ವಿಷಯಕ್ಕೆ ಹೋಗು

ಏಕನಾಥ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಏಕನಾಥ: ಸು. 1548. ಮಹಾರಾಷ್ಟ್ರದ ಪ್ರಸಿದ್ಧ ಸಂತರಲ್ಲಿ ಪ್ರಮುಖ. ಜ್ಞಾನದೇವನಾದ ಮೇಲೆ ಆತನಂತೆ ದೇಶದಲ್ಲೆಲ್ಲಾ ವಿಖ್ಯಾತನಾದ ಯಶಸ್ಸು ಏಕನಾಥನದು. ಆತನಂತೆ ಈತನು ಜನರ ಭಾಷೆಯಲ್ಲಿ ವೇದಾಂತರಹಸ್ಯವನ್ನೂ ಜ್ಞಾನಸಾರವನ್ನೂ ಭಾಗವತಧರ್ಮವನ್ನೂ ಪ್ರಚಾರ ಮಾಡುವುದರಲ್ಲಿ ಜೀವಮಾನವನ್ನು ಕಳೆದವ.

ಈತನ ಅಡ್ಡ ಹೆಸರು ಪೈಠಣಕರ. ಈತನ ಗುರು ದತ್ತಾತ್ರೇಯನ ಅವತಾರವೆಂದು ಪ್ರಸಿದ್ಧನಾದ ಗಾಣಗಾಪುರದ ನರಸಿಂಹ ಸರಸ್ವತಿಯ ಶಿಷ್ಯ ಜನಾರ್ದನಸ್ವಾಮಿ. ವಿಜಯನಗರದ ಕೃಷ್ಣದೇವರಾಯ ಪಂಢರಾಪುರದಿಂದ ವಿಠ್ಠಲನ ಮೂರ್ತಿಯನ್ನು ತನ್ನ ರಾಜಧಾನಿಗೆ ಒಯ್ದು ಅಲ್ಲಿ ಪ್ರತಿಷ್ಠೆ ಮಾಡಿಸಿದ್ದ. ಅದನ್ನು ತಿರುಗಿ ಪಂಢರಾಪುರಕ್ಕೆ ತಂದು ಕೀರ್ತಿವಂತನಾದ ಭಾನುದಾಸನ ವಂಶಜನೇ ಏಕನಾಥ. ಏಕನಾಥನ ತಂದೆ ಸೂರ್ಯನಾರಾಯಣ, ತಾಯಿ ರುಕ್ಮಿಣಿ. ಹಂಪೆಯಲ್ಲಿ ವಿಜಯವಿಠ್ಠಲನ ಗುಡಿ ಈಗಲೂ ಇದೆಯಾದರೂ ಅಲ್ಲಿ ಯಾವ ಮೂರ್ತಿಯೂ ಇಲ್ಲ.

ಏಕನಾಥ ತನ್ನ ಗುರುವಾದ ಜನಾರ್ದನಸ್ವಾಮಿಯಲ್ಲಿ ಜ್ಞಾನೇಶ್ವರಿ, ಅಮೃತಾನುಭವ ಗ್ರಂಥಗಳ ಅಭ್ಯಾಸ ಮಾಡಿದ. ದೇವಗಡದ ಬೆಟ್ಟದಲ್ಲಿ ಆರು ವರ್ಷ ತಪಸ್ಸನ್ನು ಮಾಡಿದ. ಸಾಕ್ಷಾತ್ಕಾರ ಪಡೆದ. ದೇವಗಡಕ್ಕೆ ಒಮ್ಮೆ ವೈರಿಗಳು ಮುತ್ತಿದಾಗ ಜನಾರ್ದನಸ್ವಾಮಿ ಧ್ಯಾನಸ್ಥನಿದ್ದ. ಏಕನಾಥ ಕುದುರೆಯನ್ನು ಹತ್ತಿ, ಯುದ್ಧಮಾಡಿ ವೈರಿಗಳನ್ನು ಓಡಿಸಿದ. ಮುಂದೆ ಗುರುವಿನ ಅಪ್ಪಣೆಯಂತೆ ಪೈಠಣಕ್ಕೆ ಬಂದು, ಗಿರಿಜಾಬಾಯಿ ವಿಜಾಪುರ ಎಂಬ ತರುಣಿಯನ್ನು ಲಗ್ನವಾದ. ಪ್ರಪಂಚವನ್ನು ಪರಮಾರ್ಥವನ್ನೂ ಕೂಡಿಯೇ ಸಾಧಿಸಿದ.

ಏಕನಾಥನಿಗೆ ದೀನದಲಿತರಲ್ಲಿ, ಶೂದ್ರಾದಿಗಳಲ್ಲಿ ಅಪಾರ ಕರುಣೆ ಇತ್ತು. ತಂದೆಯ ಶ್ರಾದ್ಧದ ಕಾಲಕ್ಕೆ ಬ್ರಾಹ್ಮಣರಿಗಿಂತ ಮುಂಚೆ ಹಸಿದ ಹೊಲೆಯರಿಗೆ ಅನ್ನ ಬಡಿಸಿದ ಧೀರನೀತ. ಪುಜೆಗೆ ತಂದ ಗಂಗಾಜಲವನ್ನು ನೀರಡಿಸಿದ ಕತ್ತೆಗೆ ಕುಡಿಸಿದ ಅಂತಃಕರುಣಿ ಈತ. ಚೋರರನ್ನು, ಜಾರರನ್ನು, ವೇಶ್ಯೆಯರನ್ನು ಉದ್ಧರಿಸಿದ ಕುಶಲಮತಿ. ಜ್ಞಾನಮದಾಂಧನಾದ ತನ್ನ ಮಗ ಹರಿಪಂಡಿತನ ಕಣ್ಣು ತೆರೆಯಿಸಿದ. ಸಂಸಾರ ಮಾಡಿಯೂ ಪರಮಾರ್ಥವನ್ನು ಸಾಧಿಸುವ ಬಗೆಯನ್ನು ಬೋಧಿಸಿದ. ಎಲ್ಲಾ ಪ್ರಾಣಿಗಳಲ್ಲಿ ಪರಮಾತ್ಮನನ್ನು ಕಾಣುವುದೇ ಭಕ್ತಿ ಎಂಬುದು ಈತನ ಉಪದೇಶ. ಅನುತಾಪವೇ ಆತ್ಮಾನಂದಕ್ಕೆ ಕಾರಣ, ಭಕ್ತನಿಗಿಂಥ ದೇವ ಕಿರಿಯ-ಎಂಬ ಮಾತುಗಳನ್ನು ಮತ್ತೆ ಮತ್ತೆ ಹೇಳಿ ಧ್ಯಾನವೊಂದೇ ದೇವ ಸಾಕ್ಷಾತ್ಕಾರಕ್ಕೆ ಇರುವ ಮಾರ್ಗ ಎಂದು ಏಕನಾಥ ಸಾಧಿಸಿದ್ದಾನೆ.

ಮರಾಠಿ ಸಾಹಿತ್ಯಕ್ಕೆ ಏಕನಾಥನ ಅಮೋಘ ಕಾಣಿಕೆಯೆಂದರೆ ಭಾಗವತ ಪುರಾಣದ ಹನ್ನೊಂದನೆಯ ಸ್ಕಂಧದ ವಿಸ್ತ್ರೃತ ಪದ್ಯ ವಿವರಣೆ. ಇದು 20,000 ಓವಿಗಳನ್ನೊಳ ಗೊಂಡಿದೆ. ಓವಿಯೆಂಬುದು ಮರಾಠಿ ಜಾನಪದ ಗೀತೆಯ ಹೆಸರು. ಮರಾಠಿಯಲ್ಲಿ ಇಷ್ಟು ಹೃದಯಂಗಮವಾಗಿಯೂ ವಿಸ್ತೃತವಾಗಿಯೂ ಇರುವ ಮಹಾರಚನೆಗಳು ಏಕನಾಥನಿಗೆ ಪುರ್ವದಲ್ಲಿ ಇರಲಿಲ್ಲ. ಏಕನಾಥನ ಜ್ಞಾನದ ತೇಜವನ್ನು ಭಾಷಾ ಸೌಷ್ಠವವನ್ನೂ ಪ್ರಾಸಾದಿಕ ಕವಿತ್ವವನ್ನೂ ಮುಕ್ತ ಕಂಠದಿಂದ ಮರಾಠಿ ಸಾಹಿತ್ಯ ವಿಮರ್ಶಕರು ಕೊಂಡಾಡಿದ್ದಾರೆ. ಈತನ ಭಕ್ತಿ ನಿರ್ಭರತೆಯಂತೂ ಅಸಾಧಾರಣವಾದುದು. ಅಲ್ಲದೆ ಜ್ಞಾನದೇವನ ಜ್ಞಾನೇಶ್ವರಿ ಗ್ರಂಥವನ್ನು ಏಕನಾಥ ಪರಿಷ್ಕರಿಸಿ ಸಂಪಾದಿಸಿದ್ದಾನೆ.

ಏಕನಾಥ ಜನಸಾಮಾನ್ಯರಿಗೆ ತಿಳಿಯುವಂತೆ ಮರಾಠಿಯಲ್ಲೇ ರುಕ್ಮಿಣೀ ಸ್ವಯಂವರವೆಂಬ ಹದಿನೆಂಟು ಅಧ್ಯಾಯಗಳ ಪೌರಾಣಿಕ ಕಾವ್ಯವನ್ನು ರಚಿಸಿದ್ದಾನೆ. ಇದರಲ್ಲಿ 7,000 ಓವಿಗಳಿವೆ. ಕೃಷ್ಣ ರುಕ್ಮಿಣಿಯರ ವಿವಾಹವೆಂದರೆ ಜೀವಾತ್ಮ-ಪರಮಾತ್ಮರ ಐಕ್ಯವೆಂಬ ವೇದಾಂತ ಸೂಕ್ಷ್ಮವನ್ನು ಉದ್ದಕ್ಕೂ ಸಾಂಕೇತಿಕವಾಗಿ ಸೂಚಿಸಿರುವುದು ಇಲ್ಲಿಯ ವಿಶೇಷ. ಪ್ರಹ್ಲಾದ ಚರಿತ್ರಾ, ಶುಕಾಷ್ಟಕ ಮುಂತಾದ ಚಿಕ್ಕ ಪೌರಾಣಿಕ ಆಖ್ಯಾನಗಳನ್ನೂ ಏಕನಾಥ ಮರಾಠಿಯಲ್ಲಿ ಸುಂದರವಾಗಿ ರಚಿಸಿದ್ದಾನೆ. ಸ್ವಾತ್ಮಸುಖ ಎಂಬುದು ಈತನ ಅದ್ವೈತ ವೇದಾಂತ ವಿಷಯದ ರಚನೆ. ಭಾವಾರ್ಥ ರಾಮಾಯಣ, ಬಾಲಕ್ರೀಡಾ, ಭಾಗವತಚತುಃಶ್ಲೋಕೀ ವ್ಯಾಖ್ಯಾನ ಇತ್ಯಾದಿ ಇನ್ನೂ ಹಲವಾರು ರಚನೆಗಳಿವೆ. ಓವಿ ಹಾಗೂ ಅಭಂಗಗಳ ಮೇಲೆ ಏಕನಾಥನ ಪ್ರಭುತ್ವ ಅದ್ವಿತೀಯ.

ಮರಾಠಿ ಸಾಹಿತ್ಯದಲ್ಲಿ ಹೀಗೆ ಏಕನಾಥನ ವ್ಯಕ್ತಿತ್ವ ಅಜರಾಮರವಾಗಿದೆ. ಆತನ ಪ್ರಭಾವ ಮುಂದಿನ ಕವಿಗಳ ಮೇಲೆ ಅಗಾಧವಾಗಿ ಆದುದನ್ನು ಮರೆಯುವಂತಿಲ್ಲ. ಸಾಧುಸಂತರ ಬೋಧನೆಗಳು ಹೇಗೋ ಹಾಗೆ ಅವರ ವ್ಯಕ್ತಿತ್ವದ ಬಗೆಗೆ ಜನರ ಮನಸ್ಸಿನಿಂದ ಎಂದೂ ದೂರವಾಗದಂಥ ಪವಾಡ ಕಥೆಗಳು ನೂರಾರು ಜನಜನಿತವಾಗಿ ಬಂದಿವೆ: ಭಕ್ತವಿಜಯವೇ ಮುಂತಾದ ಗ್ರಂಥಗಳಾಗಿ ಮಾರ್ಪಟ್ಟಿವೆ. ಇಂದಿಗೂ ಇವುಗಳ ಪ್ರವಚನ ವಾಚನಗಳಲ್ಲಿ ಭಾವುಕರಿಗೆ ಆಸಕ್ತಿ ಇರುವುದನ್ನು ನೋಡಬಹುದು. (ಕೆ.ಕೆ.; ಎಂ.ಎ.)

"https://kn.wikipedia.org/w/index.php?title=ಏಕನಾಥ&oldid=625373" ಇಂದ ಪಡೆಯಲ್ಪಟ್ಟಿದೆ