ವಿಷಯಕ್ಕೆ ಹೋಗು

ಜಯದೇವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಯದೇವ ಶೃಂಗಾರ ಪ್ರಧಾನವಾದ ಗೀತಗೋವಿಂದ ಕಾವ್ಯದ ಕರ್ತೃ.

ಕವಿಯ ಬದುಕು

[ಬದಲಾಯಿಸಿ]

ಈ ಕವಿಯ ಜೀವಿತವೇ ಒಂದು ಕಾವ್ಯವೆಂಬುದು ಕವಿಸಮಯ. ಆದರೆ ಈತನ ವಿಚಾರವಾಗಿ ನಿಖರವಾದ ವಿವರ ಅಷ್ಟಾಗಿ ದೊರೆಯದು.

ಗೀತಗೋವಿಂದದ ವ್ಯಾಖ್ಯಾನ ಗ್ರಂಥಗಳಾದ ಶಂಕರಮಿಶ್ರನ ರಸಮಂಜರೀ, ರಾಣಾಕುಂಭನ ರಸಿಕ ಪ್ರಿಯಾ ಮತ್ತು ಭಕ್ತ ಮಾಲಾ ಎಂಬ ಪೌರಣಿಕ ಗ್ರಂಥ-ಇವುಗಳ ಹಾಗೂ ಜನಜನಿತವಾದ ಕಿಂವದಂತಿಗಳ ಆಧಾರದ ಮೇಲೆ ಈತನ ಜೀವಿತವನ್ನು ಹೆಣೆಯುತ್ತಾರೆ. ಅಲ್ಲಿನ ಉತ್ಪ್ರೇಕ್ಷೆ ಅಲಂಕಾರಗಳನ್ನು ಬಿಟ್ಟರೆ ಉಳಿಯುವ ವಿವರ ಇಷ್ಟು. ಈತ ಹುಟ್ಟಿದ್ದು ಕ್ರಿಸ್ತಾಬ್ದ ಹನ್ನೆರಡನೆಯ ಶತಮಾನದ ಅಂತ್ಯಭಾಗದಲ್ಲಿ; ಒಡಿಶಾದ ಕೆಂದುಬಿಲ್ವ ಅಥವಾ ಕೆಂದೂಲಿ ಎಂಬ ಗ್ರಾಮದಲ್ಲಿ. ತಂದೆ ಭೋಜದೇವ, ತಾಯಿ ರಾಮಾದೇವಿ. ಸಹಜವಾಗಿಯೇ ಭಾವುಕಪ್ರಕೃತಿ ಈತನಿಗೆ ಎಳೆತನದ ಗೆಳೆಯನಾದ ಪರಾಶರ ಎಂಬ ರಸಿಕನ ಸಹವಾಸದಿಂದ ಉದ್ದೀಪ್ತವಾಯಿತು. ತನ್ನ ಪಾಂಡಿತ್ಯ ಪ್ರಭಾವದಿಂದ ಬಂಗಾಳದ ದೊರೆ ಲಕ್ಷ್ಮಣಸೇನನ ಆಸ್ತಾನದಲ್ಲಿದ್ದ ಪಂಚರತ್ನಗಳಲ್ಲಿ ಈತನೂ ಒಬ್ಬನೆನಿಸಿದ. ಕೃಷ್ಣಭಕ್ತನಾದ ಈತನ ಸಹಧರ್ಮಿಣಿ ಪದ್ಮಾವತಿಯ ಪ್ರೇರಣೆಯಿಂದ ಗೀತಗೋವಿಂದ ಕಾವ್ಯ ಬೆಳಕು ಕಂಡಿತಂದು ಹೇಳುತ್ತಾರೆ. ತನ್ನ ಕಾವ್ಯದಲ್ಲಿ ಈತ ಒಂದೆಡೆ ತನ್ನನ್ನು ಪದ್ಮಾವತೀ ಚರಣಚಾರಣಚಕ್ರವರ್ತೀ ಎಂದು ಹೇಳಿಕೊಂಡು ಪತ್ನಿಯ ಪ್ರಭಾವವನ್ನು ಸ್ಮರಿಸಿಕೊಂಡಿರುವುದೇ ಇದಕ್ಕೆ ಸಾಕ್ಷಿ.

ಗೀತಗೋವಿಂದ

[ಬದಲಾಯಿಸಿ]
ಮುಖ್ಯ ಲೇಖನ: ಗೀತ ಗೋವಿಂದ
ಜಯದೇವ ಕವಿಯ ಗೀತಗೋವಿಂದ ಕೃತಿಯ ಒಂದು ದೃಶ್ಯದ ಬಶೋಲಿ ವರ್ಣಚಿತ್ರ.( ಕ್ರಿ.ಶ. ೧೭೩೦

ಗೀತಗೋವಿಂದದಲ್ಲಿ ಇಪ್ಪತ್ತನಾಲ್ಕು ಗೇಯ ಪದ್ಯಗಳ ಹನ್ನೆರಡು ಸರ್ಗಗಳು. ಮಧ್ಯೆ ಹಲವಾರು ಸಂಯೋಜನಾ ಶ್ಲೋಕಗಳು ಇವೆ. ಬ್ರಹ್ಮವೈವರ್ತಪುರಾಣದಲ್ಲಿ ಬರುವ ಒಂದು ಪ್ರಸಂಗವನ್ನು ಅಧಿಕರಿಸಿ ಇಡಿಯ ಕಾವ್ಯರಚಿತವಾಗಿದೆಯೆಂಬ ಸೂಚನೆ ಮಂಗಳ ಶ್ಲೋಕದಲ್ಲಿದೆ. ಈ ಕಾವ್ಯವನ್ನು ಅಷ್ಟಪದಿ ಎಂದು ವ್ಯವಹರಿಸಿರುವುದುಂಟು.

ಈ ಕಾವ್ಯ ಕಾಶ್ಮೀರದಿಂದ ಕೇರಳದವರೆಗೆ, ಗುಜರಾತಿನಿಂದ ಅಸ್ಸಾಮಿನವರೆಗೆ ನಟವರ್ಗದವರಿಂದ, ದೇವದಾಸಿಯರಿಂದ, ಹಲವಾರು ರಾಗ ನಾಟ್ಯಗಳೊಂದಿಗೆ ಇಂದಿಗೂ ಪ್ರದರ್ಶಿತವಾಗುತ್ತಿರುವುದು ಇದರ ಅದ್ಭುತ ಜನಪ್ರಿಯತೆಗೆ ಒಂದು ಸಾಕ್ಷಿ. ಇಂದಿಗೂ ಈ ಕಾವ್ಯದ ಹಲವಾರು ಚಿತ್ರವಿನ್ಯಾಸಗಳನ್ನು ಬೇರೆ ಬೇರೆ ಕಲಾಸಂಗ್ರಹಾಲಯಗಳಲ್ಲಿ ನೋಡಬಹುದು. ವೈಷ್ಣವರಿಗೆ ಇದು ನಿಸ್ಸೀಮ ಭಕ್ತಿಯ ಆವಿಷ್ಕಾರ, ರಸಿಕರಿಗೆ ಅತ್ಯಂತ ಮನಮೋಹಕವಾದ ಶೃಂಗಾರದ ಉದ್ಗಾರ; ಸಂಗೀತಲೋಲರಿಗೆ ಅಭೂತಪೂರ್ವ ರಾಗಲಹರಿಯ ಚಮತ್ಕಾರ, ಕವಿಯೇ ತನ್ನ ಗ್ರಂಥಾಧಿಯಲ್ಲಿ "ನಿಮಗೆ ಹರಿಸ್ಮರಣೆಯಲ್ಲಿ ಆಸಕ್ತಿಯಿದ್ದುದಾದರೆ, ಅಥವಾ ವಿಲಾಸಕಲಾವಿನೋದಗಳಲ್ಲಿ ಕುತೂಹಲವಿರುವುದಾದರೆ, ಮಧುರ; ಕೋಮಲ ಗೀತ ಪದಗಳಿಂದ ತುಂಬಿದ ನನ್ನ ರಚನೆಯನ್ನು ಸವಿಯಿರಿ" — ಎಂದು ಕೋರಿದ್ದಾನೆ,

ಗೀತಗೋವಿಂದ ಕಾವ್ಯ ಆಕೃತಿಯಲ್ಲಿ ಸಣ್ಣದು, ಕಥಾಭಾಗವಂತೂ ತುಂಬ ಕಡಿಮೆ. ಇರುವುದೆಲ್ಲ ವರ್ಣನೆ, ಸಂಗೀತ. ಶೃಂಗಾರ, ಸಣ್ಣ ಸಣ್ಣ ಹನ್ನೆರಡು ಸರ್ಗಗಳಲ್ಲಿ ವರ್ಣನಾಪದ್ಯಗಳೂ ಗಾನಕ್ಕಾಗಿಯೇ ಬರೆದ ಹಾಡುಗಳಾದ ಅಷ್ಟಪದಿಗಳೂ ಇವೆ. ಅಷ್ಟಪದಿಗಳ ಕಡೆಯಲ್ಲಿ ಜಯದೇವ ಎಂಬ ಅಂಕಿತ ತಪ್ಪದೆ ಬರುತ್ತದೆ. ಮೊದಲು ಮಂಗಳ, ಪ್ರಸ್ತಾವನೆ, ಕವಿವಿಚಾರ; ಆಮೇಲೆ ದಶಾವತಾರ ಸ್ತೋತ್ರ. ಗ್ರಂಥಾರಂಭ ಇಲ್ಲಿಂದಲೇ ಎನ್ನಬಹುದು. ರಾಧೆ ವಿರಹೋತ್ಕಂಠಿತೆಯಾಗಿದ್ದಾಳೆ. ಅವಳ ಸಖಿ ಬಂದು ವಸಂತ ಋತುವನ್ನು ಬಣ್ಣಿಸಿ ಹಾಡುತ್ತಾಳೆ. ದೂರದಲ್ಲಿ ಗೋಪಿಯರೊಡನೆ ರಾಸಕ್ರೀಡೆಯಾಡುತ್ತಿರುವ ಕೃಷ್ಣನನ್ನೂ ತೋರಿಸುತ್ತಾಳೆ. ರಾಧೆಗೆ ಅಸೂಯೆ ಕೆರಳುತ್ತದೆ. ತಾನಾಗಿ ಅವನತ್ತ ಅಭಿಸಾರಿಕೆಯಾಗಲು ಇದು ಅಡ್ಡಿಯಾಗುತ್ತದೆ. ವಿರಹದಿಂದ ಬಳಲುತ್ತ ಕುಂಜವೊಂದರಲ್ಲಿ ರಾಧೆ ಕೃಷ್ಣನನ್ನು ನೆನೆಯುತ್ತಿರುತ್ತಾಳೆ. ಅತ್ತ ಕೃಷ್ಣನಿಗೂ ಇದರ ಅರಿವಾಗಿ, ಮಿಕ್ಕ ಗೋಪಿಯರಿಂದ ದೂರ ಸರಿದು ರಾಧಾವಿರಹದಿಂದ ತೊಳಲುತ್ತಾನೆ. ಯಮುನಾತೀರದ ಒಂದು ಕುಂಜದಲ್ಲಿ ಅವಳನ್ನೇ ಧ್ಯಾನಿಸುತ್ತ ಕುಳಿತ ಕೃಷ್ಣ ದೂತಿಯೊಬ್ಬಳನ್ನು ರಾಧೆಯ ಬಳಿಗೆ ಕಳಿಸುತ್ತಾನೆ. ದೂತಿ ಬಂದು ರಾಧೆಗೆ ಕೃಷ್ಣನ ವಿರಹತಾಪವನ್ನು ಬಣ್ಣಿಸುತ್ತಾಳೆ; ಹಾಗೆಯೇ ರಾಧೆಯ ಸಖಿಯೂ ಕೃಷ್ಣನ ಬಳಿಗೆ ಹೋಗಿ ರಾಧೆಯ ವಿರಹಾವಸ್ಥೆಯನ್ನು ವರ್ಣನೆ ಮಾಡುವುದಲ್ಲದೆ ರಾಧೆಯನ್ನು ಹೋಗಿ ಕಂಡು ಸಮಾಧಾನಪಡಿಸಬೇಕೆಂದು ಬಿನ್ನವಿಸುತ್ತಾಳೆ. ಅಷ್ಟು ಹೊತ್ತಿಗೆ ಚಂದ್ರೋದಯವಾಗುತ್ತದೆ. ಕೃಷ್ಣ ಬರುವುದು ತಡವಾಯಿತೆಂದು ರಾಧೆಯ ಪ್ರಣಯಕೋಪ ಮತ್ತೆ ಉಕ್ಕೇರುತ್ತದೆ. ಕೃಷ್ಣ ಅಷ್ಟರಲ್ಲಿ ಬಂದು ಎಷ್ಟು ಒಲಿಸಿದರೂ ರಾಧೆಯ ಕೋಪ ಇಳಿಯುವುದಿಲ್ಲ. ಕೃಷ್ಣ ಹೊರಟುಹೋಗುತ್ತಾನೆ. ಆಗ ಸಖಿ ರಾಧೆಯನ್ನು ಸಂತೈಸಿ ಆಭಿಸಾರಿಕೆಯಾಗುವಂತೆ ಪ್ರೇರೇಪಿಸುತ್ತಾಳೆ. ರಾಧೆ ಅಲಂಕರಿಸಿಕೊಂಡು ವಿರಹವನ್ನು ತಾಳಲಾರದೆ ಅಭಿಸಾರಿಕೆಯಾಗಿ ಕೃಷ್ಣನಲ್ಲಿಗೆ ಹೋಗುತ್ತಾಳೆ. ಅವರ ಸಮಾಗಮದಿಂದ ಕಾವ್ಯ ಮುಗಿಯುತ್ತದೆ.

ಇಲ್ಲಿ ಕವಿಯ ಮುಖ್ಯ ಉದ್ದೇಶ ಕೃಷ್ಣನ ಚರಿತ್ರೆಯನ್ನು ಹೇಳುವುದಾಗಿರದೆ ರಾಸಲೀಲೆಯ ವಿಲಾಸವನ್ನೂ ಶೃಂಗಾರರಸದ ನಾನಾಪದಿಗಳನ್ನೂ ಗೀತಮಾಧ್ಯಮದಿಂದ ಧ್ವನಿಸುವುದೇ ಆಗಿದೆಯನ್ನಬಹುದು. ಗೀತಗೋವಿಂದದಲ್ಲಿ ಉತ್ಕಟ ಭಾವಗೀತೆ, ಆವೇಶಪೂರ್ಣ ಭಕ್ತಿಸ್ತೋತ್ರ, ನಾಟಕೀಯ ಸಂವಾದ ಶೈಲಿ, ಅಭಿನಯ ಯೋಗ್ಯನಾಟ್ಯಕಲಾಸಾಮಗ್ರಿ ಚಿತ್ರಮಯ ಭಾವಸಂಪತ್ತು, ಶೃಂಗಾರನಿರ್ಭರ ಕವಿತಾಪ್ರವಾಹ-ಎಲ್ಲವೂ ಸುಂದರವಾಗಿ, ಅಭೂತಪೂರ್ವವಾಗಿ, ಸಮ್ಮಿಳಿತವಾಗಿವೆ. ಉತ್ಕಂಠಿತೆ, ಪ್ರೋಷಿತಭರ್ತೃಕೆ, ವಾಸಕಸಜ್ಜೆ, ವಿಪ್ರಲಬ್ಧೆ, ಖಂಡಿತೆ, ಕಲಹಾಂತರಿತೆ, ಅಭಿಸಾರಿಕೆ ಸ್ವಾಧೀನಪತಿಕೆ ಎಂಬ ಶೃಂಗಾರ ನಾಯಿಕೆಯರ ಎಂಟು ಬಗೆಯ ಹಾವಭಾವ ವಿಲಾಸಗಳ ಬಣ್ಣನೆಗೂ ಇಲ್ಲಿ ಪೂರ್ಣ ಅವಕಾಶ ಸಿಕ್ಕಿದೆ. ಕಾಮಶಾಸ್ತ್ರದಲ್ಲಿ ಹೇಳುವಂತೆ ಅಭಿಲಾಷೆ, ಚಿಂತೆ, ಸ್ಮರಣ, ವ್ಯಾಧಿ, ಅವೇಗ-ಇವೇ ಮುಂತಾದ ನಾಟ್ಯಶಾಸ್ತ್ರಾಭಿಮತ ಸಂಚಾರೀ ಭಾವಗಳಿಗೂ ಉತ್ತಮ ಪರಿಪುಷ್ಟಿ ದೊರೆತಿದೆ. ಶೈಲಿಯೆಲ್ಲಂತೂ ಹೊಸದೊಂದು ಸ್ತೋತ್ರ ಮಾರ್ಗವೇ ತೆರೆದಿಟ್ಟಂತಾಗಿದೆ. ಮುಂದಿನವರ ಮೇಲೆ ಜಯದೇವನ ಪ್ರತಿಭೆ ಎಷ್ಟೊಂದು ಪ್ರಭಾವ ಭೀರಿತೆಂದರೆ ಸಾಮಾನ್ಯವಾಗಿ ಈ ಜಾತಿಯ ಕಾವ್ಯಬರೆದವರೆಲ್ಲ ಹತ್ತಾರು ಮಹಾಕವಿಗಳು-ಚಾಚು ತಪ್ಪದಂತೆ ಜಯದೇವನ ಮಾದರಿಯನ್ನೇ ಅನುಸರಿಸಿದ್ದಾರೆ. ಕಥೆಯನ್ನು ಮಾತ್ರ ರಾಧಾ ಮಾಧವರ ಬದಲು, ರಾಮ-ಸೀತೆಯರದೆಂದೋ ಶಿವ-ಪಾರ್ವತಿಯರದೆಂದೋ ಬದಲಾಯಿಸಿಕೊಂಡಿದ್ದಾರೆ.

ಗೀತಗೋವಿಂದದ ಕನ್ನಡ ಅನುವಾದಗಳಲ್ಲಿ ಎಸ್.ವಿ.ಪರಮೇಶ್ವರ ಭಟ್ಟರ ಕೃತಿ ಗಮನಾರ್ಹವಾದುದು.

ಜಯದೇವನ ಪ್ರತಿಭೆ

[ಬದಲಾಯಿಸಿ]

ಕಾಳಿದಾಸನಂಥ ಮಹಾಕವಿಗಳಲ್ಲಿ ಕಂಡುಬರುವ ನವನವೋನ್ಮೇಷಶಾಲಿನಿಯಾದ ಪ್ರತಿಭೆ ಜಯದೇವನಿಗಿಲ್ಲದಿದ್ದೂ ರಸಪೋಷಣೆಯಲ್ಲಿ ಪದವಿನ್ಯಾಸದಲ್ಲಿ ಅರ್ಥ ಗಾಂಭೀರ್ಯದಲ್ಲಿ ಈತ ಸಮರ್ಥನಾದ ಕವಿ. ಒಂದೊಂದು ಶ್ಲೋಕದಲ್ಲೂ ಈತನ ರಸಿಕತೆ ವ್ಯಕ್ತವಾಗುತ್ತದೆ. ಶ್ರುತಿ ಮನೋಹರವಾದ ಕ್ಲಿಷ್ಟವಾದ ಧ್ವನಿಪೂರ್ಣವಾದ ಪದಗಳನ್ನು ಮಧುರವಾಗಿ ಜೋಡಿಸುವುದರಲ್ಲಿ ಈತನಿಗಿರುವಷ್ಟು ಜಾಣ್ಮೆ ಬೇರಾವ ಕವಿಗೂ ಇರದು. ರಾಗಬದ್ಧವಾದ ವೃತ್ತಗಳನ್ನು ಹೆಣೆಯುವುದರಲ್ಲಿ ಜಯದೇವ ಚತುರ. ಕೇದಾರ, ಗುರ್ಜರೀ, ಗುಣಕರೀ, ದೇಶಾಂಕ, ಭೈರವ, ವರಾಢಿ, ವಿಭಾಗ ರಾಗಗಳಲ್ಲಿ ಸುಂದರವಾದ ಸರ್ಗಗಳನ್ನು ಗೇಯಗುಣಪ್ರಧಾನವಾಗಿ ಈತ ರಚಿಸಿದ್ದಾನೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಜಯದೇವ&oldid=1175978" ಇಂದ ಪಡೆಯಲ್ಪಟ್ಟಿದೆ