ಗೊರಿಲ್ಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೊರಿಲ್ಲ[೧]
ಪಶ್ಚಿಮ ಗೊರಿಲ್ಲ
ಗೊರಿಲ್ಲ ಗೊರಿಲ್ಲ
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ: ಪ್ರಾಣಿ
ವಂಶ: ಕಾರ್ಡೇಟ
ವರ್ಗ: ಸಸ್ತನಿ
ಗಣ: ಪ್ರೈಮೇಟ್
ಉಪಗಣ: ಹ್ಯಾಪ್ಲೋರ್ಹಿನಿ
ಕುಟುಂಬ: ಹೊಮಿನಿಡೆ
ಬುಡಕಟ್ಟು: ಗೊರಿಲ್ಲಿನಿ
ಕುಲ: ಗೊರಿಲ್ಲ
ಮಾದರಿ ಪ್ರಭೇದ
ಗೊರಿಲ್ಲ ಗೊರಿಲ್ಲ
(ಥಾಮಸ್ ಎಸ್. ಸವೇಜ್, ೧೮೪೭)
ಪ್ರಭೇದಗಳು
ಗೊರಿಲ್ಲ ಗೊರಿಲ್ಲ,
ಗೊರಿಲ್ಲ ಬೆರಿಂಗೆ
ಗೊರಿಲ್ಲಗಳ ಹಂಚಿಕೆ
ಸಮಾನಾರ್ಥಕಗಳು
*ಸುಡೊಗೊರಿಲ್ಲ, ಇಲಿಯಟ್, ೧೯೧೩

ಗೊರಿಲ್ಲ[೨] ಭೂಮಿಯ ಮೇಲೆ ವಾಸಿಸುವ ಕೇಂದ್ರ ಆಫ್ರಿಕಾದ ಅರಣ್ಯಗಳಲ್ಲಿ ಬದುಕಿರುವ ಬಹುತೇಕ ಸಸ್ಯಾಹಾರಿ ಜೀವಿ. ಗೊರಿಲ್ಲವನ್ನು ಪಶ್ಚಿಮ ಮತ್ತು ಪೂರ್ವ ಗೊರಿಲ್ಲಗಳೆಂದು ಎರಡು ಪ್ರಭೇದಗಳಾಗಿ, ಮತ್ತು ಆ ಪ್ರಭೇದಗಳನ್ನು ನಾಲ್ಕು ಅಥವಾ ಐದು ಉಪಪ್ರಭೇದಗಳಾಗಿ ವಿಭಸಲಾಗಿದೆ. ಅವು ಜೀವಂತ ಇರುವ ಅತಿ ದೊಡ್ಡ ಪ್ರೈಮೇಟ್‌ಗಳು. ಅವುಗಳ ಡಿಎನ್‌ಎ ಮಾನವರದನ್ನು ಹೋಲುತ್ತಿದ್ದು, ಈ ಹೋಲಿಕೆಯ ಪ್ರಮಾಣ ನೀವು ಹೇಗೆ ಎಣಿಸುತ್ತೀರ ಎಂಬುದರ ಆಧಾರದ ಮೇಲೆ ಶೇ ೯೫ ರಿಂದ ೯೯ರಷ್ಟು ಇದೆ. ಗೊರಿಲ್ಲ ಇಂದು ಬದುಕಿರುವ ಚಿಂಪಾಜಿ ಮತ್ತು ಬೊನೊಬೊ ನಂತರ ಮಾನವರಿಗೆ ಹೆಚ್ಚು ಹತ್ತಿರ ಸಂಬಂಧಿಯಾದ ಜೀವಿ.

ಗೊರಿಲ್ಲಗಳ ಸಹಜ ವಾಸಿಸುವ ಪ್ರದೇಶ ಆಫ್ರಿಕಾದ ಉಷ್ಣ ಮತ್ತು ಉಪಉಷ್ಣ ವಲಯಗಳಿಗೆ ವ್ಯಾಪಿಸಿದೆ. ಇವು ಜೀವಿಸುವ ಪ್ರದೇಶವು ಆಫ್ರಿಕಾದ ಸಣ್ಣ ಭಾಗವಾದರೂ ಇವು ಹಲವು ಎತ್ತರದ ಪ್ರದೇಶಗಳಿಗೆ ವ್ಯಾಪಿಸಿವೆ. ಬೆಟ್ಟದ ಗೊರಿಲ್ಲಗಳು ೨೨೦೦ ರಿಂದ ೪೩೦೦ ಮೀಟರ್ (೭೨೦೦ ರಿಂದ ೧೪,೧೦೦ ಅಡಿ) ಎತ್ತರದಲ್ಲಿ ಪೂರ್ವ ಆಫ್ರಿಕಾದ ವಿರುಂಗ ಅಗ್ನಿಪರ್ವತಗಳ ಮೋಡ ಅರಣ್ಯಗಳಲ್ಲಿ ವಾಸಿಸುತ್ತವೆ. ತಗ್ಗುಪ್ರದೇಶದ ಗೊರಿಲ್ಲಗಳು ಒತ್ತಾದ ಅರಣ್ಯಗಳು, ನೀರೂರುವ ತಗ್ಗುಭೂಮಿ ಮತ್ತು ಚೌಗು ಪ್ರದೇಶಗಳಲ್ಲಿ ಸಮುದ್ರ ಮಟ್ಟದ ಎತ್ತರದ ಭೂಮಿಗಳಲ್ಲಿ ವಾಸಿಸುತ್ತವೆ. ಪಶ್ಚಿಮದ ತಗ್ಗುಪ್ರದೇಶದ ಗೊರಿಲ್ಲಗಳು ಕೇಂದ್ರ ಪಶ್ಚಿಮ ಆಫ್ರಿಕಾದ ದೇಶಗಳಲ್ಲಿ ವಾಸಿಸಿದರೆ ಪೂರ್ವ ತಗ್ಗುಪ್ರದೇಶದ ಗೊರಿಲ್ಲಗಳು ರುವಾಂಡದ ಗಡಿ ಪ್ರದೇಶದಲ್ಲಿನ ಕಾಂಗೂದಲ್ಲಿ ವಾಸಿಸುತ್ತವೆ.[೩].

ವಿಕಾಸ ಮತ್ತು ವರ್ಗೀಕರಣ[ಬದಲಾಯಿಸಿ]

ಗೊರಿಲ್ಲದ ತನ್ನ ಹತ್ತಿರ ಸಂಬಂಧಿಗಳಾದ ಗೊರಿಲ್ಲದಂತೆ ಹೊಮಿನಿನೆ ಉಪಕುಂಟುಬಕ್ಕೆ ಸೇರಿದ ಚಿಂಪಾಜಿ ಮತ್ತು ಮಾನವರ ಸಾಮಾನ್ಯ ಪೂರ್ವಜರಿಂದ ಸುಮಾರು ೭ ದಶಲಕ್ಷ ವರುಷಗಳ ಹಿಂದೆ ಕವಲೊಡೆಯಿತು ಎಂದು ಅಂದಾಜಿಸಲಾಗಿದೆ.[೪] ಮಾನವ ವಂಶವಾಹಿಗಳ ಅನುಕ್ರಮ ಸಂಬಂಧಿತ ಗೊರಿಲ್ಲ ವಂಶವಾಹಿ ಅನುಕ್ರಮದಿಂದ ಸರಾಸರಿ ಶೇ ೧.೬ರಷ್ಟು ಮಾತ್ರವೇ ಭಿನ್ನವಾಗುತ್ತದೆ. ಆದರೆ ಅಷ್ಟೇ ಅಲ್ಲದೆ ಪ್ರತಿ ವಂಶವಾಹಿಯ ಎಷ್ಟು ನಕಲುಗಳಿವೆ ಎನ್ನುವುದರ ಮೇಲೆ ಸಹ ಭಿನ್ನವಾಗುತ್ತದೆ.[೫] ಇತ್ತೀಚಿನವರೆಗೂ ಗೊರಿಲ್ಲಗಳಲ್ಲಿ ಒಂದೇ ಪ್ರಭೇದವಿದ್ದು ಮೂರು ಉಪಪ್ರಭೇದಗಳು- ಪೂರ್ವ ತಗ್ಗುಪ್ರದೇಶದ ಗೊರಿಲ್ಲ, ಪಶ್ಚಿಮ ತಗ್ಗುಪ್ರದೇಶದ ಗೊರಿಲ್ಲ ಮತ್ತು ಬೆಟ್ಟದ ಗೊರಿಲ್ಲ ಇವೆ ಎಂದು ಭಾವಿಸಲಾಗಿತ್ತು.[೬][೭] ಆದರೆ ಇಂದು ಎರಡು ಪ್ರಭೇದಗಳಿವೆ ಮತ್ತು ಪ್ರತಿ ಪ್ರಭೇದದಲ್ಲಿಯೂ ಎರಡು ಉಪಪ್ರಭೇದಗಳಿವೆ ಎನ್ನುವದರ ಬಗೆಗೆ ವಿಜ್ಞಾನಿಗಳು ಸಾಮಾನ್ಯವಾಗಿ ಒಪ್ಪಿಕೊಳ್ಳುತ್ತಾರೆ. ತೀರ ಇತ್ತೀಚೆಗೆ ಒಂದು ಪ್ರಭೇದದಲ್ಲಿ ಎರಡರ ಬದಲು ಮೂರು ಉಪಪ್ರಭೇದಗಳಿವೆ ಎಂದು ಹೇಳಲಾಗುತ್ತಿದೆ. ಒಂದೇ ಗೊರಿಲ್ಲದಿಂದ ಹಿಮಯುಗ ಕಾಲಮಾನದಲ್ಲಿ ಅರಣ್ಯದ ಕುಗ್ಗುವಿಕೆಯ ಕಾರಣಕ್ಕೆ ಪ್ರತ್ಯೇಕವಾಗಿ ಪ್ರಭೇದಗಳು ಮತ್ತು ಉಪಪ್ರಭೇದಗಳೂ ಉಂಟಾಗಿವೆ.[೩] ಈ ಕೆಳಗೆ ಪಟ್ಟಿಮಾಡಿದ ಪ್ರಭೇದ ಮತ್ತು ಉಪಪ್ರಭೇದಗಳ ಬಗೆಗೆ ಸಾಮಾನ್ಯವಾಗಿ ವಿಜ್ಞಾನಿಗಳು ಒಪ್ಪಿಕೊಳ್ಳುತ್ತಾರೆ.ಉಲ್ಲೇಖದ ಅಗತ್ಯವಿದೆ

ಜೀವಿವರ್ಗೀಕರಣ ಶಾಸ್ತ್ರದ (ಟ್ಯಾಕ್ಸಾನಮಿ)

ಪ್ರಕಾರ ಪ್ರಭೇದ ಗೊರಿಲ್ಲ[೧]

ಹೊಮಿನೊಯಿಡೆ ಮಹಾಕುಟುಂಬದ

ವಿಕಸನ ಚರಿತ್ರೆ[೮]

  • ಕುಲ ಗೊರಿಲ್ಲ
    • ಪಶ್ಚಿಮ ಗೊರಿಲ್ಲ (ಗೊ. ಗೊರಿಲ್ಲ)
      • ಪಶ್ಚಿಮ ತಗ್ಗುಪ್ರದೇಶದ ಗೊರಿಲ್ಲ (ಜಿ. ಗೊರಿಲ್ಲ ಗೊರಿಲ್ಲ)
      • ನದಿ ದಾಟು ಗೊರಿಲ್ಲ (ಗೊ. ಗೊರಿಲ್ಲ ಡೈಹ್ಲಿ)
    • ಪೂರ್ವ ಗೊರಿಲ್ಲ (ಗೊ. ಬೆರಿಂಗೆ)
      • ಬೆಟ್ಟದ ಗೊರಿಲ್ಲ (ಗೊ. ಬೆರಿಂಗೆ ಬೆರಿಂಗೆ)
      • ಪೂರ್ವ ತಗ್ಗುಪ್ರದೇಶದ ಗೊರಿಲ್ಲ (ಗೊ. ಬೆ. ಗ್ರಾವುಎರಿ)
 ಹೊಮಿನೊಯಿಡೆ




ಮಾನವರು (ಕುಲ ಹೋಮೋ)



ಚಿಂಪಾಂಜಿ (ಕುಲ ಪಾನ್)




ಗೊರಿಲ್ಲ (ಕುಲ ಗೊರಿಲ್ಲ)




ಒರಂಗುಟಾನ್ (ಕುಲ ಪೊಂಗೊ)




ಗಿಬ್ಬಾನ್ (ಕುಟುಂಬ ಹೈಲೊಬಟಿಡೆ)



ಗೊರಿಲ್ಲ ಬೆಂರಿಗೆಯ ಪ್ರಸ್ತಾಪಿಸಲಾದ, ವಿದ್ಯುಕ್ತವಾಗಿ ಹೆಸರು ಪಡೆಯದ, ಮೂರನೆಯ ಉಪಪ್ರಭೇದ ಬೆಟ್ಟದ ಗೊರಿಲ್ಲಗಳ ಬ್ವಿಂಡಿ ಗುಂಪು, ಕೆಲವೊಮ್ಮೆ ಇದನ್ನು ಬ್ವಿಂಡಿ ಗೊರಿಲ್ಲ ಎಂದು ಸಹ ಕರೆಯಲಾಗುತ್ತದೆ.

ಗೊರಿಲ್ಲಗಳನ್ನು ವರ್ಗೀಕರಿಸುವ ಕೆಲವೊಂದು ಗುಣಗಳಲ್ಲಿ ಕೂದಲಿನ ಬಣ್ಣ, ಉದ್ದ, ಮುಖದ ಅಗಲ ಸೇರಿವೆ.[೩] ವನ್ಯ ಸ್ಥಿತಿಯಲ್ಲಿ ಸುಮಾರು ೧,೦೦,೦೦೦ ಪಶ್ಚಿಮದ ತಗ್ಗುಪ್ರದೇಶದ ಗೊರಿಲ್ಲಗಳಿವೆ ಎಂದು ಅಂದಾಜಿಸಲಾಗಿದೆ ಮತ್ತು ಮೃಗಾಲಯಗಳಲ್ಲಿರುವುಗಳ ಸಂಖ್ಯೆ ೪,೦೦೦. ಪೂರ್ವ ತಗ್ಗುಪ್ರದೇಶದ ಗೊರಿಲ್ಲಗಳ ವನ್ಯ ಸ್ಥಿತಿಯಲ್ಲಿನ ಸಂಖ್ಯೆ ೪,೦೦೦ ಮತ್ತು ಮೃಗಾಲಯಗಳಲ್ಲಿರುವ ಸಂಖ್ಯೆ ೨೪.[೩] ಬೆಟ್ಟದ ಗೊರಿಲ್ಲಗಳು ಅಪಾಯದಲ್ಲಿದ್ದು ವನ್ಯ ಸ್ಥಿತಿಯಲ್ಲಿ ಅವುಗಳ ಸಂಖ್ಯೆ ೬೨೦ ಮತ್ತು ಮೃಗಾಲಯಗಳಲ್ಲಿ ಅವು ಇಲ್ಲ.[೩]

ತಗ್ಗುಪ್ರದೇಶದ ಗೊರಿಲ್ಲಗಳ ಜನಸಂಖ್ಯಾ ತಳಿವಿಜ್ಞಾನ ಪಶ್ಚಿಮ ಮತ್ತು ಪೂರ್ವ ತಗ್ಗುಪ್ರದೇಶದ ಗೊರಿಲ್ಲಗಳು ಸುಮಾರು ೨೬೧ ಸಾವಿರ ವರುಷಗಳ ಹಿಂದೆ ಕವಲೊಡೆದವು ಎಂದು ಸೂಚಿಸುತ್ತದೆ.[೯]

ದೈಹಿಕ ಗುಣಗಳು[ಬದಲಾಯಿಸಿ]

ಗೊರಿಲ್ಲ ನಡಿಗೆ

ಗೊರಿಲ್ಲ ಮುಂಗಾಲಿನ ಗೆಣ್ಣುಗಳ ಆಧಾರದ ಮೇಲೆ ನಾಲ್ಕು ಕಾಲುಗಳ ನಡಿಗೆ ನಡೆಯುತ್ತದೆ. ಕೆಲವೊಮ್ಮೆ ಆಹಾರ ಕೊಂಡುಯ್ಯುವಾಗ ಮತ್ತು ರಕ್ಷಣೆಯ ಸಂದಂರ್ಭಗಳಲ್ಲಿ ಸಣ್ಣ ದೂರವನ್ನು ಎರಡು ಕಾಲ ಮೇಲೆ ನಡೆಯಬಲ್ಲದು ಸಹ.[೧೦] ವನ್ಯ ವಯಸ್ಕ ಗಂಡು ಗೊರಿಲ್ಲಗಳು ೧೩೦ ರಿಂದ ೧೮೦ ಕಿಲೊಗ್ರಾಂ ತೂಗುತ್ತವೆ ಮತ್ತು ವಯಸ್ಕ ಹೆಣ್ಣು ಗೊರಿಲ್ಲಗಳ ತೂಕ ಅದರ ಅರ್ಧದಷ್ಟು ಇದ್ದು ಸಾಮಾನ್ಯವಾಗಿ ೭೦ ರಿಂದ ೧೧೫ ಕಿಲೊಗ್ರಾಂ ಇರುತ್ತದೆ. ವಯಸ್ಕ ಗಂಡುಗಳ ಎತ್ತರ ೧.೭ ರಿಂದ ೧.೮ ಮೀಟರ್‌ಗಳು (೫.೭ ರಿಂದ ೫.೧೧ ಅಡಿಗಳು) ಇದ್ದು ಕೈಗಳನ್ನು ಅಗಲ ಮಾಡಿದರೆ ೨.೩ ರಿಂದ ೨.೬ ಮೀಟರ್ (೭ ಅಡಿ ೭ ಇಂಚಿನಿಂದ ೮ ಅಡಿ ೬ ಇಂಚು) ಹರಡುತ್ತದೆ. ಹೆಣ್ಣುಗಳು ಕಡಿಮೆ ಎತ್ತರ ಇರುತ್ತವೆ ಮತ್ತು ಅವುಗಳ ಕೈ ಹರಡುವಿಕೆಯ ಅಗಲವೂ ಕಡಿಮೆ.[೧೧] ವಯಸ್ಕ ಗಂಡುಗಳ ಬೆನ್ನೆನ ಮೇಲೆ ಬೆಳ್ಳಿಯ ಕೂದಲು ಪಿರುದೆಗಳ ವರೆಗೂ ಇರುತ್ತದೆ, ಹೀಗಾಗಿ ಅವನ್ನು ಬೆಳ್ಳಿಬೆನ್ನು (ಸಿಲ್ವರ್‌ಬ್ಯಾಕ್) ಎಂದು ಕರೆಯಲಾಗುತ್ತದೆ. ವನ್ಯ ಸ್ಥಿತಿಯಲ್ಲಿ ಕೆಲವೊಮ್ಮೆ ಬೆಳ್ಳಿಬೆನ್ನುಗಳ ಎತ್ತರ ೧.೮ ಮೀ (೫ ಅಡಿ ೧೧ ಇಂಚು) ಮತ್ತು ತೂಕ ೨೩೦ ಕೆಜಿ ಮೀರಿದ್ದು ದಾಖಲಾಗಿದೆ ಮತ್ತು ಮೃಗಾಲದಲ್ಲಿರುವ ಬೊಜ್ಜಮೈನ ಕೆಲವು ೨೭೦ ಕೆಜಿ ತೂಗುದಿದೂ ಇದೆ.[೧೨]

ಪೂರ್ವ ಗೊರಿಲ್ಲಗಳು ಪಶ್ಚಿಮದವಕ್ಕಿಂತ ಹೆಚ್ಚು ಕಪ್ಪು ಮತ್ತು ಬೆಟ್ಟದ ಗೊರಿಲ್ಲಗಳು ಎಲ್ಲ ಗೊರಿಲ್ಲಗಳಲ್ಲೂ ಹೆಚ್ಚು ಕಪ್ಪು. ಬೆಟ್ಟದ ಗೊರಿಲ್ಲಗಳು ದಪ್ಪ ಕೂದಲುಗಳನ್ನು ಹೊಂದಿರುತ್ತವೆ. ಪಶ್ಚಿಮದ ತಗ್ಗುಪ್ರದೇಶದ ಗೊರಿಲ್ಲಗಳು ಕೆಂಪು ಮುಂದಲೆಯೊಂದಿಗೆ ಕಂದು ಅಥವಾ ಬೂದು ಬಣ್ಣದವೂ ಆಗಿರ ಬಹುದು. ಅಲ್ಲದೆ ತಗ್ಗುಪ್ರದೇಶದ ಗೊರಿಲ್ಲಗಳು ಬೆಟ್ಟದ ಗೊರಿಲ್ಲಗಳಿಗೆ ಹೋಲಿಸಿದರೆ ಹೆಚ್ಚು ತೆಳು ಮತ್ತು ಚುರುಕು. ಪೂರ್ವದ ಗೊರಿಲ್ಲಗಳು ಪಶ್ಚಿಮದ ಗೊರಿಲ್ಲಗಳಿಗಿಂತ ಹೆಚ್ಚು ಉದ್ದನೆಯ ಮುಖ ಮತ್ತು ಹೆಚ್ಚು ಅಗಲವಾದ ಎದೆ ಹೊಂದಿರುತ್ತವೆ.[೧೩] ಮಾನವರಲ್ಲಿದ್ದಂತೆ ಪ್ರತಿಯೊಂದು ಗೊರಿಲ್ಲಕ್ಕೂ ಬೆರಳಗುರುತು (ಫಿಂಗರ್ ಪ್ರಿಂಟ್) ಇರುತ್ತದೆ.[೧೪][೧೫]

ಹಂಚಿಕೆ ಮತ್ತು ವಾಸಸ್ತಾನ[ಬದಲಾಯಿಸಿ]

ಎರಡು ಗೊರಿಲ್ಲ ಪ್ರಭೇದಗಳು ಕಾಂಗೊ ನದಿ ಮತ್ತು ಅದರ ಉಪನದಿಗಳಿಂದ ಬೇರ್ಪಟ್ಟಿವೆ. ಪಶ್ಚಿಮ ಗೊರಿಲ್ಲ ಪಶ್ಚಿಮ ಕೇಂದ್ರ ಅರಣ್ಯಗಳಲ್ಲಿ ವಾಸಿಸಿದರೆ ಪೂರ್ವ ಗೊರಿಲ್ಲಗಳು ಪೂರ್ವ ಕೇಂದ್ರ ಆಫ್ರಿಕಾದಲ್ಲಿ ವಾಸಿಸುತ್ತವೆ. ಗೊರಿಲ್ಲಗಳ ವಾಸವು ಮಲೆನಾಡಿನ ಅರಣ್ಯಗಳಿಂದ ಚೌಗು ಪ್ರದೇಶಗಳವರೆಗೂ ಇದೆ. ಪೂರ್ವ ಗೊರಿಲ್ಲಗಳು ಮಲೆನಾಡು (ಗುಡ್ಡಗಾಡಿನ) ಮತ್ತು ಅರೆಮಲೆನಾಡುಗಳಲ್ಲಿ ಸಮುದ್ರ ಮಟ್ಟದಿಂದ ೬೫೦ ರಿಂದ ೪೦೦೦ ಮೀಟರ್ (೨೧೩೦ ರಿಂದ ೧೩,೧೨೦ ಅಡಿಗಳು) ಎತ್ತರದ ವರೆಗೂ ವಾಸಿಸುತ್ತವೆ.[೧೬] ಬೆಟ್ಟದ ಗೊರಿಲ್ಲಗಳು ಈ ವ್ಯಾಪ್ತಿಯ ಮೇಲಿನ ಎತ್ತರದ ಮಲೆನಾಡುಗಳಲ್ಲಿ ಬದುಕಿದರೆ ಪೂರ್ವದ ತಗ್ಗುಪ್ರದೇಶದ ಗೊರಿಲ್ಲಗಳು ಅರೆ ಮಲೆನಾಡಿನ ಅರಣ್ಯಗಳಲ್ಲಿ ಈ ವ್ಯಾಪ್ತಿಯ ಕೆಳ ಮಟ್ಟದ ಪ್ರದೇಶಗಳಲ್ಲಿ ವಾಸಿಸುತ್ತವೆ. ಇದಲ್ಲದೆ ಪೂರ್ವದ ತಗ್ಗುಪ್ರದೇಶದ ಗೊರಿಲ್ಲಗಳು ಮಲೆನಾಡಿನ ಬೊಂಬು ಅರಣ್ಯಗಳಲ್ಲಿ ಮತ್ತು ತಗ್ಗುಪ್ರದೇಶದ ಅರಣ್ಯಗಳಲ್ಲಿ ೬೦೦ ರಿಂದ ೩೩೦೮ ಮೀಟರ್ (೧೯೬೯ ರಿಂದ ೧೦,೮೫೩ ಅಡಿ) ಎತ್ತರಗಳಲ್ಲಿ ಬದುಕುತ್ತವೆ.[೧೭] ಪಶ್ಚಿಮದ ಗೊರಿಲ್ಲಗಳು ಚೌಗು ಪ್ರದೇಶಗಳು ಮತ್ತು ತಗ್ಗುಪ್ರದೇಶದ ಅರಣ್ಯಗಳು ಇರುವ ೧,೬೦೦ ಮೀಟರ್ (೫,೨೦೦ ಅಡಿ) ಎತ್ತರದ ವರೆಗೂ ಬದುಕುತ್ತವೆ.[೧೬] ನದಿ ದಾಟು ಗೊರಿಲ್ಲಗಳು ಕೆಳಮಟ್ಟದ ಮತ್ತು ಅರೆಮಲೆನಾಡು ಪ್ರದೇಶ ಎತ್ತರದ ವ್ಯಾಪ್ತಿ ೧೫೦ ರಿಂದ ೧,೬೦೦ ಮೀಟರ್‌ (೪೯೦ ರಿಂದ ೫,೨೫೦ ಅಡಿ) ಎತ್ತರಗಳಲ್ಲಿ ಬದುಕುತ್ತವೆ.

ಬದುಕು[ಬದಲಾಯಿಸಿ]

ಗೂಡು[ಬದಲಾಯಿಸಿ]

ಗೊರಿಲ್ಲ ಗೂಡು

ಗೊರಿಲ್ಲಗಳು ೨ ರಿಂದ ೫ ಅಡಿ ವ್ಯಾಸದ ಗೂಡುಗಳನ್ನು ಕಟ್ಟಿಕೊಳ್ಳುತ್ತವೆ ಮತ್ತು ರಾತ್ರಿಯಲ್ಲಿ (ಹಗಲಿನ ವೇಳೆಗಳಲ್ಲಿಯೂ ಸಹ) ಅದರಲ್ಲಿ ವಿಶ್ರಾಂತಿ ಪಡೆಯುತ್ತವೆ. ಗೂಡು ಎಂದರೆ ಟೊಂಗೆಗಳು ಮತ್ತು ಎಲೆಗಳ ಸಂಗ್ರಹ. ಗೊರಿಲ್ಲಗಳು, ಚಿಂಪಾಜಿ ಮತ್ತು ಒರಂಗುಟಾನ್‌ಗಳಂತಲ್ಲದೆ, ನೆಲದ ಮೇಲೆ ಗೂಡಿನಲ್ಲಿ ಮಲಗುತ್ತವೆ. ಮರಿಗಳು ತಾಯಿಯ ಗೂಡಿನಲ್ಲಿ ಮಲಗುತ್ತವೆ ಮತ್ತು ಮೂರು ವರುಷಗಳಾದಾಗ ತಮ್ಮದೇ ಗೂಡು ಕಟ್ಟುತ್ತವೆ ಆರಂಭದಲ್ಲಿ ತಾಯಿಯ ಗೂಡಿಗೆ ಹತ್ತಿರ ಗೂಡು ಕಟ್ಟುತ್ತವೆ.[೧೮] ಗೊರಿಲ್ಲ ಗೂಡು ಕಟ್ಟುವಿಕೆಯನ್ನು ಪ್ರಾಣಿ ರಚನೆಯಂದಷ್ಟೇ ಅಲ್ಲ ನಿರ್ದಿಷ್ಟ ರೀತಿಯ ಪರಿಕರ (ಉಪಕರಣ) ಬಳಕೆ ಎಂದು ಪರಿಗಣಿಸಲಾಗಿದೆ.[೧೯]

ಆಹಾರ[ಬದಲಾಯಿಸಿ]

ಬೆಟ್ಟದ ಗೊರಿಲ್ಲ ಬಹುಮಟ್ಟಿಗೆ ಎಲೆ, ಕಾಂಡ, ಕಾಂಡದ ತಿರುಳುಗಳನ್ನು ತಿನ್ನುತ್ತದೆ. ಹಣ್ಣುಗಳ ಇದರ ಆಹಾರದ ಸಣ್ಣ ಭಾಗ ಮಾತ್ರ.[೨೦] ಇದರ ಆಹಾರ ಸುಲಭವಾಗಿ ಸಿಗುತ್ತಿದ್ದು ಸಾಮಾನ್ಯವಾಗಿ ಒಂದು ಇನ್ನೊಂದರೊಂದಿಗೆ ಅಥವಾ ಗುಂಪು ಗುಂಪುಗಳ ನಡುವೆ ಸ್ಪರ್ಧೆ ಏರ್ಪಡುವುದಿಲ್ಲ. ಪೂರ್ವದ ತಗ್ಗುಪ್ರದೇಶದ ಗೊರಿಲ್ಲ ಹೆಚ್ಚು ವೈವಿಧ್ಯಮಯ ಆಹಾರ ಸೇವಿಸುತ್ತಿದ್ದು ಇದು ಕಾಲಮಾನಕ್ಕೆ ತಕ್ಕಂತೆ ಬದಲಾಗುತ್ತದೆ. ಎಲೆಗಳು ಮತ್ತು ಕಾಂಡದ ನಡುವಿನ ತಿರುಳು ಇವುಗಳ ಪ್ರಮುಖ ಆಹಾರವಾದಗಲೂ ಹಣ್ಣುಗಳು ಅದರ ಆಹಾರದ ಶೇ ೨೫ ರಷ್ಟು ಆಗಬಲ್ಲದು. ಇವು ಕೀಟಗಳನ್ನು ವಿಶೇಷವಾಗಿ ಇರುವೆಗಳನ್ನು ತಿನ್ನುತ್ತವೆ. ಪಶ್ಚಿಮದ ತಗ್ಗುಪ್ರದೇಶದ ಗೊರಿಲ್ಲ ಆಹಾರದಲ್ಲಿ ಹಣ್ಣುಗಳ ಭಾಗ ಹೆಚ್ಚು. ಅವುಗಳಿಗೆ ನೆಲದ ಮೇಲೆ ಬೆಳೆಯುವ ಸಸ್ಯ ಲಭ್ಯವಾಗುವುದಿಲ್ಲ ಆದರೆ ಕೆಲವೊಮ್ಮೆ ನೀರಿನೊಳಗೆ ಬೆಳೆಯು ಸಸ್ಯಗಳು ದೊರೆಯುತ್ತವೆ. ಅವು ಗೆದ್ದಲು ಮತ್ತು ಇರುವೆಗಳನ್ನೂ ತಿನ್ನುತ್ತವೆ. ಗೊರಿಲ್ಲಗಳು ನೀರು ಕುಡಿಯುವುದು ವಿರಳ. ಅವು ತಿನ್ನುವ ಸಸ್ಯಹಾರದಲ್ಲಿ ಅರ್ಧದಷ್ಟು ನೀರಿನ ಅಂಶವಿರುತ್ತದೆ ಅಲ್ಲದೆ ಅವು ಇಬ್ಬನಿಯನ್ನು ಅವಲಂಭಿಸುತ್ತವೆ.[೨೧] ಆದರೆ ಬೆಟ್ಟದ ಗೊರಿಲ್ಲ ಹಾಗೂ ತಗ್ಗುಪ್ರದೇಶದ ಗೊರಿಲ್ಲಗಳು ನೀರು ಕುಡಿದುದನ್ನು ಅವಲೋಕಿಸಲಾಗಿದೆ.

ಸಾಮಾಜಿಕ ರಚನೆ[ಬದಲಾಯಿಸಿ]

ಬೆಳ್ಳಿಬೆನ್ನು ಗೊರಿಲ್ಲ

ಗೊರಿಲ್ಲಗಳು ಟ್ರೂಪ್‌ಗಳು ಎಂದು ಕರೆಯಲಾಗುವ ಗುಂಪುಗಳಲ್ಲಿ ಬದುಕುತ್ತವೆ. ಟ್ರೂಪ್‌ನಲ್ಲಿ ಒಂದು ವಯಸ್ಕ ಗಂಡು ಅಥವಾ ಬೆಳ್ಳಿಬೆನ್ನು ಮತ್ತು ಒಂದಕ್ಕೂ ಹೆಚ್ಚು ಹೆಣ್ಣು ಮತ್ತು ಅವುಗಳ ಮರಿಗಳೂ ಇರುತ್ತವೆ.[೨೨][೨೩][೨೪] ಆದರೆ ಒಂದಕ್ಕೂ ಹೆಚ್ಚು ಗಂಡುಗಳಿರುವ ಟ್ರೂಪ್‌ಗಳೂ ಇರುತ್ತವೆ. ಮಾದರಿ ಬೆಳ್ಳಿಬೆನ್ನು ಹನ್ನೆರಡು ವರುಷ ದಾಟಿದ ವಯಸ್ಕ ಗಂಡು ಮತ್ತು ಇದರ ಬೆನ್ನಿನ ಮೇಲೆ ಬೆಳ್ಳಿಯ ಕೂದಲು ಹಾಗೂ ಆ ವಯಸ್ಸಿಗೆ ಬೆಳೆಯುವ ದೊಡ್ಡ ಕೋರೆಹಲ್ಲೂ ಇರುತ್ತವೆ. ಗಂಡು ಮತ್ತು ಹೆಣ್ಣುಗಳೆರಡೂ ಮೂಲಗುಂಪಿನಿದ ಸಿಡಿದು ಹೋಗುವ ಪ್ರವೃತ್ತಿ ತೋರುತ್ತವೆ. ಬೆಟ್ಟದ ಗೊರಿಲ್ಲಗಳಲ್ಲಿ ಗಂಡಿಗಿಂತ ಹೆಚ್ಚು ಹೆಣ್ಣುಗಳು ಮೂಲಗುಂಪಿನಿಂದ ಬೇರೆಯಾಗುವ ಪ್ರವೃತ್ತಿ ತೋರುತ್ತವೆ.[೨೨][೨೫] ಬೆಳೆದ ಗಂಡುಗಳು ಮೂಲಗುಂಪಿನಿಂದ ಹೊರ ಬಂದು ವಲಸೆ ಬರುವ ಹೆಣ್ಣುಗಳನ್ನು ಆಕರ್ಷಿಸಲು ಪ್ರಯತ್ನಿಸುತ್ತವೆ. ಆದರೆ ಬೆಟ್ಟದ ಗೊರಿಲ್ಲಗಳಲ್ಲಿ ಕೆಲವೊಮ್ಮೆ ಗಂಡು ಗುಂಪಿನಲ್ಲೇ ಉಳಿದು ಬೆಳ್ಳಿಬೆನ್ನಿನ ಕೆಳಗೆ ಬದುಕ ಬಹುದು. ಬೆಳ್ಳಿಬೆನ್ನು ಸತ್ತರೆ ಆ ಗಂಡು ಪ್ರಭಲವಾಗಿ ಹೆಣ್ಣುಗಳೊಂದಿಗೆ ಸೇರಬಹುದು. ಈ ಪ್ರವೃತ್ತಿ ಪೂರ್ವದ ತಗ್ಗುಪ್ರದೇಶದ ಗೊರಿಲ್ಲಗಳಲ್ಲಿ ಕಂಡುಬರುವುದಿಲ್ಲ. ಒಂದೇ ಗಂಡಿರುವ ಟ್ರೂಪ್‌ಗಳು ಅದರಲ್ಲಿನ ಬೆಳ್ಳಿಬೆನ್ನು ಸತ್ತರೆ ವಿಘಟನೆಗೊಳ್ಳುತ್ತವೆ ಮತ್ತು ಅದರ ಹೆಣ್ಣು ಸದಸ್ಯರು ಮತ್ತು ಮರಿಗಳು ಹೊಸ ಗುಂಪು ಕಂಡುಕೊಳ್ಳುತ್ತವೆ.[೨೫][೨೬] ಬೆಳ್ಳಿಬೆನ್ನು ರಕ್ಷಣೆಗಿಲ್ಲದೆ ಮರಿಗಳು ಶಿಶುಹತ್ಯೆಗೆ ಗುರಿಯಾಗಬಹುದು. ಹೊಸ ಟ್ರೂಪ್ ಸೇರುವುದು ಇದರ ವಿರುದ್ಧದ ರಕ್ಷಣೆಯಾಗಿರ ಬಹುದು.[೨೫][೨೭] ಬೆಳ್ಳಿಬೆನ್ನು ಸಾವಿನೊಂದಿಗೆ ಟ್ರೂಪ್ ವಿಘಟನೆ ಸಾಮಾನ್ಯವಾದರೂ, ಪಶ್ಚಿಮ ತಗ್ಗುಪ್ರದೇಶದ ಗೊರಿಲ್ಲದ ಹೆಣ್ಣುಗಳು ಹೊಸ ಬೆಳ್ಳಿಬೆನ್ನು ಆ ಗುಂಪಿಗೆ ವರ್ಗಾವಣೆಯಾಗುವವರೆಗೂ ಜೊತೆಯಾಗಿ ಇದ್ದ ಉದಾಹರಣೆ ದಾಖಲಾಗಿದೆ. ಇದು ಚಿರತೆಯಿಂದ ರಕ್ಷಣೆಗಾಗಿ ಆಗಿರಲು ಸಾಧ್ಯ.[೨೬]

ಬೆಳ್ಳಿಬೆನ್ನು ಟ್ರೂಪ್‌ನ ಆಕರ್ಷಣೆಯ ಕೇಂದ್ರ. ಇದು ಹೊಡೆದಾಟಗಳಲ್ಲಿ ಮಧ್ಯಸ್ಥಿಕೆ, ಗುಂಪಿನ ಚಲನೆಯ ದಿಕ್ಕಿನ ಬಗೆಗಿನ ನಿರ್ದಾರ, ಆಹಾರದ ಸ್ಥಳಗಳಿಗೆ ಗುಂಪನ್ನು ಕರೆದುಕೊಂಡು ಹೋಗುವುದು ಮತ್ತು ಗುಂಪಿನ ಒಟ್ಟಾರೆಯ ರಕ್ಷಣೆಯ ಭಾರ ಎಲ್ಲವೂ ಬೆಳ್ಳಿಬೆನ್ನಿನ ನಿರ್ದಾರವೇ ಆಗಿರುತ್ತದೆ. ವಯಸ್ಸಾಗದ ಗಂಡುಗಳನ್ನು ಕಪ್ಪುಬೆನ್ನು ಎಂದು ಕರೆಯಲಾಗಿದ್ದು ಅವುಗಳ ವಯಸ್ಸು ೮ ರಿಂದ ೧೨ರ ನಡುವೆ ಇರುತ್ತದೆ ಮತ್ತು ಅವುಗಳಿಗೆ ಇನ್ನೂ ಬೆಳ್ಳಿಯ ಕೂದಲುಗಳು ಬಂದಿರುವುದಿಲ್ಲ.[೨೪] ಇವು ಬೆಳ್ಳಿಬೆನ್ನಿನ ಕೆಳಗೆ ಇದ್ದು ಎರಡನೆಯ ರಕ್ಷಣೆಯಾಗಿ ಕೆಲಸ ಮಾಡುತ್ತವೆ. ಬೆಳ್ಳಿಬೆನ್ನು ಮತ್ತು ಹೆಣ್ಣುಗಳ ನಡುವಿನ ಬಂಧನವು ಗೊರಿಲ್ಲ ಸಾಮಾಜಿಕ ಜೀವಿನದ ಪ್ರಮುಖ ಅಂಶ.

ಗೊರಿಲ್ಲಗಳಿಗೆ ಕಂಟಕವಾದ ಪರಭಕ್ಷಕ ಚಿರತೆ. ಮಾನವರು, ಚಿರತೆಗಳು ಮತ್ತು ಇತರ ಗೊರಿಲ್ಲಗಳಿಂದ ಆಕ್ರಮಣವಾದಾಗ ಬೆಳ್ಳಿಬೆನ್ನು ಕೆಲವೊಮ್ಮೆ ತನ್ನ ಜೀವವನ್ನು ಪಣಕ್ಕಿಟ್ಟು ರಕ್ಷಿಸ ಬಲ್ಲದು. ಜಾರ್ಜ್ ಸ್ಕಲ್ಲರ್ ಒಂದು “ಬೆಳ್ಳಿಬೆನ್ನು ಗೊರಿಲ್ಲ ಮತ್ತು ಚಿರತೆ ಒದ್ದಕ್ಕೊಂದು ಮಾಡಿದ ಗಾಯಗಳಿಂದ ಸಾವನ್ನಪ್ಪಿದ್ದನ್ನು” ವರದಿ ಮಾಡಿದ್ದಾರೆ.[೨೮]

ಸಂತಾನೋತ್ಪತ್ತಿ ಮತ್ತು ಸಲಹುವಿಕೆ[ಬದಲಾಯಿಸಿ]

ಹತ್ತುದಿನದ ಮರಿಯೊಂದಿಗೆ ತಾಯಿ ಗೊರಿಲ್ಲ

ಹೆಣ್ಣುಗಳು ೧೦-೧೨ ವರುಷಕ್ಕೆ ಪ್ರಾಯಕ್ಕೆ ಬರುತ್ತವೆ (ಬಂದನದಲ್ಲಿದ್ದಾಗ ಇನ್ನೂ ಬೇಗ) ಮತ್ತು ಗಂಡುಗಳು ೧೧ ರಿಂದ ೧೩ ವರುಷಗಳಲ್ಲಿ ಪ್ರಾಯಕ್ಕೆ ಬರುತ್ತವೆ. ರುತು ಚಕ್ರದ ಅವಧಿ ೩೦ ರಿಂದ ೩೩ ದಿನಗಳು. ಗರ್ಭದಾರಣೆ ಎಂಟೂವರೆ ತಿಂಗಳುಗಳು ಇರುತ್ತದೆ. ಬೆಟ್ಟದ ಗೊರಿಲ್ಲಗಳು ಮೊದಲ ಹೆರಿಗೆ ಅವು ೧೦ ವರುಷದವಿದ್ದಾಗ ಆಗುತ್ತದೆ ಮತ್ತು ಎರಡು ಹೆರಿಗೆಗಳ ನಡುವೆ ನಾಲ್ಕು ವರುಷಗಳ ಬಿಡುವು ಇರುತ್ತದೆ.[೨೯] ಗೊರಿಲ್ಲಗಳಲ್ಲಿ ಗಂಡು ಹೆಣ್ಣು ಸೇರುವ ನಿರ್ದಿಷ್ಟ ಕಾಲವೆಂದು ಇಲ್ಲ.[೩೦]

ಆಗತಾನೆ ಹುಟ್ಟಿದ ಗೊರಿಲ್ಲಗಳು ಬಲಹೀನವಾಗಿದ್ದು ತಾಯಿಯ ಆರೈಕೆಯ ಮೇಲೆ ಜೀವಿಸುತ್ತವೆ.[೨೭] ಗಂಡು ಗೊರಿಲ್ಲಗಳು ಮರಿಯ ಪೋಷಣೆಯಲ್ಲಿ ಸಕ್ರಿಯವಲ್ಲ ಆದರೆ ಅವು ಇತರ ಮರಿಗಳೊಂದಿಗೆ ಬೆರಯಲು ಸಹಾಯ ಮಾಡುತ್ತವೆ.[೩೧] ಬೆಳ್ಳಿಬೆನ್ನು ಸಾಮಾನ್ಯವಾಗಿ ತನ್ನ ಟ್ರೂಪಿನ ಮರಿಗಳೊಂದಿಗೆ ಬೆಂಬಲದ ಸಂಬಂಧ ಹೊಂದಿದ್ದು ಅವುಗಳನ್ನು ಗುಂಪಿನೊಳಗಿನ ಆಕ್ರಮಣದಿಂದ ರಕ್ಷಿಸುತ್ತದೆ.[೩೧] ಮರಿಗಳು ನಿಧಾನವಾಗಿ ತಾಯಿಯಿಂದ ಸ್ವತಂತ್ರವಾಗುತ್ತವೆ. ಮೊದಲ ಐದು ತಿಂಗಳು ಮರಿಗಳು ತಾಯಿಯೊಂದಿಗೆ ಇರುತ್ತವೆ ಮತ್ತು ತಾಯಿ ರಕ್ಷಣೆಗಾಗಿ ಬೆಳ್ಳಿಬೆನ್ನಿನೊಂದಿಗೆ ಇರುತ್ತದೆ.[೩೧] ಐದು ತಿಂಗಳ ನಂತರ ಮರಿಗಳು ತಾಯಿಯಿಂದ ದೂರ ಹೋಗ ತೊಡಗುತ್ತವೆ ಆದರೆ ಆರಂಭದಲ್ಲಿ ಸ್ವಲ್ಪಸಮಯ ಮಾತ್ರ. ೧೨ ತಿಂಗಳ ಮರಿಗಳು ತಾಯಿಯಿಂದ ಸುಮಾರು ಐದು ಮೀಟರ್ (೧೬.೪ ಅಡಿ) ದೂರ ಹೋಗುತ್ತವೆ. ೩೦ ತಿಂಗಳ ಮರಿಗಳು ತಮ್ಮ ಅರ್ಧ ಸಮಯವನ್ನು ಮಾತ್ರ ತಾಯಿಯೊಂದಿಗೆ ಕಳೆಯುತ್ತವೆ. ಮೂರರಿಂದ ಆರು ವರುಷಗಳ ವರೆಗೆ ಅವು ಎಳೆಯ ಹರೆಯದಲ್ಲಿರುತ್ತವೆ. ಈ ಕಾಲಮಾನದಲ್ಲಿ ಮೊಲೆ ಹಾಲು ಬಿಡಿಸುವಿಕೆ ಮತ್ತು ಬೇರೆ ಗೂಡುಗಳಲ್ಲಿ ಮಲಗುವುದು ನಡೆಯುತ್ತದೆ.[೩೧] ಹೆಣ್ಣುಗಳಲ್ಲಿ ಮರಿ ಮೊಲೆ ಹಾಲು ಬಿಟ್ಟ ನಂತರ ಮತ್ತೆ ಅಂಡೋತ್ಪತ್ತಿಯಾಗುತ್ತದೆ ಮತ್ತು ಗರ್ಭಧರಿಸುತ್ತವೆ.[೩೧][೩೨]

ಗೊರಿಲ್ಲಗಳು ಸಾಮಾನ್ಯವಾಗಿ ಬದುಕುವ ಅವಧಿ ೩೫ ರಿಂದ ೪೦ ವರುಷಗಳು ಆದರೆ ಮೃಗಾಲಯಗಳಲ್ಲಿನ ಗೊರಿಲ್ಲಗಳು ೫೦ ವರುಷಕ್ಕೂ ಹೆಚ್ಚು ಬದುಕಿರ ಬಲ್ಲವು.

ಸಂವಹನ[ಬದಲಾಯಿಸಿ]

ಮರದ ಬೊಡ್ಡೆಯನ್ನು ಸಸ್ಯಗಳನ್ನು ಪಡೆಯಲು ಬೆಂಬಲವಾಗಿ ಪಡೆಯುವ ಮೂಲಕ ಪರಿಕರ ಬಳಕೆ ತೋರುವುದು

ಇಪ್ಪತ್ತೈದು ಭಿನ್ನ ಉಚ್ಚಾರಣೆಗಳನ್ನು ಗೊರಿಲ್ಲಗಳಲ್ಲಿ ಗಮನಿಸಲಾಗಿದ್ದು ಸಾಮಾನ್ಯವಾಗಿ ಇವನ್ನು ದಟ್ಟ ಸಸ್ಯಗಳಲ್ಲಿರುವಾಗ ಗುಂಪಿನ ನಡುವಿನ ಸಂವಹನಕ್ಕೆ ಬಳಸಲಾಗುತ್ತದೆ. ಶಬ್ಧಗಳನ್ನು ಗುರುಗುಟ್ಟುವಿಕೆ ಮತ್ತು ಬೊಗಳುವಿಕೆ ಎಂದು ವಿಭಜಿಸಲಾಗಿದ್ದು ಗುಂಪು ಚಲನೆಯಲ್ಲಿದ್ದಾಗ ಸದಸ್ಯರ ಇರುವಿಕೆಯನ್ನು ತಿಳಿಸುವುದಕ್ಕೆ ಹೆಚ್ಚು ಬಳಕೆಯಾಗುತ್ತವೆ.[೩೩] ಇವುಗಳನ್ನು ಗುಂಪಿನಲ್ಲಿ ಶಿಸ್ತು ಅಗತ್ಯವಾದಾಗಿನ ಸಂದರ್ಭದಲ್ಲಿಯೂ ಬಳಸ ಬಹುದು. ಕಿರುಚುವಿಕೆ ಮತ್ತು ಘರ್ಜನೆ ಎಚ್ಚರಿಕೆಗಳಾಗಿದ್ದು ಬಹಳಷ್ಟು ಸಲ ಬೆಳ್ಳಿಬೆನ್ನು ಇವನ್ನು ಹೊರಡಿಸುತ್ತದೆ. ಆಳವಾದ, ಗುಡಿಗಿನಂತ ತೇಗು ತೃಪ್ತಿಯನ್ನು ಸೂಚಿಸುತ್ತದೆ ಮತ್ತು ಇವನ್ನು ಮೇಯುವಾಗ ಮತ್ತು ವಿಶ್ರಾಂತಿ ಸಮಯದಲ್ಲಿ ಹೊರಡಿಸಲಾಗುತ್ತದೆ. ಸ್ಥಿರ ಗುಂಪಿನಲ್ಲಿ ತೀವ್ರ ಆಕ್ರಮಣ ವಿರಳವಾದುದು ಆದರೆ ಎರಡು ಬೆಟ್ಟದ ಗೊರಿಲ್ಲಗಳ ಮುಖಾಮುಖಿಯಾದರೆ ಎರಡು ಬೆಳ್ಳಿಬೆನ್ನುಗಳು ಸಾಯುವ ವರೆಗೂ ಹೊರಾಡ ಬಹುದು.[೩೪] ಹೀಗಾಗಿ ಹಲವು ಸಲ ಘರ್ಷಣೆ ಸ್ಥಿತಿಯಲ್ಲಿ ಭೌತಿಕ ಘರ್ಷಣೆಗಿಳಿಯದೆ ಬೆದರಿಕೆಯನ್ನು ತೋರುವುದರ ಮೂಲಕ ಮುಗಿಸ ಬಹುದು. ಇದಕ್ಕೆ ಗೊರಿಲ್ಲಗಳಲ್ಲಿ ವಿಶೇಷವಾದ ಹೆಜ್ಜೆಗಳಿವೆ.

ಬುದ್ಧಿವಂತಿಕೆ[ಬದಲಾಯಿಸಿ]

ಗೊರಿಲ್ಲಗಳನ್ನು ಬುದ್ಧಿವಂತ ಪ್ರಾಣಿಗಳೆಂದು ಭಾವಿಸಲಾಗಿದೆ. ಬಂಧನದಲ್ಲಿರುವ ಕೊಕೊನಂತಹ ಗೊರಿಲ್ಲಗಳಿಗೆ ಸಂಕೇತ ಭಾಷೆಯ ಭಾಗಗಳನ್ನು ಕಲಿಸಲಾಗಿದೆ. ಇತರ ದೊಡ್ಡ ವಾನರಗಳಂತೆ ನಗ ಬಲ್ಲವು, ದುಃಖ ಪಡಬಲ್ಲವು ಮತ್ತು ಅವುಗಳಿಗೆ “ಭಾವುಕ ಜೀವನ ಇದೆ”. ಅವು ಗಟ್ಟಿಯಾದ ಕುಟುಂಬ ಸಂಬಂಧಗಳನ್ನು ಹೊಂದ ಬಲ್ಲವು, ಪರಿಕರಗಳನ್ನು ಮಾಡಬಲ್ಲವು ಮತ್ತು ಹಿಂದಿನ ಮತ್ತು ಮುಂದಿನದರ ಬಗೆಗೆ ಚಿಂತಿಸ ಬಲ್ಲವು.[೩೫] ಕೆಲವು ಸಂಶೋಧಕರು ಗೊರಿಲ್ಲಗಳು ಆಧ್ಯಾತ್ಮಿಕ ಭಾವನೆ ಅಥವಾ ಧಾರ್ಮಿಕ ನಂಬಿಕೆಗಳನ್ನು ಹೊಂದಿವೆ ಎಂದು ನಂಬುತ್ತಾರೆ.[೩]

ಪರಿಕರ ಬಳಕೆ[ಬದಲಾಯಿಸಿ]

ಥಾಮಸ್ ಬ್ರೆಯುಯರ್ ಮತ್ತು ಅವರ ತಂಡ ಮಾಡಿದ ಅವಲೋಕನಗಳ ನಂತರ ಗೊರಿಲ್ಲ ವನ್ಯ ಸ್ಥಿತಿಯಲ್ಲಿಯೂ ಪರಿಕರ ಬಳಸುತ್ತದೆ ಎಂಬುದು ಒಪ್ಪಿತವಾಗಿದೆ. ಕಾಂಗೊ ಗಣರಾಜ್ಯದಲ್ಲಿನ ರಾಷ್ಟ್ರೀಯ ಉಧ್ಯಾವನದಲ್ಲಿ ಹೆಣ್ಣು ಗೊರಿಲ್ಲ ಒಂದು ಚೌಗು ಪ್ರದೇಶವೊಂದನ್ನು ದಾಟುವಾಗ ನೀರಿನ ಆಳವನ್ನು ಅಂದಾಜಿಸುತ್ತಿರುವಂತೆ ಕೋಲೊಂದನ್ನು ಬಳಸಿದುದನ್ನು ದಾಖಲಿಸಲಾಗಿದೆ. ಇನ್ನೊಂದು ಹೆಣ್ಣು ಗೊರಿಲ್ಲ ಮರದ ತುಂಡನ್ನು ಸೇತುವೆಯಾಗಿಯೂ ಮತ್ತು ನೀರಿನಲ್ಲಿನ ಸಸ್ಯವನ್ನು ಪಡೆಯಲು ಬಳಸಿತು. ಇದರ ಅರ್ಥವೆಂದರೆ ಎಲ್ಲಾ ದೊಡ್ಡ ವಾನರಗಳೂ ಪರಿಕರ ಬಳಸುತ್ತವೆ ಎಂದು ತಿಳಿದಂತಾಯಿತು.[೩೬]

ಸೆಪ್ಟಂಬರ್ ೨೦೦೫ರಲ್ಲಿ ಕಾಂಗೋ ಗಣರಾಜ್ಯದಲ್ಲಿನ ಎರಡೂವರೆ ವರುಷದ ಗೊರಿಲ್ಲ ಕರಟಕಾಯಿಯೊಂದನ್ನು ತೆರೆಯಲು ಕಲ್ಲುಗಳನ್ನು ಬಳಕೆ ಮಾಡಿದ್ದು ಗಮನಿಸಲಾಗಿದೆ.[೩೭] ನಾಲ್ವತ್ತು ವರುಷಗಳ ಹಿಂದೆ ಚಿಂಪಾಜಿ ಗೆದ್ದಲುಗಳನ್ನು ಹೊರತೆಗೆಯಲು ಕಡ್ಡಿಯನ್ನು ಬಳಸುವುದು ತಿಳಿದು ಬಂದಿತಾದರೂ ಗೊರಿಲ್ಲ ಪರಿಕರಗಳ ಬಗೆಗಿನ ಮೊದಲ ಪುರಾವೆ ಇದು.

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ Groves, C.P. (2005). Wilson, D.E.; Reeder, D.M., eds. Mammal Species of the World: A Taxonomic and Geographic Reference (3rd ed.). Baltimore: Johns Hopkins University Press. pp. 181–182. OCLC 62265494. ISBN 0-801-88221-4.
  2. ಇಂಗ್ಲೀಶ್ ವಿಕಿಪೀಡಿಯದ "Gorilla" ಪುಟದ ಭಾಗಶ ಅನುವಾದ
  3. ೩.೦ ೩.೧ ೩.೨ ೩.೩ ೩.೪ ೩.೫ Prince-Hughes, Dawn (1987). Songs of the Gorilla Nation. Harmony. p. 66. ISBN 1-4000-5058-8.
  4. Glazko GV, Nei M (March 2003). "Estimation of divergence times for major lineages of primate species". Mol. Biol. Evol. 20 (3): 424–34. doi:10.1093/molbev/msg050. PMID 12644563.
  5. Goidts V; Armengol L; Schempp W; et al. (March 2006). "Identification of large-scale human-specific copy number differences by inter-species array comparative genomic hybridization". Hum. Genet. 119 (1–2): 185–98. doi:10.1007/s00439-005-0130-9. PMID 16395594.
  6. Groves, Colin (2002). "A history of gorilla taxonomy". In Andrea B. Taylor & Michele L. Goldsmith. Gorilla Biology: A Multidisciplinary Perspective (PDF). Cambridge University Press. pp. 15–34.
  7. Stewart, Kelly J.; Pascale Sicotte; Martha M. Robbins (2001). "Mountain Gorillas of the Virungas". Fathom / Cambridge University Press. Retrieved 11 September 2008.
  8. Israfil, H.; Zehr, S. M.; Mootnick, A. R.; Ruvolo, M.; Steiper, M. E. (2011). "Unresolved molecular phylogenies of gibbons and siamangs (Family: Hylobatidae) based on mitochondrial, Y-linked, and X-linked loci indicate a rapid Miocene radiation or sudden vicariance event" (PDF). Molecular Phylogenetics and Evolution. 58 (3): 447–455. doi:10.1016/j.ympev.2010.11.005. PMC 3046308 . PMID 21074627.
  9. McManus KF, Kelley JL, Song S, Veeramah K, Woerner AE, Stevison LS, Ryder OA; Great Ape Genome Project, Kidd JM, Wall JD, Bustamante CD, Hammer MF (2014) Inference of Gorilla demographic and selective history from whole genome sequence data. Mol Biol Evol pii: msu394
  10. Prince-Hughes, Dawn (1987). Songs of the Gorilla Nation. Harmony. pp. 82–3. ISBN 1-4000-5058-8.
  11. Miller, Patricia (1997). Gorillas. p. 64. ISBN 0919879896.
  12. "Gorilla – The Columbia Encyclopedia, Sixth Edition". bartleby.com. Archived from the original on 12 February 2008. Retrieved 10 October 2006
  13. Rowe N. (1996) Pictorial guide to the living primates. East Hampton (NY): Pogonias Pr.
  14. "Santa Barbara Zoo – Western Lowland Gorilla". santabarbarazoo.org. Retrieved 10 October 2006.
  15. Gorrilas. Smithsonian National Zoological Park
  16. ೧೬.೦ ೧೬.೧ Sarmiento EE. (2003) "Distribution, taxonomy, genetics, ecology, and causal links of gorilla survival: the need to develop practical knowledge for gorilla conservation". In: Taylor AB, Goldsmith ML (eds.). Gorilla biology: a multidisciplinary perspective. Cambridge (England): Cambridge Univ Pr. pp. 432–71.
  17. Ilambu O. (2001) "Ecology of Eastern Lowland gorilla: is there enough scientific knowledge to mitigate conservation threats associated with extreme disturbances in its distribution range?" In: The apes: challenges for the 21st century. Conference proceedings; 10 May 2000–13; Brookfield, IL. Chicago: Chicago Zoo Soc. pp. 307–12.
  18. Miller-Schroeder, Patricia (1997). Gorillas. Weigl Educational Publishers. p. 20. ISBN 978-0-919879-89-8. Retrieved 4 July 2011.
  19. Marchant, Linda Frances; Nishida, Toshisada (1996). Great ape societies. Cambridge University Press. pp. 226–227. ISBN 978-0-521-55536-4. Retrieved 4 July 2011.
  20. McNeilage A. (2001) "Diet and habitat use of two mountain gorilla groups in contrasting habitats in the Virungas". In: Robbins MM, Sicotte P, Stewart KJ (eds.). Mountain gorillas: three decades of research at Karisoke. Cambridge (England): Cambridge University Press. pp. 265–92.
  21. GORILLAS – Diet & Eating Habits. Seaworld.org. Retrieved on 2011-09-27.
  22. ೨೨.೦ ೨೨.೧ Watts DP. (1996) "Comparative socio-ecology of gorillas". In: McGrew WC, Marchant LF, Nishida T (eds.). Great ape societies. Cambridge (England): Cambridge Univ Press. pp. 16-28.
  23. Yamagiwa J, Kahekwa J, Kanyunyi Basabose A (2003). "Intra-specific variation in social organization of gorillas: implications for their social evolution". Primates. 44 (4): 359–69. doi:10.1007/s10329-003-0049-5. PMID 12942370.
  24. ೨೪.೦ ೨೪.೧ Robbins MM. (2001) "Variation in the social system of mountain gorillas: the male perspective". In: Robbins MM, Sicotte P, Stewart KJ, editors. Mountain gorillas: three decades of research at Karisoke. Cambridge (England): Cambridge Univ Pr. pp. 29–58.
  25. ೨೫.೦ ೨೫.೧ ೨೫.೨ Stokes EJ, Parnell RJ, Olejniczak C (2003). "Female dispersal and reproductive success in wild western lowland gorillas (Gorilla gorilla gorilla)". Behav Ecol Sociobiol. 54 (4): 329–39. doi:10.1007/s00265-003-0630-3. JSTOR 25063274.
  26. ೨೬.೦ ೨೬.೧ Yamagiwa J, Kahekwa J. (2001) "Dispersal patterns, group structure, and reproductive parameters of eastern lowland gorillas at Kahuzi in the absence of infanticide". In: Robbins MM, Sicotte P, Stewart KJ (eds.). Mountain gorillas: three decades of research at Karisoke. Cambridge (England): Cambridge Univ Press. pp. 89–122.
  27. ೨೭.೦ ೨೭.೧ Watts DP. (1989). "Infanticide in mountain gorillas: new cases and a reconsideration of the evidence". Ethology. 81: 1–18. doi:10.1111/j.1439-0310.1989.tb00754.x.
  28. Making a Last Stand Counterattack and Chutzpah Living Primates. Intechinc.com (19 August 2011). Retrieved on 2011-09-27.
  29. Czekala N, Robbins MM. (2001) "Assessment of reproduction and stress through hormone analysis in gorillas". In: Robbins MM, Sicotte P, Stewart KJ, editors. Mountain gorillas: three decades of research at Karisoke. Cambridge (England): Cambridge Univ Pr. pp. 317–39.
  30. Watts DP (1991). "Mountain gorilla reproduction and sexual behavior". Am J Primatol. 24 (3–4): 211. doi:10.1002/ajp.1350240307.
  31. ೩೧.೦ ೩೧.೧ ೩೧.೨ ೩೧.೩ ೩೧.೪ Stewart KJ. (2001) "Social relationships of immature gorillas and silverbacks". In: Robbins MM, Sicotte P, Stewart KJ, editors. Mountain gorillas: three decades of research at Karisoke. Cambridge (England): Cambridge Univ Press. ISBN 0521019869. pp. 183–213.
  32. Stewart KJ (1988). "Suckling and lactational anoestrus in wild gorillas (Gorilla gorilla)". J Reprod Fertil. 83 (2): 627–34. doi:10.1530/jrf.0.0830627. PMID 3411555.
  33. Harcourt, A.H., Stewart, K.J., Hauser, M. (1993). "Functions of wild gorilla 'close' calls. I. Repertoire, context, and interspecific comparison". Behaviour. 124: 89. doi:10.1163/156853993X00524.
  34. Fossey, D. (1983). Gorillas in the mist. Boston: Houghton Mifflin Company. ISBN 0-395-28217-9.
  35. Planet Of No Apes? Experts Warn It's Close CBS News Online, 2007-09-12. Retrieved 2008-03-22.
  36. Breuer T, Ndoundou-Hockemba M, Fishlock V (2005). "First Observation of Tool Use in Wild Gorillas". PLoS Biol. 3 (11): e380. doi:10.1371/journal.pbio.0030380. PMC 1236726 . PMID 16187795.
  37. "A Tough Nut To Crack For Evolution". CBS News. 18 October 2005. Retrieved 18 October 2006.
"https://kn.wikipedia.org/w/index.php?title=ಗೊರಿಲ್ಲ&oldid=1202445" ಇಂದ ಪಡೆಯಲ್ಪಟ್ಟಿದೆ