ಗೋಪಾಲ ವಾಜಪೇಯಿ

ವಿಕಿಪೀಡಿಯ ಇಂದ
Jump to navigation Jump to search
ಗೋಪಾಲ ವಾಜಪೇಯಿ
ಜನ್ಮನಾಮಜೂನ್ ೧, ೧೯೫೧
ಲಕ್ಷ್ಮೇಶ್ವರ, ಗದಗ ಜಿಲ್ಲೆ
ವೃತ್ತಿಪತ್ರಕರ್ತ, ಗೀತ ರಚನೆಕಾರರು, ನಾಟಕಕಾರರು, ರಂಗ ಕಲಾವಿದರು, ಅಂಕಣಕಾರರು, ಟೆಲಿವಿಷನ್ ಸಂಯೋಜಕ

ಗೋಪಾಲ ವಾಜಪೇಯಿ (ಜೂನ್ ೧, ೧೯೫೧- ಸೆಪ್ಟೆಂಬರ್ ೨೦, ೨೦೧೬) ಪತ್ರಿಕಾ ಸಂಪಾದಕರಾಗಿ, ಕವಿಯಾಗಿ, ನಾಟಕ ರಚನಕಾರರಾಗಿ, ದೂರದರ್ಶನ ಕಾರ್ಯಕ್ರಮ ಸಂಯೋಜಕರಾಗಿ, ಚಿತ್ರ ಸಂಭಾಷಣಕಾರರಾಗಿ, ಗೀತ ರಚನೆಕಾರರಾಗಿ, ಅಂಕಣಕಾರರಾಗಿ, ರಂಗನಟರಾಗಿ, ನಾಟಕ ಅಕಾಡೆಮಿ ಸದಸ್ಯರಾಗಿ,ಆಕಾಶವಾಣಿ, ಕಿರುತೆರೆ, ಜಾಹಿರಾತು ಕ್ಷೇತ್ರ, ಸಿನಿಮಾ ಹೀಗೆ ಎಲ್ಲೆಡೆ ತಮ್ಮ ಮಹತ್ವದ ಕಾಯಕ ನಡೆಸಿದವರಾಗಿದ್ದರೆ. ಅವರದು ಬಹುಮುಖೀ ವ್ಯಕ್ತಿತ್ವದ ಅಗಾಧ ಪ್ರತಿಭೆ.

ಗೋಪಾಲ ವಾಜಪೇಯಿ ಅವರ 'ನಾಗಮಂಡಲ' ಚಿತ್ರದ ‘ಈ ಹಸಿರ ಸಿರಿಯಲಿ ಮನಸು ಮೆರೆಯಲಿ ನವಿಲೇ ನವಿಲೇ, ನಿನ್ನಂತೆಯೇ ನಲಿವೆ, ನಿನ್ಹಾಗೆಯೇ ಕುಣಿವೆ ನವಿಲೇ, ನವಿಲೇ’ ಗೀತೆಯಂತೂ ನಾಡಿನ ಮನೆ ಮನೆಯಲ್ಲೂ ಪ್ರಖ್ಯಾತಿ.

ಜೀವನ[ಬದಲಾಯಿಸಿ]

ಗೋಪಾಲ ವಾಜಪೇಯಿ ಅವರ ಹುಟ್ಟೂರು 'ಪಂಪನ ಪುಲಿಗೆರೆ' ಎಂದೆನಿಸಿದ ಲಕ್ಷ್ಮೇಶ್ವರ. ನಾಲ್ಕರ ಎಳವೆಯಲ್ಲೇ ತಂದೆಯನ್ನು ಕಳೆದುಕೊಂಡು, ಕಂಡವರ ಕೂಸಾಗಿ ಹತ್ತು ಊರುಗಳಲ್ಲಿ ಬೆಳೆದವರು ಅವರು. ಚಿಕ್ಕಂದಿನಿಂದಲೇ ವಾಜಪೇಯಿಯವರಿಗೆ ಕಥೆ-ಕವನ-ಲೇಖನಗಳನ್ನು ಬರೆಯುವ ಹವ್ಯಾಸ ಕೂಡಿಬಂದಿತ್ತು. ಇಪ್ಪತ್ತರ ವಯಸ್ಸಿನಲ್ಲಿ ಬದುಕಿನ ಅನಿವಾರ್ಯತೆಗಾಗಿ ಓದಿಗೆ ಮುಕ್ತಾಯ ಹೇಳಿ ದುಡಿತಕ್ಕೆ ನಿಂತ ವಾಜಪೇಯಿಯವರನ್ನು ಸೆಳೆದದ್ದು ಪತ್ರಿಕೋದ್ಯಮ.

ಪತ್ರಿಕೋದ್ಯಮದಲ್ಲಿ[ಬದಲಾಯಿಸಿ]

ಪ್ರಾರಂಭದಲ್ಲಿ ಗದಗಿನ ‘'ವಾಸವಿ'’ ಮಾಸಪತ್ರಿಕೆಯ ಮೂಲಕ ಪತ್ರಿಕೋದ್ಯಮ ಪ್ರವೇಶಿಸಿದರು. ನಂತರ ೧೯೭೧ರಲ್ಲಿ ಕೆ. ಎಚ್. ಪಾಟೀಲರ '‘ವಿಶಾಲ ಕರ್ನಾಟಕ’' ದೈನಿಕ ಸೇರಿಕೊಂಡರು. ಮರುವರ್ಷದಲ್ಲೇ ‘'ಸಂಯುಕ್ತ ಕರ್ನಾಟಕ’' ಬಳಗದ ‘'ಕರ್ಮವೀರ’' ವಾರಪತ್ರಿಕೆಯ ಉಪಸಂಪಾದಕರಾಗಿ ನೇಮಕಗೊಂಡರು. ಪತ್ರಿಕಾರಂಗದ ದಿಗ್ಗಜರುಗಳಾದ ಪಾ.ವೆಂ. ಆಚಾರ್ಯ, ಖಾದ್ರಿ ಶಾಮಣ್ಣ, ಸುರೇಂದ್ರ ದಾನಿ ಮುಂತಾದವರ ನಿಕಟ ಸಂಪರ್ಕ ಮತ್ತು ಮಾರ್ಗದರ್ಶನ ಗೋಪಾಲ ವಾಜಪೇಯಿ ಅವರಿಗೆ ಲಭಿಸಿತು.

‘'ಕರ್ಮವೀರ’' ಪತ್ರಿಕೆಯಲ್ಲಿ ವಾಜಪೇಯಿಯವರು ಬರೆಯುತ್ತಿದ್ದ ವ್ಯಕ್ತಿಚಿತ್ರಗಳು ಜನಪ್ರಿಯಗೊಂಡವು. ೧೯೭೮ರ ವರ್ಷದಲ್ಲಿ ವಾಜಪೇಯಿ ಅವರು ಕನ್ನಡದ ‘ರೀಡರ್ ಡೈಜೆಸ್ಟ್’ ಎಂದು ಪ್ರಖ್ಯಾತವಾಗಿರುವ '‘ಕಸ್ತೂರಿ'’ ಮಾಸಪತ್ರಿಕೆಯ ಸಂಪಾದಕೀಯಕ್ಕೆ ವರ್ಗಾವಣೆಗೊಂಡರು. “ಮೊಹರೆ ಮತ್ತು ಪಾವೆಂ ಅವರು ಬೆಳೆಸಿದ ಆ ಧೀಮಂತ ಪತ್ರಿಕೆಯ ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡುವುದೇ ಒಂದು ಅನನ್ಯ ಅನುಭವ” ಎನ್ನುತ್ತಾರೆ ವಾಜಪೇಯಿ.

೧೯೯೬ರಲ್ಲಿ ಮತ್ತೆ ‘'ಕರ್ಮವೀರ'’ ಪತ್ರಿಕೆಯ ಸಹಸಂಪಾದಕರಾಗಿ ಬೆಂಗಳೂರಿಗೆ ವರ್ಗಾವಣೆಗೊಂಡ ವಾಜಪೇಯಿ ಅವರು ಆ ಪತ್ರಿಕೆಗೆ ಹಲವಾರು ಆಕರ್ಷಣೆಗಳನ್ನು ಮೂಡಿಸುವಲ್ಲಿ ವಿಶಿಷ್ಟ ಪಾತ್ರ ನಿರ್ವಹಿಸಿದರು. ನಂತರ ‘ಸಂಯುಕ್ತ ಕರ್ನಾಟಕ’ ದೈನಿಕದ ಗ್ರಾಮಾಂತರ ಸುದ್ಧಿ ವಿಭಾಗವನ್ನೂ, ‘ಸಾಪ್ತಾಹಿಕ ಪುರವಣಿ’ ವಿಭಾಗವನ್ನೂ ಕೆಲವು ಕಾಲ ವಾಜಪೇಯಿ ನಿರ್ವಹಿಸಿದರು. ಪತ್ರಿಕೋದ್ಯಮದಲ್ಲಿನ ಮೂರು ದಶಕಗಳಿಗೂ ಹೆಚ್ಚಿನ ಅವಧಿಯಲ್ಲಿ ವಾಜಪೇಯಿ ‘ಗೋವಾ’, ‘ವೃಷಭೇಂದ್ರಯ್ಯ’ ಮುಂತಾದ ಕಾವ್ಯನಾಮಗಳಲ್ಲಿ, ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಬರೆದ ಲೇಖನಗಳ ಗಾತ್ರ ಸಾವಿರಾರು ಪುಟಗಳ ವ್ಯಾಪ್ತಿಯನ್ನು ದಾಟಿದ್ದು. ಇತ್ತೀಚೆಗೆ ಅವರು 'ಅವಧಿ' ಎಂಬ ವೆಬ್ ಮೆಗಜೀನಿನಲ್ಲಿ ೪೫ ವಾರಗಳ ಕಾಲ ಬರೆದ 'ಸುಮ್ಮನೇ ನೆನಪುಗಳು' ಎಂಬ ಅಂಕಣ ಜಗತ್ತಿನಾದ್ಯಂತದ ಕನ್ನಡಿಗರ ಮೆಚ್ಚುಗೆ ಗಳಿಸಿತು. ಈ ಅಂಕಣದಲ್ಲಿ ವಾಜಪೇಯಿಯವರು ತಮ್ಮ ರಂಗಾನುಭವಗಳನ್ನು ವಿಶಿಷ್ಟ ಶೈಲಿಯಲ್ಲಿ ನಿರೂಪಿಸಿದ್ದಾರೆ. ಈಗಲೂ ವಾಜಪೇಯಿಯವರು ಕನ್ನಡ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿರುತ್ತಾರೆ.

ಕಿರುತೆರೆ ಕ್ಷೇತ್ರರಂಗದಲ್ಲಿ[ಬದಲಾಯಿಸಿ]

೧೯೯೯ರ ವರ್ಷದಲ್ಲಿ ಪತ್ರಿಕಾ ಕ್ಷೇತ್ರದಿಂದ ಸ್ವಯಂನಿವೃತ್ತಿ ಪಡೆದ ವಾಜಪೇಯಿಯವರು ೨೦೦೬ರ ವರ್ಷದವರೆಗೆ ಟೆಲಿವಿಜನ್ ರಂಗದಲ್ಲಿ ‘(ಈಟಿವಿ ಕನ್ನಡ ವಾಹಿನಿ’ಯ ಕಥಾವಿಭಾಗದ ಸಂಯೋಜಕರಾಗಿ ಹೈದರಾಬಾದಿನಲ್ಲಿ) ಕಾರ್ಯನಿರ್ವಹಿಸಿ ನಂತರದಲ್ಲಿ ಪೂರ್ಣ ನಿವೃತ್ತಿ ಪಡೆದರು. ಈಟಿವಿ ಕನ್ನಡ ವಾಹಿನಿ’ಯ ಅನೇಕ ಕಾರ್ಯಕ್ರಮಗಳ ಯಶಸ್ಸಿನ ಹಿಂದೆ ವಾಜಪೇಯಿಯವರ ಸೃಜನಾತ್ಮಕ ಪರಿಶ್ರಮ ಇದೆ. ಆ ವಾಹಿನಿಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾಗಿದ್ದ 'ಎದೆ ತುಂಬಿ ಹಾಡುವೆನು...'ಗೆ ವಾಜಪೇಯಿಯವರು ಸತತ ೧೧ ವರ್ಷ ಸಾಹಿತ್ಯ ಸಲಹೆಗಾರರಾಗಿ ದುಡಿದಿದ್ದಾರೆ. ಅಲ್ಲದೇ, ಪ್ರತಿ ವಾರ ಆ ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಎಸ್. ಪಿ. ಬಾಲಸುಬ್ರಮಣ್ಯಂ ಅವರು ಹಾಡುತ್ತಿದ್ದ ವಚನವನ್ನು ಆಯ್ಕೆ ಮಾಡಿ, ಅದಕ್ಕೆ ವ್ಯಾಖ್ಯಾನ ಬರೆಯುತ್ತಿದ್ದವರು ವಾಜಪೇಯಿಯವರೇ. ಈಗವರು ಬೆಂಗಳೂರಲ್ಲಿ ನೆಲೆಸಿರುವ ಪೂರ್ಣ ಫ್ರೀಲ್ಯಾನ್ಸರ್.

ನಾಟಕ ಲೋಕದಲ್ಲಿ[ಬದಲಾಯಿಸಿ]

ಗೋಪಾಲ ವಾಜಪೇಯಿ ಅವರದು ವೈವಿಧ್ಯಪೂರ್ಣ ಪ್ರತಿಭೆ. ಪತ್ರಿಕಾ ಕ್ಷೇತ್ರವಲ್ಲದೆ ಆಕಾಶವಾಣಿ, ರಂಗಭೂಮಿ, ಚಲನಚಿತ್ರ, ಕಿರುತೆರೆ ಕ್ಷೇತ್ರಗಳಲ್ಲೂ ಅವರು ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಆಕಾಶವಾಣಿಯ ನಾಟಕ ವಿಭಾಗದ ‘ಎ’ ಗ್ರೇಡ್ ಕಲಾವಿದರಾಗಿ ಎಪ್ಪ ತ್ತಕ್ಕೂ ಹೆಚ್ಚು ನಾಟಕಗಳಲ್ಲಿ ಮುಖ್ಯ ಪಾತ್ರ ವಹಿಸಿರುವ ಗೋಪಾಲ ವಾಜಪೇಯಿಯವರು ಪ್ರಖ್ಯಾತ ಬಾನುಲಿ ನಾಟಕ ರಚನೆಕಾರರೂ ಹೌದು.

ಗೋಪಾಲ ವಾಜಪೇಯಿ ಹತ್ತಕ್ಕೂ ಹೆಚ್ಚು ನಾಟಕಗಳ ರಚನೆಯನ್ನು ಮಾಡಿದ್ದಾರೆ. ಅವರ ‘'ದೊಡ್ಡಪ್ಪ’ ' ಎಂಬ ಜಾನಪದ ಶೈಲಿಯ ನಾಟಕ ರಾಜ್ಯದ ಪ್ರತಿಷ್ಠಿತ ಹವ್ಯಾಸಿ ತಂಡಗಳಿಂದ ೫೦೦ಕ್ಕೂ ಹೆಚ್ಚು ಪ್ರಯೋಗಳನ್ನು ಕಂಡ ಜನಪ್ರಿಯ ನಾಟಕವೆನಿಸಿದೆ. ‘'ಸಂತ್ಯಾಗ ನಿಂತಾನ ಕಬೀರ’', '‘ನಂದಭೂಪತಿ'’, 'ಧರ್ಮಪುರಿಯ ಶ್ವೇತವೃತ್ತ', 'ಆಗಮನ' ಮುಂತಾದ ಅವರ ಇತರ ಭಾಷಾ ಪ್ರಸಿದ್ಧ ರೂಪಾಂತರ ನಾಟಕಗಳೂ ‘ರಂಗಾಯಣ’, 'ಶಿವಸಂಚಾರ’ ತಂಡಗಳಿಂದ ಭಾರತಾದ್ಯಂತ ನೂರಾರು ಬಾರಿ ಪ್ರಯೋಗಿಸಲ್ಪಟ್ಟಿವೆ.

ಗೀತರಚನೆ[ಬದಲಾಯಿಸಿ]

ಚಲನಚಿತ್ರರಂಗದಲ್ಲಿ ಸಂಭಾಷಣಕಾರರಾಗಿ, ಗೀತರಚನಕಾರರಾಗಿ ಗೋಪಾಲ ವಾಜಪೇಯಿ ಮಹತ್ವಪೂರ್ಣಕೆಲಸ ಮಾಡಿದ್ದಾರೆ. ಸುಂದರ ಕೃಷ್ಣ ಅರಸರ ‘'ಸಂಗ್ಯಾ ಬಾಳ್ಯಾ", ನಾಗಾಭರಣರ '‘ಸಂತ ಶಿಶುನಾಳ ಶರೀಫ’', '‘ನಾಗಮಂಡಲ’, '‘ಸಿಂಗಾರೆವ್ವ’ ' ಹಾಗೂ ಗಿರೀಶ್ ಕಾಸರವಳ್ಳಿಯವರ '‘ತಾಯಿ ಸಾಹೇಬ’' ಚಿತ್ರಗಳಿಗೆ ಸಂಭಾಷಣೆ ಬರೆದವರು ಗೋಪಾಲ ವಾಜಪೇಯಿ. ಜೊತೆಗೆ ‘'ಸಂಗ್ಯಾ ಬಾಳ್ಯಾ’,', '‘ನಾಗಮಂಡಲ’', '‘ಸಿಂಗಾರೆವ್ವ’ ' ಮತ್ತು ಕೇಸರಿ ಹರವೂ ಅವರ ‘'ಭೂಮಿಗೀತ'’ಕ್ಕೆ ವಾಜಪೇಯಿ ಗೀತರಚನೆಯನ್ನು ಮಾಡಿದ್ದಾರೆ. ಈ ಎಲ್ಲ ಚಿತ್ರಗೀತೆಗಳು ಅಪಾರ ಜನಪ್ರಿಯತೆ ಗಳಿಸಿವೆ.

ಗೋಪಾಲ ವಾಜಪೇಯಿ ಅವರ ಚಿತ್ರಗೀತೆಗಳು ಮಾತ್ರವಲ್ಲದೆ, ಸಿ ಅಶ್ವಥ್ ಅವರ ರಾಗಸಂಯೋಜನೆಯಲ್ಲಿ ‘'ನಾಗಮಂಡಲ’' ರಂಗ ಗೀತೆಗಳು, '‘ಜೋಡಿ ಜೀವ’' ಜಾನಪದ ಶೈಲಿಯ ಕಥನ ಗೀತೆಗಳು, ಕೆ ಎಂ ಎಫ್ ಅವರಿಗಾಗಿ '‘ಕ್ಷೀರ ಸಂಪದ’' ಎಂಬ ದ್ವನಿ ಸುರುಳಿಗಾಗಿ ರಚಿಸಿದ ಗೀತೆಗಳು; ಡಾ. ನಾಗರಾಜರಾವ್ ಹವಲ್ದಾರ್ ಹಾಡಿರುವ ಭಾವಾನುವಾದಿತ ಅಭಂಗಗಳು ದ್ವನಿಸುರುಳಿ, ಸಿಡಿ ರೂಪದಲ್ಲಿ ಹೊರಬಂದಿವೆ. ಇದೀಗ ವಾಜಪೇಯಿಯವರು ಕಬೀರ ದಾಸರ ದೋಹೆಗಳನ್ನು ಸರಳಗನ್ನಡದಲ್ಲಿ ಭಾವಾನುವಾದ ಮಾಡಿ ಸಿಡಿ ರೂಪದಲ್ಲಿ ಕನ್ನಡಿಗರಿಗೆ ಅರ್ಪಿಸುವ ಮಹತ್ತರ ಯೋಜನೆ ಹಾಕಿಕೊಂಡಿದ್ದಾರೆ.

ಪ್ರಕಟಿತ ಕೃತಿಗಳು[ಬದಲಾಯಿಸಿ]

ಗೋಪಾಲ ವಾಜಪೇಯಿ ಅವರ ‘'ದೊಡ್ಡಪ್ಪ’ ' ನಾಟಕ ಹೆಗ್ಗ್ಗೋಡಿನ ಅಕ್ಷರ ಪ್ರಕಾಶನದಿಂದ, ಯಂಡಮೂರಿ ವೀರೇಂದ್ರನಾಥರ ಅನುವಾದವಾದ '‘ಯಶಸ್ಸಿನತ್ತ ಪಯಣ'’ ಹುಬ್ಬಳ್ಳಿಯ ಸಾಹಿತ್ಯ ಭಂಡಾರದಿಂದ ಮತ್ತು ಭೀಶಮ್ ಸಾಹ್ನಿಯವರ ಮೂಲ ಹಿಂದಿ ನಾಟಕದ ಅನುವಾದ '‘ಸಂತ್ಯಾಗ ನಿಂತಾನ ಕಬೀರ’' ಪ್ರಗತಿ ಗ್ರಾಫಿಕ್ಸ್ ಪ್ರಕಾಶನದಿಂದಲೂ ಪ್ರಕಟಗೊಂಡಿವೆ. 'ನಂದ ಭೂಪತಿ' (ಶೇಕ್ಸ್ ಪಿಯರನ ಕಿಂಗ್ ಲಿಯರ್ ರೂಪಾಂತರ) ಇತ್ತೀಚೆಗೆ ಹಗರಿಬೊಮ್ಮನಹಳ್ಳಿಯ ಸುಯೋದನ ಪ್ರಕಾಶನದಿಂದ ಹೊರಬಂದ ಕೃತಿ. 'ದೊಡ್ದಪ್ಪ ' ನಾಟಕದ ಎರಡನೆಯ ಮುದ್ರಣ ಮತ್ತು 'ಧರ್ಮಪುರಿಯ ಶ್ವೇತವೃತ್ತ...' (ಚಾಕ್ ಸರ್ಕಲ್ ರೂಪಾಂತರ) ಮತ್ತು 'ಸುಮ್ಮನೇ ನೆನಪುಗಳು' ಇದೀಗ ಅಚ್ಚಿನ ಮನೆಗೆ ಹೋಗಲು ಕಾದಿವೆ.

ಅಂಕಣಕಾರರಾಗಿ[ಬದಲಾಯಿಸಿ]

‘'ಅವಧಿ'’ಯಲ್ಲಿ ಅವರ ಅಂಕಣ ಬರಹಗಳು ನಾಡಿನ ಜನರ ಮನಗಳನ್ನು ತಣಿಸುತ್ತಿವೆ.

ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿ[ಬದಲಾಯಿಸಿ]

೧೯೮೭ ರಿಂದ ೧೯೯೦ ಅವಧಿಗೆ ಗೋಪಾಲ ವಾಜಪೇಯಿ ಅವರು ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ ಅವಿಭಜಿತ ಧಾರವಾಡ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ರಾಜ್ಯ ಮಟ್ಟದ 'ನೇಪಥ್ಯ ಶಿಬಿರ', 'ಜಡಭರತ ನಾಟಕೋತ್ಸವ', 'ಮಕ್ಕಳ ರಂಗ ಶಿಬಿರ' 'ಪ್ರಸಾಧನ ಶಿಬಿರ' ಮುಂತಾಗಿ ವಿವಿದ ರಂಗಚಟುವಟಿಕೆಗಳಿಗೆ ಅಪಾರವಾಗಿ ದುಡಿದಿದ್ದಾರೆ.

ಜಾಹಿರಾತು ಲೋಕದಲ್ಲಿ[ಬದಲಾಯಿಸಿ]

ಅವರು ಹಲವಾರು ಜಾಹೀರಾತು ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.

ಗೌರವ ಪುರಸ್ಕಾರಗಳು[ಬದಲಾಯಿಸಿ]

ಗೋಪಾಲ ವಾಜಪೇಯಿ ಅವರ ವೈವಿಧ್ಯಪೂರ್ಣ ಪ್ರತಿಭೆಗೆ ಸಂದಿರುವ ಪುರಸ್ಕಾರಗಳೂ ವೈವಿಧ್ಯಪೂರ್ಣವಾಗಿವೆ. ರಾಜ್ಯಮಟ್ಟದ ಯುವನಾಟಕೋತ್ಸವ ‘ಅತ್ಯುತ್ತಮ ನಟ’ ಪ್ರಶಸ್ತಿ, (೧೯೭೮), '‘ದೊಡ್ಡಪ್ಪ’ ' ನಾಟಕ ರಚನೆಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ (೧೯೮೧), '‘ದೊಡ್ಡಪ್ಪ’ ' ನಾಟಕಕ್ಕಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ (೧೯೮೩), '‘ದೊಡ್ಡಪ್ಪ’ ' ನಾಟಕಕ್ಕಾಗಿ ಹುಬ್ಬಳ್ಳಿ ಯ ಮೂರು ಸಾವಿರ ಮಟದ 'ಗ್ರಂಥ ಪುರಸ್ಕಾರ' (೧೯೮೫), 'ಕಸ್ತೂರಿ' ಪತ್ರಿಕೆಯ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಲೋಕ ಶಿಕ್ಷಣ ಟ್ರಸ್ಟಿನ ಗೌರವ (೨೦೦೬) ಮತ್ತು ಮಾಧ್ಯಮ ಅಕಾಡೆಮಿ ಪ್ರಶಸ್ತಿ (೨೦೦೮), ಅಲ್ಲದೆ ಹಲವಾರು ಪ್ರತಿಷ್ಠಿತ ಸಂಗ ಸಂಸ್ಥೆಗಳ ಗೌರವಗಳು ಗೋಪಾಲ ವಾಜಪೇಯಿ ಅವರಿಗೆ ಸಂದಿವೆ.

ನಿಧನ[ಬದಲಾಯಿಸಿ]

ಸೆಪ್ಟೆಂಬರ್ ೨೧, ೨೦೧೬ರಂದು ಮಂಗಳವಾರ ರಾತ್ರಿ ೯:೩೦ಕ್ಕೆ ನಿಧನರಾದರು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಕುಸುಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.[೧]

ಹೊರಕೊಂಡಿಗಳು[ಬದಲಾಯಿಸಿ]

ಗೋಪಾಲ ವಾಜಪೇಯಿ ಕಾಲ೦, ಅವಧಿ ಮ್ಯಾಗಜೀನ್

ಉಲ್ಲೇಖಗಳು[ಬದಲಾಯಿಸಿ]

  1. ಬಹುಮುಖ ಪ್ರತಿಭೆ ಗೋಪಾಲ ವಾಜಪೇಯಿ ನಿಧನ, ಪ್ರಜಾವಾಣಿ ವಾರ್ತೆ 20 Sep, 2016