ಗೋಕುಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೋಕುಲ - ಉತ್ತರಪ್ರದೇಶಮಥುರಾ ಜಿಲ್ಲೆಯಲ್ಲಿರುವ ಒಂದು ಪವಿತ್ರ ಸ್ಥಳ; ವ್ರಜಮಂಡಲದಲ್ಲಿನ ಅನೇಕ ಕ್ಷೇತ್ರಗಳಲ್ಲೊಂದು.

ಹುಟ್ಟಿದ ಕೂಡಲೇ ಶ್ರೀಕೃಷ್ಣನನ್ನು ಗೋಕುಲಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಆತ ತನ್ನ ದಿವ್ಯ ಬಾಲಲೀಲೆಗಳನ್ನು ಮೆರೆದನಾಗಿ ಅದರ ಮಹತ್ತ್ವ ಹೆಚ್ಚಿತು. ಗೋಕುಲ ಗೋಪಾಲಕರ ವಸತಿಸ್ಥಾನ. ನಂದಗೋಪ ಅವರ ಮುಖ್ಯಸ್ಥ. ಆತನ ಮನೆಯಲ್ಲಿಯೇ ಶ್ರೀಕೃಷ್ಣ ಬೆಳೆದು ದೊಡ್ಡವನಾದ; ಪೂತನಿವಧೆ, ಯಮಳಾರ್ಜುನ ಉದ್ಧಾರ ಮುಂತಾದ ಬಾಲಲೀಲೆಗಳನ್ನು ಇಲ್ಲಿಯೇ ಮೆರೆದ.

ವೈಷ್ಣವ ಸಂಪ್ರದಾಯದಲ್ಲಿ ಗೋಕುಲಕ್ಕೆ ಬಹುದೊಡ್ಡ ಸ್ಥಾನವಿದೆ. ಗೋಕುಲವನ್ನು ಒಂದು ಪ್ರಿಯಧಾಮವೆಂದು ವೈಷ್ಣವ ಸಂತರು ಕೀರ್ತಿಸಿದ್ದಾರೆ. ಮಥುರೆಯಿಂದ ಶ್ರೀಕೃಷ್ಣನನ್ನು ಕರೆದುಕೊಂಡು ಬಂದ ಅಕ್ರೂರ ಗೋಕುಲದ ಜನರಲ್ಲಿ ನೆಲೆಸಿದ್ದ ಭಕ್ತಿಪ್ರೇಮಗಳಿಂದ ವಿಹ್ವಲನಾಗಿ ಅದೇ ವಾತಾವರಣದಲ್ಲಿಯೇ ಇರಬಯಸಿದ. ಗೋಕುಲವನ್ನು ಕಂಡು ಮನಸೋತ ಉದ್ಧವ ಅಲ್ಲಿಯ ಔಷಧಿ ವನಸ್ಪತಿಗಳಲ್ಲಿ ತಾನೂ ಒಂದಾಗಲು ಬಯಸಿದ.

ಆರಾಧನಾಸ್ಥಳವಾಗಿ[ಬದಲಾಯಿಸಿ]

ವಲ್ಲಭ ಸಂಪ್ರದಾಯದವರಿಗೆ ಗೋಕುಲ ಒಂದು ಪ್ರಮುಖ ಆರಾಧನಾಸ್ಥಳವಾಗಿದೆ. ಈ ಸಂಪ್ರದಾಯದ 24 ಕಟ್ಟೋಣಗಳು(ಮಠ) ಇಲ್ಲಿವೆ. ಔರಂಗಜೇಬನ ಕಾಲದಿಂದ ವಲ್ಲಭಸಂಪ್ರದಾಯದ ಸರ್ವಪೂಜ್ಯ ಠಾಕೂರ ಇಲ್ಲಿ ಇರುತ್ತಿದ್ದುದರಿಂದ ದೂರದೂರದ ಶ್ರೀಕೃಷ್ಣ ಭಕ್ತರು ಗೋಕುಲದ ಕಡೆಗೆ ಆಕರ್ಷಿತರಾಗುತ್ತಿದ್ದರು.

ನೋಡತಕ್ಕ ಸ್ಥಳಗಳು[ಬದಲಾಯಿಸಿ]

ವಲ್ಲಭಾಚಾರ್ಯರ ಮಠ (ಸಭಾಗೃಹ). ಗೋಕುಲನಾಥನ ಮಠ. ಗೋವಿಂದಘಾಟ್, ವಲ್ಲಬಘಾಟ್, ಗೋಕುಲನಾಧ ದೇವಸ್ಥಾನ, ವ್ರಜರಾಜ ದೇವಸ್ಥಾನ ಇತ್ಯಾದಿ, ರಮಣರೇತೀ ಮತ್ತು ಬ್ರಹ್ಮಾಂಡತೀರ್ಥ ಇವು ಗೋಕುಲದಲ್ಲಿನ ಪವಿತ್ರತೀರ್ಥಗಳು.

ಭಾಗವತ ಪುರಾಣದ ದಶಮಸ್ಕಂಧದಲ್ಲಿ ಗೋಕುಲ, ಗೋಪ, ಗೋಪಿ ಮತ್ತು ಗೋಧನಗಳ ಬಗ್ಗೆ ರಮ್ಯವರ್ಣನೆ ದೊರೆಯುತ್ತದೆ. ಇದನ್ನೇ ಆಧರಿಸಿಕೊಂಡು ಚೈತನ್ಯ, ಮೀರಾಬಾಯಿ, ಏಕನಾಥ, ಸೂರದಾಸ, ತುಳಸೀದಾಸ, ಪುರಂದರದಾಸರಂಥವರು ಗೋಕುಲದ ಮಹಿಮೆಯನ್ನು ತಮ್ಮ ಕೃತಿಗಳಲ್ಲಿ ಕೊಂಡಾಡಿದ್ದಾರೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಗೋಕುಲ&oldid=1152243" ಇಂದ ಪಡೆಯಲ್ಪಟ್ಟಿದೆ