ಮೀರಾಬಾಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೀರಾಬಾಯಿ
ಮೀರಾಬಾಯಿ
ಜನನc. ೧೪೯೮
ಕುಡಕಿ, ಪಲ್ಲಿ, ರಾಜಸ್ಥಾನ, ಭಾರತ
ಜನ್ಮ ನಾಮಮೀರಾ
ಗುರುಸಂತ ರವಿದಾಸ
ತತ್ವಶಾಸ್ತ್ರಭಕ್ತಿ ಮಾರ್ಗ
ಪ್ರಮುಖ ಕೃತಿಗಳುಶ್ರೀಕೃಷ್ಣನನ್ನು ಕುರಿತು ಪದಾವಲಿಗಳು
ರಾಜಾ ರವಿವರ್ಮ ಬಿಡಿಸಿದ ಮೀರಾಬಾಯಿಯ ಚಿತ್ರ

ಮೀರಾಬಾಯಿ (೧೫೦೪-೧೫೫೮) ಶ್ರೀಕೃಷ್ಣ-ಭಕ್ತಿ ಮಾರ್ಗದ ಬಹುಮುಖ್ಯ ಕವಯಿತ್ರಿ. ಈಕೆಯ ರಚನೆಗಳಲ್ಲಿ ಶ್ರೀಕೃಷ್ಣನನ್ನು ಕುರಿತು ಸಮರ್ಪಣ ಭಾವವಿದೆ.

ಜೀವನ ಪರಿಚಯ[ಬದಲಾಯಿಸಿ]

ಮೀರಾಬಾಯಿಯ ಮಂದಿರ, ಚಿತ್ತೌಡಗಢ (೧೯೯೦)

ಮೀರಾಬಾಯಿಯ ಹುಟ್ಟಿದ್ದು ಯಾವ ವರ್ಷದಲ್ಲಿ ಎಂಬುದನ್ನು ಕುರಿತು ನಿಖರವಾದ ಮಾತಿಲ್ಲ. ಈಕೆ ೧೫೦೪ರಲ್ಲಿ ರಾಜಸ್ಥಾನದ ಜೋಧಪುರದಲ್ಲಿ ಕುಡಕಿ ಎಂಬ ಗ್ರಾಮದಲ್ಲಿ ಹುಟ್ಟಿದಳು ಎಂದು ಅಂದಾಜು ಮಾಡಲಾಗಿದೆ. ಈಕೆಯ ತಂದೆ ರತ್ನಸಿಂಹ. ಬಾಲ್ಯದಲ್ಲೇ ಈಕೆಗೆ ಶ್ರೀಕೃಷ್ಣನಲ್ಲಿ ಮೋಹ ಉಂಟಾಯಿತು. ಒಮ್ಮೆ ಮದುವೆಯ ದಿಬ್ಬಣ ಮನೆಯ ಮುಂದೆ ಹಾದು ಹೋಗುತ್ತಿದ್ದಾಗ ಬಾಲಿಕೆ ಮೀರಾ ತನ್ನ ಅಜ್ಜನನ್ನು ತನಗೆ ಯಾವಾಗ ಮದುವೆ ಎಂದು ಕೇಳಿದಳೆಂದೂ, ಆತ ತಮಾಷೆಗೆ "ನಿನ್ನ ಮದುವೆ ಆಗಲೇ ಶ್ರೀಕೃಷ್ಣನೊಂದಿಗೆ ಕೊಟ್ಟು ಮಾಡಿದ್ದೇವೆ" ಎಂದುದನ್ನೇ ಮೀರಾ ಗಂಭೀರವಾಗಿ ಸ್ವೀಕರಿಸಿದಳೆಂದೂ ಒಂದು ಕಥೆ ಇದೆ.

ಮುಂದೆ ಉದಯಪುರದ ಮಾಹಾರಾಣಾ ಸಾಂಗಾ ಅವರ ಮಗ ಮಹಾರಾಣಾ ಕುಂವರ್ ಭೋಜರಾಜನ ಜೊತೆ ಮೀರಾಳ ವಿವಾಹವನ್ನು ನೆರವೇರಿಸಲಾಯಿತು. ಇದಾದ ಕೆಲವೇ ಸಮಯದ ನಂತರ ಈಕೆಯ ಪತಿ ಸ್ವರ್ಗಸ್ಥನಾದ. ಆಗಿನ ಕಾಲದ ರೂಢಿಯಂತೆ ಮೀರಾಳಿಗೆ ಸತಿ ಮಾಡಿಕೊಳ್ಳುವ ಅವಕಾಶವಿತ್ತು, ಆದರೆ ಮೀರಾ ಇದಕ್ಕೆ ಒಪ್ಪಲಿಲ್ಲ. ಆಕೆ ಸಂಸಾರದಲ್ಲಿ ವಿರಕ್ತಳಾಗಿ ಸಾಧುಗಳ ಸಂಗದಲ್ಲಿ ಹರಿ ಸಂಕೀರ್ತನೆ ಮಾಡುತ್ತಾ ಇದ್ದುಬಿಟ್ಟಳು. ದೇವಸ್ಥಾನಗಳಲ್ಲಿ ಭಕ್ತರ ಸಮ್ಮುಖದಲ್ಲಿ ಆಕೆ ತಲ್ಲೀನಳಾಗಿ ಪದಗಳನ್ನು ಹಾಡುತ್ತಾ ನರ್ತಿಸುತ್ತಿದ್ದಳು. ಅವಳ ಬಂಧುಬಳಗದವರಿಗೆ ಇದು ಒಪ್ಪಿಗೆಯಾಗಲಿಲ್ಲ. ಮಾವನ ಮನೆಯವರು ಎಷ್ಟೋ ಸಲ ಅವಳಿಗೆ ವಿಷ ಕೊಟ್ಟು ಸಾಯಿಸುವ ಪ್ರಯತ್ನ ನಡೆಸಿದರು. ಇದರಿಂದ ಮನನೊಂದ ಮೀರಾಬಾಯಿ ದ್ವಾರಕಾ ಪಟ್ಟಣಕ್ಕೆ ಮತ್ತು ವೃಂದಾವನಕ್ಕೆ ಹೋಗಿರುತ್ತಿದ್ದಳು. ಅವಳಿಗೆ ಹೋದಲ್ಲೆಲ್ಲಾ ಗೌರವ ಪ್ರಾಪ್ತವಾಗುತ್ತಿತ್ತು. ದ್ವಾರಕಾ ನಗರದಲ್ಲೇ ಈಕೆ ೧೫೫೮ರಲ್ಲಿ ಕೊನೆಯುಳಿರೆಳೆದಳು.

ಕೃತಿಗಳು[ಬದಲಾಯಿಸಿ]

ಮೀರಾಬಾಯಿಯ ಕೃತಿಗಳು ಭೋಜಪುರಿ ಭಾಷೆಯಲ್ಲಿವೆ. ಈ ಕೃತಿಗಳಲ್ಲಿ ನಮಗೆ ಮುಖ್ಯವಾಗಿ ಕಾಣುವುದು ಶ್ರೀಕೃಷ್ಣನನ್ನು ಕುರಿತು ಅನನ್ಯ ಭಕ್ತಿ ಮತ್ತು ಸಮರ್ಪಣ ಭಾವ. "ಗಿರಿಧರ ಗೋಪಾಲ" ಎಂಬುದು ಅವಳ ಅಂಕಿತ. "ನನಗೆ ಏನಿದ್ದರೂ ಗಿರಿಧರ ಗೋಪಾಲ, ಬೇರಾರೂ ಇಲ್ಲ" ಎಂಬುದು ಅವಳ ಪದಗಳಲ್ಲಿ ವ್ಯಕ್ತವಾಗುವ ಭಾವ. ಮೀರಾಬಾಯಿ ಕುರಿತು ಅನೇಕ ಚಲನಚಿತ್ರಗಳನ್ನು ಭಾರತೀಯ ಭಾಷೆಗಳಲ್ಲಿ ತಯಾರಿಸಲಾಗಿದೆ [೧]. ಮೀರಾಬಾಯಿಯ ಕೃತಿಗಳನ್ನು ಲತಾ ಮಂಗೇಶ್ಕರ್ ಮತ್ತು ಎಂ.ಎಸ್.ಸುಬ್ಬುಲಕ್ಷ್ಮಿ ಅವರು ಹಾಡಿದ್ದಾರೆ[೨],[೩].

  • ನರಸಿಯ ಉಪಾಹಾರ
  • ಗೀತಗೋವಿಂದದ ಭಾಷ್ಯ
  • ರಾಗ ಗೋವಿಂದ
  • ರಾಗ ಸೋರಠದ ಪದಗಳು
  • ಮೀರಾಬಾಯಿಯ ಪದಾವಲಿ (ಭಕ್ತಿಗೀತೆಗಳ ಸಂಗ್ರಹ)

ಇದನ್ನೂ ಗಮನಿಸಿ[ಬದಲಾಯಿಸಿ]

ಹೊರಗಿನ ಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. [ https://en.wikipedia.org/wiki/Meera_(1979_film) | ಗುಲ್ಜಾರ್ ನಿರ್ದೇಶನದ ಹಿಂದಿ ಚಿತ್ರ "ಮೀರಾ"]
  2. ಛಾಲಾ ವಾಹಿ ದೇಸ್, ಹೃದಯನಾಥ್ ಮಂಗೇಶ್ಕರ್ ಅವರ ನಿರ್ದೇಶನದಲ್ಲಿ ಲತಾ ಮಂಗೇಶ್ಕರ್ ಹಾಡಿರುವ ಮೀರಾ ಭಜನೆಗಳು
  3. ಮೋರೆ ತೋ ಗಿರಿಧರ ಗೋಪಾಲ್, ಎಂ.ಎಸ್. ಸುಬ್ಬಲಕ್ಷ್ಮಿ