. ಕಶೇರುಕಗಳ ವಿವಿಧ ವರ್ಗ ಹಾಗೂ ಗಣಗಳಲ್ಲಿ ಕಶೇರುಮಣಿಗಳ ಆಕಾರದಲ್ಲಿ ಸ್ವಲ್ಪಮಟ್ಟಿಗೆ ವ್ಯತ್ಯಾಸಗಳಿವೆ.

ಮಸ್ತಕ

[ಬದಲಾಯಿಸಿ]

ಕಶೇರುಕಗಳಲ್ಲಿರುವ ಮಸ್ತಕ ದೇಹರಚನಾಶಾಸ್ತ್ರದ ದೃಷ್ಟಿಯಿಂದ ಮುಖ್ಯವಾದ ಭಾಗ. ಮಸ್ತಕವಿಲ್ಲದಿರುವ ಕಾರ್ಡೇಟಗಳೂ ಇವೆ. ಉದಾಹರಣೆಗೆ ಆಂಫಿಯಾಕ್ಸಸ್ ಜೀವಿಗೆ ನಿರ್ದಿಷ್ಟವಾಗಿ ಗುರುತಿಸಬಹುದಾದ ಮಸ್ತಕವಿಲ್ಲ. ಬೆಳೆವಣಿಗೆಯ ಹಂತದಲ್ಲಿ ಮಸ್ತಕ ಮಿದುಳಿನ ಮೇಲುಭಾಗದಲ್ಲಿಯೂ ಅಕ್ಕಪಕ್ಕಗಳಲ್ಲಿಯೂ ಮೃದ್ವಸ್ಥಿ ತಟ್ಟೆಗಳ ಮೂಲಕ ರೂಪುಗೊಳ್ಳುತ್ತದೆ. ತಟ್ಟೆಗಳು ಬೆಳೆದು ದೊಡ್ಡವುಗಳಾಗಿ ಒಂದರೊಡನೊಂದು ಬೆಸೆದುಕೊಳ್ಳುತ್ತವೆ. ಇದರಿಂದಾಗಿ ಜೀವಿಯ ಮುಖ್ಯ ಅಂಗವಾದ ಮಿದುಳಿಗೆ ರಕ್ಷಣೆ ದೊರಕುತ್ತದೆ. ಅಸ್ಥಿರಚನೆಗಳುಳ್ಳ ಕಶೇರುಕಗಳಲ್ಲಿ ತಲೆಯ ಮೇಲಿರುವ ಅಸ್ಥಿತಟ್ಟೆಗಳು ಒಳಪ್ರವೇಶಿಸಿ ಮೃದ್ವಸ್ಥಿ ತಟ್ಟೆಗಳೊಡನೆ ಸೇರಿಹೋಗಿ ಒಂದು ರೀತಿಯ ಸಂಕೀರ್ಣವಾದ ತಲೆಬುರುಡೆಯ ರಚನೆಗೆ ಕಾರಣವಾಗುತ್ತವೆ. ಉಚ್ಚಮಟ್ಟದ ಕಶೇರುಕಗಳಲ್ಲಿ ಮೃದ್ವಸ್ಥಿ ಮುಂದೆ ಬೆಳೆಯುವ ಅಸ್ಥಿರಚನೆಗಳಿಂದಾಗಿ ಮಾಯವಾಗುತ್ತದೆ. ಇಂಥ ತಲೆಬುರುಡೆಯ ರಚನೆ ಈ ಉಪವಿಭಾಗವನ್ನು ಬಿಟ್ಟರೆ ಇನ್ನಿತರ ಯಾವ ವಿಭಾಗದ ಪ್ರಾಣಿಗಳಲ್ಲಿಯೂ ಕಂಡುಬರುವುದಿಲ್ಲ.

ಸೆಫಲೈಸೇಶನ್

[ಬದಲಾಯಿಸಿ]

ಎಲ್ಲ ಕಶೇರುಕಗಳಲ್ಲಿಯೂ ಉನ್ನತವಾಗಿ ಬೆಳೆದಿರುವ ಶಿರ ಭಾಗವಿದೆ. ಇಲ್ಲಿ ಮುಖ್ಯ ಅಂಗವಾದ ಮಿದುಳಿದೆ. ಇದರ ಜೊತೆಗೆ ಸಂಕೀರ್ಣತರ ಜ್ಞಾನೇಂದ್ರಿಯಗಳೂ ಶಿರದಲ್ಲಿವೆ. ಇಂಥ ಸಂಕೀರ್ಣಾಂಗಗಳು ಕೆಳ ದರ್ಜೆಯ ಕಾರ್ಡೇಟಗಳಲ್ಲಿಲ್ಲ. ಕೆಳದರ್ಜೆಯ ಕಶೇರುಕಗಳಲ್ಲಿ ಶಿರದ ಭಾಗ ಸರಿಯಾಗಿ ರೂಪುಗೊಳ್ಳ ದಿರುವುದು ಕಂಡುಬರುವುದುಂಟು. ಆದರೆ ಮುಂದುವರಿದ ಕಶೇರುಕಗಳಲ್ಲಿ ಇದು ಪೂರ್ಣವಾಗಿ ರೂಪು ಗೊಂಡಿರುವುದು ಕಂಡುಬರುತ್ತದೆ. ಸೈಕ್ಲೊಸ್ಟೊಮ್ಯಾಟ ವರ್ಗದಿಂದ ಸಸ್ತನಿವರ್ಗದವರೆಗೆ ಶಿರದ ಬೆಳೆವಣಿಗೆಯನ್ನು ಪರಿಶೀಲಿಸಿದರೆ ಈ ಅಂಗ ಹೇಗೆ ವಿಕಾಸಗೊಂಡಿದೆ ಎಂಬುದು ಸ್ಪಷ್ಟವಾಗುತ್ತದೆ. ಇದರ ಗಾತ್ರ ಪ್ರತಿವರ್ಗದಲ್ಲಿಯೂ ಹೆಚ್ಚುತ್ತಾ ಹೋಗಿರುವುದನ್ನು ಇಲ್ಲಿ ನಾವು ಗಮನಿಸಬಹುದು. ಗಾತ್ರದ ಜೊತೆಗೆ ಇದರ ಸಂಕೀರ್ಣತೆಯೂ ಹೆಚ್ಚುತ್ತದೆ. ನರಮಂಡಲಕ್ಕೆ ಸಂಬಂಧಿಸಿದಂತೆ ಈ ಸಂಕೀರ್ಣತೆ ಇನ್ನೂ ಹೆಚ್ಚಿದೆ. ಇದರಿಂದಾಗಿ ಶಿರಕ್ಕೆ ಶರೀರದ ಇತರ ಭಾಗಗಳೆಲ್ಲಕ್ಕಿಂತಲೂ ಪ್ರಾಮುಖ್ಯ ಹೆಚ್ಚಿದೆ. ಆದ್ದರಿಂದ ಇದು ಶರೀರದ ಇತರ ಭಾಗಗಳ ಮೇಲೆ ತನ್ನ ಆಧಿಪತ್ಯವನ್ನು ಸ್ಥಾಪಿಸುತ್ತದೆ. ಶಿರ ತನ್ನ ಪ್ರಾಬಲ್ಯ ಹಾಗೂ ಸಂಕೀರ್ಣತೆಯಿಂದಾಗಿ ಇತರ ಅಂಗಗಳ ಮೇಲೆ ಹಿಡಿತ ಸ್ಥಾಪಿಸುವ ಈ ಕ್ರಿಯೆಗೆ ಸೆಫಲೈಸೇಶನ್ ಎಂದು ಹೆಸರು. ಕಶೇರುಕಗಳ ಶಿರದ ಬೆಳೆವಣಿಗೆ ಎಷ್ಟು ಖಂಡಗಳ ಮಿಲನದಿಂದಾಗುತ್ತದೆಂಬುದು ಇನ್ನೂ ಇತ್ಯರ್ಥವಾಗದ ವಿಷಯ. ಇದು ಎರಡು ಭಾಗಗಳಿಂದ ಬೆಳೆಯುತ್ತದೆ ಎಂದು ಡೆಬೀರ್ ಎಂಬ ವಿಜ್ಞಾನಿ ಅಭಿಪ್ರಾಯಪಡುತ್ತಾನೆ. ಈತನ ಪ್ರಕಾರ ಶಿರ ಎರಡು ಉಪಶಿರಗಳ ಒಟ್ಟುಗೂಡುವಿಕೆಯಿಂದಾಗಿದೆ. ಇವುಗಳಿಗೆ ನ್ಯೂರಲ್ ಶಿರ ಮತ್ತು ವಿಸರಲ್ ಶಿರಗಳೆಂದು ಹೆಸರು. ನ್ಯೂರಲ್ ಭಾಗ ಶಿರದ ಮೇಲು ಭಾಗವಾಗಿಯೂ ವಿಸರಲ್ ಭಾಗ ಶಿರದ ತಳಭಾಗವಾಗಿಯೂ ಬೆಳೆಯುತ್ತವೆ. ಇವುಗಳ ವಿಕಾಸವನ್ನು ಹಂತ ಹಂತವಾಗಿ ಪರಿಶೀಲಿಸಿದರೆ ನ್ಯೂರಲ್ ಶಿರಭಾಗ ಹಂತ ಹಂತವಾಗಿ ದೊಡ್ಡದಾಗುತ್ತ ಹೋಗಿದೆ; ಆದರೆ ವಿಸರಲ್ ಶಿರಭಾಗ ಹಂತಹಂತವಾಗಿ ನಶಿಸುತ್ತ ಬಂದಿದೆ ಎಂದು ತಿಳಿಯುವುದು. ಉಚ್ಚಮಟ್ಟದ ಕಶೇರುಗಳಲ್ಲಿ ನ್ಯೂರಲ್ ಶಿರವೇ ಶಿರದ ಪ್ರಮುಖ ಭಾಗ. ಕೆಳದರ್ಜೆಯ ಕಶೇರುಕಗಳಲ್ಲಿ ಇದು ನಾಲ್ಕು ಖಂಡಗಳಿಂದಾಗಿದೆ. ಶಾರ್ಕ್ ಮೀನಿನಲ್ಲಿ ಇದರಲ್ಲಿ ಏಳು ಸ್ತನಿಗಳಲ್ಲಿ ಈ ಶಿರಭಾಗ ಎಂಟು ಖಂಡಗಳಿಂದಾಗಿದೆ. ವಿಸರಲ್ ಶಿರದ ಖಂಡಗಳು ಸೈಕ್ಲೊಸ್ಟೊಮ್ಯಾಟದಲ್ಲಿ ಅತಿ ಹೆಚ್ಚಾಗಿವೆ. ಆದರೆ ಮುಂದಿನ ವರ್ಗಗಳಲ್ಲಿ ಈ ಖಂಡಗಳು ಕಡಿಮೆಯಾಗುತ್ತ ಹೋಗುತ್ತವೆ. ನೆಲವಾಸಿ-ಕಶೇರುಕಗಳಲ್ಲಿ ಕೊನೆಯ ಒಂದು ಖಂಡಮಾತ್ರ ಉಳಿಯುತ್ತದೆ.

ಮೇಲು ಹಾಗೂ ತಳಭಾಗದ ನರಮೂಲಗಳು

[ಬದಲಾಯಿಸಿ]

ಅಕಶೇರುಕ ಪ್ರಾಣಿಗಳಲ್ಲಿ ಪ್ರತಿಖಂಡದಲ್ಲಿಯೂ ಒಂದೊಂದು ಜೊತೆ ನರಗಳು ಮಿದುಳು ಬಳ್ಳಿಯಿಂದ ಹೊರಬರುತ್ತವೆ. ಆದರೆ ಕಶೇರುಕ ಮತ್ತು ಆಂಫಿಯಾಕ್ಸಸ್ ಜೀವಿಗಳಲ್ಲಿ ಪ್ರತಿಖಂಡದಲ್ಲಿಯೂ ಎರಡು ಜೊತೆ ನರಗಳು ಮಿದುಳುಬಳ್ಳಿಯಿಂದ ಹೊರಬರುತ್ತವೆ. ಈ ತಂಡಗಳು ನರ ಬಳ್ಳಿಯ ಮೇಲುಭಾಗದಿಂದ ಮತ್ತು ತಳಭಾಗದಿಂದ ಉದ್ಭವಿಸುತ್ತವೆ. ತಳಭಾಗದ ತಂಡ ಕೇವಲ ಪ್ರೇರಕ (ಮೋಟಾರ್) ನರಗಳಾಗಿ ಕೆಲಸಮಾಡುತ್ತವೆ. ಅಂದರೆ ಇವು ಮಿದುಳಿನಿಂದ ನರಪ್ರಬೇದನೆಗಳನ್ನು ಶರೀರದ ಇತರ ಭಾಗಗಳಾದ ಮಾಂಸಖಂಡಗಳು ಮತ್ತು ಗ್ರಂಥಿಗಳಿಗೆ ತಲುಪಿಸುತ್ತವೆ. ಮೇಲುಭಾಗದ ತಂಡ ಜ್ಞಾನವಾಹಿನಿ ಹಾಗೂ ಪ್ರೇರಕ ಕೆಲಸಗಳೆರಡನ್ನೂ ಮಾಡುತ್ತವೆ. ಆದ್ದರಿಂದ ಇವು ಮಿಶ್ರನರಗಳು. ಇವುಗಳ ಮೂಲದಲ್ಲಿ ನರಕೋಶಗಳು ಗುಂಪುಗೂಡಿದ್ದು ಗಂಟಿನಂತೆ ಕಾಣುತ್ತವೆ. ಈ ರಚನೆಗಳಿಗೆ ಗ್ಯಾಂಗ್ಲಿಯಗಳೆಂದು ಹೆಸರು. ಮೇಲುಭಾಗದ ಹಾಗೂ ತಳಭಾಗದ ಈ ನರಗಳು ಮೂಲಭಾಗದಲ್ಲಿ ಬೇರೆ ಬೇರೆ ಇದ್ದರೂ ಇವುಗಳಿಂದಾದ ಕವಲುಗಳು ಶರೀರದೊಳಗೆ ಒಂದರೊಡನೊಂದು ಮಿಲನ ಗೊಳ್ಳುವುದೂ ಉಂಟು. ಇದರಿಂದಾಗಿ ಇವು ಮಿಶ್ರನರಗಳಾಗುತ್ತವೆ. ಆದರೆ ಕೆಳದರ್ಜೆಯ ಕಶೇರುಕಗಳಾದ ಸೈಕ್ಲೊಸ್ಟೊಮ್ಯಾಟಗಳಲ್ಲಿ ಈ ರೀತಿಯ ನರಗಳ ಮಿಲನ ಕಂಡುಬರುವುದಿಲ್ಲ. ಅನುವೇದನ (ಸಿಂಪತೆಟಿಕ್) ನರಮಂಡಲ: ಕಶೇರುಕಗಳ ಶರೀರದೊಳಗೆ ಈ ಬಗೆಯ ನರಮಂಡಲವೂ ಇದೆ. ಇದು ಅಕಶೇರುಕಗಳಲ್ಲಿಲ್ಲ. ಮಿದುಳುಬಳ್ಳಿಗೆ ಸಮಾನಾಂತರವಾಗಿ ಶರೀರದೊಳಗೆ ಎರಡು ಸಾಲುಗಳ ಗ್ಯಾಂಗ್ಲಿಯಗಳು (ನರಗಂಟು) ಮತ್ತು ಅವಕ್ಕೆ ಸಂಬಂಧಿಸಿದಂತೆ ನರಗಳೂ ಇವೆ. ಇವು ಶರೀರದ ಒಳಗಿರುವ ಅಂಗಗಳ ಮೇಲೆ ಹಿಡಿತ ಇಟ್ಟುಕೊಂಡಿವೆ. ಇವಕ್ಕೆ ವಿಸರಲ್ ನರಮಂಡಲವೆಂದೂ ಹೆಸರಿದೆ. ಇದರ ಗ್ಯಾಂಗ್ಲಿಯಗಳು ಮತ್ತು ನರಗಳು ಕೇಂದ್ರನರಮಂಡಲದ ನರಗಳೊಡನೆ ಅದರಲ್ಲಿಯ ಮೆಡ್ಯುಲಾ ಆಬ್ಲಾಂಗೇಟದೊಡನೆ ಸೇರಿಕೊಂಡು ಕೇಂದ್ರ ನರಮಂಡಲದೊಡನೆ ಸಂಪರ್ಕ ಕಲ್ಪಿಸಿಕೊಂಡಿದೆ.

ಪಿಟ್ಯೂಟರಿ ಮತ್ತು ಪೀನಿಯಲ್ ಅಂಗಗಳು

[ಬದಲಾಯಿಸಿ]

ಇವು ಮಿದುಳಿನಿಂದ ಬೆಳೆದಿರುವ ಬಾಹ್ಯ ಬೆಳೆವಣಿಗೆಗಳಂತೆ ಅಥವಾ ಚಾಚುಗಳಂತಿವೆ. ಪಿಟ್ಯೂಟರಿಗ್ರಂಥಿ ಮುಂದಿನ ಮಿದುಳಿನ ತಳಭಾಗದಲ್ಲಿದೆ. ಇದು ಹೊರಚರ್ಮ ಮತ್ತು ನರಮಂಡಲದ ಅಂಗಾಂಶಗಳೆರಡೂ ಸೇರಿ ಆಗಿರುವ ಒಂದು ಗ್ರಂಥಿ. ಸೈಕ್ಲೊಸ್ಟೋಮ್ಗಳನ್ನು ಬಿಟ್ಟರೆ ಹೊರಚರ್ಮ ಮತ್ತು ನರಮಂಡಲದ ಅಂಗಾಂಶಗಳೆರಡೂ ಒಂದುಗೂಡಿರುವ ಈ ಅಂಗ ಅಂತಃಸ್ರಾವಕಗಳನ್ನು ಉತ್ಪತ್ತಿಮಾಡುವ ಒಂದು ಅತಿ ಕ್ಲಿಷ್ಟವಾದ ಗ್ರಂಥಿ. ಸೈಕ್ಲೊಸ್ಟೋಮ್ಗಳಲ್ಲಿ ಈ ಎರಡು ಭಾಗಗಳು ಬೇರೆಬೇರೆಯೇ ಇವೆ. ಇದರಿಂದ ಉತ್ಪತ್ತಿಯಾಗುವ ಹಾರ್ಮೋನುಗಳು ಶರೀರದ ವಿವಿಧ ಕ್ರಿಯೆಗಳನ್ನು ಹಿಡಿತದಲ್ಲಿಟ್ಟುಕೊಳ್ಳುವುವು. ನಿಮ್ನವರ್ಗದ ಕಶೇರುಕಗಳಲ್ಲಿ ಪೀನಿಯಲ್ ಅಂಗ ಮಿದುಳಿನ ಡಯನ್ಸೆಫೆಲಾನ್ ಭಾಗದಿಂದ ಹೊರಚಾಚಿಕೊಂಡಿರುವ ಒಂದು ಅಂಗ. ಇದು ಆ ಪ್ರಾಣಿಗಳ ಮೂರನೆಯ ಕಣ್ಣು. ಆದರೆ ಮೇಲುದರ್ಜೆಯ ಕಶೇರುಕಗಳಲ್ಲಿ ಇದು ನಶಿಸಿಹೋಗಿದೆ. ಕೆಲವು ಸರೀಸೃಪಗಳಲ್ಲಿ ಈ ಅಂಗದೊಳಗೆ ಅಕ್ಷಿಪಟಲ ಮತ್ತು ಮಸೂರಗಳ ಬೆಳೆವಣಿಗೆಯಾಗಿರುವುದನ್ನು ಕಾಣಬಹುದು.

ಆಂಫಿಯಾಕ್ಸಸ್ ಜೀವಿಗೆ ನಿರ್ದಿಷ್ಟವಾದ ಹೃದಯವಿಲ್ಲ. ಆದರೆ ಇನ್ನುಳಿದ ಎಲ್ಲ ಕಾರ್ಡೇಟಗಳಲ್ಲಿಯೂ ಹೃದಯ ಪೂರ್ಣವಾಗಿ ರೂಪುಗೊಂಡಿದೆ. ಕಶೇರುಕಗಳಲ್ಲಿ ಜೀರ್ಣಾಂಗಗಳ ತಳಭಾಗದಲ್ಲಿ ಹೃದಯವಿದೆ. ಆದರೆ ಅಕಶೇರುಕಗಳಲ್ಲಿ ಈ ಅಂಗದ ಸ್ಥಾನ ಜೀರ್ಣಾಂಗಗಳ ಮೇಲುಗಡೆ. ಹೃದಯ ಸಹ ಕೆಳದರ್ಜೆಯ ಕಶೇರುಕಗಳಿಂದ ಮೇಲಿನ ದರ್ಜೆಯ ಕಶೇರುಕಗಳ ವರೆಗೆ ವಿಕಾಸಗೊಂಡಿರುವುದನ್ನು ಕಾಣಬಹುದು.

ಕಶೇರುಕ ಪ್ರಾಣಿಯ ಬೆಳೆವಣಿಗೆಯ ಕಾಲದಲ್ಲಿ ಹೃದಯ ಮೂಲತಃ ಒಂದು ರಕ್ತನಾಳದಿಂದ ಆರಂಭವಾಗುತ್ತದೆ. ಈ ರಕ್ತನಾಳ s-ಆಕಾರದಲ್ಲಿ ಬಾಗಿ ವಿಭೇದೀಕರಣಗೊಂಡು ವಿವಿಧ ಕೋಣೆಗಳಾಗಿ ವಿಭಾಗವಾಗಿ ಸಮರ್ಥವಾದ ಪ್ರಬುದ್ಧ ಹೃದಯವಾಗಿ ರೂಪುಗೊಳ್ಳುತ್ತದೆ. ಈ ರೀತಿ ಕಶೇರುಕಗಳಲ್ಲಿ ಹೃದಯದ ರಚನೆಯ ವಿಕಾಸವನ್ನು ಕಾಣಬಹುದು.

ಹೆಪ್ಯಾಟಿಕ್ ಪೋರ್ಟಲ್ ರಕ್ತ ಪರಿಚಲನೆ

[ಬದಲಾಯಿಸಿ]

ಇದು ಕಶೇರುಕಗಳಲ್ಲಿ ಮಾತ್ರ ಕಂಡುಬರುವ ಒಂದು ವಿಶಿಷ್ಟ ಗುಣ. ಇಲ್ಲಿ ಮಲಿನ ರಕ್ತನಾಳಗಳು ಯಕೃತ್ತಿನೊಳಕ್ಕೆ ಬಂದು ಲೋಮನಾಳಗಳಾಗಿ ಒಡೆಯುತ್ತವೆ. ಮತ್ತೆ ಇವೆಲ್ಲವೂ ಒಂದುಗೂಡಿ ರಕ್ತವನ್ನು ಹೃದಯಕ್ಕೆ ಕೊಂಡೊಯ್ಯುತ್ತವೆ. ಜೀರ್ಣಾಂಗಗಳಿಂದ ಬರುವ ಆಹಾರಮಿಶ್ರಿತ ರಕ್ತ ಪಿತ್ತಕೋಶದೊಳಕ್ಕೆ ಪ್ರವೇಶಿಸಿ ಅಲ್ಲಿ ಶೋಧನೆಗೊಂಡ ಅನಂತರ ಹೃದಯಕ್ಕೆ ಬರುತ್ತದೆ. ಇದು ಈ ಪರಿಚಲನೆಯ ಮುಖ್ಯ ಉದ್ದೇಶ. ಇಂಥ ರಕ್ತಪರಿಚಲನೆ ಅಕಶೇರುಕಗಳಲ್ಲಿಲ್ಲ.

ಕೆಂಪು ರಕ್ತಕೋಶಗಳು

[ಬದಲಾಯಿಸಿ]

ಅಕಶೇರುಕಗಳಲ್ಲಿ ಕೆಂಪು ರಕ್ತಕೋಶಗಳಿರುವುದಿಲ್ಲ. ಆದರೆ ಆ ಜೀವಿಗಳಲ್ಲಿ, ಹೀಮೋಗ್ಲೋಬಿನ್ ಪ್ಲಾಸ್ಮದಲ್ಲಿ ಕರಗಿರುತ್ತದೆ. ಕಶೇರುಕಗಳಲ್ಲಿ ಹೀಮೋಗ್ಲೋಬಿನ್ ಪ್ಲಾಸ್ಮ ದ್ರವದೊಳಗಿರದೆ ಪ್ರತ್ಯೇಕವಾದ ಕೋಶಗಳೊಳಗಿದೆ. ಈ ಜೀವ ಕೋಶಗಳಿಗೆ ಕೆಂಪು ರಕ್ತಕೋಶಗಳೆಂದು ಹೆಸರು. ಇವು ಮೂಳೆಗಳೊಳಗೆ ಉತ್ಪತ್ತಿಯಾಗುತ್ತವೆ. ಕೆಂಪುರಕ್ತಕೋಶಗಳು ಆಮ್ಲಜನಕವನ್ನು ತೆಗೆದುಕೊಂದು ರಕ್ತಪರಿಚಲನೆಯ ಮೂಲಕ ಶರೀರದ ಅಂಗಾಂಶಗಳಿಗೆ ಅದನ್ನು ತಲಪಿಸುತ್ತವೆ.

ಚಲನಾಂಗಗಳು

[ಬದಲಾಯಿಸಿ]

ಇಂದು ಬದುಕಿರುವ ಯಾವ ಕಶೇರುಕಗಳಲ್ಲಿಯೂ ಎರಡು ಜೊತೆಗಿಂತ ಹೆಚ್ಚಾಗಿ ಚಲನಾಂಗಗಳಿಲ್ಲ. ಆದರೆ ಅಕಶೇರುಕಗಳಲ್ಲಿ ಚಲನಾಂಗಗಳ ಸಂಖ್ಯೆಗೆ ಮಿತಿಯಿಲ್ಲದಿರುವುದು ಕಂಡುಬರುತ್ತದೆ. ಶರೀರದ ಪ್ರತಿ ಖಂಡದಿಂದಲೂ ಒಂದೊಂದು ಜೊತೆ ಕಾಲುಗಳು ಆ ಜೀವಿಗಳಲ್ಲಿ ಹುಟ್ಟಿಕೊಳ್ಳುತ್ತವೆ. ಚಲನಾಂಗಗಳಾದ ಕಾಲುಗಳೇ ಕಶೇರುಕಗಳ ಮುಖ್ಯ ಗುಣವೆಂದಲ್ಲ. ಏಕೆಂದರೆ ಕೆಳದರ್ಜೆಯ ಕಶೇರುಕಗಳಾದ ಸೈಕ್ಲೊಸ್ಟೊಮ್ಯಾಟದಲ್ಲಿ ಚಲನಾಂಗಗಳೇ ಇಲ್ಲ.

ಸಾಮಾನ್ಯವಾಗಿ ಕಶೇರುಕಗಳಲ್ಲಿ ಶರೀರದ ಹಿಂಭಾಗದಲ್ಲಿ ಬಾಲವಿರುತ್ತದೆ. ಆದರೆ ಇದರೊಳಗೆ ದೇಹಾಂತರ ಅವಕಾಶವಿಲ್ಲ. ಅಲ್ಲದೆ ಉದರಭಾಗದೊಳಗಿರುವ ಯಾವ ಅಂಗವೂ ಬಾಲದೊಳಕ್ಕೆ ಪ್ರವೇಶಿಸುವುದಿಲ್ಲ. ಕೆಲವು ಉಭಯಚರಿಗಳಿಗೆ ಬಾಲವಿಲ್ಲ. ಆದರೆ ಡಿಂಬದ ಸ್ಥಿತಿಯಲ್ಲಿದ್ದಾಗ ಅವಕ್ಕೆ ಬಾಲವಿದ್ದೇ ಇರುತ್ತದೆ. ಕೆಳದರ್ಜೆಯ ಕಶೇರುಕಗಳಲ್ಲಿ ಬಾಲ ಚಲನಾಂಗವಾಗಿ ಕೆಲಸಮಾಡುತ್ತದೆ. ನೀರಿನಲ್ಲಿ ಚಲಿಸುವ ಪ್ರಾಣಿಗಳಿಗೆ ಬಾಲದ ಅಗತ್ಯವಿದ್ದೇ ಇದೆ. ಆದ್ದರಿಂದ ಇದು ಆದಿಕಶೇರುಕಗಳ ಉಗಮವಾದಾಗಲೇ ಹುಟ್ಟಿಕೊಂಡಿದೆ. ಮೇಲುದರ್ಜೆಯ ಕಶೇರುಕವಾದ ಮನುಷ್ಯನಲ್ಲಿ ಬಾಹ್ಯವಾಗಿ ಬಾಲವಿಲ್ಲ. ಆದರೂ ಬಾಲವಿದ್ದ ಪ್ರಾಣಿಗಳಿಂದ ಈತ ಹುಟ್ಟಿಬಂದಿದ್ದಾನೆಂಬುದಕ್ಕೆ ಕುರುಹುಗಳು ಈತನ ಶರೀರದಲ್ಲಿವೆ.

ನಿರ್ನಾಳಗ್ರಂಥಿಗಳು

[ಬದಲಾಯಿಸಿ]

ಇವು ಎಲ್ಲ ಕಶೇರುಕಗಳಲ್ಲಿಯೂ ಇವೆ. ಜೀವಿಗಳ ಶರೀರದೊಳಗೆ ನಡೆಯುವ ಚಯಾಪಚಯ ಕ್ರಿಯೆಗಳನ್ನು ಇವು ತಮ್ಮ ಹಿಡಿತದಲ್ಲಿಟ್ಟುಕೊಂಡಿವೆ. ಇವುಗಳಿಂದ ಉತ್ಪತ್ತಿಯಾಗುವ ವಸ್ತುಗಳಿಗೆ ಹಾರ್ಮೋನುಗಳೆಂದು ಹೆಸರು. ಕಶೇರುಕಗಳಲ್ಲಿ ಮೇಲೆ ಹೇಳಿದ ಗುಣಗಳು ಮಾತ್ರ ಇವೆಯೆಂದಲ್ಲ. ಈ ಗುಣಗಳ ಜೊತೆಗೆ ಆಯಾ ವರ್ಗದಲ್ಲಿಯೂ ಪ್ರತ್ಯೇಕವಾದ ಗುಣಗಳಿವೆ. ೧. ಸೈಕ್ಲೊಸ್ಟೊಮ್ಯಾಟ, ೨. ಆಸ್ಟ್ರಕೋಡರ್ಮಿ, ೩. ಪಿಸೀಸ್, ೪. ಆಂಫಿಬಿಯ, ೫. ಸರೀಸೃಪಗಳು, ೬. ಏವೀಸ್, ೭. ಸ್ತನಿಗಳು ಎಂದು ಕಶೇರುಕಗಳನ್ನು ಏಳು ಭಾಗಗಳಾಗಿ ವರ್ಗೀಕರಣ ಮಾಡಲಾಗಿದೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]


"https://kn.wikipedia.org/w/index.php?title=ಕಶೇರುಕ&oldid=1264997" ಇಂದ ಪಡೆಯಲ್ಪಟ್ಟಿದೆ