ವಿಷಯಕ್ಕೆ ಹೋಗು

ಸಂಯುಕ್ತ ಕರ್ನಾಟಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಂಯುಕ್ತ ಕರ್ನಾಟಕ (ದಿನಪತ್ರಿಕೆ)
ಪ್ರಕಟಣೆ: ಹುಬ್ಬಳ್ಳಿ,ಬೆಂಗಳೂರು, ಕಲ್ಬುರ್ಗಿ, ದಾವಣಗೆರೆ, ಮಂಗಳೂರು
ಈಗಿನ ಸಂಪಾದಕರು: ಹುಣಸವಾಡಿ ರಾಜನ್
ಜಾಲತಾಣ: http://www.samyukthakarnataka.com/
ಇವನ್ನೂ ನೋಡಿ ವರ್ಗ:ಕನ್ನಡ ಪತ್ರಿಕೆಗಳು

ಸಂಯುಕ್ತ ಕರ್ನಾಟಕ ಹುಬ್ಬಳ್ಳಿ, ಬೆಂಗಳೂರು, ಕಲ್ಬುರ್ಗಿ, ದಾವಣಗೆರೆ ಹಾಗೂ ಮಂಗಳೂರು ಕೇಂದ್ರಗಳಿಂದ ಪ್ರಕಾಶಿತವಾಗುತ್ತಿರುವ ಒಂದು ಪ್ರಮುಖ ಹಾಗೂ ಅತ್ಯಂತ ಹಳೆಯ ಕನ್ನಡ ದಿನಪತ್ರಿಕೆ.

ಆರಂಭ[ಬದಲಾಯಿಸಿ]

ಸ್ವಾತಂತ್ರ್ಯ ಹೋರಾಟಕ್ಕಾಗಿ ಪತ್ರಿಕೆಗಳ ಒಗ್ಗೂಡುವಿಕೆ[ಬದಲಾಯಿಸಿ]

ಕರ್ಮವೀರ ನಡೆಸುತ್ತಿದ್ದ ರಂಗನಾಥ ದಿವಾಕರ ಮತ್ತು ಮಿತ್ರರಿಗೆ ದಿನಪತ್ರಿಕೆಯೊಂದನ್ನು ಆರಂಭಿಸುವ ಇಚ್ಛೆಯಿತ್ತು. ದತ್ತೋಪಂತ ಬೆಳವಿ,ನಾರಾಯಣರಾವ್ ಜೋಷಿ,ದಾತಾರ ಬಳವಂತರಾವ್,ಗೋಖಲೆ ಕೇಶವರಾವ್ ಮುಂತಾದ ಪ್ರಮುಖ ರಾಷ್ಟ್ರಾಭಿಮಾನಿಗಳು ದಿವಾಕರರೊಂದಿಗೆ ಸೇರಿ ಬಾಗಲಕೋಟೆಕನ್ನಡಿಗ, ಬೆಳಗಾವಿಅರುಣೋದಯ ಮುಂತಾದ ಕೆಲವು ಪತ್ರಿಕೆಗಳನ್ನು ಒಗ್ಗೂಡಿಸಿ ೧೯೩೩ರಲ್ಲಿ ಸಂಯುಕ್ತ ಕರ್ನಾಟಕ ವಾರಪತ್ರಿಕೆಯನ್ನು ಬೆಳಗಾವಿಯಲ್ಲಿ ಆರಂಭಿಸಿದರು. ಕಾಂಗ್ರೆಸ್‌ನ ಬೆಳಗಾವಿ ಅಧಿವೇಶನದ ನಂತರ ಕೆಲದಿನಗಳಲ್ಲಿ ಹುಬ್ಬಳ್ಳಿಯಿಂದ ವಿ.ಬಿ.ಪುರಾಣಿಕರ ಸಂಪಾದಕತ್ವದಲ್ಲಿ ಆರಂಭವಾದ ಹೊಸ ರಾಷ್ಟ್ರೀಯ ದಿನಪತ್ರಿಕೆ ಲೋಕಮತ. ನಾರಾಯಣರಾವ್ ಕಲ್ಲೆ, ಮಾಜಿ ಮಂತ್ರಿ ಕಲ್ಲನಗೌಡ ಪಾಟೀಲರು ಸಂಪಾದಕೀಯ ವರ್ಗದಲ್ಲಿದ್ದ ಪತ್ರಿಕೆ ಶೀಘ್ರವೇ ಜನಪ್ರಿಯತೆ ಗಳಿಸಿತು.

ಹುಬ್ಬಳ್ಳಿಗೆ ಪ್ರವೇಶ[ಬದಲಾಯಿಸಿ]

ಲೋಕ ಶಿಕ್ಷಣ ಟ್ರಸ್ಟ್[ಬದಲಾಯಿಸಿ]

ಇದನ್ನು ಕಂಡು ಬೆಳಗಾವಿಯಿಂದ ಪ್ರಕಟವಾಗುತ್ತಿದ್ದ ಸಂಯುಕ್ತ ಕರ್ನಾಟಕವು ಹುಬ್ಬಳ್ಳಿಗೆ ಬಂತು. ರಂಗನಾಥ ದಿವಾಕರ ಧರ್ಮದರ್ಶಿತ್ವದಲ್ಲಿ, ಮೊಹರೆ ಹಣಮಂತರಾಯರ ಸಂಪಾದಕತ್ವದಲ್ಲಿ ಪತ್ರಿಕೆ ಅಭಿವೃದ್ಧಿಯಾಯಿತು. ೧೯೩೪ರಿಂದ ಕಾಲು ಶತಮಾನ, ಅಂದರೆ ಪತ್ರಿಕೆಯನ್ನು "ಲೋಕ ಶಿಕ್ಷಣ ಟ್ರಸ್ಟ್" ವಹಿಸಿಕೊಂಡ ನಂತರವೂ ಸಂಪಾದಕರಾಗಿದ್ದು ಪತ್ರಿಕೆಯನ್ನು ಬೆಳೆಸಿಕೊಂಡು ಬಂದರು. ಬಾಗಲಕೋಟೆಯ ಪುರೋಹಿತ ಬಂಧುಗಳು ರಂಗನಾಥ ದಿವಾಕರರಿಗೆ ಬೆಂಬಲವಾಗಿ ನಿಂತರು. ಹಿರಿಯರಾದ ತಮ್ಮಣ್ಣಾಚಾರ್ಯ ಪುರೋಹಿತರು ಪತ್ರಿಕೆಯ ವ್ಯವಸ್ಥಾಪಕರಾದರು. ಕಿರಿಯರಾದ ಹ.ರಾ.ಪುರೋಹಿತರು ಸಂಪಾದಕೀಯ ಮಂಡಲಿಯ ಹಿರಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು. ನಾರಾಯಣರಾವ್ ಕಲ್ಲೆ ರಂಗನಾಥ ದಿವಾಕರರ ಆಪ್ತ ಸಂಪಾದಕೀಯ ಸಲಹೆಗಾರರಾಗಿ ಕೆಲ ವರ್ಷ ಕಾರ್ಯನಿರ್ವಹಿಸಿದರು.

`ಸಂಯುಕ್ತ ಕರ್ನಾಟಕ' ಪತ್ರಿಕೆಯ ಧ್ಯೇಯೋದ್ದೇಶಗಳು - ಸ್ವತಂತ್ರ ಭಾರತ ಹಾಗೂ ಏಕತಂತ್ರ ಕರ್ನಾಟಕ. 1956ರ ಹೊತ್ತಿಗೆ ಇವೆರಡೂ ಉದ್ದಿಶ್ಯಗಳು ಸಂಪೂರ್ಣವಾಗಿ ಈಡೇರಿದ್ದವು. ರಂಗನಾಥ ದಿವಾಕರ ಬಿಹಾರದ ರಾಜ್ಯಪಾಲರಾಗಿದ್ದರು. ಈ ಸಮಯದಲ್ಲಿ ಅವರಿಗೊಂದು ಕನಸು ಹುಟ್ಟಿತು. ಕೇವಲ ಹುಬ್ಬಳ್ಳಿಯಿಂದ ಪ್ರಕಟವಾಗುತ್ತಿರುವ ಪತ್ರಿಕೆ ಇಡೀ ಮೈಸೂರು ರಾಜ್ಯವನ್ನು ತಲುಪುತ್ತಿಲ್ಲ. ಇಡೀ ರಾಜ್ಯದಲ್ಲಿ ಜನಜಾಗೃತಿ ಮೂಡಿಸಬೇಕೆಂದರೆ ರಾಜಧಾನಿಯಾದ ಬೆಂಗಳೂರಿನಿಂದಲೂ ಒಂದು ಆವೃತ್ತಿಯನ್ನು ತರಬೇಕು. ಈ ಕೆಲಸಕ್ಕೆ ಹುಬ್ಬಳ್ಳಿಯಲ್ಲಿ ವ್ಯವಸ್ಥಾಪನೆಯ ಹೊಣೆ ಹೊತ್ತಿದ್ದ ಎಂ.ಎಚ್.ಕೌಜಲಗಿ ಅವರನ್ನು ದಿವಾಕರ ಅವರು ನಿಯೋಜಿಸಿದರು.

ಬೆಂಗಳೂರು ಮುದ್ರಣ[ಬದಲಾಯಿಸಿ]

ದ್ವಿತೀಯ ಮಹಾಯುದ್ಧ ಸಮಯದಲ್ಲಿ ಸಂಜಯ ಎನ್ನುವ ಸ್ವಂತ ವಾರಪತ್ರಿಕೆಯನ್ನು ಪ್ರಕಟಿಸಲೆಂದು ‘ಸಂಕ’ದ ಹುಬ್ಬಳ್ಳಿ ಕಚೇರಿಯನ್ನು ತೊರೆದಿದ್ದ ಕೆ.ಶಾಮರಾವ್ ಅವರನ್ನು ಬೆಂಗಳೂರು ಮುದ್ರಣದ ಕೆಲಸಕ್ಕೆಂದು ಮತ್ತೆ ಕರೆಯಲಾಯಿತು. ಎರಡು ಕೇಂದ್ರಗಳಲ್ಲಿ ಒಂದೇ ಪತ್ರಿಕೆಯ ಆವೃತ್ತಿಗಳನ್ನು ಹೊರತರುವ ಪ್ರಯೋಗ ಕನ್ನಡ ಪತ್ರಿಕೋದ್ಯಮಕ್ಕೆ ಅಂದು ಹೊಸತಾಗಿತ್ತು.

ಕಚೇರಿ[ಬದಲಾಯಿಸಿ]

ಸ್ವಂತ ಕಚೇರಿಯೊಂದು ಬೆಂಗಳೂರಿನಲ್ಲಿರದ ಕಾರಣ, ಶಾಮರಾವ್ ಅವರ ಮನೆಯಲ್ಲಿಯೇ ಟೆಲಿಪ್ರಿಂಟರ್ ಯಂತ್ರವನ್ನು ಜೋಡಿಸಲಾಯಿತು. ಕನ್ನಡ ಲಿಪಿಯಲ್ಲಿ ಟೈಪ್ ಮಾಡುವ ಸೌಲಭ್ಯವಿಲ್ಲದಿದ್ದ ಕಾರಣ, ಇಂಗ್ಲಿಷ್ ಲಿಪಿಯಲ್ಲಿಯೇ ಕನ್ನಡ ಪದಗಳನ್ನು ಟೈಪ್ ಮಾಡಿ ಹುಬ್ಬಳ್ಳಿಗೆ ವರದಿಗಳನ್ನು ಕಳುಹಿಸುವ ಕೆಲಸ ಆರಂಭವಾಯಿತು. ಬಹು-ಮುದ್ರಣ ಆವೃತ್ತಿಗಳಿದ್ದ ಹಿಂದೂ ಮತ್ತು ಇಂಡಿಯನ್ ಎಕ್ಸ್‍ಪ್ರೆಸ್ ಪತ್ರಿಕೆಗಳ ಮದ್ರಾಸ್ ಕಚೇರಿಗಳಲ್ಲಿ ಕೌಜಲಗಿ ಹಾಗೂ ಶಾಮರಾವ್ ಟೆಲಿಪ್ರಿಂಟರ್ ವ್ಯವಸ್ಥೆಯ ಬಳಕೆಯ ಬಗ್ಗೆ ತರಬೇತಿ ಪಡೆದರು.

ಸಿಬ್ಬಂದಿ ನೇಮಕ[ಬದಲಾಯಿಸಿ]

‘ಸಂಕ’ದ ಬೆಂಗಳೂರು ಆವೃತ್ತಿಯ ಬುನಾದಿ ಹಾಕುವ ಸಮಯದಲ್ಲಿಯೇ ತಾಯಿನಾಡು ಪತ್ರಿಕೆಯ ಮಾಲಿಕತ್ವ ಸ್ವಾತಂತ್ರ್ಯ ಹೋರಾಟಗಾರ ಪಿ.ಆರ್.ರಾಮಯ್ಯನವರಿಂದ ಎಂಜಿನಿಯರಿಂಗ್ ಕಂಟ್ರ್ಯಾಕ್ಟರ್ ಎಂ.ಎಸ್.ರಾಮಯ್ಯನವರಿಗೆ ಹಸ್ತಾಂತರವಾಯಿತು (1958). ಪತ್ರಿಕೋದ್ಯೋಗದಲ್ಲಿ ಮೌಲ್ಯಗಳನ್ನು ಎತ್ತಿ ಹಿಡಿದ ಪಿ.ಆರ್.ರಾಮಯ್ಯನವರ ಮಾರ್ಗದರ್ಶನದಲ್ಲಿ ಕೆಲಸ ಮಾಡಿದವರು ‘ಸಂಕ’ದ ವಾತಾವರಣಕ್ಕೆ ಸುಲಭವಾಗಿ ಹೊಂದಿಕೊಳ್ಳುವರೆಂಬ ನಂಬಿಕೆ ಸಂಪಾದಕ ಮೊಹರೆ ಹಣಮಂತರಾಯ ಅವರದಾಗಿತ್ತು. ತಾಯಿನಾಡು ಪತ್ರಿಕೆಯ ಅನುಭವಿ ಪತ್ರಕರ್ತರನ್ನು ‘ಸಂಕ’ದ ಬೆಂಗಳೂರು ಆವೃತ್ತಿಗೆ ನೇಮಕ ಮಾಡಿಕೊಳ್ಳುವ ನಿರ್ಧಾರವಾಯಿತು. ಜತೆಗೆ ಸಂಪೂರ್ಣ ಹುಬ್ಬಳ್ಳಿಯದಾಗಿದ್ದ ‘ಸಂಕ”ವನ್ನು ಹಳೆಯ ಮೈಸೂರು ಜನರಿಗೆ ಪರಿಚಯಿಸುವ ಕಾರ್ಯಕ್ಕೆ ತಾಯಿನಾಡು ಪತ್ರಕರ್ತರು ಸೂಕ್ತ ಎಂಬ ಚಿಂತನೆಯೂ ಇತ್ತು. ಕಾದಂಬರಿಕಾರ, ಗ್ರಾಮಾಯಣ ಖ್ಯಾತಿಯ ರಾವಬಹಾದ್ದೂರ (ಆರ್.ಬಿ.ಕುಲಕರ್ಣಿ) ಅವರನ್ನು ಬೆಂಗಳೂರು ಆವೃತ್ತಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಯಿತು. ತಾಯಿನಾಡು ಪತ್ರಿಕೆಯಲ್ಲಿ ಹಿರಿಯ ಉಪಸಂಪಾದಕ, ಸಂಪಾದಕೀಯ ಬರಹಗಾರ ಹಾಗೂ ಸಂಪಾದಕರ ನಂತರದ ಸ್ಥಾನದಲ್ಲಿದ್ದ ಹೆಚ್.ಆರ್.ನಾಗೇಶರಾವ್ 1958ರ ಆಗಸ್ಟ್ ತಿಂಗಳಿನಲ್ಲಿ ‘ಸಂಕ’ವನ್ನು ಸೇರಿದರು. ನಂತರ ತಾಯಿನಾಡು ಪತ್ರಿಕೆಯ ಹಿರಿಯ ಹುದ್ದೆಗಳಲ್ಲಿದ್ದ ಕೆ.ಅನಂತಸುಬ್ಬರಾವ್ ಹಾಗೂ ಎಸ್.ವ್ಯಾಸರಾವ್ ‘ಸಂಕ’ ಸೇರಿದರು. ಇವರೆಲ್ಲರಿಗೂ ಮುಂಚೆ ತಾಯಿನಾಡುವಿನಲ್ಲಿ ವ್ಯವಸ್ಥಾಪಕರಾಗಿದ್ದ ಕೆ.ಆರ್.ವೆಂಕಟಾಚಲಪತಿಯವರು ಎಂ.ಎಚ್.ಕೌಜಲಗಿಯವರ ಜತೆಗೂಡಿದ್ದರು. ವಿಶ್ವ ಕರ್ನಾಟಕದಿಂದ ಕವಿ ಅರ್ಚಕ ವೆಂಕಟೇಶ, ಕತೆಗಾರ ಭಾರತೀಪ್ರಿಯ (ಎಸ್.ವೆಂಕಟರಾವ್), ಶ್ರೀನಿವಾಸ ತುಪ್ಪ ಸಂಪಾದಕ ಮಂಡಲಿ ಸೇರಿದರು. ನಂತರ ಯುವ ಬರಹಗಾರರಾಗಿದ್ದ ಮತ್ತೂರು ಕೃಷ್ಣಮೂರ್ತಿ ಅವರ ನೇಮಕವಾಯಿತು. ಪ್ರಜಾವಾಣಿ ಬಿಟ್ಟು ಎಂ.ಎಸ್.ರಾಮಯ್ಯನವರ ತಾಯಿನಾಡು ಸಮೂಹದ ಗೋಕುಲ ವಾರಪತ್ರಿಕೆಯ ಸಂಪಾದಕರಾಗಿದ್ದ ಖಾದ್ರಿ ಶಾಮಣ್ಣ ಹಾಗೂ ‘ಜನಪ್ರಗತಿ’ ಸಂಪಾದಕರಾಗಿದ್ದ ಬಿ.ಶ್ರೀನಿವಾಸಮೂರ್ತಿ ‘ಸಂಕ’ಕ್ಕೆ ಬಂದರು. ಕಲೆ-ಸಾಹಿತ್ಯ-ಸಂಸ್ಕೃತಿ ಪುಟ/ಪುರವಣಿಗಳನ್ನು ನೋಡಿಕೊಳ್ಳಲು ಮಾ.ನಾ.ಚೌಡಪ್ಪನವರ ನೇಮಕವಾಯಿತು.

1959ರ ಜನವರಿ 26ರಂದು `ಸಂಯುಕ್ತ ಕರ್ನಾಟಕ' ದಿನಪತ್ರಿಕೆಯ ಬೆಂಗಳೂರು ಆವೃತ್ತಿಯನ್ನು ಮೈಸೂರು ರಾಜ್ಯದ ರಾಜ್ಯಪಾಲರಾಗಿದ್ದ ಮಾಜಿ ಮೈಸೂರು ಮಹಾರಾಜ ಜಯಚಾಮರಾಜೆಂದ್ರ ಒಡೆಯರ್ ಅವರು ಉದ್ಘಾಟಿಸಿದರು. ಅದರ ಹಿಂದಿನ ದಿನವೇ ಒಡೆಯರ್ ಅವರಿಂದ ಪತ್ರಿಕೆಯ ಕಚೇರಿ ಹಾಗೂ ಮುದ್ರಣಾಲಯದ ಉದ್ಘಾಟನೆಯಾಯಿತು. ಮುಂದೆ ಹುಬ್ಬಳ್ಳಿ ಕಚೇರಿಯಲ್ಲಿದ್ದ ಸುರೇಂದ್ರ ದಾನಿ ಬೆಂಗಳೂರಿಗೆ ವರ್ಗಾವಣೆಗೊಂಡರು. ನರಸಿಂಹ ಜೋಶಿ ಬೆಂಗಳೂರು ಕಚೇರಿಯಲ್ಲಿ ವೃತ್ತಿಜೀವನವನ್ನು ಆರಂಭಿಸಿದರು.

ಹೊಸ ಪ್ರಯೋಗ[ಬದಲಾಯಿಸಿ]

ಹೆಚ್.ಆರ್.ನಾಗೇಶರಾವ್ ಸಂಗ್ರಹದಿಂದ

ಹೊಸತನವನ್ನು ಮೈಗೂಡಿಸಿಕೊಂಡಿದ್ದ ‘ಸಂಕ’ದ ಬೆಂಗಳೂರು ಮುದ್ರಣ ಆರಂಭದ ವರ್ಷದಲ್ಲೇ ಪ್ರಯೋಗವೊಂದನ್ನು ನಡೆಸಿ ಯಶಸ್ವಿಯಾಯಿತು. ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶಗಳನ್ನು ಉಳಿದೆಲ್ಲ ಪತ್ರಿಕೆಗಳಿಗಿಂತಲೂ ಮೊದಲು ವಿದ್ಯಾರ್ಥಿಗಳಿಗೆ ತಲುಪಿಸುವ ಹೊಸ ಪ್ರಯೋಗವದು. ಸಾಮಾನ್ಯವಾಗಿ ಫಲಿತಾಂಶಗಳು ಅಧಿಕೃತವಾಗಿ ಪ್ರಕಟಗೊಳ್ಳುತ್ತಿದ್ದದ್ದು ಬೆಳಗ್ಗೆ 9 ಗಂಟೆಗೆ. ಪತ್ರಿಕೆಗಳು ಮುಂಜಾನೆ 6 ಗಂಟೆಗೇ ಜನರನ್ನು ತಲುಪುತ್ತಿದ್ದ ಕಾರಣ, ಫಲಿತಾಂಶ ಮರುದಿನದ ಸಂಚಿಕೆಯಲ್ಲಿ ಪ್ರಕಟವಾಗುತ್ತಿದ್ದವು. ಪರೀಕ್ಷಾ ಫಲಿತಾಂಶದ ಅಚ್ಚು ಜೋಡಣೆಗೆ ಅನುವು ಮಾಡಿಕೊಡಲು ವಿದ್ಯಾ ಇಲಾಖೆಯು ಒಂದು ದಿನ ಮುಂಚಿತವಾಗಿಯೇ ಪತ್ರಿಕಾ ಕಚೇರಿಗಳಿಗೆ ಫಲಿತಾಂಶ ಪಟ್ಟಿಯನ್ನು ಕೊಡುತ್ತಿತ್ತು. ಅದು ಬಂದ ಕೂಡಲೇ ಸಂಪಾದಕೀಯ ತಂಡವು ಪ್ರತ್ಯೇಕವಾಗಿ ಹನ್ನೆರಡು ಗಂಟೆಗಳ ಕಾಲ ಸತತವಾಗಿ ಕೂತು ಫಲಿತಾಂಶವನ್ನು ಕಂಪೋಸ್ ಮಾಡಿ, ಎರಡೆರಡು ಬಾರಿ ಪ್ರೂಫ್ ನೋಡಿ, ಮುದ್ರಣಕ್ಕೆ ಅಣಿ ಮಾಡಿತು. ಯಾವ ತಪ್ಪೂ ಇಲ್ಲದ ಎಸ್.ಎಸ್.ಎಲ್.ಸಿ. ಫಲಿತಾಂಶದ ‘ಸಂಕ’ ವಿಶೇಷ ಪುರವಣಿಯನ್ನು ವಿದ್ಯಾ ಇಲಾಖೆ ಅಧಿಕೃತವಾಗಿ ಫಲಿತಾಂಶ ಪ್ರಕಟ ಮಾಡುತ್ತಿದ್ದ ಕಬ್ಬನ್ ಪಾರ್ಕ್ನ ವಿಕ್ಟರಿ ಹಾಲ್‍ನ ಮುಂದೆಯೇ 9ಗಂಟೆಯ ಹೊತ್ತಿಗ ಸಹಸ್ರಾರು ಪ್ರತಿಗಳನ್ನು ಉಚಿತವಾಗಿ ಹಂಚಲಾಯಿತು. ಪರವೂರಿನ ಎಲ್ಲ ಏಜೆಂಟರಿಗೂ ಬೆಳಗ್ಗೆ 9 ಗಂಟೆಯ ಹೊತ್ತಿಗೇ ಪತ್ರಿಕೆಯ ಪ್ರತಿಗಳನ್ನು ತಲುಪುವ ಹಾಗೆ ಮಾಡಿ, ಇಡೀ ರಾಜ್ಯಕ್ಕೆ ಏಕಕಾಲದಲ್ಲಿ ಫಲಿತಾಂಶ ಸೇರುವಂತೆ ನೋಡಿಕೊಳ್ಳಲಾಯಿತು. ಮೈಸೂರು ರಾಜ್ಯದಲ್ಲಿ ಇಂಥ ಸಾಹಸ ಮಾಡಿದ ಮೊದಲ ಪತ್ರಿಕೆಯೆಂಬ ಹೆಗ್ಗಳಿಕೆ ‘ಸಂಕ’ದ್ದಾಯಿತು. ಪಿ.ರಾಮಣ್ಣ, ವಿ.ಆರ್.ಶ್ಯಾಮ್ (ಇಂದಿರಾತನಯ), ಜಿ.ಎಸ್.ಸದಾಶಿವ, ಜಿ.ಎನ್.ರಂಗನಾಥರಾವ್, ಖಾದ್ರಿ ಎಸ್.ಅಚ್ಯುತನ್, ಕೆ.ಎಸ್.ನಾಗಭೂಷಣಂ, ಸೂ.ರಮಾಕಾಂತ, ಜಯರಾಮ ಅಡಿಗರಂಥ ಸಾಹಿತ್ಯಪ್ರೇಮಿ ಉಪಸಂಪಾದಕರು, ಪ್ರಹ್ಲಾದ ಕುಳಲಿ, ಕೆ.ರಾಜಾರಾವ್, ಎನ್.ಅರ್ಜುನದೇವ, ಸಿ.ಟಿ.ಜೋಶಿ, ಕೆ.ಜಯತೀರ್ಥರಾವ್, ಶೇಷಚಂದ್ರಿಕರಂಥ ವರದಿಗಾರರು `ಸಂಕ'ದ ಮುನ್ನಡೆಗೆ ಶ್ರಮಿಸಿದರು. ಕ್ರೀಡಾಪುಟ ನೋಡಿಕೊಳ್ಳಲು ಎಸ್.ದೇವನಾಥ್, ಪಿ.ಸಿ.ಅಪ್ಪಾಜಿ, ಎಂ.ಎ.ಪೊನ್ನಪ್ಪ ಜತೆಗೂಡಿದರು. ಶ್ಯಾಮಸುಂದರ ಕುಲಕರ್ಣಿ ಸಿನಿಮಾ ಪುಟಗಳ ಉಸ್ತುವಾರಿ ವಹಿಸಿಕೊಂಡರು. ಅತಿ ಶೀಘ್ರದಲ್ಲೇ ‘ಸಂಕ’ ಅತ್ಯಧಿಕ ಪ್ರಸಾರದ ಕನ್ನಡ ದಿನಪತ್ರಿಕೆಯ ಸ್ಥಾನ ಪಡೆಯಿತು.

ಲೋಕ ಶಿಕ್ಷಣ ಟ್ರಸ್ಟ್ ಮಾರಾಟ[ಬದಲಾಯಿಸಿ]

ಬದಲಾದ ಸಂಪಾದಕೀಯ ಮಂಡಳಿ[ಬದಲಾಯಿಸಿ]

೧೯೭೪ರಲ್ಲಿ ಸಂಯುಕ್ತ ಕರ್ನಾಟಕ

ಆ ಯಶಸ್ಸಿನ ಹಿನ್ನೆಲೆಯಲ್ಲಿ ಲೋಕ ಶಿಕ್ಷಣ ಟ್ರಸ್ಟ್ನ ಧರ್ಮದರ್ಶಿಯಾಗಿದ್ದ ರಂಗನಾಥ ದಿವಾಕರ ಅವರು ತಮ್ಮ ಮಗ ಅನಂತ ದಿವಾಕರ ಅವರಿಗೆ ಆಡಳಿತ ಚುಕ್ಕಾಣಿ ನೀಡಿದರು. ಖಾಸಗಿ ಆಸ್ತಿಯಂತೆ ಟ್ರಸ್ಟ್ ನ ಆಡಳಿತ ನಡೆಯಲಾರಂಭಿಸಿತು. ಆಡಳಿತದೊಂದಿಗೆ ಸಂಪಾದಕೀಯ ಮಂಡಳಿಯೊಂದಿಗಿನ ಸಾಮರಸ್ಯ ಕಡಿಮೆಯಾಗಲಾರಂಭಿಸಿತು. ಇಂಡಿಯನ್ ಎಕ್ಸ್‍ಪ್ರೆಸ್ ಸಮೂಹದ ಕನ್ನಡಪ್ರಭ ದಿನಪತ್ರಿಕೆಯೂ ಪ್ರಜಾವಾಣಿಯೊಂದಿಗೆ ಸಂಯುಕ್ತ ಕರ್ನಾಟಕಕ್ಕೆ ತೀವ್ರ ಪೈಪೋಟಿ ನೀಡಲಾರಂಭಿಸಿತು. ನುರಿತ ಹಾಗೂ ಅನುಭವಿ ಪತ್ರಕರ್ತರು ‘ಸಂಕ’ ದಾಟಿ ಇತರ ಪತ್ರಿಕೆಗಳತ್ತ ದಾರಿ ಹುಡುಕಿಕೊಂಡರು. ರಂಗನಾಥ ದಿವಾಕರ ಅವರಿಗೆ ತಮ್ಮ ಕನಸು ಭಗ್ನವಾದಂತೆನಿಸಿ ಅಕ್ಟೋಬರ್ 1974ರಲ್ಲಿ ಪತ್ರಿಕಾ ಸಮೂಹವನ್ನು ಮುಖ್ಯ ಮಂತ್ರಿ ಡಿ.ದೇವರಾಜ ಅರಸು ಅವರ ಆಪ್ತರಾಗಿದ್ದ ಸಚಿವ ಎಂ.ವೈ.ಘೋರ್ಪಡೆ ಅವರ ಕರ್ನಾಟಕ ಪತ್ರಿಕಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಮಾರಾಟ ಮಾಡಿದರು. ಪ್ರಜಾವಾಣಿಗೆ ಹಿಂದಿರುಗಿ ಸುದ್ದಿ ಸಂಪಾದಕರಾಗಿದ್ದ ಖಾದ್ರಿ ಶಾಮಣ್ಣ ‘ಸಂಕ’ದ ಹೊಸ ಪ್ರಧಾನ ಸಂಪಾದಕರಾಗಿ ನಿಯುಕ್ತಿಗೊಂಡರು. ಜತೆಗೆ ಪ್ರಜಾವಾಣಿಯ ಪ್ರಧಾನ ವರದಿಗಾರರಾಗಿದ್ದ ಎಸ್.ವಿ.ಜಯಶೀಲರಾವ್ ಸಹ ಸಂಪಾದಕರಾಗಿ ಸೇರ್ಪಡೆಯಾದರು. ಪ್ರಜಾವಾಣಿಯ ಹಿರಿಯ ವರದಿಗಾರರಾಗಿದ್ದ ಕೆ.ಜನಾರ್ದನ ಹುಬ್ಬಳ್ಳಿ ಆವೃತ್ತಿಯ ಸ್ಥಾನಿಕ ಸಂಪಾದಕರಾಗಿ ಜತೆಗೂಡಿದರು. ಸಹಾಯಕ ಸಂಪಾದಕ ಹಾಗೂ ಪ್ರಧಾನ ವರದಿಗಾರರಾಗಿದ್ದ ಕೆ.ಶಾಮರಾವ್ ‘ಸಂಕ’ವನ್ನು ತೊರೆಯುವಂತಾಯಿತು. ಸಹಾಯಕ ಸಂಪಾದಕರಾಗಿದ್ದ ಸುರೇಂದ್ರ ದಾನಿ ಹುಬ್ಬಳ್ಳಿಗೆ ಮರಳಿದರು. ಹೆಚ್.ಆರ್.ನಾಗೇಶರಾವ್ ಸುದ್ದಿ ಸಂಪಾದಕರ ಸ್ಥಾನದಲ್ಲಿಯೇ ಮುಂದುವರಿದರು.

ಟ್ರಸ್ಟ್‌ನ ಆಸ್ತಿಯನ್ನು ಖಾಸಗಿ ಸೊತ್ತಿನಂತೆ ಪರಭಾರೆ ಮಾಡಿದ್ದು ಸರಿಯಲ್ಲವೆಂದು ಕೆ.ಶಾಮರಾವ್ ಧಾರವಾಡ ಜಿಲ್ಲಾ ನ್ಯಾಯಾಲಯದ ಮೊರೆ ಹೊಕ್ಕರು.

ಕರ್ಮವೀರಕ್ಕೆ ಹೊಸರೂಪವನ್ನು ಕೊಡಲಾಯಿತು. ಜಿ.ಪಿ.ಬಸವರಾಜು, ಗೋಪಾಲ ವಾಜಪೇಯಿ, ಗಂಗಾಧರ ಮೊದಲಿಯಾರ್, ಆರ್.ನರಸಿಂಹ, ಸರಜೂ ಕಾಟ್ಕರ, ಎನ್.ಗಾಯತ್ರಿದೇವಿ ಮೊದಲಾದ ನವ ಪೀಳಿಗೆಯ ಪತ್ರಕರ್ತರು `ಸಂಕ' ಸಮೂಹಕ್ಕೆ ಚೈತನ್ಯ ತಂದರು. ಆದರೆ ಪತ್ರಿಕೋದ್ಯಮದಲ್ಲಿನ ಅನುಭವದ ಕೊರತೆಯಿಂದ ಉದ್ಯಮಿ ಘೋರ್ಪಡೆ ಈ ವಹಿವಾಟಿನಲ್ಲಿ ಆಸಕ್ತಿ ಕಳೆದುಕೊಂಡರು. ಬದಲಾದ ಕರ್ನಾಟಕ ರಾಜ್ಯ ರಾಜಕಾರಣದಿಂದ ಪತ್ರಿಕೆಗಳನ್ನು ನಡೆಸುವುದು ಅವರಿಗೆ ಬೇಕಾಗಿರಲಿಲ್ಲ.

ಮರು ಮಾರಾಟ[ಬದಲಾಯಿಸಿ]

ದೇವರಾಜ ಅರಸು ಅವರಿಗೆ ಹತ್ತಿರದವರಾಗಿದ್ದ ಅಬಕಾರಿ ಉದ್ಯಮಿ ಹಾಗೂ ಲೋಕಸಭಾ ಸದಸ್ಯರಾಗಿದ್ದ ಹೆಚ್.ಆರ್.ಬಸವರಾಜ್ ಅವರಿಗೆ ಘೋರ್ಪಡೆಯವರು ಪತ್ರಿಕಾ ಸಮೂಹವನ್ನು ಡಿಸೆಂಬರ್ 1977ರಲ್ಲಿ ಮಾರಾಟ ಮಾಡಿದರು. ನ್ಯಾಯಾಲಯದಲ್ಲಿ ಮತ್ತಷ್ಟು ದೂರುಗಳು ದಾಖಲಾದವು. `ಜಯಕರ್ನಾಟಕ ನ್ಯೂಸ್‌ಪೇಪರ್ಸ್ ಪ್ರೈವೇಟ್ ಲಿಮಿಟೆಡ್' ಸಂಸ್ಥೆಯ ಹೆಸರಿನಲ್ಲಿ `ಸಂಕ'ದ ಆಡಳಿತ ಮುಂದುವರಿಯಿತು. ಕೆ.ಎಸ್.ರಾಮಕೃಷ್ಣಮೂರ್ತಿಯವರ ನಿಧನದಿಂದ ತೆರವಾದ ಕನ್ನಡಪ್ರಭ ಸಂಪಾದಕರ ಸ್ಥಾನಕ್ಕೆ ಖಾದ್ರಿ ಶಾಮಣ್ಣ ತೆರಳಿದರು. `ಜಯಕರ್ನಾಟಕ' ಸಂಸ್ಥೆಯ ವತಿಯಿಂದ ಪ್ರಕಟವಾಗುತ್ತಿದ್ದ ಪ್ರಜಾಪ್ರಭುತ್ವವೆಂಬ ಟ್ಯಾಬ್ಲಾಯ್ಡ್ ವಾರಪತ್ರಿಕೆಯ ಸಂಪಾದಕರಾಗಿದ್ದ ಸಾಹಿತಿ ಪ.ಸು.ಭಟ್ಟ `ಸಂಕ' ಸಮೂಹದ ಸಂಪಾದಕರಾದರು. ಚಿತ್ರದೀಪವೆಂಬ ಸಿನಿಮಾ ಪತ್ರಿಕೆಯನ್ನೂ ಆರ್.ನರಸಿಂಹ ಅವರ ನೇತೃತ್ವದಲ್ಲಿ ಆರಂಭಿಸಲಾಯಿತು.

ಮುಚ್ಚಿದ ಬೆಂಗಳೂರು ಮುದ್ರಣ[ಬದಲಾಯಿಸಿ]

ಪ.ಸು.ಭಟ್ಟ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಕೆಲಕಾಲ ‘ರಾವಬಹಾದ್ದೂರ’ ಅವರನ್ನು ನೇಮಕ ಮಾಡಲಾಯಿತು. ಅವರು ಬೆಂಗಳೂರು ಮುದ್ರಣಕ್ಕೆ ಮಾತ್ರ ಸಂಪಾದಕರಾಗಿದ್ದರು. ಕೆಲ ದಿನಗಳ ನಂತರ ಅವರೂ ರಾಜೀನಾಮೆ ನೀಡಿದರು. ಸಹ ಸಂಪಾದಕರಾಗಿದ್ದ ಎಸ್.ವಿ.ಜಯಶೀಲರಾವ್ ಬೆಂಗಳೂರು ಮುದ್ರಣವನ್ನು ನೋಡಿಕೊಂಡರು. ಅರಸು ಅಧಿಕಾರ ಕಳೆದುಕೊಂಡ ನಂತರ ಬಸವರಾಜ್ `ಸಂಕ'ದ ಬೆಂಗಳೂರು ಮುದ್ರಣವನ್ನು ಹಠಾತ್ ಆಗಿ ಮುಚ್ಚಿದರು (31-01-1980). ಜನಾರ್ದನ ರಾಜಿನಾಮೆಯಿತ್ತರು. ಘೋರ್ಪಡೆಯವರ ‘ಸಂಡೂರು ಮ್ಯಾಂಗನೀಸ್ ಅಂಡ್ ಐರನ್ ಓರ್ ಲಿಮಿಟೆಡ್ (ಸ್ಮಯೋರ್)’ ಕಂಪನಿಯ ಸಾರ್ವಜನಿಕ ಸಂಪರ್ಕಾಧಿಕಾರಿಯಾದರು. ಇತ್ತ ಹುಬ್ಬಳ್ಳಿ ಆವೃತ್ತಿಯ ಸ್ಥಾನಿಕ ಸಂಪಾದಕರ ಹುದ್ದೆ ಮತ್ತೀಹಳ್ಳಿ ನಾಗರಾಜರಾವ್ ಅವರದಾಯಿತು.

ನೌಕರರ ಹೋರಾಟಕ್ಕೆ ಸಿಕ್ಕ ಜಯ[ಬದಲಾಯಿಸಿ]

ಸರ್ಕಾರದ ಆಡಳಿತದಲ್ಲಿ ಪತ್ರಿಕೆ[ಬದಲಾಯಿಸಿ]

ಬಹು ಹಿಂದೆ ಆರಂಭಗೊಂಡಿದ್ದ ಸಂಯುಕ್ತ ಕರ್ನಾಟಕ ನೌಕರರ ಸಂಘ ಬೆಂಗಳೂರಿನಲ್ಲಿ ಮರುಚಾಲನೆಗೊಂಡಿತು. ನಾಗೇಶರಾವ್ ನೇತೃತ್ವದ ಸಂಘವು ಬೆಂಗಳೂರು ಆವೃತ್ತಿಯ ಪುನಾರಂಭಕ್ಕೆ ಒತ್ತಾಯಿಸಿ ಹೋರಾಟ ನಡೆಸಿತು. ಪತ್ರಕರ್ತರು ಸರದಿಯಲ್ಲಿ ವಿಧಾನಸೌಧದ ಮುಂದೆ ಉಪವಾಸ ಮುಷ್ಕರ ಹೂಡಿದರು. ಇತ್ತ ಅರ್ಜುನದೇವ, ಜಯಶೀಲರಾವ್, ಕೋಡಿಹೊಸಳ್ಳಿ ರಾಮಣ್ಣ ನೇತೃತ್ವದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವೂ ಹಕ್ಕೊತ್ತಾಯದ ಹೋರಾಟ ನಡೆಸಿತು. ಆರ್.ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದರು. ವೀರಪ್ಪ ಮೊಯ್ಲಿ ಸಂಪುಟ ಸಹೋದ್ಯೋಗಿಯಾಗಿದ್ದರು. ವಿಧಾನಸಭೆಯ ಅಧಿವೇಶನದಲ್ಲಿ ‘ಸಂಕ’ದ ಪುನಾರಂಭಕ್ಕೆ ಒತ್ತಾಯ ಹೆಚ್ಚಿತು. ಇತ್ತ ಧಾರವಾಡ ನ್ಯಾಯಾಲಯದಲ್ಲಿನ ವಾದ-ಪ್ರತಿವಾದಗಳೂ ಜೋರಾಗಿದ್ದವು. ಸರ್ಕಾರದ ದಯಾದೃಷ್ಟಿ, ನ್ಯಾಯಾಲಯದಲ್ಲಿ ಮೊಕ್ಕದ್ದಮೆ ಹೂಡಿದ್ದವರ ಸಹಕಾರ, ನೌಕರರ ಅನಿರ್ದಿಷ್ಟ ಹೋರಾಟದ ಫಲವಾಗಿ ಧಾರವಾಡ ಜಿಲ್ಲಾ ನ್ಯಾಯಾಲಯವು ಒಂದು ಮಧ್ಯಂತರ ತೀರ್ಪು ನೀಡಿತು. ಲೋಕ ಶಿಕ್ಷಣ ಟ್ರಸ್ಟ್ ನ ಮಾಲಿಕತ್ವ ಇತ್ಯರ್ಥವಾಗುವವರೆಗೆ ‘ದತ್ತಿ ಆಯುಕ್ತ’ರು (ಚಾರಿಟಿ ಕಮೀಷನರ್) ಆಡಳಿತ ನಡೆಸಬೇಕು ಎಂಬ ಆದೇಶವನ್ನು ಸೆಪ್ಟೆಂಬರ್ 1980ರಲ್ಲಿ ಹೊರಡಿಸಿತು. ಚಾರಿಟಿ ಕಮೀಷನರ್ ಆಗಿದ್ದ ವಾಮದೇವ ಅವರು ಲೋಕ ಶಿಕ್ಷಣ ಟ್ರಸ್ಟ್ ನ ರಿಸೀವರ್ ಆಗಿ ಆಡಳಿತ ವಹಿಸಿಕೊಳ್ಳುವುದರ ಜತೆಗೆ ‘ಸಂಕ’ದ ಹುಬ್ಬಳ್ಳಿ ಆವೃತ್ತಿಯ ಸಂಪಾದಕರಾಗಿಯೂ ಘೋಷಿಸಿಕೊಂಡರು. ನ್ಯಾಯಾಲಯವು ಮತ್ತೊಂದು ಆದೇಶದ ಮೂಲಕ ಬಿ.ವಿ.ಜಿಗಜಿನ್ನಿಯವರನ್ನು ರಿಸೀವರ್ ಆಗಿ ನೇಮಕ ಮಾಡಿದಂತೆ, ಅವರೂ ಸಹಾ ಸಂಪಾದಕರೆಂದು ಘೋಷಿಸಿಕೊಂಡರು. ಏತನ್ಮಧ್ಯೆ ‘ಸಂಕ’ದ ಬೆಂಗಳೂರು ಆವೃತ್ತಿ 20-12-1980ರಂದು ಪುನಾರಂಭಗೊಂಡಿತು. ಹನ್ನೊಂದು ತಿಂಗಳ ಸುದೀರ್ಘ ಹೋರಾಟಕ್ಕೆ ಜಯ ಸಿಕ್ಕಿತು. ಬೆಂಗಳೂರು ಆವೃತ್ತಿಗೆ ಕೊಡಗಿನ ಶಕ್ತಿ ದಿನಪತ್ರಿಕೆಯ ಸಂಪಾದಕರು ಹಾಗೂ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರ ಆಪ್ತರೂ ಆಗಿದ್ದ ಬಿ.ಎಸ್.ಗೋಪಾಲಕೃಷ್ಣ ಅವರ ನೇಮಕವಾಯಿತು. ಎಸ್.ವಿ.ಜಯಶೀಲರಾವ್ ಸಹ ಸಂಪಾದಕರಾಗಿ, ಹೆಚ್.ಆರ್.ನಾಗೇಶರಾವ್ ಸುದ್ದಿ ಸಂಪಾದಕರಾಗಿ ಮುಂದುವರಿದರು. ಜುಲೈ 1980ರಲ್ಲಿ ಹುಬ್ಬಳ್ಳಿ-ಬೆಂಗಳೂರು ಎರಡೂ ಆವೃತ್ತಿಗಳ ಸಂಪಾದಕರಾಗಿ ಗೋಪಾಲಕೃಷ್ಣ ಅಧಿಕಾರ ವಹಿಸಿಕೊಂಡರು.

ಸೆಪ್ಟಂಬರ್ 1, 1981ರಂದು ವಿಶೇಷ ಆಜ್ಞೆಯೊಂದಿಗೆ ಆಡಳಿತಾಧಿಕಾರಿಯೊಬ್ಬರ ಮೂಲಕ ಲೋಕ ಶಿಕ್ಷಣ ಟ್ರಸ್ಟ್ ನ ಆಡಳಿತವನ್ನು ರಾಜ್ಯ ಸರ್ಕಾರವು ವಹಿಸಿಕೊಂಡಿತು. ಈ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಗಳಾದವು. ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ಮೊಕ್ಕದ್ದಮೆಗಳು ಮುಂದುವರಿದವು. ಗುಂಡೂರಾವ್ ಅಧಿಕಾರ ಕಳೆದುಕೊಂಡರು. ಗೋಪಾಲಕೃಷ್ಣ ನಿರ್ಗಮಿಸಿದರು. ಟೈಮ್ಸ್ ಆಫ್ ಡೆಕ್ಕನ್ ಸಮೂಹದ ಕನ್ನಡ ಪತ್ರಿಕೆ ಮುಂಜಾನೆಯ ಸಂಪಾದಕರಾಗಲು ಜಯಶೀಲರಾವ್ ‘ಸಂಕ’ ತೊರೆದರು. ಹುಬ್ಬಳ್ಳಿ ಆವೃತ್ತಿಯಲ್ಲಿ ಮತ್ತೀಹಳ್ಳಿ ನಾಗರಾಜರಾವ್ ಅವರ ನಿವೃತ್ತಿಯ ನಂತರ ಸುರೇಂದ್ರ ದಾನಿ ಸಹಾಯಕ ಸಂಪಾದಕರಾಗಿದ್ದರು. ಸೆಪ್ಟಂಬರ್ 1, 1983ರಂದು ಬೆಂಗಳೂರು ಆವೃತ್ತಿಯ ಸಹಾಯಕ ಸಂಪಾದಕರಾಗಿ ಹೆಚ್.ಆರ್.ನಾಗೇಶರಾವ್ ಅವರ ನೇಮಕವಾಯಿತು. ಸುರೇಂದ್ರ ದಾನಿ ಅವರನ್ನು ಎರಡೂ ಆವೃತ್ತಿಗಳ ಸಂಪಾದಕರನ್ನಾಗಿ ನೇಮಕ ಮಾಡಲಾಯಿತು. ಅವರ ನಿವೃತ್ತಿಯ ನಂತರ ಆರ್.ಎ.ಉಪಾಧ್ಯ ಎರಡೂ ಆವೃತ್ತಿಗಳ ಸಂಪಾದಕತ್ವ ವಹಿಸಿಕೊಂಡರು. 1984ರಲ್ಲಿ ಹೆಚ್.ಆರ್.ನಾಗೇಶರಾವ್ ಅವರಿಗೆ ಸ್ಥಾನಿಕ ಸಂಪಾದಕರಾಗಿ ಬಡ್ತಿ ದೊರೆಯಿತು. 31-10-1985ರಲ್ಲಿ ನಾಗೇಶರಾವ್ ನಿವೃತ್ತಿಯ ನಂತರ ಧ್ರುವರಾಜ ಮುತಾಲಿಕ ದೇಸಾಯಿ ಬೆಂಗಳೂರು ಆವೃತ್ತಿಯ ಸ್ಥಾನಿಕ ಸಂಪಾದಕರಾಗಿ ಅಧಿಕಾರ ವಹಿಸಿಕೊಂಡರು.

ಮತ್ತೆ ಲೋಕ ಶಿಕ್ಷಣ ಟ್ರಸ್ಟ್ ಆಡಳಿತ[ಬದಲಾಯಿಸಿ]

ನ್ಯಾಯಾಲಯದ ಮೊಕ್ಕದ್ದಮೆಗಳು ಇತ್ಯರ್ಥವಾಗಿ ಲೋಕ ಶಿಕ್ಷಣ ಟ್ರಸ್ಟ್ ಗೆ ಆಡಳಿತ ಹಿಂದಿರುಗಿತು. ಮಾಜಿ ಮುಖ್ಯ ಮಂತ್ರಿ ಬಿ.ಡಿ.ಜತ್ತಿಯವರ ಅಧ್ಯಕ್ಷತೆಯಲ್ಲಿ ಟ್ರಸ್ಟ್ ಪುನಾರಚನೆಗೊಂಡಿತು. ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾವ್ ಸದಸ್ಯರಾಗಿ ಸೇರ್ಪಡೆಗೊಂಡರು. ಕೆ.ಶಾಮರಾವ್ ಟ್ರಸ್ಟ್ ನ ಕಾರ್ಯದರ್ಶಿ ಹಾಗೂ ಪತ್ರಿಕಾ ಸಮೂಹದ ವ್ಯವಸ್ಥಾಪಕ ಸಂಪಾದಕರಾಗಿ ನೇಮಕಗೊಂಡರು. ಉಪಾಧ್ಯ, ಮುತಾಲಿಕ ದೇಸಾಯಿ ಅವರ ನಿವೃತ್ತಿಯ ನಂತರ ನರಸಿಂಹ ಜೋಶಿ ಸಂಪಾದಕರಾದರು. ಕಲ್ಬುರ್ಗಿ ಆವೃತ್ತಿ ಆರಂಭವಾಯಿತು. ಆಡಳಿತ ವರ್ಗದೊಂದಿಗೆ ಭಿನ್ನಾಭಿಪ್ರಾಯದಿಂದ ವೆಂಕಟನಾರಾಯಣ ನಿರ್ಗಮಿಸಿದರು. ಜೋಶಿ ನಿವೃತ್ತರಾದರು. ಕೆ.ಶ್ರೀಧರ ಆಚಾರ್ ಸಲಹೆಗಾರರಾಗಿ ಸೇರ್ಪಡೆಯಾದರು. ಸ್ಥಾನಿಕ ಸಂಪಾದಕರಾಗಿದ್ದ ಎ.ಗುಂಡಾಭಟ್ ನಿವೃತ್ತರಾದರು. ಶಾಮರಾವ್ ನಿರ್ಗಮಿಸಿದರು. ಹಾರನಹಳ್ಳಿ ರಾಮಸ್ವಾಮಿ ಟ್ರಸ್ಟ್ ನ ಅಧ್ಯಕ್ಷರಾದರು. ಹಿರಿಯ ಪತ್ರಕರ್ತ ವಿ.ಎನ್.ಸುಬ್ಬರಾವ್ ‘ಸಂಕ’ದ ಸಂಪಾದಕರಾದರು. ಅವರ ಅಧಿಕಾರಾವಧಿಯ ನಂತರ, ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಪತ್ರಿಕಾ ಕಾರ್ಯದರ್ಶಿಯಾಗಿ ದೆಹಲಿಗೆ ಹೋಗಿದ್ದ ಎಸ್.ವಿ.ಜಯಶೀಲರಾವ್ ‘ಸಂಕ’ಕ್ಕೆ ಸಂಪಾದಕರಾದರು. ಕನ್ನಡಪ್ರಭದಿಂದ ನಿವೃತ್ತರಾಗಿ ಪತ್ರಿಕಾ ಅಕ್ಯಾಡೆಮಿ ಅಧ್ಯಕ್ಷಗಿರಿಯಿಂದಲೂ ನಿವೃತ್ತರಾಗಿದ್ದ ಗರುಡನಗಿರಿ ನಾಗರಾಜ ಕರ್ಮವೀರ ಪತ್ರಿಕೆಯ ಸಂಪಾದಕರಾದರು. ಜಯಶೀಲರಾವ್ ಅವರ ನಿರ್ಗಮನದ ನಂತರ ‘ಸಂಕ’ದ ಸಂಪಾದಕರಾಗಿ ಮನೋಜ್ ಗೌಡ ಪಾಟೀಲ ನೇಮಕಗೊಂಡರು.[೧]

ಹಾರನಹಳ್ಳಿ ರಾಮಸ್ವಾಮಿಯವರ ಆಡಳಿತದಲ್ಲಿ ಸಂಯುಕ್ತ ಕರ್ನಾಟಕದ ದಾವಣಗೆರೆ ಹಾಗೂ ಮಂಗಳೂರು ಆವೃತ್ತಿಗಳು ಆರಂಭವಾದವವು. ಅವರ ನಿಧನದ ನಂತರ ಟ್ರಸ್ಟ್ ಪುನಾರಚನೆಗೊಂಡಿತು.

ಪಾಟೀಲ ನಿವೃತ್ತರಾದರು. ಇದೀಗ ಪ್ರಧಾನ ವರದಿಗಾರರಾಗಿದ್ದ ಹುಣಸವಾಡಿ ರಾಜನ್ ‘ಸಂಕ’ದ ಸಂಪಾದಕರಾಗಿದ್ದಾರೆ.

೮೫ ನೆಯ ವರ್ಷಕ್ಕೆ ಕಾಲಿಟ್ಟಿದೆ[ಬದಲಾಯಿಸಿ]

ಸಂಯುಕ್ತ ಕರ್ನಾಟಕ, ೮೫ ರ ಹುಟ್ಟುಹಬ್ಬದ ಸಂಭ್ರಮದಲ್ಲಿದೆ.

ಉಲ್ಲೇಖಗಳು[ಬದಲಾಯಿಸಿ]

  1. "ಸಂಯುಕ್ತ ಕರ್ನಾಟಕ ಪತ್ರಿಕೆ ೮೫ ರ ಹುಟ್ಟುಹಬ್ಬದ ಸಂಭ್ರಮದಲ್ಲಿದೆ". Archived from the original on 2017-05-13. Retrieved 2017-04-30.

ಹೆಚ್.ಆರ್.ನಾಗೇಶರಾವ್ ಸಂಗ್ರಹದಿಂದ

ಸಂಯುಕ್ತ ಕರ್ನಾಟಕ ಬೆಂಗಳೂರು ಆವೃತ್ತಿಯಲ್ಲಿ ತರಬೇತಿ ಪಡೆದು ಮುಂದೆ ವಿವಿಧ ಪತ್ರಿಕೆಗಳಲ್ಲಿ ಉನ್ನತ ಸ್ಥಾನ ಪಡೆದವರ ಪಟ್ಟಿ ಇಂತಿದೆ.

೧. ಪಿ.ರಾಮಣ್ಣ - ಕಿಡಿ ಪಿ.ಶೇಷಪ್ಪನವರ ತಮ್ಮ, ಪ್ರಜಾವಾಣಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತ

೨. ಜಿ.ಎನ್.ರಂಗನಾಥರಾವ್ - ಸಾಹಿತಿ, ಅನುವಾದಕ, ಪತ್ರಿಕೋದ್ಯಮ ವಿಷಯ ಬೋಧಕ, ಪ್ರಜಾವಾಣಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತ

೩. ಖಾದ್ರಿ ಎಸ್.ಅಚ್ಯುತನ್ - ಖಾದ್ರಿ ಶಾಮಣ್ಣನವರ ತಮ್ಮ, ನಿವೃತ್ತ ಸುದ್ದಿ ಸಂಪಾದಕರು ದೂರದರ್ಶನ ಕೇಂದ್ರ, ಬೆಂಗಳೂರು

೪. ವಿ.ಆರ್.ಶ್ಯಾಮ್ - `ಇಂದಿರಾತನಯ' ಕಾವ್ಯನಾಮದ ಕಾದಂಬರಿಕಾರ, ಪ್ರಜಾವಾಣಿ ಪತ್ರಿಕೆಯ ಪುರವಣಿ ಸಂಪಾದಕರಾಗಿ ನಿವೃತ್ತ

೫. ಸೂ.ರಮಾಕಾಂತ - ಕನ್ನಡಪ್ರಭ ಹಾಗೂ ವಿಜಯ ಕರ್ನಾಟಕ ಪತ್ರಿಕೆಗಳನ್ನು ಆರಂಭದ ದಿನಗಳಲ್ಲಿ ರೂಪಿಸುವಲ್ಲಿ ಶ್ರಮಿಸಿದ ಹಿರಿಯ ಪತ್ರಕರ್ತರು

೬. ಕೆ.ಎಸ್.ನಾಗಭೂಷಣಂ - ಪದಬಂಧಗಳನ್ನು ಕನ್ನಡ ದಿನಪತ್ರಿಕೆಗಳಲ್ಲಿ ಜನಪ್ರಿಯಗೊಳಿಸಿದವರು, ಪ್ರಜಾವಾಣಿಯ ನಿವೃತ್ತ ಸುದ್ದಿ ಸಂಪಾದಕ

೭. ಎಸ್.ದಿವಾಕರ್ - ಸಣ್ಣ ಕತೆಗಳ ಸಾಹಿತಿ, ಅನುವಾದಕ, ಸುಧಾ ಮತ್ತು ಪ್ರಜಾವಾಣಿ ಪತ್ರಿಕೆಗಳ ಫೀಚರ್ಸ್ ಎಡಿಟರ್ ಆಗಿ ನಿವೃತ್ತ

೮. ಜಿ.ಎಸ್.ಸದಾಶಿವ - ಕತೆಗಾರ, ಮಯೂರ ಮಾಸಪತ್ರಿಕೆಯ ಮಾಜಿ ಸಂಪಾದಕರು, ಕನ್ನಡಪ್ರಭ ಪತ್ರಿಕೆಯ ಮಾಜಿ ಕಾರ್ಯನಿರ್ವಾಹಕ ಸಂಪಾದಕ (ಫೀಚರ್ಸ್)

೯. ವೆಂಕಟನಾರಾಯಣ - ಕನ್ನಡಪ್ರಭ, ಉಷಾಕಿರಣ, ಟೈಮ್ಸ್ ಆಫ್ ಇಂಡಿಯಾ ಕನ್ನಡ, ಮಂಗಳ ಪತ್ರಿಕೆಗಳ ಮಾಜಿ ಸಂಪಾದಕರು

೧೦. ಗಂಗಾಧರ ಮೊದಲಿಯಾರ್ - ಪ್ರಜಾವಾಣಿ ಸಹಾಯಕ ಸಂಪಾದಕರು

೧೧. ವಿಶ್ವೇಶ್ವರ ಭಟ್ - ವಿಜಯ ಕರ್ನಾಟಕ ಮಾಜಿ ಸಂಪಾದಕರು, ಕನ್ನಡಪ್ರಭ ಪತ್ರಿಕೆಯ ಪ್ರಧಾನ ಸಂಪಾದಕರು, ಸುವರ್ಣ ನ್ಯೂಸ್ ಕನ್ನಡ ಟೀವಿ ಚಾನೆಲ್^ನ ಪ್ರಧಾನ ಸಂಪಾದಕರು

೧೨. ಎಸ್.ಕೆ.ಶಾಮಸುಂದರ - ಕನ್ನಡಪ್ರಭ ಸಾಪ್ತಾಹಿಕ ಪ್ರಭದ ಮಾಜಿ ಸಂಪಾದಕರು, ದಟ್ಸ್ ಕನ್ನಡ ಡಾಟ್ ಕಾಮ್ ಇಂಟರ್‌ನೆಟ್ ಪತ್ರಿಕೆಯ ಸ್ಥಾಪಕ ಸಂಪಾದಕರು

೧೩. ರವಿ ಹೆಗಡೆ - ಕನ್ನಡಪ್ರಭ ಪತ್ರಿಕೆಯ ಮಾಜಿ ಕಾರ್ಯನಿರ್ವಾಹಕ ಸಂಪಾದಕರು, ಸುವರ್ಣ ನ್ಯೂಸ್ ಕನ್ನಡ ಟೀವಿ ಚಾನೆಲ್^ನ ಮಾಜಿ ಸುದ್ದಿ ಸಂಪಾದಕರು, ಉದಯವಾಣಿ ಪತ್ರಿಕೆಯ ಸಮೂಹ ಸಂಪಾದಕರು

೧೪.ಎ.ಆರ್.ಮಣಿಕಾಂತ್ - ಹಾಯ್ ಬೆಂಗಳೂರ್ ಪತ್ರಿಕೆಯ ಮಾಜಿ ಉಪಸಂಪಾದಕರು, ವಿಜಯ ಕರ್ನಾಟಕ ಮಾಜಿ ಮುಖ್ಯ ಉಪಸಂಪಾದಕರು, ಕನ್ನಡಪ್ರಭ ಪತ್ರಿಕೆಯ ಮುಖ್ಯ ಉಪಸಂಪಾದಕರು

೧೫. ಜಯರಾಮ ಅಡಿಗ - ಕನ್ನಡಪ್ರಭ ಪತ್ರಿಕೆಯ ಮಾಜಿ ಸುದ್ದಿ ಸಂಪಾದಕರು, ಉಷಾ ಕಿರಣ ಪತ್ರಿಕೆಯ ಮಾಜಿ ಸಹಾಯಕ ಸಂಪಾದಕರು

೧೬. ರಾಧಾಕೃಷ್ಣ ಭಡ್ತಿ - ವಿಜಯ ಕರ್ನಾಟಕ ಪತ್ರಿಕೆಯ ಮಾಜಿ ಸಹಾಯಕ ಸಂಪಾದಕರು, ಕನ್ನಡಪ್ರಭ ಪತ್ರಿಕೆಯ ಪುರವಣಿ ಸಂಪಾದಕರು

೧೭. ರವಿ ಬೆಳಗೆರೆ - ಲೇಖಕರು ಹಾಗೂ ಹಾಯ್ ಬೆಂಗಳೂರ್ ಪತ್ರಿಕೆಯ ಸ್ಥಾಪಕ-ಸಂಪಾದಕರು

೧೮. ಜಯತೀರ್ಥ - ಪ್ರಜಾವಾಣಿಯ ಪ್ರಧಾನ ವರದಿಗಾರರಾಗಿ ನಿವೃತ್ತ

ಕೆಳಗಿನ ವಿಷಯಗಳನ್ನೂ ನೋಡಿ[ಬದಲಾಯಿಸಿ]