ಖಾದ್ರಿ ಶಾಮಣ್ಣ

ವಿಕಿಪೀಡಿಯ ಇಂದ
Jump to navigation Jump to search

ಖಾದ್ರಿ ಶಾಮಣ್ಣನವರು ಕರ್ನಾಟಕದ ಹೆಸರಾಂತ ಪತ್ರಕರ್ತರು.

ಜನನ ಮತ್ತು ಬಾಲ್ಯ[ಬದಲಾಯಿಸಿ]

ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ೧೯೨೫ರಲ್ಲಿ ಜನಿಸಿದ ಶ್ರೀ ಖಾದ್ರಿ ಶ್ಯಾಮಣ್ಣನವರು ಮೈಸೂರಿನಲ್ಲಿ ಇಂಟರ್ ಮೀಡಿಯೆಟ್ ಓದುತ್ತಿದ್ದಾಗ,ಗಾಂಧೀಜಿಯವರ ಕರೆಯ ಮೇರೆಗೆ ಶಿಕ್ಷಣವನ್ನು ನಿಲ್ಲಿಸಿ ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು.

ಸ್ವಾತಂತ್ರ್ಯ ಹೋರಾಟ[ಬದಲಾಯಿಸಿ]

೧೯೪೨ರಲ್ಲಿ ಕ್ವಿಟ್ ಇಂಡಿಯ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಅನೇಕ ಬಾರಿ ಸೆರೆಮನೆ ವಾಸ ಅನುಭವಿಸಿದರು.ಸೆರೆಮನೆಯಿಂದ ಬಿಡುಗಡೆಯಾದ ಮೇಲೆ ೧೯೪೪ರಲ್ಲಿ ಗಾಂಧೀಜಿಯವರ ಸೇವಾ ಆಶ್ರಮಕ್ಕೆ ತೆರಳಿದರು.೧೯೪೬ರಲ್ಲಿ ಕರ್ನಾಟಕಕ್ಕೆ ಮರಳಿ ಬಂದು ಎಚ್.ಸಿ.ದಾಸಪ್ಪ ಮತ್ತು ಶ್ರೀಮತಿ ಯಶೋದರಮ್ಮ ದಾಸಪ್ಪ ನವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದ್ದರು.ಜಯಪ್ರಕಾಶ್ ನಾರಾಯಣ್,ರಾಮ್ ಮನೋಹರ್ ಲೋಹಿಯಾ ಇವರ ಪ್ರಭಾವದಿಂದ ಕರ್ನಾಟಕ ಸೋಷಿಯಲಿಸ್ಟ್ ಪಕ್ಷವನ್ನು ಸ್ಥಾಪಿಸಿ ದುಡಿದರು.೧೯೮೪ ರಿಂದ ೯೦ ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಕೆಲಸ ಮಾಡಿದರು.

ಪತ್ರಿಕೋದ್ಯಮ[ಬದಲಾಯಿಸಿ]

ಪ್ರಜಾವಾಣಿ ದಿನಪತ್ರಿಕೆಯ ಆರಂಭದ ದಿನಗಳಲ್ಲಿ ಸುದ್ದಿ ಸಂಪಾದಕರಾಗಿದ್ದ ಖಾದ್ರಿ ಶಾಮಣ್ಣ, ಬಿ.ಪುಟ್ಟಸ್ವಾಮಯ್ಯನವರ ರಾಜೀನಾಮೆಯ ನಂತರ ತೆರವಾದ ಸಂಪಾದಕ ಸ್ಥಾನವನ್ನು ತುಂಬಿದರು. ಆದರೆ ಸಿ.ಜಿ.ಕೆ.ರೆಡ್ಡಿಯವರೊಂದಿಗೆ ಕಾರ್ಮಿಕ ಚಳುವಳಿಯಲ್ಲಿ ನೇರವಾಗಿ ಭಾಗಿಯಾದರೆಂಬ ಕಾರಣ, ಶಾಮಣ್ಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕಾಯಿತು. ಕೆಲಕಾಲ ಉಸ್ತುವಾರಿ ಸಂಪಾದಕರಾಗಿ ಕೆಲಸ ಮಾಡಿದ ಟಿ.ಎಸ್.ರಾಮಚಂದ್ರರಾವ್ ನಂತರದ ದಿನಗಳಲ್ಲಿ ಪ್ರಜಾವಾಣಿ ಸಂಪಾದಕರಾಗಿ ಅತಿ ದೀರ್ಘ ಕಾಲ ಆ ಪತ್ರಿಕೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದರು. ಪ್ರಜಾವಾಣಿಯಿಂದ ಹೊರ ನಡೆದ ಶಾಮಣ್ಣ , ಎಂ.ಎಸ್.ರಾಮಯ್ಯ ಅವರು ತಾಯಿನಾಡು ಪತ್ರಿಕೆಯ ಮಾಲಿಕತ್ವವನ್ನು ವಹಿಸಿಕೊಂಡ ನಂತರ ಆರಂಭಿಸಿದ ಗೋಕುಲ ವಾರಪತ್ರಿಕೆಯ ಸಂಪಾದಕರಾಗಿಯೂ ಕೆಲ ವರ್ಷಗಳ ಕಾಲ ಕೆಲಸ ಮಾಡಿದರು.

ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ ತನ್ನ ಬೆಂಗಳೂರು ಆವೃತ್ತಿಯನ್ನು ಆರಂಭಿಸಿದ ಸಮಯದಲ್ಲಿ ಸುದ್ದಿ ಸಂಪಾದಕರಾಗಿ ಸೇರ್ಪಡೆಯಾದ ಖಾದ್ರಿ ಶಾಮಣ್ಣ, ಕೆಲ ವರ್ಷಗಳ ನಂತರ ಪ್ರಜಾವಾಣಿ ಪತ್ರಿಕೆಯ ಸುದ್ದಿ ಸಂಪಾದಕರಾಗಿ ನೇಮಕಗೊಂಡರು. ದೇವರಾಜ ಅರಸು ಆಡಳಿತ ಸಂದರ್ಭದಲ್ಲಿ ವಿತ್ತ ಸಚಿವರಾಗಿದ್ದ ಎಂ.ವೈ.ಘೋರ್ಪಡೆ ಅವರು ಲೋಕ ಶಿಕ್ಷಣ ಟ್ರಸ್ಟ್ ನಡೆಸುತ್ತಿದ್ದ ರಂಗನಾಥ ದಿವಾಕರ ಅವರಿಂದ ಸಂಯುಕ್ತ ಕರ್ನಾಟಕ ಪತ್ರಿಕಾ ಸಮೂಹವನ್ನು ಖರೀದಿಸಿದರು. ಆ ಸಂದರ್ಭದಲ್ಲಿ ಖಾದ್ರಿ ಶಾಮಣ್ಣ ಹುಬ್ಬಳ್ಳಿ-ಬೆಂಗಳೂರು ಎರಡೂ ಆವೃತ್ತಿಗಳ ಪ್ರಧಾನ ಸಂಪಾದಕರಾಗಿ ನಿಯೋಜಿತಗೊಂಡರು. ಮುಂದೆ ಕೆ.ಎಸ್.ರಾಮಕೃಷ್ಣಮೂರ್ತಿಯವರ ಅಕಾಲ ನಿಧನದಿಂದ ತೆರವಾದ ಕನ್ನಡಪ್ರಭ ಪತ್ರಿಕೆಯ ಸಂಪಾದಕ ಖಾದ್ರಿ ಶಾಮಣ್ಣ ಹುದ್ದೆಗೆ ವಲಸೆ ಹೋದರು. ಈ ಸಮಯದಲ್ಲಿ ತಮ್ಮ ಸಹಿ ಸಹಿತ ಪ್ರಥಮ ಪುಟದ ಸಂಪಾದಕೀಯ ಲೇಖನಗಳ ಮೂಲಕ ಹೆಚ್ಚಿನ ಜನಪ್ರಿಯತೆ ಗಳಿಸಿಕೊಂಡರು. ಕರ್ನಾಟಕ ರಾಜ್ಯಕ್ಕೆ ಮೊದಲ ಕಾಂಗ್ರೆಸ್ಸೇತರ ಸರ್ಕಾರವು ರಾಮಕೃಷ್ಣ ಹೆಗಡೆ ಅವರ ನೇತೃತ್ವದಲ್ಲಿ ರಚಿತವಾಗುವಲ್ಲಿ ಖಾದ್ರಿ ಶಾಮಣ್ಣ ಅವರದು ರಾಜ ಪುರೋಹಿತ ಸ್ಥಾನ. ಲಂಕೇಶ್ ಪತ್ರಿಕೆಯ ಬೆಂಬಲವೂ ಹೆಗಡೆಯವರಿಗೆ ಅಧಿಕಾರ ಸೂತ್ರ ಹಿಡಿಯಲು ನೆರವಾಯಿತು.

ತಮ್ಮ ‘ಖಾರ’ವಾದ ಹಾಗೂ ರಾಷ್ಟ್ರೀಯ ಧೋರಣೆಯ ಸಂಪಾದಕೀಯಗಳಿಗೆ ಹೆಸರಾಗಿದ್ದರು.

ಸಾಹಿತ್ಯ[ಬದಲಾಯಿಸಿ]

  • ಮಹಾತ್ಮರ ಅರ್ಥವಿಚಾರ (ಅನುವಾದ)
  • ಆಚಾರ್ಯ ವಿನೋಬಾ ಭಾವೆಯವರ ಭೂದಾನ ಯಜ್ಞ ಸಮಗ್ರದರ್ಶನ (ಅನುವಾದ)
  • ಜಾನ್ ಕೆನೆಡಿ
  • ಅಮೇರಿಕಾದ ಕಾರ್ಮಿಕ ವರ್ಗದ ಕಥೆ
  • ವಿನೋಬಾ ಕಂಡ ಗಾಂಧಿ
  • ಬರೋಡಾ ಡೈನಮೈಟ್ ಸಂಚು
  • ರಾಮಮನೋಹರ ಲೋಹಿಯಾ

ಇವುಗಳನ್ನೂ ನೋಡಿ[ಬದಲಾಯಿಸಿ]