ಶ್ರೀನಿವಾಸ ರಾಮಾನುಜನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೀನಿವಾಸ ರಾಮಾನುಜನ್
ಜನನ(೧೮೮೭-೧೨-೨೨)೨೨ ಡಿಸೆಂಬರ್ ೧೮೮೭
ಈರೋಡ್, ಮದ್ರಾಸ್ ಪ್ರೆಸಿಡೆನ್ಸಿ
ಮರಣ26 April 1920(1920-04-26) (aged 32)
ಚೆಟ್‌ಪುಟ್, ಮದ್ರಾಸ್, ಮದ್ರಾಸ್ ಪ್ರೆಸಿಡೆನ್ಸಿ
ವಾಸಸ್ಥಳಕುಂಬಕೋಣಂ
ರಾಷ್ಟ್ರೀಯತೆಭಾರತೀಯ
ಕಾರ್ಯಕ್ಷೇತ್ರಗಣಿತಶಾಸ್ತ್ರ
ಅಭ್ಯಸಿಸಿದ ವಿದ್ಯಾಪೀಠGovernment Arts College
en:Pachaiyappa's College
ಶೈಕ್ಷಣಿಕ ಸಲಹೆಗಾರರುen:G. H. Hardy
J. E. Littlewood
ಪ್ರಸಿದ್ಧಿಗೆ ಕಾರಣen:Landau–Ramanujan constant
en:Mock theta functions
en:Ramanujan conjecture
en:Ramanujan prime
en:Ramanujan–Soldner constant
en:Ramanujan theta function
en:Ramanujan's sum
en:Rogers–Ramanujan identities
en:Ramanujan's master theorem
ಪ್ರಭಾವಗಳುಜಿ. ಎಚ್. ಹಾರ್ಡಿ
ಹಸ್ತಾಕ್ಷರ

ಶ್ರೀನಿವಾಸ ರಾಮಾನುಜನ್ (ಪೂರ್ಣ ಹೆಸರು - ಶ್ರೀನಿವಾಸ ರಾಮಾನುಜನ್ ಅಯ್ಯಂಗಾರ್)(ಡಿಸೆಂಬರ್ ೨೨, ೧೮೮೭ - ಏಪ್ರಿಲ್ ೨೬, ೧೯೨೦) ವಿಶ್ವದ ಶ್ರೇಷ್ಠ ಭಾರತೀಯ ಗಣಿತಜ್ಞರೆಂದು ಪ್ರಖ್ಯಾತರಾಗಿದ್ದಾರೆ. “ಪ್ರತಿ ಧನಪೂರ್ಣಾಂಶವೂ ರಾಮಾನುಜನ್ನರ ವೈಯಕ್ತಿಕ ಮಿತ್ರರುಗಳಲ್ಲೊಂದು” ಎಂಬುದು ಲೋಕದಲ್ಲಿ ವಿಖ್ಯಾತ ನುಡಿ. ಅವರಿಗೆ “ಸಂಖ್ಯೆಗಳ ವೈಲಕ್ಷಣಗಳನ್ನು ನಂಬಲಸಾಧ್ಯವಾದಂಥ ರೀತಿಯಲ್ಲಿ ನೆನಪಿಡುವ’ ಅಪೂರ್ವ ಸಾಮರ್ಥ್ಯವಿತ್ತು.

ಜೇಮ್ಸ್ ಆರ್. ನ್ಯೂಮನವರ "ದಿ ವರ್ಲ್ಡ್ ಆಫ್ ಮ್ಯಾಥಮೆಟಿಕ್ಸ್" ಎಂಬ ನಾಲ್ಕು ಸಂಪುಟಗಳ ಚಿರಸ್ಥಾಯಿ ಉದ್ಗ್ರಂಥದಲ್ಲಿ ರಾಮಾನುಜನ್ನರ ಕುರಿತು ಈ ಉಲ್ಲೇಖವಿದೆ. ಶುದ್ಧ ಗಣಿತದ ಬತ್ತಳಿಕೆಯಲ್ಲಿ ವಿಶ್ಲೇಷಣಾ ಆಯುಧಗಳ ಭಾರೀ ಸಂಗ್ರಹವಿದೆ ಮತ್ತು ಎಲ್ಲ ಸರಳತೆ ಗತಕಾಲದ ವಿಚಾರವೆಂದು ತಿಳಿಯುತ್ತಿದ್ದ ಆ ದಿನಗಳಲ್ಲಿ “ಈ ಎಲ್ಲ ಪರಿಕರಗಳ ನೆರವಿಲ್ಲದೆಯೇ ಹೊಸ ವಿಚಾರಗಳನ್ನು ಮಂಡಿಸಬಲ್ಲ ಒಬ್ಬ ಜೀನಿಯಸ್ ಉದಯಿಸಿದರು”. ನ್ಯೂಮನರು ಮುಂದುವರಿಸಿ, “ಶ್ರೀನಿವಾಸ ರಾಮಾನುಜನ್ನರ ಜೀವನ ಒಂದು ಯುಗಾರಂಭವನ್ನು ಸೂಚಿಸುತ್ತದೆ. ಭಾರತದಲ್ಲಿ ವಿವಿಧ ಕಾಲ ಘಟ್ಟಗಳಲ್ಲಿ ಉನ್ನತ ಪ್ರತಿಭೆಯ ಗಣಿತಜ್ಞರಿದ್ದರು. ಕಾಲಾನುಕ್ರಮದಲ್ಲಿ ಅಂಥವರನ್ನು ಕೊನೆಯ ಗ್ರೀಕ್ ಕಾಲದವರೆಗೆ ಗುರುತಿಸಬಹುದು. ಆದರೆ ಉತ್ತುಂಗತೆಯ ನಿರಪೇಕ್ಷಮಾನದಿಂದ ಅಳೆದಾಗ ಪೌರ್ವಾತ್ಯ ಗಣಿತಜ್ಞರಲ್ಲೆಲ್ಲಾ, ರಾಮಾನುಜನ್ನರ ಮೇಧಾವಿ ಅತ್ಯುಚ್ಛವೆಂದೆನಿಸುತ್ತದೆ” ಎಂದು ಹೇಳಿದ್ದಾರೆ.

ಶ್ರೀನಿವಾಸ ರಾಮಾನುಜನ್ನರ ಬಗ್ಗೆ ಬರೆಯುತ್ತ ಜವಾಹರಲಾಲ್ ನೆಹರೂರವರು ತಮ್ಮ "ಡಿಸ್ಕವರಿ ಆಫ್ ಇಂಡಿಯಾ"ದಲ್ಲಿ ಹೀಗೆ ನುಡಿಯುತ್ತಾರೆ: “ಭಾರತದಲ್ಲಿ ಗಣಿತದ ವಿಚಾರದಲ್ಲಿ, ಇತ್ತೀಚಿಗಿನ ಒಬ್ಬರು ಅಸಾಧಾರಣ ವ್ಯಕ್ತಿಯನ್ನು ಕುರಿತು ಯೋಚಿಸುವುದು ಅನಿವಾರ್ಯವಾಗುವಂತೆ ಮಾಡುತ್ತದೆ. ಅವರೇ ಶ್ರೀನಿವಾಸ ರಾಮಾನುಜನ್. ದಕ್ಷಿಣ ಭಾರತದ ಒಂದು ಬಡ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿ ಸೂಕ್ತ ವಿದ್ಯಾಭ್ಯಾಸಕ್ಕೆ ಅವಕಾಶಗಳಿಲ್ಲದೆ ಅವರು ಮದ್ರಾಸ್ ಪೋರ್ಟ್ ಟ್ರಸ್ಟ್‌ನಲ್ಲಿ ಒಬ್ಬ ಕಾರಕೂನರಾದರು. ಆದರೆ ಅವರು ಸಹಜ ಪ್ರತಿಭೆಯ ಯಾವುದೋ ತಡೆಯಲಾಗದ ಲಕ್ಷಣಗಳಿಂದ ಬುದ್ಬುದಿಸುತ್ತಿದ್ದರು; ಸಂಖ್ಯೆ ಹಾಗೂ ಸಮೀಕರಣಗಳೊಂದಿಗೆ ಅವರು ಬಿಡುವಿನ ಸಮಯದಲ್ಲಿ ಆಟವಾಡುತ್ತಿದ್ದರು. ಮುಂದೆ ಅವರು ಕೇಂಬ್ರಿಜ್ಗೆ ತೆರಳಿ ಅಲ್ಲಿ ಬಹಳ ಅಲ್ಪಾವಧಿಯಲ್ಲೇ ಮೂಲಭೂತ ಮೌಲ್ಯದ ಹಾಗೂ ವಿಸ್ಮಯಕರ ಸ್ವಂತಿಕೆಯ ಕಾರ್ಯವೆಸಗಿದರು. ಇಂಗ್ಲೆಂಡಿನ ರಾಯಲ್ ಸೊಸೈಟಿ ತನ್ನ ನಿಯಮಗಳನ್ನು ಭಾಗಶಃ ಸಡಿಲಿಸಿ ಅವರನ್ನು ಜೊತೆಗಾರನಾಗಿ ಆಯ್ಕೆ ಮಾಡಿತು. ಪ್ರೊಫೆಸರ್ ಜೂಲಿಯನ್ ಹಕ್ಸ್ಲಿಯವರು, ನಾನು ತಿಳಿದಿರುವಂತೆ ಎಲ್ಲೋ ಒಂದೆಡೆ ರಾಮಾನುಜರನ್ನು ಈ ಶತಮಾನದ ಶ್ರೇಷ್ಠತಮ ಗಣಿತಜ್ಞ" ಎಂದಿದ್ದಾರೆ.

ಬಾಲ್ಯ[ಬದಲಾಯಿಸಿ]

ಈ ಮಹಾನ್ ಮೇಧಾವಿ ಶ್ರೀನಿವಾಸ ಅಯ್ಯಂಗಾರ್ ರಾಮಾನುಜನ್ ಅಯ್ಯಂಗಾರ್ ಅಥವಾ ಜನಪ್ರಿಯವಾಗಿ ಶ್ರೀನಿವಾಸ ರಾಮಾನುಜನ್ ಎಂದು ಹೆಸರುವಾಸಿಯಾದ ಇವರು ೧೮೮೭ರ ಡಿಸೆಂಬರ್ ೨೨ರಂದು ತಮಿಳುನಾಡಿನ ಈರೋಡಿನಲ್ಲಿದ್ದ ತಮ್ಮ ತಾತನ ಮನೆಯಲ್ಲಿ ಜನ್ಮ ತಳೆದರು. ರಾಮಾನುಜನ್ನರ ತಂದೆ ಬಟ್ಟೆ ಅಂಗಡಿಯಲ್ಲಿ ಒಬ್ಬ ಗುಮಾಸ್ತರಾಗಿದ್ದರು. ತಾಯಿ ಅಪಾರ ದೈವ ಶ್ರದ್ಧಾಭಕ್ತಿಗಳಿದ್ದ ಮಹಿಳೆ.

ಬಾಲ್ಯದಲ್ಲಿ ರಾಮಾನುಜನ್ನರು ಶಾಂತ ಮತ್ತು ಆಲೋಚನಾಸಕ್ತ ಸ್ವಭಾವದವರಾಗಿದ್ದರು. ತನ್ನ ತಾಯಿಯಿಂದ ದೇವರನಾಮ ಮತ್ತು ಭಕ್ತಿಗೀತೆಗಳನ್ನೂ ಕಲಿತ ಅವರು ಅಧ್ಯಾತ್ಮಿಕ ವಿಚಾರಗಳಲ್ಲಿ ಆಸಕ್ತಿ ತಳೆದರು. ಅವರು ಬೆಳೆದಂತೆ ಧಾರ್ಮಿಕ ಉದ್ಗ್ರಂಥಗಳನ್ನು ಮತ್ತು ಭಕ್ತಿಸಾಹಿತ್ಯವನ್ನು ಓದಿ ಅದರಲ್ಲಿ ಹೆಚ್ಚಿನದನ್ನು ಕಂಠಪಾಠ ಮಾಡಿದ್ದರು. ಅವರು ವೇದ, ಉಪನಿಷತ್ತು, ತಿರುಕ್ಕುರುಳ್ ಮುಂತಾದ ಶಾಸ್ತ್ರಗ್ರಂಥಗಳಿಂದ ಋಕ್ಕು ಮತ್ತು ಶ್ಲೋಕಗಳನ್ನೂ, ಹಾಗೆಯೇ ಸಂತರ ಮತ್ತು ಜ್ಞಾನಿಗಳ ನುಡಿಗಳನ್ನು ತಮಿಳು ಕೃತಿಗಳಿಂದ ನಿರರ್ಗಳವಾಗಿ ಹೇಳಬಲ್ಲವರಾಗಿದ್ದರು. ಐದನೆಯ ವಯಸ್ಸಿಗೆ ಶಾಲೆಗೆ ಸೇರಿದ ಅವರಿಗೆ ಪ್ರತಿಯೊಂದರಲ್ಲೂ ಕಲಿಕೆಯ ಕುತೂಹಲವಿತ್ತು. ೧೯೦೩ರಲ್ಲಿ ಅವರು ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದರು.

ಗಣಿತ ಬಿಟ್ಟು ಬೇರೇನೂ ಬೇಡವಾಯ್ತು[ಬದಲಾಯಿಸಿ]

ರಾಮಾನುಜನ್ ಅವರು ಎಫ್. ಎ ತರಗತಿಗಳಿಗೆ ಸೇರಿದಾಗ ಅವರಿಗೆ ಗಣಿತದ ಹೊರತಾಗಿ ಇನ್ನ್ಯಾವುದೇ ವಿಷಯಗಳ ಕುರಿತಾಗಿ ಕಿಂಚಿತ್ತೂ ಆಸಕ್ತಿ ಹುಟ್ಟಲಿಲ್ಲ. ಈ ನಿರಾಸಕ್ತಿ ಮತ್ತು ನಿರಂತರ ಅವರ ಜೊತೆಗೂಡಿದ್ದ ಅನಾರೋಗ್ಯಗಳು ಅವರ ಓದನ್ನು ಅಲ್ಲಿಗೇ ಮೊಟಕುಗೊಳಿಸಿಬಿಟ್ಟವು. ಇದೇ ನೆಪವಾಗಿ ಅವರು ಯಾವಾಗಲೂ ಗಣಿತದಲ್ಲೇ ಮುಳುಗಿಬಿಟ್ಟರು. ಇದು ಮನೆಯವರಿಗೆ ಇಷ್ಟವಾಗಲಿಲ್ಲ. ಜೀವನದ ದಾರಿ ಬದಲಾಗಲಿ ಎಂದು ವಿವಾಹ ಏರ್ಪಡಿಸಿದರು.

ಹೊಟ್ಟೆಪಾಡಿಗಾಗಿ ಅಲೆದಾಟ[ಬದಲಾಯಿಸಿ]

ಮದುವೆ ಒಂದು ಬದಲಾವಣೆಯನ್ನು ತಂದಿತು. ಇನ್ನು ಮುಂದೆ ತಾನು ಹೆತ್ತವರಿಗೆ ಹೊರೆಯಾಗಬಾರದೆಂದು ರಾಮಾನುಜನ್ನರು ನಿರ್ಧರಿಸಿದರು. ಇವರ ಮೇಧಾವಿತನದ ಕುರಿತಾದ ಅಭಿಮಾನವುಳ್ಳ ಹಿರಿಯರ ಶಿಫಾರಸ್ಸಿನಿಂದ ಮದ್ರಾಸಿನಲ್ಲಿ ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ ಅವರಿಗೆ ಕೆಲಸ ದೊರೆಯಿತಾದರೂ ಅದು ಕೇವಲ ಎರಡು ತಿಂಗಳಮಟ್ಟಿಗೆ ಮಾತ್ರ ಇತ್ತು. ಪುನಃ ಹಸಿದ ಹೊಟ್ಟೆಯ ಬಡತನ, ಅನಾರೋಗ್ಯ ಅವರಿಗೆದುರಾಯಿತು. ಸ್ವಲ್ಪ ದಿನ ಮನೆಯ ಪಾಠಮಾಡಿದರು. ಈ ನಡುವೆ ತಮ್ಮ ಗಣಿತದ ಕುರಿತಾದ ಆಲೋಚನೆಗಳನ್ನು ದಾಖಲಿಸುವ ಕೆಲಸವನ್ನು ಮಾತ್ರ ನಿಲ್ಲಿಸಲಿಲ್ಲ. ೧೯೧೦ರಲ್ಲಿ ಅವರು ದಿವಾನ್ ಬಹದ್ದೂರರನ್ನು ಕಂಡಾಗ ಬಹದ್ದೂರರು ತಮಗೇನು ಬೇಕೆಂದು ಕೇಳಿದಾಗ “ಸಂಶೋಧನೆ ಮುದುವರಿಸಿಕೊಂದು ಹೋಗುವಷ್ಟರleಟ್ಟಿಗೆ ಬದುಕಿರಲು ಸಾಕಾಗುವಷ್ಟು ಅನ್ನ” ಎಂದರು ರಾಮಾನುಜನ್. ಬಹದ್ದೂರರು ತಾವೇ ಸ್ವತಃ ಇಪ್ಪತ್ತೈದು ರೂಪಾಯಿಗಳ ಮಾಸಿಕ ಧನಸಹಾಯ ಮಾಡಲಾರಂಭಿಸಿದರು. ಆದರೆ ರಾಮಾನುಜನ್ ಅವರಿಗೆ ಹೀಗೆ ಹಣ ಪಡೆಯುವ ಮನಸ್ಸಿರಲಿಲ್ಲ. ಮತ್ತೆ ಅವರ ಅಭಿಮಾನವುಳ್ಳ ಹಿರಿಯರ ಶಿಫಾರಸ್ಸಿನಿಂದ ಅವರು ಮದ್ರಾಸಿನ ಪೋರ್ಟ್ ಟ್ರಸ್ಟ್ ಕಚೇರಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡಲು ಆರಂಭಿಸಿದರು.

ಸಂಶೋಧನೆಗಳ ಪ್ರಕಟಣೆ[ಬದಲಾಯಿಸಿ]

ಏತನ್ಮಧ್ಯೆ ಶ್ರೀನಿವಾಸ ರಾಮಾನುಜನ್ ಅವರ ಬೆಂಗಾವಲಾಗಿದ್ದ ಪ್ರೊ. ಪಿ. ವಿ. ಶೇಷು ಅಯ್ಯರ್ ಅವರಿಂದ ಕಳುಹಿಸಲ್ಪಟ್ಟ ಪ್ರಶ್ನೋತ್ತರಗಳ ರೂಪದಲ್ಲಿ ಇಂಡಿಯನ್ ಮ್ಯಾಥಮೆಟಿಕಲ್ ಸೊಸೈಟಿಯ ನಿಯತಕಾಲಿಕ ೧೯೧೧ರಲ್ಲಿ ಪ್ರಕಟವಾಯಿತು. ಈ ಸಂಪುಟದ ಒಂದು ಸಂಚಿಕೆಯಲ್ಲಿ ರಾಮಾನುಜನ್ನರ ‘ಬರ್ನೌಲಿ ಸಂಖ್ಯೆಗಳ ಕೆಲವು ಲಕ್ಷಣಗಳು” ಪ್ರಕಟಗೊಂಡಿತು. ೧೯೧೨ರಲ್ಲಿ ಇನ್ನೆರಡು ಪ್ರಬಂಧಗಳು ಬಂದವು. ಮದ್ರಾಸ್ ಪೋರ್ಟ್ ಟ್ರಸ್ಟಿನ ಅಧ್ಯಕ್ಷ ಸರ ಫ್ರಾನ್ಸಿಸ್ ಸ್ಪ್ರಿಂಗ್ ರಾಮಾನುಜನ್ ಅವರಲ್ಲಿ ಆಸಕ್ತಿ ತಳೆದು ಅವರ ಪ್ರಗತಿಯನ್ನು ವೀಕ್ಷಿಸುತ್ತಿದ್ದರು. ಒಂದು ದಿನ ಅವರ ಸಹಿಗಾಗಿ ಒಂದು ಕಡತ ಬಂತು. ಅದನ್ನು ಪರಾಂಬರಿಸುತ್ತಿದ್ದಾಗ ಎಲಿಪ್ಟಿಕ್ ಅನುಕಲನಾಂಕಗಳಿಗೆ ಸಂಬಂಧಿಸಿದ ಕೆಲವು ಫಲಿತಗಳನ್ನೊಳಗೊಂಡ ಬಿಳಿ ಹಾಳೆಗಳನ್ನು ಕಂಡರು. ಸ್ವಯಂ ಗಣಿತದಲ್ಲಿ ಆಸಕ್ತರಾಗಿದ್ದ ಅವರಿಗೆ ಅದು ರಾಮಾನುಜನ್ ಅವರ ಕೆಲಸವೆಂದು ತಿಳಿದು ಸಂತೋಷವಾಯಿತು.

ಅದಮ್ಯ ಸಹನೆ[ಬದಲಾಯಿಸಿ]

ಪೋರ್ಟ್ ಟ್ರಸ್ಟಿನಲ್ಲಿನ ಕೆಲಸ ಶ್ರೀನಿವಾಸ ರಾಮಾನುಜನ್ ಮತ್ತು ಅವರ ಕುಟುಂಬಕ್ಕೆ ಅರೆಹೊಟ್ಟೆಯನ್ನು ತುಂಬಿಸುವಷ್ಟು ಮಾತ್ರದ್ದಾಗಿತ್ತು. ಕಡುಬಡತನ ಮತ್ತು ಎಲ್ಲ ತರಹದ ಸಂಕಷ್ಟವಿದ್ದರೂ ರಾಮಾನುಜನ್ ಎಂದೂ ತಾಳ್ಮೆಗೆಡುತ್ತಿರಲಿಲ್ಲ. ಅವರು ಮದ್ರಾಸಿನಲ್ಲಿ ಟ್ರಿಪ್ಲಿಕೇನಿನ ಸಮೀಪದಲ್ಲಿ ವಾಸಿಸುತ್ತಿದ್ದಾಗ ಒಂದು ರಾತ್ರಿ ಖಗೋಳ ಪ್ರಪಂಚದ ವಿಸ್ಮಯಗಳ ಕುರಿತು ಗೆಳೆಯನೊಡನೆ ಮಾತನಾಡುತ್ತಿದ್ದರು. ಅದನ್ನು ತಡೆಯಲು ಯಾರೋ ಹಠಾತ್ತಾಗಿ ರಾಮಾನುಜನ್ನರ ತಲೆಯ ಮೇಲೆ ಗಡಿಗೆ ತುಂಬಾ ನೀರು ಸುರಿದರು. ಕೋಪಾವಶೇಶದಲ್ಲಿ ಸಿಡಿಯುವ ಬದಲು, ರಾಮಾನುಜನ್ ನಗುತ್ತ ಅಂದರು: “ದೇವರ ದಯೆ, ನನಗೆ ಗಂಗಾಸ್ನಾನವಾಯಿತು. ಇನ್ನೂ ಜಾಸ್ತಿ ಇದ್ದಾರೆ ಸಂತೋಷ.”. ಶಾಂತ ಮತ್ತು ಏಕಾಗ್ರಚಿತ್ತದಿಂದ ರಾಮಾನುಜನ್ ತಮ್ಮ ಕೆಲಸ ಮುಂದುವರಿಸಿದರು.

ಕೆಂಬ್ರಿಡ್ಜ್ ಹಾದಿಯಲ್ಲಿ[ಬದಲಾಯಿಸಿ]

ಪ್ರೊ. ಪಿ. ವಿ. ಶೇಷು ಅಯ್ಯರ್ ಅಂತಹ ಹಿರಿಯರು ಮತ್ತು ಹಿತಚಿಂತಕರು ಟ್ರಿನಿಟಿ ಕಾಲೇಜಿನ ಫೆಲೋ ಆಗಿದ್ದ ಪ್ರೊ. ಜಿ. ಹೆಚ್ ಹಾರ್ಡಿ ಮತ್ತು ಕೇಂಬ್ರಿಜ್ ಗಣಿತ ಉಪನ್ಯಾಸಕರಾಗಿದ್ದ ಕ್ಯಾಲೆ ಅವರಿಗೆ ರಾಮಾನುಜನ್ ತಮ್ಮ ಗಣಿತೀಯ ಶೋಧನೆಗಳನ್ನು ತಿಳಿಸಬೇಕೆಂದು ಒತ್ತಾಯಿಸಿದರು. ಇದನ್ನು ಮಾಡಲು ಮೊದಲು ಅವರಿಗೆ ಮನಸ್ಸಿರಲಿಲ್ಲ. ಆದರೆ ಒತ್ತಾಯ ಜಾಸ್ತಿಯಾದಾಗ ಅವರು ಪ್ರೊ. ಹಾರ್ಡಿಯವರಿಗೆ ಬರೆಯಲು ನಿರ್ಧರಿಸಿದರು. ಹೀಗೆ ಕ್ರಮೇಣ ಅವರ ಜೀವನವನ್ನೇ ಬದಲಿಸಿದ ಮತ್ತು ಭಾರತವನ್ನು ಪ್ರಪಂಚದ ಗಣಿತೀಯ ನಕ್ಷೆಯಲ್ಲಿ ಸೇರಿಸಿದ ಪತ್ರ ವ್ಯವಹಾರ ಪ್ರಾರಂಭಗೊಂಡಿತು. ತಮ್ಮ ಮೊದಲ ಪತ್ರದಲ್ಲೇ ರಾಮಾನುಜನ್ ನೂರಕ್ಕೂ ಹೆಚ್ಚು ಪ್ರಮೇಯಗಳನ್ನು ವಿವರಿಸಿದ್ದರು. ಈ ಚಿಂತನೆಗಳು ಕೇಂಬ್ರಿಜ್ನಲ್ಲಿ ಹೊಸ ಸಂಚಲನವನ್ನೇ ಉಂಟುಮಾಡಿತು. ಕ್ರಮೇಣದಲ್ಲಿ ಶ್ರೀನಿವಾಸನ್ ಕೆಂಬ್ರಿಡ್ಜ್ಗೆ ಬಂದಿಳಿದರು.

ಸಂಶೋಧನೆಯಲ್ಲಿ ಶ್ರೇಷ್ಠತೆ[ಬದಲಾಯಿಸಿ]

ರಾಮಾನುಜನ್ನರ ಕಾರ್ಯವಿಧಾನ ಸ್ವಂತಿಕೆಯಿಂದ ಕೂಡಿದ್ದು ಅವರ ಸಲಕರಣೆಗಳು ಸಂಪೂರ್ಣವಾಗಿ ಅವರದ್ದೇ ಆಗಿದ್ದುವು. ಇಂಗ್ಲೆಂಡಿನಲ್ಲಿ ಅವರಿದ್ದ ಐದು ವರ್ಷಗಳಲ್ಲಿ ಅವರ ಇಪ್ಪತ್ತೊಂದು ಪ್ರಬಂಧಗಳು ಯೂರೋಪಿನ ವಿವಿಧ ನಿಯತಕಾಲಿಕಗಳಲ್ಲಿ ಪ್ರಕಟವಾದವುಗಳಲ್ಲಿ ಐದು ಪ್ರೊ. ಹಾರ್ಡಿಯವರೊಂದಿಗೆ ಬರೆದುವು. ಪ್ರೊ. ಹಾರ್ಡಿ ಅವರಲ್ಲದೆ ಆ ಕಾಲದ ಶ್ರೇಷ್ಠ ವಿದ್ವಾಂಸರಾದ ಪ್ರೊ. ಜೆ. ಇ. ಲಿಟ್ಲ್ ವುಡ್, ಪ್ರೊ. ಎಲ್. ಜೆ. ಮೊರ್ಡಲ್, ಪ್ರೊ. ಜಿ. ಎನ್. ವಾಟ್ಸನ್ ಮುಂತಾದ ಸಕಲರೂ ಶ್ರೀನಿವಾಸ ರಾಮಾನುಜನ್ ಅವರ ಶ್ರೇಷ್ಠತೆಯನ್ನು ಕೊಂಡಾಡಿದರು.kannada

ರಾಯಲ್ ಸೊಸೈಟಿಯ ಫೆಲೋ ಆಗಿ ಗೌರವ[ಬದಲಾಯಿಸಿ]

ರಾಮಾನುಜನ್ನರ ಸಂಶೋಧನೆ ಅವರಿಗೆ ಉನ್ನತ ಪ್ರಶಂಸೆ ಮತ್ತು ಪ್ರತಿಷ್ಠೆಗಳನ್ನು ತಂದುಕೊಟ್ಟವು. ಬ್ರಿಟನ್ ಮತ್ತು ಅಂದಿನ ಬ್ರಿಟಿಷ್ ಸಾಮ್ರಾಜ್ಯದ ವಿಜ್ಞಾನ ಪ್ರಪಂಚದಲ್ಲಿ ಅತ್ಯುನ್ನತ ಗೌರವವಾದ ರಾಯಲ್ ಸೊಸೈಟಿಯ ಫೆಲೋ ಆಗಿ ಫೆಬ್ರುವರಿ ೨೮, ೧೯೧೮ರಲ್ಲಿ ಶ್ರೀನಿವಾಸ ರಾಮಾನುಜನ್ ಚುನಾಯಿತರಾದರು. ೧೮೪೧ರಲ್ಲಿ ಸರ್ ಆರ್ ದೇಸೀರ್ ಕರ್ ಸೇಟ್ಜಿ ಅವರು ರಾಯಲ್ ಸೊಸೈಟಿಗೆ ಚುನಾಯಿತರಾಗಿದ್ದನ್ನು ಬಿಟ್ಟರೆ ಈ ಗೌರವ ಪಡೆದ ಪ್ರಥಮರು ರಾಮಾನುಜನ್ ಅವರೇ. ರಾಮಾನುಜನ್ನರ ಆಯ್ಕೆ ಮುಂದೆ ಭಾರತೀಯ ವಿಜ್ಞಾನಿಗಳನ್ನು ಉತ್ತೇಜನಗೊಳಿಸಿ ಒಂದೇ ದಶಕದೊಳಗೆ ಇನ್ನೂ ಮೂವರು ಚುನಾಯಿತರಾದರು. ಅವರೇ ಜಗದೀಶ್ ಚಂದ್ರ ಬೋಸ್, ಸಿ ವಿ ರಾಮನ್ ಮತ್ತು ಮೇಘನಾದ ಸಹಾ. ಹೀಗೆ ರಾಮಾನುಜನ್ನರ ಸಿದ್ಧಿ ಭಾರತೀಯ ವಿಜ್ಞಾನ ಮತ್ತು ಗಣಿತದಲ್ಲಿ ಹೊಸ ಯುಗವನ್ನು ಆರಂಭಿಸಿತು.

ಚಿಕ್ಕ ವಯಸ್ಸಿನಲ್ಲಿ ಕಳೆದುಹೋದ ಪ್ರತಿಭೆ[ಬದಲಾಯಿಸಿ]

ಕೆಂಬ್ರಿಡ್ಜ್ನಲ್ಲಿ ಅಪ್ರತಿಮ ಪ್ರತಿಭಾವಂತರಾಗಿ ತಮ್ಮ ಸಂಶೋಧನೆಗಳನ್ನು ನಿರೂಪಿಸಿದ ರಾಮಾನುಜನ್ ಐದು ವರ್ಷಗಳ ನಂತರ ಭಾರತಕ್ಕೆ ಹಿಂದಿರುಗಿ ವಿದ್ವಾಂಸರಿಂದ ಅಭೂತಪೂರ್ವ ಮೆಚ್ಚುಗೆ ಮತ್ತು ಸ್ವಾಗತಗಳನ್ನು ಪಡೆದರು. ಆದರೆ ದುರದೃಷ್ಟವಶಾತ್ ಅವರ ಆರೋಗ್ಯ ಕ್ಷೀಣಿಸುತ್ತಿತ್ತು. ಉತ್ತಮ ವೈದ್ಯಕೀಯ ಸೌಲಭ್ಯ ಹಾಗೂ ಬಹು ನಾಜೂಕಾದ ಉಪಚಾರ ಮತ್ತು ಮೇಲ್ವಿಚಾರಣೆ ಇದ್ದರೂ ಅವರು ಏಪ್ರಿಲ್ ೨೬, ೧೯೨೦ರಂದು ೩೨ ವರ್ಷ, ೪ ತಿಂಗಳು, ೪ ದಿವಸಗಳ ತರುಣ ವಯಸ್ಸಿನಲ್ಲೇ ತೀರಿಕೊಂಡರು. ಭರತಖಂಡ ಹಾಗೂ ಜಗತ್ತು ಮತ್ತೆ ಅಂದಿನವರೆಗೆ ಕಂಡಿಲ್ಲದಂಥ ಮಹಾನ್ ಗಣಿತ ಪ್ರತಿಭೆಯನ್ನು ಕಳೆದುಕೊಂಡಿತು.

ಅಸಾಮಾನ್ಯ ಪ್ರತಿಭೆ[ಬದಲಾಯಿಸಿ]

ಪ್ರೊ. ಹಾರ್ಡಿ ಹೇಳುತ್ತಾರೆ: “ರಾಮಾನುಜನ್ ಅವರಲ್ಲಿ ಪರಮಾದ್ಭುತವಾದುದೆಂದರೆ ಬೀಜಗಣಿತದ ಸೂತ್ರಗಳು, ಅನಂತ ಶ್ರೇಣಿಗಳ ಪರಿವರ್ತನೆ ಮುಂತಾದವುಗಳಲ್ಲಿದ್ದ ಅವರ ಅಂತರ್ದೃಷ್ಟಿ. ಈ ವಿಷಯಗಳಲ್ಲಿ ಅವರಿಗೆ ಸಮನಾದವರನ್ನು ಖಂಡಿತವಾಗಿಯೂ ನಾನು ಕಂಡಿಲ್ಲ. ಅವರನ್ನು ಅಯ್ಳರ್ ಅಥವಾ ಜುಕೊಬಿಯಂತಹ ಸಾರ್ವಕಾಲಿಕ ಶ್ರೇಷ್ಠರೊಂದಿಗೆ ಮಾತ್ರ ಹೋಲಿಸಲು ಸಾಧ್ಯ. ರಾಮಾನುಜನ್ ಅವರ ಸ್ಮರಣ ಶಕ್ತಿ, ಸಹನೆ, ಗಣಿಸುವ ಸಾಮರ್ಥ್ಯಗಳೊಂದಿಗೆ ಸಾರ್ವತ್ರೀಕರಣ ಶಕ್ತಿ, ಸ್ವರೂಪ ಜ್ಞಾನ, ಆಧಾರ ಭಾವನೆಗಳನ್ನು ಕ್ಷಿಪ್ರವಾಗಿ ಬದಲಾಯಿಸುವ ಚಾಕಚಕ್ಯತೆ ಇವು ಅನೇಕ ವೇಳೆ ದಂಗುಬಡಿಸುತ್ತಿದ್ದವು. ರಾಮಾನುಜನ್ ಅವರದೇ ಆದ ಈ ಕ್ಷೇತ್ರದಲ್ಲಿ ಆ ಕಾಲದಲ್ಲಿ ಅವರಿಗೆ ಸರಿಸಾಟಿಗಳಿಲ್ಲದಂತೆ ಮಾಡಿದವು”

ಸಂಶೋಧನಾ ಕ್ಷೇತ್ರಗಳು[ಬದಲಾಯಿಸಿ]

ರಾಮಾನುಜನ್ ಅವರ ಸಂಶೋಧನೆಗಳಲ್ಲಿ ಮುಖ್ಯವಾಗಿ ಈ ಕ್ಷೇತ್ರಗಳನ್ನು ಹೆಸರಿಸಬಹುದು:

  • ಅವಿಭಾಜ್ಯ ಸಂಖ್ಯೆಗಳ ಬಗ್ಗೆ ಸಂಶೋಧನೆ
  • ಪಾರ್ಟಿಷನ್ ಸಂಖ್ಯೆಗಳ ಬಗ್ಗೆ ಸಂಶೋಧನೆ
  • ರಾಮಾನುಜನ್ ಊಹೆ
  • ರಾಮಾನುಜನ್-ಪೀಟರ್ಸನ್ ಊಹೆ

ರಾಮಾನುಜನ್ ರ ಬಗ್ಗೆ ಪುಸ್ತಕಗಳು[ಬದಲಾಯಿಸಿ]

  • "ರಾಮಾನುಜನ್ ಬಾಳಿದರಿಲ್ಲಿ", ಜಿ.ಟಿ.ನಾರಾಯಣ ರಾವ್
  • Collected Papers of Srinivasa Ramanujan ISBN 0-8218-2076-1
  • The Man Who Knew Infinity: A Life of the Genius Ramanujan by Robert Kanigel ISBN 0-671-75061-5
  • ಶ್ರೀನಿವಾಸ ರಾಮಾನುಜನ್, ಲೇಖಕರು ಸುರೇಶ್ ರಾಮ್, ನ್ಯಾಷನಲ್ ಬುಕ್ ಟ್ರಸ್ಟಿನ ರಾಷ್ಟ್ರೀಯ ಜೀವನಚರಿತ್ರ ಮಾಲೆ.

ಬಾಹ್ಯ ಸ೦ಪರ್ಕಗಳು[ಬದಲಾಯಿಸಿ]