ವೀರ ಮಕ್ಕಳ ಕುಣಿತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ವೀರ ಮಕ್ಕಳ ಕುಣಿತ[ಬದಲಾಯಿಸಿ]

ಮುನ್ನುಡಿ[ಬದಲಾಯಿಸಿ]

ಜಾನಪದ ಕುಣಿತಗಳಲ್ಲೆ ವಿಶಿಷ್ಟವಾದ ಕುಣಿತ 'ವೀರ ಮಕ್ಕಳ ಕಣಿತ'. ಇದನ್ನು ಮಾರಿ ಹಬ್ಬದಂದು ಅಥವಾ ಕೊಂಡದ ಹಬ್ಬದಂದು ಆಚರಿಸಲಾಗುತ್ತದೆ. ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಕೆಲವು ಕಡೆ ಮೇಲು ಸಕ್ಕರೆ ಶೆಟ್ಟರು ಅಥವಾ ನಾಯಕರ ಮತಕ್ಕೆ ಸೇರಿದವರು ಈ ಕುಣಿತವನ್ನು ಆಚರಿಸುವ ಸಂಪ್ರದಾಯವಿದು. ವರ್ಷಕ್ಕೊಮ್ಮೆ ಹಬ್ಬವನ್ನು ಆಚರಿಸಿ ಮಾರುದೇವತೆಗೆ ಶಾಂತಿ ಮಾಡುವುದಕ್ಕೊಸ್ಕರ ಈ ಕುಣಿತ ಮಾಡುತ್ತೇವೆಂದು ಅಲ್ಲಿನ ಕಲಾವಿದರು ಹೇಳುತ್ತಾರೆ. ಕೊಂಡದ ಹಬ್ಬ ಅಥವಾ ಕೊಂಡದ ಹಬ್ಬ ಬರುವುದು ಉಗಾದಿ ಹಬ್ಬದ ಹಿಂದಿನ ಅಥವಾ ಮಾರನೆಯ ತಿಂಗಳ ಬೇಸಿಗೆ ಕಾಲದಲ್ಲಿ. ವೀರ ಮಕ್ಕಳ ಕುಣಿತವು ರಂಗದ ಕುಣಿತ, ಸುಗ್ಗಿಯ ಕುಣಿತ ಮತ್ತು ಮಾರಿ ಕುಣಿತಗಳ ಸಾಲಿಗೆ ಸೆರುವ ಕಲೆಯಾಗಿದೆ.

ವೇಷಭೂಷಣ[ಬದಲಾಯಿಸಿ]

ಸಾಮಾನ್ಯವಾಗಿ ಕೆಂಪು ಬಣ್ಣದ ಪೈಜಾಮ, ತಲೆಗೆ ರುಮಾಲು, ಜುಬ್ಬ, ನಡುವುಗೆ ವಿಧವಾದ ಡಾಬು ಅಥವಾ ವಸ್ತ್ರದ ಕಟ್ಟು, ಕಾಲಿಗೆ ಗೆಜ್ಜೆ-ಇವು ಕುಣಿತದವರ ವೇಷ. ಈ ವೇಷ ನೋಡಿದರೆ ಕಾಸೆ ಕುಣಿತದ ವೇಷದಂತೆ ಕಾಣಿಸುತ್ತದೆ. ಇತ್ತೀಚೆಗೆ ಕೆಲವು ಹಳ್ಳಿಗಳಲ್ಲಿ ಯಾವ ವಿಧವಾದ ವೇಷಭೂಷಣಗಳನ್ನೂ ಉಪಯೋಗಿಸದೆ ನಿತ್ಯದ ಉಡುಪುಗಳಲ್ಲೆ ಕುಣಿತ ನಡೆಸುತ್ತಾರೆ. ಅನುಕೂಲ ಇರುವವರು ತಮ್ಮ ವೇಷಭೂಷಣಗಳನ್ನು ತಾವೇ ಹೊಂದಿಸಿಕೊಳ್ಳುತ್ತಾರೆ. ವೀರ ಮಕ್ಕಳ ಕುಣಿತ್ತಕ್ಕೆ ಹಿನ್ನೆಲೆ ವಾದ್ಯ ವಿಷೇಷವೆಂದರೆ 'ಚಕ್ರಾದಿಬಳೆ'. ರಚನೆ ಚಕ್ರದ ಆಕಾರವಾಗಿರುವುದರಿಂದ ಇದನ್ನು 'ಚಕ್ರಾದಿ ಬಳೆ' ಎಂದು ಕರೆಯುತ್ತಾರೆ. ಈ ಬಳೆಯನ್ನು ಬೀರದೇವರ ಕುಣಿತದವರು ಉಪಯೋಗಿಸುತ್ತಾರೆ. ಈ ಚಕ್ರಾದಿ ಬಳೆ ವೃತ್ತಾಕಾರದಲ್ಲಿ ತಮಟೆಯಂತೆ ಇದ್ದು ಮಣ್ಣಿನಿಂದ ಮಾಡಲ್ಪಟ್ಟಿರುತ್ತದೆ. ಅರ್ಧ ಮಡಕೆಯ ಬಾಯಿಗೆ ಹದ ಮಾಡಿದ ಆಡಿನ ಚರ್ಮವನ್ನು ಅಂಟಿಸುತ್ತಾರೆ. ಇದನ್ನು ಅಂಟಿಸಲು ಒಂದು ವಿಧವಾದ ಸೊಪ್ಪಿನ ರಸವನ್ನು ಉಪಯೋಗಿಸುತ್ತಾರೆ. ಬಳೆ ಎರಡೂ ಪಕ್ಕದಲ್ಲಿಯೂ ಎರಡು ರಂದ್ರ ಮಾಡಿ ಆ ರಂದ್ರದ ಮೂಲಕ ಒಂದು ಹಗ್ಗವನ್ನು ಕಟ್ಟಿ ನೇತುಹಾಕಿಕೊಳ್ಳುತ್ತಾರೆ. ಮುಂಬಾಗದಲ್ಲಿ ನೋಡಲು ತಮಟೆಯಂತೆ ಇದ್ದರೂ ಹಿಂಬಾಗದ ರಚನೆ ಮತ್ತು ಆಕಾರದಲ್ಲಿ ಭಿನ್ನವಾಗಿರುತ್ತದೆ. ತಮಟೆಯನ್ನು ಬೆಂಕಿಯಲ್ಲಿ ಕಾಯಿಸಿದರೆ ಇದನ್ನು ಬಿಸಿಲಿನಲ್ಲಿ ಕಾಯಿಸುತ್ತಾರೆ. ಇದನ್ನು ಬಡೆಯುವುದು ಕೈಯಲ್ಲಿಯೇ ಹೊರತು ಕೋಲು ಬಳಸುವುದಿಲ್ಲ. ಕೆಲವು ಕಡೆ ಕಂಚಿನಿಂದ ತಯಾರು ಮಾಡಿದ ಚಕ್ರಾದಿ ಬಳೆಯನ್ನೂ ಉಪಯೋಗಿಸುತ್ತಾರೆ. ಆದರೆ ಮಣ್ಣಿನ ಚಕ್ರಾದಿ ಬಳೆಯೇ ಹೆಚ್ಚು ಬಳಕೆಯಲ್ಲಿದೆ. ಏಕೆಂದರೆ ಬಿಸಿಲಿನಲ್ಲಿಟ್ಟಾಗ ಕಂಚು ಕಾದು ಕೈ ಸುಡುವ ಸಂಭವವಿದೆ.

ಕುಣಿತದ ನಿಯಮ[ಬದಲಾಯಿಸಿ]

ಈ ಕುಣಿತದಲ್ಲಿ ಕಣಿಯುವ ಕಲಾವಿದರ ಸಂಖ್ಯೆ ನಿಗದಿಯಾಗಿರುವುದಿಲ್ಲ. ಇದರಲ್ಲಿ ಎಷ್ಟು ಜನರು ಬೇಕಾದರು ಸೇರಿಕೊಳ್ಳಬಹುದು. ಇಲ್ಲಿ ಬೇಕಾಗಿರುವುದು ನಿಯಮಬದ್ಧವಾಗಿ ಹೆಜ್ಜೆ ಹಾಕುವುದು. ಇತಂಹ ವರಸೆಗೆ ಇಷ್ಟೇ ಹೆಜ್ಜೆ ಮತ್ತು ಹೀಗೆಯೇ ಹೆಜ್ಜೆ ಹಾಕಿಕೊಂಡು ಕುಣಿಯಬೇಕೆಂಬ ನಿಯಮವಿದೆ. ಚಕ್ರಾದಿ ಬಳೆಯ ಬಡಿತ, ಅಂದರೆ ಗಸ್ತು(ಗತ್ತು), ಬದಲಾವಣೆಯಾದಂತೆ ಕಲಾವಿದರು ತಮ್ಮ ಹೆಜ್ಜೆ ಬದಲಾಯಿಸುತ್ತಾರೆ. ಕೆಲವು ಕಡೆ ಕೊಂಡದ ಹಬ್ಬದಲ್ಲಿ ವೀರ ಮಕ್ಕಳನ್ನು ಬೇರೆ ಊರಿನಿಂದ ವೀಳ್ಯ ಕೊಟ್ಟು ಕರೆಯಿಸಿ ಕುಣಿಸುತ್ತಾರೆ. ಶನಿವಾರ ಪ್ರಾರಂಭವಾದ ಕುಣಿತ ಬುಧುವಾರದವರೆಗೂ ನಡೆಯುತ್ತದೆ. 'ಕೊಂಡ'ದ ಸೌದೆಯನ್ನು ಊರ ಒಳಗಡೆ ತರುವಾಗ ಕೊಂಬು ಕಹಳೆಯೊಂದಿಗೆ ಪೂಜೆ ಮಾಡಿ ತರುತ್ತಾರೆ. ಊರಿನಲ್ಲಿ ಹೆಂಗಸರು ಮನೆ ಕೆಲಸದಲ್ಲಿ ತೊಡಗಿದರೆ, ಗಂಡಸರು ಕೊಂಡದ ಸೌದೆಯನ್ನು ಜೋಡಿಸುವುದರಲ್ಲಿ ಮಗ್ನರಾಗುತ್ತಾರೆ. ಮೂರು ಅಥವಾ ನಾಲ್ಕು ಅಡಿ ಆಳ, ನಾಲ್ಕು ಅಡಿ ಅಗಲ, ಇಪ್ಪತ್ತು ಅಡಿ ಉದ್ದದ ಗುಂಡಿ ತೆಗೆದು ಕೊಂಡ ಸಿದ್ದ ಮಾಡುತ್ತಾರೆ.

ಪೂಜಾ ವಿಧಾನ[ಬದಲಾಯಿಸಿ]

ಕೆಲವು ಕಡೆ ಗುಣಿ ತೆಗೆಯದೆ ಹಾಗೆಯೇ ನೆಲದ ಮೇಲೆ ೨೪ ಅಡಿ ಉದ್ದ ೪ ಅಡಿ ಅಗಲವಾಗಿ ಕೊಂಡದ ಸೌದೆಯನ್ನು ಜೋಡಿಸುವ ಪದ್ದಿತಿಯಿದೆ. ಬೇರೆ ಬೇರೆ ಊರುಗಳಿಂದ ಬಂದ ನೆಂಟರಿಷ್ಟರು ಸಹ ಈ ಕುಣಿತದಲ್ಲಿ ಭಾಗವಹಿಸುತ್ತಾರೆ. ಊರಿನ ಕೆರೆಗೆ ಹೋಗುವ ಮೆರೆವಣಿಗೆಯಲ್ಲಿ ಹೆಂಗಸರು, ಗಂಟಸರಾದಿಯಾಗಿ ಪಂಜಿನ ಸಹಿತ ಪಾಲ್ಗೊಳ್ಳುತ್ತಾರೆ. ಕೆರೆಯಲ್ಲಿ ಪೂಜಾದಿಗಳನ್ನು ನಡೆಸಿ ಸಂಜೆ ಊರಿಗೆ ಹಿಂತಿರುಗುವಾಗ ದೇವಾಲಯವನ್ನು ಪ್ರದಕ್ಷಿಣೆ ಮಾಡಿ ಎಲ್ಲರೂ ಕೊಂಡು (ಕೆಂಡ) ಹಾಯುವುದು ಆರಂಭವಾಗುತ್ತದೆ. ಹೀಗೆ ಕೊಂಡ ಹಾಯುವವರು ಹಿಂದಿನ ದಿನದಿಂದಲೂ ಉಪವಾಸವಿರಬೇಕು. ಕೊಂಡ ಹಾಯ್ದ ಮೇಲೆ ಪೂಜೆ ಮುಗಿಸಿ ಊಟ ಪೂರೈಸಿ ಕೊಂಡು ವೀರ ಮಕ್ಕಳು ಜೊತೆಗೂಡಿ ಅರ್ಧ ರಾತ್ರಿಯ ವರೆಗೂ ಕುಣಿಯುವ ವಾಡಿಕೆಯಿದೆ.

ಹಾಡುಗಳು[ಬದಲಾಯಿಸಿ]

ಕುಣಿತದ ಜೊಡಿಯಲ್ಲಿಯೇ ಹಾಡುಗಳೂ ಹಾಸು ಹೊಕ್ಕಾಗಿ ಬೆಳೆದುಕೊಂಡು ಬಂದಿವೆ. ಈ ಕುಣಿತದಲ್ಲಿ ಹೇಳುವ ಪದಗಳು ಲಯಬದ್ದವಾಗಿ ಗೇಯ ಗುಣವುಳ್ಳದ್ದಾಗಿರುತ್ತವೆ. ಕುಣಿತ ಒಂದೊಂದು ವರಸೆ ಆದನಂತರವೂ ಚಕ್ರಾದಿ ಬಳೆಯ ವಾದ್ಯಗಾರ ಅಥವಾ ಕುಣಿಯುವ ವೀರ ಮಕ್ಕಳು ಯಾರಾದರು ಒಬ್ಬರು, ಹೆಣ್ಣುದೇವರ ಮೇಲಾಗಲಿ ಗಂಡು ಮೇಲಾಗಲಿ ಪದ ಹೇಳುವುದು ವಾಡಿಕೆ. ಅನಂತರ ಉಳಿದವರು ಅದರ ಸೊಲ್ಲನ್ನು ಹೇಳುತ್ತಾರೆ. ವೀರಮಕ್ಕಳು ಚಕ್ರಾದಿ ಬಳೆಯ ಬಡಿತಕ್ಕೆ ಸರಿಯಾಗಿ ವೃತ್ತಾಕಾರದಲ್ಲಿ ಕುಣಿಯುವಾಗ ಒಂದು ಕೈಯನ್ನು ನಡುವಿನ ಮೇಲಿಟ್ಟುಕೊಂಡು ಮತ್ತೊಂದು ಕೈಯನ್ನು ಹಿಂದೆ, ಮುಂದೆ ಮೇಲೆಕ್ಕೆ ಚಾಚುತ್ತಾರೆ. ವರೆಸೆಯನ್ನು ಬದಲಾಯಿಸುವಾಗ ಅಥವಾ ಕುಣಿತವನ್ನು ನಿಲ್ಲಿಸುವಾಗ ಎಲ್ಲರೂ ಒಟ್ಟಾಗಿ 'ಹೋ' ಎಂದು ಕೂಗುತ್ತಾರೆ. ಹೆಣ್ಣು ದೇವರುಗಳು ಮೇಲೆ ಹಾಡು ಹೇಳುವಾಗ ಲಯಬದ್ದವಾಗಿ ಕುಣಿಯುತ್ತಾರೆ.

ಸಂಪಿಗೆ ಹೂವಿನ ಸರವೋ

ಮಾರಮ್ಮನಿಗೆ ತಂಪೊತ್ತಿನೋಲಗವೋ

ಮಾರಮ್ಮನಿಗೆ ತಂಪೊತ್ತಿನೋಲಗವೋ

ಎಂದು ಮಾರಮ್ಮನನ್ನು ಓಲೈಸದೆ ಬೇರೆ ಬೇರೆ ದೇವರುಗಳನ್ನು ಒಲೈಸುವಾಗ ಆಯಾ ದೇವರುಗಳ ಹೆಸರುಗಳು ಸೇರಿಕೊಂಡು ಹಾಡುತ್ತಾರೆ. ಈ ವೀರಮಕ್ಕಳು ತಲೆಯ ಮೇಲೆ ತೆಂಗಿನ ಕಾಯಿ ಹೊಡೆದುಕೊಳ್ಳುವ 'ಪವಾಡ'ವನ್ನು ನಡೆಸುತ್ತಾರೆ. ಹೊಳೆಯ ದಡದಲ್ಲಿ ಗಂಗೆಯನ್ನು ಪೂಜಿಸಿ 'ಮೀಸಲು ನೀರು ತೆಗೆದುಕೊಂಡು ಬರುತ್ತಾ ದಾರಿಯಲ್ಲಿ ವೀರಾವೇಶದಲ್ಲಿ ಕುಣಿಯುವಾಗ ಅವರಲ್ಲಿಯೇ ಒಂದಿಬ್ಬರು ಈ 'ಪವಾಡ' ನಡೆಸುತ್ತಾರೆ. ಕುಣಿತದಲ್ಲಿ ಎರಡ್ಹೆಜ್ಜೆ, ಮೂರು ಹೆಜ್ಜೆ ಹೀಗೆ ೩೨ ಹೆಜ್ಜೆಯ ಕುಣಿತದವರೆಗೆ ನಾನಾ ವರಗಳಿವೆ. ಚಕ್ರಾದಿ ಬಳೆ ಗತ್ತಿಗೆ ಸರಿಯಾಗಿ ಹೆಜ್ಜೆ ಹಾಕುವುದಕ್ಕೆ 'ಕಾಲಂಗ' ಎನ್ನುತ್ತಾರೆ.