ಗದಾಧರ ಭಟ್ಟಾಚಾರ್ಯ

ವಿಕಿಪೀಡಿಯ ಇಂದ
Jump to navigation Jump to search

ಗದಾಧರ ಭಟ್ಟಾಚಾರ್ಯ ಪಶ್ಚಿಮದ ಬಂಗಾಲದ ನವದ್ವೀಪದಲ್ಲಿ (ನದಿಯಾ) ಪ್ರಾಬಲ್ಯಕ್ಕೆ ಬಂದ ನವ್ಯನ್ಯಾಯ (ತಾರ್ಕಿಕ) ಪಂಥದ ಸುಪ್ರಸಿದ್ಧ ಆಚಾರ್ಯ ಪರಂಪರೆಯಲ್ಲಿ ಒಬ್ಬ. ಅವರಲ್ಲಿ ಪ್ರಾಚಾರ್ಯನೆಂಬ ಕೀರ್ತಿಗೆ ಪಾತ್ರನಾದವ. ಈತನ ಕಾಲ ಹದಿನಾರನೆಯ ಶತಮಾನದ ಉತ್ತರಾರ್ಧ ಅಥವಾ ಹದಿನೇಳನೆಯ ಶತಮಾನದ ಪೂರ್ವಾರ್ಧ. ಜಗದೀಶಭಟ್ಟಾಚಾರ್ಯನ (ತರ್ಕಾಲಂಕಾರ) ಶಿಷ್ಯ. ಮಿಥಿಲೆ ಅಥವಾ ನವದ್ವೀಪ ಈತನ ಕಾರ್ಯಕ್ಷೇತ್ರವಾಗಿದ್ದಿರಬಹುದು. ಗಂಗೇಶನ ತತ್ತ್ವ ಚಿಂತಾಮಣಿಯ ಮೇಲೆ ರಘುನಾಥ ತರ್ಕಶಿರೋಮಣಿ ಎಂಬ ಆಚಾರ್ಯ ಬರೆದ ದೀಧಿತಿಯೆಂಬ ಭಾಷ್ಯಕ್ಕೆ ಈತ ತನ್ನ ಭಾಷ್ಯವೊಂದನ್ನು ಬರೆದಿದ್ದಾನೆ. ಇದೇ ಗಾದಾಧರೀ, ಗದಾಧರೀಯ ಎಂದು ಪ್ರಸಿದ್ಧಿ ಪಡೆದಿದೆ. ಇಂದು ಭಾರತದಲ್ಲಿ ನವ್ಯನ್ಯಾಯದಲ್ಲಿ, ತರ್ಕದಲ್ಲಿ ಅಪ್ರತಿಮ ಪಾಂಡಿತ್ಯ ಗಳಿಸಬೇಕೆಂಬ ಯಾರಾದರೂ ಗದಾಧರೀಯವನ್ನು ಉಪೇಕ್ಷಿಸುವಂತಿಲ್ಲ. ತತ್ತ್ವಚಿಂತಾಮಣಿಗೆ ಜಯದೇವನೆಂಬ ತಾರ್ಕಿಕ ಬರೆದ ಮಣ್ಯಾಲೋಕವೆಂಬ ಭಾಷ್ಯಕ್ಕೂ ಗದಾಧರ ಭಾಷ್ಯ ಬರೆದನಲ್ಲದೆ ತತ್ತ್ವಚಿಂತಾಮಣಿಯ ಅರವತ್ತುನಾಲ್ಕು ವಿಷಯಗಳನ್ನು ಕುರಿತು ವ್ಯುತ್ಪತ್ತಿವಾದ, ಶಕ್ತಿವಾದ ಮುಂತಾದ ಅರವತ್ತುನಾಲ್ಕು ಗ್ರಂಥಗಳನ್ನು ಬರೆದನೆಂದು ಪ್ರತೀತಿಯಿದೆ. ಇವುಗಳಲ್ಲಿ ಹಲವು ಇಂದು ಅನುಪಲಬ್ಧ. ಉದಯನಾಚಾರ್ಯನ ಆತ್ಮತತ್ತ್ವವಿವೇಕದ ಭಾಷ್ಯ ಈತನ ಮತ್ತೊಂದು ಕೃತಿ. ಮರಣಶಯ್ಯೆಯಲ್ಲಿದ್ದಾಗ ಈತನನ್ನು ಕುರಿತು ‘ನೈಯಾಯಿಕರ ಕರ್ತನನ್ನು ಸ್ಮರಿಸಿಕೋ’ ಎಂದಾಗ ಈತ ಅಣುಗಳು, ಅಣುಗಳು, ಅಣುಗಳು (ಪೀಲವಃ, ಪೀಲವಃ, ಪೀಲವಃ)-ಎಂದು ಪ್ರಾಣಬಿಟ್ಟನಂತೆ. ಈತ ಅಂಥ ನಿಷ್ಠುರ ತಾರ್ಕಿಕ ಶಿರೋಮಣಿ.