ಸುಧಾ (ವಾರ ಪತ್ರಿಕೆ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸುಧಾ ಇಂದ ಪುನರ್ನಿರ್ದೇಶಿತ)

ಸುಧಾ ವಾರಪತ್ರಿಕೆಯು ಕನ್ನಡದ ಹಳೆಯ ವಾರ ಪತ್ರಿಕೆಗಳಲ್ಲೊಂದು. ಬೆಂಗಳೂರಿನ "ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್" ಸಮೂಹದಿಂದ ಪ್ರಕಾಶಿತವಾಗುತ್ತಿದೆ.

ಇದು ೧೯೬೫ ರಲ್ಲಿ ಆರಂಭವಾಯಿತು. ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿ ದಿನಪತ್ರಿಕೆಗಳನ್ನು ಪ್ರಕಟಿಸುತ್ತಿದ್ದ ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್ ಸಂಸ್ಥೆ ವಿಷಯ ವೈವಿಧ್ಯವನ್ನು ಒಳಗೊಂಡ, ಮೋಹಕ ಮುದ್ರಣ, ವಿನ್ಯಾಸಗಳಿದ್ದ ಸುಧಾ ವಾರಪತ್ರಿಕೆಯನ್ನು ಆರಂಭಿಸಿದಾಗ ಕನ್ನಡ ಸಾಪ್ತಾಹಿಕಗಳ ಇತಿಹಾಸದಲ್ಲಿ ಹೊಸಶಕೆ ಆರಂಭವಾಯಿತೆಂದೇ ಹೇಳಬೇಕು.

ಸಂಪಾದಕರು[ಬದಲಾಯಿಸಿ]

ಪ್ರಜಾವಾಣಿಯ ಸುದ್ದಿಸಂಪಾದಕರಾಗಿದ್ದ ಇ. ಆರ್. ಸೇತೂರಾಂ ಮೊದಲ ಸಂಪಾದಕರು. ಪ್ರಜಾವಾಣಿ, ಸಾಪ್ತಾಹಿಕ ಪುರವಣಿ ಸಂಪಾದಕ ಎಂ. ಬಿ. ಸಿಂಗ್. (ನೋಡಿ- ಸಿಂಗ್,-ಎಂ-ಬಿ) ಸಹಸಂಪಾದಕರು. 1980ರಲ್ಲಿ ಎಂ.ಬಿ.ಸಿಂಗ್ ಸುಧಾದ ಸಂಪಾದಕರಾದರು. ಎಂ.ಬಿ.ಸಿಂಗ್ ನಂತರ ಪ್ರಿಂಟರ್ಸ್ ಸಂಸ್ಥೆಯ ಮ್ಯಾನೆಜಿಂಗ್ ಡೈರೆಕ್ಟರಾದ ಕೆ.ಎನ್.ಹರಿಕುಮಾರ್ ಸಂಪಾದಕರಾದರು. ಅವರ ನಂತರ ಕೆ.ಎನ್. ಶಾಂತಕುಮಾರ್ ಸಂಪಾದಕರಾದರು. ಈ ಪತ್ರಿಕೆಯ ಈಗಿನ ಸಂಪಾದಕರಾಗಿ ಶ್ರೀ ಕೆ.ಎನ್ .ತಿಲಕಕುಮಾರ್ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಪತ್ರಿಕೆಯ ವಸ್ತು, ವೈವಿಧ್ಯ ಮತ್ತು ವಿಶೇಷಗಳು[ಬದಲಾಯಿಸಿ]

ಪತ್ರಿಕೆಯ ಗುರಿ: ಮನೆಮಂದಿಗೆಲ್ಲಾ, ಮನೋರಂಜನೆ ಮನೋವಿಕಾಸ, ಈ ಕೌಟುಂಬಿಕ ಪತ್ರಿಕೆಯ ಆಕಾರ ಡೆಮಿ 1/4 ಆಕಾರ. ಮಹಿಳೆಯರು ಸರಾಗವಾಗಿ ತಮ್ಮ ಹೆಗಲಚೀಲದಲ್ಲಿ ಇಟ್ಟುಕೊಳ್ಳಬಹದಾದ ಆಕಾರ. ಖ್ಯಾತ ಕಲಾವಿದ ಅಪ್ಪುಕುಟ್ಟನ್ ಆಚಾರಿ ಅವರ ಕಲಾಕೃತಿಯನ್ನೇ ಮುಖ ಪುಟವನ್ನಾಗಿ ಮಾಡಿಕೊಂಡ ಸುಧಾದ ಮೊದಲ ಸಂಚಿಕೆ ಪ್ರಕಟವಾದದ್ದು. ಸಾಮಾನ್ಯವಾಗಿ ಆ ಕಾಲದ ಸಾಪ್ತಾಹಿಕಗಳಲ್ಲಿ ವಾರ ಪತ್ರಿಕೆಗಳ ಮುಖ್ಯ ಫಲಗಳಲ್ಲಿ ರಾರಾಜಿಸುತ್ತಿದ್ದ ಸಿನಿಮಾ ತಾರೆಯರ ಚಿತ್ರ. ಆದರೆ ಸುಧಾ ಮುಖಪುಟದಲ್ಲಿ ನಾಡಿನ ಕಲಾವಿದರ ಚಿತ್ರಕಲಾಕೃತಿಗಳನ್ನು ಪ್ರಕಟಿಸಿತು, ಅದು ಚಲನಚಿತ್ರವನ್ನು ತಿರಸ್ಕರಿಸಲಿಲ್ಲ. ಅದಕ್ಕೂ ಪ್ರಾಮಖ್ಯ ನೀಡಿತು. ಖ್ಯಾತ ಕಲಾವಿದರು, ಸಾಹಿತಿಗಳನ್ನು ಸುಧಾ ತನ್ನ ಅಂಕಣಕಾರರನ್ನಾಗಿ ಆಹ್ವಾನಿಸಿ, ಅವರಿಂದ ನಿರಂತರವಾಗಿ ಬರೆಸಿತು. ಪ್ರಸಿದ್ಧ ಸಾಹಿತಿಗಳಾದ ಜೆ.ಪಿ. ರಾಜರತ್ನಂ ಮತ್ತು ಬೀಚಿ ಮೊದಲಾದವರು ಸುಧಾ ವಾರಪತ್ರಿಕೆಯೊಂದಿಗೆ ನಿಕಟ ಬಾಂಧವ್ಯ ಕೊನೆಗೊಂಡದ್ದು ಅವರ ಕಣ್ಮರೆಯಿಂದಲೇ. ರಾಜರತ್ನಂ ಅವರ ವಿಚಾರರಶ್ಮಿ ಅಂಕಣ ಅವರ ಪಾಂಡಿತ್ಯ, ಬರಹದ ಮೋಹಕ ಶೈಲಿಗಳಿಂದ ಅತ್ಯಂತ ಜನಪ್ರಿಯವಾಯಿತು. ಇದಲ್ಲದೆ, ಮಕ್ಕಳಿಗಾಗಿ ನೂರಾರು ಕಥೆಗಳನ್ನು ಅವರು ಸುಧಾದಲ್ಲಿ ಬರೆದರು. ಓದುಗರಿಂದ ಬಂದ ಪ್ರಶ್ನೆಗಳಿಗೆ ಉತ್ತರ ನೀಡುವ `ನೀವು ಕೇಳಿದಿರಿ? ಅಂಕಣದಲ್ಲಿ ಖ್ಯಾತ ಸಾಹಿತಿ ಬೀಚಿ ಉತ್ತರಭೂಪ ಅಂಕಿತದಲ್ಲಿ ಅವರು ಉತ್ತರಿಸುತ್ತಿದ್ದು, ಅದು ಅತ್ಯಂತ ಅಚ್ಚುಮೆಚ್ಚಿನ ಅಂಕಣವಾಗಿ ಪ್ರಸಿದ್ಧವಾಯಿತು. ಸುಧಾ ವಾರಪತ್ರಿಕೆಯಲ್ಲಿ ಎಚ್ಚೆಸ್ಕೆಯವರ ಅಂಕಣಗಳು. ಕನ್ನಡ ಪತ್ರಿಕೋದ್ಯಮದಲ್ಲೇ ಒಂದು ಅಪೂರ್ವ ಸಾಧನೆ ಮತ್ತು ದಾಖಲೆ. ಮೊದಲು ವಾರದ ವ್ಯಕ್ತಿ ಮತ್ತು ಅನಂತರ ವ್ಯಕ್ತಿ ವಿಷಯ ಅಂಕಣಗಳಲ್ಲಿ ಅವರು ಜಗತ್ತಿನ ಹಲವು ಜನರನ್ನು ಪರಿಚಯಸಿದ್ದಾರೆ. ಸಮದರ್ಶಿ ಹೆಸರಿನಲ್ಲಿ ಮೊದಲು ವಾರದಿಂದ ವಾರಕ್ಕೆ ಮತ್ತು ನಂತರ ಸುದ್ದಿಯ ಹಿನ್ನಲೆ ಅಂಕಣಗಳಲ್ಲಿ ಜಗತ್ತಿನ ಪ್ರತಿಯೊಂದು ಪ್ರಮುಖ ವಿದ್ಯಮಾನವನ್ನೂ ಅವರು ವಿಶ್ಲೇಷಿಸಿದ್ದಾರೆ. ಎಚ್ಚೆಸ್ಕೆ ಅವರ ಅಚ್ಚುಕಟ್ಟು ಬರವಣಿಗೆ ಪತ್ರಕರ್ತರಿಗೊಂದು ಮಾದರಿ. ಹಿರಿಯ ಲೇಖಕರಿಗೆ ಮನ್ನಣೆ ನೀಡಿದ ಸುಧಾ, ಹೊಸ ಪೀಳಿಗೆಯ ಬರಹಗಾರರಿಗೆ ಪ್ರೋತ್ಸಾಹ ಮಾರ್ಗದರ್ಶನ ನೀಡಿತು. ಸೇತೂರಾಮ್ ಅವರು ಸುಧಾದ ಸಂಪಾದಕರಾಗಿದ್ದಷ್ಟು ಕಾಲ ಬರೆದ ಸಂಪಾದಕೀಯಗಳು ಹಲವು ವಿಷಯಗಳ ಬಗ್ಗೆ ಕನ್ನಡಿ ಹಿಡಿದಿವೆ. ಬೆಳಕು ಚೆಲ್ಲಿವೆ.

ಚಿತ್ರಮಯ ಜ್ಞಾನಕೋಶ, ಚಲನಚಿತ್ರ-ರಂಗಭೂಮಿಯ ಕಲಾವಿದರ ಆತ್ಮಕಥನವಾದ ಬಣ್ಣದ ಬದುಕು ಲೇಖನ ಮಾಲಿಕೆ ವೈದ್ಯಕೀಯ ಲೇಖನಗಳು, ವನ್ಯಜೀವನ, ಪ್ರವಾಸ, ಇತಿಹಾಸ ಕುರಿತ ಲೇಖನಗಳು ಪ್ರಸಿದ್ಧ ಲೇಖಕರ ವೈವಿಧ್ಯಮಯ ಬರಹಗಳು. ಖ್ಯಾತ ಸಾಹಿತಿಗಳ ಕಥೆಗಳು ಮತ್ತು ಕಾದಂಬರಿ ಧಾರವಾಹಿಗಳು ಮುಂತಾದವುಗಳಿಂದ ಸುಧಾ ಕನ್ನಡ ಓದುಗ ಸಮೂಹದಲ್ಲಿ ಉನ್ನತ ಸ್ಥಾನವನ್ನು ಪಡೆಯಿತು. ಸದಭಿರುಚಿಯ ಕುಟುಂಬ ಪತ್ರಿಕೆಯಾಗಿ ಬೆಳೆಯಿತು. ಒಳ್ಳೆಯ ಸಾಹಿತ್ಯ ಸೃಷ್ಟಿಗೆ ನೆರವಾಗುವ ದೃಷ್ಟಿಯಿಂದ ಸುಧಾ ಯುಗಾದಿ ಕಾದಂಬರಿ ಸ್ಪರ್ಧೆಯನ್ನು ಆರಂಭಿಸಿತು 15 ಸಾವಿರ ರೂಪಾಯಿ ಮೌಲ್ಯದ ಬಹುಮಾನಗಳಿದ್ದ ಈ ಸ್ಪರ್ಧೆ ಕೆಲವು ಕಾರಣಗಳಿಂದ ನಿಂತುಹೋಯಿತು. ಸುಧಾ ಈವರೆಗೆ ಸುಮಾರು 150 ಕ್ಕೂ ಹೆಚ್ಚು ಕಾದಂಬರಿಗಳನ್ನು ಧಾರಾವಾಹಿಯಾಗಿ ಪ್ರಕಟಿಸಿದೆ, ಹಲವು ಚಲನಚಿತ್ರಗಳಾಗಿವೆ.

ಪ್ರಜಾವಾಣಿ ದೀಪಾವಳಿ ವಿಶೇಷಾಂಕದ ಹಾಗೆ ಸುಧಾದ ಯುಗಾದಿ ವಿಶೇಷಾಂಕ ಸಾಹಿತ್ಯ ಸಂಸ್ಕ್ರತಿ, ಸಮಾಜಗಳನ್ನು ಕುರಿತ ಪ್ರಬುದ್ಧ ಬರಹಗಳ ಸಂಕಲನವಾಗಿ ಜನಪ್ರಿಯವಾಗಿದೆ. ಯುಗಾದಿ ವಿಶೇಷಾಂಕದೊಂದಿಗೆ ಪ್ರತಿವರ್ಷ ಒಂದು ಪುಸ್ತಕವನ್ನು ಓದುಗರಿಗೆ ಉಚಿತವಾಗಿ ನೀಡುವ ರೂಢಿಯೂ ಇದೆ.

1980ರಲ್ಲಿ ಎಂ.ಬಿ.ಸಿಂಗ್ ಸುಧಾದ ಸಂಪಾದಕರಾದ ನಂತರ ಸುಧಾದ ವಿನ್ಯಾಸ ಮಾರ್ಪಾಡಾಗಿ ಇನ್ನಷ್ಟು ಅಂಕಣಗಳು ಸೇರ್ಪಡೆಯಾದವು. ಕನ್ನಡ ಸಾಪ್ತಾಹಿಕಗಳಲ್ಲಿ ಮೊದಲ ಬಾರಿಗೆ ಮುಖಪುಟ ಲೇಖನಗಳ ಸಂಪ್ರದಾಯ ಆರಂಭವಾಗಿ ಪ್ರತಿವಾರವೂ ಒಂದು ವಿಷಯವನ್ನು ಕುರಿತ ವಿಶ್ಲೇಷಣೆ ಪರಿಚಯ ಲೇಖನ ಓದುಗರಿಗೆ ಲಭ್ಯವಾಯಿತು. ಕಲೆ, ಸಂಗೀತ, ಸಾಹಿತ್ಯ, ರಾಜಕೀಯ, ಇತಿಹಾಸ, ಸಮಾಜ, ನಾಡು-ನುಡಿ, ಜಗತ್ತಿನ ವಿದ್ಯಮಾನಗಳನ್ನು ಕುರಿತ, ಓದುಗರ ತಿಳಿವಳಿಕೆಯ ದಿಗಂತವನ್ನು ವಿಸ್ತರಿಸುವ, ಹಲವು ಅಮೂಲ್ಯ ಲೇಖನಗಳು ಸುಧಾದಲ್ಲಿ ಪ್ರಕಟವಾಗಿ ಪ್ರಸಿದ್ಧವಾಗಿವೆ. ಸುಧಾದಲ್ಲಿ ವರ್ಣಪುಟಗಳಲ್ಲಿ ಪ್ರಕಟವಾದ ಫೋಟೋ ಕಾಮಿಕ್ಸ್ ಕನ್ನಡ ಪತ್ರಿಕೋದ್ಯಮದಲ್ಲೇ ಪ್ರಥಮ ಸಾಹಸ.

ಹಿಂದಿನ ಸಂಪಾದಕರು[ಬದಲಾಯಿಸಿ]

ಹೊರಗಿನ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: