ವಿಷಯಕ್ಕೆ ಹೋಗು

ನಿಟ್ಟೂರು ಶ್ರೀನಿವಾಸರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಿಟ್ಟೂರು ಶ್ರೀನಿವಾಸರಾವ್ (೨೪ ಆಗಸ್ಟ್ ೧೯೦೩ – ೧೨ ಆಗಸ್ಟ್ ೨೦೦೪)[] ಅವರು ಗಾಂಧಿವಾದಿಯಾಗಿ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡಿದ್ದವರು. ಕರ್ನಾಟಕ ಉಚ್ಚ ನ್ಯಾಯಾಲಯಮುಖ್ಯ ನ್ಯಾಯಾಧೀಶರಾಗಿದ್ದ ಇವರು ಕೇಂದ್ರ ಜಾಗೃತ ಆಯೋಗದ ಮೊದಲ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ.[] ಕೆಲಕಾಲ ಅಂದಿನ ಮೈಸೂರು ರಾಜ್ಯದ ಪ್ರಭಾರ ರಾಜ್ಯಪಾಲರೂ ಆಗಿದ್ದ ಇವರು ಮಹಾತ್ಮ ಗಾಂಧಿಯವರ ಆತ್ಮಕತೆಯನ್ನು ಕನ್ನಡಕ್ಕೆ ತಂದವರಲ್ಲಿ ಮೊದಲಿಗರು.[][]

ಪ್ರಾರಂಭಿಕ ಜೀವನ

[ಬದಲಾಯಿಸಿ]

ನಿಟ್ಟೂರು ಶ್ರೀನಿವಾಸರಾಯರು ಬೆಂಗಳೂರಿನಲ್ಲಿ ಹುಟ್ಟಿದರೂ ಅವರ ತಂದೆ ಶಾಲಾ ಶಿಕ್ಷಕರಾಗಿದ್ದುರಿಂದ ಹೊಸದುರ್ಗ, ಚಳ್ಳಕೆರೆ, ಮತ್ತು ಶಿವಮೊಗ್ಗದಲ್ಲಿ ವಿದ್ಯಾಭ್ಯಾಸ ಮಾಡಿದರು. ಆಮೇಲೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ವಿಜ್ಞಾನ ಪದವಿ ಪಡೆದು ನ್ಯಾಷನಲ್ ಪ್ರೌಢಶಾಲೆಯಲ್ಲಿ ಶಿಕ್ಷಕರಾದರು. ಕೆಲಕಾಲದ ನಂತರ ಮದ್ರಾಸ್ ಕಾನೂನು ಕಾಲೇಜು ಸೇರಿ ೧೯೨೭ರಲ್ಲಿ ಕಾನೂನು ಪದವೀಧರರಾದರು.[]

ನಿಟ್ಟೂರು ಶ್ರೀನಿವಾಶ್

[ಬದಲಾಯಿಸಿ]

ಕಾನೂನು

[ಬದಲಾಯಿಸಿ]

ಬೆಂಗಳೂರಿನಲ್ಲಿ ವಕೀಲಿವೃತ್ತಿಯಲ್ಲಿ ತೊಡಗಿದ ಇವರು ೧೯೫೨ರಲ್ಲಿ ಮೈಸೂರು ರಾಜ್ಯದ ಬಾರ್ ಕೌನ್ಸಿಲಿನ ಮೊದಲ ಅಧ್ಯಕ್ಷರಾಗಿ ಆಯ್ಕೆಯಾದರು.[] ಕೆಂಗಲ್ ಹನುಮಂತರಾಯರು ಮುಖ್ಯಮಂತ್ರಿಗಳಾಗಿದ್ದಾಗ ಇವರು ರಾಜ್ಯದ ಅಡ್ವೊಕೇಟ್ ಜನರಲ್ ಆಗಿ ನೇಮಿತರಾದರು. ೧೯೬೧ರಲ್ಲಿ ರಾಜ್ಯ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯೂ ಆದರು. ೧೯೬೪ರ ಫೆಬ್ರವರಿಯಲ್ಲಿ ಪ್ರಧಾನಿ ಪಂ. ಜವಾಹರಲಾಲ್ ನೆಹರು ಕೇಂದ್ರ ಜಾಗೃತ ಆಯೋಗವನ್ನು ರಚಿಸಿದಾಗ ನಿಟ್ಟೂರರು ಅದರ ಮೊದಲ ಆಯುಕ್ತರಾಗಿ ನೇಮಕಗೊಂಡರು.[]

ಸ್ವಾತಂತ್ರ್ಯ ಚಳುವಳಿ

[ಬದಲಾಯಿಸಿ]

ನಿಟ್ಟೂರರು ತಮ್ಮ ೧೮ನೇ ವಯಸ್ಸಿನಲ್ಲೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿ ಚಳವಳಿಗೆ ಧುಮುಕಿದರು. ಕಾಂಗ್ರೆಸ್ಸಿನ ಮೈಸೂರುಪ್ರಾಂತ್ಯ ವಿಭಾಗದ ಚಟುವಟಿಕೆಗಳಲ್ಲಿ ಶ್ರೀನಿವಾಸರಾಯರು ಪೂರ್ಣರೂಪದಲ್ಲಿ ತೊಡಗಿಸಿಕೊಂಡರು ಮತ್ತು ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದರು.[]. ಕೆಲಕಾಲ ಅವರು ಧಾರವಾಡದ ಕಾಂಗ್ರಸ್ ಘಟಕವನ್ನು ಮುನ್ನಡೆಸಿದರು. ೧೯೪೨ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಅವರು ನೇತಾರರಾದ ಕಮಲಾದೇವಿ ಚಟ್ಟೋಪಾಧ್ಯಾಯ, ಆರ್ ಆರ್ ದಿವಾಕರ ಮತ್ತು ಯು ಎಸ್ ಮಲ್ಯ ಮುಂತಾದವರಿಗೆ ಆಶ್ರಯ ಕಲ್ಪಿಸಿದರು.

ಗಾಂಧಿಯವರ ಪ್ರಭಾವ

[ಬದಲಾಯಿಸಿ]

೧೯೨೭ರಲ್ಲ ಗಾಂಧಿಯವರು ಬೆಂಗಳೂರಿಗೆ ಭೇಟಿಯಿತ್ತಾಗ ನಿಟ್ಟೂರರು ಅವರ ಆತ್ಮಕತೆಯನ್ನು ಅನುವಾದಿಸಲು ಅನುಮತಿ ಬೇಡಿದರು. ಅವರು ಮತ್ತು ಅವರ ಪತ್ನಿ ಇಬ್ಬರೂ ಸೇರಿ ಮಾಡಿದ ಆ ಅನುವಾದವು ಕನ್ನಡ ದೈನಿಕಗಳಾದ ವಿಶ್ವಕರ್ನಾಟಕ ಮತ್ತು ಲೋಕಮತಗಳಲ್ಲಿ ಧಾರಾವಾಹಿಯಾಗಿ ಮೂಡಿಬಂತು.[] ಆ ಅನುವಾದಕ್ಕೆ ಅವರು ಸತ್ಯಶೋಧನೆ ಎಂಬ ಶೀರ್ಷಿಕೆ ನೀಡಿದರು. ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷರಾಗಿ ಹಾಗೂ ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷರಾಗಿಯೂ ಅವರು ದುಡಿದರು. ಖಾದಿ ಪ್ರಚಾರಕ್ಕಾಗಿ ಖಾದಿ ಘಟಕವನ್ನೂ ಪ್ರಾರಂಭಿಸಿದರು.

ಸಾಹಿತ್ಯ ಸೇವೆ

[ಬದಲಾಯಿಸಿ]

ನಿಟ್ಟೂರು ಶ್ರೀನಿವಾಸರಾಯರು ಸತ್ಯಶೋಧನ ಪ್ರಕಟಣ ಮಂದಿರ ಹಾಗೂ ಸತ್ಯಶೋಧನ ಪುಸ್ತಕ ಮಂದಿರಗಳನ್ನು ಸ್ಥಾಪಿಸಿ ಹಲ ಪುಸ್ತಕಗಳನ್ನು ಹೊರತಂದರು. ಶಿವರಾಮ ಕಾರಂತಬಾಲಪ್ರಪಂಚವು ಇದೇ ಸಂಸ್ಥೆಯಿಂದ ಪ್ರಕಟಗೊಂಡಿತು. ಅದೇ ರೀತಿ ಸಿ ಕೆ ವೆಂಕಟರಾಮಯ್ಯ, ಕುವೆಂಪು, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಹಾಗೂ ಜಿ ಪಿ ರಾಜರತ್ನಂ ಅವರ ಕೃತಿಗಳೂ ಬೆಳಕು ಕಂಡವು. ಡಿವಿಜಿಯವರು ನಿಟ್ಟೂರರ ಮೇಲೆ ತುಂಬ ಪ್ರಭಾವ ಬೀರಿದ್ದರು. ಡಿವಿಜಿಯರವರ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಸೇರಿದ ಅವರು ಮುಂದೆ ಅದರ ಗೌರವ ಕಾರ್ಯದರ್ಶಿಯೂ ಆದರು.[] ಶಾಲೆಗಳಲ್ಲಿ ಕನ್ನಡ ಮಾಧ್ಯಮದ ಜಾರಿಗೆ ಅವರು ಅಪಾರವಾಗಿ ಶ್ರಮಿಸಿದರು.[]

ಕೊನೆಯ ದಿನಗಳು

[ಬದಲಾಯಿಸಿ]

ನಿಟ್ಟೂರರ ಸಮಾಜಸೇವೆ ಹಾಗೂ ಸಾಹಿತ್ಯ ಸೇವೆಯನ್ನು ಗುರುತಿಸಿದ ಕರ್ನಾಟಕ ರಾಜ್ಯಸರ್ಕಾರವು ಅವರನ್ನು ವಿಶೇಷವಾಗಿ ಗೌರವಿಸಿತಲ್ಲದೆ ಬೆಂಗಳೂರಿನ ಪ್ರಮುಖ ರಸ್ತೆಯೊಂದಕ್ಕೆ ಅವರ ಹೆಸರನ್ನೇ ಇಟ್ಟಿದೆ. ೨೦೦೨ರಲ್ಲಿ ಸಾಹಿತ್ಯ ಮತ್ತು ಮಾನವೀಯ ಮೌಲ್ಯವರ್ಧನೆಯ ಕ್ಷೇತ್ರದಲ್ಲಿನ ಅವರ ಕೊಡುಗೆಗಾಗಿ ರಾಜ್ಯ ಸರಕಾರ ಅವರನ್ನು ಗೌರವಿಸಿತು.[] ಅವರು ಹಿರಿಯ ನಾಗರಿಕರ ಅಭ್ಯುದಯಕ್ಕಾಗಿ ಪರಿಶ್ರಮಿಸುವ ಹಿರಿಯ ನಾಗರಿಕರ ವೇದಿಕೆಯನ್ನೂ ಸೇರಿದರು.[] ಶ್ರೀನಿವಾಸರಾಯರು ಸಂಗೀತದಲ್ಲೂ ಅಮಿತ ಆಸಕ್ತಿಯನ್ನು ಹೊಂದಿದವರಾಗಿದ್ದರು. ಅವರು ಬೆಂಗಳೂರಿನಲ್ಲಿ ಆನದ್ಧವಾದ್ಯ ಕಲೆಯ ಉತ್ತೇಜನಕ್ಕಾಗಿ ರೂಪುಗೊಂಡ ಆನದ್ಧವಾದ್ಯ ಕಲಾಕೇಂದ್ರದ ಅಧ್ಯಕ್ಷರಾಗಿದ್ದರು.[] ನೂರು ವರ್ಷಗಳ ತುಂಬು ಜೀವನ ನಡೆಸಿದ ಅವರು ೧೨ನೇ ಅಗಸ್ಟ್ ೨೦೦೪ರಲ್ಲಿ ನಿಧನ ಹೊಂದಿದರು.

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ ವೀಣಾ ಭಾರತಿ. "The uncrowned visionary". ಡೆಕ್ಕನ್ ಹೆರಾಲ್ಡ್, dated 2004-08-24. Archived from the original on 2007-09-29. Retrieved 2007-09-29. {{cite web}}: Cite has empty unknown parameter: |6= (help)CS1 maint: bot: original URL status unknown (link)
  2. ೨.೦ ೨.೧ ೨.೨ ೨.೩ ಎ ಜಯರಾಂ. "A friend who will be missed by everyone". Archived from the original on 2004-12-23. Retrieved 2007-09-03.
  3. ಗೋಪಾಲ್ ಕೆ ಕಡೆಕೋಡಿ. "ಶ್ರದ್ಧಾಂಜಲಿ - ನಿಟ್ಟೂರು ಶ್ರೀನಿವಾಸರಾವ್" (PDF). Online webpage of the Institute of Social and Economic Change, Bangalore. Archived from the original (PDF) on 2007-10-09. Retrieved 2007-09-03.
  4. Geetha Rao (2003-08-15). "I-Day, through eyes old and young". ಟೈಂಸ್ ಓಫ್ ಇಂಡಿಯಾ, dated 2003-08-15. Retrieved 2007-09-03.
  5. ಎನ್. ರಂಗನಾಥ ಶರ್ಮಾ (1984). ಮರುಳ ಮುನಿಯನ ಕಗ್ಗಕ್ಕೆ ಮುನ್ನುಡಿ. ಕಾವ್ಯಾಲಯ ಪ್ರಕಾಶನ, ಮೈಸೂರು ಗೋಖಲೆ ಸಾರ್ವಜನಿಕ ಸಂಸ್ಥೆ.
  6. Mala Kumar. "As sharp as ever". ದಿ ಹಿಂದು, dated 2002-09-30. Archived from the original on 2005-05-07. Retrieved 2007-09-03.
  7. "Intellectuals must lead the way: CM". ಟೈಂಸ್ ಓಫ್ ಇಂಡಿಯಾ, dated 2002-04-18. 2002-04-18. Archived from the original on 2012-10-18. Retrieved 2007-09-03.
  8. Meera John (2002-09-15). "Greying and over the edge". ಟೈಂಸ್ ಓಫ್ ಇಂಡಿಯಾ, dated 2002-09-15. Archived from the original on 2013-01-26. Retrieved 2007-09-04.
  9. "Remembering Nittoor". Archived from the original on 2014-05-17. Retrieved 2014-05-17.


ಬಾಹ್ಯಸಂಪರ್ಕಗಳು

[ಬದಲಾಯಿಸಿ]