ನಾರಾಯಣರಾವ್ ಕಲ್ಲೆ

ವಿಕಿಪೀಡಿಯ ಇಂದ
Jump to navigation Jump to search

ಗಾಂಧೀಜಿಯವರ ಅಹಿಂಸಾತ್ಮಕವಾದ ಆಂದೋಲನವನ್ನು ಯಶಸ್ವಿಗೊಳಿಸುವುದಕ್ಕೆ ದೇಶೀ ಭಾಷಾ ಪತ್ರಿಕೆಗಳು ಧೈರ್ಯದಿಂದ ಸೊಂಟ ಕಟ್ಟಿ ನಿಂತವು. ಆಗ್ಗೆ ದೂರದ ಹಳ್ಳಿಗಳಲ್ಲಿಯೂ ಕೈಬರಹದ ಪತ್ರಿಕೆಗಳನ್ನು ಬರೆದು ಹಂಚುವುದು ನಡೆಯಿತು. ಈ ಮೂಲಕ ನಾರಾಯಣರಾವ್ ಕಲ್ಲೆಯವರು ಪತ್ರಿಕೋದ್ಯೋಗಕ್ಕೆ ಪ್ರವೇಶ ಪಡೆದರು. ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯ ಕ್ಷೇತ್ರದಲ್ಲಿ ಆರಂಭದಿಂದಲೇ ದುಡಿದವರಲ್ಲಿ ಶ್ರೀ ಭಾರದ್ವಾಜ ದತ್ತಾತ್ರೇಯ ಕೃಷ್ಣಶರ್ಮರು (ದ.ಕೃ.ಭಾರದ್ವಾಜ) ಪ್ರಮುಖರು. ಈ ಜಿಲ್ಲೆಯಿಂದ ಸ್ವಾತಂತ್ರ್ಯ ಹೋರಾಟಕ್ಕಾಗಿ ಜೈಲು ಸೇರಿದವರಲ್ಲಿ ಅವರೇ ಮೊದಲಿಗರು. ಕಲ್ಲೆಯವರಿಗೆ ಗುರುಗಳಾಗಿ ನಿಂತವರು ದ.ಕೃ.ಭಾರದ್ವಾಜ ಹಾಗೂ ಪಡಮುನ್ನೂರು ರಾಮಚಂದ್ರರಾಯರು. ರಾಮಚಂದ್ರರಾಯರು ಮಂಗಳೂರು ತಿಲಕ ವಿದ್ಯಾಲಯದ ಕುಲಪತಿಗಳಾಗಿದ್ದರು.

ಕಾಂಗ್ರೆಸ್ಬೆಳಗಾವಿ ಅಧಿವೇಶನದ ನಂತರ ಭಾರದ್ವಾಜರು ಬೆಂಗಳೂರುಗೆ ಬಂದು ಗರುಡ ಸದಾಶಿವರಾಯರ ಜತೆಗೂಡಿದರು. ಭಾರದ್ವಾಜರ ಸಂಪಾದಕತ್ವದಲ್ಲಿ ಗರುಡರು ರಂಗಭೂಮಿ ಎಂಬ ಮಾಸಪತ್ರಿಕೆ ಆರಂಭಿಸಿದರು. ಈ ಪತ್ರಿಕೆಯ ಜತೆಗೆ ಇತರ ಪತ್ರಿಕೆಗಳಿಗೂ ಕಲ್ಲೆಯವರು ಲೇಖನಗಳನ್ನು ಬರೆಯುತ್ತಿದ್ದರು. ದಕ್ಷಿಣ ಕನ್ನಡಕ್ಕೆ ಕಲ್ಲೆಯವರು ಹಿಂದಿರುಗಿದ ಕೆಲ ತಿಂಗಳುಗಳಲ್ಲಿ ರಂಗಭೂಮಿಯೂ ನಿಂತು ಹೋಯಿತು. ಆನಂತರ ಕನ್ನಡನಾಡನ್ನು ಸಂಚರಿಸಿ ದಕ್ಷಿಣ ಕನ್ನಡ ಜಿಲ್ಲೆಯ ಪತ್ರಿಕೆಗಳಿಗೆ ಸುದ್ದಿಗಳನ್ನು ಕಲ್ಲೆಯವರು ಕಳುಹಿಸುತ್ತಿದ್ದರು.

ನಂತರ ಹುಬ್ಬಳ್ಳಿಯಿಂದ ವಿ.ಬಿ.ಪುರಾಣಿಕ ಅವರ ಸಂಪಾದಕತ್ವದಲ್ಲಿ ಆರಂಭವಾದ ಹೊಸ ರಾಷ್ಟ್ರೀಯ ದಿನಪತ್ರಿಕೆ ಲೋಕಮತಕ್ಕೆ ಕಲ್ಲೆ ಸೇರಿದರು. ಸಂಪಾದಕೀಯ ವಿಭಾಗದಲ್ಲಿ ಕಲ್ಲೆಯವರ ಜತೆಯಾದವರು ಮಾಜಿ ಮಂತ್ರಿ ಕಲ್ಲನಗೌಡ ಪಾಟೀಲರು. ಲೋಕಮತದ ಜನಪ್ರಿಯತೆಯನ್ನು ಕಂಡು ಬೆಳಗಾವಿಯಿಂದ ಪ್ರಕಟವಾಗುತ್ತಿದ್ದ ಸಂಯುಕ್ತ ಕರ್ನಾಟಕವು ಹುಬ್ಬಳ್ಳಿಗೆ ಬಂತು. ಅಲ್ಲಿ ರಂಗನಾಥ ದಿವಾಕರರ ಆಪ್ತ ಸಂಪಾದಕೀಯ ಸಲಹೆಗಾರರಾಗಿ ಕಲ್ಲೆ ನಿಯೋಜಿತರಾದರು. ಮಂಗಳೂರು ಇಂದ ವಿ.ಎಸ್.ಕುಡ್ವರ ಸಂಪಾದಕತ್ವದಲ್ಲಿ ನವಭಾರತ ಆರಂಭವಾದಾಗ ಕಲ್ಲೆ ಮೂರು ವರ್ಷಗಳ ಕಾಲ ಅಲ್ಲಿ ಕೆಲಸ ಮಾಡಿದರು. ೧೯೪೮ ನವಭಾರತ ಬಿಟ್ಟು ಮೂರು ವರ್ಷಗಳ ಕಾಲ ಬೇರೆ ಬೇರೆ ಪತ್ರಿಕೆಗಳಿಗೆ ಕಲ್ಲೆ ಲೇಖನಗಳನ್ನು ಬರೆದರು. ೧೯೫೧ರಲ್ಲಿ ಪತ್ರಕರ್ತ ವೃತ್ತಿಯಿಂದ ನಿವೃತ್ತರಾಗಿ ತಮ್ಮ ದಕ್ಷಿಣ ಕನ್ನಡದ ಹಳ್ಳಿಯ ಮನೆಗೆ ಹಿಂದಿರುಗಿದರು.

ಇವುಗಳನ್ನೂ ನೋಡಿ[ಬದಲಾಯಿಸಿ]