ರಿಯಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರೀಯಾಗಳು
Temporal range: Pleistocene-Holocene 0.126–0 Ma
ಎರಡು ಅಮೇರಿಕನ್ ರೀಯಾಗಳು
Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯ
ವಿಭಾಗ: ಕಾರ್ಡೇಟಾ
ವರ್ಗ: ಏವೀಸ್
ಕೆಳವರ್ಗ: ಪ್ಯಾಲೆಯೋನ್ಯಾಥೇ
ಗಣ: ರೀಯಫ಼ಾರ್ಮೀಸ್
ಕುಟುಂಬ: ರೀಡೇ
ಕುಲ: ರೀಯಾ
Brisson, 1760
Type species
Struthio americanus
Species
Synonyms
  • Rhea Moehring 1758 nomen dubium
  • Pterocnemia Gray 1870
  • Toujou Lacépède 1801
  • Tujus Rafinesque 1815

ರಿಯಾ ರ‍್ಯಾಟಿಟ್ ಉಪವರ್ಗ, ರೀಯಫಾರ್ಮೀಸ್ ಗಣ, ರೀಡೀ ಕುಟುಂಬದ ದೊಡ್ಡ ಹಾರಲಾರದ ಹಕ್ಕಿಗಳು. ಇವು ದಕ್ಷಿಣ ಅಮೇರಿಕದಲ್ಲಿ ಕಂಡುಬರುತ್ತವೆ. ಎರಡು ಉಪಲಬ್ಧ ಜಾತಿಗಳು ಇವೆ: ಈಶಾನ್ಯ ಬ್ರೆಜಿಲ್‌ನಿಂದ ಅರ್ಜೆಂಟಿನವರೆಗಿನ ಬಯಲು ಪ್ರದೇಶವಾಸೀ ಹೆಚ್ಚಿನ ಅಥವಾ ಅಮೇರಿಕನ್ ರಿಯಾ ಮತ್ತು ಪೆರುವಿನಿಂದ ದಕ್ಷಿಣಕ್ಕೆ ಪೆಟಗೋನಿಯವರೆಗಿನ ಭೂಪ್ರದೇಶವಾಸೀ ಕಡಿಮೆ ಅಥವಾ ಡಾರ್ವಿನ್ ರಿಯಾ. ಎರಡೂ ಪ್ರಸ್ತುತವಾಗಿ ತಮ್ಮ ಸ್ಥಳೀಯ ಶ್ರೇಣಿಗಳಲ್ಲಿ ಹತ್ತಿರ-ಹತ್ತಿರ ಅಪಾಯದಂಚಿನಲ್ಲಿವೆ ಎಂದು ನಿರ್ಣಯಿಸಲಾಗಿದೆ; ಜರ್ಮನಿಯಲ್ಲಿ ಅಮೇರಿಕನ್ ರಿಯಾದ ವನ್ಯ ಸಂಖ್ಯೆಯು ಬೆಳೆಯುತ್ತಿದೆ ಎಂದು ತೋರುತ್ತದೆ.

ಇವು ತಮ್ಮ ಸಮೀಪ ಬಂಧುಗಳಾದ ಈಮ್ಯೂ ಮತ್ತು ಉಷ್ಟ್ರಪಕ್ಷಿಗಳಿಗಿಂತ ಗಾತ್ರದಲ್ಲಿ ಸಣ್ಣವು.

ವಿವರಣೆ[ಬದಲಾಯಿಸಿ]

ರಿಯಾ ದಕ್ಷಿಣ ಅಮೆರಿಕ ಭೂಖಂಡದೊಳಗೆ ಅರ್ಜೆಂಟೀನಾ, ಬೊಲಿವಿಯಾ, ಬ್ರೆಜಿಲ್, ಚಿಲಿ, ಪರಾಗ್ವೆ, ಪೆರು, ಮತ್ತು ಉರುಗ್ವೆ ವ್ಯಾಪ್ತಿಯಲ್ಲಿ ಸೀಮಿತವಾಗಿವೆ. ಇವು ತೆರೆದ ಹುಲ್ಲುಗಾವಲುಗಳಲ್ಲಿ , ಪ್ಯಾಂಪಾಸ್‍ನಲ್ಲಿ ವಾಸಿಸುತ್ತವೆ. ಇದು ಕಂದು-ಬೂದು ಗರಿಗಳನ್ನು ಹೊಂದಿರುವ ದೊಡ್ಡ ಹಾರಲಾರದ ಪಕ್ಷಿಯಾಗಿದೆ. ದೊಡ್ಡ ಗಂಡು ರಿಯಾಗಳು 170 ಸೆಂಟಿಮೀಟರ್ ಎತ್ತರದವರೆಗೆ ತಲುಪಬಹುದು. ಇದಕ್ಕೆ ಕೇವಲ ಮೂರು ಕಾಲ್ಬೆರಳುಗಳು ಇವೆ. ಉದ್ದನೆಯ ಕಾಲುಗಳು, ಸುಂದರ ಗರಿಗಳ ಅಭಾವ, ಹೆಚ್ಚುಕಡಿಮೆ ಕಂದು ಬಣ್ಣ-ಇವು ರೀಯ ಪಕ್ಷಿಗಳ ವೈಶಿಷ್ಟ್ಯಗಳು.

ಸಾಪೇಕ್ಷವಾಗಿ ದೊಡ್ಡಗಾತ್ರದ (ಸು. 120 ಸೆಂಮೀ ಎತ್ತರ, 20 ಕಿಗ್ರಾಮ್ ತೂಕ) ಸಾಮಾನ್ಯ ರೀಯದ ದೇಹದ ಮೇಲ್ಭಾಗ ಬೂದು, ಕೆಳಭಾಗ ಮಾಸಲುಬಿಳಿ. ಬಿಳಿತುದಿಯ ಕಂದು ಗರಿಗಳು ಸಣ್ಣ ಗಾತ್ರದ ಡಾರ್ವಿನ್‌ನ ರೀಯದ ವೈಶಿಷ್ಟ್ಯ.

ವ್ಯುತ್ಪತ್ತಿ[ಬದಲಾಯಿಸಿ]

"ರಿಯಾ" ಎಂಬ ಹೆಸರನ್ನು ೧೭೫೨ ರಲ್ಲಿ ಪಾಲ್ ಮೊಹ್ರಿಂಗ್ ಬಳಸಿದರು ಮತ್ತು ಇದನ್ನು ಇಂಗ್ಲಿಷ್‍ನ ಸಾಮಾನ್ಯ ಹೆಸರಾಗಿ ಸ್ವೀಕರಿಸಲಾಯಿತು. ಮೊಹ್ರಿಂಗ್ ರಿಯಾಕ್ಕೆ ಗ್ರೀಕ್ ಟೈಟನ್ ರಿಯಾದ ಹೆಸರಿಟ್ಟರು. ಈ ಗ್ರೀಕ್ ಹೆಸರು (Ῥέα) ἔρα "ನೆಲ" ದಿಂದ ಬಂದಿದೆ ಎಂದು ಭಾವಿಸಲಾಗಿದೆ. ರಿಯಾ ಹಾರಲಾರದ ನೆಲದ ಹಕ್ಕಿಯಾಗಿರುವುದರಿಂದ ಇದು ಸೂಕ್ತವಾಗಿದೆ. ದಕ್ಷಿಣ ಅಮೆರಿಕಾದ ಪ್ರದೇಶವನ್ನು ಅವಲಂಬಿಸಿ, ರಿಯಾವನ್ನು ಸ್ಥಳೀಯವಾಗಿ ಗುವಾರಾನಿ (ಅಂದರೆ ದೊಡ್ಡ ಜೇಡ ಎಂದರ್ಥ) ಎಂದು ಕರೆಯಲಾಗುತ್ತದೆ ಏಕೆಂದರೆ ಇವು ಓಡುವಾಗ ಪರ್ಯಾಯ ರೆಕ್ಕೆಗಳನ್ನು ತೆರೆಯುವ ಮತ್ತು ಇಳಿಸುವ ಅಭ್ಯಾಸವನ್ನು ಹೊಂದಿವೆ. ಉಳಿದ ಹೆಸರುಗಳೆಂದರೆ ಎಮಾ (ಪೋರ್ಚುಗೀಸ್), ಸೂರಿ (ಐಮಾರಾ ಮತ್ತು ಕ್ವೆಚುವಾ)[೧][೨] ಅಥವಾ ಚೊಯಿಕ್ (ಮಾಪುಡುಂಗುನ್). ಅನೇಕ ಯುರೋಪಿಯನ್ ಭಾಷೆಗಳಲ್ಲಿ ನಂದು ಸಾಮಾನ್ಯ ಹೆಸರಾಗಿದೆ.

ವರ್ತನೆ[ಬದಲಾಯಿಸಿ]

ಪ್ರತ್ಯೇಕ ಪಕ್ಷಿ ಮತ್ತು ಪಕ್ಷಿ ಸಮೂಹ[ಬದಲಾಯಿಸಿ]

ಇವು ಮೂಕ ಪಕ್ಷಿಗಳು. ಸಂತಾನವೃದ್ಧಿ ಋತುವಿನ ಸಮಯದಲ್ಲಿ ಗಂಡು ಹಕ್ಕಿ ಹೆಣ್ಣನ್ನು ಕರೆದು ಆಕರ್ಷಿಸುತ್ತದೆ. ಈ ಕರೆ ಗಟ್ಟಿಯಾಗಿ ಕೇಳಿಸುವ ಧ್ವನಿ ಆಗಿದೆ. ಈ ರೀತಿ ಕರೆಯುವಾಗ ಅವು ತಮ್ಮ ದೇಹದ ಮುಂಭಾಗವನ್ನು ಎತ್ತಿರುತ್ತವೆ. ಅಪಾಯದಲ್ಲಿರುವಾಗ ಇವು ಅಂಕುಡೊಂಕು ರೀತಿಯಲ್ಲಿ ಓಡುತ್ತವೆ.ಹುಲ್ಲುಗಾವಲುಗಳಲ್ಲಿ ಸಂಚರಿಸುವ ಜಿಂಕೆ ಮತ್ತು ಗ್ವಾನಾಕೋಗಳ ಗುಂಪುಗಳ ಸಾಹಚರ್ಯದಲ್ಲಿ ಸರಾಸರಿ 6 ರೀಯ ಪಕ್ಷಿಗಳ ಚಿಕ್ಕಗುಂಪುಗಳು ಇರುವುದು ಸಾಮಾನ್ಯ.

ಸ್ಥಿತಿ ಮತ್ತು ಸಂರಕ್ಷಣೆ[ಬದಲಾಯಿಸಿ]

ಇವುಗಳ ಆವಾಸಸ್ಥಾನಗಳು ಕುಗ್ಗುತ್ತಿರುವುದರಿಂದ ಅಮೇರಿಕನ್ ಮತ್ತು ಪ್ಯೂನಾ ರಿಯಾ ಎರಡರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಇವೆರಡನ್ನೂ ಐಯುಸಿಎನ್‌ನಿಂದ ಹತ್ತಿರ ಹತ್ತಿರ ಅಪಾಯದಂಚಿನದಲ್ಲಿವೆ ಎಂದು ಪರಿಗಣಿಸಲಾಗಿದೆ. ಐಯುಸಿಎನ್ ಇವೆರಡೂ ಅಸಹಾಯಕ ಸ್ಥಿತಿಯನ್ನು ತಲುಪುತ್ತಿವೆ ಎಂದು ಹೇಳುತ್ತದೆ.[೩][೪] ಡಾರ್ವಿನ್ ರಿಯಾವನ್ನು ಕನಿಷ್ಠ ಕಾಳಜಿ ಬೇಕಿರುವ ಪಕ್ಷಿ ಎಂದು ವರ್ಗೀಕರಿಸಲಾಗಿದೆ.[೫]

ಆಹಾರ[ಬದಲಾಯಿಸಿ]

ಇವು ಸರ್ವಭಕ್ಷಿಗಳು. ಇವು ಹಣ್ಣುಗಳು, ಬೀಜಗಳು ಮತ್ತು ಬೇರುಗಳನ್ನು ಹಾಗೂ ಕೀಟಗಳು, ಸರೀಸೃಪಗಳು ಮತ್ತು ಇಲಿಗಳನ್ನು ತಿನ್ನುತ್ತವೆ.

ಸಂತಾನೋತ್ಪತ್ತಿ[ಬದಲಾಯಿಸಿ]

ಒಂದು ಗಂಡು ಅನೇಕ ಹೆಣ್ಣುಪಕ್ಷಿಗಳೊಂದಿಗೆ ಕೂಡುತ್ತದೆ. ಮಿಲನದ ನಂತರ ಗಂಡು ಗೂಡನ್ನು ಕಟ್ಟುತ್ತದೆ. ಇದರಲ್ಲಿ ಹೆಣ್ಣು ತನ್ನ ಮೊಟ್ಟೆಗಳನ್ನು ಇಡುತ್ತದೆ. ನೆಲದಲ್ಲಿ ಚಿಕ್ಕ ಕುಳಿ ತೋಡಿ ಒಣಎಲೆ ಹಾಗೂ ಹುಲ್ಲಿನ ಅಸ್ತರಿ ಹಾಕಿ ಗೂಡು ಕಟ್ಟುವ, ಹೆಣ್ಣು ಒಂದುಬಾರಿಗೆ ಇಡುವ ಸು. 50 ಮೊಟ್ಟೆಗಳಿಗೆ ಕಾವು ಕೊಡುವ, ಸು. 6 ವಾರಗಳ ಬಳಿಕ ಹೊರಬರುವ ಅಸಹಾಯಕ ಮರಿಗಳನ್ನು ಮತ್ತೂ 6 ವಾರ ಕಾಲ ಸಂರಕ್ಷಿಸುವ ಜವಾಬ್ದಾರಿಗಳನ್ನೂ ಗಂಡು ಪಕ್ಷಿಗಳು ನಿಭಾಯಿಸುತ್ತವೆ.

ಮಾನವ ಸಂವಹನ[ಬದಲಾಯಿಸಿ]

ದಕ್ಷಿಣ ಅಮೆರಿಕಾದಲ್ಲಿ ರಿಯಾಗಳಿಗೆ ಅನೇಕ ಉಪಯೋಗಗಳಿವೆ. ಗರಿಗಳನ್ನು ತೊಡಪಗಳಿಗೆ ಬಳಸಲಾಗುತ್ತದೆ, ಚರ್ಮವನ್ನು ಹೊದಿಕೆಗಳು ಅಥವಾ ತೊಗಲಿಗಾಗಿ ಬಳಸಲಾಗುತ್ತದೆ, ಮತ್ತು ಇವುಗಳ ಮಾಂಸವು ಅನೇಕ ಜನರಿಗೆ ಪ್ರಧಾನ ಆಹಾರವಾಗಿದೆ.[೬]

ಗೌಚೋ ಜನರು ಸಾಂಪ್ರದಾಯಿಕವಾಗಿ ಕುದುರೆ ಮೇಲೆ ರಿಯಾಗಳನ್ನು ಬೇಟೆಯಾಡುತ್ತಾರೆ, ಅವುಗಳ ಕಾಲುಗಳಿಗೆ ಗುರಿಯಿಟ್ಟು ಬೋಲಾಗಳು ಅಥವಾ ಬೊಲೆಡೋರಾಗಳನ್ನು ಎಸೆಯುತ್ತಾರೆ (ಇದು ಎಸೆಯುವ ಸಾಧನವಾಗಿದ್ದು ಹಗ್ಗದಿಂದ ಜೋಡಣೆಗೊಂಡ ಮೂರು ಚೆಂಡುಗಳನ್ನು ಹೊಂದಿರುತ್ತದೆ). ಇದು ಪಕ್ಷಿಯನ್ನು ನಿಶ್ಚಲಗೊಳಿಸುತ್ತದೆ.[೭] ರಿಯಾವನ್ನು ೧೯೮೭ ರಲ್ಲಿ ಮುದ್ರಿಸಲಾದ ಅರ್ಜೆಂಟೀನಾದ ೧ ಸೆಂಟಾವೊ ನಾಣ್ಯದ ಮೇಲೆ ಮತ್ತು ಉರುಗ್ವೆಯ ೫ ಪೆಸೊ ನಾಣ್ಯದ ಮೇಲೆ ಚಿತ್ರಿಸಲಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. Radio San Gabriel, "Instituto Radiofonico de Promoción Aymara" (IRPA) 1993, Republicado por Instituto de las Lenguas y Literaturas Andinas-Amazónicas (ILLLA-A) 2011, Transcripción del Vocabulario de la Lengua Aymara, P. Ludovico Bertonio 1612 (Spanish-Aymara-Aymara-Spanish dictionary)
  2. Teofilo Laime Ajacopa (2007). Diccionario Bilingüe: Iskay simipi yuyayk’anch: Quechua – Castellano / Castellano – Quechua (PDF). La Paz, Bolivia.{{cite book}}: CS1 maint: location missing publisher (link)
  3. http://datazone.birdlife.org/species/factsheet/22678073
  4. "(Rhea pennata) - BirdLife species factsheet". datazone.birdlife.org. Retrieved 11 January 2020.
  5. "The IUCN Red List of Threatened Species". IUCN Red List of Threatened Species. Retrieved 11 January 2020.
  6. Davies, S. J. J. F. (2003). "Rheas". In Hutchins, Michael (ed.). Grzimek's Animal Life Encyclopedia. Vol. 8 Birds I Tinamous and Ratites to Hoatzins (2nd ed.). Farmington Hills, MI: Gale Group. pp. 69–71. ISBN 0787657840.
  7. Coomber, Richard (1991). "Rheiformes: Rheas". In Gill Waugh (ed.). Birds of the World. Godalming, Surrey: Colour Library Books Ltd. pp. 8–9. ISBN 0862838061.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ರಿಯಾ&oldid=1192290" ಇಂದ ಪಡೆಯಲ್ಪಟ್ಟಿದೆ